೧೨. ಲಲಿತಾ ಸಹಸ್ರನಾಮ ೧೨ರಿಂದ ೧೮ರವರೆಗಿನ ವಿವರಣೆ

೧೨. ಲಲಿತಾ ಸಹಸ್ರನಾಮ ೧೨ರಿಂದ ೧೮ರವರೆಗಿನ ವಿವರಣೆ

ಲಲಿತಾ ಸಹಸ್ರನಾಮ ೧೨ ರಿಂದ ೧೮

Nijāruṇa-prabhā-pūra-majjad-brahmāṇḍa-manḍalā निजारुण-प्रभा-पूर-मज्जद्-ब्रह्माण्ड-मन्डला (12)

೧೨. ನಿಜಾರುಣ-ಪ್ರಭಾ-ಪೂರ-ಮಜ್ಜದ್-ಬ್ರಹ್ಮಾಂಡ-ಮಂಡಲಾ

          ದೇವಿಯ ಕೆಂಗುಲಾಬಿಯಂತಹ, ಅರುಣೋದಯದಂತಹ ಕೆಂಪು ಮೈಕಾಂತಿಯು ಈ ಪ್ರಪಂಚವು ಕೆಂಪು ಕಿರಣಗಳಿಂದ ಕಂಗೊಳಿಸುವಂತೆ ಮಾಡುತ್ತದೆ. ಈ ನಾಮಾವಳಿಯಿಂದ ಲಲಿತಾಂಬಿಕೆಯ ಸ್ಥೂಲ ವರ್ಣನೆಯು ಪ್ರಾರಂಭವಾಗುತ್ತದೆ. ದೇವರುಗಳ ಭೌತಿಕ ವರ್ಣನೆಯನ್ನು ಪ್ರಾರಂಭಿಸುವಾಗ ಅದು ಅವರ ಪಾದದಿಂದ ಪ್ರಾರಂಭವಾಗಿ ತಲೆಯವರೆಗೆ ಸಾಗುತ್ತದೆ (ವರ್ಣನೆಯು ಅಡಿಯಿಂದ ಮುಡಿಯವರೆಗೆ ಇರುತ್ತದೆ) ಮತ್ತು ದೇವಿಯರ (ಸ್ತ್ರೀ ದೇವರುಗಳ) ವಿಷಯದಲ್ಲಿ ಅದು ತಲೆಯಿಂದ ಪ್ರಾರಂಭವಾಗಿ ಪಾದಗಳಲ್ಲಿ ಅಂತ್ಯವಾಗುತ್ತದೆ. ಇದರಂತೆ, ಲಲಿತಾಂಬಿಕೆಯ ವಿಷಯದಲ್ಲಿ ಅವಳ ವರ್ಣನೆಯು ತಲೆಯಿಂದ ಪ್ರಾರಂಭವಾಗುತ್ತದೆ. ಆದರೆ ಶಿವನ ವಿಷಯದಲ್ಲಿ ಅವನ ವರ್ಣನೆಯು ಅವನ ತಲೆ ಅಥವಾ ಅವನ ಕಾಲುಗಳೆರಡರಿಂದಲೂ ಮಾಡುತ್ತಾರೆ; ಏಕೆಂದರೆ ಅವನು ಶಿವ ಹಾಗೂ ಶಕ್ತಿ ಎರಡನ್ನೂ ಪ್ರತಿನಿಧಿಸುತ್ತಾನೆ (ಅರ್ಧ ನಾರೀಶ್ವರ ರೂಪದಲ್ಲಿ ಶಿವ ಮತ್ತು ಶಕ್ತಿಯರು ಐಕ್ಯರಾಗಿ ಒಂದೇ ರೂಪವಾಯಿತು ಅದರಲ್ಲಿ ಅರ್ಧಭಾಗವು ಪುರುಷನದಾಗಿದ್ದರೆ ಉಳಿದರ್ಧ ಭಾಗವು ಸ್ತ್ರೀಯದಾಗಿರುತ್ತದೆ). ಪಂಚದಶೀ ಮಂತ್ರದಲ್ಲಿ ಮೂರು ಭಾಗಗಳು ಅಥವಾ ಕೂಟಗಳಿವೆ. ಈ ಮೂರು ಭಾಗಗಳಲ್ಲಿ; ವಾಗ್ಭವ ಕೂಟದಲ್ಲಿ ದೇವಿಯ ತಲೆಯನ್ನು ಕುರಿತು ಧ್ಯಾನಿಸಲಾಗುತ್ತದೆ; ಇದು ಸ್ತ್ರೀ ದೇವತೆಗಳನ್ನು ಮುಡಿಯಿಂದ ಅಡಿಯವರೆಗೆ ಧ್ಯಾನಿಸುವ ಪದ್ಧತಿಗೆ ಅನುಗುಣವಾಗಿದೆ. 

Campakāśoka-punnāga-saugandhika-lasat-kacā चम्पकाशोक-पुन्नाग-सौगन्धिक-लसत्-कचा (13)

೧೩. ಚಂಪಕಾಶೋಕ-ಪುನ್ನಾಗ-ಸೌಗಂಧಿಕ-ಲಸತ್-ಕಚಾ

          ಚಂಪಕ, ಅಶೋಕ, ಪುನ್ನಾಗ, ಸೌಗಂಧಿಕ ಇವು ನಾಲ್ಕು ಸುವಾಸನಾಯುತ ಪುಷ್ಪಗಳು ದೇವಿಯ ಮುಡಿಯನ್ನು ಅಲಂಕರಿಸುತ್ತವೆ. ಆದರೆ ಇವಳ ಕೂದಲು ಈ ಪುಷ್ಪಗಳಿಂದ ಸುವಾಸನೆಯನ್ನು ಪಡೆಯುವುದಿಲ್ಲ ಆದರೆ ಈ ಪುಷ್ಪಗಳಿಗೆ ಸುವಾಸನೆಯು ದೇವಿಯ ಕೂದಲುಗಳಿಂದ ಉಂಟಾಗುತ್ತದೆ. ಅವಳ ಕೂದಲು ಯಾವಾಗಲೂ ಮಧುರವಾದ ಸುವಾಸನೆಯಿಂದ ಕೂಡಿರುತ್ತದೆ. ಸೌಂದರ್ಯಲಹರಿಯ ೪೩ನೇ ಶ್ಲೋಕವು, "ನಿನ್ನ ದಟ್ಟವಾದ, ಜಿಡ್ಢಾದ ಮತ್ತು ಮೃದುವಾದ ಪೊದೆಯಂತಹ ಕೂದಲು ಅರಳಿದ ನೀಲಿ ಕಮಲಗಳ ಗುಂಪನ್ನು ನೆನಪಿಸುತ್ತದೆ; ಅದು ನಮ್ಮ ಎಲ್ಲಾ ವಿಧವಾದ ಅಜ್ಞಾನವನ್ನು ಹೋಗಲಾಡಿಸುತ್ತದೆ. ವಲನ ಶತ್ರುವಿನ ವನದಲ್ಲಿರುವ ಮರಗಳ ಹೂವುಗಳೆಲ್ಲಾ ತಮ್ಮ ರಕ್ತಗತವಾದ ಸುಗಂಧವನ್ನು ಪಡೆಯಲಿಕ್ಕೆ ಅಲ್ಲಿ ಆಸೀನವಾಗಿದ್ದಂತೆ ನನಗೆ ಕಾಣಿಸುತ್ತದೆ" ಎನ್ನುತ್ತದೆ. ತೇವವಾಗಿರುವ ಅವಳ ಕೂದಲು ಕರುಣೆಯನ್ನು ಪ್ರತಿನಿಧಿಸಿದರೆ ಅದರ ಮೃದುತ್ವವು ಅವಳ ತಾಯ್ತನವನ್ನು ಸಾರುತ್ತದೆ.

           ದೂರ್ವಾಸ ಮುನಿಯು ತನ್ನ "ಶಕ್ತಿ ಮಹಿಮ್ನಃ ಸ್ತೋತ್ರ"ದಲ್ಲಿ ಅವಳ ಮಧುರವಾದ ಸುವಾಸನಾಯುಕ್ತ ಕೇಶವನ್ನು ಕುರಿತು ತನ್ನ ಹೃದಯ ಚಕ್ರದಲ್ಲಿ ಧ್ಯಾನಿಸುತ್ತಾನೆ.

          ಈ ನಾಮದ ಹಿಂದಿರುವ ಉದ್ದೇಶವೇನೆಂದರೆ ಅವಳ ಕೇಶವು ಅಜ್ಞಾನವನ್ನು ಹೊಡೆದೋಡಿಸಬಹುದಾರೆ (ಏಕೆಂದರೆ ಪರಬ್ರಹ್ಮವನ್ನು ಅರಿಯಲು ಜ್ಞಾನವು ಅತ್ಯುತ್ಕೃಷ್ಟವಾದದ್ದೆಂದು ಪರಿಗಣಿಸಲ್ಪಟ್ಟಿದೆ), ಅವಳ ಒಟ್ಟು ರೂಪವು ಅವಳ ಭಕ್ತರಿಗೆ ಏನೆಲ್ಲಾ ಮಾಡಬಹುದೋ ಯೋಚಿಸಿ. ಈ ನಾಲ್ಕು ಮಧುರವಾದ ಹೂವುಗಳು ನಮ್ಮನ್ನು ಮೋಸಗೊಳಿಸುವ ಅಂತಃಕರಣದ ನಾಲ್ಕು ಅಂಶಗಳನ್ನು ತಿಳಿಸುತ್ತವೆ; ಅವೆಂದರೆ ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ.

Kuruvinda-maṇiśreṇī-kanat-koṭīra-maṇḍitā कुरुविन्द-मणिश्रेणी-कनत्-कोटीर-मण्डिता (14)

೧೪. ಕುರುವಿಂದ-ಮಣಿಶ್ರೇಣೀ-ಕನತ್-ಕೋಟೀರ-ಮಂಡಿತಾ

          'ಕುರುವಿಂದ'ವೆನ್ನುವುದು ಬಹಳ ಅಪರೂಪವಾದ ಮಾಣಿಕ್ಯವಾಗಿದ್ದು ಅದು ಕೆಂಪು ಬಣ್ಣವನ್ನು ಹೊಂದಿರುತ್ತದೆ. ಈ ವಿಶೇಷವಾದ ಮಾಣಿಕ್ಯವು ಪ್ರೇಮ, ಐಶ್ವರ್ಯ ಮತ್ತು ವಿಷ್ಣುವಿನಲ್ಲಿ ಭಕ್ತಿಯನ್ನು ಹೆಚ್ಚಿಸುತ್ತದೆ (ವಿಷ್ಣುವು ದೇವಿಯ ಸಹೋದರನಾಗಿದ್ದಾನೆ). ಈ ಮಾಣಿಕ್ಯಗಳು ಅವಳ ಕಿರೀಟವನ್ನಲಂಕರಿಸುತ್ತವೆ. ಮಾಣಿಕ್ಯದಿಂದೊಡಗೂಡಿದ ಅವಳ ಕೆಂಪು ಕಿರೀಟ ಧರಿಸಿದ ರೂಪವನ್ನು ಧ್ಯಾನಿಸುವುದರ ಮೂಲಕ ಆಧ್ಯಾತ್ಮಿಕ ಮತ್ತು ಲೌಕಿಕ ಉನ್ನತಿಯನ್ನು ಸಾಧಿಸಬಹುದು. ಸೌಂದರ್ಯಲಹರಿಯ ೪೨ನೇ ಶ್ಲೋಕವು, "ಯಾರು ದ್ವಾದಶಾದಿತ್ಯಕಚಿತವಾದ (ದ್ವಾದಶ ಆದಿತ್ಯರೆಂದರೆ ಹನ್ನೆರಡು ಸೂರ್ಯರು, ಒಂದೊಂದು ಸೂರ್ಯನು ಒಂದೊಂದು ತಿಂಗಳನ್ನು ಪ್ರತಿನಿಧಿಸುತ್ತದೆ) ನಿನ್ನ ಸುವರ್ಣ ಕಿರೀಟವನ್ನು ಧ್ಯಾನಿಸುತ್ತಾರೋ, ಅವರು ರತ್ನಗಳಾಗಿ ಮಾರ್ಪಡದೇ ಇರುತ್ತಾರೆಯೇ? ಹೇಗೆ ನಿನ್ನ ಕಿರೀಟದಲ್ಲಿ ಅಡಕವಾಗಿರುವ ಮಾಣಿಕ್ಯಗಳ ಪ್ರಭೆಯಿಂದಾಗಿ ವಿವಿಧ ಹೊಳಪಿನಿಂದ ಕಂಗೊಳಿಸುವ ಅರ್ಧ ಚಂದ್ರನು ದೇವೇಂದ್ರನ ಧನಸ್ಸಾಗಿದ್ದಾನೆಯೋ (ಇಂದ್ರಧನಸ್ಸು ಅಥವಾ ಕಾಮನ ಬಿಲ್ಲು?) ಹಾಗೆ", ಎನ್ನುತ್ತದೆ. ಶ್ರೀ ಶಕ್ತಿ ಮಹಿಮ್ನಃ ಸ್ತೋತ್ರದ ೪೨ನೇ ಶ್ಲೋಕವೂ ಕೂಡಾ ದೇವಿಯ ಕಿರೀಟವನ್ನು ವರ್ಣಿಸುತ್ತದೆ.

Aṣṭamī -candra-vibrāja-dhalika-sthala-śobhitā अष्टमी-चन्द्र-विब्राज-धलिक-स्थल-शोभिता (15)

೧೫. ಅಷ್ಟಮೀ-ಚಂದ್ರ-ವಿಬ್ರಾಜ-ಧಲಿಕ-ಸ್ಥಲ-ಶೋಭಿತಾ

          ದೇವಿಯ ಮುಂದಲೆಯು ಅಷ್ಟಮಿಯ ಚಂದ್ರನಂತೆ ಕಾಣಿಸುತ್ತದೆ. ಹುಣ್ಣಿಮೆ ಅಥವಾ ಅಮಾವಾಸ್ಯೆಯಿಂದ ಎಂಟನೇ ದಿನವನ್ನು ಅಷ್ಟಮೀ ಎನ್ನುತ್ತಾರೆ. ಅಷ್ಟಮೀ ದಿವಸದ ಚಂದ್ರನು ತನ್ನ ಎರಡೂ ಬದಿಯ ವಕ್ರತೆಗಳಿಂದ (ಡೊಂಕುಗಳಿಂದ) ಬಹಳ ಸುಂದರವಾಗಿ ಕಾಣುತ್ತಾನೆ. 

Mukacandra-kalaṇkābha-mṛganābhi-viśeṣakā मुखचन्द्र-कलण्काभ-मृगनाभि -विशेषका (16)

೧೬. ಮುಖಚಂದ್ರ-ಕಲಂಕಾಭ-ಮೃಗನಾಭಿ -ವಿಶೇಷಕಾ

          ದೇವಿಯು ಕಸ್ತೂರಿಯ ತಿಲಕವನ್ನು ಧರಿಸಿದ್ದಾಳೆ ಇದನ್ನು ಚಂದ್ರನ ಕಲೆಗೆ* ಹೋಲಿಸಲಾಗಿದೆ. ಕಸ್ತೂರಿ ಎಂದರೆ ಪರಿಮಳಯುಕ್ತ ಲೇಪನ. 'ತಿಲಕ'ವೆಂದರೆ ಬಣ್ಣಗಳಿಂದ ಅಥವಾ ಚಂದನದಿಂದ ಅಥವಾ ಬೇರೆ ವಿಧವಾದ ಲೇಪನಗಳಿಂದ ತಯಾರಿಸಲ್ಪಟ್ಟು ಹಣೆಯ ಮೇಲೆ ಆಭರಣದಂತೆ ಅಥವಾ ಚಿಹ್ನೆಯಾಗಿ ಧರಿಸುವುದು. 'ಶಕ್ತಿ ಮಹಿಮ್ನಃ ಸ್ತೋತ್ರ'ದ ೩೯ನೇ ಶ್ಲೋಕದಲ್ಲಿಯೂ ದೇವಿಯ ಮುಖವು ಧ್ಯಾನಿಸಲ್ಪಟ್ಟಿದೆ.  

(*ಕಲೆ ಎಂದರೆ ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗಿನ ಚಂದ್ರನ ವಿವಿಧ ಹಂತಗಳು. ಇಲ್ಲಿ ಕಲೆ ಎಂದರೆ ಅದು ಚಂದ್ರನ ಒಂದು ಹಂತವಾದ ಅರ್ಧಚಂದ್ರನನ್ನು ಪ್ರತಿನಿಧಿಸುತ್ತದೆ.)

Vadanasmara-māṅgalya-gṛhatoraṇa-cillikā वदनस्मर-माङ्गल्य-गृहतोरण-चिल्लिका (17)

೧೭. ವದನಸ್ಮರ-ಮಾಙ್ಗಲ್ಯ-ಗೃಹತೋರಣ-ಚಿಲ್ಲಿಕಾ

          ದೇವಿಯ ಮುಖವನ್ನು ಮನ್ಮಥನ ಅರಮನೆಗೆ ಹೋಲಿಸಲಾಗಿದೆ ಮತ್ತು ಅವಳ ಕಣ್ಣ ಹುಬ್ಬುಗಳನ್ನು ಮನ್ಮಥನ ಅರಮನೆಯ ತೋರಣಗಳಿಗೆ ಹೋಲಿಸಲಾಗಿದೆ. ಚಿಲ್ಲಿಕಾ ಎಂದರೆ ಕಣ್ಣಿನ ಹುಬ್ಬುಗಳು. ಮನ್ಮಥನು ಲಲಿತಾಂಬಿಕೆಯ ಮುಖವನ್ನು ನಕಲು ಮಾಡಿ ಮಂಗಳಕರವಾದ ಅರಮನೆಯನ್ನು ಕಟ್ಟಿಸಿದನಂತೆ.

Vaktra-lakṣmī-parīvāha-calan-mīnābha-locanā वक्त्र-लक्ष्मी-परीवाह-चलन्-मीनाभ-लोचना (18)

೧೮. ವಕ್ತ್ರ-ಲಕ್ಷ್ಮೀ-ಪರೀವಾಹ-ಚಲನ್-ಮೀನಾಭ-ಲೋಚನಾ

          ಲಲಿತಾಂಬಿಕೆಯ ಕಣ್ಣುಗಳು ಕೊಳದಲ್ಲಿ ಈಜುತ್ತಿರುವ ಮೀನುಗಳಂತೆ ಕಾಣುತ್ತವೆ. ಅವಳ ಮುಖವನ್ನು ಕೊಳಕ್ಕೆ ಹೋಲಿಸಲಾಗಿದ್ದರೆ ಅವಳ ಕಣ್ಣುಗಳನ್ನು ಮೀನುಗಳಿಗೆ ಹೋಲಿಸಲಾಗಿದೆ; ಏಕೆಂದರೆ ಮೀನುಗಳು ತ್ವರಿತವಾಗಿ ಚಲಿಸುತ್ತವೆ. ದೇವಿಯ ಕಣ್ಣುಗಳು ಕೂಡಾ ತ್ವರಿತವಾಗಿ ಚಲಿಸುತ್ತವೆ ಏಕೆಂದರೆ ಅವಳು ತನ್ನ ಕೃಪಾ ದೃಷ್ಟಿಯನ್ನು ಸಮಸ್ತ ಬ್ರಹ್ಮಾಂಡದ ಮೇಲೆ ಹರಿಸಬೇಕಾಗಿದೆ. ಮೀನಿನ ಮೊಟ್ಟೆಗಳು ಕೇವಲ ತಾಯಿ ಮೀನು ಅವುಗಳನ್ನು ದೃಷ್ಟಿಸಿ ನೋಡುವದರಿಂದ ಬೆಳವಣಿಗೆ ಹೊಂದುತ್ತವಂತೆ. ಇದೇ ರೀತಿ ತಾಯಿಯು ಕೇವಲ ತನ್ನ ನೋಟ ಮಾತ್ರದಿಂದ ಈ ಜಗತ್ತಿನ ಪೋಷಣೆಯನ್ನು ಮಾಡುತ್ತಾಳೆ. ಅವಳ ಸುಂದರವಾದ ಕಣ್ಣುಗಳಿಂದಾಗಿ ಆಕೆಗೆ ಮೀನಾಕ್ಷಿ, ಮೀನಲೋಚನಿ ಮೊದಲಾದ ಹೆಸರುಗಳಿವೆ. 

*******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 12-18 http://www.manblunder.com/2009/07/lalitha-sahasranamam-12-18.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 
Rating
Average: 5 (1 vote)

Comments

Submitted by partha1059 Wed, 05/01/2013 - 08:14

ಮಕರರವರೆ ....ದೇವರುಗಳ ಭೌತಿಕ ವರ್ಣನೆಯನ್ನು ಪ್ರಾರಂಭಿಸುವಾಗ ಅದು ಅವರ ಪಾದದಿಂದ ಪ್ರಾರಂಭವಾಗಿ ತಲೆಯವರೆಗೆ ಸಾಗುತ್ತದೆ (ವರ್ಣನೆಯು ಅಡಿಯಿಂದ ಮುಡಿಯವರೆಗೆ ಇರುತ್ತದೆ) ಮತ್ತು ದೇವಿಯರ (ಸ್ತ್ರೀ ದೇವರುಗಳ) ವಿಷಯದಲ್ಲಿ ಅದು ತಲೆಯಿಂದ ಪ್ರಾರಂಭವಾಗಿ ಪಾದಗಳಲ್ಲಿ ಅಂತ್ಯವಾಗುತ್ತದೆ..........> ಕುತೂಹಲಕರವಾದ ವಿವರಣೆ. ಆದರೆ ನನಗೆ ತಿಳಿದಿರುವಂತೆ ರಾಮರಕ್ಷ ಸ್ತೋತ್ರದಲ್ಲಿ ರಾಮನ ವರ್ಣನೆ ಹಣೆಯಿಂದ ಪ್ರಾರಂಬಿಸಿ ಪಾದದ ವರೆಗು ಮುಂದುವರೆಯುತ್ತದೆ, ವಾದಕ್ಕೆ ಕೇಳುತ್ತಿಲ್ಲ, ಕುತೂಹಲಕ್ಕೆ ಅಷ್ಟೆ.

Submitted by makara Wed, 05/01/2013 - 15:04

In reply to by partha1059

ಪಾರ್ಥರೆ,
ನೀವು ಪ್ರಸ್ತಾಪಿಸಿರುವ ವಿಷಯ ನಿಜಕ್ಕೂ ಕುತೂಹಲಕರವಾಗಿದೆ. ಈ ಪ್ರಶ್ನೆಯನ್ನು ಲಲಿತಾ ಸಹಸ್ರನಾಮದ ಮೂಲ ವ್ಯಾಖ್ಯಾನಕಾರರಾದ ಶ್ರೀಯುತ ವಿ. ರವಿಯರವರಿಗೆ ಕಳುಹಿಸುತ್ತಿದ್ದೇನೆ. ನೋಡೋಣ ಅವರಿಂದ ಏನು ಉತ್ತರ ಬರುತ್ತದೆಯೋ ಎಂದು. ೧೩ನೇ ನಾಮದಲ್ಲಿ ಪ್ರಸ್ತಾಪಿತವಾಗಿರುವ ವಲ ಎನ್ನುವವನ ವಿವರಗಳನ್ನು ಕೇಳಿದಾಗ ಅವರು ಕೂಡಲೇ ಕೆಳಗಿನ ಕೊಂಡಿಯನ್ನು ಕಳುಹಿಸಿ ಕೊಟ್ಟರು. http://en.wikipedia.org/wiki/Vala_(Vedic) ಅದರ ಪ್ರಕಾರ ಅವನು ಗೋವುಗಳನ್ನು ಅಪಹರಿಸಿದ ರಾಕ್ಷಸ; ಅವನಿಂದ ಸಾವಿರಾರು ಗೋವುಗಳನ್ನು ಇಂದ್ರನು ಬಿಡುಗಡೆಗೊಳಿಸುತ್ತಾನೆ; ಆದ್ದರಿಂದ ಅವನು ವಲನ ಶತ್ರುವಾಗಿದ್ದಾನೆ. ಆದ್ದರಿಂದ ಗುರುಗಳಿಂದ ಖಂಡಿತಾ ಉತ್ತರ ಬರುತ್ತದೆ.

Submitted by makara Thu, 05/02/2013 - 08:23

In reply to by makara

ಪಾರ್ಥರೆ,
ನಿಮ್ಮ ಪ್ರಶ್ನೆಗೆ ಉತ್ತರವನ್ನು ಗುರೂಜಿ, ಶ್ರೀಯುತ ವಿ. ರವಿಯವರು ಕೊಟ್ಟಿರುತ್ತಾರೆ.
"ಮೂರು ವಿಧವಾದ ಪೂಜೆಗಳನ್ನು ಶಾಸ್ತ್ರಗಳು ವಿಧಿಸುತ್ತವೆ. ಮೊದಲನೆಯದು ಶಕ್ತಿಗೆ ತಂತ್ರ ಅದರ ಪ್ರಕಾರ ಆಕೆಯ ವರ್ಣನೆಯು ಕೇಶಾದಿ-ಪಾದಾಂತ (ಮುಡಿಯಿಂದ ಅಡಿಯವರೆಗೆ) ಇರುತ್ತದೆ. ಎರಡನೆಯದು ಶಿವನಿಗೆ ಆಗಮ, ಅದರಲ್ಲಿ ಯಾವುದೇ ವಿಧವಾದ ಸ್ಪಷ್ಟ ಆದೇಶವಿಲ್ಲ ಆದುದರಿಂದ ಎರಡೂ ವಿಧವಾದ ವಿವರಣೆಗಳು ಸಲ್ಲುತ್ತವೆ. ಮೂರನೆಯದು ವಿಷ್ಣುವಿಗೆ ಸಂಹಿತಾ; ಅದರ ಪ್ರಕಾರ ಅವನ ಪೂಜೆಯು ಪಾದದಿಂದ ತಲೆಯವರೆಗೆ ಮಾಡಬೇಕು. ಇದು ಸಾಮಾನ್ಯ ನಿಯಮ. ಆದರೆ ಇವಕ್ಕೆ ಕೆಲವು ಅಪವಾದಗಳಿವೆ ಮತ್ತು ಅದು ಬಹುತೇಕ ಸ್ತೋತ್ರಗಳನ್ನು ರಚಿಸುವ ಕರ್ತೃವಿನ ಮೇಲೆ ಅವಲಂಬಿಸಿದೆ". ಅವರ ಮೂಲ ಉತ್ತರವು ಹೀಗಿದೆ:
There are three types of worships prescribed by śāstra-s. First one is Tantra for Śakti, where Her description begins from head to foot - keśādi pādānta. Second is Āgama for Śiva, where no specific description is given; hence both are accepted. Third one is Saṁhitā for Vishnu in which it is said that He should be worshiped from foot to head. This is a general rule. However there are exceptions and it mostly depends upon the original composer of the hymns.

ನಿಮ್ಮ ಪ್ರಶ್ನೆಯಿಂದ ನನಗೂ ಹೊಸ ವಿಚಾರಗಳನ್ನು ತಿಳಿದುಕೊಂಡಂತಾಯಿತು. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by partha1059 Thu, 05/02/2013 - 10:23

In reply to by makara

ಮಕರರವರೆ ಉತ್ತರವನ್ನು ಹುಡುಕಿ ಕೊಡುವ‌ ಶ್ರಮತೆಗೆದುಕೊ0ಡ‌ ತಮಗು ಹಾಗು ತರ್ಕ‌ ಬದ್ದ ಉತ್ತರ‌ ನೀಡಿದ‌ ಶ್ರೀಯುತ‌ ವಿ. ರವಿರವರಿಗೂ ನನ್ನ ವ0ದನೆಗಳು. ತಮ್ಮ ಲಲಿತ‌ ಸಹಸ್ರನಾಮದ‌ ವಿವರಣೆ ಮು0ದುವರೆಯಲಿ

Submitted by makara Thu, 05/02/2013 - 19:05

In reply to by partha1059

ಪಾರ್ಥರೆ,
ಶ್ರೀಯುತ ರವಿಯವರು ಹೇಳಿದ ಮೇಲೆಯೂ ನನಗೆ ಶ್ರೀ ರಾಮರಕ್ಷಾ ಸ್ತೋತ್ರದ ಬಗ್ಗೆ ಇನ್ನಷ್ಟು ಕುತೂಹಲ ಕೆರಳಿ ನನ್ನ ಬಳಿಯಿದ್ದ ಡಿವೈನ್ ಪಾರ್ಕ್, ಸಾಲಿಗ್ರಾಮ ಇವರು ಪ್ರಕಟಿಸಿರುವ ಶ್ರೀ ರಾಮರಕ್ಷಾ ಸ್ತೋತ್ರ ಪುಸ್ತಕವನ್ನು ತಿರುವಿ ಹಾಕಿದೆ. ಅದರ ಮುನ್ನುಡಿಯನ್ನು ಓದುತ್ತಿದ್ದಾಗ, ಅದರ ಪ್ರಕಾರ ಬುಧಕೌಶಿಕ ಋಷಿ (ಬುದ್ಧ ಭಗವಾನನು) ೧೫೦೦ವರ್ಷಗಳ ಹಿಂದೆ ತನ್ನ ನಖಶಿಖಾಂತ ದುರ್ಬಲವಾದ ದೇಹದ ಕುರಿತಾಗಿ ಶಿವನ ಧ್ಯಾನ ಮಾಡಿದನಂತೆ; ಆಗ ಶಿವನು ಅವನಿಗೆ ಜೀವಮಾನವೆಲ್ಲಾ ಕಷ್ಟವನ್ನೇ ಅನುಭವಿಸಿದ ರಾಮನ ಕುರಿತಾಗಿ ಚಿಂತಿಸಲು ಹೇಳಿದನಂತೆ; ಆಗ ಅವನ ಕುರಿತಾಗಿ ಚಿಂತಿಸಿದಾಗ ರಾಮನು ಇವನಿಗೆ ಶಿವರಾಮನ ರೂಪದಲ್ಲಿ ಕಾಣಿಸಿಕೊಂಡನಂತೆ. ಅದರ ಹುಮ್ಮಸ್ಸಿನಿಂದ ಇವರು ಸೀತಾ ಲಕ್ಷ್ಮಣ ಹನುಮತ್ಸಮೇತನಾದ ಶಿವನಂತೆ ಜಟಾಧಾರಿಯಾದ ರಾಮನ ವರ್ಣನೆಯನ್ನು ಮಾಡಿ ತನ್ನ ಕಷ್ಟಕ್ಕೆ ಪರಿಹಾರ ಕಂಡುಕೊಂಡರಂತೆ. ಇದಕ್ಕೆ ಶಿವನ ಒಪ್ಪಿಗೆಯೂ ದೊರೆಯಿತಂತೆ. ಅದೇ ಮುಂದೆ ಶ್ರೀರಾಮರಕ್ಷಾ ಸ್ತೋತ್ರವಾಗಿ ಪ್ರಸಿದ್ಧಿ ಹೊಂದಿತಂತೆ. ಬುಧ ಕೌಶಿಕ ಋಷಿಯು ರಾಮನನ್ನು ಶಿವನ ರೂಪದಲ್ಲಿ ನೋಡಿದ್ದರಿಂದ ರಾಮನ ವರ್ಣನೆಯನ್ನು ಶಿವನನ್ನು ವರ್ಣಿಸುವ ಧಾಟಿಯಲ್ಲೇ ಮಾಡಿದ್ದಾರೆ. ನಿಮ್ಮ ಒಂದು ಪ್ರಶ್ನೆಯಿಂದ ಇಷ್ಟೆಲ್ಲಾ ವಿಷಯಗಳು ತಿಳಿದುಕೊಳ್ಳುವಂತಾಯಿತು. ಅದಕ್ಕಾಗಿ ನಿಮಗೆ ಮತ್ತೊಮ್ಮೆ ಧನ್ಯವಾದಗಳು ಪಾರ್ಥರೆ.

Submitted by partha1059 Fri, 05/03/2013 - 08:52

In reply to by makara

ಮಕರರವರೆ ನಿಮ್ಮ ವಿವರಣಯು ಹೊಂದುತ್ತದೆ ಆದರೆ ಶ್ರೀ ರವಿಯವರು ಹೇಳಿರುವ ಮಾತು ಹೆಚ್ಚು ಸರಿ ಅಂದರೆ ರಚನಕಾರರು ಅವರ ಮನೋಧರ್ಮಕ್ಕೆ ಅನುಸಾರ ರಚಿಸಿದ್ದಾರೆ, ಮತ್ತೊಂದು ಉದಾಹರಣೆ ನರಸಿಂಹ ಕವಚ ಕೊಡುತ್ತಿರುವೆ ನೋಡಿ ನಿಮ್ಮ ಕಂಪ್ಯೂಟರನಲ್ಲಿ ಓಪನ್ ಆಗುವುದು ಇಲ್ಲವೊ ನನಗೆ ತಿಳಿಯದು , ಈ ಲಿಂಕ್ ಪ್ರಯತ್ನಿಸಿ .. ನರಸಿಂಹ ಕವಚ

Submitted by makara Fri, 05/03/2013 - 20:48

In reply to by partha1059

ಪಾರ್ಥ ಅವರೆ,
ನೀವು ಕಳುಹಿಸಿರುವ ನರಸಿಂಹ ಕವಚ ನನ್ನ ಬ್ರೌಸರಿನಲ್ಲಿ ಓಪನ್ ಆಗುತ್ತಿದೆ. ಅದನ್ನು ಓದಿದ ಮೇಲೆ ನಿಮ್ಮ ಆಭಿಪ್ರಾಯ ಸರಿಯೆನಿಸಿತು; ಅದೇನೆಂದರೆ ಕಾವ್ಯವನ್ನು ಬರೆಯುವ ರಚನಕಾರರ ಮೇಲೆ ದೇವರ ವರ್ಣನೆಯನ್ನು ಮೇಲಿನಿಂದ ಅಥವಾ ಕೆಳಗೆ ಮಾಡುವುದು ಅವಲಂಬಿಸಿರುತ್ತದೆ. ನರಸಿಂಹ ಕವಚದಲ್ಲಿ ಪ್ರಾರಂಭದಲ್ಲಿ ದೇವರು ಸಿಂಹಾಸನದ ಮೇಲೆ ಆಸೀನನಾಗಿ ಲಕ್ಷ್ಮೀ ಸಮೇತ ಕುಳಿತಿರುವುದರ ವಿವರಣೆಯನ್ನು ನೋಡಿದರೆ ಇದು ಸಾಮಾನ್ಯ ನಿಯಮಕ್ಕೆ ಹೊರತಲ್ಲವೇನೋ ಎನಿಸುತ್ತದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Sun, 01/26/2014 - 14:44

ಶ್ರೀಧರರೆ ಬಿಟ್ಟು ಹೋಗಿದ್ದ ಗುಂಪಿನಲ್ಲಿ, ಹನ್ನೆರಡನೆ ಕಂತಿನ ಕಾವ್ಯವನ್ನು ಸೇರಿಸುತ್ತಿದ್ದೇನೆ :-)
.
೦೦೧೨. ಲಲಿತಾ ಸಹಸ್ರನಾಮ ೧೨ರಿಂದ ೧೮ರವರೆಗಿನ ವಿವರಣೆ
.
ಲಲಿತಾ ಸಹಸ್ರನಾಮ ೧೨ ರಿಂದ ೧೮ 
________________________________________
.
೧೨. ನಿಜಾರುಣ-ಪ್ರಭಾ-ಪೂರ-ಮಜ್ಜದ್-ಬ್ರಹ್ಮಾಂಡ-ಮಂಡಲಾ
ಭೌತಿಕ ಪ್ರಪಂಚ ಪೂರ ರೋಹಿತ ಕಿರಣಗಳ ಅಪಾರ
ದೇವಿ ಹೊಮ್ಮಿಸುವ ಮೈಕಾಂತಿ ಜಳ ತುಂಬಿದ ಸಾರ
ಕೆಂಗುಲಾಬಿ ಅರುಣೋದಯ ಕಂಗೊಳಿಸೆ ಕಿರಣವಾಗಿ
ವಾಗ್ಭವಕೂಟ ಮುಡಿಯಿಂದಡಿ ವರ್ಣನೆ ಭೌತಿಕವಾಗಿ ||
.
೧೩. ಚಂಪಕಾಶೋಕ-ಪುನ್ನಾಗ- ಸೌಗಂಧಿಕ-ಲಸತ್-ಕಚಾ
ಭ್ರಮೆಗೊಡ್ಡೊ ಅಂತಃಕರಣಾಂಶ ಅಹಂಕಾರಾ ಚಿತ್ತ ಬುದ್ದಿ ಮನಸೆ
ಸೌಗಂಧಿಕ ಪುನ್ನಾಗ ಚಂಪಕಾಶೋಕ ಮುಡಿ ಹೂವಾಗಿ ಪ್ರತಿನಿಧಿಸೆ
ಮಧುರ ಗಂಧವಾಘ್ರಾಣಿಸುತ ದೇವಿ ಪರಿಮಳ ಹಡೆಯುವ ಪುಷ್ಪ
ಅಜ್ಞಾನವಟ್ಟಿ ಕರುಣಾಕೇಶಿ ಮಾತೆ ಮೃದುಲ ನೀಲಕಮಲಸ್ವರೂಪ ||
.
೧೪. ಕುರುವಿಂದ-ಮಣಿಶ್ರೇಣೀ-ಕನತ್-ಕೋಟೀರ-ಮಂಡಿತಾ
ಲಲಿತಾ ಸೋದರ ವಿಷ್ಣುಭಕ್ತಿ ಐಶ್ವರ್ಯ ಪ್ರೇಮಕೆ ಕುರುವಿಂದ ಮಣಿ
ಉಜ್ವಲ ಕೆಂಪಲಿ ಕಿರೀಟದೆ ರಾರಾಜಿಸಿ ದೇವಿಯಲಂಕರಿಸುವ ಗಣಿ
ಲೌಕಿಕಾಧ್ಯಾತ್ಮಿಕ ಉನ್ನತಿಗೆ ಧ್ಯಾನಿಸೆ ದ್ವಾದಶಾದಿತ್ಯಖಚಿತ ಕಿರೀಟೆ
ಸುವರ್ಣ ಮಾಣಿಕ್ಯ ಪ್ರಭೆಯಡಿ ಧ್ಯಾನಾಸಕ್ತನ ರತ್ನವಾಗಿಸೊ ಲಲಿತೆ ||
.
೧೫. ಅಷ್ಟಮೀ-ಚಂದ್ರ-ವಿಬ್ರಾಜ-ಧಲಿಕ-ಸ್ಥಲ-ಶೋಭಿತಾ 
ಅಷ್ಟಮಿ ದಿನದ ಚಂದಿರ ಕಾಣುವನೆಷ್ಟು ಸುಂದರ
ಡೊಂಕಿನತುದಿ ಬಾಗಿಸಿದ ಬಿಲ್ಲಾಗಿಸಿದ ಸರದಾರ
ಬಂತೆಲ್ಲವನಿಗೆ ಸ್ಪೂರ್ತಿ ದೇವಿ ಲಲಿತೆಯದಾ ರೀತಿ
ಸುಂದರ ಮುಂದಲೆಯನುಕರಿಸಿ ಆ ದಿನವಷ್ಟೆ ಕೀರ್ತಿ ||
.
೧೬. ಮುಖಚಂದ್ರ-ಕಲಂಕಾಭ-ಮೃಗನಾಭಿ-ವಿಶೇಷಕಾ
ಪರಿಮಳಯುಕ್ತ ದ್ರವ್ಯ ಕಸ್ತೂರಿಯ ಸುವಾಸನೆಯ ಸೊಗ
ಪೌರ್ಣಿಮೆ ಚಂದ್ರನ ಮುಖಕೆ ಅರ್ಧಚಂದ್ರ ಕಸ್ತೂರಿ ತಿಲಕ
ಲೇಪಿಸಿ ಪರಿಮಳಿಸೊ ದೇವಿ ಚಂದ್ರಮುಖಿಯಲರ್ಧಚಂದ್ರ
ನೋಡುತ ದೇವಿಯ ಮೊಗವನೆ ಹುಣ್ಣಿಮೆಗೆ ಪೂರ್ಣಚಂದ್ರ ||
.
೧೭. ವದನಸ್ಮರ-ಮಾಙ್ಗಲ್ಯ-ಗೃಹತೋರಣ-ಚಿಲ್ಲಿಕಾ 
ತನ್ಮಯನಾದನೆ ಮನ್ಮಥ ದೇವಿ ಹುಬ್ಬು ನೋಡಲನವರತ
ನಕಲು ಮಾಡಿದಾ ತೋರಣ ಕಾಮನರಮನೆಯಲಿ ನಗುತ
ದೇವಿ ಮುಖಮಂಡಲವನ್ನೆ ಅಂಗಜನರಮನೆ ಅನುಕರಿಸುತ್ತ
ಲಲಿತೆ ಮಂಗಳಕರ ವದನ ಕಾವನಂತಃಪುರದಲಂತರ್ಗತ ||
.
೧೮. ವಕ್ತ್ರ-ಲಕ್ಷ್ಮೀ-ಪರೀವಾಹ-ಚಲನ್-ಮೀನಾಭ-ಲೋಚನಾ 
ನಯನಮನೋಹರ ನಯನ ಮೀನಾಗಿಹ ಕೊಳ ವದನ
ಮೀನಂತೆ ತ್ವರಿತಗತಿಯೆ ಚಲಿಸೆ ಬ್ರಹ್ಮಾಂಡದೆಲ್ಲಾ ತಾಣ
ಕೃಪಾ ದೃಷ್ಟಿಯಲೆ ಮಾತೆ ಈ ಜಗವನೆಲ್ಲಾ ಪೋಷಿಸುತೆ
ಮೀನಾಕ್ಷಿ ಮೀನಲೋಚನೆ ಸುಂದರ ಕಣ್ಣಲೆ ಸಲಹುವಂತೆ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು