ಹೌದು ಸ್ವಾಮಿ ಎಲ್ಲಾ TRPಗಾಗಿ......

ಹೌದು ಸ್ವಾಮಿ ಎಲ್ಲಾ TRPಗಾಗಿ......

ಇಂದಿನ ದಿನಗಳಲ್ಲಿ ಯಾವುದೇ ಚಾನೆಲ್ ತಿರುಗಿಸಿದರೂ ಒಂದಲ್ಲ ಒಂದು ರಿಯಾಲಿಟಿ ಶೋ ಇದ್ದೇ ಇರುತ್ತದೆ. ವಾಸ್ತವದ ಲೇಶಮಾತ್ರದ ನೆರಳು ಇಲ್ಲದ ಕಾರ್ಯಕ್ರಮಗಳು. ಮನೋರಂಜನೆಯ ಹೆಸರಿನಲ್ಲಿ ಮಾಧ್ಯಮಗಳು ನಡೆಸುತ್ತಿರುವ ರಿಯಾಲಿಟಿ ಶೋಗಳು ಆರಿಸಿಕೊಳ್ಳುತ್ತಿರುವ ವಸ್ತುಗಳು ಆತಂಕ ಹುಟ್ಟಿಸುವಂತಿವೆ. ಪ್ರತಿಭೆಯ ಶೋಧದ ಹೆಸರಿನಲ್ಲಿ ನಡೆಸಲಾಗುತ್ತಿರುವ ಶೋಗಳಂತೂ ಪ್ರತಿಯೊಬ್ಬನೂ ನಿನ್ನ ಸ್ಪರ್ಧಿಯೇ ನೀನು ಗೆದ್ದಲ್ಲದೆ ನಿನಗೆ ಉಳಿವಿಲ್ಲ ಎಂಬುದನ್ನು ಎಳೆಯ ಮಕ್ಕಳಲ್ಲಿ ಬಿತ್ತಿ ಸಹಜವಾಗಿ ಅರಳಬಹುದಿದ್ದ ಅವರ ಹೂಮನಸುಗಳಲ್ಲಿ ಸದಾ ಗೆಲ್ಲಲೇಬೇಕೆಂಬ ಹಪಾಹಪಿ ಉಂಟುಮಾಡಿ ತಲ್ಲಣದಲ್ಲಿ ದಿನದೂಡುವಂತೆ ಮಾಡಿದೆ. ಇನ್ನು ಕೆಲವು ಶೋಗಳು ವ್ಯಕ್ತಿಗಳ ಮುಗ್ಧತೆ, ಅಸಹಾಯಕತೆ, ಅಮಾಯಕತೆಯನ್ನೇ ಬಂಡವಾಳವಾಗಿಸಿಕೊಂಡಿವೆ. ವ್ಯಕ್ತಿಯ ಖಾಸಗಿ ಬದುಕನ್ನು ಬಟಾಬಯಲಲ್ಲಿ ತಂದಿಟ್ಟು ಹಣ ಮಾಡುತ್ತಿರುವ ಚಾನೆಲ್ಲುಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನೇ ಮರೆತಿವೆ. ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದರೂ ಕೂಡ ಏನೂ ಉಪಯೋಗವಾಗಿಲ್ಲ.

ಮಾನವೀಯತೆಯನ್ನೇ ಕಳೆದುಕೊಂಡಿರುವ ಕೇವಲ TRPಯಷ್ಟೇ ಮುಖ್ಯವಾಗಿರುವ ಚಾನೆಲ್‍ಗೆ ಸ್ವಸ್ಥ-ಅಸ್ವಸ್ಥ ವ್ಯಕ್ತಿಗಳೆಲ್ಲರೂ ಕೇವಲ ಸರಕುಗಳಾಗಿ ಬಿಟ್ಟಿರುವುದು ಇಂದಿನ ದುರಂತ. ಒಂದು ರಿಯಾಲಿಟಿ ಶೋನಿಂದ ಬದುಕನ್ನೇ ಕಳೆದುಕೊಂಡ ಹುಡುಗ ಮತ್ತೊಂದು ಚಾನೆಲ್ಲಿನ ಮತ್ತೊಂದು ಶೋಗೆ ವಸ್ತುವಾಗಿಬಿಡುತ್ತಾನೆ. ಇತ್ತೀಚೆಗೆ ಆರಂಭವಾಗಿರುವ ಬಿಗ್‍ ಬಾಸ್‍ ಕಾರ್ಯಕ್ರಮ ಭಾರಿ ಜನಪ್ರಿಯತೆ ಗಳಿಸುತ್ತಿದೆ. “ಇದು ನಿಜಕ್ಕೂ ಅಷ್ಟೊಂದು ಒಳ್ಳೆಯ ಕಾರ್ಯಕ್ರಮವೇ?” ಎಂಬ ಪ್ರಶ್ನೆ ನೋಡಿದ ನಂತರ ಕಾಡದೆ ಇರದು. ಒಂದು ಮನೆಯಲ್ಲಿ ಸೇರಲ್ಪಟ್ಟ ವ್ಯಕ್ತಿಗಳ ನಡುವಿನ ಜಗಳಗಳನ್ನು, ಭಿನ್ನಾಭಿಪ್ರಾಯಗಳನ್ನು ಹೈಲೈಟ್‍ ಮಾಡುವುದು,  ಟಾಸ್ಕ್‍ನ ಹೆಸರಿನಲ್ಲಿ ಇಲ್ಲಿ ನಡೆಯುವ ಹುಚ್ಚಾಟಗಳು ಅರ್ಥಹೀನವಾಗಿವೆ. ಮನೆಯಲ್ಲಿ ಎಲ್ಲೆಡೆ ಅಳವಡಿಸಿರುವ ಕ್ಯಾಮೆರಾಗಳ ಮೂಲಕ ಅಲ್ಲಿನ ಚಲನವಲನಗಳನ್ನು ರೆಕಾರ್ಡ್ ಮಾಡಿಕೊಂಡು ಪ್ರೇಕ್ಷಕರ ಮುಂದಿಡುವುದು. ಅವರೇ ಹೇಳುವಂತೆ ಬಿಗ್‍ ಬಾಸ್‍ ಕಣ್ಣು ತಪ್ಪಿಸಿ ಅಲ್ಲೇನು ನಡೆಯುವುದಿಲ್ಲ. ಹಾಗೆ ಮುಂದಿಡುವುದಾದರೂ ಏನನ್ನು ವ್ಯಕ್ತಿಗಳ ನಡುವಿನ ಖಾಸಗಿ ಸಂಭಾಷಣೆಗಳನ್ನು ಪರಸ್ಪರರ ಮೇಲಿನ ಭಿನ್ನಾಭಿಪ್ರಾಯಗಳನ್ನು ಜಗಳಗಳನ್ನು ಇದರ ಮೂಲಕ ಪ್ರೇಕ್ಷಕ ಪ್ರಭುವಿಗೆ ಉಣಬಡಿಸುತ್ತಿರುವುದಾದರೂ ಏನು? ಆ ಮನೆಯಿಂದ ವಾರಕ್ಕೆ ಒಬ್ಬರಂತೆ ಒಬ್ಬರನ್ನು ಹೊರಕಳಿಸಲು ನಾಮಿನೇಷನ್ ಎಂಬ ನಾಟಕ ನಾಮಿನೇಟ್‍ ಆದ ವ್ಯಕ್ತಿ ಮನೆಯಲ್ಲಿ ಉಳಿಯಬೇಕೆ ಹಾಗಿದ್ದರೆ ಪ್ರೇಕ್ಷಕರೇ ಅವರಿಗೆ sms ಮೂಲಕ ಓಟ್‍ ಮಾಡಿ ಎಂಬ ಮಂತ್ರ ಪಠಣ. ಮನೆಯಿಂದ ಹೊರಬಂದ ವ್ಯಕ್ತಿಯನ್ನು ಕಟಕಟೆಯಲ್ಲಿ ನಿಲ್ಲಿಸಿ ಅವನನ್ನು ವಿಚಾರಣೆಗೆ ಒಳಪಡಿಸುವುದು ಅವನ ಬಗ್ಗೆ ಇತರರು ನೀಡಿದ ಅಭಿಪ್ರಾಯಗಳನ್ನು ಆಡಿದ ಮಾತುಗಳನ್ನು ಅವರಿಗೆ ತೋರಿಸುವುದು ಇದರಿಂದ ಆ ವ್ಯಕ್ತಿಗಳ ನಡುವಿನ ಸಂಬಂಧಗಳು ಹೇಗೆ ಪ್ರಭಾವಿತವಾಗಬಹುದು? ಇವುಗಳನ್ನು ನೋಡಿ ಆನಂದಿಸುವ ಮನಸ್ಸುಗಳು ಎಂಥದ್ದು?

ಕೇವಲ TRPಗಾಗಿ ಮನುಷ್ಯರನ್ನು ಹೀಗೆ ಸರಕಾಗಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಜಂಗಲ್‍ ಜಾಕಿ ರಾಜೇಶನ ಬದುಕು ಈಗಾಗಲೇ ತಾಳತಪ್ಪಿ ನಿಂತಿದೆ. ಅಂತಹವನು ಇವರಿಗೆ ಆಟಕ್ಕೆ ಬೇಕಿತ್ತೆ? ಆ ಮನೆಗೆ ಬರಬೇಕಿದ್ದ 13 ಮಂದಿಯಲ್ಲಿ ಮೊದಲಿಗೆ ಅವನು ಸೇರಿದ್ದ. ಆದರೆ ಕಾರ್ಯಕ್ರಮ ಆರಂಭಕ್ಕೆ ಮುನ್ನವೇ ಮತ್ತೆ ಅಸ್ವಸ್ಥನಾದ. ಆಗಲಾದರೂ ಅವನ ಪರಿಸ್ಥಿತಿ ಅರ್ಥಮಾಡಿಕೊಂಡು ಅವನ ಪಾಡಿಗೆ ಬಿಡಬಹುದಿತ್ತು. ಆದರೆ ಹೇಗೆ ಸಾಧ್ಯ? ಹೌದು ಸ್ವಾಮಿ ಎಲ್ಲ TRPಗಾಗಿ!! ಪ್ರತಿವಾರದಂತೆ ಮನೆಯಲ್ಲಿರುವವರಿಗೆ ಆ ವಾರದ ಟಾಸ್ಕ್‍ ಹುಚ್ಚರು ಮತ್ತು ಡಾಕ್ಟರ್‍ಗಳಾಗಿ ನಟಿಸುವುದು. ಅವರು ಹಾಗೆ ನಟಿಸುವಾಗಲೇ ಮನೆಯೊಳಗೆ ರಾಜೇಶನ ಎಂಟ್ರಿ! ಎಂತಹ ಕ್ರೂರ ಮನಸ್ಸಿನ ಆಲೋಚನೆ! ಮಾನಸಿಕ ಸ್ವಾಸ್ಥ್ಯಗಳಿಸಿಕೊಳ್ಳಲು ಹೆಣಗುತ್ತಿರುವ ವ್ಯಕ್ತಿಯನ್ನು ಇಂತಹ ಸನ್ನೀವೇಶದ ಮುಖಾಮುಖಿಯಾಗಿಸುವುದು ಯಾವ ಪರಿಯ ಮನೋರಂಜನೆ?? ರಾಜೇಶ್‍ ಮಗುವಿನ ಹಾಗೆ ಎರಡು ದಿನಗಳ ಅತಿಥಿ ಮಾತ್ರ ಎಂದು ಆಮೇಲೇ ಬಿಗ್‍ಬಾಸ್‍ ವೇದಿಕೆಯಿಂದ ಘೋಷಣೆ! ಇಡೀ ಎಪಿಸೋಡ್‍ನಲ್ಲಿ ಕಂಡ ರಾಜೇಶನ ಉಡುಪಿನಿಂದ ಮೊದಲುಗೊಂಡು ಮಾತಿನವರೆಗೆ ಎಲ್ಲವೂ ಪೂರ್ವನಿರ್ಧಾರಿತ ಎಂದು ನೋಡಿದವರಿಗೆ ಸುಲಭವಾಗಿ ತಿಳಿಯುವಂತಿತ್ತು. ಈ ಕಾರ್ಯಕ್ರಮದ ರಿಯಾಲಿಟಿ ಎಷ್ಟರಮಟ್ಟಿಗೆ ಸತ್ಯವಾದದ್ದು ಎಂಬುದನ್ನು ಗಮನಿಸಿದರೆ ಸಾಕು ತಿಳಿದು ಹೋಗುತ್ತದೆ.  ಇಂತಹ ಮನೋರಂಜನೆ ಬೇಕಾ? ಹಣಕ್ಕಾಗಿ ಇಲ್ಲಿ ಎಲ್ಲವೂ ಎಲ್ಲರೂ ಮಾರಟವಾಗಿದೆಯೇ? ಒಂದೆಡೆ ಈ ಕಾರ್ಯಕ್ರಮ ನಡೆಯುತ್ತಿದ್ದರೆ ಮತ್ತೊಂದೆಡೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ವಿವಾದಾಸ್ಪದ ವ್ಯಕ್ತಿಗಳ ಬಗ್ಗೆ ಕಾರ್ಯಕ್ರಮ ರೂಪಿಸಿ ತಮ್ಮ ಚಾನೆಲ್‍ಗಳ ಟಿಆರ್‍ಪಿ ಹೆಚ್ಚಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಇಂತಹ ಅಭಿರುಚಿಹೀನ ಕಾರ್ಯಕ್ರಗಳಿಂದ ಮಾಧ್ಯಮಗಳು ಸಮಾಜಕ್ಕೆ ನೀಡುತ್ತಿರುವುದಾದರೂ ಏನು? ಮನೋರಂಜನೆಯ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವವರು ಯಾರು? 

Comments

Submitted by lpitnal@gmail.com Tue, 04/30/2013 - 20:35

ಹೇಮಾ ಹೆಬ್ಬಗೋಡಿಯವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಾವು ಸರಿಯಾದ ಸಮಯದಲ್ಲಿ, ಇಂತಹ ಸುಳ್ಳು ಸಂಸ್ಕೃತಿಯನ್ನು ಬಿತ್ತುವ ಚಾನಲ್ ಗಳ ಕುರಿತು ಸಮಾಜಮುಖಿ ಚಿಂತನೆಯೊಂದಿಗೆ ಯೋಚಿಸಿ ಬರೆದ ವಿಚಾರ ಸ್ತುತ್ಯಾರ್ಹ. ನಮಗೆ ಏನು ಬೇಕು ಎಂದು ನಿರ್ಧರಿಸುವವರು ನಾವಾಗುವವರೆಗೆ ಈ ರೀತಿ ಪ್ರಹಸನಗಳು ನಡದೇ ಇರುತ್ತವೆ ಎನಿಸುತ್ತದೆ, ಉತ್ತಮ ಚಿಂತನಶೀಲ ವಿಚಾರ ಹಂಚಿಕೊಂಡಿದ್ದಕ್ಕೆ ಹೇಮಾಜಿ ಧನ್ಯವಾದಗಳು