ಅಮಲು ಗಣ್ಣಿಗೆ ಅವಳೇ ಸುಂದರ ಗಾಂಧಾರಿ..!
ಅಮಲು ಗಣ್ಣಿಗೆ ಅವಳು
ಸದಾ ಸುಂದರ ಗಾಂಧಾರಿ..
ಈ ಸಾಲು ಸಾಕಷ್ಟು ಅರ್ಥವನ್ನ ಹೊಂದಿದೆ. ಮಸಣದಲ್ಲಿ ಬೆಳೆಯೋ ಹೂವಿಗೆ ಬೆಲೆ ಇಲ್ಲ. ವೇಶಾವಾಟಿಕೆಯಲ್ಲಿ ಕಳೆದು ಹೋದ ಹೆಣ್ಣಿಗೂ ಇದೆ ಗತಿ. ಪಾಪದ ಹೂಗಳವರೆಲ್ಲ. ತಳ್ಳಲು ಪಟ್ಟೋ. ತಪ್ಪು ಹಾದಿ ತುಳಿಸಿಯೋ.. ಕಳೆದು ಹೋಗೋ ಇಂತಹ ಹೆಣ್ಮಕ್ಕಳಿಗೆ ಸಮಾಜದಲ್ಲಿ ಮೌಲ್ಯ ಎಂದೂ ಇಲ್ಲ. ಸಿನಿಮಾರಂಗದಲ್ಲಿ ಈ ಪಾತ್ರಗಳಿಗಷ್ಟೇ ಭಾರೀ ಮೌಲ್ಯವಿದೆ. ಇವರ ಕರುಣಾಜನಕ ಕತೆಯನ್ನ ಹೆಣದು ದುಡ್ಡು ಮಾಡಿದೆ. ಈಗ ಕನ್ನಡದಲ್ಲೂ ಅದೇ ಟ್ರೆಂಡ್ ಮತ್ತೆ ಶುರುವಾಯ್ತೇನೋ ಎಂಬ ಅನುಮಾನ ಕಾಡ್ತಿದೆ. ಆ ಕಾಡುವಿಕೆಗೆ ಕಡ್ಡಿಪುಡಿ ಸದ್ಯದ ಸಿನಿಮಾ.
ಸೌಂದರ್ಯ ಸಮರ. ಸೋತವನೇ ಅಮರ. ಪಡೆದು ಕೊಳ್ಳೋಕೆ ಬೇರೆ ಏನೂ ಇಲ್ಲಾ ಇಲ್ಲಿ. ಇರುವುದನ್ನ ಪಡೆದುಕೊಳ್ಳಿ. ಪಡೆದು ಕಳೆದು ಕೊಳ್ಳಿ. ಈ ಸಾಲುಗಳು ವೇಶ್ಯೆ ಬದುಕಿನ ಸುತ್ತ ಹೆಣೆಯಲ್ಪಟ್ಟಂತಿವೆ. ಮುಂದಿನ ಸಾಲನ್ನ ಗಮನಿಸಿದ್ರೆ, ಈಗಾಗಲೇ ನೀವೂ ಓದಿರೋದನ್ನೇ ಮತ್ತೆ ಹೇಳೋದಾದ್ರೆ, ಅಮಲು ಗಣ್ಣಿಗೆ ಇವಳು ಸದಾ ಸುಂದರ ಗಾಂಧಾರಿ. ಹೌದು...ಈ ಪಾತ್ರಕ್ಕೆ ಐಂದ್ರಿತಾ ಎಂಬ ಸ್ಲಿಮ್ ಸುಂದರಿಯನ್ನ ಆಯ್ಕೆ ಮಾಡಲಾಗಿದೆ. ನಿದೇರ್ಶಕ ಸೂರಿ ಮೊದ್ಲೆ ಕಲಾ ನಿರ್ದೇಶಕ್ರು. ತಮ್ಮ ಕಲಾವಂತಿಕೆಯನ್ನ ಐಂದ್ರಿತಾರನ್ನ ಸುಂದರವಾಗಿ ಚಿತ್ರಿಸುವಲ್ಲಿ ತುಂಬಾ ಶ್ರಮವಹಿಸಿದ್ದಾರೆ. ಅದರ ಫಲವೇ ಈಗ ಯೋಗರಾಜ್ ಭಟ್ಟರ ಬರೆದ ಸೌಂದರ್ಯ ಸಮರ ಹಾಡು ಈ ಪಾತ್ರಕ್ಕೆ ಸೂಕ್ತವೆನಿಸುತ್ತದೆ.
ವೇಶ್ಯೆ ಪಾತ್ರಕ್ಕೆ ನಮ್ಮ ಕನ್ನಡದ ನಟಿಯರು ತುಂಬಾ ಉತ್ಸಾಹದಲ್ಲಿಯೇ ಒಪ್ಪಿಕೊಳ್ಳುತ್ತಿದ್ದಾರೆ. ನೀರ್ ದೋಸೆ ಸಿನಿಮಾದ ವೇಶ್ಯೆ ಪಾತ್ರಕ್ಕಾಗಿ ಮೋಹಕ ತಾರೆ ರಮ್ಯ ದಪ್ಪ ಕೂಡ ಆಗಿದ್ದಾರೆ. ಪಕ್ಕಾ ಕಾಲ್ ಗರ್ಲ್ ಹಾಗೆ ಕಾಣಬೇಕು ಅಂತಲೇ ಅದಕ್ಕೆ ತಯಾರಿ ಮಾಡಿಕೊಂಡೇ ಪಾತ್ರ ನಿರ್ಹಿಸಿದ್ದಾರೆ. ಈ ಒಂದು ಪಾತ್ರ ಒಪ್ಪಿಕೊಂಡದ್ದೇ ತಡ. ಕನ್ನಡ ಇಂಡಸ್ಟ್ರೀಲಿ ರಮ್ಯ ಭರ್ಜರಿ ಸುದ್ದಿಯಲ್ಲಿದ್ದಾರೆ. ಅಷ್ಟೇ ಅಲ್ಲ, ಇದನ್ನ ತೆರೆ ಮೇಲೆ ನೋಡೊ ಪ್ರೇಕ್ಷಕರು ರಮ್ಯ ರನ್ನ ಹೇಗೆ ತೆಗೆದುಕೊಳ್ಳುತ್ತಾರೆಂಬ ಕುತೂಹಲವೂ ಅಷ್ಟೇ ಮೂಡಿದೆ.
ಶುಭಾ ಪೂಂಜಾ ಅರ್ಥ ಅನ್ನೊ ಚಿತ್ರಕ್ಕೆ ಇದೇ ರೀತಿಯ ಪಾತ್ರವನ್ನ ನಿಭಾಯಿಸುತ್ತಿದ್ದಾರೆ. ಪುಟ್ಟ ಕಂದಿಲು ಹಿಡಿದುಕೊಂಡು, ರಾತ್ರಿ ವೇಳೆಯಲ್ಲಿ ವೇಶ್ಯೆ ಬದುಕು ಹೇಗಿರುತ್ತದೆಂಬ ಚಿತ್ರಣ ನೀಡೋ ಫೋಟೋಗಳಲ್ಲಿ ಪೂಜಾ ಕಾಣಿಸಿಕೊಂಡಾಗಿದೆ. ಈ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರೋ ಶುಭಾ ಪೂಂಜಾ, ವೇಶ್ಯೆ ಬದುಕನ್ನ ತೆರೆ ಮೇಲೆ ಕಟ್ಟಿಕೊಡ್ತಿದ್ದಾರೆ.ಆದ್ರೆ, ಇದು ಕನ್ನಡಕ್ಕೆ ಹೊಸದೇನೂ ಅಲ್ಲ. ಗೆಜ್ಜೆ ಪೂಜೆ ಅದೇ ಸಾಲಿನ ಒಂದು ಸಿನಿಮಾ. ನಟಿ ಲೀಲಾವತಿಯವ್ರು ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಹೂ ಹಣ್ಣು, ಮನಸಣದ ಹೂ ಅಂತಹದ್ದೇ ಬದುಕಿನ ಚಿತ್ರಣವನ್ನ ಪ್ರೇಕ್ಷಕರಿಗೆ ನೀಡಿ, ಸಮಾಜದ ಓರೆ ಕೋರೆಗಳನ್ನ ಎತ್ತಿ ಹಿಡಿಯೋ ಕೆಲಸ ಮಾಡಿದ್ದವು.
ಆದ್ರೆ, ಅಗ ಕಮರ್ಷಿಲ್ ಕಲ್ಪನೆ ಇದ್ದಂತೆ ಕಾಣಲಿಲ್ಲ. ಹೆಣ್ಣಿನ ಸಂವೇದನೆಯನ್ನ ಬೆಳ್ಳಿ ತೆರೆ ಮೇಲೆ ಚಿತ್ರೀಸೋ ಮಹತ್ಕಾರ್ಯವನ್ನ ನಿದೇರ್ಶಕರು ಮಾಡ್ತಿದ್ದರು. ಬಾಲಿವುಡ್ ಕೂಡ ಈ ವಿಷ್ಯದಲ್ಲಿ ಹಿಂದೆ ಬಿದಿರಲಿಲ್ಲ. ಪಾಕೀಜಾ,ಉತ್ಸವ್,ಪ್ಯಾಸಾ,ಆಸ್ತಾ, ಚಾಂದಿನಿ ಬಾರ್, ಚಮೇಲಿ ಸಿನಿಮಾಗಳೂ ವೇಶ್ಯೆ ಮನಸ್ಸು ಮಾಸಿದ ಬದುಕಿನ ಕ್ರೌರ್ಯವನ್ನ ಕಟ್ಟಿಕೊಟ್ಟಿವೆ. ಇತ್ತೀಚಿಗೆ ಬಂದ ಲಾಗಾ ಚುನರೀ ಮೇ ದಾಗ್ ಸಿನಿಮಾದಲ್ಲಿ ರಾಣಿ ಮುರ್ಖಜಿ ಹೈ ಪಾಯ್ ವೇಶ್ಯಾವಾಟಿಕೆಯಲ್ಲಿ ತೊಡಗಿರೊ ಪಾತ್ರದಲ್ಲಿ ನಟಿಸಿದ್ದರು. ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಗಳಿಕೆ ಮಾಡದೆ ಇದ್ದರೂ, ಮೆಟ್ರೋ ಪಾಲಿಟಿನ್ ಸಿಟಿಯ ಈಗಿನ ಚಿತ್ರಣವನ್ನ ಕಟ್ಟಿಕೊಡುತ್ತಲೇ, ರಾಣಿ ಮುರ್ಖಿ ಪಾತ್ರವನ್ನ ಮೆಚ್ಚುವಂತೆ ಮಾಡಿತ್ತು.
ವೇಶ್ಯೆಯರ ಕತ್ತಲ ರಾತ್ರಿಯ ಬದುಕು ಸಿನಿಮಾದವರಿಗೆ ಪಾತ್ರವಾಗಿ ಕಾಣಿಸುತ್ತದೆ. ದುಡ್ಡು ಮಾಡೋ ಮಾರ್ಗವಾಗಿರೋದು ಅಷ್ಟೇ ಸತ್ಯ ಅನಿಸುತ್ತದೆ. ಇಷ್ಟು ಬಿಟ್ರೆ, ಇಂತಹ ಸಿನಿಮಾಗಳಿಂದ ಇಲ್ಲಿವರೆಗೂ ಒಬ್ಬೇವೊಬ್ಬ ವೇಶ್ಯೆ ಬದುಕು ಎಲ್ಲರಂತೆ ಮುಖ್ಯವಾಹಿನಿಗೆ ಬಂದೇ ಇಲ್ಲ. ಇದೇ ನೋಡಿ ಪರಿಣಾಮಕಾರಿ ಮಾಧ್ಯಮವಾದ ಸಿನಿಮಾದ ದುರಂತ..
-ರೇವನ್
Comments
ಈ ಸಿನಿಮಾಗಳಿಂದ ಒಬ್ಬೇ ಒಬ್ಬ