ಸಮ್ಮಿಶ್ರವೆಂಬ ’ವ್ಯಭಿಚಾರ’ವನ್ನು ಚು.ಆ. ತಪ್ಪಿಸಲಿ
ಇತ್ತೀಚಿಗಿನ ಬಹುತೇಕ ಚುನಾವಣೆಯಲ್ಲಿ ತ್ರಿಶಂಕು ಸದನಗಳೇ ಹುಟ್ಟಿಬರುತ್ತವೆ. ಪ್ರಜಾಸತ್ತೆಗೆ ಶಾಪವಾದ ಈ ಸನ್ನಿವೇಶ, ಚಿಲ್ಲರೆ ರಾಜಕಾರಣಿಗಳಿಗೆ ಹಬ್ಬ. ಚಿಲ್ಲರೆ ಪಕ್ಷಗಳಿಗೆ ಸ್ವಯಂ ಅಧಿಕಾರಕ್ಕಿಂತಾ ಹೆಚ್ಚಾಗಿ, ’ಬ್ಲಾಕ್‌ಮೇಲ್’ ಸರಕಾರವನ್ನು ಅಧಿಕಾರಕ್ಕೆ ತರುವುದೇ ಲಾಭದಾಯಕ ದಂಧೆ!
ನಾನಾದರೋ ವೋಟ್ ಹಾಕುವುದು, ಅಭ್ಯರ್ಥಿಯ ಸದ್ಗುಣಗಳಿಗಷ್ಟೇ ಅಲ್ಲ, ಅವರ ಪ್ರಣಾಳಿಕೆಗೆ ಸಹ. ಮಹೋದಯರು, ಆ ಗುಣ-ನಿಲವುಗಳನ್ನೆಲ್ಲಾ ಇಲ್ಲೇ ಕಟ್ಟಿಟ್ಟು, ಪ್ರೇತದಂತೆ ಸದನ ಪ್ರವೇಶಿಸಿ, ಯಾವುದೋ ಫ್ರಂಟ್‌ಗೆ ಬೆಂಬಲ ಸೂಚಿಸುವುದಾದರೆ, ನನ್ನ ಆಯ್ಕೆ ಏನಾಯಿತು?
ನನ್ನ ’ಮತ’ದ ನಂಬಿಕೆ-ಮೌಲ್ಯಗಳನ್ನು ಕಾಪಾಡುವುದು, ಚುನಾವಣಾ ಆಯೋಗದ ಜವಾಬ್ದಾರಿ. ಚುನಾವಣಾ ಆಯೋಗವೆನ್ನುವುದು, ತಾಲೂಕು ಆಫೀಸಿನ ನೌಕರಶಾಹಿಯಂತಲ್ಲದೆ, ವಿಶಿಷ್ಟ ಅಧಿಕಾರಬಲವನ್ನೂ ಹೊಂದಿರುವುದಾಗಿ, ನಮಗೆ ಟಿ.ಎನ್.ಶೇಷನ್ ಸಾಹೇಬರು ಪರಿಚಯಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಅಂತಹ ಜಬರದಸ್ತು ಇರುವುದೇ ಆದರೆ, ಸಮ್ಮಿಶ್ರಕ್ಕೆ ಬೆಂಬಲಿಸುವ ಎಲ್ಲಾ ಸದಸ್ಯ ಮಹೋದಯರನ್ನೂ, ಪಕ್ಷಭೇದವಿಲ್ಲದೆ ಅನರ್ಹಗೊಳಿಸಬೇಕೆಂಬುದು ನನ್ನ ಮನವಿ
Comments
ದಿವಾಕರರವರೇ ನಿಮ್ಮ ಅಭಿಪ್ರಾಯಕ್ಕೆ
ದಿವಾಕರರವರೇ ನಿಮ್ಮ ಅಭಿಪ್ರಾಯಕ್ಕೆ ನನ್ನ ಅಭಿಮತವಿದೆ. ನಮ್ಮ ಆಯ್ಕೆಯ ಹಿಂದೆ ಅನೇಕ ನಿರೀಕ್ಷೆಗಳಿರುತ್ತವೆ, ಅವೆಲ್ಲವನ್ನೂ ಬದಿಗೊತ್ತಿ ಸಮ್ಮಿಶ್ರ ಸರಕಾರ ರಚನೆಯಾದರೆ ಜನಾಭಿಪ್ರಾಯ, ಪ್ರಜಾಪ್ರಭುತ್ವಗಳು ಕೇವಲ ಸಿದ್ಧಾಂತಗಳೇ..?
ಟಿ ಎನ್ ಶೇಷನ್ ಅಧಿಕಾರ ತೋರಿಸಿದ ತಕ್ಷಣ ಇಬ್ಬರು ಉಪ ಚುನಾವಣಾ ಆಯುಕ್ತರನ್ನು ನೇಮಿಸಿ, ಚುನಾವಣಾ ಆಯೋಗದ ಅಧಿಕಾರವನ್ನು ಮೊಟಕುಗೊಳಿಸಲಿಲ್ಲವೇ..? ಪ್ರಜಾಪ್ರಭುತ್ವವನ್ನು ನಾವು ಅರ್ಥೈಸಿಕೊಂಡದ್ದೇ ತಪ್ಪಾಗಿದೆಯೇನೋ...?
ಓದಿದ್ದಕ್ಕೆ, ಓದಿ ಬರೆದಿದ್ದಕ್ಕೆ
ಓದಿದ್ದಕ್ಕೆ, ಓದಿ ಬರೆದಿದ್ದಕ್ಕೆ ಧನ್ಯವಾದಗಳು. ಪ್ರಜಾಪ್ರಭುತ್ವದ, ನಮ್ಮ ಅರ್ಥೈಕೆಯಲ್ಲೇನೂ ಎಡವಟ್ಟಾಗಿರುವಂತೆ ನನಗನ್ನಿಸುವುದಿಲ್ಲ. ನಮ್ಮ ಸಂಸದೀಯ ಪ್ರಜಾಸತ್ತೆಯ ಬಗ್ಗೆ ನನಗೆ ಹೆಮ್ಮೆಯೇ ಇದೆ. ಕರಿಕ್ ಇರುವುದು, ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ. ಅದು ರಾಜಕೀಯಸ್ಥರು, ರಾಜಕೀಯಸ್ಥರಿಗಾಗಿ ನಿರ್ಮಿಸಿದ ರಾಜಕೀಯವಾಗಿದೆ. ಟಿ ಎನ್ ಶೇಷನ್ ಅವರಂಥಾ ಗಂಡೆದೆಯನ್ನು, ಎಲ್ಲಾ ಐಎಎಸ್ ದರ್ಪೋನ್ಮತ್ತರಿಂದ ನಿರೀಕ್ಷಿಸಲಾಗುವುದಿಲ್ಲ. ಮೇಲಾಗಿ ರಾಜಕೀಯಸ್ಥರು, ನೌಕರಶಾಹಿಯನ್ನೂ, ನೌಕರಶಾಹಿ ರಾಜಕೀಯವನ್ನೂ, ’ವೃಕ್ಷ-ಬೀಜ ನ್ಯಾಯ’ದಂತೆ ಪರಸ್ಪರ ’ಕೊಳಕ’ರನ್ನಾಗಿ (Corrupt) ಮಾಡುತ್ತಿದ್ದಾರೆ. ಶೇಷನ್ Spirit ಅಧಿಕಾರಶಾಹಿಯಲ್ಲಿ ಪ್ರವಹಿಸಲಿ ಎನ್ನುವ ಹತಾಶ ಪ್ರಾರ್ಥನೆ ಮಾಡುವುದು ಬಿಟ್ಟು, ನಾವು ಇನ್ನೇನು ತಾನೇ ಮಾಡಲು ಬಂದೀತು?