೧೫. ಲಲಿತಾ ಸಹಸ್ರನಾಮ - ಶ್ರೀ ಚಕ್ರದ ವಿವರಣೆ
ಲಲಿತಾಂಬಿಕೆಯ ಪೂಜಾ ಕ್ರಮವನ್ನು ಶ್ರೀ ವಿದ್ಯಾ ಎಂದು ಕರೆಯುತ್ತಾರೆ. ಅದರಲ್ಲಿ ದೇವಿಯನ್ನು ಚಕ್ರ ರೂಪದಲ್ಲಿ ಪೂಜಿಸುವುದು, ಪಂಚದಶೀ ಅಥವಾ ಷೋಡಶೀ ಮಂತ್ರವನ್ನು ಹೇಳುವುದು ಮತ್ತು ಬಾಲ ಮಂತ್ರದ ಕುರಿತು ತಿಳಿದುಕೊಳ್ಳುವುದು ಮೊದಲಾದವು ಬಹು ಮುಖ್ಯವಾದವು. ವಾಸ್ತವವಾಗಿ ಪೂರ್ವಭಾಗದ ನಂತರ ಇವುಗಳನ್ನೆಲ್ಲಾ ತಿಳಿದುಕೊಂಡು ನಂತರ ಧ್ಯಾನ ಶ್ಲೋಕಗಳ ವಿವರಣೆಗೆ ಹೋಗಿ ನಂತರ ಲಲಿತಾ ಸಹಸ್ರನಾಮದ ಒಂದೊಂದೇ ನಾಮಗಳ ವಿವರಣೆಗೆ ಹೋಗಬೇಕಾಗಿತ್ತು; ಆದರೆ ಇವನ್ನೆಲ್ಲಾ ಬದಿಗಿಟ್ಟು ಕೆಲವೊಂದು ಇದಕ್ಕೆ ಪೂರಕವಾದ ಬರಹಗಳನ್ನು ಹೊರತು ಪಡಿಸಿ ನೇರವಾಗಿ ನಾಮಗಳ ವ್ಯಾಖ್ಯಾನಕ್ಕೆ ಹೊರಟಿದ್ದು ಸಮಂಜಸವೆನಿಸಲಿಲ್ಲ. ಆದ್ದರಿಂದ ಸಹಸ್ರನಾಮವನ್ನು ಸಮಗ್ರವಾಗಿ ತಿಳಿದುಕೊಳ್ಳಬೇಕಾದರೆ ಶ್ರೀ ಚಕ್ರ, ಶ್ರೀ ವಿದ್ಯಾ, ಯೋಗಿನಿಯರು, ಪಂಚದಶೀ ಮಂತ್ರ, ಷೋಡಶೀ ಮಂತ್ರ ಮತ್ತು ಬಾಲಾ ಮಂತ್ರ ಇವುಗಳನ್ನು ತಿಳಿದುಕೊಳ್ಳುವುದು ಸರಿಯೆನಿಸಿದ್ದರಿಂದ ಮುಂದಿನ ನಾಮಗಳ ವ್ಯಾಖ್ಯಾನಕ್ಕೆ ಹೊರಡುವ ಮುನ್ನ ಈ ವಿಷಯಗಳನ್ನು ಒಂದೊಂದಾಗಿ ತಿಳಿದುಕೊಳ್ಳೋಣ.
*******
ಶ್ರೀ ಚಕ್ರಾ
ಶ್ರೀ ಚಕ್ರವು ಲಲಿತಾಂಬಿಕೆಯ ಆವಾಸ ಸ್ಥಾನ. ’ಶ್ರೀ ಚಕ್ರ’ವು, ’ಶಿವ ಚಕ್ರ’ಗಳೆಂದು ಕರೆಯಲ್ಪಡುವ ಮೇಲ್ಮುಖವಾಗಿರುವ ನಾಲ್ಕು ತ್ರಿಕೋಣಗಳಿಂದ ಮತ್ತು ’ಶಕ್ತಿ ಚಕ್ರ’ಗಳೆಂದು ಕರೆಯಲ್ಪಡುವ ಕೆಳಮುಖವಾಗಿರುವ ಐದು ತ್ರಿಕೋಣಗಳಿಂದ ಮಾಡಲ್ಪಟ್ಟಿದೆ. ಈ ಒಂಭತ್ತು ಚಕ್ರಗಳು ಸಂಧಿಸುವುದರ ಮೂಲಕ ಮಧ್ಯದಲ್ಲಿರುವ ಬಿಂದುವನ್ನು ಸೇರಿಸಿ ಒಟ್ಟು ನಲವತ್ತು ನಾಲ್ಕು ಚಕ್ರಗಳು ಉಂಟಾಗುತ್ತವೆ. ಈ ಒಂಭತ್ತು ತ್ರಿಕೋಣಗಳ ಬದಲಾಗಿ ನಾವು ಕೇವಲ ಎಂಟು ತ್ರಿಕೋಣಗಳನ್ನು ತೆಗೆದುಕೊಂಡರೆ, ಈಗಿರುವ ಕ್ರಿಯಾಶೀಲವಾದ ತ್ರಿಕೋಣದ ಬದಲಿಗೆ ಅದರಿಂದ ಉಂಟಾಗುವ ತ್ರಿಕೋಣವು ’ನಿಷ್ಕ್ರಿಯ’ (ಜಡ/ಅಚರ) ಚಕ್ರವಾಗಿ ಮಾರ್ಪಾಡುಗೊಳ್ಳುತ್ತದೆ. ನಿಷ್ಕ್ರಿಯತೆ ಅಥವಾ ನಿಶ್ಚಲತೆಯು ಶಿವನ ಗುಣವಾಗಿದ್ದರೆ ಚಲನಶೀಲತೆ ಅಥವಾ ಕ್ರಿಯಾಶೀಲತೆಯು ಶಕ್ತಿಯ ಲಕ್ಷಣವಾಗಿದೆ. ಈ ಚಕ್ರವು ಲಲಿತಾಂಬಿಕೆಯ ವಾಸಸ್ಥಾನವಾಗಿರುವುದರಿಂದ ಇದನ್ನು ಕ್ರಿಯಾಶೀಲ ಚಕ್ರವನ್ನಾಗಿಸಲಾಗಿದೆ. ’ಶ್ರೀ ಚಕ್ರ’ವನ್ನು ಬ್ರಹ್ಮಾಂಡ ಚಕ್ರವೆಂದೂ ಕರೆಯುತ್ತಾರೆ. ಕುಂಡಲನಿಯ ಒಂಭತ್ತು ಚಕ್ರಗಳು (ಆರು/ಷಟ್ ಚಕ್ರಗಳು + ಸಹಸ್ರಾರ + ಕುಲಸಹಸ್ರಾರ + ಅಕುಲಸಹಸ್ರಾರ ಒಟ್ಟಿನಲ್ಲಿ ಒಂಭತ್ತು ಚಕ್ರಗಳು) ಮತ್ತು ಶ್ರೀ ಚಕ್ರದ ಒಂಭತ್ತು ಚಕ್ರಗಳ ಮಧ್ಯೆ ಸಾಮತ್ಯೆಯನ್ನು ತೋರಿಸಬಹುದು.
ಶ್ರೀ ಚಕ್ರವನ್ನು ಮನುಷ್ಯನ ಶರೀರದೊಂದಿಗೆ ಕೂಡಾ ಹೋಲಿಸಬಹುದು, ಮೇಲ್ಮುಖವಾಗಿರುವ ಚಕ್ರಗಳು ನಾಭಿಯ (ಹೊಕ್ಕಳಿನ) ಮೇಲ್ಭಾಗವನ್ನು ಪ್ರತಿನಿಧಿಸಿದರೆ, ಕೆಳಗಿನ ಚಕ್ರಗಳು ಹೊಕ್ಕಳಿನ ಕೆಳಗಿನ ಚಕ್ರಗಳನ್ನು ಪ್ರತಿನಿಧಿಸುತ್ತದೆ. ಪರ್ಯಾಯವಾಗಿ ಇದನ್ನು ಈ ರೀತಿ ವಿವರಿಸಬಹುದು. ಶಕ್ತಿ ಕೋನಗಳು (ತ್ರಿಕೋಣಗಳು) ನಮ್ಮ ಚರ್ಮ, ರಕ್ತ, ಮೆದುಳು, ಮಾಂಸಖಂಡಗಳು ಮತ್ತು ಎಲುಬುಗಳನ್ನು ಪ್ರತಿನಿಧಿಸುತ್ತವೆ. ಶಿವಕೋನಗಳು ಆತ್ಮ, ಪ್ರಾಣ, ತೇಜಸ್ಸು ಮತ್ತು ವೀರ್ಯ ಕಣಗಳು ಅಥವಾ ಅಂಡಾಣುಗಳನ್ನು ಪ್ರತಿನಿಧಿಸುತ್ತವೆ. ಶಕ್ತಿಕೋನಗಳು ಸ್ಥೂಲ ವಸ್ತುಗಳನ್ನು ಪ್ರತಿನಿಧಿಸಿದರೆ, ಶಿವ ಕೋನಗಳು ಸೂಕ್ಷ್ಮ ವಸ್ತುಗಳನ್ನು ಪ್ರತಿನಿಧಿಸುತ್ತವೆ. ಒಂದು ಜೀವದ ಹುಟ್ಟು ಸ್ಥೂಲ ಮತ್ತು ಸೂಕ್ಷ್ಮ ವಸ್ತುಗಳ ಸಂಯೋಗದಿಂದ ಮಾತ್ರವೇ ಸಾಧ್ಯವಾಗುತ್ತದೆ. ಆ ಐದು ಶಕ್ತಿಕೋನಗಳು ಐದು ಮೂಲಧಾತುಗಳಾದ ಆಕಾಶ, ವಾಯು, ಅಗ್ನಿ, ವರುಣ ಮತ್ತು ಭೂಮಿ ಹಾಗೂ ಅವುಗಳ ರೂಪಾಂತರಗಳಾದ ಕರ್ಮೇಂದ್ರಿಯಗಳನ್ನು (ಕೈ, ಕಾಲು, ಬಾಯಿ, ಮತ್ತು ಎರಡು ವಿಸರ್ಜನಾಂಗಗಳು), ಜ್ಞಾನೇಂದ್ರಿಯಗಳು (ಕಣ್ಣು, ಕಿವಿ, ಮೂಗು ಮೊದಲಾದವು), ತನ್ಮಾತ್ರಗಳು (ರೂಪ, ರಸ, ಗಂಧ ಮೊದಲಾದವು), ಇವುಗಳನ್ನು ಪ್ರತಿನಿಧಿಸಿದರೆ; ಶಿವನ ಕೋನಗಳು ಮನಸ್ಸು, ಬುದ್ಧಿ, ’ಚಿತ್ತ’ (ವ್ಯಕ್ತಿಗತ ಪ್ರಜ್ಞೆ) ಮತ್ತು ಅಹಂಕಾರ ಇವುಗಳಿಂದ ಒಡಗೂಡಿದ ಅಂತಃಕರಣವನ್ನು ಪ್ರತಿನಿಧಿಸುತ್ತವೆ. ಕೆಲವೊಂದು ಪಂಗಡಗಳವರು ಪ್ರಜ್ಞೆಯನ್ನು ಅಂತಃಕರಣದಲ್ಲಿ ಸೇರಿಸಿಕೊಳ್ಳುವುದಿಲ್ಲ.
ಬಿಂದು ಅಥವಾ ಚುಕ್ಕೆಯು ಮೇಲ್ಮುಖವಾಗಿರುವ ಮಧ್ಯದ ತ್ರಿಕೋಣದಲ್ಲಿ ಇರಿಸಲ್ಪಡುತ್ತದೆ. ಈ ಬಿಂದುವು ಪ್ರಪಂಚದ ಉಗಮಕ್ಕೆ ಕಾರಣವಾಗಿದೆಯೆಂದು ಭಾವಿಸಲಾಗಿದೆ. ಇದನ್ನು ಒಂದು ಅಣುವಿನಂತಹ (ಬಹು ಚಿಕ್ಕದಾದ) ಬೀಜವು ಒಂದು ದೊಡ್ಡ ವೃಕ್ಷವಾಗಿ ಬೆಳವಣಿಗೆ ಹೊಂದುವುದಕ್ಕೆ ಹೋಲಿಸಬಹುದು. ಈ ಬಿಂದುವಿನ ಸುತ್ತಲಿರುವ ಜಾಗವು ಪರಮಾನಂದಕ್ಕೆ ಕಾರಣವಾಗಿರುವುದರಿಂದ ಈ ಚಕ್ರವನ್ನು ಸರ್ವ-ಆನಂದ-ಮಯೀ ಅಥವಾ ಸರ್ವಾನಂದಮಯೀ ಎಂದು ಕರೆದಿದ್ದಾರೆ. ಈ ಪರಮಾನಂದಕ್ಕೆ ಕಾರಣವೇನೆಂದರೆ ಶಿವ ಮತ್ತು ಶಕ್ತಿಯರು ಇಲ್ಲಿ ಐಕ್ಯವಾಗಿ ನಿಲ್ಲುತ್ತಾರೆ (ನಾಮಾವಳಿ ೯೯೯). ಈ ಸ್ಥಳವನ್ನು ಸಹಸ್ರಾರದಲ್ಲಿ ಬಿಂದು ರೂಪದಲ್ಲಿ ಧ್ಯಾನಿಸುತ್ತಾರೆ. ಈ ಬಿಂದುವಿನಲ್ಲಿ ಕೇವಲ ಶಿವ-ಶಕ್ತಿಯರು ಮಾತ್ರವೇ ಸಂಯೋಗವಾಗುವುದಿಲ್ಲ ಆದರೆ ಒಬ್ಬನ ಇಷ್ಟದೇವತೆ ಮತ್ತು ಗುರು ಕೂಡಾ ಸಹಸ್ರಾರದ ಈ ಜಾಗದಲ್ಲಿ ಸ್ಥಾನ ಪಡೆಯುತ್ತಾರೆ. ಶ್ರೀ ಚಕ್ರವನ್ನು ಪೂಜಿಸುವುದನ್ನು ‘ನವಾವರಣ’ ಪೂಜೆಯೆಂದು ಕರೆಯುತ್ತಾರೆ. ನವ ಎಂದರೆ ಒಂಭತ್ತು ಮತ್ತು ಆವರಣ ಎಂದರೆ ಸುತ್ತುಗಳು.
ಮಧ್ಯದಲ್ಲಿರುವ ಬಿಂದುವನ್ನು ಸೇರುವ ಮೊದಲು ಈ ಕೆಳಗಿನ ಸಂಖ್ಯೆಯ ಸ್ತ್ರೀ ದೇವತೆಗಳನ್ನು ಶ್ರೀ ಚಕ್ರದಲ್ಲಿ ಮೊದಲು ಪೂಜಿಸಲಾಗುತ್ತದೆ. ಮೊದಲನೆಯ ಆವರಣದಲ್ಲಿ ಇಪ್ಪತ್ತೆಂಟು ದೇವತೆಗಳನ್ನು, ಎರಡನೆಯದರಲ್ಲಿ ಹದಿನಾರು ದೇವತೆಗಳನ್ನು, ಮೂರನೆಯ ಆವರಣದಲ್ಲಿ ಎಂಟು ದೇವತೆಯರನ್ನು ಮತ್ತು ನಾಲ್ಕನೆಯ ಆವರಣದಲ್ಲಿ ಹದಿನಾಲ್ಕು ದೇವತೆಗಳನ್ನು, ಐದನೆಯದರಲ್ಲಿ ಹತ್ತು, ಆರನೆಯದರಲ್ಲಿ ಹತ್ತು, ಏಳನೆಯದರಲ್ಲಿ ಎಂಟು ದೇವತೆಗಳನ್ನು ಮತ್ತು ಎಂಟನೆಯ ಆವರಣದಲ್ಲಿ ಹದಿನೈದು ದೇವತೆಗಳೊಂದಿಗೆ ಅವಳ ನಾಲ್ಕು ಆಯುಧಗಳನ್ನು (ನಾಮಾವಳಿ ೮ ರಿಂದ ೧೧) ಪೂಜಿಸಬೇಕು. ಮಧ್ಯದ ತ್ರಿಕೋಣದಲ್ಲಿ ಹದಿನೈದು ತಿಥಿ ನಿತ್ಯ ದೇವತೆಗಳನ್ನು ಪೂಜಿಸಲಾಗುತ್ತದೆ ಅವರು ತ್ರಿಕೋಣದ ಒಂದೊಂದು ಪಾರ್ಶ್ವದ ಕಡೆ ಐದೈದು ದೇವತೆಗಳಂತೆ ಇರುತ್ತಾರೆ. ಲಲಿತಾಂಬಿಕೆಯನ್ನು ಬಿಂದುವಿನ ಜಾಗದಲ್ಲಿ ಪೂಜಿಸಲಾಗುತ್ತದೆ. ಈ ಎಲ್ಲಾ ದೇವತೆಗಳಲ್ಲದೆ, ಸಾಧಕನ ಗುರುವಿನ ವಂಶಾವಳಿಯನ್ನೂ ಕೂಡಾ ಮಧ್ಯದ ತ್ರಿಕೋಣದ ಮೇಲುಗಡೆ ಪೂಜಿಸಲಾಗುತ್ತದೆ. ‘ಶ್ರೀ ಚಕ್ರ’ ಮತ್ತು ‘ಮಹಾ ಮೇರು’ ಎರಡೂ ಒಂದೇ. ಮಹಾ ಎಂದರೆ ಮಹತ್ತರವಾದದ್ದು ಮತ್ತು ಮೇರು ಎಂದರೆ ಪರ್ವತವೆಂದರ್ಥ. ದೇವಿಯು ಮಹಾಮೇರುವಿನ ತುದಿಯಲ್ಲಿ ನಿವಸಿಸುತ್ತಾಳೆ (ಶ್ರೀ ಚಕ್ರದ ಲಂಬವಾದ ರೂಪವನ್ನು ಮಹಾಮೇರುವೆಂದು ಕರೆಯುತ್ತಾರೆ). ‘ಶ್ರೀ ಚಕ್ರವು’ ಚಪ್ಪಟೆಯಾದ ರಚನೆಯಾಗಿದ್ದು; ಬಿಂದು ಅಥವಾ ಮಧ್ಯದ ಚುಕ್ಕೆಯು ಮಹಾಮೇರುವಿನ ಮಧ್ಯಭಾಗದಲ್ಲಿದ್ದರೆ; ಮಹಾಮೇರುವು ಲಂಬವಾದ ರಚನೆಯಾಗಿರುವುದರಿಂದ ಬಿಂದುವು ಮಹಾಮೇರುವಿನ ತುದಿಯಲ್ಲಿರುತ್ತದೆ. ದೇವಿಯನ್ನು ಈ ಬಿಂದು ಸ್ಥಾನದಲ್ಲಿ ಪೂಜಿಸುತ್ತಾರೆ.
*******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ ŚRĪ CAKRA - श्री चक्रा http://www.manblunder.com/2012/04/sri-chakra-sri-cakra.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
ಶ್ರೀ ಚಕ್ರದ ಚಿತ್ರ ಕೃಪೆ: http://3.bp.blogspot.com/-knbFFG_ye48/T4m5R2XbBxI/AAAAAAAABHU/3snLSTz8aK8/s200/sri+chakra.jpg
Comments
ನಮಸ್ಕಾರ ಶ್ರೀಧರರವರೆ,
ನಮಸ್ಕಾರ ಶ್ರೀಧರರವರೆ, ಸಾಮಾನ್ಯವಾಗಿ ಈ ಶ್ರೀ ಚಕ್ರವು ಬೀಜಾಕ್ಷರ ಬರಹಗಳನ್ನೊಳಗೊಡಂತೆ ಓದಿದ ನೆನಪು. ಹಾಗಿದ್ದಲ್ಲಿ ಆ ಬರಹಕ್ಕೂ ಅನುಸರಿಸುವ ಕ್ರಮಬದ್ದತೆ, ನಿಯಮಗಳಿರುತ್ತದೆಯೆ? - ನಾಗೇಶ ಮೈಸೂರು, ಸಿಂಗಾಪುರದಿಂದ
In reply to ನಮಸ್ಕಾರ ಶ್ರೀಧರರವರೆ, by nageshamysore
ನಾಗೇಶ್ ಅವರೇ, ನಿಮ್ಮ ಅನುಮಾನ ನಿಜ
ನಾಗೇಶ್ ಅವರೇ, ನಿಮ್ಮ ಅನುಮಾನ ನಿಜ. ಖಂಡಿತಾ, ಶ್ರೀ ಚಕ್ರದ ತ್ರಿಕೋನಗಳಲ್ಲಿ ಹಲವಾರು ಬೀಜಾಕ್ಷರಗಳಿರುತ್ತವೆ. ಅವನ್ನು ಮುಂದಿನ ಕಂತುಗಳಲ್ಲಿ ಸಾಧ್ಯವಾದರೆ ವಿವರಿಸುತ್ತೇನೆ; ಇಲ್ಲಾ ಅದಕ್ಕೆ ಸೂಕ್ತವಾದ ಕೊಂಡಿಯನ್ನು ಕೊಡುತ್ತೇನೆ. ನೀವು ಹೇಳಿದ ಹಾಗೆ ಅದಕ್ಕೂ ಹಲವಾರು ನಿಯಮ ಮತ್ತು ವಿಧಿ-ವಿಧಾನಗಳಿವೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಶ್ರೀಧರ್ಜಿ, ಲಲಿತಾ ಸಹಸ್ರನಾಮ
ಶ್ರೀಧರ್ಜಿ, ಲಲಿತಾ ಸಹಸ್ರನಾಮ ಹೇಳಿ ಹೇಳೀ ಅಲ್ಪ ಸ್ವಲ್ಪ ಕಂಠಪಾಠವಾಗಿದೆ. ನಿಮ್ಮ ಲೇಖನ ನೋಡಿ ಮಂತ್ರದ ಅರ್ಥವೂ ಗೊತ್ತಾಗಿ ಸುಲಭವಾಗಿತ್ತು. ಈಗ ಈ ತ್ರಿಕೋನಗಳು ಒಂದರೊಳಗೊಂದು.. ಸಬ್ಜೆಕ್ಟ್ ಸ್ವಲ್ಪ ಮ್ಯಾತ್ಸ್ ತರಹ ಟಫ್ ಆಗುತ್ತಾ ಇದೆ. :) ಬಾಲಾ ಮಂತ್ರ ಬೋಧಿಸಿ ಆಗಿದೆಯಾ?
In reply to ಶ್ರೀಧರ್ಜಿ, ಲಲಿತಾ ಸಹಸ್ರನಾಮ by ಗಣೇಶ
ಗಣೇಶ್..ಜಿ;
ಗಣೇಶ್..ಜಿ;
ಶ್ರೀ ಚಕ್ರದ ವಿವರಣೆಯಲ್ಲಿ ಗಲಿಬಿಲಿಗೊಳ್ಳುವಂತಹದ್ದೇನೂ ಇಲ್ಲ. ಸ್ವಲ್ಪ ನಿಧಾನವಾಗಿ ಓದಿ ಎಲ್ಲವೂ ಅರ್ಥವಾಗುತ್ತದೆ. ಬಾಲ ಮಂತ್ರದ ಬಗೆಗೆ ಒಂದೆರಡು ಅನುಮಾನಗಳಿವೆ ಅವಕ್ಕೆ ಸೂಕ್ತ ಉತ್ತರವನ್ನು ಶ್ರೀಯುತ ರವಿಯವರನ್ನು ಕೇಳಿ ಪಡೆದುಕೊಂಡು ಅದನ್ನೂ ಸಹ ಪ್ರಕಟಿಸುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ೧೫. ಲಲಿತಾ ಸಹಸ್ರನಾಮ - ಶ್ರೀ ಚಕ್ರದ ವಿವರಣೆ
ಶ್ರೀಧರರೆ, "೧೫. ಲಲಿತಾ ಸಹಸ್ರನಾಮದ ವಿವರಣೆ"ಯ ವಿವರಣೆಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ :-)
.
ಶ್ರೀ ವಿದ್ಯಾ:
__________________________________________
.
ಶ್ರಿ ಲಲಿತಾ ಸಹಸ್ರನಾಮ ಸಮಗ್ರ ಅರಿಯಲು ತಿಳಿದಿರಬೇಕು ಸರ್ವತ್ರ
ಯೋಗಿನಿಯರು ಶ್ರೀವಿದ್ಯಾ ಶ್ರೀಚಕ್ರ, ಪಂಚದಶೀ ಷೋಡಶಿ ಬಾಲಾಮಂತ್ರ
ಶ್ರೀ ವಿದ್ಯಾ ಲಲಿತಾಂಬಿಕೆ ಪೂಜಾಕ್ರಮ, ದೇವಿಯ ಚಕ್ರರೂಪ ಪೂಜಾಗಮ
ಜತೆಗುಚ್ಚರಿಸುವ ಪಂಚದಶೀ, ಷೋಡಶಿ ಮಂತ್ರ ಅರಿಸುತ ಬಾಲಾ ಸುಗಮ ||
.
ಶ್ರೀ ಚಕ್ರಾ
________________________________________
.
ಲಲಿತಾಂಬಿಕೆ ಆವಾಸ ಸ್ಥಾನ ಶ್ರೀಚಕ್ರ, ಕ್ರಿಯಾಶೀಲತೆ ಶಕ್ತಿ ಲಕ್ಷಣ
ಮೇಲ್ಮುಕಕೆ ನಾಲ್ಕು ಶಿವಚಕ್ರ, ಕೆಳಮುಖಕೈದು ಶಕ್ತಿಚಕ್ರ ತ್ರಿಕೋಣ
ಸಂಧಿಸಿರಲೆಲ್ಲ ತ್ರಿಕೋಣ, ನಡುಬಿಂದು ಸಹಿತ ನಲವತ್ನಾಲ್ಕು ಚಕ್ರ
ಅಷ್ಟ ತ್ರಿಕೋಣ ನಿಷ್ಕ್ರಿಯ ಶಿವ, ಕುಂಡಲಿನೀ ಸಾಮ್ಯ ಬ್ರಹ್ಮಾಂಡಚಕ್ರ ||
.
ಬ್ರಹ್ಮಾಂಡ ಚಕ್ರವೆ ಶ್ರೀ ಚಕ್ರ ಸಮೀಕರಿಸಿದಂತೆ ಕುಂಡಲಿನೀ ನವ ಚಕ್ರ
ಷಟ್ಚಕ್ರ, ಸಹಸ್ರಾರ, ಕುಲ-ಅಕುಲಾದಿ ಸಹಸ್ರಾರ ಹೋಲಿಸಿದ ಸೂತ್ರ
ಅಂತೆಯೆ ಪ್ರತಿನಿಧಿತ ಮೇಲ್ಚಕ್ರ ನಾಭಿಯಿಂದೂರ್ಧ್ವಮುಖಿ ಶರೀರ ಚಕ್ರ
ಕೆಳಚಕ್ರದಿ ಪ್ರತಿನಿಧಿಸುತ ಅಧೋನಾಭಿಮುಖಿ ಶರೀರ ಚಕ್ರಗಳ ಪಾತ್ರ ||
.
ಪಂಚ ಶಕ್ತಿ ಕೋನವೆ ಚರ್ಮ, ರಕ್ತ, ಮೆದುಳು, ಮಾಂಸಖಂಡ, ಎಲುಬು
ಚತುರ್ಶಿವಕೋನ ಆತ್ಮ,ಪ್ರಾಣ,ತೇಜಸ್ಸು ಜತೆ ವೀರ್ಯ ಯಾ ಆಂಡಾಣು
ಸ್ಥೂಲ ವಸ್ತು ಶಕ್ತಿ ಕೋನ, ಸೂಕ್ಷ್ಮಕೆ ಶಿವ ಕೋನ ಸಂಯೋಗಕೆ ಸೃಷ್ಟಿಕಣ
ಮೂಲಧಾತು ಶಕ್ತಿಕೋನ, ಮನಸ್ಸು ಬುದ್ಧಿ ಚಿತ್ತ ಅಹಂಕಾರ ಶಿವ ಕೋನ ||
.
ಮೂಲಧಾತುಗಳೈದು ಆಕಾಶ,ವಾಯು,ಅಗ್ನಿ,ವರುಣಾ, ಭೂಮಿಗಳು
ಕೈಕಾಲ್ಬಾಯೆರಡು ವಿಸರ್ಜನಾಂಗ ಕರ್ಮೇಂದ್ರಿಯ ರೂಪಾಂತರಗಳು
ಕಣ್ಣು ಕಿವಿ ಮೂಗು ನಾಲಿಗೆ ಚರ್ಮ ಜ್ಞಾನೇಂದ್ರಿಯ ತನ್ಮಾತ್ರೆಗಳೈದಾಗಿ
ರೂಪರಸಗಂಧಶಬ್ದಸ್ಪರ್ಶ ಶಕ್ತಿಕೋನದಿ, ಶಿವಕೋನ ಅಂತಃಕರಣವಾಗಿ ||
.
ಮೇಲ್ಮುಕ ನಡು ತ್ರಿಕೋಣ ಮಧ್ಯೆ ಉಪಸ್ಥಿತ ಬಿಂದು ಜಗದುಗಮಕೆ ಸಿಂಧು
ಸೂಕ್ಷ್ಮಕಣರೂಪಿಬೀಜ ವೃಕ್ಷವಾಗಿ ಸುತ್ತೆಲ್ಲವು ಪರಮಾನಂದವೆ ನೆಲೆನಿಂದು
ಚುಕ್ಕೆಯಲೈಕ್ಯವಾಗಿ ನಿಂತರಾ ಶಿವ ಶಕ್ತಿ ಧ್ಯಾನಿಸೆ ಸಹಸ್ರಾರ ಬಿಂದು ರೂಪ
ಸಂಯೋಗಸಾಕ್ಷೀ ಗುರು ಇಷ್ಟದೈವ, ಶ್ರೀ ಚಕ್ರಪೂಜೆ 'ನವಾವರಣ' ಸ್ವರೂಪ ||
.
ಕೇಂದ್ರ ಬಿಂದುವನು ಸೇರುವ ಹಾದಿ, ಪೂಜಿಸುತ ಸ್ತ್ರೀ ದೇವತೆಗಳನೆಲ್ಲ ಶ್ರೀ ಚಕ್ರದಿ
ಅವರಣ ಮೊದಲಲಿಪ್ಪತ್ತೆಂಟು, ಹದಿನಾರೆಂಟದಿನಾಲ್ಕಾಗಿ ಎರಡಿಂನಾಲ್ಕರಯಾದಿ
ಐದಾರೇಳರಲಿ ಹತ್ತತ್ತು ಎಂಟು, ಎಂಟರಲಿ ಹದಿನೈದು ಜತೆ ನಾಲ್ಕಾಯುಧ ಪೂಜೆ
ನಡುತ್ರಿಕೋನದದಿನೈದು ತಿಥಿ ನಿತ್ಯ ದೇವತೆಯ ಪಾರ್ಶ್ವಕೈದೈದು ದೇವತೆಗಳ ಸಜ್ಜೆ ||
.
ಬಿಂದು ಜಾಗ ಲಲಿತಾಂಬಿಕೆ ಪೂಜೆಗೆ ಮೀಸಲು, ಸಾಧಕ ಗುರು ವಂಶಾವಳಿ ಜತೆಯೆ
ಶ್ರೀ ಚಕ್ರ ಮೂರಾಯಾಮದ ಲಂಬರೂಪ ಮಹಾಮೇರು, ಮಹತ್ತರ ಪರ್ವತದ ಮಧ್ಯೆ
ತುದಿಯಲಿ ನೆಲೆಸಿಹ ದೇವಿ, ಸಮತಟ್ಟಿನ ಶ್ರೀ ಚಕ್ರ ಮಧ್ಯದಲಿ ಬಿಂದುವಾಗಿ ಪೂಜಿತೆ
ದೇವಾನುದೇವತೆ ಯೋಗಿಣಿಯರೆಲ್ಲ ಶ್ರೀ ಚಕ್ರವಾವರಿಸುತೆ, ತ್ರಿಪುರವಾಸಿ ಶ್ರೀಲಲಿತೆ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು