ಮೂರು ವಾರಗಳ ಚೀನಾ ಪಿಕ್ನಿಕ್
ಮೂರು ವಾರಗಳ ಕಾಲ ಬಿಡಾರ ಹೂಡಿ ಅದೇನನ್ನು ಮಾಡಬೇಕು ಎಂದು ಬಯಸಿದ್ದರೋ ಅದನ್ನು ಮಾಡಿಯೋ, ಅಥವಾ ಮಾಡದೆ ಬಿಟ್ಟೋ, ಅಂತೂ ಚೀನೀಯರು ನಮ್ಮ ನೆಲದಿಂದ ಕಾಲ್ಕಿತ್ತರು. ಭಾರತದೊಳಕ್ಕೆ ೧೯ ಕಿಲೋ ಮೀಟರು ಗಳಷ್ಟು ಒಳಬಂದು ಠಿಕಾಣಿ ಹಾಕಿದ್ದರು ಚೀನೀಯರು.
ಬದುಕಿನಲ್ಲಿ ಮಿತ್ರರನ್ನು ಬದಲಾಯಿಸಬಹುದು, ನೆರೆಹೊರೆಯವರನ್ನೂ ಬೇಕಾದರೆ ಬದಲಾಯಿಸಬಹುದು, ಆದರೆ ದೇಶದ ವಿಷಯದಲ್ಲಿ ಮಾತ್ರ ಮಿತ್ರರನ್ನು ಚೇಂಜ್ ಮಾಡಬಹುದು, ನಿನ್ನೆ ರಷ್ಯಾ, ಇವತ್ತು ಅಮೇರಿಕಾ, ನಾಳೆ ಇಥಿಯೋಪಿಯಾ. ಆದರೆ ನೆರೆಹೊರೆಯವರನ್ನು ಬದಲಾಯಿಸಲು ಬರುವುದಿಲ್ಲ. ಅದು ಪರ್ಮನೆಂಟ್ ಫಿಕ್ಸ್ಚರ್ರು. ಎಡದಲ್ಲಿ ಪಾಕಿಸ್ತಾನ, ಬಲದಲ್ಲಿ ಚೀನಾ, ಇವೆರಡು ಶನಿಗಳ ಮಧ್ಯೆ ನಾವು. ಫಲಿತಾಂಶ ಆಗಾಗ ನಮ್ಮ ಗಡಿಯೊಳಕ್ಕೆ ಬಂದು ನಮ್ಮ ಸಹನೆಯ ಮಟ್ಟ ಪರೀಕ್ಷಿಸೋದು.
ಮೂರು ವಾರಗಳ ಕಾಲ ನಮ್ಮ ಸಹನೆ ಪರೀಕ್ಷಿಸಿ, ನಮ್ಮ ಮಾತುಕತೆಯ ಧಾಟಿ ನೋಡಿ, ಚೀನೀಯರು ಜಾಗ ಖಾಲಿ ಮಾಡಿದರು. ಚೀನೀಯರು ಈ ರೀತಿ ಮಾಡಲು, ತಮಗೆ ಬೇಕಾದಾಗ ನಮ್ಮ ದೇಶದೊಳಕ್ಕೆ ನುಗ್ಗಲು, ಅರುಣಾ ಛಲ ಪ್ರದೇಶ ನನ್ನದು ಎನ್ನಲು, ನಮ್ಮ ಪ್ರಧಾನಿ ತನ್ನ ದೇಶದೊಳಕ್ಕೆ ಪ್ರವಾಸ ಮಾಡ ಹೊರಟಾಗ ತಗಾದೆ ತೆಗೆಯಲು ಕಾರಣ ನಾವೇ. ನಮ್ಮ ಸೈನ್ಯ ಅವರಷ್ಟು ಬಲಿಷ್ಠವಾಗಿ ಹೊರಹೊಮ್ಮಲು ನಮಗಿಲ್ಲದ ಇರಾದೆ. ನಮ್ಮ ಗಮನ, ಆಸಕ್ತಿ ಎಲ್ಲಾ ವೈಯಕ್ತಿಕ ಆಕಾಂಕ್ಷೆ ಕಡೆ ನೆಟ್ಟಿರುವ ಕಾರಣ ನಾವು ಪದೇ ಪ ದೇ ಇಂಥ ಸನ್ನಿವೇಶಗಳನ್ನು, ಮುಜುಗುರಗಳನ್ನು ಎದುರಿಸುವ ದೌರ್ಭಾಗ್ಯ ಬರುತ್ತದೆ. ಮಾತ್ರವಲ್ಲ ಓರ್ವ ದೂರ ದೃಷ್ಟಿಯುಳ್ಳ ನಾಯಕನ ಕೊರತೆ ಸಹ ಎದ್ದು ಕಾಣುತ್ತದೆ.
ಈ ಕ್ಲಿಷ್ಟಕರ ಸನ್ನಿವೇಶ ವನ್ನು ನಾವು ಎದುರಿಸಿದ್ದು "ಮಾರ್ಷಲ್ ಆರ್ಟ್ಸ್" ವೀರರ ಥರ. ಮಾರ್ಷಲ್ ಆರ್ಟ್ಸ್ ನಲ್ಲಿ ವಿರೋಧಿಯ ಮೇಲೆ ಒಮ್ಮೆಗೆ ಎರಗೋಲ್ಲ.
non-resistance ತಂತ್ರ ಉಪಯೋಗಿಸಿ ಶತ್ರುವಿನ ಶಕ್ತಿಯನ್ನ ನಮ್ಮ ಉಪಯೋಗಕ್ಕೆ ತಂದು ಸೋಲಿಸೋದು. ಚೀನೀಯರು ಒಳಬಂದಾಗ ನಾವು ಪ್ರತಿರೋಧ ಒಡ್ಡಲಿಲ್ಲ. ನೋಡೋಣ ಏನು ಮಾಡುತ್ತಾರೆ ಎಂದು ಕಾದು ನೋಡಿದೆವು. ಶತ್ರು ತನ್ನ ಶಕ್ತಿಯನ್ನ ವೃಥಾ ವಿನಿಯೋಗಿಸಿ ನಿತ್ರಾಣಗೊಂಡ. ಲಡಾಖ್ ಯಾವುದೇ ಲಡಾಯಿ ಇಲ್ಲದೆ ಶಾಂತವಾಗಿ ನಿದ್ರಾದೇವಿಯ ತೋಳ್ತೆಕ್ಕೆಗೆ ಜಾರಿತು.
Comments
ಅಬ್ದುಲ್ ರವರೆ, ನಿಮ್ಮ ಲೇಖನ
ಅಬ್ದುಲ್ ರವರೆ, ನಿಮ್ಮ ಲೇಖನ ಚಿಕ್ಕದಾದರೂ ನಮ್ಮ ದೇಶದ ಈಗಿನ ಸ್ಥಿತಿಯನ್ನು ಮನಮುಟ್ಟುವ೦ತೆ ವಿವರಿಸುತ್ತದೆ. ನಿಜವಾಗಿಯೂ ನಮಗೆ ಒಬ್ಬ ದೂರದೃಷ್ಟಿಯುಳ್ಳ ನಾಯಕ ಬೇಕಾಗಿದ್ದಾರೆ. ಆಬ್ದುಲ್ ಕಲಾ೦ರವರು ಇಡೀ ದೇಶದ ಯುವಜನತೆಯನ್ನು ಎನಾದರು ಸಾಧಿಸುವ೦ತೆ ಉತ್ತೇಜಿಸುತ್ತಿದ್ದರು. ಈಗಿರುವ ನಾಯಕರುಗಳು ಅವರ ತಪ್ಪುಗಳನ್ನು ಸಮರ್ಥಿಸಿಕೊಳ್ಳುವಲ್ಲಿ ಕಾಲ ಕಳೆಯುತ್ತಿದ್ದಾರೆ
ದೇಶದ ಬಗ್ಗೆ ನಿಮಗಿರುವ ಕಾಳಜಿ,
ದೇಶದ ಬಗ್ಗೆ ನಿಮಗಿರುವ ಕಾಳಜಿ, ನಿಮ್ಮ ಲೇಖನದಲ್ಲಿರುವ ಚಿಂತನೆ ಇಷ್ಟವಾಯಿತು. ಹಿಂದಿ-ಚೀನಿ ಭಾಯಿ ಭಾಯಿ ಎಂದರೂ ಕೂಡ ಚೀನಾ ಭಾರತಕ್ಕೆ ಸೋದರ ರಾಷ್ಟ್ರವಾಗಲೇ ಇಲ್ಲ಼
ಚೀನಾ ದೊಡ್ಡಣ್ಣನ ಸ್ಥಾನಕ್ಕೆ ಅಮೇರಿಕಾದೊಂದಿಗೆ ಪೈಪೋಟಿ ನಡೆಸುತ್ತಿರುವ ದೇಶ. ಆದರೆ ಒಂದಂಥೂ ನಿಜ, ಪ್ರತಿಯೊಂದು ಸೂಪರ್ ಪವರ್ ಕೂಡ ತನ್ನ ಅವನತಿಗೆ ಅವಕಾಶಗಳನ್ನು ತಾನೇ ಸೃಷ್ಟಿಸುತ್ತದೆ. ಚೀನಾ ಕೂಡ ಭಾರತ, ಜಪಾನ್, ವಿಯೆಟ್ನಾಮ್ ಮತ್ತಿತರ ರಾಷ್ಟ್ರಗಳೊಂದಿಗೆ ವೈರತ್ವದಿಂದಾಗಿ ತನ್ನ ಅಂತ್ಯವನ್ನು ತಾನೇ ತಂದುಕೊಳ್ಳುತ್ತಿದೆ.
ಭಾರತ ಹಾಗೂ ಚೀನಾ ನಡುವೆ ಗಡಿ
ಭಾರತ ಹಾಗೂ ಚೀನಾ ನಡುವೆ ಗಡಿ ವಿವಾದ ಬಗೆಹರಿದಿಲ್ಲದಿರುವುದೇ ಸಮಸ್ಯೆಯ ಮೂಲ. ಭಾರತ ಚೀನಾದ ಅತಿಕ್ರಮಣಕ್ಕೆ ಅತ್ಯಂತ ವಿವೇಕಯುತವಾಗಿ ನಡೆದುಕೊಂಡಿದೆ. ಭಾರತವೇನಾದರೂ ಉನ್ಮಾದದಲ್ಲಿ ಮುಂದೆ ನುಗ್ಗಿ ಪ್ರತಿಕ್ರಿಯಿಸಿದ್ದರೆ ಅದು ಭೀಕರ ಯುದ್ಧಕ್ಕೂ ದಾರಿ ಮಾಡಿ ಕೊಡುವ ಸಂಭವ ಇತ್ತು. ಹಾಗಾದರೆ ಅಪಾರ ಕಷ್ಟ ನಷ್ಟಕ್ಕೆ ಭಾರತ ಒಳಗಾಗಬೇಕಾಗಿತ್ತು. ಆರ್ಥಿಕ ಹಿಂಜರಿತದ ಇಂದಿನ ದಿನಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಯುದ್ಧಕ್ಕೆ ಹೋಗುವುದು ಭಾರತದ ಪಾಲಿಗೆ ತೀರಾ ಹಾನಿಕಾರಕ. ದೇಶಭಕ್ತಿಯ ಉನ್ಮಾದದ ಬದಲು ವಿವೇಕದಿಂದ ನಡೆದುಕೊಳ್ಳುತ್ತಿರುವ ಭಾರತದ ನಡೆ ಶ್ಲಾಘನೀಯ ಮತ್ತು ಅಪೇಕ್ಷಣೀಯವೂ ಹೌದು. ಇಂದಿನ ಅಂತರರಾಷ್ಟ್ರೀಯ ಪರಿಸ್ಥಿತಿಗಳಲ್ಲಿ ಚೀನಾ ಭಾರತದ ಮೇಲೆ ಅತಿಕ್ರಮಣ ಮಾಡಿ ನಮ್ಮ ಜನವಸತಿ ಇರುವ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಸಂಭಾವ್ಯತೆ ಇಲ್ಲ. ಚೀನಾ ಅತಿಕ್ರಮಿಸಲು ಪ್ರಯತ್ನಿಸಿದ್ದು ಯಾವುದೇ ಜನವಸತಿ ಇಲ್ಲದ ಗಡಿ ನಿರ್ಧರಿತವಾಗದ ಭಾಗದಲ್ಲಿ ಆದ ಕಾರಣ ವಿಶೇಷ ಚಿಂತೆಗೆ ಕಾರಣವಿಲ್ಲ. ಮಿಲಿಟರಿ ಬಲದ ಮೂಲಕ ಬೇರೆ ದೇಶಗಳನ್ನು ಅತಿಕ್ರಮಿಸುವ ಕಾಲ ಎಂದೋ ಮುಗಿದಿದೆ. ಹಾಗಿದ್ದರೆ ದೊಡ್ಡ ಮಿಲಿಟರಿ ಹಾಗೂ ಅಣ್ವಸ್ತ್ರ ಹೊಂದಿರದ ಸಣ್ಣ ದೇಶವಾದ ನೇಪಾಳವನ್ನು ಚೀನಾ ಎಂದೋ ಆಕ್ರಮಿಸಿ ತನ್ನ ದೇಶಕ್ಕೆ ಸೇರಿಸಿಕೊಳ್ಳಬೇಕಾಗಿತ್ತು. ಪಾಕಿಸ್ತಾನದ ವಿಷಯದಲ್ಲಿಯೂ ಭಾರತ ಅತ್ಯಂತ ವಿವೇಚನೆಯಿಂದ ನಡೆದುಕೊಳ್ಳುತ್ತಿದೆ. ಹಾಗೆ ನಡೆದುಕೊಳ್ಳದಿದ್ದರೆ ನಮಗೆ ಇನ್ನಷ್ಟು ನಷ್ಟ. ಮೂರ್ಖನೂ, ಅನಾಗರಿಕನೂ ಆದ ಮನುಷ್ಯನ ಜೊತೆ ಒಬ್ಬ ವಿವೇಕಯುತ ಜ್ಞಾನಿ ಯಾವ ರೀತಿ ನಡೆದುಕೊಳ್ಳಬೇಕೋ ಅದೇ ರೀತಿ ಭಾರತ ನಡೆದುಕೊಳ್ಳುತ್ತಿದೆ. ಒಬ್ಬ ಮೂರ್ಖ, ಅನಾಗರಿಕ ವ್ಯಕ್ತಿಯ ಬಳಿ ಬಂದೂಕು ಇದೆ, ಒಬ್ಬ ಜ್ಞಾನಿಯೂ ವಿವೇಕಿಯೂ ಬಲಿಷ್ಠನೂ ಆದ ಮನುಷ್ಯನ ಬಳಿಯೂ ಬಂದೂಕು ಇರುವ ಪರಿಸ್ಥಿತಿ ಇರುವಾಗ ಬಲಪ್ರಯೋಗದಿಂದ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯವಿಲ್ಲ. ಬಲಪ್ರಯೋಗಕ್ಕೆ ಹೊರಟರೆ ಇಬ್ಬರಿಗೂ ಅಪಾರ ನಷ್ಟ. ಪಾಕಿಸ್ತಾನದ ಬಳಿಯೂ ಅಣ್ವಸ್ತ್ರ ಇರುವ ಕಾರಣ ಬಲಪ್ರಯೋಗದಿಂದ ಪಾಕಿಸ್ತಾನವನ್ನು ಮಣಿಸುವುದು ಸಾಧ್ಯವಿಲ್ಲ ಎಂಬುದನ್ನು ದೇಶಭಕ್ತಿಯ ಉನ್ಮಾದದಿಂದ ಬೊಬ್ಬೆ ಹಾಕುವವರು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ಇದೆ.
In reply to ಭಾರತ ಹಾಗೂ ಚೀನಾ ನಡುವೆ ಗಡಿ by anand33
......ಇಂದಿನ ಅಂತರರಾಷ್ಟ್ರೀಯ
......ಇಂದಿನ ಅಂತರರಾಷ್ಟ್ರೀಯ ಪರಿಸ್ಥಿತಿಗಳಲ್ಲಿ ಚೀನಾ ಭಾರತದ ಮೇಲೆ ಅತಿಕ್ರಮಣ ಮಾಡಿ ನಮ್ಮ ಜನವಸತಿ ಇರುವ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಸಂಭಾವ್ಯತೆ ಇಲ್ಲ. ಚೀನಾ ಅತಿಕ್ರಮಿಸಲು ಪ್ರಯತ್ನಿಸಿದ್ದು ಯಾವುದೇ ಜನವಸತಿ ಇಲ್ಲದ ಗಡಿ ನಿರ್ಧರಿತವಾಗದ ಭಾಗದಲ್ಲಿ ಆದ ಕಾರಣ ವಿಶೇಷ ಚಿಂತೆಗೆ ಕಾರಣವಿಲ್ಲ........
ಹಿಂದೆ ಚೀನಾ ಟಿಬೆಟ್ಟನ್ನು ಆಕ್ರಮಿಸಿದಾಗ, ಲೋಕಸಭೆಯಲ್ಲಿ ಇದರ ಪ್ರಸ್ತಾವನೆ ಬಂದಾಗ, ಪಂಡಿತ್ ನೆಹರೂಜೀ ಹೇಳಿದರಂತೆ. ಅಲ್ಲಿ ಒಂದು ಹುಲ್ಲೂ ಬೆಳೆಯುವುದಿಲ್ಲ; ಅದು ಹೋದರೇನು ನಷ್ಟ" ಆಗ ಬಹುಶಃ ಮೆನನ್ ಎನ್ನುವವರು, "ನೆಹರೂಜೀ ನಿಮ್ಮ ತಲೆಯಲ್ಲೂ ಕೂದಲಿಲ್ಲ, ಅದು ಇದ್ದರೆಷ್ಟು ಬಿಟ್ಟರೆಷ್ಟು?" ಅವರು ಹೀಗೆ ಭಾರತಕ್ಕೆ ಶಿರಪ್ರಾಯವಾದ ಪ್ರದೇಶದ ಬಗೆಗೆ ಸೂಚ್ಯವಾಗಿ ಹೇಳಿದ್ದರು. ಈಗಲಾದರೂ ನಾವು ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಯಾರೋ ದೇಶಭಕ್ತಿಯ ಉನ್ಮಾದವಿರುವವರು ಬೊಬ್ಬೆ ಹಾಕುತ್ತಿದ್ದಾರೆ ಎಂದು ಸುಮ್ಮನೆ ಕೂಡುವುದಲ್ಲ.
ಪಾಕಿಸ್ತಾನವು ಭಾರತದ ಜೊತೆಗಿನ
ಪಾಕಿಸ್ತಾನವು ಭಾರತದ ಜೊತೆಗಿನ ಎಲ್ಲಾ ಯುದ್ಧಗಳಲ್ಲೂ ಸೋತಿದ್ದರೂ ಪರೋಕ್ಷವಾಗಿ ಭಯೋತ್ಪಾದನೆಯನ್ನು ಬೆಂಬಲಿಸುವ ಮೂಲಕ ಕಿರುಕುಳ ಕೊಡುವ ನೀತಿಯನ್ನು ಅನುಸರಿಸುತ್ತಿದೆ. ನೇರವಾಗಿ ಯುದ್ಧದಲ್ಲಿ ಗೆಲ್ಲುವ ಸಾಮರ್ಥ್ಯ ಅದಕ್ಕೆ ಇಲ್ಲ. ಹೀಗಾಗಿ ಇಂಥ ಕುಟಿಲ ನೀತಿಯನ್ನು ಸದಾ ಜಾರಿಯಲ್ಲಿ ಇಟ್ಟಿದೆ. ಇದನ್ನು ನಾವು ಬಲಪ್ರಯೋಗ ಮಾಡಿ ಹತ್ತಿಕ್ಕುವುದು ಸಾಧ್ಯವಾಗದ ಮಾತು. ಬಲಪ್ರಯೋಗ ಮಾಡಲು ಹೋದರೆ ಅಪಾರ ಕಷ್ಟ ನಷ್ಟ ಎದುರಿಸಬೇಕಾಗುತ್ತದೆ. ಹಾಗೆ ಬಲಪ್ರಯೋಗ ಮಾಡಿಯೂ ಏನೂ ಪ್ರಯೋಜನ ಇಲ್ಲ ಎಂಬುದು ಸೋತ ಪಾಕಿಸ್ತಾನದ ಪರೋಕ್ಷ ಕಿರುಕುಳದಿಂದ ಸಾಬೀತಾಗಿದೆ. ಇದು ನಿಲ್ಲಬೇಕಾದರೆ ಸಂಪೂರ್ಣ ಪಾಕಿಸ್ತಾನವನ್ನು ನಿರ್ನಾಮಗೊಳಿಸಬೇಕು. ಹಾಗೆ ಮಾಡುವುದು ಇಂದಿನ ಅಂತರರಾಷ್ಟ್ರೀಯ ಪರಿಸ್ಥಿತಿಗಳಲ್ಲಿ ಸಾಧ್ಯವಿಲ್ಲ. ಹೀಗಾಗಿ ಸಹನೆ ಹಾಗೂ ವಿವೇಕದಿಂದ ನಡೆದುಕೊಳ್ಳುವುದೇ ಸರಿಯಾದ ಮಾರ್ಗ, ಇದುವೇ ಕಡಿಮೆ ಹಾನಿಯ ದಾರಿ. ಬೇರೆ ದಾರಿ ಇಲ್ಲ. ದೇಶಭಕ್ತಿಯ ಉನ್ಮಾದ ಹಬ್ಬಿಸುವವರು ತಾವು ಸೈನ್ಯಕ್ಕೆ ಸೇರುವುದಿಲ್ಲ, ತಮ್ಮ ಮಕ್ಕಳನ್ನೂ ಸೈನ್ಯಕ್ಕೆ ಸೇರಿಸುವುದಿಲ್ಲ.
ಲೇಖನವೇನೊ ಚನ್ನಾಗಿದೆ ಆದರೆ
ಲೇಖನವೇನೊ ಚನ್ನಾಗಿದೆ ಆದರೆ ತಲೆಬರಹದಲ್ಲಿ ಆಂಗ್ಲ ಪದ ಬಳಕೆ ಹಾಸ್ಯಸ್ಪದವಾಗಿದೆ. PICKNIC ಪಧದ ಅರ್ಥ 'ಒಂದು ದಿನದ ಕಿರು ಪ್ರವಾಸ'. ಮೂರು ದಿನದ ಪ್ರವಾಸಕ್ಕೆ TOUR ಪದ ಸೂಕ್ತ. ನೀವು PICKNIC ಎಂದು ಬಳಸುವ ಬದಲು ಲೇಖನಕ್ಕೆ 'ಮೂರು ದಿನದ ಚೀನಾ ಪ್ರವಾಸ' ಎನ್ನುವ ತಲೆಬರಹ ನೀಡಿದ್ದರೆ ಸೂಕ್ತವೆನಿಸುತ್ತದೆ.
In reply to ಲೇಖನವೇನೊ ಚನ್ನಾಗಿದೆ ಆದರೆ by amith naik
ನನಗೇಕೋ ಪಿಕ್ನಿಕ್ಕೇ ಹಿಡಿಸಿತು.
ನನಗೇಕೋ ಪಿಕ್ನಿಕ್ಕೇ ಹಿಡಿಸಿತು. ಚೀನವು ಅಮೆರಿಕಾಕ್ಕೆ ಹೋಗಿ ಬಂದಿದ್ದರೆ ಪ್ರವಾಸ ಎನ್ನಬಹುದಿತ್ತು.
ಎಂದಿನಂತೆ ಉತ್ತಮ ಲೇಖನ ಅಬ್ದುಲರಿಂದ.