ಬಲ್ಲೆಯವರ ಸುಬ್ಬನು-ಕೃಷ್ಣಪಕ್ಷ ಚತುರ್ಥಿಯು

ಬಲ್ಲೆಯವರ ಸುಬ್ಬನು-ಕೃಷ್ಣಪಕ್ಷ ಚತುರ್ಥಿಯು

 

ಶಾಸ್ತ್ರಿಗಳ ಮನೆಯಲ್ಲಿ  ಮಾತನಾಡುತ್ತ ಕುಳಿತಿದ್ದೆ,
"ಎಲ್ಲ ಮಾಮೂಲಿ ಶಾಸ್ತ್ರಿಗಳೆ , ಬ್ರಾಹ್ಮಣಾರ್ಥಕ್ಕೆ ಅಡುಗೆಗೆ ನೀವೆ ಹೇಳಿ ಕರೆದುಕೊಂಡು ಬನ್ನಿ, ಮುಂದಿನ ತಿಂಗಳ ೨೯ ರಂದು ಬೀಳುತ್ತೆ ನಮ್ಮ ತಂದೆಯವರ ಕೆಲಸ" 
ಶಾಸ್ತ್ರಿಗಳು , ಸಮಾದಾನವಾಗಿಯೆ ಹೇಳಿದರು
"ಆಗಲಿ ಬಿಡಪ್ಪ ಎಲ್ಲ ಮಾಮೂಲಿ ತಾನೆ, ಪ್ರತಿ ವರ್ಷದ ಹಾಗೆ ಎರ್ಪಾಡು ಮಾಡೋಣ
ಅಂದ ಹಾಗೆ , ನಿಮ್ಮ ತಂದೆಯವರ ಕೆಲಸ ಯಾವತ್ತು ಬಿಳುತ್ತೆ, ೨೯ ನೆ ತಾರೀಖು ಅಂದರೆ ಯಾವ ತಿಥಿ ಬೀಳುತ್ತೆ"
"ಅದೇ ಶಾಸ್ತ್ರಿಗಳೆ, ಚೈತ್ರ ಕೃಷ್ಣ ಪಕ್ಷ ಚತುರ್ತಿ ಅಲ್ಲವೆ ಅವತ್ತು ಬೀಳುತ್ತೆ"
ಅಂದೆ 
ಶಾಸ್ತ್ರಿಗಳ ಕಣ್ಣು ಗಿರಗಿರನೆ ತಿರುಗಿತು, ಇದ್ದಕ್ಕಿಂದಂತೆ ಅವರ ದ್ವನಿ ಬದಲಾಗಿತ್ತು, ಎಂತದೋ ಗಾಭರಿ,
"ಏನು ಕೃಷ್ಣಪಕ್ಷ ಚತುರ್ಥಿಯೆ, ಹಾಗಿದ್ದಲ್ಲಿ ನನಗೆ ಆಗಲ್ಲ ಬೇರೆ ಯಾರನ್ನಾದರು ನೋಡಿಕೋ ಹೋಗು, ಆಗಲ್ಲಪ್ಪ" ಎಂದರು,
ನನಗೆ ಆಶ್ಚರ್ಯ ಇದೆಂತದು ಈಗ ತಾನೆ ೨೯ರಂದು ಬರುತ್ತೇನೆ ಅಂದವರು, ಈಗ ಕೃಷ್ಣ ಚತುರ್ಥಿ ಅಂದರೆ ಬರಲ್ಲ ಅಂತಿದ್ದಾರೆ, ಏನಾಯಿತೊ ಇವರಿಗೆ, ಅಲ್ಲದೆ ನಮ್ಮ ಮಾಮೂಲಿ ಪುರೋಹಿತರು ಇವರು, ಇವರನ್ನು ಬಿಟ್ಟು ನಾನು ಯಾರನ್ನು ಹುಡುಕಿ ಹೋಗಲಿ , ಅಂತ ಚಿಂತೆ ಆಯಿತು
"ಅಲ್ಲ ಶಾಸ್ತ್ರಿಗಳೆ, ಈಗ ಏನಾಯಿತು, ಬರುತ್ತೇನೆ ಅಂದವರು, ಚತುರ್ಥಿ ಅಂತ ಕೇಳಿ ಬರಲ್ಲ ಅಂತಿರಲ್ಲ ಏಕೆ?" 
"ಅದೆಲ್ಲ ಈಗ ಏಕಪ್ಪ ನಾನು ಬರಲ್ಲ ಅಂದರೆ ಬರಲ್ಲ" ಎನ್ನುತ್ತ ಎದ್ದು ಒಳ ಕೋಣೆಗೆ ಹೊರಟು ಹೋದರು, 
ಅಷ್ಟರಲ್ಲಿ ಅವರ ಪತ್ನಿ ಕಾಫಿ ಹಿಡಿದು ತಂದರು, ನನಗೆ ಕೊಡುತ್ತ, ಎಲ್ಲಿ ನಮ್ಮವರು ಅನ್ನುವಂತೆ ನನ್ನನ್ನೆ ನೋಡಿದರು, ನಾನು 
"ಅದೇನೊ ನೋಡಿ ಕೃಷ್ಣಪಕ್ಷ್ಣ ಚತುರ್ಥಿ ಅಂದ ತಕ್ಷಣ ನಿಮ್ಮ ಮನೆಯವರು ಗಾಭರಿ ಪಟ್ಟು ಎದ್ದೆ ಹೊರಟು ಹೋದರು, ಏನಮ್ಮ ಸಮಾಚಾರ ಅವತ್ತು ಇನ್ನೇನಾದರು ಕಾರ್ಯ ಇದೆಯ" ಎಂದು ಕೇಳಿದೆ
"ಹಾಗೇನು ಇಲ್ಲಪ್ಪ, ಅವರಿಗೆ ಕೃಷ್ಣ ಪಕ್ಷ ಚತುರ್ಥಿ ಅಂತ ಕೇಳಿದರೆ, ಹೆದರಿಕೆ ಬಂದು ಬಿಟ್ಟಿದೆ, ಅವತ್ತು ಯಾರೆ ಬಂದು ಯಾವುದೆ ಪಕ್ಷಕ್ಕೆ ,ತಿಥಿಗೆ ಕರೆದರು ಹೋಗಲ್ಲ ಅಂತ ಶಪಥ ಮಾಡಿಬಿಟ್ಟಿದ್ದಾರೆ, ನಿಮಗೆ ಪುರುಸುಸೊತ್ತು ಅಂದರೆ ಹೇಳ್ತೀನಿ" ಅಂದರು
ಪುರುಸೊತ್ತು ಅನ್ನುವದಕ್ಕಿಂತ ಕುತೂಹಲ ನನ್ನುನ್ನು ಕಾಡಿತು, ಅದಕ್ಕೆ 
"ಖಂಡೀತ ಹೇಳಿ ಅಮ್ಮ , ನಮ್ಮ ಕೈಲಿ ಏನಾದರು ಸಹಾಯ ಆದರೆ ಮಾಡೋಣ " ಎಂದೆ
"ನಿಮ್ಮಗೆ ಸುಬ್ಬ ಗೊತ್ತೆ, ಒಂತರ ವಿಚಿತ್ರವಾಗಿ ವರ್ತಿಸುತ್ತಾರಲ್ಲ ಅವರ ಮನೆಗೆ ಇವರು ಚತುರ್ಥಿಗೆ ಅವರ ತಂದೆಯವರ ಶ್ರಾದ್ದಕ್ಕೆ ಹೋಗಿದ್ದರು, ಆಗಿನಿಂದಲು ಹೀಗೆ " ಅಂದರು, 
"ಸುಬ್ಬ ಅಂದರೆ ಯಾರಮ್ಮ, ಅದೇ ವಿದೇಶದಲ್ಲಿದ್ದಾರಲ್ಲ ಶ್ರೀನಾಥ ಬಲ್ಲೆ ಅವರ ನೆಂಟರೆ ಅಂದೆ" 
"ಇರಬಹುದೇನೊ, ಗೊತ್ತಿಲ್ಲ, ಆದರೆ  ಆ ಸುಬ್ಬನ ಮನೆಯಲ್ಲಾದ   ಅನುಭವ ಇವರ ಕೈಲಿ ಆ ಪ್ರತಿಜ್ಞೆ ಮಾಡಿಸಿದೆ ನೋಡಿ "
ಅಂದರು, 
"ಅಲ್ಲಮ್ಮ ಸ್ವಲ್ಪ ವಿವರವಾಗಿ ಹೇಳಿದರೆ ಅಲ್ಲವೆ ನನಗು ತಿಳಿಯೋದು ಅಂದೆ" 
"ಅಯ್ಯೊ ಅದೇನೊ ಸತ್ಯ ಹರಿಶ್ಚಂದ್ರ ಕತೆಯೆ ವಿವರವಾಗಿ ಹೇಳಲು, ಇರಲಿ ಬಿಡಿ ಹೇಳ್ತೀನಿ, ಎನ್ನುತ್ತ ಪ್ರಾರಂಬಿಸಿದರು
----------------------
 
 ಕಳೆದ ತಿಂಗಳು ಇವರು ಅದೆ ಸುಬ್ಬನ ಮನೆಗೆ ಹೋದರು ಅವರ ತಂದೆಯ ಶ್ರಾದ್ದ ಮಾಡಿಸಲು, ಎಂದಿನಂತ ತಮ್ಮ ಮಡಿ ಬ್ಯಾಗನ್ನು , ಅದರಲ್ಲಿ ಸಮಸ್ತ ಆಸ್ತಿಯನ್ನು ಹಿಡಿದು, ಸುಬ್ಬನಮನೆಗೆ  ಹೋದರು. ಮನೆಯಲ್ಲಿ ನೋಡಿದರೆ, ತಿಥಿಯ ಯಾವ ಲಕ್ಷಣವು ಇಲ್ಲ, ಆದರೆ ಸುಬ್ಬನಿದ್ದ ಬನ್ನಿ ಬನ್ನಿ ಒಳಗೆ ಅಂತ ಕರೆದ , ಇವರು ಮದ್ಯಾನ್ಹ ಹನ್ನೊಂದರ  ಬಿಸಿಲಿನಲ್ಲಿ ಹೋದವರು, ಪಾಪ ನಡುವಿನಲ್ಲಿ ತಮ್ಮ ಬ್ಯಾಗನಿಟ್ಟು, ಅಡುಗೆ ಮನೆಗೆ ಹೋದರು  ಅಡುಗೆಯವರು ಯಾರು ಇದ್ದಾರೆ ನೋಡೋಣ ಅಂತ, ಅಲ್ಲೇನಿದೆ ಎಲ್ಲ ತೊಳೆದು ಸ್ವಚ್ಚವಾಗಿ ಜೋಡಿಸಲಾಗಿದೆ. ಅದೇನು ಕೇಳೋಣ ಅಂತ ಈಚೆ ಬಂದರೆ, ಸುಬ್ಬ ಅವರ ಬ್ಯಾಗನ್ನು ನೆಲದ ಮೇಲೆ ಕೊಡವಿ, ಆ ಬ್ಯಾಗನ್ನಲ್ಲಿರುವದನ್ನೆಲ್ಲ ನೆಲದ ಮೇಲೆ ಹರಡಿ ಏನನ್ನೊ ಹುಡುಕುತ್ತಿದ್ದ. ಶಾಸ್ತ್ರಿಗಳಿಗೆ ಗಾಭರಿ,
"ಅಯ್ಯಯ್ಯೊ, ಸುಬ್ಬ, ನನ್ನ ಬ್ಯಾಗಲ್ಲಿ ಏನನ್ನು ಹುಡುಕುತ್ತಿದ್ದೀಯಪ್ಪ " ಎಂದರು,
"ಏನಿಲ್ಲ ಶಾಸ್ತ್ರಿಗಳೆ, ಕಳೆದ ವರ್ಷದ ತಿಥಿಯ ನಂತರ ಇಲ್ಲೆ ಗೋಡೆ ಪಕ್ಕದಲ್ಲಿಯೆ ಇಟ್ಟಿದ್ದೆ, ಹೇಗೊ   ನೀವು ಹೋಗುವಾಗ ನಿಮ್ಮ ಬ್ಯಾಗು ಸೇರಿತೇನೊ ಅಂತ ಹುಡುಕಿದೆ" ಎಂದ
ಶಾಸ್ತ್ರಿಗಳಿಗೆ ಹೆದರಿಕೆ, 
"ಏನಪ್ಪ ಅದು, ಏನಾದರು ಉಂಗುರ, ಅಥವ ಬೆಳ್ಳಿ ಲೋಟ ಅಂತದ್ದೇನೊ ಕಳೆದುಹೋಯಿತ?" ಎಂದರು
"ಅಯ್ಯೊ ಅದೆಲ್ಲ ಅಲ್ಲ ಶಾಸ್ತ್ರಿಗಳೆ, ನಮ್ಮಲ್ಲಿ ಅದೆಲ್ಲ ಎಲ್ಲಿದೆ, ನಾನು ಗೋಡೆ ಪಕ್ಕ, ಒಂದು ಜೊತೆ ಜನಿವಾರ ಇಟ್ಟಿದ್ದೆ, ಅದನ್ನು ಏನಾದರು ನೀವು ತೆಗೆದುಕೊಂಡು ಹೋದಿರೋ ಅಂತ ನೋಡಿದೆ" ಎಂದ
ಸಾರ್ಥಕ, ಕಳೆದ ತಿಥಿಯಲ್ಲಿ ಕಣ್ಮರೆಯಾದ ಜನಿವಾರ ಈವರ್ಷ ಹುಡುಕುತ್ತಿರುವ, ಇರಲಿ ಎನ್ನುತ್ತ
"ಆಯ್ತಪ್ಪ ಅದನ್ನೆ ಏನು ಹುಡುಕುತ್ತಿ, ಮತ್ತೊಂದು ಜೊತೆ ಇರುತ್ತಲ್ಲ , ಮನೆಯಲ್ಲಿ ಎಂದರು"
"ಇನ್ನೊಂದು ಜೊತೆಯನ್ನು ನೋಡಿ ,ಈ ಗೋಡೆಯ ಗೂಟಕ್ಕೆ ನೇತು ಹಾಕಿದ್ದೆ, ಈ ವರ್ಷ ಸುಣ್ಣ ಬಳಸುವಾಗ, ಹಾಳದವರು ಗೂಟವನ್ನೆ ಕಿತ್ತು ಹಾಕಿದ್ದಾರೆ, ಈಗ ಪಕ್ಕದ ಮನೆಗೆ ಹೋಗಿ ಜನಿವಾರ ಕೇಳಿ ತರಬೇಕು " ಅಂದ ಸುಬ್ಬ
ಅಪ್ಪನ ಶ್ರಾದ್ದದ ದಿನ ಜನಿವಾರ ಹುಡುಕುತ್ತಿದ್ದ ಸುಬ್ಬನ ಕೆಲಸ ಶಾಸ್ತ್ರಿಗಳಿಗೆ ಕೋಪ ತರಸಿತು ಆದರೇನು ಮಾಡುವುದು, ಈ ಜನ ಹೇಗೆ ಎಂತೊ ಎಂದು ಸುಮ್ಮನಾದರು. 
ಅಂದ ಹಾಗೆ ಸುಬ್ಬನ ಅಜ್ಜಿ ಒಬ್ಬರು ಇರಬೇಕಲ್ಲ, ಎಲ್ಲಿ ಎಂದು ಹುಡುಕುತ್ತ ಹೋದರು ಶಾಸ್ತ್ರಿಗಳು, ಪಾಪ ಆಕೆಗೆ ಅದೇನು ಆಗಿತ್ತೊ ರೂಮಿನಲ್ಲಿ ಗೋಡೆಗೆ ಒರಗಿ ಗರ ಬಡಿದಂತೆ ಕುಳಿತುಬಿಟ್ಟಿದ್ದರು, 
"ಏನಮ್ಮ ಇಲ್ಲಿ ಕುಳಿತು ಬಿಟ್ಟಿರಿ,ಮನೆಯಲ್ಲಿ ಎಷ್ಟು ಕೆಲಸವಿದೆ ಏನು ಕತೆ" ಎಂದರು ಶಾಸ್ತ್ರಿಗಳು
"ನನ್ನ ಕರ್ಮ ಶಾಸ್ತ್ರಿಗಳೆ ಈ ಸುಬ್ಬನಿಗೆ ಅದೇನು ಆಗಿದೆಯೊ, ಯಾವ ದೆವ್ವ ಮೈ ಮೇಲೆ ಬಂದಿದೆಯೊ ತಿಳಿಯುತ್ತಿಲ್ಲ, ನಾನು ಏನು ಬೈದರು ಅನ್ನಿಸಿಕೊಳ್ಳುತ್ತಿದ್ದವನು, ಈಗ ಎಗರಿ ಬೀಳುತ್ತಿದ್ದಾನೆ, ನಾನು ಹೇಳುವದಕ್ಕೆಲ್ಲ ವಿರೋದ ಅದೇನೊ ಚಂಡಿ ಕತೆ ಬರುತ್ತಲ್ಲ ಹಾಗೆ ಮಾಡ್ತಿದ್ದಾನೆ ನೋಡಪ್ಪ" ಎಂದರು
"ಬೆಳೆದ ಹುಡುಗನಲ್ಲವೆ ಅಜ್ಜಿ ಹಾಗೆಲ್ಲ ಮುಖಕ್ಕೆ ಅನ್ನಬಾರದು, ಇರಲಿ ಬಿಡಿ ಹೇಗೊ ಶ್ರಾದ್ದ ಅಂತ ಮಾಡ್ತಿದ್ದಾನಲ್ಲ, ಅವರ ಅಪ್ಪನ ಪುಣ್ಯ, ಅಂದ ಹಾಗೆ ಎಲ್ಲಿ ಹೊತ್ತಾಗುತ್ತ ಬಂತು ಅಡಿಗೆಯವರ ಸುಳಿವೆ ಇಲ್ಲ, ಹೀಗಾದರೆ ಸಂಜೆ ನಾಲಕ್ಕಾದರು ಬ್ರಾಹ್ಮಣರ ಎಲೆಯೆ ಬೀಳಲ್ಲ" ಅಂದರು
"ಅದನ್ನೆ ಶಾಸ್ತ್ರಿಗಳೆ ನಾನು ಹೇಳಿದ್ದು, ನಾನಂತು ಅಡುಗೆ ಮಾಡುವ ಹಾಗಿಲ್ಲ,   ಯಾರಾದರು ಅಡುಗೆಯವರಿಗೆ ಹೇಳೋ ಅಂದರೆ, ಸೀದಾ ಹೋಗಿ, ಅದ್ಯಾರೊ ಕ್ಯಾಟರಿಂಗ್ ನವರಿಗೆ ಹೇಳಿ ಬಂದಿದ್ದಾನೆ, ಅಯ್ಯೊ ಶ್ವಬಚಮುಂಡೇದೆ ಅಂತ ನಾನು ಬೈದರೆ, ಇರಲಿ ಬಿಡು ಅವರಿಗೆ ಮಡೀಲೆ ತಗಂಡು ಬನ್ನಿ ಅಂತ ಹೇಳೀದ್ದೀನಿ, ಹನ್ನಂದಕ್ಕೆ ಎಲ್ಲ ತರುತ್ತಾರೆ ಅಂದ, ನಾನೇನು ತಲೆ ಚಚ್ಚಿಕೊಳ್ಳಲಿ ಹೇಳಿ" ಎಂದರು ಅಜ್ಜಿ
ಏನು ಶ್ರಾದ್ದಕ್ಕೆ , ಕ್ಯಾಟರಿಂಗ್ ನವರಿಗೆ ಹೇಳಿಬಂದಿದ್ದಾರ ಎನ್ನುತ್ತ ಬೆಚ್ಚಿಬಿದ್ದರು ಶಾಸ್ತ್ರಿಗಳು, ಇದ್ಯಾವ ಕೇಡು ಬಂದಿತಪ್ಪ ಎನ್ನುತ್ತ ಹೊರಬಂದರು, ಹಾಲಿನಲ್ಲಿ ಮತ್ತಿಬ್ಬರು ಬ್ರಾಹ್ಮಣರು ಕುಳಿತಿದ್ದರು, ಹೊರಗೆ ರೂಮಿನಲ್ಲಿ ನಾಲ್ಕೈದು ಜನ, ನೆಂಟರು. 
ಸುಬ್ಬ ಶಾಸ್ತ್ರಿಗಳತ್ತ ನೋಡಿ 
"ಶಾಸ್ತ್ರಿಗಳೆ ನೀವು ಸ್ನಾನ ಮುಗಿಸಿಬಿಡಿ, ಅಂದ" 
ನೋಡಿದರೆ ಅವನು ಈಗಿನ್ನು ಸ್ನಾನ ಮುಗಿಸಿ ಬಂದು ಕಂಬದ ಪಕ್ಕ ನಿಂತು ಜನಿವಾರ ಹಾಕಿಕೊಳ್ಳುತ್ತಿದ್ದ. 
"ಅದೇನಪ್ಪ ಸುಬ್ಬ, ಅದೇನೊ ಕ್ಯಾಟರಿಂಗ್ ನವರಿಗೆ ಹೇಳಿದ್ದೀಯಂತೆ, ತಿಥಿ ಅಡುಗೆಗೆ " ಅಂದರೆ
"ಇರಲಿ ಬಿಡಿ ಶಾಸ್ತ್ರಿಗಳೆ, ಯಾರು ಯಾರೊ ಜನಿವಾರ ಹಾಕಿಕೊಂಡು ಬಂದು ಹಿಟ್ಟು ರುಬ್ಬುವದಕ್ಕಿಂತ ಇದೆ ಉತ್ತಮವಲ್ಲವೆ" 
ಅವನ ಬುದ್ದಿವಂತಿಕೆಗೆ ಉತ್ತರ ತೋಚದೆ ಶಾಸ್ತ್ರಿಗಳು, ಸ್ನಾನಕ್ಕೆ ಹೊರಟರು. ಸ್ನಾನ ಮುಗಿಸಿಹೊರಬರುವಾಗ, ಹಾಲಿನಲ್ಲಿ ಎಲ್ಲ ಏರ್ಪಾಟು ನಡೆದಿತ್ತು,ಹೊರಗೆ ಕಾಟರಿಂಗ್ ವಾಹನ ಶಬ್ದವಾಯಿತು, ನೋಡುತ್ತಿರುವಂತೆ, ಪಂಚೆ ದರಿಸಿ, ಟವೆಲ್ ಹೊದ್ದ ಕ್ಯಾಟರಿಂಗ್ ನ ಮನುಷ್ಯ ಒಂದೊಂದೆ, ಅಡುಗೆ ಪಾತ್ರೆ ತಂದು ಅಡುಗೆಮನೆಯಲ್ಲಿ ಜೋಡಿಸುತ್ತಿದ್ದ. ಎಲ್ಲವು ಆಯಿತು ಅನ್ನಿಸುತ್ತೆ ವಾಹನ ಹೊರಟಿತು. 
 
ಏನಾದರು ಆಗಲಿ ಎನ್ನುತ್ತ ಶಾಸ್ತ್ರಿಗಳು ಮಡಿ ಬಟ್ಟೆ ಧರಿಸಿ ಸಿದ್ದವಾಗುತ್ತಿದ್ದರು, ಅಷ್ಟರಲ್ಲಿ ಪುನಃ ಕ್ಯಾಟರಿಂಗ್ ವಾಹನದ ಸದ್ದು, ನಿಂತ ಶಬ್ದ, ಒಂದೆರಡು ಕ್ಷಣ, ವಾಹನದ ಚಾಲಕ, ಅಬ್ದುಲ್ಲ, ಮೋಟುಪ್ಯಾಂಟು, ಕೊಳಕು ಶರ್ಟ್ ಧರಿಸಿ,  ಒಂದು ಪಾತ್ರೆ ಹಿಡಿದು ಒಳಬಂದ, ಶಾಸ್ತ್ರಿಗಳು ನೋಡುತ್ತಿರುವಂತೆ, ಹಾಲಿನಲ್ಲಿ ಅದನ್ನು ಇಟ್ಟು,
 
"ಸುಬ್ಬಣ್ಣೋರೆ, ನೋಡಿ ಈ ಪಾಯಸದ ಪಾತ್ರೆ ಒಂದನ್ನು ಮರೆತೆ ಬಿಟ್ಟರು, ಇದನ್ನು ಹಿಂದೆ ಜಾಗ ಸಾಕಾಗಲ್ಲ ಅಂತ ಮುಂದೆ ಕಾಲ ಹತ್ರ ಇಟ್ಟಿದ್ದರು, ಅದನ್ನು ಒಳಗಿಡುವುದು ಮರೆತುಬಿಟ್ಟಿದ್ದಾವೆ ನಿಮ್ಮವ್ರು, ಅದೇನೊ ತಿಥಿಗೆ ಪಾಯಸವೆ ಮುಖ್ಯವಲ್ಲವೆ, ಶಾಸ್ತ್ರಿಗಳು ಹೇಳ್ತಾರಂತಲ್ಲ "ಅನ್ನಂಚಪಾಯಸಂ ಭಕ್ಷ್ಯ.." ಅಂತ ಅದೇನೊ ಮಂತ್ರ ಎನ್ನುತ್ತ ನಿಂತ ಅಬ್ದುಲ್ಲ ಹಲ್ಲು ಕಿರಿಯುತ್ತ.
 
ಶಾಸ್ತ್ರಿಗಳು ದಿಗ್ಮೂಡರಾಗಿ ಕುಳಿತರು, ಸುಬ್ಬ ಎದ್ದು, ಪಾಯಸದ ಪಾತ್ರೆಪಡೆದು, 
"ಸರಿ ನೀನು ಹೋಗು " ಎಂದು ಅಬ್ದುಲ್ಲನನ್ನು ಕಳಿಸಿದ. 
 
ಕಷ್ಟದಿಂದ ಶಾಸ್ತ್ರಿಗಳು ತಮ್ಮ ಕೆಲಸ ಪ್ರಾರಂಬಿಸಿದರು, ಸುಬ್ಬನಿಗೆ ಒಂದೆ ತೂಕಡಿಕೆ, ಬೆಳಗಿನಿಂದ ಉಪವಾಸದ ಸುಸ್ತು, ಪುರೋಹಿತರ ಮಂತ್ರ ಎಲ್ಲವು ಅವನನ್ನು ತೂಕಡಿಸುವಂತೆ ಮಾಡಿದ್ದವು, ಹೇಗೊ ಅಪ್ಪನ , ತಾತನ್ನ , ಮುತ್ತಾತನ ಹೆಸರನ್ನು ತಿಳಿಸಿ ಕುಳಿತ್ತಿದ್ದ 
ಶಾಸ್ತ್ರಿಗಳು ಮಂತ್ರ ಹೇಳುತ್ತ, ನಡುವೆ 'ಪ್ರಾಚೀನವೀತಿ' ಎನ್ನುತ್ತ ಸುಬ್ಬನಿಗೆ ಜನಿವಾರ ಎಡಕ್ಕೆ ಹಾಕುವಂತೆ ತಿಳಿಸಿದರು, 
ಅವನಿಗೆ ನಿದ್ರೆ, ಬೆಚ್ಚಿಬಿದ್ದು ಅವರು ಹೇಳಿದಂತೆ ಮಾಡಿದ, ಒಂದು ಕ್ಷಣ, ಮತ್ತೆ ಶಾಸ್ತ್ರಿಗಳು 'ಸವ್ಯ;' ಎನ್ನುತ್ತ ಜನಿವಾರ ಮತ್ತೆ ಬಲಕ್ಕೆ ಹಾಕುವಂತೆ ತಿಳಿಸಿದರು, ಅವನಿಗೆ ತೂಕಡಿಕೆ, ಅವರು ಅವನ ತೊಡೆಯ ಮೇಲೆ ತಟ್ಟಿ, ಬಲಕ್ಕೆ ಹಾಕಿಕೋ ಅಂದರು, ಸುಬ್ಬ ನಿದ್ದೆಯಲ್ಲಿರುವಂತೆ ಅವರು ಹೇಳಿದಂತೆ, ಮೂರು ನಾಲಕ್ಕು  ಸಾರಿ ಮಾಡಿದ ಅವನಿಗೆ ರೇಗಿ ಹೋಯಿತು
"ಶಾಸ್ತ್ರಿಗಳೆ ಇದೇನು ತಮಾಷಿ ಮಾಡ್ತೀರ, ಎಡಕ್ಕೆ ಹಾಕಿದರೆ ಬಲಕ್ಕೆ ಹಾಕು ಅಂತೀರಿ, ಬಲಕ್ಕೆ ಹಾಕಿದರೆ ಎಡಕ್ಕೆ ಹಾಕು ಅಂತೀರಿ, ಸರಿಯಾಗಿ ನಿರ್ದಾರಮಾಡಿ ಎಡಕ್ಕೆ ಹಾಕಬೇಕೊ, ಬಲಕ್ಕೊ ಸರಿಯಾಗಿ ಒಂದು ಸಾರಿ ಹೇಳಿಬಿಡಿ" 
ಎನ್ನುತ್ತ ರೇಗಿದ
 
ಶಾಸ್ತ್ರಿಗಳು ಇಕ್ಕಟ್ಟಿನಲ್ಲಿ, ಇಂತ ಮೂರ್ಖರ ಕೈಲಿ ಹೇಗೆ ಪಿತೃಶ್ರಾದ್ದ ಮಾಡಿಸುವುದು ಎಂದು ಕೊಳ್ಳುತ್ತ ಹೇಳಿದರು 
"ಹಾಗಲ್ಲಪ್ಪ ಇಲ್ಲಿ ಕೇಳು, ಕೆಲವು ಕೆಲಸ ಎಡದಲ್ಲಿ ಹಾಕಿದಾಗ ಮಾಡಬೇಕು, ಹಾಗೆ ಕೆಲವು ಕೆಲಸ ಬಲದಲ್ಲಿ ಹಾಕಿ ಮಾಡಬೇಕು, ಅದೆ ಶ್ರಾದ್ದದ ಕೆಲಸ, ಆದ್ದರಿಂದ ಎರಡು ಕಡೆ ಹಾಕಬೇಕಾಗುತ್ತೆ "ಎಂದರು ಸಮಾದಾನದಿಂದ.
 
ಅವನು ಸರಿ ಎನ್ನುತ್ತ ಮುಂದುವರೆಸಿದ, ಸ್ವಲ್ಪ ಹೊತ್ತಿನ ನಂತರ ಅಂತ ನಿದ್ದೆಯಲ್ಲು ಅವನ ಮೆದುಳು ಚುರುಕಾಯಿತು
"ಶಾಸ್ತ್ಗ್ರಿಗಳೆ ಮತ್ತೊಂದು ಕೆಲಸ ಮಾಡಬಹುದಲ್ಲ , ಆಗ ಬೇಗ ಆಗುತ್ತೆ" ಎಂದ,
"ಏನಪ್ಪ ನಿನ್ನ ಉಪಾಯ " ಎಂದರು ಶಾಸ್ತ್ರಿಗಳು ಹೆದರುತ್ತ
"ಏನಿಲ್ಲ, ಜನಿವಾರ ಎಡಕ್ಕೆ ಇರುವಾಗ ಕೆಲಸವನ್ನೆಲ್ಲ ಒಂದು ಪಟ್ಟಿ ಮಾಡಿ, ಬಲಕ್ಕೆ ಇರುವಾಗ ಇರುವ ಕೆಲಸವನ್ನೆಲ್ಲ ಒಂದು ಪಟ್ಟಿ ಮಾಡಿ, ಪದೆಪದೆ ಬದಲಾಯಿಸುವದಕ್ಕಿಂತ, ಎಡಬಾಗದಲ್ಲಿದ್ದಾಗ ಅಂದರೆ ಪ್ರಾಚೀನವೀತಿ  ಅದಕ್ಕೆ ಸಂಬಂದಿಸಿದ ಎಲ್ಲ ಮಂತ್ರವನ್ನು ಒಟ್ಟಿಗೆ ಹೇಳಿಬಿಡಿ, ಹಾಗೆ ಜನಿವಾರ ಸವ್ಯದಲ್ಲಿರುವಾಗ ಅದಕ್ಕೆ ಸಂಬದಿಸಿದ ಮಂತ್ರವನ್ನೆಲ್ಲ ಒಟ್ಟಿಗೆ ಹೇಳಿ ಕೆಲಸಮಾಡಿಸಿದರೆ ಆಗಲ್ವೆ ? ಆಗ ಬೇಗ ಕೆಲಸವಾಗುತ್ತೆ, ನನಗೆ ಪದೆ ಪದೆ ಬದಲಾಯಿಸುವ ಕೆಲಸ ತಪ್ಪುತ್ತೆ " ಎನ್ನುತ್ತ ಹಲ್ಲು ಕಿರಿದ. ಶಾಸ್ತ್ರಿಗಳು ಅವನ ಬುದ್ದಿಶಕ್ತಿಗೆ ಆಶ್ಚರ್ಯ ಪಡುತ್ತ, 
"ಆಗಬಹುದಪ್ಪ, ಮುಂದೆ ಹಾಗೆ ಕಂಡುಹಿಡಿಯೋಣ, ಸದ್ಯಕ್ಕೆ ನನಗೆ ಗೊತ್ತಿರುವಂತೆ ಮಾಡಿಸುವೆ" ಎಂದರು.
 
ಹೇಗೊ ಹೆಣಗುತ್ತ ಸುಬ್ಬನ ಕೈಲಿ ಅವನ ತಂದೆಯ ಶ್ರಾದ್ದ ಮಾಡಿಸುವ ಹೊತ್ತಿಗೆ, ಶಾಸ್ತ್ರಿಗಳ ಶ್ರಾದ್ದವೆ ಆಗಿಹೋಗಿತ್ತು.ಹೋಮ, ಭ್ರಾಹ್ಮಣ ಬೋಜನ , ಪಿಂಡದ ಪೂಜೆ , ನಮಸ್ಕಾರ ಎಲ್ಲವನ್ನು ಹೇಗೊ ಮುಗಿಸಿದ ಶಾಸ್ತ್ರಿಗಳು, 
"ಎಲ್ಲವು ಮುಗಿಯಿತ್ತಪ್ಪ" ಎಂದು ಅವನಿಗೆ ತಿಳಿಸಿ, ಪಿಂಡದ ತಟ್ಟೆಯನ್ನು ಅಲ್ಲೆ ಹಾಲಿನಲ್ಲಿ ಮೂಲೆಯಲ್ಲಿರಿಸಿ ಹೊರಬಂದರು, ಯಾವುದಾದರು ಹಸು ರಸ್ತೆಯಲ್ಲಿ ಕಾಣಿಸಿದರೆ, ಅದಕ್ಕೆ ಪಿಂಡಪ್ರಸಾದವನ್ನು ತಿನ್ನಿಸಬಹುದೆ ಎಂದು ಯೋಚಿಸುತ್ತ.
 
ಅವರು ಹೊರಹೋದಂತೆ , ಸುಬ್ಬ ಮೂಲೆಯಲ್ಲಿದ್ದ ಪಿಂಡಗಳನ್ನು ಇಟ್ಟಿದ್ದ ತಟ್ಟೆಯನ್ನು ಗಮನಿಸಿದ, ಅವನ ಬುದ್ದಿ ಮೊದಲೆ ಚುರುಕು, ಅದರ ಮೇಲಿದ್ದ ಬಟ್ಟೆ ಸರಿಸಿನೋಡಿ ಕೂಗಿದ 
"ಶಾಸ್ತ್ರಿಗಳೆ ಇದನ್ನು ಇಲ್ಲಿಯೆ ಬಿಟ್ಟಿದ್ದೀರಿ, ಇದನ್ನು ಹಸುವಿಗೆ ತಿನ್ನಿಸಬೇಕಲ್ಲವೆ?" ಅದು ಶಾಸ್ತ್ರಿಗಳಿಗೆ ಕೇಳಿಸಲಿಲ್ಲ,
ಹೊರಗೆ ಬೇರೆ ನಾಟಕ ನಡೆಯುತ್ತಿತ್ತು, 
 
ವರಾಂಡದಲ್ಲಿ, ಮಗುವನ್ನು ಎತ್ತಿಕೊಂಡಿದ್ದ ತಾಯಿಯೊಬ್ಬಳು ಕೇಳಿದಳು
"ಶಾಸ್ತ್ರಿಗಳೆ, ಮಗು ಹಸಿವಿನಿಂದ ತುಂಬಾ ಅಳುತ್ತಿದೆ, ಅದಕ್ಕೆ ಅನ್ನ ತಿನ್ನಿಸಬಹುದೆ, ನಿಮ್ಮ ಕೆಲಸವೆಲ್ಲ ಮುಗಿಯಿತೆ" 
 
ಶಾಸ್ತ್ರಿಗಳು ನಗುತ್ತ ನುಡಿದರು, 
 
"ತಿನ್ನಿಸಬಹುದು, ತಿನ್ನಿಸಬಹುದು, ಬೇಕು ಅಂದರೆ ನೀವು ಬೇಕಾದರು ತಿನ್ನಬಹುದು ಅಡ್ಡಿಯಿಲ್ಲ" ಎಂದರು ಗಟ್ಟಿಯಾಗಿಯೆ, 
 
ಪಾಪ , ಈ ಮಾತು ಒಳಗೆ ಇದ್ದ ಸುಬ್ಬನಿಗೆ ಅವನ ಪ್ರಶ್ನೆಗೆ ಉತ್ತರವಾಗಿ ಕೇಳಿಸಿತು,
 
ರಸ್ತೆಯಲ್ಲಿ ಬಂದ ಹಸುವನ್ನು ಮನೆಮುಂದೆ ನಿಲ್ಲಿಸಿದ ಶಾಸ್ತ್ರಿಗಳು,ಪಿಂಡದ ತಟ್ಟೆಯನ್ನು ಸುಬ್ಬನ ಕೈಲಿ ಹೊರ ತರಿಸೋಣವೆ ಎನ್ನುತ್ತ ಹಾಲಿಗೆ ಬಂದು ನೋಡುತ್ತಾರೆ,
ಸುಬ್ಬ ಪಿಂಡದ ಉಂಡೆಯನ್ನು ಕೈಲಿ ಹಿಡಿದು,ತಿರುಪತಿ ಲಾಡುವಿನ ತರ ತಿನ್ನುತ್ತಿದ್ದಾನೆ, ಒಂದು ಉಂಡೆ ಆಗಲಿ ಖಾಲಿ ಆಗಿದೆ,
ಹೆದರಿ ನಡುಗಿ ಹೋದರು ಶಾಸ್ತ್ರಿಗಳು
 
"ಇದೇನ್ರಿ ಮಾಡುತ್ತ ಇದ್ದೀರಿ" ಎಂದರು ನಡುಗುತ್ತ
 
"ನೀವೆ ಹೇಳಿದ್ರಲ್ಲ ಶಾಸ್ತ್ರಿಗಳೆ, ಹಸುವಿಗೆ ತಿನ್ನಿಸಬಹುದು, ಬೇಕು ಅಂದರೆ ನೀವು ತಿನ್ನಬಹುದು  ಎಂದು ಅದಕ್ಕೆ ತಿಂದೆ " 
ಎನ್ನುತ್ತ ಹಲ್ಲು ಕಿರಿದ, ಮತ್ತೆ ಹೇಳಿದ
 
"ಒಳ್ಳೆ ರುಚಿಯಾಗಿಯೆ ಇದೆ ಶಾಸ್ತ್ರಿಗಳೆ ಸ್ವಲ್ಪ ಉಪ್ಪು ಕಡಿಮೆ ಅಷ್ಟೆ" 
 
ತಮ್ಮ ಬ್ಯಾಗು, ದಕ್ಷಿಣೆ, ಎಲ್ಲವನ್ನು ಮರೆತು,ಮನೆಗೆ ಓಡಿದರು ಶಾಸ್ತ್ರಿಗಳು , ಮನೆಯಲ್ಲಿ ಕುಳಿತು, ಹೆಂಡತಿ ತಂದುಕೊಟ್ಟ ಒಂದು ಚೊಂಬು ನೀರು ಕುಡಿದು ಪ್ರತಿಜ್ಞೆ ಮಾಡಿದರು, ಇನ್ನು ನನ್ನ ಜೀವನದಲ್ಲಿ ಕೃಷ್ಣಪಕ್ಷದ ಚತುರ್ಥಿಯಂದು ಯಾರೆ ಕರೆದರು ಶ್ರಾದ್ದಕ್ಕೆ ಹೋಗಲ್ಲ ಎಂದು.
--------------
ಶಾಸ್ತ್ರಿಗಳನ್ನು ಒಪ್ಪಿಸುವ ನನ್ನ ಪ್ರಯತ್ನವೆಲ್ಲ ವ್ಯರ್ಥವಾಯಿತು, ಸುಬ್ಬನ ಬೇಸ್ ಮೆಂಟ್ ಬಹಳ ಸ್ಟ್ರಾಂಗ್ ಆಗಿತ್ತು, ಅವರು ಏನು ಮಾಡಿದರು ತಾವು ಬರಲು ಒಪ್ಪಲಿಲ್ಲ, ನಾನು ಬೇರೆ ಶಾಸ್ತ್ರಿಗಳನ್ನು ಹುಡುಕುತ್ತ ಹೊರಟೆ. 
 
Rating
No votes yet

Comments

Submitted by dvkini Tue, 04/30/2013 - 12:25

ಪರಿಸ್ಥಿತಿಯ ವಿಡಂಬನೆಅನ್ನು ಚೆನ್ನಾಗಿ ಬರೆದಿದ್ದೀರಿ.

ನನ್ನ ಪರಿಚಯದ ಪುರೋಹಿತರು ಹೇಳಿದ, ಅವರ ಅನುಭವದ ಘಟನೆಗಳು ನೆನಪಾದವು -
೧. (ಅಮೇರಿಕಾದಿಂದ ಫೋನಿನಲ್ಲಿ) ಭಟ್ರೇ... ** ದಿನದಂದು ನನ್ನ ತಂದೆಯ ಶ್ರಾದ್ಧ ಮಾಡಿ ಪ್ರಸಾದ ಕೊರಿಯರ್ ಮಾಡಿ ಕಳುಹಿಸಿ. ಸಂಪೂರ್ಣ ಖರ್ಚು ವೆಚ್ಚ ನೀಡಲಾಗುತ್ತದೆ.
೨. ಭಟ್ರೇ.... ನನ್ನ ತಂದೆಯ ೧೨ ದಿನದ ಕ್ರಿಯೆ ನಡೆಸಲು ನನಗೆ ಬರಲಾಗುದಿಲ್ಲ. ನಿಮಗೆ ಫುಲ್ ಕಾಂಟ್ರಾಕ್ಟ್ ಕೊಡ್ತೇನೆ. ನೀವೆ ಮಾಡಿಬಿಡಿ.
ಈ ಎರಡನ್ನೂ ಅವರು ಒಪ್ಪಲಿಲ್ಲ.

Submitted by partha1059 Wed, 05/01/2013 - 08:05

In reply to by dvkini

ನಮಸ್ಕಾರ ಕಿನಿರವರೆ, ಈಗೆಲ್ಲ ಇದೆ ಪರಿಸ್ಥಿಥಿಯಾಯ್ತು ಬಿಡಿ . ಪ್ರತಿ ಒಂದಕ್ಕು ಹಣವೆ ಪರಿಹಾರ ಎಂದು ಕೊಳ್ಳುವರು, ಹಾಗೆಮಕ್ಕಳು ತಮ್ಮ ಕರ್ತವ್ಯವನ್ನು ಸಹ ಹಣವೆ ನೆರವೇರಿಸುವುದು ಅಂದುಕೊಳ್ಳುವರು

Submitted by lpitnal@gmail.com Tue, 04/30/2013 - 20:51

ಪಾರ್ಥರೇ, ಕೃಷ್ಣ ಪಕ್ಷದ ಚತುರ್ಥಿಯ ಶ್ರಾದ್ಧದ ಚಿತ್ರಣ ಬಲು ಸೊಗಸಾಗಿದೆ, ನಗೆ ಬರಹ ಚನ್ನಾಗಿದೆ. ತಮಗೆ ಬೇರೆ ಶಾಸ್ತ್ರಿಗಳು ಸಿಕ್ಕರೋ, ಇಲ್ಲವೋ!

Submitted by partha1059 Wed, 05/01/2013 - 08:07

In reply to by lpitnal@gmail.com

ಇಟ್ನಾಳರವರಿಗೆ ಪಾರ್ಥಸಾರಥಿಯ ವಂದನೆಗಳು , ತಾವು ನಗೆ ಬರಹ ಮೆಚ್ಚಿರುವದಕ್ಕೆ ಕೃತಜ್ಞತೆಗಳು, ಹಾಗೆ ಏಕೊ ಸುಬ್ಬನ ನೆಂಟ ಶ್ರೀನಾಥರು ಮಾತ್ರ ಮೌನ, ಅರ್ಥವಾಗಲಿಲ್ಲ, ಅವರ ನೆಂಟರನ್ನು ತಮಾಶಿ ಮಾಡಿದ್ದು ಅವರಿಗೆ ಕೋಪ ಬಂದಿರಲು ಸಾಕು

Submitted by bhalle Wed, 05/01/2013 - 16:50

ನಮ್ಮಲ್ಲಿ ಕೃಷ್ಣ ಅಂತ ಒಬ್ಬ ಇದ್ದ ... ಹೊಸದಾಗಿ ಮುಂಜಿಯಾಗಿದ್ದು ನಮ್ಮ ತಂದೆಯವರಲ್ಲಿ ಸಂಧ್ಯಾವಂದನೆ ಹೇಳಿಸಿಕೊಳ್ಳಲು ಬರುತ್ತಿದ್ದ ... ಒಮ್ಮೆ ಹೀಗೆ ಪಾಠ ಮುಗಿಸಿಕೊಂಡು ಹೋದವು ಹತ್ತು ನಿಮಿಷದಲ್ಲಿ ಓಡಿ ಬಂದ ... "ಏನಪ್ಪಾ? ಏನಾಯ್ತು?" ... "ದೊಡ್ಡಪ್ಪಾ ... ನಾನಿಲ್ಲಿ ಜನಿವಾರ ಬಿಟ್ನಾ?" ಅಂದ ಭೂಪತಿ ... ಹಾಗೇ ನೆನಪಾಯ್ತು

ಸುಬ್ಬನ ಗಲಾಟೆಯನ್ನು ಈಗ ಮುಂದಿನ ಲೆವಲ್’ಗೆ ತೆಗೆದುಕೊಂಡು ಹೋದ ನಿಮಗೆ ಅಭಿನಂದನೆಗಳು ಪಾರ್ಥರೇ ... ಉಳುವವನಿಗೇ ಭೂಮಿ ಎಂದಂತೆ ಪಿಂಡ ಇಟ್ಟವನಿಗೆ ಅದು ಭೋಜನವಾಗಿದ್ದು ಬೇಸರವಾಯ್ತು :-) ಏನು ಮಾಡೋದು ಹೇಳಿ ನಮ್ಮ ಸುಬ್ಬ ಅಮಾವಾಸ್ಯೆಯ ಹಿಂದಿನ ದಿನ ಸ್ವಲ್ಪ ಹಾಗೇನೇ !

Submitted by makara Thu, 05/02/2013 - 07:20

ಮೋಲ್ನೋಟಕ್ಕೆ ಸುಬ್ಬನ ಬಗ್ಗೆ ಬರೆದ ಹಾಸ್ಯ ಲೇಖನವೆನಿಸಿದರೂ ಸಹ ಸ್ವಲ್ಪ ಹೆಚ್ಚು ಕಡಿಮೆ ಇಷ್ಟೇ ಕೆಟ್ಟದಾಗಿ ಶ್ರಾದ್ಧವನ್ನು ಆಚರಿಸುತ್ತಿದ್ದೇವೆನ್ನುವುದೇ ಖೇದದ ಸಂಗತಿಯಾಗಿದೆ. ದಕ್ಷಿಣೆಯ ಆಸೆಗಾಗಿ ಅಣ್ಣನಿಗೇ ಒಂದು ಕಡೆಯಲ್ಲಿ ಮತ್ತು ತಮ್ಮನಿಗೇ ಮತ್ತೊಂದು ಕಡೆಯಲ್ಲಿ ಶ್ರಾದ್ಧವನ್ನು ಮಾಡಿಸುವಂತಹ ಘನರಿರುವಾಗ ಇನ್ನೂ ಶ್ರಾದ್ಧದ ಹಾಗೂ ನಮ್ಮ ಸಂಪ್ರದಾಯಗಳ ಬಗ್ಗೆ ಶ್ರದ್ಧೆ ಇಟ್ಟುಕೊಂಡ ನಿಮ್ಮ ಪುರೋಹಿತರಂತಹವರು ಅಭಿನಂದಾರ್ಹರು. ಒಳ್ಳೆಯ ಲೇಖನಕ್ಕೆ ಅಭಿನಂದನೆ ಪಾರ್ಥರೆ.

Submitted by venkatb83 Tue, 05/14/2013 - 22:50

"ಸುಬ್ಬ ಪಿಂಡದ ಉಂಡೆಯನ್ನು ಕೈಲಿ ಹಿಡಿದು,ತಿರುಪತಿ ಲಾಡುವಿನ ತರ ತಿನ್ನುತ್ತಿದ್ದಾನೆ, ಒಂದು ಉಂಡೆ ಆಗಲಿ ಖಾಲಿ ಆಗಿದೆ,"

;())))
ಗುರುಗಳೇ
ಕಾಲ್ಪನಿಕ ಕಥೆ ಆದರೂ ಈ ತರಹದ್ದು ನಡೆಯಬಹುದು -ನಡೆಯುತ್ತೆ ಅಂತ ಪ್ರತಿಕ್ರಿಯೆಗಳಿಂದ ಅರಿವಾಯ್ತು..

ಸಿಟ್ಟಲ್ಲಿ-ಅಸಮಾಧಾನದಿಂದ ನೀವ್ ಬೇಕಾದರೂ ತಿನ್ನಿ ಎಂದದ್ದ್ದು -ಅದು ನಿಜ ಮಾಡಲು -ಅಥವಾ ಹಸಿವಾಗಿ ತಿಂದ ಸುಬ್ಬನ ಬಗ್ಗೆ ಏನು ಹೇಳೋದು ಎಂಬ ಜಿಜ್ಞಾಸೆ ಉಂಟಾಗಿದೆ ...!!

ಸತ್ಯ ನಾರಾಯಣ ಪೂಜೆ ಮತ್ತು ಕಥೆ ಹೇಳಿಸುವ ಪರಿ ಪಾಠದ ಬಗ್ಗೆ ಎಲ್ಲರಿಗೂ ಗೊತ್ತು ಅನ್ಸುತ್ತೆ ನಮ್ಮ ಅಣ್ಣನ ಮನೆಯಲ್ಲಿ ವರ್ಷಕ್ಕೊಮ್ಮೆ ಇದು ಮಾಮೂಲು ,ಮೊದಲಿಗೆ ಸರಿ ಇತ್ತು (ಚಿಕ್ಕವರಿದ್ದಾಗ) ಆದರೆ ಈಗ ಘಂಟೆ ಗಟ್ಟಲೆ ಕೂತು ಕೇಳಲು ನಮಗೂ ಹಿಂಸೆ ಅನ್ಸುತ್ತಿದೆ ಹಾಗೆ ಅದು ಹೇಳುವವರೂ ಕೂಡ ಶಾರ್ಟ್ ಕಟ್ ಆಗಿ ಅಲ್ಲಲಿ ಕಟ್ ಮಾಡಿ ಬೇಗ ಬೇಗ ಹೇಳಿ ಮುಗಿಸುವರು ....!!

ಶುಭವಾಗಲಿ

\|