ರಾಷ್ಟ್ರೀಯ ಕಾರ್ಯಕ್ರಮಗಳು ರಾಜಕೀಯ ಕಾರ್ಯಕ್ರಮಗಳಾಗದಿರಲಿ!

ರಾಷ್ಟ್ರೀಯ ಕಾರ್ಯಕ್ರಮಗಳು ರಾಜಕೀಯ ಕಾರ್ಯಕ್ರಮಗಳಾಗದಿರಲಿ!

 

 

     ೧೯೭೫-೭೭ರ ತುರ್ತು ಪರಿಸ್ಥಿತಿ ಕಾಲದಲ್ಲಿ, ಪತ್ರಿಕಾ ಸೆನ್ಸಾರ್ ಜಾರಿಯಲ್ಲಿದ್ದ ಕಾಲದಲ್ಲಿ ಪತ್ರಿಕೆಗಳು ಮತ್ತು ರೇಡಿಯೋಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅಂದಿನ ಪ್ರಧಾನಿ ಇಂದಿರಾಗಾಂಧಿಯ ಗುಣಗಾನ ಬಿಟ್ಟರೆ ಕಾಂಗ್ರೆಸ್ ವಿರೋಧಿ ಸುದ್ದಿಗಳಿಗೆ ಅವಕಾಶವೇ ಇರಲಿಲ್ಲ. ಆಗ ಕೇಳಿ ಬರುತ್ತಿದ್ದ ಒಂದು ಪ್ರಚಾರ ಗೀತೆ -'ಇಂದಿರಾಗಾಂಧಿಯ ಇಪ್ಪತ್ತಂಶದ ಕಾರ್ಯಕ್ರಮ, ಜನತೆಗೆ ಮಾಡಿದೆ ಬಾಳ್ ಸುಗಮ'- ಎಲ್ಲರಿಗೂ ಬಾಯಿಪಾಠವಾಗಿತ್ತು. ಆ ಇಪ್ಪತ್ತಂಶದ ಕಾರ್ಯಕ್ರಮಗಳಿಗೆ ಬೇಕಾದ ಹಣ ಬರುತ್ತಿದ್ದುದು ಸರ್ಕಾರದ ಖಜಾನೆಯಿಂದ, ಇಂದಿರಾಗಾಂಧಿಯವರಿಂದಲಾಗಲೀ, ಕಾಂಗ್ರೆಸ್ ಪಕ್ಷದಿಂದಲಾಗಲೀ ಅಲ್ಲ. ಹೆಸರು ಮಾತ್ರ ಅವರದು. ಅಲ್ಲಿಂದ ಪ್ರಾರಂಭವಾದ ಈ ಕೆಟ್ಟ ಪರಂಪರೆ ದೇಶವನ್ನು ಅಧೋಗತಿಗೆ ಒಯ್ಯುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಘೋಷಿಸುವ ಕಾರ್ಯಕ್ರಮಗಳನ್ನು ಅಧಿಕಾರಕ್ಕೆ ಬಂದ ನಂತರದಲ್ಲಿ ತಮ್ಮ ನೇತಾರರುಗಳ ಹೆಸರಿನಲ್ಲಿ ಜಾರಿಗಳಿಸಲು ಪ್ರಾರಂಭಿಸಿದವು. ಹಿಂದಿದ್ದ ಯೋಜನೆ, ಕಾರ್ಯಕ್ರಮಗಳನ್ನೇ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿ ತಮ್ಮದೇ ಕಾರ್ಯಕ್ರಮವೆಂಬಂತೆ ಬಿಂಬಿಸತೊಡಗಿದವು. ಇಂದು ಇಂದಿರಾಗಾಂಧಿ ಮತ್ತು ರಾಜೀವಗಾಂಧಿಯವರ ಹೆಸರಿನಲ್ಲಿ ದೇಶದಲ್ಲಿ ಎಷ್ಟು ಸರ್ಕಾರಿ ಸಂಸ್ಥೆಗಳು, ಯೋಜನೆಗಳು, ಕಟ್ಟಡಗಳು ಇವೆಯೋ ಅದರ ಲೆಕ್ಕ ಯಾರಿಗೂ ತಿಳಿದಿರಲಾರದು. ಕಾಂಗ್ರೆಸ್ಸೇತರ ಸರ್ಕಾರಗಳ ಕಥೆಯೂ ಇದೇ. ರಾಜ್ಯ ಸರ್ಕಾರಗಳೂ ಕೇಂದ್ರ ಸರ್ಕಾರದ ಹಿರಿಯಕ್ಕನ ಚಾಳಿಯನ್ನೇ ಮುಂದುವರೆಸಿಕೊಂಡು ಬರುತ್ತಿವೆ. ಜನಸಾಮಾನ್ಯನ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುವುದಾದರೂ, ಸಂವಿಧಾನ ಬದ್ಧ ಕರ್ತವ್ಯಗಳನ್ನು ನಿರ್ವಹಿಸುವುದಾದರೂ ಅವುಗಳಿಗೆ ಪಕ್ಷಗಳ ಸಾಧನೆಯೆಂಬಂತೆ ಬಿಂಬಿಸುವ ಪ್ರವೃತ್ತಿ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. 

     ಜನಸಾಮಾನ್ಯರ ಪ್ರಾಥಮಿಕ ಅಗತ್ಯತೆಗಳಾದ ಕುಡಿಯುವ ನೀರು ಒದಗಿಸುವುದು, ಉತ್ತಮ ಶಿಕ್ಷಣ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು, ಮೂಲಭೂತ ಸೌಕರ್ಯಗಳಾದ ಸಂಪರ್ಕ ರಸ್ತೆಗಳು, ಚರಂಡಿಗಳ ನಿರ್ಮಾಣ ಮತ್ತು ನಿರ್ವಹಣೆ, ಉತ್ತಮ ಆರೋಗ್ಯ ಪಾಲನೆ ಮತ್ತು ಸುಯೋಗ್ಯ ಚಿಕಿತ್ಸಾ ವ್ಯವಸ್ಥೆ, ಇತ್ಯಾದಿ ಹಲವು ಪ್ರಾಥಮಿಕ ಅಂಶಗಳನ್ನು ಮುಂದಿಟ್ಟುಕೊಂಡು ಎಲ್ಲಾ ರಾಜಕೀಯ ಪಕ್ಷಗಳವರೂ ಒಟ್ಟಾಗಿ ದೇಶಕ್ಕೆ ಒಂದು ಸಾಮಾನ್ಯ ಕಾರ್ಯಕ್ರಮ ರೂಪಿಸಬೇಕು. ಯಾವುದೇ ಪಕ್ಷದ ಸರ್ಕಾರ ಬಂದರೂ ಈ ಸಾಮಾನ್ಯ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾದುದು ಅವುಗಳ ಮೂಲಭೂತ ಜವಾಬ್ದಾರಿಯಾಗಬೇಕು. ಈ ಕಾರ್ಯಕ್ರಮಗಳನ್ನು ಬದಲಾವಣೆ ಮಾಡಿ ಕಾಂಗ್ರೆಸ್ ಕಾರ್ಯಕ್ರಮ, ಬಿಜೆಪಿ ಕಾರ್ಯಕ್ರಮ, ಕಮ್ಯುನಿಸ್ಟ್ ಕಾರ್ಯಕ್ರಮ ಎಂದು ಹೇಳಬಾರದು. ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳು ಈ ಸಾಮಾನ್ಯ ಕಾರ್ಯಕ್ರಮಗಳಿಗೆ ಬದ್ಧರಾಗಿರುತ್ತೇವೆಂದು ಸಹಿ ಮಾಡಬೇಕು. ನಮ್ಮ ಚುನಾವಣಾ ಆಯೋಗ ಇದನ್ನು ಏಕೆ ಕಡ್ಡಾಯ ಮಾಡಬಾರದು? ಚುನಾವಣಾ ಸಮಯಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ಆಗ ಗಣನೀಯವಾಗಿ ಕಡಿಮೆಯಾದಾವು. ಜನರನ್ನು ಸೋಮಾರಿಗಳನ್ನಾಗಿಸುವ ಅಗ್ಗದ ಕಾರ್ಯಕ್ರಮಗಳಿಗೆ ಕಡಿವಾಣ ಬೀಳಬೇಕು. 'ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ' ಎಂಬ ಗಾದೆಯಂತೆ ಈಗ ಜಾರಿಗೆ ತರಲು ಉದ್ದೇಶಿಸಿರುವ ಒಂದು ರೂಪಾಯಿಗೆ ೧ ಕೆ.ಜಿ. ಅಕ್ಕಿಯ ಕಾರ್ಯಕ್ರಮ (ಇದಕ್ಕೊಂದು ಪುಕ್ಕಟೆ ಪ್ರಚಾರ ಪಡೆಯುವ ಹೆಸರು ಇಡುತ್ತಾರೆ) ಸಹ ಮತಗಳಿಕೆಯ, ಜನರನ್ನು ಓಲೈಸುವ, ಸೋಮಾರಿಗಳನ್ನಾಗಿಸುವ, ಪ್ರಗತಿಯ ಬದಲು ಅವನತಿಗೆ ಜಾರಿಸುವ ಅಗ್ಗದ ಜನಪ್ರಿಯ ಕಾರ್ಯಕ್ರಮವೆನ್ನದೆ ವಿಧಿಯಿಲ್ಲ. ಇಂತಹ ಕಾರ್ಯಕ್ರಮಗಳು, ಯೋಜನೆಗಳನ್ನು ಮಾಡಬಯಸಿದರೆ ರಾಜಕೀಯ ಪಕ್ಷಗಳು, ರಾಜಕೀಯ ಪುಡಾರಿಗಳು ಅವರದೇ ಹಣ ಬಳಸಿ ಮಾಡಲಿ ಮತ್ತು ಅವರ ಹೆಸರುಗಳನ್ನೇ ಬಳಸಲಿ. 

     ಯಾವುದೇ ಒಬ್ಬ ವ್ಯಕ್ತಿ ಹಳ್ಳಿಯೊಂದರಲ್ಲಿ ಸಾಯುವ ಸ್ಥಿತಿಯಲ್ಲಿದ್ದಾನೆ ಎಂದರೆ ಅವನನ್ನು ರಕ್ಷಿಸುವ ಹೊಣೆ ಸರ್ಕಾರದ್ದಾಗಿರುತ್ತದೆ. ಅವನು ಕಾಂಗ್ರೆಸ್ ಪಕ್ಷದವನು, ಬಿಜೆಪಿಯವನು, ಕಮ್ಯೂನಿಸ್ಟ್, ಸಮಾಜವಾದಿ ಪಕ್ಷದವನು, ಆ ಜಾತಿಯವನು, ಈ ಧರ್ಮದವನು, ಇತ್ಯಾದಿ ನೋಡಬೇಕೇ? ಉತ್ತಮ ನೈರ್ಮಲ್ಯ ಪಾಲನೆಗೂ, ಒಳ್ಳೆಯ ಸಂಪರ್ಕ ಸಾಧನಗಳನ್ನು ಕಲ್ಪಿಸುವುದಕ್ಕೂ ರಾಜಕೀಯ ಬೆರೆಸಬೇಕೇ? ಕೆಲವು ಮಕ್ಕಳು ಕಾರುಗಳಲ್ಲಿ ಶಾಲೆಗಳಿಗೆ ಹೋಗುತ್ತಿದ್ದರೆ, ಕೆಲವರು ಶಿಕ್ಷಣ ವಂಚಿತರಾಗಿ ತುತ್ತು ಕೂಳಿಗೂ ಪರದಾಡುವ ಸ್ಥಿತಿಯಲ್ಲಿರಬೇಕೇ? ಹೆಚ್ಚಿನ ಆರೋಗ್ಯದ ಸಮಸ್ಯೆಗಳು ಉಂಟಾಗುವುದು ಒಳ್ಳೆಯ ಕುಡಿಯುವ ನೀರಿನ ಪೂರೈಕೆಯ ಕೊರತೆಯಿಂದಲ್ಲವೇ? ಕುಡಿಯುವ ನೀರಿನ ಪೂರೈಕೆ ಒದಗಿಸುವುದು ಎಲ್ಲಾ ಸರ್ಕಾರಗಳ ಕರ್ತವ್ಯವಲ್ಲವೇ? ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ  ನೀಡಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗುವುದೆಂದು ಹೇಳಿ ಮತ ಕೇಳುವುದು ಎಷ್ಟು ಸರಿ? ನೈರ್ಮಲ್ಯದ ಸಮಸ್ಯೆಗೆ ಪರಿಹಾರ ರೂಪಿಸುವುದಕ್ಕೆ ಯಾವ ಕಾನೂನು ಬೇಕು? ಯಾವ ಕ್ರಾಂತಿ ಆಗಬೇಕು? ಮಾಡಬೇಕೆಂಬ ಮನಸ್ಸು ಇದ್ದರೆ ಸಾಕಲ್ಲವೇ? ಇಂತಹ ಸಂಗತಿಗಳನ್ನು ಸೇರಿಸಿ ಒಂದು ಸಾಮಾನ್ಯ ರಾಷ್ಟ್ರೀಯ ಕಾರ್ಯಕ್ರಮ ರೂಪಿಸಲು ಒತ್ತಡ ತರಬೇಕಿದೆ. ರಾಜಕೀಯ ಧುರೀಣರ, ಪಕ್ಷಗಳ ನಾಯಕರ ಹೆಸರಿನಲ್ಲಿ ಸರ್ಕಾರದ ಹಣ ಬಳಸಿ ವಿವಿಧ ಸರ್ಕಾರಿ ಯೋಜನೆಗಳಿಗೆ ಅವರುಗಳ ಹೆಸರಿಡುವುದನ್ನು ಮೊದಲು ನಿಷೇಧಿಸಬೇಕು. ಈಗ ಅಂತಹ ರಾಜಕೀಯ ನಾಯಕರುಗಳ ಹೆಸರಿನಲ್ಲಿ ಇರುವ ಸರ್ಕಾರೀ ಸಂಸ್ಥೆಗಳ ಹೆಸರುಗಳಲ್ಲಿ ಸ್ವಾತಂತ್ರ್ಯಾನಂತರದ ರಾಜಕೀಯ ನಾಯಕರ ಹೆಸರುಗಳನ್ನು ಕಿತ್ತುಹಾಕಬೇಕು. ಚುನಾವಣಾ ಆಯೋಗ ಮತ್ತು ಜನಸಾಮಾನ್ಯರ ಹಿತ ಬಯಸುವ ನೇತಾರರು ಇತ್ತ ಗಮನ ಹರಿಸಬೇಕು.

     ಇಂತಹ ಅಗ್ಗದ ಪ್ರಚಾರ ಪಡೆದುಕೊಳ್ಳುವ ಪ್ರವೃತ್ತಿ ಇಂದು ಯಾವ ಹಂತಕ್ಕೆ ತಲುಪಿದೆಯೆಂದರೆ ಸಂಸದರ, ಶಾಸಕರ ಹೆಸರಿನಲ್ಲಿ ಸರ್ಕಾರಿ ಅನುದಾನಗಳು ಬಿಡುಗಡೆಯಾಗುತ್ತವೆ. ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿಯೂ ಕೂಡ ಸದಸ್ಯರ ಹೆಸರುಗಳಲ್ಲಿ, ಅವರುಗಳು ಬಯಸಿದಂತೆ ಅನುದಾನಗಳು ಬಿಡುಗಡೆಯಾಗುತ್ತವೆಯೇ ಹೊರತು ಜನರ ಅಗತ್ಯ, ಅವಶ್ಯಕತೆಗಳಿಗನುಸಾರವಾಗಿ ಅಲ್ಲ. ಅದರಲ್ಲೂ ರಾಜಕೀಯ ತಾರತಮ್ಯವಿರುತ್ತದೆ. ಅವರುಗಳು ಬಯಸುವ ಕಾರ್ಯಕ್ರಮಗಳಿಗೆ ಮಾತ್ರ ಅವುಗಳು ಬಳಕೆಯಾಗುತ್ತಿವೆ. ಸಮುದಾಯ ಭವನದ ಹೆಸರಿನಲ್ಲಿ ಕಟ್ಟುವ ಕಟ್ಟಡಗಳಿಗೂ ಸಹ ಅಂತಹ ಹಣ ಹೋಗುತ್ತಿದೆ. ನಂತರದಲ್ಲಿ ಅವು ಕಲ್ಯಾಣ ಮಂಟಪಗಳಾಗಿ ಖಾಸಗಿಯವರು ಹಣ ಮಾಡಿಕೊಳ್ಳುವುದರಲ್ಲಿ ಅಂತ್ಯವಾಗುತ್ತಿದೆ. ಕೇವಲ ಮತಗಳಿಕೆ ದೃಷ್ಟಿಯಿಂದ ಅಗ್ಗದ ಜನಪ್ರಿಯ ಕಾರ್ಯಕ್ರಮಗಳು ಜಾರಿಯಾಗುತ್ತಿದ್ದು, ಅವುಗಳಿಂದ ಸರ್ಕಾರದ ಬೊಕ್ಕಸದಿಂದ ಜನಸಾಮಾನ್ಯರ ಕೋಟಿಗಟ್ಟಲೆ ಹಣ ಲೂಟಿಯಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನೈಜ ಫಲಾನುಭವಿಗಳಿಗೆ ತಲುಪುವುದರಲ್ಲಿ ಎಷ್ಟರಮಟ್ಟಿಗೆ ಸಫಲವಾಗುತ್ತವೆ ಎಂಬುದು ಎಲ್ಲರಿಗೂ ತಿಳಿದದ್ದೇ.

     ಅಣ್ಣಾ ಹಜಾರೆಯವರು ಒಮ್ಮೆ ಮಾತನಾಡುತ್ತಾ, "ಆಡಳಿತದಲ್ಲಿ ಜನರು ಪಾಲುಗೊಳ್ಳುವುದು ಎಂದರೆ ಏನು?" ಎಂದು ಪ್ರಶ್ನಿಸಿ ತಾವೇ ಕೊಟ್ಟಿದ್ದ ಉತ್ತರವೆಂದರೆ, "ಆಡಳಿತದಲ್ಲಿ ಜನರು ಪಾಲುಗೊಳ್ಳುವುದು ಅನ್ನುವುದು ಸರಿಯಲ್ಲ; ಜನರ ಕಾರ್ಯಕ್ರಮದಲ್ಲಿ ಸರ್ಕಾರ ಪಾಲುಗೊಳ್ಳುವುದು." ಹೀಗಾಗಬೇಕೆಂದರೆ ಜನರು ಜಾಗೃತರಾಗಿರಬೇಕು. ರಾಜಕೀಯ ನಾಯಕರುಗಳು ಜನರ 'ನಾಯಕ'ರಾಗದೆ, 'ಸೇವಕ'ರಾಗಬೇಕು. ಸರ್ವಸಮ್ಮತ, ಮೂಲಭೂತ ಅತ್ಯಗತ್ಯ ಜನಪರ ಕಾರ್ಯಕ್ರಮಗಳು ಯಾವುದೇ ರಾಜಕೀಯ ಪಕ್ಷದ, ನೇತಾರರ ಕಾರ್ಯಕ್ರಮಗಳೆನಿಸದೆ ರಾಷ್ಟ್ರೀಯ ಕಾರ್ಯಕ್ರಮಗಳೆನಿಸಲಿ; ಈ ಕುರಿತು ಜನಜಾಗೃತಿ ಮೂಡಿಸುವ ಕೆಲಸ ಎಲ್ಲಾ ಪ್ರಜ್ಞಾವಂತರು ಮಾಡಲಿ ಎಂದು ಆಶಿಸೋಣ.

-ಕ.ವೆಂ.ನಾಗರಾಜ್.

Comments

Submitted by kavinagaraj Thu, 05/16/2013 - 15:09

ಇದು 'ಸಂಪದ'ದಲ್ಲಿ ನನ್ನ 400ನೆಯ ಬರಹ. ಎಲ್ಲಾ ಸಂಪದಿಗ ಮಿತ್ರರುಗಳಿಗೂ, ಸಂಪದ ನಿರ್ವಹಣಾ ತಂಡದವರಿಗೂ ನನ್ನ ಕೃತಜ್ಞತೆಗಳು.
Submitted by nageshamysore Thu, 05/16/2013 - 18:16

ಕವಿನಾಗರಾಜ್ ರವರಿಗೆ ನಮಸ್ಕಾರ, ಅಬ್ಬಬ್ಬಾ - ನಾನ್ನೂರು ಬರಹಗಳು...! ನಾನೂರು ನಾಟೌಟಿಗೆ ಲಾರಗೆ  ಹೋಲಿಸಬೇಕೆ ಅಥವ ನೂರುಗಳ ದಾಟಿಸುತ್ತ ನಡೆದಿರುವುದಕ್ಕೆ ತೆಂಡುಲ್ಕರಿಗೆ ಹೋಲಿಸಬೇಕೆ ಗೊತ್ತಾಗುತ್ತಿಲ್ಲ! ಏನೆ ಇರಲಿ ಇನ್ನೂ ಹೆಚ್ಚು ನೂರುಗಳ ಸವಾರಿ ತಮ್ಮ ಲೇಖನಿಯ ಮೂಲಕ ಆಗುತ್ತಲೆ ಇರಲಿ ಎಂದು ಹಾರೈಸುತ್ತಾ,  - ನಾಗೇಶ ಮೈಸೂರು, ಸಿಂಗಪುರದಿಂದ
Submitted by lpitnal@gmail.com Thu, 05/16/2013 - 22:33

ಕವಿನಾಗರಾಜ್ ರವರಿಗೆ, ವಿಚಾರ ಪೂರ್ಣ ಲೇಖನ, ಅಗ್ಗದ ದರದಲ್ಲಿ ಎಲ್ಲವನ್ನೂ ನೀಡುತ್ತ , ದೇಶವಾಸಿಗಳೆಲ್ಲರನ್ನು ಸೋಮಾರಿಗಳನ್ನಾಗಿಸುವುದು ನಿಜಕ್ಕೂ ಆಲೋಚನೀಯ, ಅಗ್ಗದ ಪ್ರಚಾರಗಳಿಗಿಂತ ವಾಸ್ತವೀಯತೆಯತ್ತ, ಪ್ರಗತಿಯತ್ತ ಹೆಜ್ಜೆ ಸಾಗುವುದು ವಿಹಿತ, ಚಿಂತನೆಗೆ ಹಚ್ಚುವ ವಿಚಾರಗಳು ತುಂಬಿದ ಲೇಖನ.
Submitted by kavinagaraj Fri, 05/17/2013 - 07:55

In reply to by lpitnal@gmail.com

ರೂಪಾಯಿ ಒಂದಕ್ಕೆ 1 ಕೆಜಿ ಅಕ್ಕಿಯಂತೆ ತಿಂಗಳಿಗೆ 30 ಕೆಜಿ ಅಕ್ಕಿ (6-7 ಜನರಿಗೆ ಒಂದು ತಿಂಗಳಿಗೆ ಸಾಕಾಗುತ್ತದೆ; ಹೆಚ್ಚಾದರೆ ಕಪ್ಪು ಮಾರ್ಕೆಟ್ಟಿಗೆ ಅಥವ ಹೆಚ್ಚಿನ ದರಕ್ಕೆ ಮಾರಿಕೊಳ್ಳಬಹುದು), ಅಗ್ಗದ ದರದಲ್ಲಿ ಮದ್ಯ, ಸಾಲಗಳು ಮನ್ನಾ! ಗೋಹತ್ಯೆಗೆ ಹಸಿರು ನಿಶಾನೆ! ಇನ್ನೇನು ಬೇಕು? ಸೋಮಾರಿ ಮೆದುಳು ಪುಕ್ಕಟ್ಟೆ ಸುಖಕ್ಕೆ ಹಂಬಲಿಸಿ ಅಪರಾಧಗಳು ಹೆಚ್ಚುತ್ತವೆ. ದೇಶವನ್ನು ಎತ್ತ ಕೊಂಡೊಯ್ಯಲಾಗುತ್ತಿದೆ. ಗಿರೀಶ ಕಾರ್ನಾಡರುಗಳು, ಬರಗೂರರುಗಳು, ಅಮಿನಮಟ್ಟುಗಳು ಮುಖ್ಯಮಂತ್ರಿಗಳು ಹರಸಿ ಕೊಂಡಾಡುತ್ತಿದ್ದಾರೆ. ಮಾಧ್ಯ,ಮಗಳು ಉಘೇ ಅನ್ನುತ್ತಿವೆ. ಮುಂದೆ ಏನೇನು ಕಾದಿದೆಯೋ?
Submitted by makara Fri, 05/17/2013 - 07:03

ವ್ಯಕ್ತಿಗಿಂತ ತತ್ವ ಮುಖ್ಯ ಎನ್ನುವುದನ್ನು ಯಾವತ್ತೋ ಗಾಳಿಗೆ ತೂರಿರುವ ನಾವು, ತತ್ವಕ್ಕಿಂತ ಚಮಚಾಗಿರಿ ಮುಖ್ಯ ಮತ್ತು ವ್ಯಕ್ತಿಗತ ಅನುಕೂಲಗಳಿಗಾಗಿ ವ್ಯಕ್ತಿಪೂಜೆ ಮುಖ್ಯ ಎನ್ನುವ ಸಿದ್ಧಾಂತದ ಅಡಿಯಲ್ಲಿ ಬದುಕುತ್ತಿದ್ದೇವೆ. ಇದನ್ನು ಬಹು ಚೆನ್ನಾಗಿ ವಿಶ್ಲೇಷಿಸಿದ್ದೀರಿ, ಕವಿಗಳೆ. ಇದರಲ್ಲಿ ಜನಸಾಮಾನ್ಯನ ಪಾತ್ರವೂ ಮುಖ್ಯ ಎನ್ನುವುದನ್ನು ಅಣ್ಣಾ ಹಜಾರೆಯವರ ಮಾತುಗಳ ಮೂಲಕ ಚೆನ್ನಾಗಿ ಪ್ರತಿಪಾದಿಸಿದ್ದೀರ. ಉತ್ತಮ ಲೇಖನದೊಂದಿಗೆ ನಿಮ್ಮ ಬರಹಗಳ ಸಂಖ್ಯೆ ನಾಲ್ಕು ಶತಕಗಳನ್ನು ಪೂರೈಸುತ್ತಿರುವುದಕ್ಕೆ ಧನ್ಯವಾದಗಳು. ಅಬ್ದುಲ್ ಅವರೆಂದಂತೆ ನಿಮ್ಮ ಕೀಲಿ ಮಣೆಯಿಂದ ಇನ್ನಷ್ಟು ಲೇಖನಗಳು ಹರಿದು ಬರಲಿ, ಹಾಗೆಯೇ ಸ್ವಲ್ಪ ನಿದ್ರಿಸುತ್ತಿರುವ ಮೂಢ ಮತ್ತೆ ಎಚ್ಚರಗೊಂಡು ಸಕ್ರಿಯನಾಗಲಿ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by venkatb83 Fri, 05/17/2013 - 17:21

೪೦೦ ... ಸಹಸ್ರ ................ ಮತ್ತೂ ಮುಂದುವರೆಯಲಿ ಹಿರಿಯರ ವಿಚಾರ ಧಾರೆ . ಈ ಗಡಿಗೆ (ನಾಲ್ಕು ನೂರು) ಮುಟ್ಟಿದಾಗ ನೀವ್ ಆರಿಸಿಕೊಂಡ ವಿಚಾರ ಸಕಾಲಿಕ ಮತ್ತು ಅನಿಸಿಕೆಗಳು ಒಪ್ಪತಕ್ಕದ್ದು . ಸರಕಾರಗಳು ಈಗೊಂದು ಯೋಜನೆ ಘೋಷಿಸಿದರೆ ಅದ್ಕೆ ಇಡಬಹುದಾದ ಹೆಸರು ನಮಗಾಗಲೇ ಊಹೆಗೆ ಬಂದಿರುತ್ತೆ ... : ರಾಜೀವ್(ಇಂದಿರಾ ) ಅನ್ನ ಆಹಾರ ಯೋಜನೆ ..!! ಈಗಾಗಲೇ ನೂರಾರು ಯೋಜನೆಗಳಿಗೆ ಅವರೆಲ್ಲರ ಹೆಸರು ಇಟ್ಟು ಜನರಿಗೆ ಆ ಯೋಜನೆಗಳು ನೆನಪಿನಲ್ಲಿ ಸದಾ ಉಳಿಯುವ ಹಾಗೆ ಮಾಡಲಾಗಿದೆ ... ಈಗ ಮತ್ತೊಂದು ಕಡಿಮೆ ರೇಟಿನ ಬಡವರ ಮದ್ಯ ತರುವರಂತೆ .. ಅದಕ್ಕೂ ಹೆಸರು ಬೇಕಲ್ಲ ತಗೊಳ್ಳಿ ಕಾಂಗ್ರೆಸ್ ಕೆ ಹಾತ್ - ಶ್ರೀ ಸಾಮನ್ಯ ಸಾತ್, - ಅದೀಗ ಶ್ರೀ ಸಾಮನ್ಯ ಕೆ ಹಾತ್ ಮೇ ಶೀಶೆ -ಹಮಾರ ಕಿಸೆ ಮೇ ಪೈಸೆ ....!! ನಿಮ್ಮ ಬರಹ ಕೃಷಿ ಸದಾ ಅಡೆ ತಡೆ ಇಲ್ಲದೆ ಸಾಗಲಿ .. ಶುಭವಾಗಲಿ \। / >>ಕಾಂಗ್ರೆಸ್ಸಿಗರು ಜನರ ಹಣದಲ್ಲಿ ತಮ್ಮ ಹೆಸರು ಅಜರಾಮರ ಮಾಡಿದ್ದು -ಅದರ ಲಿಸ್ಟ್ ಇಲ್ಲಿವೆ ನೋಡಿ ...!! 1.http://blog.arvindk… 2.http://www.niticent… 3.http://www.asuryapr…
Submitted by makara Fri, 05/17/2013 - 20:03

In reply to by venkatb83

ಸಪ್ತಗಿರಿಗಳೇ! ನೀವು ವಿಷಯ ಸಂಗ್ರಹ ಮತ್ತು ಕೊಂಡಿಗಳನ್ನು ಒದಗಿಸುವಲ್ಲಿ ಗಣೇಶ್..ಜಿಯವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದೀರ :)
Submitted by ಗಣೇಶ Sat, 05/18/2013 - 00:13

In reply to by makara

ಶ್ರೀಧರ್‌ಜಿ, ಒಂದು ಹೆಜ್ಜೆನಾ!? ನಾನೂರು ಹೆಜ್ಜೆ ಮುಂದಿದ್ದಾರೆ! ಸಿನೆಮಾ ವಿಮರ್ಶೆ ಲೇಖನಗಳಿಗೆ ಕೊಡುತ್ತಿದ್ದ ಕೊಂಡಿಗಳನ್ನು ನೋಡಿ ತಲೆ ಗಿರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ ಅನ್ನುತ್ತಿತ್ತು. ಓದಿ ಮುಗಿಸುವಾಗ ಇನ್ನೊಂದು ಸಿನೆಮಾ ವಿಮರ್ಶೆ ರೆಡಿ!. ಈಗ ಸ್ವಲ್ಪ(ಸಪ್ತಗಿರಿ)ವಾಸಿ.೩ಏ ಕೊಂಡಿ ಕೊಟ್ಟಿರುವರು. ಆ ಕೊಂಡಿಯೋ ಸೂಪರ್ ; ಇನ್ನು ಹಗರಣಗಳು ಜಾಸ್ತಿ ಆಗುತ್ತಾ ಹೋದ ಹಾಗೇ .... ರಾ"ಜಿ" ಹಗರಣ ರಸ್ತೆ, ಇಂ..ಕೋಲ್ ಗೇಟ್ ಕಾಲೇಜ್‌ಗಳೂ ಪ್ರಾರಂಭವಾಗಬಹುದು ; ಸಚಿನ್ ಸೆಂಚುರಿ ತರಹ ಕವಿನಾಗರಾಜರ ದಾಖಲೆಗಳನ್ನು ಅವರೇ ಮುರಿಯುತ್ತಾ ಹೋಗಬೇಕು. ಶುಭಾಶಯಗಳು ಕವಿನಾಗರಾಜರಿಗೆ.
Submitted by kavinagaraj Sat, 05/18/2013 - 14:43

In reply to by ಗಣೇಶ

ಶ್ರೀಯುತ ವೆಂಕಟೇಶ, ಶ್ರೀಧರ, ಗಣೇಶರಿಗೆ ವಂದನೆಗಳು. ದಾಖಲೆಗಾಗಿ ಬರೆಯಲಿಲ್ಲ, ಬರೆದದ್ದು ದಾಖಲಾಯಿತು, ಸಂಪದದಲ್ಲಿ! :)
Submitted by swara kamath Fri, 05/17/2013 - 20:27

ಕವಿ ನಾಗರಾಜರೆ, ನೀವು ಸಂಪದದೊಳಗೊ ಸಂಪದವು ನಿಮ್ಮಳೊಗೊ ನೀವು ಹಾಗು ಸಂಪದವು ನಮ್ಮಮನಸಿನ ಒಳಗೊ....ಹಹಾ:)) ಸರ್ ನಿಮ್ಮ ಲೇಖನದ 400 ರ ಗಡಿ ಮುಟ್ಟಿದ ಸಂತಸದಲ್ಲಿ ಮನಸ್ಸಿನಲ್ಲಿ ಹೀಗೆ ಉದ್ಬವವಾದ ಈ ತ್ರಿಪದಿ. ತಮಗೆ ನನ್ನ ಶುಭಾಶಯಗಳು. ತಮ್ಮ ಲೇಖನದಲ್ಲಿ ಬರೆದಂತೆ ಎಲ್ಲಾ ರಾಜಕೀಯ ಪಕ್ಷಗಳು ಶ್ರೀ ಸಾಮಾನ್ಯನ ಏಳ್ಗೆಗಾಗಿ ಖಡ್ಡಾಯವಾಗಿ ಒಂದು ನಿರ್ಧಿಷ್ಟ ಕಾರ್ಯಕ್ರಮದ ಅನುಸೂಚಿಯನ್ನಿಟ್ಟುಕೊಂಡು ಅದರಂತೆ ನಡೆದರೆ ದೇಶದ ಪ್ರಗತಿ ಒಳ್ಳೆಯದಾದೀತು....ವಂದನೆಗಳು.........ರಮೇಶ್ ಕಾಮತ್.
Submitted by H A Patil Sun, 05/19/2013 - 20:35

ಕವಿ ನಾಗರಾಜ ರವರಿಗೆ ವಂದನೆಗಳು ' ರಾಷ್ಟ್ರೀಯ ಕಾರ್ಯಕ್ರಮಗಳು ರಾಜಕೀಯ ಕಾರ್ಯಕ್ರಮಗಳಾಗದಿರಲಿ ' ಒಂದು ಸಕಾಲಿಕ ಮಾತ್ರವಲ್ಲ ರಾಜಕೀಯ ವ್ಯವಸ್ಥೆ ಸುಧಾ ರಿಸುವ ವರಗೆ ಪ್ರಚಲಿತತೆ ಪಡೆಯುವ ಲೇಖನ. ಇದು ತಮ್ಮ 400 ನೇ ಲೇಖನ ಎನ್ನುವುದನ್ನು ಓದಿ ಆಶ್ಚರ್ಯ ಜೊತೆಗೆ ಸಂತಸ ವಾಯಿತು, ಎಷ್ಟು ಬೇಗ ನಾನೂರರ ಗಡಿ ದಾಟಿದಿರಿ, ಈ ಸಂಖ್ಯೆ ಐನೂರು ದಾಟಿ ಸಾವಿರದೆಡೆಗೆ ಸಾಗಲಿ, ಇವುಗಳನ್ನು ಪುಸ್ತಕ ರೂಪದಲ್ಲಿ ತರುವ ಆಲೋಚನೆಯಿದೆಯೆ ? ಇದ್ದರೆ ಬೇಗ ತನ್ನಿ ಇಲ್ಲದಿದ್ದರೆ ಈ ನಿಟ್ಟಿನಲ್ಲಿ ಆಲೋಚಿಸಿ, ನಾಲಕ್ನೆ ಶತಕ ದಾಖಲಿಸಿ ಮುಂದು ವರೆದಿರುವ ತಮ್ಮ ಅಮೋಘ ಬ್ಯಾಟಿಂಗ್ ಹೀಗೆಯೆ ಮುಂದುವರಿಯಲಿ, ಈ ಶುಭ ಸಂಧರ್ಭದಲ್ಲಿ ತಮಗೆ ವಿಶೇಷ ಧನ್ಯವಾದಗಳು.