ಹೇಳತೇವ ಕೇಳ...

ಹೇಳತೇವ ಕೇಳ...

ಪುಸ್ತಕದ ಲೇಖಕ/ಕವಿಯ ಹೆಸರು
ಜಿ.ಎನ್‍.... ಮೋಹನ್, ಜಯಲಕ್ಷ್ಮಿಪಾಟೀಲ್‍, ಎನ್‍. ಸಂಧ್ಯಾರಾಣಿ
ಪ್ರಕಾಶಕರು
ಅಭಿನವ
ಪುಸ್ತಕದ ಬೆಲೆ
100

 

ಹೇಳತೇವ ಕೇಳ....     

“ಮುಂದೊಂದು ದಿನ

ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ.”

ಅವಧಿಯ ಸಂಪಾದಕರಾದ ಜಿ.ಎನ್‍.ಮೋಹನ್‍ ಮುನ್ನುಡಿಯಲ್ಲಿ ಹೇಳಿರುವ ಮಾತಿದು. ಹೌದು ಈ ಪುಸ್ತಕವನ್ನು ಓದಿ ಮುಗಿಸಿದ ನಂತರ ಕಾಡುವ ಅಸಹನೀಯ ಮೌನದಲ್ಲಿ ಮನಸ್ಸು ಬಿಕ್ಕುತ್ತದೆ. ಇನ್ನಾದರೂ ‘ಈ ಜಗತ್ತು ಬದಲಾಗಬಾರದೇ..’ ಎನ್ನಿಸುತ್ತದೆ. ಇದರ ಸಂಪಾದಕಿ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್‍ ಮತ್ತು ಇದರಲ್ಲಿನ ಲೇಖನಗಳ ಸಂಯೋಜಕಿ ಶ್ರೀಮತಿ ಎನ್‍. ಸಂಧ್ಯಾರಾಣಿ. ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಪ್ರತಿಭಟನೆಯ ಸಂದರ್ಭದಲ್ಲಿ ಅವಧಿಯಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವಿದು. ಹಲವು ಮಂದಿ ಮಹಿಳೆಯರು ಬಚ್ಚಿಟ್ಟ ತಮ್ಮ ನೋವನ್ನು ಇಲ್ಲಿ ತೆರೆದಿದ್ದಾರೆ.

ಇದರಲ್ಲಿ ‘ಹೀಗಾಯ್ತು.., ಬೇಡ.., ಬಿಕ್ಕು..,ಮತ್ತು ಬೆಳಕಿಗಾಗಿ’ ಎಂಬ ನಾಲ್ಕು ಭಾಗಗಳಿವೆ. ‘ಹೀಗಾಯ್ತು..’

ಭಾಗದಲ್ಲಿ ಹಲವರು ತಮ್ಮ ಅನುಭವಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

“ಇದನ್ನು ಜೋಪಾನವಾಗಿ ಇಟ್ಟುಕೋ. ಬ್ಯಾಗಿಗೆ ಕೈ ಹಾಕಿದಾಗ ತಕ್ಷಣ ಕೈಗೆ ಸಿಗಬೇಕು. ಅದಕ್ಕೆ ಇದನ್ನು ಒಂದು ಬದಿಯಲ್ಲಿ ಇಟ್ಟುಕೋ’ ಎಂದು ಅಮ್ಮ ಪುಟ್ಟ ಚಾಕುವೊಂದನ್ನು ಬ್ಯಾಗ್‍ನಲ್ಲಿ ತುಂಬಿಸಿಟ್ಟಿದ್ದಳು. ‘ಯಾಕಮ್ಮಾ ಇದೆಲ್ಲಾ?’ ಎಂದು ಕೇಳಿದರೆ ‘ಮೂರು ಮೈಲಿ ದೂರ ನಡೆದು ಹೋಗ್ತಿಯಾ. ಅದು ಬೇರೆ ಕಾಡುದಾರಿ. ಯಾರಾದ್ರೂ ಕೀಟಲೆ ಮಾಡಿದ್ರೆ.. ಇದನ್ನು ತೋರಿಸು’ ಎಂದು ಹೇಳಿದ್ದಳು ಅಮ್ಮ. ಆಗ ನಾನು ನಾಲ್ಕನೇ ತರಗತಿ. ಟೀಚರ್‍ ಬ್ಯಾಗ್‍ ನೋಡಿದ್ರೆ ಅಂತ ಅಮ್ಮನ ಬಳಿ ಕೇಳಿದ್ರೆ, ನನ್ನ ಕೇಳೋಕೆ ಹೇಳು ಎಂದು ಅಷ್ಟಕ್ಕೆ ಬಾಯಿ ಮುಚ್ಚಿಸಿ ಬಿಡೋಳು.”... ವರ್ಷ ಕಳೆದಂತೆ ಅಮ್ಮ ಕೊಟ್ಟ ಚಾಕುವಿನ ಅರ್ಥ ತಿಳಿಯುತ್ತಿತ್ತು. ಅಮ್ಮ ಒಂದೊಂದಾಗಿ ಬಿಡಿಸಿ ಹೇಳುತ್ತದ್ದಳು... ನನ್ನಲ್ಲಿ ಬೆನ್ನಿಗೆ ಹಾಕುವ ಬ್ಯಾಗ್‍ ಇತ್ತು. ಅದರ ಬದಿಯಲ್ಲಿ ಅದನ್ನು ತುಂಬಿಸಿಡೋಳು. ಪ್ರತಿವಾರ ಅದು ತುಕ್ಕು ಹಿಡಿದಿದೆಯೇ ಎಂದು ನೋಡಿ ಎಣ್ಣೆ ಸವರಿ ಇಡುತ್ತಿದ್ದಳು... ಎಂಟನೇ ತರಗತಿಗೆ ಬಂದಾಗ ಅಮ್ಮ ಹಳೆ ಚಾಕು ಬೇಡ ಎಂದು ಹೊಸ ಚಾಕು ತಂದುಕೊಟ್ಟಿದ್ದಳು..”- ಇದು ‘ಹೀಗಾಯ್ತು’ ಭಾಗದಲ್ಲಿನ ಮೊದಲ ಲೇಖನದ ಕೆಲವು ಸಾಲುಗಳು. ಎಲ್ಲ ಅಮ್ಮಂದಿರು ಹೀಗಿರುವುದಿಲ್ಲ. ನಡೆದ ಕಹಿಘಟನೆಯನ್ನು ಮೊದಲಿಗೆ ಹಿರಿಯರಿಗೆ ಹೇಳಲೇ ಮಕ್ಕಳು ಹೆದರುತ್ತವೆ. ಅಂತಹದರಲ್ಲೂ ಎಲ್ಲೋ ಕೆಲವರು ಹೇಳಿಕೊಂಡರೂ ಕೂಡ ಮಾನ-ಮರ್ಯಾದೆಯ ಹೆದರಿಕೆಯಲ್ಲಿ ಅಮ್ಮಂದಿರು ಮಕ್ಕಳನ್ನು ಮರೆಮಾಡಿ ಬಿಡುತ್ತಾರೆ. ತಪ್ಪೆಸಗಿದವರ ವಿರುದ್ಧ ದನಿಯೆತ್ತುವುದೇ ಇಲ್ಲ. “ ಥೂ ನೀನು ಹೀಗೆ ಮಾಡಿ ಮಾಡಿಯೇ ನಮ್ಮ ಬಾಯನ್ನು ಆಗಲೂ ಮುಚ್ಚಿಬಿಟ್ಟೆ” ಎಂದು ಮಗಳು ಮುಂದೊಂದು ದಿನ ಅಮ್ಮನನ್ನು ಎದುರಿಸುತ್ತಾಳೆ. ತನ್ನ ಮಗಳ ರಕ್ಷಣೆಗೆ ನಿಲ್ಲುತ್ತಾಳೆ. ನಮ್ಮ ಮನೆಯ ಮಗಳನ್ನು ಎಷ್ಟೆಲ್ಲ ಜತನದಿಂದ ಕಾಪಾಡಿಕೊಳ್ಳಬೇಕಾಗಿದೆ ನೋಡಿ. ಸುತ್ತಲಿರುವ ಯಾರನ್ನೂ ನಂಬುವಂತಿಲ್ಲ. ಯಾರೊಳಗೆ ಯಾವ ರಾಕ್ಷಸನಿದ್ದಾನೋ ಯಾರು ಬಲ್ಲರು? ಏನೋ ಆತಂಕ, ದುಗುಡ, ಭಯ.. ಹೆಣ್ಣು ಮಕ್ಕಳ ಬದುಕು ಇಂತಹುದರ ನೆರಳಲ್ಲೇ ಕಳೆಯುವಂತೆ ಮಾಡಿರುವುದಾದರೂ ಯಾರು? ಈ ಭಾಗದ ಪ್ರತೀ ಲೇಖನವೂ ಓದಿದ ನಂತರ ಕಾಡದೆ ಬಿಡದು. ಲೇಖನಗಳೊಂದಿಗೆ ಉಳಿದ ಭಾಗಗಳಲ್ಲಿ ಕಥೆಗಳಿವೆ, ಪದ್ಯಗಳಿವೆ.. ಸಮಸ್ಯೆಯ ವಿಶ್ಲೇಷಣೆಯಿದೆ.

ನಮ್ಮ ಮಕ್ಕಳಿಗೆ ಹೇಳಿಕೊಡಬೇಕಾದ ಪಾಠಗಳು ಕಳಬೇಡ,ಕೊಲಬೇಡ,ಹುಸಿಯನುಡಿಯಲು ಬೇಡ ಮಾತ್ರವಲ್ಲ.. ಅದನ್ನು ಮೀರಿ ಮಾನವೀಯತೆಯೊಂದಿಗೆ ಸಹಜೀವಿಗಳೊಂದಿಗೆ ವರ್ತಿಸುವುದನ್ನು ಕಲಿಸಬೇಕಾಗಿದೆ. ಹೆಣ್ಣು-ಗಂಡು ಸಮಾನವಾಗಿ ನಕ್ಕು ನಲಿಯುತ್ತಾ ಬಾಳುವುದನ್ನು ನಾವು ಮಾದರಿಯಾಗಿ ನಿಂತು ಕಲಿಸಬೇಕಾಗಿದೆ. ಈ ಪುಸ್ತಕ ಅಂತಹ ಬದುಕು ಏಕೆ ಬೇಕು ಎಂದು ಒಮ್ಮೆ ಯೋಚಿಸುವಂತೆ ಮಾಡುತ್ತದೆ.

 

Comments

Submitted by makara Wed, 05/15/2013 - 08:58

ಯತ್ರ ನಾರ್ಯಾಸ್ತು ಪೂಜ್ಯಂತೇ ತತ್ರ ರಮಂತೇ ದೇವತಾಃ - ನಾರಿಯರನ್ನು ಪೂಜಿಸುವುದಿರಲಿ ಅವರನ್ನು ಮನಷ್ಯರಂತೆಯೂ ಬಾಳಗೊಡದ ನಾವು ಎತ್ತ ಸಾಗುತ್ತಿದ್ದೇವೆ ಎಂದು ಒಮ್ಮೆ ಆಲೋಚಿಸಿದರೂ ನಮ್ಮ ವ್ಯವಸ್ಥೆ ಎಷ್ಟೋ ಸುಧಾರಿಸುತ್ತದೆ. ಸ್ತ್ರೀ ಸ್ವಾತಂತ್ರ‍್ಯದ ಹೆಸರಿನಲ್ಲಿ ತುಂಡುಡುಗೆಯನ್ನು ಉಡುವುದು, ಮತ್ತು ಅತ್ಯಾಚಾರಗಳು ಸೀರೆ ತೊಟ್ಟವರ ಮೇಲೂ ಜರುಗುತ್ತವೆ ಎಂದು ಉಢಾಫೆಯಾಗಿ ಮಾತನಾಡುವುದು, ವಿವಾಹದ ಮೊದಲು ಲೈಂಗಿಕತೆ ತಪ್ಪೇನಲ್ಲ ಎಂದು ಭಾಷಣ ಬೀರುವ ಮಹಿಳಾ ಮಣಿಗಳಿರುವುದು ಮತ್ತು ಇದನ್ನೇ ಬಂಡವಾಳವಾಗಿಸಿಕೊಂಡು ಇವರನ್ನು ಅಶ್ಲೀಲವಾಗಿ ಸಿನಿಮಾಗಳಲ್ಲಿ ತೋರಿಸುವ ನಿರ್ಮಾಪಕ, ನಿರ್ದೇಶಕರು ಎಲ್ಲರೂ ಒಮ್ಮೆ ಆಲೋಚಿಸಬೇಕಾದ ವಿಷಯ. ಕೇವಲ ಕಾನೂನು ರಚಿಸಿದ ಮಾತ್ರಕ್ಕೇ ಇಂತಹವೆಲ್ಲಾ ನಿಂತು ಹೋಗುತ್ತವೆ ಎಂದು ಭಾವಿಸುವ ದೂರಾಲೋಚನೆಯಿಲ್ಲದ ನಮ್ಮ ಆಡಳಿತಗಾರರೂ ಸಹ ಇದರ ಕುರಿತಾಗಿ ಆಲೋಚಿಸಬೇಕಾಗಿದೆ. ಒಳ್ಳೆಯ ಪುಸ್ತಕವನ್ನು ಪರಿಚಯಿಸುತ್ತಿರುವುದಕ್ಕೆ ಧನ್ಯವಾದಗಳು ಹೇಮಾ ಅವರೆ. ನಿಮ್ಮ ಈ ಪ್ರಯತ್ನ ಮುಂದುವರೆಯಲಿ.

Submitted by venkatb83 Fri, 05/17/2013 - 17:32

In reply to by makara

+1

ಶ್ರೀಧರ್ ಜೀ ಅವರ ಅನಿಸಿಕೆಗೆ ನನ್ ಸಹಮತವಿದೆ ..
ಹೆಸರು-ಪ್ರಚಾರ -ಸದಾ ಸುದ್ಧಿಯಲ್ಲಿರಲು (ಕೆಟ್ಟ ವಿಚಾರಗಕ್ಕೆ ) ಹಣಕ್ಕಾಗಿ ಸದಾ ಹಾತೊರೆಯುವ ಇವರ ಲಿಸ್ಟ್ ನೋಡಿ
ಪೂನಂ ಪಾಂಡೆ
ಶೆರ್ಲಿನ್ ಚೋಪ್ರ
ಇನ್ನಿತರರು ಇರುವರು
ಮತ್ತು ದುರಾಧ್ರುಸ್ತ ಅಂದ್ರೆ ಈ ಲಿಸ್ಟ್ ಬೆಳೆಯುತ್ತಿರುವುದು ..;(
ಇವರು ಸುದ್ಧಿಯಲ್ಲಿರಲು ಮಾಡದ ಯತ್ನವಿಲ್ಲ ...!! ಹಾಗೆಯೇ ಡೆಲ್ಲಿ ಗ್ಯಾಂಗ್ ರೇಪ್ ಮತ್ತಿತರ ಮಹಿಳಾ ದೌರ್ಜನ್ಯ ಸಂಬಂಧಿ ವಿಷಯಗಳಿಗಾಗಿ ಅದೂ ಪುಕ್ಸಟ್ಟೆ ಪ್ರಚಾರಕ್ಕಾಗಿ ಏನೇನೋ ಹೇಳುವರು ಆದರೆ ತಾವೇ ಅದನ್ನು ಪಾಲಿಸರು ..;(
ಸಿನೆಮಾಗಳಲ್ಲಿ -ಜಾಹೀರಾತುಗಳಲ್ಲಿ ವೀಕ್ಷಕರಿಗೆ ಮುಜುಗರವಾಗುವ ಹಾಗೆ ನರ್ತಿಸುವ -ಮೈ ಪ್ರದರ್ಶಿಸುವ ಇಂತವರೇ ಮೊದಲಿಗೆ ಮಹಿಳೆಯರ ಶತ್ರುಗಳು ಎಂದು ಹೇಳಬಹ್ದು.
ಹಾಗೆ ದೂರಿದರೆ ಅದಕ್ಕೂ ಅವರಲ್ಲಿ ಉತ್ತರ ರೆಡಿ - ಸಿನೆಮ ಮನರಂಜನ ಮಾಧ್ಯಮ ... ಅಭಿವ್ಯಕ್ತಿ ಸ್ವಾತಂತ್ರ್ಯಇತ್ಯಾದಿ ... ;(

>>>>ಪುಸ್ತಕ ಪರಿಚಯಗಳ ಲೇಖನಗಳು ಸಂಪದದಲ್ಲಿ ಹೆಚ್ಹೆಚ್ಚಿಗೆ ಕಾಣಿಸುತ್ತಿರುವುದು ಸಂತಸದ ವಿಷ್ಯ .
ಶುಭವಾಗಲಿ

\।/

Submitted by lpitnal@gmail.com Wed, 05/15/2013 - 10:59

ಹೇಮಾಜಿ, ಲಕ್ಸ್ಮೀಕಾಂತ ಇಟ್ನಾಳರ ವಂದನೆಗಳು. ಈ ಹೇಳತೇವ ಕೇಳ ಬಗ್ಗೆ ಪುಸ್ತಕ ಬಿಡುಗಡೆಗೊಂಡ ಸಂದರ್ಭದಲ್ಲಿ ಜಯಲಕ್ಷ್ಮಿ ಪಾಟೀಲ, ಸಂಧ್ಯಾರಾಣಿ, ಮೋಹನ ಜಿ ಎನ್ ರು ಇನ್ನೂ ಅನೇಕರು ಹೇಳಿದ ಮಾತುಗಳನ್ನು ಕಿವಿಯಾಗಿ, 'ಅವಧಿ' ಯಲ್ಲಿ ಓದಿದ್ದೆ, ಅದರ ಕುರಿತು ಜಾಗೃತಿ ಲೇಖನ ಮೆಚ್ಚುಗೆಯಾಯಿತು. ಪುಸ್ತಕ ಕೊಂಡು ಓದುವೆ. ಎಲ್ಲೋ ಒಂದು ಕಡೆ ನಮ್ಮ ಬೇರುಗಳೇ ಅಲ್ಲಾಡುತ್ತಿವೆಯೋ ಏನೋ ಅನಿಸಿ, ಸುತ್ತ ಕಟ್ಟಿದ ಹುತ್ತಿನಂತಹ ವ್ಯವಸ್ಥೆಗೆ ಛೀಮಾರಿ ಹಾಕಬೇಕೆನಿಸುತ್ತದೆ.. ಉತ್ತಮ? ಪುಸ್ತಕವೊಂದರ ಪರಿಚಯ ಸಂಪದಿಗರಿಗೆ ಮಾಡಿದ್ದಕ್ಕೆ ವಂದನೆಗಳು