ತೇಜಸ್ವಿ ಮತ್ತು ಪರಿಸರ
ಇದು ಸಸ್ಯಕಾಶಿ, ಕೈಮುಗಿದು ಒಳಗೆ ಬಾ, ಈ ಸಾಲು ಲಾಲ್ಬಾಗ್ ಪ್ರವೇಶದ್ವಾರದಲ್ಲಿ ಕಾಣಸಿಗುವುದು. ಹಾಗೆ ಮರ ಬೆಳೆಸಿ ನಾಡು ಉಳಿಸಿ, ಮನೆಗೊಂದು ಮರ ಈ ರೀತಿಯ ಮಾತುಗಳು ಎಲ್ಲರಿಗೂ ಚಿರಪರಿಚಿತ. ಇದನ್ನು ಗಮನಿಸಿದಾಗ ನಮಗೆ ಸಸ್ಯಸಂಪತ್ತಿನ ಅವಶ್ಯಕತೆ ಎಷ್ಟಿದೇ ಎಂಬುದು ಮನವರಿಕೆಯಾಗುತ್ತದೆ. ಮಾನವ ತನ್ನ ಅನುಕೂಲಕ್ಕಾಗಿ ಅರಣ್ಯಸಂಪತ್ತನ್ನು ಹಲವು ವಿಧದಲ್ಲಿ ಬಳಸಿಕೊಳ್ಳುತ್ತಾ ಬಂದಿದ್ದಾನೆ. ಆಹಾರ, ವಸತಿ, ಉಡುಗೆ, ಔಷಧಿ ಇತ್ಯಾದಿ, ಶುಭಕಾರ್ಯದಿಂದ ಹಿಡಿದು ಅಶುಭ ಕ್ರಿಯೆಯವರೆಗೂ ಒಂದೊಂದು ವಿಧದಲ್ಲಿ ಸಸ್ಯಗಳ ಬಳಕೆ ನಡೆದಿದೆ. ತನ್ನ ಬದುಕಿನ ಒಳಿತಿಗೆ ನೆರವಾದ ಈ ಸಂಪತ್ತನ್ನು ಬೆಳೆಸುವ ಮತ್ತು ಉಳಿಸುವ ಕಾರ್ಯ ನಿಜವಾಗಿಯೂ ಪ್ರಾಮಾಣಿಕವಾಗಿ ನಡೆಯುತ್ತಿದೆಯೇ? ಸಮಾಜದ ಅಭಿವೃಧ್ದಿ, ಜಾಗತೀಕರಣ, ಆಧುನೀಕರಣ ಮುಂತಾದ ಹೆಸರಿನಲ್ಲಿ ನಡೆಯುತ್ತಿರುವ ಸಸ್ಯಸಂಪತ್ತಿನ ನಾಶ ಒಪ್ಪಿಕೊಳ್ಳಲು ಸಾಧ್ಯವೇ? ನಾವು ಪರಿಸರವನ್ನು ಉಳಿಸುವ ಬಗೆಗೆ ಎಷ್ಟೇ ಜಾಗೃತಿ ಪಡೆದರೂ ಇನ್ನೂ ಸರಿಯಾದ ಚಿಂತನೆ ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ನನಗೆ ತೇಜಸ್ವಿ ಇಂದಿಗೂ ಪ್ರಸ್ತುತ, ಏಕೆಂದರೆ ಅವರಿಗೆ ಪ್ರಕೃತಿಯ ಬಗೆಗಿದ್ದ ಒಲವು ಅತ್ಯಂತ ವಿಶೇಷ ಮತ್ತು ವಿಭಿನ್ನ. ಅವರ ಸಾಹಿತ್ಯದಲ್ಲಿ ಜನರಿಗೆ ಪರಿಸರದ ಅವಶ್ಯಕತೆಯ ಸೂಕ್ಷ್ಮವನ್ನು ಅರ್ಥಮಾಡಿಸಬೇಕೆಂಬ ತುಡಿತ ಎದ್ದು ಕಾಣುತ್ತದೆ. ಅವರೇ ಹೇಳುವ ಹಾಗೆ ಜನರು ಪರಿಸರ ಪ್ರೀತಿಯನ್ನು ಹೊಂದಿದ್ದರೆ ಮಾತ್ರ ಪರಿಸರದ ಬಗೆಗಿನ ಚಿಂತನೆಗಳು ಅರ್ಥವಾಗುತ್ತವೆ, ಇಲ್ಲದಿದ್ದರೆ ಆ ಮಾತುಗಳು ಗೊಣಗಾಟದಂತೆ ಕೇಳಿಸುತ್ತವೆ. ಅದಕ್ಕಾಗಿಯೇ ಅವರು ಪರಿಸರದ ಸೂಕ್ಷ್ಮಗಳನ್ನು ತಿಳಿಸಲು ಕಥನಕ್ರಮವನ್ನು ಆರಿಸಿಕೊಂಡರೆಂದು ಹಾಗೂ ಅದಕ್ಕೆ ಪರಿಸರದ ಕತೆ ಪುಸ್ತಕ ಸಾಕ್ಷಿಯಾಗಿದೆಯೆಂದು ತಿಳಿಯಬಹುದು.
ಕಾಡಿನ, ಪ್ರಕೃತಿಯ, ಬೇಟೆಯ, ಶಿಕಾರಿಯ ಚಿತ್ರಣಗಳನ್ನು ಕೊಡುತ್ತಾ ವನಸಂಪತ್ತಿನ ಅಗಾಧ ಕೊಡುಗೆಯನ್ನು ಅವರ ಕೃತಿಗಳಲ್ಲಿ ತಿಳಿಸುತ್ತಾರೆ. ಸಸ್ಯ-ಪ್ರಾಣಿಗಳಿಲ್ಲದ ಪರಿಸರವು ಸ್ಮಶಾನಕ್ಕಿಂತ ಭೀಕರವಾಗಿದ್ದು, ಅದನ್ನು ಸಂರಕ್ಷಿಸಿ ಎಂದು ಹೇಳಿದರೆ ಅದು ನನ್ನ ತಿಳುವಳಿಕೆಗಿಂತ ಹೆಚ್ಚಾಗಿ ಅವುಗಳೊಂದಿಗೆ ನಾನು ಹೊಂದಿರುವ ವ್ಯಕ್ತಿನಿಷ್ಟ ಸಂಬಂಧವೇ ಆಗಿರುತ್ತದೆ ಎನ್ನುವಲ್ಲಿ ಅವರಿಗೆ ಇರುವ ಪರಿಸರದ ಬಗೆಗಿನ ಕಾಳಜಿ ವ್ಯಕ್ತವಾಗುತ್ತದೆ. ಅವರು ಪರಿಸರ ನಾಶವಾದರೆ ಅದರಲ್ಲಿನ ರಹಸ್ಯ, ಗೌಪ್ಯ, ಅದ್ಭುತಗಳ ನಿರಂತರ ನಿಧಿಯೊಂದನ್ನು ನಮ್ಮ ಮುಂದಿನ ಪೀಳಿಗೆ ಕಳೆದುಕೊಳ್ಳುತ್ತದೆ ಎಂಬ ಆತಂಕವನ್ನು ಅಭಿವ್ಯಕ್ತಿಸುತ್ತಾರೆ. ತೇಜಸ್ವಿಯವರ ಮನಸ್ಸಿನಲ್ಲಿ ಬೇರೂರಿದ್ದದ್ದು, ಕಾಡುತ್ತಿದ್ದದ್ದು ಪ್ರಕೃತಿಯ ರಹಸ್ಯಮಯ ಸಂಗತಿಗಳು, ಮನುಷ್ಯ ಅದನ್ನು ಭೇದಿಸಲು ಮಾಡುವ ಪ್ರಯತ್ನ, ಆದರೂ ಏನನ್ನೂ ತಿಳಿಯದೆ ನಿಶ್ಚಲನಾಗುವ ಪರಿ.
ಹಾಗೆಯೇ ಇವರ ಕಥನಗಳು ಪರಿಸರ ನಾಶವಾದರೆ ಜನರ ಬದುಕು ಮತ್ತು ಸಂಸ್ಕೃತಿ ನಾಗರೀಕತೆಯ ಅಡಿಯಲ್ಲಿ ನಾಶವಾಗುವ ಗಂಭೀರತೆಯನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ಸಂಸ್ಕೃತಿ ಮತ್ತು ನಾಗರೀಕತೆಯ ವೈರುಧ್ಯವನ್ನು ತಿಳಿಸುವ ಪ್ರಯತ್ನ ಕಾಣುತ್ತದೆ. ಕಾಡಿನ ಜೀವಸಂಕುಲದೊಳಗೆ ಮನುಷ್ಯನ ಕೈ ಹೊಕ್ಕಿದರೆ ಸಾಕು ಅದು ಸಹಾಯಹಸ್ತವಾದರೂ ಅವುಗಳ ನಾಶ ತಪ್ಪಿದ್ದಲ್ಲವೆಂದು ತೇಜಸ್ವಿ ಮನದಟ್ಟು ಮಾಡಿಸುತ್ತಾರೆ. ಈ ರೀತಿಯ ವೈಚಾರಿಕ ದೃಷ್ಟಿಕೋನ, ಆಧ್ಯಾತ್ಮಿಕ ದೃಷ್ಟಿಕೋನಕ್ಕಿಂತಲೂ ಭಿನ್ನವಾಗಿದ್ದು ಈಗಿನ ಸಮಾಜಕ್ಕೆ ಅತ್ಯವಶ್ಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಪರಿಸರದ ಬಗೆಗಿನ ಕಾಳಜಿ ಕೇವಲ ವಿಶ್ವಪರಿಸರದಿನಕ್ಕೆ ಸೀಮಿತವಾಗಿರುವ ಹಿನ್ನೆಲೆಯಲ್ಲಿ ಈ ಲೇಖನದ ಮೂಲಕ ಪ್ರಕೃತಿ ಮತ್ತು ಮನುಷ್ಯನ ಅವಿನಾಭಾವ ಸಂಬಂಧ, ಪರಿಸರದ ಸಂರಕ್ಷಣೆಯಾಗದಿದ್ದಲ್ಲಿ ನಾವು ಎದುರಿಸಬಹುದಾದ ಸಮಸ್ಯೆಗಳು ಮತ್ತು ಆತಂಕಗಳು ಏನು ಎಂಬುದರ ಮರುಚಿಂತನೆಗೆ ತೊಡಗಿಸಿಕೊಳ್ಳುವ ಸಣ್ಣ ಪ್ರಯತ್ನ ಇದಾಗಿದೆ. ತೇಜಸ್ವಿಯ ಕೃತಿಗಳನ್ನು ಪ್ರೀತಿಸುವ ಓದುಗರು ಪರಿಸರದ ಕಡೆಗೆ ಗಮನಹರಿಸಿದರೆ, ಅದೇ ಅವರು ತೇಜಸ್ವಿಯವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.
Comments
ಲತ ಆನಂದರವರೆ,
In reply to ಲತ ಆನಂದರವರೆ, by nageshamysore
ವಿಚಾರಪೂರ್ಣ ಲೇಖನ+ಪ್ರತಿಕ್ರಿಯೆಗೆ
ಒಳ್ಳೆಯ ಪ್ರಯತ್ನ. ಧನ್ಯವಾದಗಳು