ಶ್ರೀವ್ಯಾಸರಾಜ ಮಠ (ಸೋಸಲೆ)

ಶ್ರೀವ್ಯಾಸರಾಜ ಮಠ (ಸೋಸಲೆ)

ಚಿತ್ರ

ಶ್ರೀವ್ಯಾಸರಾಜಮಠ (ಸೋಸಲೆ)

          ಸೋಸಲೆ ವ್ಯಾಸರಾಜಮಠಕ್ಕೆ ಖಡಕ್ ಅಧಿಕಾರಿ ಶ್ರೀಯುತ ಜಯರಾಜರನ್ನು ಆಡಳಿತಾಧಿಕಾರಿಯಾಗಿ ನೇಮಿಸುವ ಮೂಲಕ, ಕರ್ನಾಟಕ ಸರಕಾರ ಅಪೇಕ್ಷಿತ ಕಾರ್ಯ ನಿರ್ವಹಿಸಿದಂತಾಗಿದೆ. ಈ ಉನ್ನತಾಧಿಕಾರಿ ಮತ್ತು, ಶ್ರೀ ಕೊಪ್ಪಾರ್, ಶ್ರೀ ಜಯತೀರ್ಥ, ಶ್ರೀ ಗುಂಡಪ್ಪ, ಶ್ರೀ ನರಸಿಂಹಮೂರ್ತಿ ಮುಂತಾದವರ ಸಮರ್ಪಣಾ ಮನೋಭಾವದ ತಂಡ, ನಿರೀಕ್ಷೆಯಂತೆಯೇ ಮಠದ ಲಾಭದಾಯಕತೆಯ ಮಟ್ಟವನ್ನು ಅತ್ಯೌನ್ನತ್ಯಕ್ಕೆತ್ತಿದೆ.

          ಲಾಭ-ನಷ್ಟದ ವಿಚಾರದಲ್ಲೇನೂ ನನಗಷ್ಟು ವೈಯಕ್ತಿಕ ಆಸಕ್ತಿ ಕಾಣೆ. ಮಠದ ’ಕಂಪನಿ’ಯಲ್ಲಿ ನನ್ನ ಹೂಡಿಕೆಯಾಗಲೀ, ಪಾಲುಗಾರಿಕೆಯಾಗಲೀ ಇಲ್ಲ. ಇದರಿಂದ ನನಗೆ ಲಾಭಾಂಶವಾಗಲೀ, ಬಡ್ಡಿಯಾಗಲೀ ಬರುವುದಿಲ್ಲ. ಈ ವಿಚಾರದಲ್ಲಿ ನನ್ನ ಆಸಕ್ತಿಯೇನಿದ್ದರೂ ಒಬ್ಬ ’ಸಾರ್ವಜನಿಕ ಗೀಚುಗಾರ’ನಾಗಿ, ಅಷ್ಟೆ.

          ಸರಕಾರದ ಕ್ರಮದಿಂದಾಗಿ, ಮಠದ ಚರಾಚರಾಸ್ತಿ, ಬಂಡವಾಳ ಮತ್ತಷ್ಟು ಲೂಟಿಯಾಗುವುದು ತಪ್ಪಿದೆ. ಆದರೆ ಹಿಂದೆಲ್ಲಾ ಆಗಿರುವ ಹಗಲು-ದರೋಡೆ? ಅದಕ್ಕೆ ಪ್ರಸ್ತುತ ಆಡಳಿತ ಉತ್ತರದಾಯಿಯಲ್ಲ. ಬೇಡಿದರೂ ಅವರೇನೂ ಉತ್ತರ ಹೇಳುವುದು. ಆದೇಶದಲ್ಲಿರುವುದಷ್ಟೆ ಅದರ ಮಾಳ್ಕೆ, ’ವ್ಯವಹಾರ ಎಂದರೆ ವ್ಯವಹಾರ’, ಅಷ್ಟೆ! ಅದಿರಬೇಕಾದ್ದೇ. ಆದರೂ ಮಠವೆನ್ನುವುದು, ಪ್ರೈವೆಟ್ ಲಿಮಿಟೆಡ್ ಕಂಪನಿಗೆ ಮೀರಿ, ಒಂದು ಸಂಸ್ಥೆಯೂ ಆಗಿರುತ್ತದೆಂದು ನನ್ನ ಭ್ರಮೆ. ಅದರ ಆಡಳಿತಗಾರರು ಮಾನವ ಸಹಜ ಕುತೂಹಲಕ್ಕಾಗಿಯಾದರೂ, ಅದರ ನಿಕಟಪೂರ್ವ ಮತ್ತು ನಿಕಟ ಭವಿಷ್ಯದತ್ತ ಕಣ್ಣು ಹೊರಳಿಸಬಹುದೇನೋ ಎಂದುಕೊಂಡಿದ್ದೆ. ಆದರೆ ಸರಕಾರೀ ವ್ಯವಹಾರಸರಕಾರೀ ವ್ಯವಹಾರ; ಅದಕ್ಕಿದರ ಆವಶ್ಯಕತೆ ಇದ್ದಿರಲಾರದು!

          ಆದರೆ ನಮಗೆ, ಸಾಮಾನ್ಯ ಶಿಷ್ಯರಿಗೆ ಅದು ಬೇಕಲ್ಲಾ? ಅದಕ್ಕಾಗಿ ನನಗೆ ಗೊತ್ತಿರುವುದನ್ನು ಹಂಚಿಕೊಳ್ಲೋಣವೆನಿಸಿತು. ನಾವು, ಈ ತಲೆಮಾರಿನವರು, ಪೀಠದಲ್ಲಿ, ಮೂರು ಹಸ್ತಾಂತರಣ ಪ್ರಕ್ರಿಯೆಗಳನ್ನು ಕಂಡಿದ್ದೇವೆ. ಶ್ರೀ ಪೂರ್ಣಬೋಧಾಚಾರ್ಯರೆಂಬ ವೈದಿಕ ಪುರೋಹಿತರು, ಶ್ರೀವಿದ್ಯಾಪ್ರಸನ್ನತೀರ್ಥರಿಂದ ಉಪಕೃತರು. ಸ್ವಾಮಿಗಳಿಗೆ, ಪುರೋಹಿತರ ಲೌಕಿಕ ಚಾಣಾಕ್ಷದ ಬಗ್ಗೆ ಮೆಚ್ಚುಗೆಯಿತ್ತು; ನಂಬಿಕೆಯೂ ಇತ್ತು. ಆಧ್ಯಾತ್ಮಿಕ ಸಾಧನೆ ತಕ್ಷಣಕ್ಕೆ ಗೌಣವೆನಿಸಿದ್ದೀತು. ಮಠ, ವ್ಯಾಸರಾಜಪುರ ಬಿಟ್ಟು ಹೋಗಬರದು; ಮಠದ ಸಿಬ್ಬಂದಿ ಎಂದು ಮಮತೆಯಿಮದ ಪರಿಗಣಿಸಲಾಗಿದ್ದ ಮುವತ್ತೂ ಚಿಲ್ಲರೆ ಕುಟುಂಬಗಳು ಬೀದಿಪಾಲಾಗಬಾರದೆಂಬುದು ಪ್ರಸನ್ನತೀರ್ಥರ ಕಳಕಳಿ. ಇದನ್ನವರು ಮುಖತಃ ಹೇಳಿದ್ದರು, ಕೂಡ. ಅದನ್ನು ಕೇಳಿಸಿಕೊಳ್ಳುವಷ್ಟು ಸಲಿಗೆ-ಸಂಬಂಧ, ಆಗ ನನಗೆ ಮಠದೊಡನೆ ಇತ್ತು. ಇದಾದನಂತರ, ಪವಮಾನಪುರದಲ್ಲಿ ಆಶ್ರಮ ಹಸ್ತಾಂತರಣ. ಶ್ರೀವಿದ್ಯಾಪಯೋನಿಧಿಗಳು, ತಮ್ಮ ಬೀಗಬಂಧು, ಶ್ರೀ ಗುಂಬಳ್ಳಿ ಜಯತೀರ್ಥಾಚಾರ್ಯರಿಗೆ ಆಶ್ರಮ ಕೊಟ್ಟರು. ಆಗ ನನಗೆ ಮಠದೊಡನೆ ಅಷ್ಟು ಸಮೀಪ್ಯ ಇರಲಿಲ್ಲ. ಏನು ನಡೆಯಿತೋ ಗೊತ್ತಿಲ್ಲ. ಕತೆಗಳೇನೋ ಬೇಕಾದಷ್ಟು ತೆಲಾಡಿದವು. ಆದರೂ ಇಬ್ಬರೂ ಸ್ವಾಮಿಗಳು ಅನ್ಯೋನ್ಯವಾಗಿದ್ದನ್ನು ದೂರದದಿಂದಲಾದರೂ ಕಂಡಿದ್ದೇನೆ. ನಂತರ, ಚೆನ್ನೈ ತಿರುವಲ್ಲಕೇಣಿಯಲ್ಲಿ, ಮುನ್ಸೂಚನೆಯೇ ಇಲ್ಲದೆ ಆದದ್ದು ಇತಿಹಾಸ. ನಾಯಕನಲ್ಲಿನ ಖಳನಾಯಕನನ್ನೂ, ಖಳನಾಯಕನಲ್ಲಿನ ನಾಯಕನನ್ನೂ, ಮುಂಚೂಣಿಗೆ ತಂದದ್ದು ಕೊಂದಲ ಸೃಷ್ಟಿಸಿದೆ; ಕಾರಣಕರ್ತರು ಕಣ್ಮುಚ್ಚಿದ್ದಾರೆ. ಭವಿಷ್ಯದ ಬಗ್ಗೆ ನಿರ್ಭಾವುಕರಾಗಿ ಆಲೋಚಿಸಬೇಕಾದ ಸಮಯ ಈಗ ಬಂದಿದೆ. ಸರಕಾರೀ ಆಡಳಿತಮಂಡಲಿಯ ದಕ್ಷತೆ ಶಿಷ್ಯ ಸಮುದುದಯಕ್ಕೆ ಒಂದು ನೈತಿಕ ಧೈರ್ಯ ತಂದಿದೆ. ಅದನ್ನು ಆಡಳಿತ ಮಂಡಲಿ, ಆದೇಶದ ಅಚ್ಚಿನ ಬರಹಕ್ಕೆ ಮೀರಿದ ನೈತಿಕತೆಯಿಂದಾದರೂ ಒಪ್ಪಿಕೊಳ್ಳಲೇಬೇಕಾಗುತ್ತದೆ!

          ಬಲವಂತಕ್ಕೊಳಪಟ್ಟೋ ಏನೋ ಎಂಬಂತೆ, ಧಾರ್ಮಿಕ ಎನ್ನಬಹುದಾದ ಕಾರ್ಯಕ್ರಮವೊಂದನ್ನು ಆಡಳಿತ ಮಂಡಲಿ ಕೈಗೆಕೊಳ್ಳತ್ತಿರುವುದಾಗಿ ತಿಳಿದು ಬಂದಿದೆ. ಶ್ರೀ ವ್ಯಾಸತೀರ್ಥರ ಸಂಸ್ಮರಣ ಸಂಚಿಕೆಯೊಂದರ ಪ್ರಕಟಣೆ, ಆ ಕಾರ್ಯಕ್ರಮ. ಮಾಧ್ವ ವಾಙ್ಮಯದಲ್ಲಿ ಶ್ರೀವ್ಯಾಸತೀರ್ಥರ ಸಾಧನೆ, ಮಾಧ್ವ ವಿದ್ವಾಂಸರೆಲ್ಲರಿಗೂ ಗೊತ್ತಿರುವ ವಿಚಾರವೇ. ಇದೇ ವಿಷಯ ಕೈಗೆತ್ತಿಕೊಳ್ಳುವುದಾದರೆ, ಇದಕ್ಕೊಂದು ನಾವೀನ್ಯತೆ ಮತ್ತು ನೂತನ ಆಯಾಮವನ್ನೇ ನೀಡಬೇಕಾಗುತ್ತದೆ. ’ವಿದ್ಯಾವಾಚಸ್ಪತಿ’, ’ವಾಗ್ತಿಲಕ’ ಇತ್ಯಾದಿ ಸ್ವಘೋಷಿತ ಬಿರುದಾಂಕಿತರಿಂದ ಸಾಧ್ಯವಾಗುವ ಕೆಲಸವಲ್ಲ, ಇದು. ಪ್ರತಿಭೆಗಿಂತಾ ಬಿರುದು-ಬಾವಲಿಯೇ ನಮಗೆ ಮಾನ್ಯವೆನ್ನುವುದಾದರೆ, ಶ್ರೀವಿದ್ಯಾಮನೋಹರತೀರ್ಥ ಎಂಬ ಹೆಸರಿಗಂಟಿರುವ ’ಶ್ರೀಮತ್ಪರಮಹಂಸ, ಪರಿವ್ರಾಜಕಾಚಾರ್ಯ...’ ಇತ್ಯಾದಿ ಬಿರುದಾಂಕಿತಗಳನ್ನೂ ಒಪ್ಪಿಕೊಂಡಂತಾಗುತ್ತದೆ!       

Rating
No votes yet

Comments

Submitted by ಆರ್ ಕೆ ದಿವಾಕರ Thu, 04/18/2013 - 11:52

ಬರಹದ ಇಂಗ್ಲಿಷ್ ರೂಪವನ್ನು ಮಠದ ಆಡಳಿತಾಧಿಕಾರಿಗಳಿಗೆ ಅಂಚೆ ಮಾಡಿದಾಗ, ಅವರು ತಕ್ಷಣವೇ ಹಿಂಬರಹ ಕಳುಹಿಸುವ ಮನಸ್ಸುಮಾಡಿದರು. ಆಡಳಿತಯಂತ್ರ, ಮಠಕ್ಕೆ ಇನ್ನೂ ಯಾವ್ಯಾವ ರೀತಿಯಲ್ಲಿ ಭದ್ರತೆ ನಿಡಬಹುದೆಂಬುದನ್ನು ತಿಳಿಸಬೇಕಾಗಿ ಅದರಲ್ಲಿ ಕೇಳಿದ್ದರು. ಮಠದ ಆಗು-ಹೋಗಿನಲ್ಲಿ ಆಸಕ್ತಿಯಿರುವ ಸಂಪದಿಗರು ಯಾರಾದರೂ ಇದಲ್ಲಿ, ಅವರು ಆ ಕೆಲಸ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.