ನಮ್ಮ ದೇಶದ ಅಧೋಮುಖ ಪಯಣ
ನಾವು ಅಂಜುತ್ತಿದ್ದೇವೆ. ಅವರು ಅಂಜಿಸುತ್ತಿದ್ದಾರೆ. ನಾವು ನಮ್ಮ ಅಂಜಿಕೆಯಿಂದ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸುತ್ತಿದ್ದೇವೆ. ಅವರು ಸಮಸ್ಯೆಯನ್ನು ಗುರುತಿಸುತ್ತಲೇ ಇಲ್ಲ. ಅದನ್ನು ಗುರುತಿಸುವುದು ಅವರಿಗೆ ಬೇಕಾಗಿಯೂ ಇಲ್ಲ. ನಮ್ಮ ರಾಜಕಾರಣಿಗಳು ಹೆದರಿ ಗುಬ್ಬಚ್ಚಿಯಂತೆ ಮುದುಡುತ್ತಿದ್ದರೆ, ಅವರು ಬಂದೂಕಿನ ನಳಿಕೆಯನ್ನು ಮುಂದೆ ಮಾಡಿ ಹೆದರಿಸುತ್ತಲೇ ಮುಂದೆ ಮುಂದೆ ಬರುತ್ತಿದ್ದಾರೆ. ಹಗರಣಗಳ ಸುಳಿಯಲ್ಲಿ ಸಿಲುಕಿದ ನಮ್ಮ ನೇತಾರರೆಲ್ಲರೂ ಮುಂಬರುವ ಚುನಾವಣೆಯಲ್ಲಿ ತಮ್ಮ ತಮ್ಮ ಸೀಟುಗಳನ್ನುಳಿಸಿಕೊಳ್ಳಲು ಎಲ್ಲ ತರಹದ ಸರ್ಕಸ್ ಮಾಡುತ್ತಿದ್ದಾರೆ. ಅಂತಹುದರಲ್ಲಿ, ಲಢಾಕ್ನಲ್ಲಿಯ ಚೀನದ ಇತ್ತೀಚಿನ ಅತಿಕ್ರಮಣದ ಮತ್ತು ಪಾಕಿಸ್ತಾನದಲ್ಲಿ ಸರಬ್ಜೀತ್ನ ಮೇಲಿನ ಹಲ್ಲೆ ಮತ್ತು ಕೊಲೆಯ ಬಗ್ಗೆ ಗಟ್ಟಿಯಾಗಿ ಮಾತನಾಡಲೂ ಹಿಂದೆಗೆಯುವ ನಮ್ಮ ನೇತಾರರು. ಜಿಗುಪ್ಸೆಗೊಂಡ ಜನಮಾನಸ. ಏಕೆ ನಾವು ಈ ಅಧೋಗತಿಯನ್ನು ತಲುಪಿದ್ದೇವೆ?
ಚೀನ ನಮ್ಮ ದೌರ್ಬಲ್ಯವನ್ನು ಚೆನ್ನಾಗಿ ಅರಿತಿದೆ. ಚೀನ ಅಷ್ಟೇ ಅಲ್ಲ. ನಮ್ಮ ಎಲ್ಲ ನೆರೆಯವರೂ ಕೂಡ. ಪಾಕಿಸ್ತಾನ ನಮ್ಮ ಎಲ್ಲ ಆತಂಕವಾದಿಗಳಿಗೆ ಯಾವುದೇ ಅಡೆತಡೆಯಿಲ್ಲದೇ ಎಲ್ಲ ತರಹದ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದಾರೆ. ನಮ್ಮ ವೀರ ಸೈನಿಕರ ಮೇಲೆ ಹೊಂಚು ಹಾಕಿ ಬೆನ್ನ ಹಿಂದಿನಿಂದ ಹಲ್ಲೆ ಮಾಡಿ ಕೊಲ್ಲುವುದಷ್ಟೇ ಅಲ್ಲ, ಅವರ ಮೃತ ಶರೀರಗಳನ್ನು ಅವಮಾನಿಸಿದಾಗ ಕೂಡ ನಮ್ಮ ರಾಜಕೀಯ ನೇತಾರರು ಒಣ ಗುಟುರು ಹಾಕುವ ಸೋಗು ಹಾಕುತ್ತಾರೆಯೇ ಹೊರತು ಯಾವುದೇ ಧೃಡ ನಿರ್ಧಾರ ಕೈಗೊಳ್ಳುವುದಿಲ್ಲ. ನಮ್ಮ ವಿದೇಶಾಂಗ ಇಲಾಖೆಯ ಬಾಬುಗಳು ಯಾವದೇ ಯುಕ್ತಿ ಅಥವಾ ತಂತ್ರಗಳನ್ನು ಕುರಿತು ಯೋಚಿಸುವಂತೆ ಕಾಣುತ್ತಿಲ್ಲ. ಗೃಹ ಖಾತೆಯವರು ಕೂಡ ಸೋತು ಕೈಚೆಲ್ಲಿದ್ದಾರೆ ಅನಿಸುತ್ತದೆ. ಎಂತಹ ಆಕ್ರಮಣಗಳೇ ಆಗಲಿ, ಆ ಆಕ್ರಮಣಗಳನ್ನು ಟಿ.ವಿ.ಯಲ್ಲಿ ಖಂಡಿಸಲಾಗುತ್ತದೆ. ನಂತರ ಆಪತ್ತಿಗೊಳಗಾದವರಿಗೆ ಪರಿಹಾರ ನೀಡುವ ಬಗ್ಗ ಘೋಷಣೆಯಾಗುತ್ತದೆ. ಸುದ್ದಿ ಮಾಧ್ಯಮಗಳಲ್ಲಿ ಅನೇಕ ಬಗೆಯ ಚರ್ಚೆಗಳಾಗುತ್ತವೆ. "ಮಾತುಕತೆ ಆಡಿ ಸಮಸ್ಯೆ ಬಗೆಹರಿಸಬಹುದು, ಹೆಚ್ಚಿನ ಆವೇಶಕ್ಕೊಳಗಾಗಬೇಡಿ" ಎಂಬ ಪುಕ್ಕಟೆ ಸಲಹೆ ಕೂಡ ದೊರೆಯುತ್ತದೆ ನಮ್ಮ ನೇತಾರರಿಂದ. ಏಕೆ ಹೀಗೆ?
ಎಲ್ಲಿಯೂ, ನಮ್ಮ ದೇಶದ ಶತ್ರುಗಳ ಗತಿವಿಧಿಗಳ ಬಗ್ಗೆ ಯಾವುದೇ ಆತಂಕ, ಅದಕ್ಕಾಗಿ ಏನಾದರೂ ಮಾಡಬೇಕೆಂಬ ಅಂತರಂಗದ ಇಚ್ಛೆ ನಮ್ಮ ನೇತಾರರಲ್ಲಿ ಎದ್ದುಕಾಣುವುದಿಲ್ಲ. ಟಿ,ವಿ ನ್ಯೂಸ್ ಚಾನೆಲ್ಲುಗಳಲ್ಲಿ ಸಾಮಾನ್ಯರು ಮತ್ತು ಪಂಡಿತರು ಎನೇ ಅರಚಾಡಿಕೊಂಡರೂ ನೇತಾರರ ಮೇಲೆ ಯಾವುದೇ ಪರಿಣಾಮ ಕಂಡು ಬರುವುದಿಲ್ಲ. ನಮ್ಮನ್ನು ಆಳುವ ಜನರ ಈ ದಿವ್ಯ ಮೌನದ ಹಿಂದೆ ಏನಿರಬಹುದು ಎಂಬುದು ತುಂಬಾ ರಹಸ್ಯಮಯವಾಗಿ ಕಾಣುತ್ತದೆ. ಜನಸಾಮಾನ್ಯರನ್ನು ಗಲಿಬಿಲಿಗೊಳಿಸುತ್ತದೆ. ಮುಖ್ಯವಾಗಿ ಸಮಸ್ಯೆಯ ಮೂಲವಿರುವುದು ಆಳುವ ವರ್ಗದ ಧೋರಣೆಯಲ್ಲಿ. ನಮ್ಮದು ಪ್ರಜಾಪ್ರಭುತ್ವ ಎಂಬುದನ್ನು ನಮ್ಮ ಆಳುವ ವರ್ಗದವರೆಲ್ಲರೂ ಒಣ ಘೋಷಣೆಯನ್ನಾಗಿ ಮಾಡಿದ್ದಾರೆಯೇ ಹೊರತು, ಅದನ್ನು ಸ್ವಲ್ಪವೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಯಾವದೇ ನೇತಾರನಾಗಲಿ, ಸರಕಾರೀ ನೌಕರನಾಗಲಿ, ಪೋಲಿಸಿನವರಾಗಲಿ ಜನರ ಕೆಲಸ ಮಾಡುವುದನ್ನು ಜನರ ಮೇಲೆ ಒಂದು ದೊಡ್ಡ ಉಪಕಾರ ಮಾಡುತ್ತಿರುವಂತೆ ತೋರಿಸುತ್ತಿದ್ದಾರೆಯೇ ಹೊರತು ತಮ್ಮ ಕರ್ತವ್ಯ, ಅದಕ್ಕಾಗಿ ತಮಗೆ ಸಂಬಳ, ಜನರ ತೆರಿಗೆಗಳ ಮೂಲಕ ದೊರೆಯುತ್ತಿದೆ ಎಂದು ಸ್ವಲ್ಪವೂ ಯೋಚಿಸುವುದಿಲ್ಲ. ತಮಗಿಂತ ದುರ್ಬಲ ಜನರನ್ನು ಲಂಚ ಕೊಡಿರೆಂದು ಪೀಡಿಸುವುದು, ಕೆಲಸ ಮಾಡದೇ ಅನೇಕ ಬಾರಿ ಓಡಾಡಿಸುವುದು, ಅಧಿಕಾರ ಚಲಾಯಿಸುವುದು, ದಬಾಯಿಸುವುದು ಮತ್ತಿತರ ಎಲ್ಲ ಕೆಟ್ಟ ಆಚರಣೆಗಳು ಈ ಮೂಲ ರೋಗದ ಲಕ್ಷಣಗಳಾಗಿವೆ. ಒಳ್ಳೇ ಶಿಕ್ಷಿತ ಅಧಿಕಾರಿಗಳೂ ಕೂಡ ವಿನಯ ಮತ್ತು ಸೇವಾಭಾವಗಳಿಗೆ ವಿಶ್ವವಿದ್ಯಾಲಯದ ಬಾಗಿಲಲ್ಲೇ ತರ್ಪಣ ಕೊಟ್ಟು ಬರುವಂತೆ ಕಾಣುತ್ತದೆ. ಇವರಿಗೆ ಪ್ರಜಾಪ್ರಭುತ್ವದ ಮೂಲ ಪಾಠವಾದ "ಜನ ಸೇವೆಯೇ ಜನಾರ್ಧನ ಸೇವೆ" ಎಂದು ಹೇಳಿ ಕೊಡುವರಾರು?
ಎಲ್ಲದರಲ್ಲಿಯೂ ತಮ್ಮ ಸ್ವಂತದ ಲಾಭದ ಬಗ್ಗೆ ಯೋಚಿಸುವ ನಮ್ಮ ಆಡಳಿತಗಾರದಿಗೆ ನಮ್ಮ ದೊಡ್ಡ ದೊಡ್ಡ ಸಮಸ್ಯೆಗಳು ತೀರ ಹಗುರಾಗಿ ಬಿಡುತ್ತವೆ. ಅನೇಕ ಹಗರಣಗಳು ತಲೆದೋರುತ್ತವೆ. ಹೀಗಾಗಿ ನೈತಿಕ ಅಧಃಪತನವನ್ನು ಕಂಡ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯನ್ನು ಬಗೆಹರಿಸುವ ಧೈರ್ಯ ಮತ್ತು ಛಲಗಳು ಸತ್ತು ಹೋಗಿರುವಂತೆ ಎದ್ದು ಕಾಣುತ್ತದೆ. ಇಂತಹುದರಲ್ಲಿ, ಚೀನದ ಅತಿಕ್ರಮಣವೇ ಆಗಲಿ, ಪಾಕಿಸ್ತಾನದ ದಾಳಿಗಳೇ ಆಗಲಿ, ಬಾಂಗ್ಲಾ ದೇಶೀಯರ ಅಕ್ರಮ ನುಸುಳುವಿಕೆಯ ಬಗ್ಗೆಯೇ ಆಗಲಿ, ನಕ್ಸಲೀಯರ ಗತಿವಿಧಿಗಳೇ ಆಗಲಿ, ಇಂತಹ ಸಮಸ್ಯೆಗಳನ್ನು ಬಗೆ ಹರಿಸುವುದರಲ್ಲಿ ಆಡಳಿತ ವರ್ಗದ ಸ್ವಂತ ಲಾಭವಿಲ್ಲದಿದ್ದುದರಿಂದ ಅವುಗಳನ್ನು ಬಗೆ ಹರಿಸುವ ಬಗ್ಗೆ ಯೋಚಿಸುವ ಲಕ್ಷಣಗಳೇ ಕಾಣುತ್ತಿಲ್ಲ. ಸಧ್ಯದಲ್ಲಿ ಅವರಿಗಿರುವ ದೊಡ್ಡ ಸಮಸ್ಯೆ ಏನೆಂದರೆ ಮುಂದಿನ ಚುನಾವಣೆಗಳಲ್ಲಿ ಹೇಗೆ ಗೆದ್ದು ಬರುವದು ಎನ್ನುವುದು ಮಾತ್ರ!
ಈಗ ಸಾಮಾನ್ಯ ಜನರ ಮೇಲೇ ಎಲ್ಲಿ ಯಾರು ಬೇಕಾದರೂ ದಾಳಿ ಮಾಡಿ, ಬಾಂಬು ಸ್ಫೋಟಿಸಿ ಕೊಂದು ಹಾಕಬಹುದಾಗಿದೆ. ಚಿಕ್ಕ ಪುಟ್ಟ ಬಾಲಕಿಯರ ಮೇಲೆ ಕೂಡ ವಿಕೃತ ಅಪರಾಧಿಗಳು ಅತ್ಯಾಚಾರ ಮಾಡಬಹುದಾಗಿದೆ. ಬಿಳಿ ಕಾಲರಿನ ಅಪರಾಧಿಗಳು ರಾಜಕೀಯ ನೇತಾರರೊಡಗೂಡಿ ಸಾಮಾನ್ಯ ಜನರ ಕಷ್ಟಪಟ್ಟು ಗಳಿಸಿದ ಹಣವನ್ನು ಲಪಟಾಯಿಸಬಹುದಾಗಿದೆ. ತಮ್ಮ ಸಾಮಾನ್ಯ ಜನರನ್ನು ದೇಶದೊಳಗಿನ ಅಪರಾಧಿಗಳಿಂದ ಕೂಡ ರಕ್ಷಿಸಲು ಸಾಧ್ಯವಾಗದ ನಮ್ಮ ನೇತಾರರಿಗೆ ನಮ್ಮ ಗಡಿಗಳನ್ನು ಬಲವಂತ ನೆರೆಯವರ ಆಕ್ರಮಣದಿಂದ ರಕ್ಷಿಸಲು ಸಾಧ್ಯವೆ? ಗಡಿ ಪ್ರದೇಶದ ಸರಿಯಾದ ನಿರ್ದೇಶವಿಲ್ಲದಿದ್ದುರ ಪ್ರಯೋಜನ ಪಡೆದು ಹಂತ ಹಂತವಾಗಿ ಚೀನದಂತಹ ಬಲವಂತ ನೆರೆ ಹೊರೆ ರಾಷ್ಟ್ರಗಳು ಹೆಚ್ಚು ಹೆಚ್ಚು ಅತಿಕ್ರಮಣ ಮಾಡಿ ಇನ್ನೂ ಅನೇಕ ಪ್ರದೇಶಗಳನ್ನು ಕಬಳಿಸತೊಡಗಿದರೆ? ನಮ್ಮ ಘನ ಸರಕಾರ ಏನನ್ನೂ ಮಾಡುವುದಿಲ್ಲವೆ? ಕಂಗೆಟ್ಟ ಸಮಯದಲ್ಲಿ ದಿಗ್ಭ್ರಾಂತ ಪ್ರಜೆಗಳ ತಲ್ಲಣದ ಪ್ರಶ್ನೆ ಇದು. ಆದರೆ ಇದಕ್ಕೆ ಉತ್ತರ ನೀಡುವವರಾರು?
ಸರಕಾರಿ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಲಾರಂಭಿಸಿದರೆ, ದೇಶದ ಅರ್ಧಕ್ಕರ್ಧ ಸಮಸ್ಯೆಗಳು ತೀರಿ ಹೋಗುತ್ತವೆ, ಸಂಪನ್ಮೂಲಗಳ ಕಾನೂನುಬದ್ಧ ಉಪಯೋಗದಿಂದ ದೇಶದ ಸಂಪತ್ತು ಹೆಚ್ಚಿ, ದೇಶ ಪ್ರಬಲವಾಗತೊಡಗುತ್ತದೆ. ದೇಶ ಆರ್ಥಿಕವಾಗಿ ಪ್ರಬಲವಾದರೆ ಹೊರಗಿನ ನರಿಗಳು ಹೊಂಚು ಹಾಕುವುದನ್ನು ನಿಲ್ಲಿಸುತ್ತವೆ. ಆದರೆ, ಲಂಚದ ಪುಕ್ಕಟೆ ಹಣದಿಂದ ಮೈಯುಂಡು ಬೆಳೆದವರಿಗೆ ಮತ್ತು ಯಾವುದೇ ಹೊಣೆಗಾರಿಕೆ ಇಲ್ಲದೇ ಅಧಿಕಾರವನ್ನು ಅನುಭವಿಸಿದವರಿಗೆ, ತಮ್ಮ ಕರ್ತವ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಿ. ಜನರ ಕೆಲಸವನ್ನು ಗೌರವದಿಂದ ಮಾಡಿಕೊಡಿ ಎನ್ನುವುದು ಸಾಧ್ಯವಾಗದ ಮಾತು. ಈ ಧೋರಣೆಯನ್ನು ನಮ್ಮ ಸಮಾಜವೇ ನಿಧಾನವಾಗಿ ಬೆಳೆಸಬೇಕು. ಅದಕ್ಕಾಗಿ ಜನರಿಂದ ನಿರ್ಮಾಣವಾದ ನಮ್ಮ ಸಮಾಜವೇ ತಮ್ಮಲ್ಲಿಯ ಒಡಕುಗಳನ್ನು ಮುಚ್ಚಿ, ನೈತಿಕ ನಡವಳಿಕೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ ಸತಾಯಿಸಲ್ಪಟ್ಟ, ಕಂಗೆಟ್ಟ ಜನರು ಬೀದಿಗಿಳಿದು, ದೇಶದಲ್ಲಿ ಅರಾಜಕತೆಯ ಸೃಷ್ಟಿಯಾದೀತು!
Comments
ಗೆಳೆಯ ವಸಂತ ಕುಲಕರ್ಣಿರವರೇ,
In reply to ಗೆಳೆಯ ವಸಂತ ಕುಲಕರ್ಣಿರವರೇ, by lpitnal@gmail.com
ತುಂಬಾ ವಂದನೆಗಳು ಲಕ್ಷ್ಮೀಕಾಂತ
ವಸಂತರವರೆ,
In reply to ವಸಂತರವರೆ, by nageshamysore
ತುಂಬಾ ವಂದನೆಗಳು ನಾಗೇಶ್.
ಕುಲಕರ್ಣಿಗಳೇ,
In reply to ಕುಲಕರ್ಣಿಗಳೇ, by makara
ತುಂಬಾ ವಂದನೆಗಳು ಮಕರ ಅವರೆ,