' ಪ್ರಣಯ ಘಾತೆ '
ಪ್ರಣಯ ಗಾಥೆ
ಶೃಂಗಾರ ಮತ್ತು ವೀರ
ಕಾವ್ಯದ ಮೂಲ ದ್ರವ್ಯಗಳು
ಮಾತ್ರವೆ ಅಲ್ಲ ಅವು ಕಾಮ
ಮತ್ತು ವೇದಾಂತ ಕೂಡ
ಜೊತೆಗೆ ಪ್ರವೃತ್ತಿ ಮತ್ತು
ನಿವೃತ್ತಿ ಕೂಡ ಹೌದು
ಅಂತೆಯೆ ಜೀವನ ಮತ್ತು
ಕಾವ್ಯದ ಮೂಲ ದ್ರವ್ಯ ಸಹ
ಇವೆರಡರ ಸಂಗಮ
ಕಾವ್ಯೋತ್ಪತ್ತಿ ಇದು ಕೆಲವೊಮ್ಮೆ
ಪರದೆಯ ಮುಂದೆ ಹಲವೊಮ್ಮೆ
ಪರದೆಯ ಹಿಂದೆ ಒಮ್ಮೊಮ್ಮೆ
ಎರಡೂ ಕಡೆಗೂ
ಈ ಎರಡರ ಸಮರಸವೆ 'ಸಂಗಮ'
ಅದು ಕಾಳಿದಾಸನ
'ಮೇಘದೂತ' ಇರಬಹುದು
ಜಯದೇವ ಕವಿಯ
'ಗೀತ ಗೋವಿಂದ' ವಿರಬಹುದು
ಉಮರ್ ಖಯ್ಯಾಮನ
'ರುಬಾಯಿಗಳು' ಆಗಿರಬಹುದು
ಅದೊಂದು ಕಾಮಯಾಪನೆ
ವಾತ್ಸಾಯನನಿಂದ
ಆಚಾರ್ಯ ರಜನೀಶನ ವರೆಗೆ
ಎಲ್ಲೆಡೆಗೆ ಕಾಮದ ವಿಜ್ರಂಭಣೆಯೆ
ವಿಜ್ರಂಭಣೆ
ವಿಶ್ವಾಮಿತ್ರ ತಪಕೆ ನಿಂತ
ತಪೋಭಂಗಕ್ಕೆ ಮೇನಕೆಯ ಆಗಮನ
ಅವನಿಗೆ ಕಾಮ ದಕ್ಕಿತು
ಅದರ ಫಲ ಶಕುಂತಲೆಯ ಜನನ
ಆಕೆಯ ಜವಾಬ್ದಾರಿ ಹೊರದ ಮುನಿ
'ಕಾಮಃ ಕರ್ತಾ ನಾಹಂ ಕರ್ತಾ'
ಎಂದು ಮುಖ ತಿರುವಿದ ಕಾರಣ
ಆತನಿಗೆ ವೇದಾಂತ ದಕ್ಕಿತು
ಆತ 'ಬ್ರಹ್ಮರ್ಷಿ'ಯಾದ !
ಹೆಣ್ಣನ್ನು ಅರಿಯದವ
ಬ್ರಹ್ಮರ್ಷಿ ಹೇಗಾದಾನು ?
ವಾತ್ಸಾಯನನಿಗೂ ಮೊದಲು
'ಕಾಮಸೂತ್ರ' ಬರೆದವ
ವೇದ ಕಾಲದ ಋಷಿ 'ಶ್ವೇತಕೇತು'
ಹೆಣ್ಣಿನಂತೆಯೆ ಬ್ರಹ್ಮವೂ
ಮೈಮರೆಸುವಂತಹುದು
ಎಂದವನು ಆತ ಹೆಣ್ಣು ಗಂಡುಗಳ
ಮಿಲನ 'ಸೃಷ್ಟಿಯ ಆರಾಧನೆ'
ಹೆಣ್ಣೊಂದು 'ಅಗ್ನಿಕುಂಡ'
ಗಂಡು ಆಜ್ಯಾಹುತಿ ಇದೊಂದು
'ಸೃಷ್ಟಿಯಜ್ಞ' ದಾನ ಮತ್ತು ತಪಸ್ಸು
ಕೂಡ ಎಂದವರು ಉಪನಿಷತ್ಕಾಲದ
ಋಷಿಗಳು ಹೀಗಾಗಿ ಕಾಮ
ಅರ್ವಾಚೀನದಂತೆ ಪ್ರಾಚೀನ ಕೂಡ
ವಸಂತದಲಿ ಕಾಮನ ವಿಜ್ರಂಭಣೆ
ರತಿ ಕಾಮ ಸಲ್ಲಾಪ 'ಕಾಮದಹನ'
ಕಾಮ ದಹನ ಮರು ಸೃಷ್ಟಿಗೆ ಹೇತು
ಸೃಷ್ಟಿಯಿಂದ ಮತ್ತೆ ಕಾಮಾಂಕುರ
ಮತ್ತೆ ದಹನ ಮತ್ತೆ ಸೃಷ್ಟಿ
ಇದೊಂದು ನಿರಂತರ ಕ್ರಿಯೆ
ಹುಟ್ಟಿನಿಂದ ಸಾವು ಸಾವಿನಿಂದ ಹುಟ್ಟು
ಇದು ಪರಸ್ಪರಾವಲಂಬಿ 'ಸೃಷ್ಟಿಕಾವ್ಯ'
ವೇದೋಪನಿಷತ್ತುಗಳ ಯುಗ
ಅದೊಂದು 'ಮುಕ್ತಯುಗ'
ಮನುಷ್ಯ ನಾಗರಿಕನಾದ
ಮುಕ್ತತೆಗೆ ಕಡಿವಾಣ ಹಾಕಿದ
ಆಗ ಹುಟ್ಟಿ ವಿಜ್ರಂಭಿಸಿದ್ದೆ 'ಮಡಿವಂತಿಕೆ'
ಇದುವೆ ಮುಂದೆ ಕರ್ಮಠತನಕ್ಕೆ ನಾಂದಿ
ಇಲ್ಲಿ ಮುಕ್ತ ಕಾಮ ಮೈಲಿಗೆಯ ವಸ್ತು
ಇದು ಕತ್ತಲೆಯ ವ್ಯವಹಾರವಾಗಿ
ಸೀಮಿತ ಗೊಂಡಿತು
ಈ ಸೀಮಿತತೆ ಅಸೀಮತೆಯ ಹುಟ್ಟಿಗೆ
ಕಾರಣವಾಯಿತು ಹೀಗಾಗಿ
ಉತ್ಕಟ ಕಾಮ ಎಲ್ಲ ದಿಗ್ಭಂಧನಗಳ
ಮೀರಲು ಹಾತೊರೆಯಿತು ಅದುವೆ
ಅವ್ಯವಹಾರಕ್ಕೆ ನಾಂದಿ
ಪ್ರವೃತ್ತಿ ಇಲ್ಲದೆ ನಿವೃತ್ತಿ ಹೇಗೆ ಸಾಧ್ಯ ?
ಅನುರಕ್ತಿಯಿಲ್ಲದೆ ವಿರಕ್ತಿ ಎಲ್ಲಿ ?
ಈ ವಿವೇಕವೆಲ್ಲ ಅರ್ವಾಚೀನ
ಕಾಮ ವೇದಾಂತದಿಂದ
ವೇದಾಂತದಿಂದ ಕಾಮದ ಬೇರ್ಪಡೆ
ಪರಿಣಾಮ ಕಾವ್ಯ ವೇದಾಂತಗಳು
ಕಳೆಗಟ್ಟಿದವು ಸೃಜನಶೀಲತೆ ಕಂಗೆಟ್ಟು
ಕುಳಿತಿತು ಇವೆರಡೂ ಪ್ರಸ್ತುತ
ಸಮಾಜಕ್ಕೆ ಅನುಪಯುಕ್ತ
ಪ್ರವೃತ್ತವಾದ ಮರೆತ ನಿವೃತ್ತವಾದಿಗಳು
ನಿವೃತ್ತವಾದ ಮರೆತ ಪ್ರವೃತ್ತವಾದಿಗಳು
ಇವರು ಇಳಿಯುವಿಕೆ ತಿಳಿಯದೆ
ಏರಲು ಪ್ರಯತ್ನಿಸುವವರು
ಪ್ರಕೃತಿಯೆ ನಿವೃತ್ತಿಯ ಮೂಲ
ನಿವೃತ್ತಿಯಲ್ಲಿ ಪ್ರಕೃತಿಯ ಕೂವೆಗಳಿವೆ
ನಿವೃತ್ತಿಯೂ ಮತ್ತೊಂದು
ರೀತಿಯಲಿ ಪ್ರವೃತ್ತಿಯೆ ರತಿಯ
ಅಂಗಾಂಗದಲಿ ವೇದಾಂತದ ಪಲ್ಲವವಿದೆ
ವೇದಾಂತದ ಪುಟಗಳಲಿ
ರತಿಯ ಚೆಲುವಿದೆ ಇವುಗಳ
ಅರಿಯುವಿಕೆಗೆ ಒಳಗಣ್ಣು ಬೇಕು
ರತಿಯ ಅರಿವಿಲ್ಲದ ತತ್ವಜ್ಞಾನ ಅಪೂರ್ಣ
ತತ್ವಜ್ಞಾನವಿಲ್ಲದ ರತಿ ಕೂಡ ಅಪೂರ್ಣವೆ
ಅದುವೆ ಭರತೇಶ ವೈಭವದ
'ಪೂರ್ಣಮದಃ ಪೂರ್ಣಮಿದಂ'
ತ್ತವಜ್ಞಾನಿಯಾಗಿ ಹೆಣ್ಣನ್ನು ರಮಿಸಬೇಕು
ರಸಿಕನಾಗಿ ವೇದಾಂತವನ್ನೋದಬೇಕು
ಈ ಎರಡನ್ನೂ ಬಲ್ಲವ ಕವಿಯಾಗಬಲ್ಲ
ಈ ಪ್ರಣಯ ಕಾವ್ಯದ ಪಯಣ
ಸಾಗಿರುವುದೆತ್ತ ? ಈ ಕಾವ್ಯ ಪ್ರಾಕಾರ
ಸಾಗಿದೆ ದಿಕ್ಕು ದೆಸೆಯಿಲ್ಲದೆ
ಮತ್ತೊಮ್ಮೆ ಹುಟ್ಟಲಿ ಆ ಪ್ರಾಚೀನ ಕವಿ
ಸೃಷ್ಟಿಯಾಗಲಿ ಪ್ರಣಯದ
ಭಗವದ್ಗೀತೆ 'ಗಾಥಾ ಶಪ್ತಸತಿ'
ಕಾಮವೊಂದು 'ಪ್ರಣಯ ಕೊಳ'
ಈಜು ಬರದೆ ಕೊಳಕ್ಕೆ ಇಳಿಯುವಂತಿಲ್ಲ
ಕೊಳಕ್ಕಿಳಿಯದೆ ಈಜು ಬರುವಂತಿಲ್ಲ
ಪ್ರಣಯವೊಂದು 'ಕಲ್ಪನಾ ಕುದುರೆ'
ಇದು ನೆಲದ ಮೇಲೆ ಓಡುವಂತಹುದಲ್ಲ
ಅಸೀಮ ಅನಂತ ವ್ಯೋಮದಲಿ
ಓಡುವ ಕುದುರೆ ಅದರ ಓಟಕ್ಕೆ ಕಡಿವಾಣ
ಹಾಕಿದಿರೊ ನೆಲ ಕಚ್ಚಿ ಬಿಡುತ್ತದೆ ನಿಯಮಗಳ
ಚೌಕಟ್ಟು ಅದಕೆ ಸರಿ ಹೊಂದುವುದಿಲ್ಲ
ಚೌಕಟ್ಟು ಮೀರಿತೊ ಸಮಾಜ ಸಹಿಸುವುದಿಲ್ಲ
ಜೀವಂತಿಕೆ ಅಲ್ಲಿ ಹುಟ್ಟಿ ಬೆಳೆಯದು
ಶೃಂಗಾರ ಅಶ್ಲೀಲಗಳ ನಡುವಿನ ಗೆರೆ
ಬಲು ತೆಳು ಅದು ವ್ಯಕ್ತವಲ್ಲ ಆದರೆ ಅದೊಂದು
ವ್ಯಕ್ತವಲ್ಲದ ಅವ್ಯಕ್ತ 'ಲಕ್ಷ್ಮಣ ರೇಖೆ' ಅದು
ಅವರರವರ ಬುದ್ಧಿಗೆ ಹೊಳೆಯಬೇಕು ಅವರವರೆ
ಲಕ್ಷ್ಮಣ ಅವರವರು ಎಳೆದದ್ದೆ ರೇಖೆ ಇಲ್ಲಿ ಯಾರೂ
ಲಕ್ಷ್ಮಣ ರಾವಣ ಸೀತೆ ಮಾಯಾಸೀತೆ
ಯಾರೂ ಆಗಬಹುದು ಪ್ರೇಮ ಕಾಮದ ಅಂತರ
ತಿಳಿಯಬಹುದು ಇದೊಂದು ಎಂದೂ
ಮುಗಿಯದ ' ಪ್ರಣಯ ಗಾಥೆ '
***
Comments
ಹಿರಿಯರಾದ ಪಾಟೀಲ ರವರೇ,
ಹಿರಿಯರಾದ ಪಾಟೀಲ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ನಮಸ್ಕಾರ. ಪ್ರಣಯಗಾಥೆ' ನೀಳ್ಗವನ ತುಂಭ ಉತ್ಕೃಷ್ಟವಾಗಿದೆ. ಅದರಲ್ಲಿ ತಮ್ಮ ಅಗಾಧ ಓದು ಗಮನಿಸಬಹುದು. ಪ್ರಾಚೀನ, ಆರ್ವಾಚೀನ, ವೇದ ಉಪನಿಷತ್ತುಗಳನ್ನು ಉದಾಹರಿಸಿ, ಅದರೊಂದಿಗೆ ಮರೆತುಹೋದ ಕೆಲ ಘಟನೆಗಳನ್ನು ನೆನಪಿಸುತ್ತ ಸಾಗುವ ಪರಿ ಅದ್ಭುತ. ಉತ್ತಮ ಕವನ. ಧನ್ಯವಾದಗಳು.
In reply to ಹಿರಿಯರಾದ ಪಾಟೀಲ ರವರೇ, by lpitnal@gmail.com
ಲಕ್ಷ್ಮೀಕಾಂತ ಇಟ್ನಾಳರಿಗೆ
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ಈ ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ. ಕವನ ಧೀರ್ಘವಾಗಿದೆ ಓದುಗರಿಗೆ ಬೇಸರ ತರಿಸಬಹುದೆ ಎನ್ನುವ ಶಂಕೆ ನನಗಿತ್ತು. ನಿಮ್ಮ ನಿಸಿಕೆ ಆ ನನ್ನ ಸಂಶಯವನ್ನು ದೂರ ಮಾಡಿದೆ. ನಿಮ್ಮ ಓದುವ ಸಹನೆಗೆ ಮೆಚ್ಚುವ ಪರಿಗೆ ಅನಂತ ಧನ್ಯವಾದಗಳು.
In reply to ಹಿರಿಯರಾದ ಪಾಟೀಲ ರವರೇ, by lpitnal@gmail.com
ಹಿರಿಯರೇ ಇದು ನೀವ್ ಬರೆದುದರಲ್ಲಿ
ಹಿರಿಯರೇ ಇದು ನೀವ್ ಬರೆದುದರಲ್ಲಿ ಅತಿ ದೀರ್ಘ ಕವನ ..!!
ಮತ್ತು ಇಟ್ನಾಳ್ ಅವರ ಅನಿಸಿಕೆಗೆ ನನ್ ಸಹಮತವಿದೆ .. ನಾ ದೀರ್ಘವಾಗಿ ಹೇಳಹೊರಟಿದ್ದು ಅವರು ಕ್ಲುಪ್ತವಾಗಿ ಹೇಳಿರುವರು ..!!
ಇದರಲ್ಲಿ ಎಲ್ಲವೂ ನನಗೇನೂ ಅರ್ಥ ಆಗಿಲ್ಲ , ಆದ್ರೆ ಹಲವು ಸಂಗತಿಗಳು ಅರ್ಥ ಆದವು - ಇನ್ನು ಕೆಲವು ವಿಶೇಷ ಅರ್ಥ ಪಡೆದವು ಮತ್ತೆ ಕೆಲವು ನಾ ಇದುವರೆಗೂ ಹೊಂದಿದ ಭಾವಾರ್ಥ ದ ಹೊರತಾಗಿ ಇನ್ನು ಬೇರೆ ಬೇರೆ ದ್ರುಸ್ತಿಕೊನದ ಅರ್ಥವೂ ಇದೆ ಎಂದು ಅರಿವಾಗುವ ಹಾಗೆ ಮಾಡಿದವು ..
ನಾ ಅರ್ಥೈಸಿಕೊಂಡಂತೆ ಮತ್ತು ನನ್ನ ಮನದಾಳದ ಭಾವನೆಯಂತೆ ಇದು ಅಪಾರ ಅರ್ಥ ಇರುವ ಅತ್ಯುತ್ತಮ ಕವನ .
ಆದಿ ಅಂತ್ಯ , ಪುರಾಣ -ವೇದ -ಸಕಲ ಗ್ರಂಥಗಳು ಜ್ಞಾನವನ್ನು ಅಜ್ಞಾನವನ್ನು ತೆರೆದಿಟ್ಟ ಧಿಟ್ಟ ಬರಹ , ಕಾಮ ಸೂತ್ರ ಮಾತ್ರ ಗೊತ್ತಿತ್ತು ಆದರೆ ಅದ್ಕೂ ಮೊದಲೇ ಇನ್ನೊಬ್ಬರು ಆ ಬಗ್ಗೆ ಬರೆದಿದ್ದರು ಎಂಬುದು ಮತ್ತು ಇನ್ನಿತರ ಅಚ್ಚರಿಯ ಅಂಶಗಳೂ ಇಲ್ಲಿ ತಿಳಿದವು...
ಕೆಲ ಸಾಲುಗಳನ್ನು ಹಾಕುವ ಎಂದರೆ ಇಡೀ ಬರಹವೇ ಜೇನು ತುಂಬಿದ ತಟ್ಟೆ - ಯಾವ ಕಡೆಯಿಂದ ಬಾಯಿಗೆ ಸೋಕಿಸಿದರೂ ಜೇನಿನ ಸ್ವಾಧವೆ ರುಚಿಯೇ ..
ಕಾವ್ಯ ಎನ್ನುವುದು ಕಬ್ಬಿಣದ ಕಡಲೆ ಆಗದೆ ರೂಪಕ ರಮ್ಯ ವರ್ಣನೆ ಇಲ್ಲದ ಬಣ್ಣನೆ ಇಲ್ಲದ ಸಾದಾ ಸೀದಾ ಸರಳ ಬರಹ ಆಗಿರಬೇಕು ಎನ್ನುವುದು ನನ್ನ ವಯುಕ್ತಿಕ ಭಾವನೆ ಅನಿಸಿಕೆ .. ಮತ್ತು ನಿಮ್ಮೀ ಬರಹ ಈ ಎಲ್ಲ ಅಂಶಗಳನ್ನು ಒಳಗೊಂಡಿದೆ .. ಓದಿ ಖುಷಿ ಆಯ್ತು ಹಾಗೆ ನಿಮ್ಮ ಈ ತರಹದ ಬರವಣಿಗೆ ಓದುವ ಭಾಗ್ಯ ಎಮಗೆ ಸಿಕ್ಕಿದ್ದು ನಮ್ ಸೌಭಾಗ್ಯ ಎನ್ನಬಲ್ಲೆ .. ಈ ಪ್ರತಿಕ್ರಿಯೆ ಓದಿ ಸಹಜವಾಗಿ ಇದು ಹೊಗಳಿಕೆ ಎಂದು ನಿಮಗೆ ಸಂಕೋಚವಾದರೂ ಆದೀತು ಆದರೆ ಈ ಬರಹ ಓದಿದ ಪ್ರತಿಕ್ರಿಯಿಸುವ ಸಂದರ್ಭದಲಿ ಆ ಕ್ಷಣದ ಮನದ ನೇರಾ ನೇರಾ ಭಾವನೆಗಳನ್ನು ಹಾಗೆಯೇ ಅಕ್ಷರ ರೂಪಕ್ಕಿಳಿಸಿ ಇಲ್ಲಿ ಸೇರಿಸಿರುವೆ ..
ಈ ಬರಹ ಮತ್ತು ಅದನ್ನು ಬರೆದ ನೀವು ಮೆಚ್ಚುಗೆಗೆ ಅರ್ಹರೇ ಸೈ ..
ನಿನ್ನೆಯ ಡಾ: ರಾಜ್ ಅವರ ಜನ್ಮ ದಿನದ ನೆನಪು ಬಂದು ಹಾಗೆಯೇ ಒಂದು ವರ್ಷದ ಹಿಂದೆ ನೀವು ಮತ್ತು ನಾನು ಅವರ ಬಗ್ಗೆ ಬರಹ ಬರೆದಿದ್ದು ನೆನಪಾಗಿ ಆಗಲೇ ಒಂದು ವರ್ಷ ಆಯ್ತೆ? ಎನ್ನುವ ಹಾಗಾಯ್ತು ..
ಶುಭವಾಗಲಿ
\।
In reply to ಹಿರಿಯರೇ ಇದು ನೀವ್ ಬರೆದುದರಲ್ಲಿ by venkatb83
ನಿಜ ಸಪ್ತಗಿರಿಯವರೆ,ನನಗೂ
ನಿಜ ಸಪ್ತಗಿರಿಯವರೆ,ನನಗೂ ಅನಿಸಿದ್ದು ಅದೆ.ಪಾಟೀಲರ ವಿವಿದ ಕವನ ಸಂಗ್ರಹ ದಲ್ಲಿ ಈ ಕವನ ತೀರ ಭಿನ್ನವಾಗಿದ್ದು ವೈಶಿಷ್ಟತೆಯಿಂದ ಕೂಡಿದೆ.ಇದು ಅವರು ತೀರ ಯೋಚಿಸಿ 'ಸಂಪದ'ದಲ್ಲಿ ಪ್ರಕಟಿಸಿದ್ದಾರೆ ಎನಿಸುತ್ತದೆ . ಕವನಗಳನ್ನು ಬರೆಯುತ್ತಾ ಹೋದಂತೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಹೊಂದಿರುವ ಅಪಾರ ಜ್ನಾನದ ಅರಿವನ್ನು ನಮಗೆ ಪರಿಚಯಿಸುತ್ತಿದ್ದಾರೆಂದರೆ ಸುಳ್ಳಲ್ಲ........ವಂದನೆಗಳು........ರಮೇಶ ಕಾಮತ್.
In reply to ನಿಜ ಸಪ್ತಗಿರಿಯವರೆ,ನನಗೂ by swara kamath
ರಮೇಶ ಕಾಮತರಿಗೆ ವಂದನೆಗಳು
ರಮೇಶ ಕಾಮತರಿಗೆ ವಂದನೆಗಳು
ಸಪ್ತಗಿರಿ ಯವರ ಅನಿಸಿಕೆಗೆ ತಾವು ಬರೆದ ಪ್ರತಿಕ್ರಿಯೆ ಓದಿದೆ. ಕವನದ ಮೆಚ್ಚುಗೆಗೆ ಧನ್ಯವಾದಗಳು,
In reply to ಹಿರಿಯರೇ ಇದು ನೀವ್ ಬರೆದುದರಲ್ಲಿ by venkatb83
ಸಪ್ತಗಿರಿಯವರಿಗೆ ವಂದನೆಗಳು
ಸಪ್ತಗಿರಿಯವರಿಗೆ ವಂದನೆಗಳು
ಈ ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ. ಬಹಳ ಮೆಚ್ಚುಗೆ ವ್ಯಕ್ತ ಪಡಿಸಿದ್ದೀರಿ, ತಾವು ಈ ಕವನದ ಆಳಕ್ಕೆ ಇಳಿದು ಅರ್ಥೈಸಿದ್ದೀರಿ. ಈ ಕವನವನ್ನು ಸುಮಾರು ದಿನಗಳ ಹಿಂದೆಯೆ ರಚಿಸಿ ಇಟ್ಟಿದ್ದೆ, ಬಹಳ ಧೀರ್ಘವಾದ ಕವನ ಓದುಗರಿಗೆ ಬೇಸರವಾಗಬಹುದು ಎಂದು ಹಾಕಿರ ಲಿಲ್ಲ. ನಿಮ್ಮೆಲ್ಲರೆ ಪ್ರತಿಕ್ರಿಯೆಗಳು ನನಗೆ ಸಮಾಧಾನ ತಂದಿವೆ. ಹೌದು ಕಳೆದ ವರ್ಷ ನಾವು ಬರೆದ ರಾಜ ಕುಮಾರ ಲೇಖನಗಳ ಕುರಿತು ನೆನಪಿಸಿದ್ದೀರಿ, ನನಗೆ ಅದು ಮರೆತೆ ಹೋಗಿತ್ತು, ನಿಮ್ಮ ಸೂಕ್ಷ್ಮ ಗ್ರಹಿಕೆಗಳು ಯಾವುದೆ ಬರಹ ಗಾರನಿಗೂ ಸಂತಸ ತರುವ ಮತ್ತು ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುವಂತಹವು. ತಮ್ಮ ಮೆಚ್ಚುಗೆ ಸಂತಸ ತಂದಿದೆ, ಧನ್ಯವಾದಗಳು.
In reply to ಹಿರಿಯರೇ ಇದು ನೀವ್ ಬರೆದುದರಲ್ಲಿ by venkatb83
@Patil +1 @ venkat +1
@Patil
+1
@ venkat
+1
In reply to @Patil +1 @ venkat +1 by Shreekar
ಶ್ರೀಕರವರಿಗೆ ವಂದನೆಗಳು ಕವನದ
ಶ್ರೀಕರವರಿಗೆ ವಂದನೆಗಳು ಕವನದ ಮೆಚ್ಚುಗೆಗೆ ಧನ್ಯವಾದಗಳು.
ಪ್ರಣಯ ಘಾತೆ, ಪ್ರಣಯ ಗಾಥೆ -
ಪ್ರಣಯ ಘಾತೆ, ಪ್ರಣಯ ಗಾಥೆ - ಎರಡೂ ಹೊಂದುತ್ತದೆ! ಧನ್ಯವಾದಗಳು, ಪಾಟೀಲರೇ.
In reply to ಪ್ರಣಯ ಘಾತೆ, ಪ್ರಣಯ ಗಾಥೆ - by kavinagaraj
ಕವಿ ನಾಗರಾಜ ರವರಿಗೆ ವಂದನೆಗಳು
ಕವಿ ನಾಗರಾಜ ರವರಿಗೆ ವಂದನೆಗಳು ಮೆಚ್ಚುಗೆಗೆ ಧನ್ಯವಾದಗಳು.
ಪಾಟೀಲರಿಗೆ ವಂದನೆಗಳು. ವಿಷ್ಣುವಿನ
ಪಾಟೀಲರಿಗೆ ವಂದನೆಗಳು. ವಿಷ್ಣುವಿನ ಮೋಹಿನೀ ಅವತಾರವನ್ನು ನೋಡಿ ಸ್ವತಃ ಶಿವನೇ ಮರುಳಾದನೆಂದರೆ ಇನ್ನು ಆ ವಿಷ್ಣುವಿನ ಮಾಯೆಯಾದ ಕಾಮದಿಂದ ನಮ್ಮಂತಹ ಬಡಪಾಯಿಗಳು ಮುಕ್ತರಾಗುವುದೂ ಕಷ್ಟಸಾಧ್ಯವಲ್ಲವೇ? ಆದ್ದರಿಂದ ಅವರವರ ಮನಸ್ಸಿಗೆ ಅವರೇ ಲಕ್ಷ್ಮಣ ರೇಖೆಗಳನ್ನು ಎಳೆದುಕೊಳ್ಳಬೇಕೆಂದು ಬಹು ಚೆನ್ನಾಗಿ ಈ ದೀರ್ಘ ಕವನಕ್ಕೆ ಮುಕ್ತಾಯವನ್ನು ಕೊಟ್ಟಿದ್ದೀರ, ಧನ್ಯವಾದಗಳು.
In reply to ಪಾಟೀಲರಿಗೆ ವಂದನೆಗಳು. ವಿಷ್ಣುವಿನ by makara
ಶ್ರೀಧರ ಬಂಡ್ರಿ ಯವರಿಗೆ ವಂದನೆಗಳು
ಶ್ರೀಧರ ಬಂಡ್ರಿ ಯವರಿಗೆ ವಂದನೆಗಳು, ಬಹಳ ದಿನಗಳ ನಂತರ ಸಂಪದಕ್ಕೆ ಮರಳಿದ್ದೀರಿ ಕವನದ ಮೆಚ್ಚುಗೆಗೆ ಧನ್ಯವಾದಗಳು.
>>>ಮತ್ತೊಮ್ಮೆ ಹುಟ್ಟಲಿ ಆ
>>>ಮತ್ತೊಮ್ಮೆ ಹುಟ್ಟಲಿ ಆ ಪ್ರಾಚೀನ ಕವಿ/ ಸೃಷ್ಟಿಯಾಗಲಿ ಪ್ರಣಯದ/ ಭಗವದ್ಗೀತೆ 'ಗಾಥಾ ಶಪ್ತಸತಿ'---ಈ ಗಾಥಾ ಶಪ್ತಸತಿ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. :( ಗೂಗಲಿಸಿ ೫-೬ ಕವನಗಳನ್ನು ಓದಿದೆ..ಬಹಳ ಚೆನ್ನಾಗಿದೆ. ಕವಿ ಲಕ್ಷ್ಮೀನಾರಾಯಣ ಭಟ್ಟರು ಕನ್ನಡಕ್ಕೆ ತಂದಿರುವರೆಂದು ತಿಳಿಯಿತು. >>>ಶೃಂಗಾರ ಅಶ್ಲೀಲಗಳ ನಡುವಿನ ಗೆರೆ ಬಲು ತೆಳು.... ವ್ಹಾ..ನಿಮ್ಮ ಕವನ ಆ ಗೆರೆಯನ್ನು ದಾಟದೇ ಬಹಳ ಚೆನ್ನಾಗಿದೆ.
In reply to >>>ಮತ್ತೊಮ್ಮೆ ಹುಟ್ಟಲಿ ಆ by ಗಣೇಶ
ಗಣೇಶ ರವರಿಗೆ ವಂದನೆಗಳು
ಗಣೇಶ ರವರಿಗೆ ವಂದನೆಗಳು
ಈ ಕವನದ ಕುರಿತು ತಮ್ಮ ಪ್ರತಿಕ್ರಿಯೆ ಓದಿದೆ ಕವನದ ಮೆಚ್ಚುಗೆಗೆ ಧನ್ಯವಾದಗಳು.