೫. ಲಲಿತಾ ಸಹಸ್ರನಾಮ - ಧ್ಯಾನ ಶ್ಲೋಕಗಳು ೨,೩ & ೪

೫. ಲಲಿತಾ ಸಹಸ್ರನಾಮ - ಧ್ಯಾನ ಶ್ಲೋಕಗಳು ೨,೩ & ೪

VERSE 2

अरुणां करुणा-तरंगिताक्षीं धृत-पाशांकुश-पुष्प-बाण-चापाम्।

अणिमादिबिरावृताम् मयूखै-रहमित्येव विभावये भवानीम्॥

ಶ್ಲೋಕ ೨

ಅರುಣಾಂ ಕರುಣಾ-ತರಂಗಿತಾಕ್ಷೀಂ ಧೃತ-ಪಾಶಾಂಕುಶ-ಪುಷ್ಪ-ಬಾಣ-ಚಾಪಾಮ್|

          ಅಣಿಮಾದಿಬಿರಾವೃತಾಮ್ ಮಯೂಖೈ-ರಹಮಿತ್ಯೇವ ವಿಭಾವಯೇ ಭವಾನೀಮ್||

          ಅರುಣಾಂ - ಅರುಣನಂತೆ ಅಂದರೆ ಉದಯಿಸುವ ಸೂರ್ಯನ ಬಣ್ಣದಂತೆ ಕೆಂಪಾಗಿರುವ; ಕರುಣಾ - ದಯೆಯಿಂದ ಕೂಡಿದ; ತರಂಗಿತಾಕ್ಷೀಂ - ಅವಳ ಕಣ್ಣುಗಳ ಅಲೆಗಳಿಂದ; (ಅವಳ ಕಣ್ಣುಗಳಿಂದ ನಿರಂತರವಾಗಿ ಅಲೆಗಳಂತೆ ಸೂಸುವ ಅವಳ ಕರುಣೆ).  ಧೃತ - ಸಹಾಯಕವಾಗಿರುವ;   ಪಾಶ - ಕುಣಿಕೆ ಅಥವಾ ಒಂದು ರೀತಿಯಾದ ಅಸ್ತ್ರ, (ಪಾಶವೆಂದರೆ ಆತ್ಮನನ್ನು ಬಂಧಿಸುವ ಯಾವುದೇ ವಸ್ತುವೂ ಆಗಿರಬಹುದು); ಅಂಕುಶ - ಬಾಣದ ರೀತಿಯ ಮತ್ತೊಂದು ಅಸ್ತ್ರ (ಆನೆಯನ್ನು ಪಳಗಿಸಲು ಉಪಯೋಗಿಸುವ ಸಾಧನ);   ಪುಷ್ಪ - ಹೂವಿನಿಂದ ಮಾಡಿದ; ಬಾಣ - ಶರ, ಅಂದರೆ ಹೂವಿನಿಂದ ಮಾಡಲ್ಪಟ್ಟಿರುವ ಬಾಣಗಳು ಅಥವಾ ಹೂವುಗಳನ್ನು ಬಾಣದಂತೆ ಉಪಯೋಗಿಸುವುದು; ಚಾಪಾಮ್ - ಬಿಲ್ಲು; ದೇವಿಯು ಕಬ್ಬಿನ ಜಲ್ಲೆಯಿಂದ ಮಾಡಿದ ಧನುಸ್ಸು ಮತ್ತು ಹೂವಿನಿಂದ ಮಾಡಲ್ಪಟ್ಟ ಬಾಣಗಳನ್ನು ಹೊಂದಿದವಳಾಗಿದ್ದಾಳೆ. ಅಣಿಮಾದಿಬಿರಾವೃತಾಮ್ - ಅಷ್ಟ ಸಿದ್ಧಿಗಳಾದ - ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ ಮತ್ತು ವಶಿತ್ವಗಳಿಂದ ಸುತ್ತುವರೆಯಲ್ಪಟ್ಟ; ಅಂದರೆ ದೇವಿಯು ಅಣಿಮಾದಿ ಅಷ್ಟಸಿದ್ಧಿಗಳಿಂದ ಆವರಿಸಲ್ಪಟ್ಟಿದ್ದಾಳೆ. ಮಯೂಖೈಃ - ಬೆಳಕಿನ ಕಿರಣ/ಬೆಳಕಿನ ಪ್ರಭೆ; ಅಹಂ - ನಾನು; ಇತ್ಯೇವ - ಈ ರೀತಿಯಾಗಿ; ವಿಭಾವಯೇ - ಚಿದಾನಂದ (ಅತ್ಯುನ್ನತ ಆನಂದದ ಸ್ಥಿತಿ); ಭವಾನೀಮ್ - ಭವಾನೀ ಎನ್ನುವುದು ಲಲಿತಾಂಬಿಕೆಯ ಇನ್ನೊಂದು ಹೆಸರು. ಭವಾನೀ ಎನ್ನುವುದು ಸಹಸ್ರನಾಮನದಲ್ಲಿ ೧೧೨ನೆಯ ನಾಮಾವಳಿಯಾಗಿದೆ.

          ಈ ಶ್ಲೋಕದ ಒಟ್ಟಾರೆ ಅರ್ಥವೇನೆಂದರೆ -  ಯಾರ ಬಣ್ಣವು ಉದಯ ಸೂರ್ಯನ ಬಣ್ಣವನ್ನು ಹೋಲುತ್ತದೋ ಅಂದರೆ ಕೆಂಪಾಗಿದ್ದು ಯಾವುದರಿಂದ ಕಿರಣಗಳು ಹೊರಸೂಸುತ್ತವೆಯೋ ಅಂತಹ  ಪರಮಾನಂದವನ್ನೀಯುವ ಭವಾನಿಯನ್ನು ನಾನು ಧ್ಯಾನಿಸುತ್ತೇನೆ. ಇದು ನಾವು ಹಿಂದಿನ ಧ್ಯಾನ ಶ್ಲೋಕದಲ್ಲಿ ಚರ್ಚಿಸಿದ ಕೆಂಪು ಬಣ್ಣವನ್ನು ದೃಢಪಡಿಸುತ್ತದೆ. ತನ್ನ ಭಕ್ತರ ಬಗ್ಗೆ ದೇವಿಯ ಕರುಣೆಯು ಸಾಗರದ ಅಲೆಯ ರೂಪದಲ್ಲಿ ನಿರಂತರವಾಗಿರುತ್ತದೆ. ಈ ಶ್ಲೋಕದಲ್ಲಿ ದೇವಿಯನ್ನು ನಾಲ್ಕು ಕೈಗಳುಳ್ಳವಳಾಗಿ ವರ್ಣಿಸಲಾಗಿದೆ. ಅವಳ ಹಿಂದಿನ ಎರಡು ಕೈಗಳಲ್ಲಿ ಪಾಶ (ಹಗ್ಗದ ಕುಣಿಕೆ) ಮತ್ತು ಅಂಕುಶ (ಆನೆಗಳನ್ನು ಅಂಕೆಯಲ್ಲಿಡಲು ಬಳಸುವ ಸಾಧನ) ಹಿಡಿದಿದ್ದಾಳೆ. ಅವಳ ಮುಂದಿನ ಕೈಗಳಲ್ಲಿ ಕಬ್ಬಿನ ಜಲ್ಲೆಯಿಂದ ಮಾಡಲ್ಪಟ್ಟಿರುವ ಬಿಲ್ಲು ಮತ್ತು ಹೂವುಗಳಿಂದ ಮಾಡಲ್ಪಟ್ಟಿರುವ ಬಾಣಗಳನ್ನು ಹಿಡಿದಿದ್ದಾಳೆ. ಅವಳ ವಿವಿಧ ಅಸ್ತ್ರಗಳ ದೀರ್ಘವಾದ ವಿವರಣೆಯನ್ನು  ಮುಂದೆ ಸಹಸ್ರನಾಮದ ಚರ್ಚಿಯಲ್ಲಿ ನೋಡೋಣ. ಅವಳು ಕೈಯ್ಯಲ್ಲಿ ಹಿಡಿದಿರುವ ನಾಲ್ಕು ಅಸ್ತ್ರಗಳು ಅವಳ ನಾಲ್ಕು ಪ್ರಮುಖ ಸಹಾಯಕರನ್ನು ಪ್ರತಿಬಿಂಬಿಸುತ್ತವೆ. ಅವಳು ಅಷ್ಟ ಸಿದ್ಧಿಗಳಿಂದ ಆವರಿಸಲ್ಪಟ್ಟಿದ್ದಾಳೆ. ಪ್ರತಿಯೊಂದು ಸಿದ್ಧಿಯೂ ’ಶ್ರೀ ಚಕ್ರ’ದಲ್ಲಿ ಒಬ್ಬೊಬ್ಬ ದೇವತೆಯ ರೂಪದಲ್ಲಿ ಪ್ರತಿನಿಧಿಸಲ್ಪಟ್ಟಿವೆ. ಪ್ರಭೆಯನ್ನು ಬೀರುವ ಅವಳ ಭವಾನಿಯೆನ್ನುವ ಚಿದಾನಂದ ರೂಪವನ್ನು ನಾನು ಧ್ಯಾನಿಸುತ್ತೇನೆ.

VERSE 3

ध्यायेत् पद्मासनस्थां विकसित-वदनां पद्म-पत्रायताक्षीं

हेमाभां पीतवस्त्रां कर-कलित-लसद्धेम पद्माम् वरान्गीम्।

सर्वालंकार-युक्तां सततमभयदां भक्त-नम्राम् भवानीं

श्रिविद्यां शान्तमूर्तिं सकल-सुर-नुतां सर्व संपत् प्रदात्रीम्॥

ಶ್ಲೋಕ ೩

ಧ್ಯಾಯೇತ್ ಪದ್ಮಾಸನಸ್ಥಾಂ ವಿಕಸಿತ-ವದನಾಂ ಪದ್ಮ-ಪತ್ರಾಯತಾಕ್ಷೀಂ

ಹೇಮಾಭಾಂ ಪೀತವಸ್ತ್ರಾಂ ಕರ-ಕಲಿತ-ಲಸದ್ಧೇಮ ಪದ್ಮಾಮ್ ವರಾಂಗೀಮ್|

ಸರ್ವಾಲಂಕಾರ-ಯುಕ್ತಾಂ ಸತತಮಭಯದಾಂ ಭಕ್ತ-ನಮ್ರಾಮ್ ಭವಾನೀಂ

ಶ್ರಿವಿದ್ಯಾಂ ಶಾಂತಮೂರ್ತಿಂ ಸಕಲ-ಸುರ-ನುತಾಂ ಸರ್ವ ಸಂಪತ್ ಪ್ರದಾತ್ರೀಮ್||

ಧ್ಯಾಯೇತ್ - ಧ್ಯಾನಿಸುತ್ತಾ; ಪದ್ಮಾಸನಸ್ಥಾಂ - ಕಮಲದಲ್ಲಿ ಆಸೀನವಾಗಿರುವ ಅಥವಾ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ; ವಿಕಸಿತ ವದನಾಂ - ಅರಳಿದ ಮುಖ ಹೊಂದಿದ; ವಿಕಾಸವೆಂದರೆ ಚಂದ್ರನೆಂದೂ ಅರ್ಥವಿದೆ. ಆದ್ದರಿಂದ ಅವಳ ಮುಖವು ಪೂರ್ಣಚಂದ್ರನ ಮುಖದಂತಿದೆ ಎನ್ನಬಹುದು.  ಪದ್ಮ - ಕಮಲ;  ಪತ್ರಾಯ - ದಳದಂತಿರುವ; ಅಕ್ಷೀಂ - ಕಣ್ಣುಳ್ಳವಳು. ಅಂದರೆ ಕಮಲದ ದಳಗಳಂತೆ ಉದ್ದವಾದ ಕಣ್ಣುಳ್ಳವಳು. ಹೇಮಾಭಾಂ - ಬಂಗಾರದ ಮೈಕಾಂತಿಯುಳ್ಳವಳು, ಪೀತವಸ್ತ್ರಾಂ - ಬಂಗಾರದ ಅಥವಾ ಹಳದಿ ಬಣ್ಣದ ವಸ್ತ್ರವನ್ನುಟ್ಟವಳು; ಕರ ಕಲಿತ - ಕೈಯ್ಯಲ್ಲಿ ಹಿಡಿದಿರುವ; ಲಸದ - ಹೊಳೆಯುತ್ತಿರುವ; ಹೇಮ - ಬಂಗಾರದ (ಹೇಮ ಎಂದರೆ ಸುಂದರವಾದ ಸ್ತ್ರೀಯೆಂದೂ ಅರ್ಥವಿದೆ); ಪದ್ಮಾಮ್ - ಕಮಲ. ಅವಳು ಹೊಳೆಯುತ್ತಿರುವ ಬಂಗಾರದ ಕಮಲವನ್ನು ಕೈಯ್ಯಲ್ಲಿ ಹಿಡಿದಿದ್ದಾಳೆ. ವರಾಂಗೀಮ್ - ವರ+ಅಂಗೀಮ್ - ಅತ್ಯಂತ ಸುಂದರವಾದ ಅವಯವ ಉಳ್ಳವಳು. ಅವಳಿಗೆ ಅತ್ಯಂತ ಸುಂದರವಾದ ದೇಹವಿದೆ. ಸರ್ವಾಲಂಕಾರ ಯುಕ್ತಾಂ - ಸರ್ವವಿಧವಾದ ಆಭರಣಗಳಿಂದ ಅಲಂಕೃತಗೊಂಡವಳು. ಸತತಮ್ - ನಿರಂತರವಾಗಿ; ಅಭಯದಾಮ್ - ಅಭಯವನ್ನು ನೀಡುವ; ಅವಳು ನಿರಂತರವಾಗಿ ಅಭಯವನ್ನು ನೀಡುತ್ತಾಳೆ. ಭಕ್ತಾ - ಭಕ್ತರು; ನಮ್ರಾಮ್ - ಬಾಗುವ;  ದೇವಿಯು  ಭಕ್ತರ ಮಾತನ್ನು ಕೇಳಿಸಿಕೊಳ್ಳಲು ಬಾಗುತ್ತಾಳೆ. ಭವಾನೀಮ್ - ಭವನನ ಅರ್ಧಾಂಗಿ; ಶಿವನನ್ನು ಭವನನೆಂದೂ ಕರೆಯುತ್ತಾರೆ; ಆದ್ದರಿಂದ ಭವನನ ಸಂಗಾತಿಯು ಭವಾನಿ. ಶ್ರೀವಿದ್ಯಾಂ - ಶ್ರೀ ವಿದ್ಯೆಯ ಮಂತ್ರ ಮತ್ತು ತಂತ್ರ ಶಾಸ್ತ್ರಗಳು. ಶ್ರೀವಿದ್ಯೆಯು ಶಕ್ತಿಯನ್ನು ಆರಾಧಿಸುವ ಒಂದು ಕ್ರಮ. ದೇವಿಯು ಮಂತ್ರ ಮತ್ತು ತಂತ್ರದ ಸ್ವರೂಪವಾಗಿದ್ದಾಳೆ. ಶಾಂತ ಮೂರ್ತಿಂ - ಶಾಂತ + ಮೂರ್ತಿಂ - ಕಳವಳ ರಹಿತ ಮನಸ್ಸಿನ ಮೂರ್ತರೂಪ. ಸಕಲ+ಸುರ+ನುತಾಂ - ಎಲ್ಲಾ ದೇವತೆಗಳಿಂದ ಸ್ತುತಿಸಲ್ಪಡುವ/ಪೂಜಿಸಲ್ಪಡುವ; ಸರ್ವ+ಸಂಪತ್ - ಎಲ್ಲಾ ರೀತಿಯ ಸಂಪದಗಳನ್ನು; ಪ್ರದಾತ್ರೀಮ್ - ಕೊಡುವಾಕೆ (ಪ್ರಸಾದಿಸುವಾಕೆ).

          ಈ ಶ್ಲೋಕದ ಅರ್ಥವು ಈ ರೀತಿಯಾಗಿದೆ - ದೇವಿಯು ಕಮಲದಲ್ಲಿ ಆಸೀನಳಾಗಿದ್ದಾಳೆ ಮತ್ತು ಅವಳ ಮುಖವು ಹೊಳೆಯುತ್ತಿದೆ. ಅವಳ ಕಣ್ಣುಗಳು ಕಮಲದ ಎಸಳುಗಳಂತೆ ಉದ್ದವಾಗಿವೆ. ಅವಳು ಬಂಗಾರದ ಮೈಕಾಂತಿಯನ್ನು ಹೊಂದಿದ್ದು ಅವಳ ವಸ್ತ್ರಗಳು ಬಂಗಾರದಿಂದ ನೇಯಲ್ಪಟ್ಟಿವೆ. ಅವಳು ಕೈಯ್ಯಲ್ಲಿ ಬಂಗಾರದ ಕಮಲವನ್ನು ಹಿಡಿದಿದ್ದಾಳೆ. ಅವಳು ಶಿಲ್ಪಿಯು ಕೆತ್ತಿದಂತಹ ದೇಹವುಳ್ಳವಳಾಗಿದ್ದು ಅವಳು ಸರ್ವವಿಧವಾದ ಆಭರಣಗಳನ್ನು ಧರಿಸಿದ್ದಾಳೆ ಮತ್ತು ಆಕೆ ಸದಾ ತನ್ನ ಭಕ್ತರನ್ನು ಕಾಪಾಡುತ್ತಾಳೆ ಮತ್ತು ಅವರ ಕಷ್ಟಗಳನ್ನು ಆಲಿಸಲು ಬಾಗುತ್ತಾಳೆ. ಅವಳು ಶ್ರೀ ವಿದ್ಯೆಯ ಎಲ್ಲಾ ಮಂತ್ರ ಮತ್ತು ತಂತ್ರಗಳ ಮೂರ್ತ ರೂಪವಾಗಿದ್ದಾಳೆ. ಅವಳು ಶಾಂತಚಿತ್ತಳಾಗಿದ್ದು ನಿಶ್ಚಲವಾದ ಮನಸ್ಸನ್ನು ಹೊಂದಿದವಳಾಗಿದ್ದಾಳೆ. ಅವಳು ಸಕಲ ದೇವತೆಗಳಿಂದ ಪೂಜಿಸಲ್ಪಡುತ್ತಾಳೆ ಎನ್ನುವುದು ಅವಳ ಸರ್ವೋಚ್ಛ ಸ್ಥಿತಿಯನ್ನು ಒತ್ತಿ ಹೇಳುತ್ತದೆ. ದೇವಿಯು ತನ್ನ ಭಕ್ತರಿಗೆ ಸಕಲ ಸಿರಿಸಂಪದಗಳನ್ನು ಪ್ರದಾನ ಮಾಡುತ್ತಾಳೆ.

VERSE 4

सकुंकुम-विलेपनां अलिक-चुम्बि-कस्तूरिकां

समन्द-हसितेक्षणाम् सशर-चाप-पाशांकुशाम्

अशेष-जन-मोहिनीं अरुण-माल्य-भूषांबरां

जपा-कुसुम-भासुरां जपविधौ स्मरेदंबिकाम्

ಶ್ಲೋಕ ೪

ಸಕುಂಕುಮ-ವಿಲೇಪನಾಂ ಅಲಿಕ-ಚುಂಬಿ-ಕಸ್ತೂರಿಕಾಂ

ಸಮಂದ-ಹಸಿತೇಕ್ಷಣಾಮ್ ಸಶರ-ಚಾಪ-ಪಾಶಾಂಕುಶಾಮ್

ಅಶೇಷ-ಜನ-ಮೋಹಿನೀಂ ಅರುಣ-ಮಾಲ್ಯ-ಭೂಷಾಂಬರಾಂ

ಜಪಾ-ಕುಸುಮ-ಭಾಸುರಾಂ ಜಪವಿಧೌ ಸ್ಮರೇದಂಬಿಕಾಮ್

          ಸಕುಂಕುಮ - ಕುಂಕುಮದಿಂದ ಕೂಡಿದ; ವಿಲೇಪನಾಂ - ಲೇಪಿಸಿದ; ಅಲಿಕ + ಚುಂಬಿ - ಜೇನು ನೊಣಗಳಿಂದ ಆಕರ್ಷಿಸಲ್ಪಟ್ಟ; ಕಸ್ತೂರಿಕಾಂ - ಕಸ್ತೂರಿಯ ಪರಿಮಳವುಳ್ಳ; ಸಮಂದ+ಹಸಿತ+ಈಕ್ಷಣಾಮ್  (ಸಮಂದ + ಹಸಿತೇಕ್ಷಣಾಮ್) - ಮಂದಹಾಸವನ್ನು ಬೀರುವ ನೋಟವುಳ್ಳವಳು. ಸಶರ - ಬಾಣದಿಂದೊಡಗೂಡಿದ; ಚಾಪ - ಧನುಸ್ಸು (ಬಿಲ್ಲು); ಪಾಶ - ಹಗ್ಗದ ಕುಣಿಕೆ ಅಥವಾ ಒಂದು ವಿಧವಾದ ಆಯುಧ; ಅಂಕುಶ - ಆನೆಯನ್ನು ಪಳಗಿಸುವ ಆಯುಧ; ಅಶೇಷ+ಜನ+ಮೋಹಿನೀಂ - ಯಾರನ್ನೂ ಹೊರತುಪಡಿಸದೇ ಸರ್ವಜನರನ್ನೂ ಆಕರ್ಷಿಸುವ; ಅರುಣ - ಉದಯಿಸುವ ಸೂರ್ಯನಂತೆ ಕೆಂಪಾಗಿರುವ; ಮಾಲ್ಯ - ಮಲಯ ಪರ್ವತಗಳಲ್ಲಿ ದೊರೆಯುವ ವಿಶೇಷವಾದ ಚಂದನ; ಭೂಷ - ಆಭರಣಗಳು; ಅಂಬರಾಂ - ಯಾವುದೇ ರೀತಿಯ ಮಾಯೆ ಅಥವಾ ಮೋಡಿಗೊಳಮಾಡದೆ (ಅಂದರೆ ಕೇವಲ ಇರುವಿಕೆಯಿಂದಲೇ ಆಕರ್ಷಣೆಯುಂಟುಮಾಡುವ); ಜಪಾ ಕುಸುಮ - ಕೆಂಪು ದಾಸವಾಳ; ಭಾಸುರಾಂ - ಅಲಂಕೃತವಾದ; ಜಪ + ವಿಧೌ - ಶಾಸ್ತ್ರಗಳಲ್ಲಿ ವಿಧಿಸಿದಂತೆ ಜಪಿಸುತ್ತಾ; ಸ್ಮರೇತ್+ ಅಂಬಿಕಾಮ್ - ಅಂಬಿಕೆಯನ್ನು ಸ್ಮರಿಸುತ್ತೇನೆ.

          ಈ ಶ್ಲೋಕದ ಅರ್ಥವು ಇಂತಿದೆ: ದೇವಿಯು ಕುಂಕುಮ ಮತ್ತು ಕಸ್ತೂರಿಗಳಿಂದ ಲೇಪಿತಳಾಗಿದ್ದು ಅದರಿಂದ ಹೊರಡುವ ವಿಶೇಷವಾದ ಪರಿಮಳದಿಂದ ಜೇನುನೊಣಗಳು ಆಕರ್ಷಿತವಾಗುತ್ತವೆ. ಅವಳು ತನ್ನ ಭಕ್ತರೆಡೆಗೆ ಮಂದಹಾಸವನ್ನು ಬೀರುತ್ತಾಳೆ ಮತ್ತು ಅವಳು ಕೈಗಳಲ್ಲಿ ಧನುಸ್ಸು ಮತ್ತು ಬಾಣಗಳನ್ನು ಹಾಗೂ ಪಾಶ ಮತ್ತು ಅಂಕುಶಗಳೆಂಬ ಎರಡು ಆಯುಧಗಳನ್ನು ಹಿಡಿದಿದ್ದಾಳೆ. ಅವಳು ಸರ್ವರನ್ನೂ ಆಕರ್ಷಿಸುತ್ತಾಳೆ ಅದಕ್ಕೆ ಅವಳ ಭಕ್ತರಾಗಲಿ ಅಥವಾ ಭಕ್ತರಲ್ಲದವರಾಗಲಿ ಯಾರೂ ಹೊರತಲ್ಲ. ಅವಳು ಕೆಂಪು ಚಂದನದ ಮಾಲೆ ಮತ್ತು ಅತ್ಯುತ್ಕೃಷ್ಟವಾದ ಆಭರಣಗಳನ್ನು ಧರಿಸಿದ್ದಾಳೆ ಹಾಗೂ ಅವಳ ಮೈಬಣ್ಣವು ಕೆಂಪು ದಾಸವಾಳದಂತಿದೆ. ಈ ರೀತಿಯಾದ ಲಲಿತಾಂಬಿಕೆಯ ರೂಪವನ್ನು ಜಪನಿರತನಾದವರು ಧ್ಯಾನಿಸಬೇಕು.  

 

******
ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITA SAHASRANAMA - DHYANA VERSES http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
Average: 5 (2 votes)

Comments

Submitted by makara Sat, 04/20/2013 - 07:48

ಮೂಲ ಲೇಖನದ ಕೊಂಡಿಯು ಈ ಕೆಳಗಿನಂತಿದೆ. ನನ್ನ ಬರಹದಲ್ಲಿ ಈ ಕೊಂಡಿಯು ಸರಿಯಾಗಿ ಅಚ್ಚಾಗದೇ ಇರುವುದರಿಂದ ಇದನ್ನು ಇಲ್ಲಿ ಕೊಡಲಾಗಿದೆ.
http://www.manblunder.com/2012/06/lalita-sahasranama-dhyana-verses.html

Submitted by venkatesh Sat, 04/20/2013 - 11:10

In reply to by makara

ಲಲಿತಾ ಸಹಸ್ರನಾಮದ ಬಗ್ಗೆ ಅತ್ಯುತ್ತಮ ಲೇಖನವಿದು. ಶಂಕರಾ ವಾಹಿನಿಯಲ್ಲಿ ಮತ್ತೆ ಕೆಲವು ಸ್ವಾರಸ್ಯಕರ ವಿಷಯಗಳು ಸಿಗುತ್ತವೆ. ಧನ್ಯವಾದಗಳು. ಬಹಳ ಮಾಹಿತಿಪೂರ್ಣ ಲೇಖನಕ್ಕೆ....

-ಹೊರಾಂ.ಲವೆಂ.

Submitted by makara Sat, 04/20/2013 - 20:33

In reply to by venkatesh

ಶ್ರೀಯುತ ವೆಂಕಟೇಶ್ ಸರ್,
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಮತ್ತು ಶಂಕರ ಚಾನೆಲ್ಲಿನ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಮ್ಮಂತಹ ಹಿರಿಯರ ಆಶೀರ್ವಾದ ನಮ್ಮಂತಹ ಕಿರಿಯರಿಗೆ ಶ್ರೀರಕ್ಷೆ.

Submitted by ಗಣೇಶ Sun, 04/21/2013 - 00:03

ಶ್ರೀಧರ್‌ಜಿ, ಮೂರು ವರ್ಷದಿಂದ ಸಹಸ್ರನಾಮ ಅರ್ಥದ ಬಗ್ಗೆ ಯೋಚನೆಯಿಲ್ಲದೇ ಮಾಡುತ್ತಲೇ ಇದ್ದೆ. ಈಗ ನಿಮ್ಮ ವಿವರಣೆ ನೋಡುವಾಗ ನನ್ನ ತಪ್ಪುಗಳು ಕಾಣಿಸುತ್ತಿವೆ.ಸಣ್ಣ ಒಂದು ಉದಾಹರಣೆ- >>>ಹೇಮಾಭಾಂ ಪೀತವಸ್ತ್ರಾಂ ಕರ-ಕಲಿತ-ಲಸದ್ಧೇಮ ಪದ್ಮಾಮ್ ವರಾಂಗೀಮ್|---ನಾನು ಓದುತ್ತಿದ್ದ ಪುಸ್ತಕದಲ್ಲಿ - ಹೇಮಾಭಾಂ ಪೀಠ ವತ್ರಾಂ ...ಹೀಗೇ ಸಶರ-ಚಾಪ-ವು ಸಚರಶಾಪ ಆಗಿದೆ. ಹಿಂದೆ ನೆಟ್‌ನಲ್ಲಿ ನಾನೂ ಇದರ ಅರ್ಥದ ಬಗ್ಗೆ ವಿವರ ಹುಡುಕಿದೆ. ಪೂರ್ತಿ ಓದಿ ಅರ್ಥಮಾಡಿಕೊಳ್ಳಲು ತಾಳ್ಮೆ ಇರಲಿಲ್ಲ. ನನ್ನಂತಹವರಿಗೆ ಅರ್ಥವಾಗುವಂತೆ ವಿವರವಾಗಿ ಹೇಳುತ್ತಿರುವ ತಮಗೆ ತುಂಬಾ ತುಂಬಾ ಧನ್ಯವಾದಗಳು.(ಕರೆಂಟು ಕೈಕೊಡದಿದ್ದರೆ ನಿಮ್ಮ ಕ್ಲಾಸ್‌ಗೆ ದಿನಾ ಹಾಜರಾಗುವೆ)-ಗಣೇಶ.

Submitted by rasikathe Sun, 04/21/2013 - 23:15

ಮಕರ‌ ಅವರೆ, ನಿಮ್ಮ‌ ಲೇಖನಕ್ಕೆ ಧನ್ಯವಾದಗಳು. ಅರ್ಥ‌ ಸಮೇತ‌ ಹಾಕುತ್ತಿದ್ದೇರ‌...ನಿಧಾನವಾಗಿ ಓದಬೇಕು. ತುಮ್ಬಾ ಮುಖ್ಯವಾದ‌ ಲೇಖನವನ್ನು ಕೊಟ್ಟಿದೀರ‌.
ಮೀನಾ

Submitted by makara Wed, 04/24/2013 - 08:02

In reply to by rasikathe

ನಿಮ್ಮ ಮಾತು ನಿಜ ಡಾ! ಮೀನಾ ಅವರೆ, ಲಲಿತಾ ಸಹಸ್ರನಾಮವನ್ನು ನಿಧಾನವಾಗಿ ಓದಿಕೊಂಡರೆ ಮಾತ್ರ ಅದರ ಅರ್ಥವಾಗುತ್ತದೆ. ಅದಕ್ಕೇ ದಿನಕ್ಕೆ ಓದಬಹುದಾದಷ್ಟು ಭಾಗವನ್ನು ಮಾತ್ರ ಹಾಕುತ್ತಿದ್ದೇನೆ. ಮೂರು ದಿವಸ ಊರಿನಿಂದ ಹೊರಗೆ ಹೋಗಬೇಕಾದ್ದರಿಂದ ಮುಂದಿನ ಸಂಚಿಕೆಯನ್ನು ಮೂರು ದಿನಕ್ಕಾಗುವಷ್ಟು ಹಾಕಿದ್ದೇನೆ, ಕ್ಷಮೆಯಿರಲಿ :)

Submitted by makara Wed, 04/24/2013 - 08:00

ಗಣೇಶ್..ಜಿ,
ನಿಮ್ಮ ಪ್ರತಿಕ್ರಿಯೆ ಓದಿ ತುಂಬಾ ಸಂತೋಷವಾಯಿತು. ಬಹಳ ದಿನಗಳ ನಂತರ ನಾವಿಬ್ಬರೂ ಸಂಪದದಲ್ಲಿ ಭೇಟಿಯಾಗುತ್ತಿರುವುದಕ್ಕೆ ಸಂತಸವಾಗುತ್ತಿದೆ.
ಲಲಿತಾಸಹಸ್ರನಾಮದ ಕ್ಲಾಸಿಗೆ ದಿನವೂ ತಪ್ಪದೇ ಹಾಜರಾಗಲೇ ಬೇಕು, ಇಲ್ಲದಿದ್ದರೆ ನಿಮ್ಮ ಮನಸ್ಸಿನ ಬ್ಯಾಟರಿ ಡೌನ್ ಆಗಿ ಹೋಗುತ್ತದೆ, ಆ ದೃಷ್ಟಿಯಿಂದ ಸ್ವಲ್ಪ ಪವರ್-ಬ್ಯಾಕ್ ಅಪ್ ಮಾಡಿಕೊಳ್ಳಿ :))

Submitted by ಗಣೇಶ Thu, 04/25/2013 - 00:19

In reply to by makara

>>>ಕರೆಂಟು ಕೈಕೊಡದಿದ್ದರೆ ನಿಮ್ಮ ಕ್ಲಾಸ್‌ಗೆ ದಿನಾ ಹಾಜರಾಗುವೆ-ಗಣೇಶ.
>>>ಲಲಿತಾಸಹಸ್ರನಾಮದ ಕ್ಲಾಸಿಗೆ ದಿನವೂ ತಪ್ಪದೇ ಹಾಜರಾಗಲೇ ಬೇಕು, ಇಲ್ಲದಿದ್ದರೆ ನಿಮ್ಮ ಮನಸ್ಸಿನ ಬ್ಯಾಟರಿ ಡೌನ್ ಆಗಿ ಹೋಗುತ್ತದೆ, ಆ ದೃಷ್ಟಿಯಿಂದ ಸ್ವಲ್ಪ ಪವರ್-ಬ್ಯಾಕ್ ಅಪ್ ಮಾಡಿಕೊಳ್ಳಿ :)) ವ್ಹಾ..ಶ್ರೀಧರ್‌ಜಿ. :) :) ಸಹಸ್ರನಾಮದ ಬಗ್ಗೆ ನಾನೂ ಕೆಲ ವಿಷಯ ಹೇಳಲಿಕ್ಕಿದೆ...