ವ್ಯಾಪಾರಂ........

ವ್ಯಾಪಾರಂ........

 

ಬನಶಂಕರಿ ಸಮೀಪದ ರುದ್ರಭೂಮಿ. ಯಾರೋ ಪಾಪ ವಿದಿವಶರಾಗಿದ್ದರು ಅನ್ನಿಸುತ್ತೆ ಮಣ್ಣು ಮಾಡಲು  ದೊಡ್ಡದೊಂದು ಗುಂಪು ಬಂದಿತ್ತು.  .  ಎಲ್ಲ ಕ್ರಿಯೆಗಳು ನಡೆದಿದ್ದವು, ಶವವನ್ನು ನೆಲದಲ್ಲಿಟ್ಟು ಮಣ್ಣು ಮುಚ್ಚಲಾಯಿತು. ಮೇಲೆ ಸ್ವಲ್ಪ ದಿಬ್ಬದಂತೆ ಮಣ್ಣಿನ ಗುಡ್ಡೆ. ನೆರೆದಿದ್ದ ಬಂದುಗಳ ಹಲವರ ಕಣ್ಣಲ್ಲಿ ನೀರು,  ಶಾಸ್ತ್ರಗಳೆಲ್ಲ ಮುಗಿದು, ಸುಂದರ ಹಾರಗಳು ಸಮಾದಿಯನ್ನು ಅಲಂಕರಿಸಿದವು. ಕೆಲವರಂತು ಅತ್ಯಂತ ಬೆಲೆಬಾಳುವ ಹಾರಗಳನ್ನೆ ತಂದಿದ್ದರು.
.
.
ದೂರದಿಂದ ಇವರ ಕೆಲಸಗಳನ್ನೆ ದಿಟ್ಟಿಸುತ್ತ ನಿಂತಿದ್ದದ್ದು ಆರ್ಮುಗಂ ಹಾಗು ವಲ್ಲಿ ಎನ್ನುವ ಇಬ್ಬರು ಎಳೆಯರು. ಬಟ್ಟೆ ಸಹ ಸರಿಯಾಗಿ ಹಾಕಿರದ ಇಬ್ಬರು ಅಣ್ಣ ತಂಗಿಯರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ನಿಂತಿದ್ದರು, ಈ ರುದ್ರಭೂಮಿಯ ಕ್ರಿಯೆಯನ್ನು. ಅತ್ತ ಅವರೆಲ್ಲ ಹೊರಟರು. ಅಣ್ಣ ಆಗಲೆ ಮುಂದಡಿ ಇಟ್ಟ, ತಂಗಿ ವಲ್ಲಿ ತಡೆದಳು
"ತಡೆಯೊ ಅವರೆಲ್ಲ ದೂರ ಹೋಗಲಿ, ಈಗಲೆ ಹೋದರೆ ಅಷ್ಟೆ ನಮ್ಮ ಕತೆ"  ಐದು ನಿಮಿಷ ದಾಟುವದರಲ್ಲಿ ಅಲ್ಲಿ ನಿರ್ಜನವಾಯಿತು. ಈಗ ನಿರಾಂತಕವಾಗಿ ಹತ್ತಿರ ಹೋದ ಇಬ್ಬರು ಮಕ್ಕಳು, ಶವದ ದಿಬ್ಬದ ಮೇಲಿದ್ದ ಹಾರಗಳನ್ನೆಲ್ಲ ಆಯ್ದು ತೆಗೆದುಕೊಂಡರು. ಹುಡುಗನ ಮುಖದಲ್ಲಿ ಎಂತದೊ ಸಂತಸ. ಅಲ್ಲಿ ಹೆಚ್ಚು ಹೊತ್ತು ನಿಲ್ಲುವಂತಿರಲಿಲ್ಲ. ಹಿಂಬಾದಗ ಗೋಡೆಯತ್ತ ನಡೆದರು, ಗೇಟಿನ ಮೂಲಕ ಅವರು ಹೊರಹೋದರೆ ಅಲ್ಲಿನ ಕಾವಲುಗಾರರು ಅವರನ್ನು ಹಿಡಿದು ಬಡಿಯುತ್ತಿದ್ದರು ಅಷ್ಟೆ. ಹಿಂದಿನ ಗೋಡೆಯತ್ತ ನಡೆದು ಅಣ್ಣ ಮೊದಲು ಗೋಡೆ ಹತ್ತಿದ, ಹಾರವನ್ನೆಲ್ಲ ಪಡೆದು ಗೋಡೆಯ ಮೇಲಿಟ್ಟ, ಕೆಳಗೆ ಬಗ್ಗಿ ತಂಗಿಯನ್ನು ಕೈ ಹಿಡಿದು ಮೇಲೆ ಎಳೆದುಕೊಂಡ. ನಂತರ ಹೊರಬಾಗಕ್ಕೆ ದುಮುಕಿದ, ತಂಗಿಯನ್ನು ಇಳಿಸಿಕೊಂಡ, ಹಾಗೆ ಇಬ್ಬರು ಹಾರಗಳನ್ನು ಕೈಗೆ ತೆಗೆದುಕೊಂಡರು. ಒಬ್ಬರಿಗೊಬ್ಬರು ಮಾತನಾಡುತ್ತ, ಅಲ್ಲಿಯೆ ಹತ್ತಿರದಲ್ಲಿ ಛತ್ರದ ಸಮೀಪವಿದ್ದ,  ಹೂವಿನ ಬೊಕ್ಕೆಗಳನ್ನು ಮಾರುವ ಪ್ರಸಿದ್ದ ಅಂಗಡಿಯತ್ತ ಬಂದರು. ಇವರು ಎದುರು ಬಂದು ನಿಂತೊಡನೆ ಅಂಗಡಿಯ ಒಡೆಯನ ಮುಖ ಗಂಭೀರವಾಯಿತು
"ಎಲ್ಲವನ್ನು ಕ್ಲೀನ್ ಮಾಡಿ ತಂದಿರೇನೊ, ದರಿದ್ರವು ನೀವು" 
ಹುಡುಗ ಸೊಗಸಾಗಿ ತಲೆ ಆಡಿಸಿದ
"ಹೌದಣ್ಣ ಇಲ್ಲ ಕಿಲೀನ್ ಮಾಡಿದ್ದೀನಿ"
"ಎಲ್ಲಿ ಮಾಡ್ತ್ರೀರಿ , ನಿಮ್ಮ ಯೋಗ್ಯತೆ ನನಗೆ ಗೊತ್ತಿಲ್ವ, ಸರಿ ತಗೋಳ್ಳಿ  ಇಲ್ಲಿ ಹೆಚ್ಚು ಹೊತ್ತು ನಿಲ್ಲ ಬೇಡಿ ಓಡ್ತಾ ಇರಿ " 
ಎಂದವನೆ ಹತ್ತು ರೂಪಾಯಿ ಎರಡು ನೋಟು ಇಪ್ಪತ್ತು ರೂಪಾಯಿ ತೆಗೆದುಕೊಟ್ಟ. ಅವನು ಅಂದಂತೆ ಆರ್ಮುಗಂ ಹಾಗು ವಲ್ಲಿ ಅಲ್ಲಿಂದ ಮಾಯ
....
 
"ಈ ಹಾರ ಎಷ್ಟು ರೀ ..." 
"ಎಂಬತ್ತು ರೂಪಾಯಿ ಮೇಡಮ್ , ತಗೊಳ್ಳಿ ಈಗಿನ್ನು ಪ್ರೆಶ್ ಆಗಿ ಬಂದಿದೆ" 
ಅಂಗಡಿಯವನು ಆಕೆಗೆ ಹೇಳಿದ
"ಜಾಸ್ತಿ ಆಯಿತು ಅನ್ನಿಸುತ್ತೆ ರೀ ಸ್ವಲ್ಪ ಕಡಿಮೆಮಾಡಿಕೊಳ್ಳಿ"
"ಅದೆಲ್ಲ ಆಗಲ್ಲ ಮೇಡಮ್ , ಈಗಿನ ಹೂವಿನ ರೇಟ್ ನಿಮಗೆ ಗೊತ್ತಲ್ಲ, ಮಾರ್ಕೆಟ್ ನಿಂದ ಇಲ್ಲಿ ತಂದು ಮಾರಿದರೆ, ನಮಗೆ ಐದು ರೂಪಾಯಿ ಸಿಗಲ್ಲ, ನಾವಾದರು ಏಕೆ ಅಂಗಡಿ ಇಡಬೇಕು ಹೇಳಿ" ಅಂಗಡಿಯವನು ಜೋರಾಗಿ ಹೇಳಿದ
"ಲೇ ಸುಮ್ಮನೆ ತಗೊಳ್ಳೆ ನೀನು ಸುಮ್ಮನೆ ಚೌಕಾಸಿಗೆ ನಿಲ್ಲ ಬೇಡ, ರಸ್ತೆಯಲ್ಲಿ ಸೀನ್ ಕ್ರಿಯೆಟ್ ಮಾಡಬೇಡ" ಪಕ್ಕದಲ್ಲಿದ್ದ ಗಂಡ ಸಿಡುಕಿದ.
"ಸರಿ ಎರಡು ಹಾರ ಕೊಡಪ್ಪ" ಆಕೆ ಸೋತು ಹೇಳಿದಳು "ಸ್ವಲ್ಪ ಫ್ರೆಶ್ ಆಗಿರಲಿ ಮದುವೆ ಗಂಡು ಹೆಣ್ಣಿಗೆ, ಸರಿಯಾಗಿ ಪ್ಯಾಕ್ ಮಾಡಿ ಕೊಡಪ್ಪ" 
"ಸರಿ ಹೋಗಲಿ ಬಿಡಿ ಎರಡು ಹಾರ ತಗೋತಿದ್ದೀರಿ, ಎರಡಕ್ಕು ಸೇರಿ 150 ಕೊಡಿ, ನಾನು ಪ್ರೇಶ್ ಆಗಿ ಕಾಣುವಂತೆ ಪ್ಯಾಕ್ ಮಾಡ್ತೀನಿ ಬಿಡಿ" ಎನ್ನುತ್ತ,  ಸ್ವಚ್ಚವಾಗಿ ಪ್ಯಾಕ್ ಮಾಡಿ ಅದರ ಮೇಲೆ ಸ್ಪ್ರೇಯರ್ ನಿಂದ ತಣ್ಣನೆಯ ನೀರನ್ನು ಸ್ಪ್ರೇ ಮಾಡಿದ" 
ಗಂಡಕೊಟ್ಟ ಇನ್ನೂರು ಪಡೆದು, ಹತ್ತರ ಐದುನೋಟಿನ ಮದ್ಯ ಒಂದು ಹರಿದು, ಸೆಲೊಪಿನ್ ಟೇಪ್ ಅಂಟಿಸಿದ್ದ ನೋಟ ಸೇರಿಸಿದ್ದ, ಐವತ್ತು ರೂಪಾಯಿ ಹಿಂದೆ ಕೊಟ್ಟ. ಹಾರ ಪಡೆದ ಗೃಹಿಣಿ ಗಂಡನ ಹಿಂದೆ ಹೆಜ್ಜೆ ಹಾಕುತ್ತ ಹೊರಟಳು
Rating
No votes yet

Comments

Submitted by tthimmappa Sun, 04/28/2013 - 13:00

ಎಲ್ಲ‌ ಜನರ‌ ಜೀವನವೇ ಒ೦ದು ವ್ಯಾಪಾರ‌. ಸಾರ್ ....... ನಿಜ‌ ಜೀವನದ‌ ಘಟನೆಯೊ೦ದನ್ನು ಉತ್ತಮ‌ ಕಥೆಯನ್ನಾಗಿಸಿ ಸರಳವಾದ‌ ನಿರೂಪಣೆ ನೀಡಿದ್ದೀರಿ. ಧನ್ಯವಾದಗಳು..

Submitted by partha1059 Wed, 05/01/2013 - 07:59

In reply to by tthimmappa

ತಿಮ್ಮಪ್ಪನವರೆ ನೀವು ಹೇಳಿರುವುದುನಿಜ ಜೀವನವೆ ಒಂದು ವ್ಯಾಪಾರ... ಆದರೆ ವ್ಯಾಪಾರಂ ದ್ರೋಹ ಚಿಂತನಂ ಎನ್ನುತ್ತದೆ ಒಂದು ನುಡಿ.. ಆದರೆ ವಿಪರ್ಯಾಸವೆಂದರೆ ಜೀವನವು ಸದಾ ದ್ರೋಹ ಚಿಂತನೆಯೆ ಆಗುತ್ತಿರುವುದು ಚಿಂತಿಸಬೇಕಾದ ವಿಷಯ.

Submitted by swara kamath Sun, 04/28/2013 - 13:42

ಪಾರ್ಥರೆ ,ಒಂದೆಡೆ ಬೀದಿ ಬದಿಯ ಮಕ್ಕಳು ಬದಕುವ ದಾರಿಯನ್ನು ಕಂಡುಕೊಂಡರೆ,ಇನ್ನೊಂದೆಡೆ ಹೂ ಮಾರುವವನ ಆಸೆಬುರುಕತನದ ತೀರ ಕನಿಷ್ಟಮಟ್ಟವನ್ನು ತೋರಿಸುತ್ತದೆ.ನಡೆದ ಘಟನೆಯೊ ಅಥವಾ ಕಥೆಯೊ ಮುಂದೆ ಮದುವೆ ಮಂಟಪದಲ್ಲಿ ವಧು ವರರ ಕೈಯಲ್ಲಿ ಹಾರಗಳನ್ನು ನೋಡಿದಾಗ ನಿಮ್ಮ ಈ 'ವ್ಯಾಪಾರಂ....' ನೆನಪಿಗೆ ಬರುವುದಂತು ಖಂಡಿತ ....ಹ ಹ್ಹಾ...............ವಂದನೆಗಳು.......ರಮೇಶ ಕಾಮತ್.

Submitted by partha1059 Wed, 05/01/2013 - 08:00

In reply to by swara kamath

ಸ್ವರಕಾಮತ್ ರವರಿಗೆ ವಂದನೆಗಳು ಬದುಕಲು ನಾನ ವೇಶ...ಹಾಗೆ ಅಂತ ಹಾರವನ್ನು ಹಿಡಿದ ಗಂಡು ಹೆಣ್ಣಿಗು ಏನು ಆಗದು ಬಿಡಿ ಎಲ್ಲವು ಮನಸಿನ ಸ್ಥಿಥಿ ಅಷ್ಟೆ

Submitted by nageshamysore Mon, 04/29/2013 - 11:07

ನಮಸ್ಕಾರ ಪಾರ್ಥರವರೆ,
ಭಾವನೆಗಳ ಬಂಧಕ್ಕೆ ವಾಸ್ತವದ ವ್ಯಂಗ್ಯವನ್ನು ಸರಳವಾಗಿ, ಸೊಗಸಾಗಿ ಜೋಡಿಸಿದ ಕಥೆ. ಧನ್ಯವಾದಗಳು!
- ನಾಗೇಶ ಮೈಸೂರು, ಸಿಂಗಾಪುರದಿಂದ

Submitted by H A Patil Mon, 04/29/2013 - 17:40

ಪಾರ್ಥ ಸಾರಥಿ ಯವರಿಗೆ ವಂದನೆಗಳು
' ವ್ಯಾಪಾರಂ ' ಕಥೆ ಸರಳ ವಾಗಿದೆ ಗಂಭೀರ ವಾಗಿದೆ ಜೊತೆಗೆ ಓದುಗನನ್ನು ಯೋಚನೆಗೆ ಹಚ್ಚುತ್ತದೆ. ಆರ್ಮುಗಂ ಮತ್ತು ವಲ್ಲಿಯರ ಸ್ಥಿತಿಗೆ ಮರುಕ ಪಡುವುದೋ, ಹೂ ಮಾರುವವನ ನೀಚ ವ್ಯಾಪಾರ ಬುದ್ಧಿಗೆ ಹೇಸಿಗೆ ಪಡುವುದೋ, ಹೂಮಾಲೆಗಳ ಖರೀದಿಗೆ ಬಂದ ದಂಪತಿಗಳ ಮುಗ್ಧತೆಯ ಬಗೆಗೆ ಅನುಕಂಪ ಪಡುವುದೋ ಗೊತ್ತಾಗುತ್ತಿಲ್ಲ. ನನ್ನ ಪರಿಚಿತರೊಬ್ಬರು ಹೇಳಿದ ಒಂದು ವಿಷಯ ನೆನಪಿಗೆ ಬಂತು. ಒಮ್ಮೆ ಅವರು ಜಾನಸನ್ ಬಡ್ಸ್ ಖರೀದಿಸಲು ಮೆಡಿಕಲ್ ಶಾಪ್ ಒಂದಕ್ಕೆ ಹೋಗಿದ್ದರು, ಅವರಿಗೆ ಅಂಗಡಿಯವ ಕಡಿಮೆ ಬೆಲೆಯ ಬಡ್ಸ್ ತೋರಿಸಿದ. ಆದರೆ ಆತ ದುಬಾರಿ ಬೆಲೆಯ ಜಾನ್ಸಸನ್ ಬಡ್ಸ್ ನ್ನೆ ಖರೀದಿಸಿದ, ಕೇಳಿದ್ದಕ್ಕೆ ಆತ ಹೇಳಿದ್ದೇನೆಂದರೆ ಬೆಂಗಳೂರಿನ ದೊಡ್ಡ ಆಸ್ಪತ್ರೆಗಳಲ್ಲಿ ಬ್ಯಾಂಡೇಜ್ ಬಿಚ್ಚಿ ಎಸೆದ ಅರಳಿಯನ್ನೆ ಆರಿಸಿ ಬಡ್ಸ್ ತಯಾರಿಸಿ ಮಾರುವ ವ್ಯವಸ್ಥೆಯೊಂದಿದೆ ಎಂದು. ಕೇಳಿ ಒಂದು ಕ್ಷಣ ಆಶ್ಚರ್ಯ ವಾಯಿತು ಮನುಷ್ಯ ಈ ಮಟ್ಟಕ್ಕೂ ಇಳಿಯಬಹುದೆ ಎಂದು. ಮನುಷ್ಯ ಇನ್ನೂ ಎಷ್ಟು ಅಧೋಗತಿಗೆ ಇಳಿಯ ಬಹುದು ಗೊತ್ತಿಲ್ಲ. ಕಥೆ ಓದುಗನನ್ನು ಚಿಂತನೆಗೆ ಹಚ್ಚುತ್ತದೆ, ಉತ್ತಮ ಕಥಾನಕ ನೀಡಿದ್ದೀರಿ ಧನ್ಯವಾದಗಳು.

Submitted by partha1059 Wed, 05/01/2013 - 08:04

In reply to by H A Patil

ಪಾಟೀಲರೆ ನಮಸ್ಕಾರ, ತಾವು ಯಾವುದೆ ಕತೆಯನ್ನು ನಿದಾನವಾಗಿ ಓದಿ ವಿವರವಾಗಿ ವಿಮರ್ಶಿಸುವ ಪರಿ ಖುಶಿ ನೀಡುತ್ತದೆ. ನೀವು ಹೇಳಿರುವ ಘಟನೆಯನ್ನು ನಾನು ಕೇಳಿದ್ದೇನೆ, ಬೆಂಗಳೂರಿನ ಸಿಗ್ನಲ್ ಗಳಲ್ಲಿ ಮಕ್ಕಳು ಬಡ್ಸ್ ಮಾರುತ್ತಿರುತ್ತಾರೆ ಅವೆಲ್ಲ ಬ್ಯಾಂಡೇಜ್ ಹತ್ತಿಯದೆ ಎಂದು ಹೇಳೂತ್ತಾರೆ

Submitted by makara Thu, 05/02/2013 - 07:26

ಪಾರ್ಥರೆ,
ಇಂತಹವುಗಳೆಲ್ಲಾ ಮುಂಬ್ಯೈಯಲ್ಲಿ ನಡೆಯುತ್ತವೆ ಎಂದು ಕೇಳಿದ್ದೆ! ಪರವಾಗಿಲ್ಲ ನಮ್ಮ ಬೆಂಗಳೂರು ಮುಂಬಯಿಯಷ್ಟೇ ಅಭಿವೃದ್ಧಿ ಹೊಂದಿದೆ :((

Submitted by venkatb83 Tue, 05/14/2013 - 22:56

In reply to by partha1059

;())))

ಗುರುಗಳೇ- ಇದು ನಡೆಯದ್ದೆನಲ್ಲ ...... ! ನನಗಿಲ್ಲಿ ಬೇರೆ ಏನೋ ಗೋಚರಿಸಿತು ... ಅಲ್ಲಿ ಸತ್ತವರ ಮೇಲೂ ಇಲ್ಲಿ ಬದುಕಿದವರ ಮೇಲೆ ಅದರಲ್ಲೂ ಅಂದು ನವ ಜೀವನಕ್ಕೆ ಹೆಜ್ಜೆ ಇಡುವವರ ಮೈ ಮೇಲೆ ಬೀಳುವ ಈ ಹಾರ ಎಲ್ಲೆಲ್ಲು ಸಲ್ಲುವುದಲ್ಲ ಅಂತ ....ಹಾಗೆಯೇ ಮುಂದೊಮ್ಮೆ ಹೂವಿನ ಹಾರ ನನ್ನ ಕೊರಳು ಅಲಂಕರಿಸ ಬಂದರೆ ಭಯದಿಂದ ನಿಮ್ಮ ಈ ಬರಹವನ್ನು ಖಂಡಿತ ನೆನಪಿಸಿಕೊಳ್ಳುವೆ...

ಬರಹ ಒಮ್ಮೆ ಚಿಂತಿಸುವಂತೆ ಮಾಡಿತು -ಹೇಗೋ ಆಗಬಹುದ ಅಂತ ...

ಶುಭವಾಗಲಿ

\|