ಭಾಗ - ೨: ಕೃಷ್ಣ ಕಥಾ ಸಮರ್ಥನೆ - ಪಾಂಡವರ ವಿಜಯಕ್ಕಾಗಿ ಮಹಾಭಾರತ ಯುದ್ಧದಲ್ಲಿ ಕೃಷ್ಣ ಬಳಸಿದ ತಂತ್ರಗಳು
ಇತ್ತೀಚೆಗೆ ಸಂಪದದಲ್ಲಿ ಪ್ರಕಟವಾದ ಶ್ರೀಮತಿ ಸುಮನ್ ದೇಸಾಯಿಯವರ ಲೇಖನ "ಕೄಷ್ಣ ಲೀಲೆ ಅಲ್ಲಾ,,ಕಾಮದಾಟ.................. http://sampada.net/%E0%B2%95%E0%B3%84%E0%B2%B7%E0%B3%8D%E0%B2%A3-%E0%B2%B2%E0%B3%80%E0%B2%B2%E0%B3%86-%E0%B2%85%E0%B2%B2%E0%B3%8D%E0%B2%B2%E0%B2%BE%E0%B2%95%E0%B2%BE%E0%B2%AE%E0%B2%A6%E0%B2%BE%E0%B2%9F ಓದಿದ ಮೇಲೆ ಕೃಷ್ಣನ ಹೆಸರನ್ನು ಸರ್ವಸಂಗ ಪರಿತ್ಯಾಗಿಗಳೆನಸಿಕೊಂಡವರು ಹೇಗೆಲ್ಲಾ ದುರಪಯೋಗ ಪಡಿಸಿಕೊಳ್ಳುತ್ತಿದ್ದಾರಲ್ಲಾ ಎನ್ನುವ ವ್ಯಥೆಯಾಯಿತು. ಅದರೊಂದಿಗೆ, ಶ್ರೀಮತಿ ದೇಸಾಯಿಯವರ ಅಭಿಪ್ರಾಯಗಳಿಗೆ ಪೂರಕವಾಗಿ ಒಂದಷ್ಟು ಮಾಹಿತಿಯನ್ನು ಒದಗಿಸಬೇಕೆನಿಸಿತು. ಹಾಗೆಯೇ ಕೆಲವೊಂದು ಲೇಖನಗಳಲ್ಲಿ ಕೃಷ್ಣನನ್ನು ಕೆಟ್ಟದ್ದಾಗಿ ಚಿತ್ರಿಸುವುದು ಮತ್ತು ಅವಹೇಳನಕಾರಿಯಾಗಿ ಅವನ ಬಗ್ಗೆ ಬರೆದಿರುವುದನ್ನು ಓದುತ್ತಿರುವಾಗ ಇದಕ್ಕೆಲ್ಲಾ ಸೂಕ್ತ ಉತ್ತರವನ್ನು ಕಂಡುಕೊಳ್ಳಬೇಕೆನಿಸಿತು. ಈ ದಿಶೆಯಲ್ಲಿ ಕಾರ್ಯಪ್ರವೃತ್ತನಾಗಿದ್ದವನಿಗೆ ಅಕಸ್ಮಾತ್ತಾಗಿ ’ಶ್ರೀ ಕೃಷ್ಣ ಕಥಾಸಾರ ಸರ್ವಸ್ವ’ ಎನ್ನುವ ಸ್ವಾಮಿ ಹರ್ಷಾನಂದ ವಿರಚಿತ ಕೃತಿಯು ಕಣ್ಣಿಗೆ ಬಿತ್ತು. ಆ ಕೃತಿಯು ಮೂಲವಾಗಿ ಇಂಗ್ಲೀಷಿನಲ್ಲಿ ಬರೆಯಲ್ಪಟ್ಟಿದ್ದರೂ ಅದನ್ನು ಸುಂದರವಾಗಿ ಕನ್ನಡಕ್ಕೆ ಶ್ರೀಯುತ ಎ. ಎಂ. ಮುದ್ದಲಿಂಗಣ್ಣ ಎನ್ನುವವರು ಅನುವಾದಿಸಿದ್ದಾರೆ. ಇದನ್ನು ಅಧ್ಯಕ್ಷರು, ಶ್ರೀ ರಾಮಕೃಷ್ಣ ಆಶ್ರಮ, ಯಾದವಗಿರಿ, ಮೈಸೂರು ಇವರು ಪ್ರಕಟಿಸಿರುತ್ತಾರೆ. ಅದರಿಂದ ಆಯ್ದ ಅಧ್ಯಾಯದ ಭಾಗವೇ, "ಕೃಷ್ಣಕಥಾ ಸಮರ್ಥನೆ". ಇದನ್ನು ಎರಡು ಭಾಗಗಳಲ್ಲಿ ಪ್ರಕಟಿಸುತ್ತಿದ್ದೇನೆ. ಮೊದಲನೆಯದರಲ್ಲಿ, ಕೃಷ್ಣನ ಗೋಪಿಕಾವಸ್ತ್ರಾಪಹರಣ ಮತ್ತು ರಾಸಲೀಲೆಯ ಪ್ರಸಂಗಗಳು ಹಾಗೂ ಅವನ ೧೬,೦೦೦ ಹೆಂಡತಿಯರ ಕುರಿತಾದ ವ್ಯಾಖ್ಯಾನಗಳಿದ್ದರೆ ಎರಡನೆಯ ಭಾಗದಲ್ಲಿ ಕೃಷ್ಣನು ಮಹಾಭಾರತ ಯುದ್ಧದಲ್ಲಿ ಪಾಂಡವರನ್ನು ಗೆಲ್ಲಿಸಲು ಅನುಸರಿಸಿದ ವಿಧಾನಗಳ ಕುರಿತಾದ ಟೀಕೆಗಳ ವಿಶ್ಲೇಷಣೆಯಿದೆ.
******
ಇನ್ನು ಕುರುಕ್ಷೇತ್ರ ಯುದ್ಧದಲ್ಲಿ ಉಂಟಾದ ವಿವಧ ಸಮಸ್ಯೆಗಳನ್ನು ಕೃಷ್ಣನು ನಿರ್ವಹಿಸಿದ ರೀತಿಯ ಬಗ್ಗೆ ನಡೆದಿರುವ ಎರಡನೇ ಬಗೆಯ ಆಪಾದನೆಗಳನ್ನು ಪರಿಶೀಲಿಸಬಹುದು. ಕೌರವರೊಡನೆ ಅವನು ರಾಜಕೀಯ ನೀತಿನಿಯಮಗಳನ್ನುಲ್ಲಂಘಿಸಿ ವಿಶ್ವಾಸಘಾತುಕನಾಗಿ ಕೃತ್ರಿಮದಿಂದ ವ್ಯವಹರಿಸಿದನೆಂದು ಆಪಾದಿಸಲಾಗಿದೆ. ನಿಜಾಂಶವೇನೆಂಬುದನ್ನರಿಯಲು ಮಹಾಭಾರತದ ಹಲವು ಉಪಾಖ್ಯಾನಗಳ ಹಾಗೂ ಪ್ರಸಂಗಗಳ ಹಿನ್ನಲೆಯಲ್ಲಿ ಈ ಆಪಾದನೆಗಳನ್ನು ಒಂದೊಂದಾಗಿ ವಿಮರ್ಶಿಸಬೇಕಾದದ್ದು ಅಗತ್ಯ.
೧. ಅವನು ಕರ್ಣ-ದುರ್ಯೋಧನರ ಮೈತ್ರಿಯನ್ನೊಡೆದು ಕೌರವರ ಪಕ್ಷದಿಂದ ಕರ್ಣನನ್ನು ಬೇರ್ಪಡಿಸಿ ಪಾಂಡವರ ಕಡೆ ಸೆಳೆದುಕೊಳ್ಳಲು ಹವಣಿಸಿದ್ದು ಭೇದೋಪಾಯದ ಕುತಂತ್ರವಲ್ಲವೇ? ಎಂಬ ಆಪಾದನೆ.
ಭ್ರಾತೃವಿನಾಶಕವಾದ ಕುರುಕ್ಷೇತ್ರ ಯುದ್ಧ ನಡೆಯಲೆಂದು ಕೃಷ್ಣ ಎಂದೂ ಬಯಸಿದವನಲ್ಲ. ದುರ್ಯೋಧನನ ಹಠಮಾರಿತನದಿಂದ ತನ್ನ ಶಾಂತಿ ಸಂಧಾನದಲ್ಲಿ ವಿಫಲನಾದದ್ದರಿಂದ ಯುದ್ಧವನ್ನು ಹೇಗಾದರೂ ತಡೆಹಿಡಿಯಬೇಕೆಂಬ ಉದ್ದೇಶವನ್ನಿಟ್ಟುಕೊಂಡು, ಕರ್ಣನು ಕುಂತಿಯ ಹಿರಿಯ ಮಗ ಎಂಬ ಬಹು ಗೋಪ್ಯವಾಗಿದ್ದ ರಹಸ್ಯವನ್ನು ಅವನಿಗೆ ತಿಳಿಸಿದನು. ಆಗ ಕರ್ಣನು ಕೌರವ ಪಕ್ಷವನ್ನು ತೊರೆದು ಪಾಂಡವರ ಕಡೆ ಬಂದಿದ್ದರೆ, ನಿಜವನ್ನರಿತ ದುಯೋರ್ಧನನು ಅವನಿಗೆ ಅರ್ಧರಾಜ್ಯವನ್ನು ಕೊಡಲೊಪ್ಪಿ, ಉಭಯ ಪಕ್ಷದವರೂ ಶಾಂತವಾಗಿ ಬದುಕಬಹುದಿತ್ತು. ಕರ್ಣ ದುರ್ಯೋಧನನನಿಗೆ ಆತ್ಮೀಯ ಮಿತ್ರನು, ಅವನ ಬಲಕ್ಕೆ ಮೂಲಾಧಾರವಾಗಿದ್ದವನು. ಅಂಥವನ ನೆರವನ್ನು ಕಳೆದುಕೊಂಡಿದ್ದರೆ ದುರ್ಯೋಧನನು ಅಧೀರನಾಗಿ ಪಾಂಡವರೊಡನೆ ರಾಜಿಮಾಡಿಕೊಳ್ಳುವುದು ಅನಿವಾರ್ಯವಾಗುತ್ತಿತ್ತು. ರಕ್ತಪಾತ ನಿಂತು ಧರ್ಮ ನೆಲೆಗೊಳ್ಳುತ್ತಿತ್ತು. ಆದ್ದರಿಂದ ಆ ಸಂದರ್ಭದಲ್ಲಿ ಕೃಷ್ಣನು ನಡೆಸಿದ್ದು ಅತ್ಯಂತ ಕುಶಲವಾದ ರಾಜತಂತ್ರ.
೨. ಯದ್ಧದಲ್ಲಿ ತಾನು ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲವೆಂದು ಕೈಕೊಂಡ ಶಪಥವನ್ನು ಉಲ್ಲಂಘಿಸಿದನಲ್ಲ, ಶಸ್ತ್ರಹಿಡಿದು ಭೀಷ್ಮರನ್ನು ಎದುರಿಸಿ ನಿಂತಾಗ?
ಭೀಷ್ಮನ ರುದ್ರ ಭಯಂಕರ ಪ್ರಹಾರಗಳಿಂದ ಪಾಂಡವದಳ ನಿರ್ದಯವಾಗಿ ಹತವಾಗುತ್ತಿದ್ದುದನ್ನು, ಪಲಾಯನಗೈಯುತ್ತಿದ್ದುದನ್ನು, ತಾತ ಭೀಷ್ಮನಲ್ಲಿ ಸಹಜವಾಗಿ ಮೃದು ಭಾವನೆಯಿದ್ದ ಅರ್ಜುನನು ತನ್ನ ಪೂರ್ಣ ಶಕ್ತಿಸಾಮರ್ಥ್ಯಗಳಿಂದ ಅವನನ್ನು ನಿಗ್ರಹಿಸದೇ ಇದ್ದದ್ದನ್ನು ಗಮನಿಸಿದ ಕೃಷ್ಣನು ತಾನೇ ಚಕ್ರಾಯುಧನಾಗಿ ಭೀಷ್ಮನನ್ನು ಎದುರಿಸಲು ಸಿದ್ಧನಾದನು. ಅದನ್ನು ಕಂಡ ಅರ್ಜುನನು ಅವನನ್ನು ತಡೆದು ತನ್ನ ಪೂರ್ಣಶಕ್ತಿಯಿಂದ ಹೋರಾಡಿ ಭೀಷ್ಮನನ್ನು ತಡೆಯುವೆನೆಂದು ಭರವಸೆ ನೀಡಿದ ನಂತರ ಕೃಷ್ಣನು ರಥಕ್ಕೆ ಮರಳಿದನು (ಮಹಾಭಾರತ, ಭೀಷ್ಮಪರ್ವ ೫೯.೧೦೩).
ಕೃಷ್ಣನ ಈ ವರ್ತನೆಯು ಮುಖ್ಯವಾಗಿ ಅರ್ಜುನನ ಕರ್ತವ್ಯ ಪ್ರಜ್ಞೆಯನ್ನು ಕೆಣಕಿ ಪೂರ್ಣ ಆವೇಶದಿಂದ ಭೀಷ್ಮನನ್ನು ನಿಗ್ರಹಿಸಲು ಪ್ರಚೋದಿಸುದಕ್ಕಾಗಿಯೇ ಹೊರತು ತಾನೇ ಭೀಷ್ಮನನ್ನು ಎದುರಿಸಿ ನಿಲ್ಲುವುದಕ್ಕಲ್ಲ. ಕೃಷ್ಣನ ಜೀವನದ ಪರಮಗುರಿ ಧರ್ಮ, ಅದರ ಸಮರ್ಥನೆ ಹಾಗೂ ರಕ್ಷಣೆ. ಆ ಗುರಿಯ ಸಾಧನೆಯಲ್ಲಿ ಯಾವ ತ್ಯಾಗವೂ ಹೆಚ್ಚಿನದಲ್ಲ; ಅಗತ್ಯವಾದರೆ ತಾನು ಕೈಗೊಂಡ ಶಪಥಗಳ ತ್ಯಾಗಕ್ಕೂ ಸಿದ್ಧ?
ಕೃಷ್ಣನು ಆಯುಧವನ್ನು ಹಿಡಿಯುವಂತೆ ಮಾಡಿಯೇ ತೀರುತ್ತೇನೆ ಎಂದು ಭೀಷ್ಮನೂ ಸಂಕಲ್ಪ ಮಾಡಿದ್ದನು; ಅವನ ಗಾಢವಾದ ಭಕ್ತಿಯನ್ನು ಮೆಚ್ಚಿ ಅವನ ಸಂಕಲ್ಪವನ್ನು ಮನ್ನಿಸಿ ಕೃಷ್ಣನು ತನ್ನ ಶಪಥವನ್ನು ತೊರೆದು ಆಯುಧವನ್ನು ಹಿಡಿದನು ಎಂಬ ಜನಜನಿತ ಕಥೆಯನ್ನು ಇಲ್ಲಿ ಸ್ಮರಿಸಬಹುದು. ಆದರೆ ಅದರ ಪ್ರಸ್ತಾಪ ಮಹಾಭಾರತದಲ್ಲಿಲ್ಲ.
೩. ಅಜೇಯನಾದ ದ್ರೋಣನನ್ನು ಅಧೀರನನ್ನಾಗಿಸಿ ಯುದ್ಧದಿಂದ ನಿವೃತ್ತಿಗೊಳಿಸುವ ಸಲುವಾಗಿ, ಆಶ್ವತ್ಥಾಮಾ ಹತಃ (ಅಶ್ವತ್ಥಾಮನು ಕೊಲ್ಲಲ್ಪಟ್ಟನು) ಎಂಬ ನಿಜವೆಂಬಂತೆ ತೋರುವ ಸುಳ್ಳನ್ನು ಉಚ್ಛಸ್ವರದಲ್ಲಿ ಹೇಳಿ ಕುಂಜರಃ (ಆನೆ) ಎಂಬ ಶಬ್ದವನ್ನು ಮೆಲುದನಿಯಲ್ಲಿ ಹೇಳುವಂತೆ ಯುಧಿಷ್ಠಿರನನ್ನು ಪ್ರೇರೇಪಿಸಿದ್ದು.
ಯುಧಿಷ್ಠಿರನನ್ನು ಕುರಿತದ್ದು ಎನಿಸಿಕೊಂಡಿರುವ ಮಹಾಭಾರತದ ಮೂಲ ಶ್ಲೋಕ ಹೀಗಿದೆ-
ತಮತಥ್ಯಭಯೇ ಮಗ್ನೋ ಜಯೇ ಸಕ್ತೋ ಯುಧಿಷ್ಠಿರಃ l
ಅಶ್ವತ್ಥಾಮಾ ಹತ ಇತಿ ಶಬ್ದಮುಚ್ಚೈಶ್ಚಚಾರ ಹ l
ಅವ್ಯಕ್ತಮಬ್ರವೀದ್ರಾಜನ್ ಹತಃ ಕುಞ್ಜರ ಇತ್ಯುತ ll
ದ್ರೋಣ ಪರ್ವ ೧೯೦.೫೫
’ರಾಜನೇ ಅತಥ್ಯವನ್ನು (ಸುಳ್ಳನ್ನು) ಹೇಳಲು ಹೆದರುವ ಯುಧಿಷ್ಠಿರನು (ಯುದ್ಧದಲ್ಲಿ) ಜಯಗಳಿಸಲು ಆಸಕ್ತಿಯುಳ್ಳವನಾಗಿ (ದ್ರೋಣನಿಗೆ ಕೇಳುವಂತೆ) ಉಚ್ಛಸ್ವರದಲ್ಲಿ ’ಅಶ್ವತ್ಥಾಮನು ಕೊಲ್ಲಲ್ಪಟ್ಟನು’ ಎಂದು ಹೇಳಿ (ಆ ಹೆಸರಿನ)”ಆನೆಯು ಕೊಲ್ಲಲ್ಪಟ್ಟಿತು’ ಎಂದು (ದ್ರೋಣನಿಗೆ ಕೇಳಿಸದಂತೆ) ಮೆಲುದನಿಯಲ್ಲಿ ಹೇಳಿದನು.’ (ಮಹಾಭಾರತ. ದ್ರೋಣಪರ್ವ ೧೯೦.೫೫)
ಈ ಶ್ಲೋಕವು ಯಾರೋ ಎಚ್ಚರ ತಪ್ಪಿ ಬರೆದು ಸೇರಿಸಿದ ಪ್ರಕ್ಷಿಪ್ತವಾಗಿರದೆ ಮಹಾಭಾರತದ ಮೂಲಶ್ಲೋಕವೇ ಎಂದು ಒಪ್ಪಿಕೊಂಡ ಪಕ್ಷದಲ್ಲಿ ಯುಧಿಷ್ಠಿರನು ಕೃಷ್ಣನ ಸಲಹೆಯಂತೆ ದ್ರೋಣನನ್ನು ಕಂಗೆಡಿಸುವುದಕ್ಕಾಗಿ (ಅವನ ಮಗ) ಅಶ್ವತ್ಥಾಮ ಹತನಾದ - (ಹತನಾದವನು ಅಶ್ವತ್ಥಾಮನಲ್ಲ; ಅದೇ ಸಮಯದಲ್ಲಿ ಭೀಮನಿಂದ ಕೊಲ್ಲಲ್ಪಟ್ಟ ಆ ಹೆಸರಿನ ಒಂದು ಆನೆ ಎಂದು ಗೊತ್ತಿದ್ದೂ ಸಹ) - ಎಂದು ಏರುದನಿಯಲ್ಲಿ ಸುಳ್ಳು ಹೇಳಿದ ಎಂದು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ಆದರೆ, ಸುಯೋಗದಿಂದ ಇದು ವ್ಯಾಸಪ್ರಣೀತ ಮೂಲ ಶ್ಲೋಕವಲ್ಲ; ಕಾಲಾನಂತರ ಹಿಂದುಮುಂದು ನೋಡಲರಿಯದ ಯಾರೋ ಅಪ್ರಬುದ್ಧರು ಆತುರದಲ್ಲಿ ಬರೆದು ಸೇರಿಸಿರುವ ಪ್ರಕ್ಷೇಪ ಎಂದು ಅನುಮಾನಿಸಲು ಪ್ರಬಲವಾದ ಕಾರಣಗಳಿವೆ. ಅವುಗಳನ್ನು ಸಂಗ್ರಹವಾಗಿ ಹೀಗೆ ಗುರುತಿಸಬಹುದು :
ಅ) ಕಂಗೆಡಿಸುವ ಈ ಸುದ್ದಿಯನ್ನು ಕೇಳಿದ ಮೇಲೂ, ಸಾಮಾನ್ಯವಾಗಿ ಜನ ಊಹಿಸುವಂತೆ, ಹತಾಶನಾಗಿ ಶಸ್ತ್ರಾಸ್ತ್ರಗಳನ್ನೆಸದು ಕೈಚೆಲ್ಲಿಕೂರದೆ, ದ್ರೋಣನು ಕಾಳಗವನ್ನು ಮುಂದುವರೆಸಿ ದೃಷ್ಟದ್ಯುಮ್ನ ಮತ್ತಿತರರನ್ನು ರಣರಂಗದಿಂದ ಅಟ್ಟಿದನು. ಅಂದಮೇಲೆ ಆ ಸುಳ್ಳು ಹೇಳಿದ ಉದ್ದೇಶವೇ ವ್ಯರ್ಥವಾಯಿತಲ್ಲ?
ಆ) ಕೃಷ್ಣನ ಎಚ್ಚರಿಕೆಯನ್ನೂ, ಒತ್ತಾಯವನ್ನೂ ಲೆಕ್ಕಿಸದೆ ಅಶ್ವತ್ಥಾಮನ ನಾರಾಯಣಾಸ್ತ್ರವನ್ನೂ ಎದುರಿಸಲು ಸಿದ್ಧನಾಗಿದ್ದ, ಅಭಯವೇ ಮೈವೆತ್ತಂತಿದ್ದ ಭೀಮನು ಅಶ್ವತ್ಥಾಮವೆಂಬ ಹೆಸರಿನ ಯಃಕಶ್ಚಿತ್ ಆನೆಯೊಂದನ್ನು ಕೊಲ್ಲುವ ಕ್ಷುದ್ರಕಾರ್ಯ ಮಾಡಿದನೆಂಬುದು ಸುಳ್ಳು ಎನ್ನುವ ಬೀಸುವ ಕಲ್ಲಿಗೆ ಕಾಳುಣಿಸಿದಂತಾಯ್ತಲ್ಲ! ಅದೇ ಮಾನದಂಡದಿಂದ ’ಧರ್ಮರಾಜ’ ಎನಿಸಿಕೊಂಡ ಯುಧಿಷ್ಠಿರನು ಅದೂ ತನ್ನ ಆಚಾರ್ಯನಿಗೆ ಸುಳ್ಳು ಹೇಳುವ ನೀಚ ಕಾರ್ಯ ಮಾಡಿದನೆಂಬುದನ್ನು ಮತ್ತು ಧರ್ಮಸ್ಥಾಪನೆಗಾಗಿಯೇ ತನ್ನ ಇಡೀ ಜೀವನವನ್ನು ವಿನಯೋಗಿಸಿಕೊಂಡ ಕೃಷ್ಣನು ಅವನಿಂದ ಸುಳ್ಳನ್ನು ಹೇಳಿಸುವ ನೀಚ ತಂತ್ರವನ್ನು ಹೂಡಿದನೆಂಬುದನ್ನು ಊಹಿಸಲೂ ಸಾಧ್ಯವಿಲ್ಲ!
ಇ) ದ್ರೋಣನು ಬ್ರಹ್ಮಾಸ್ತ್ರದಂತಹ ಘೋರ ಅಸ್ತ್ರಗಳನ್ನು ಬಳಸುವ ಬಗೆಗಿನ ನಿಯಮಗಳನ್ನು ಮೀರಿ ಅಂತಹ ದಿವ್ಯಾಸ್ತ್ರಗಳಿಂದ ಮುಗ್ಧ ಸೈನಿಕರನ್ನು ವಧಿಸುತ್ತಿರುವುದನ್ನು ಕಂಡ ವಿಶ್ವಾಮಿತ್ರ, ಜಮದಗ್ನಿ, ಭರದ್ವಾಜ, ಗೌತಮ, ವಸಿಷ್ಠ, ಅತ್ರಿ, ಭೃಗು, ಮುಂತಾದ ಮಹರ್ಷಿಗಳು ಅಲ್ಲಿಗೆ ಬಂದು, ಅವನು ಇನ್ನು ಅಸ್ತ್ರಗಳ ಬಳಕೆಯನ್ನು ಬಿಟ್ಟು ತಿಳುವಳಿಕೆಯಿಲ್ಲದೆ ತ್ಯಜಿಸಿದ್ದ ತನ್ನ ಆಧ್ಯಾತ್ಮ ಸಾಧನೆಯಲ್ಲಿ ತೊಡಗಬೇಕೆಂದು ಎಚ್ಚರಿಸಿದರು (ಮಹಾಭಾರತ, ದ್ರೋಣಪರ್ವ, ೧೯೦.೩೨ರಿಂದ ೪೦). ಅವನ ಕಾಲ ಮುಗಿದು ಮೃತ್ಯುವು ಸನ್ನಿಹಿತವಾಗುತ್ತಿದೆ ಎಂಬುದನ್ನು ಅವನಿಗೆ ಜ್ಞಾಪಿಸಿದರು.
ದ್ರೋಣನು ಅಸ್ತ್ರ ತ್ಯಾಗ ಮಾಡಿ ರಣರಂಗವನ್ನು ತೊರೆದು ಧ್ಯಾನಾಸಕ್ತನಾದದ್ದು ಹೀಗೆ; ದ್ರುಪದ ಪುತ್ರ ದೃಷ್ಟದ್ಯುಮ್ನನಿಂದ ಅವನ ಶಿರಚ್ಛೇದನವಾದದ್ದೂ ಕೂಡ ಆ ಸಂದರ್ಭದಲ್ಲೇ.
ಆದ್ದರಿಂದ ಯುಧಿಷ್ಠಿರನನ್ನು ಕೃಷ್ಣನನ್ನೂ ಅವಹೇಳನಗೊಳಿಸುವ ಈ ಕಥಾಭಾಗವು ವಿಕೃತವೂ ನಿಷ್ಪ್ರಯೋಜಕವೂ ಆದ ಪ್ರಕ್ಷಿಪ್ತವೆಂದು ಯಾವ ಅಡ್ಡಿಯೂ ಇಲ್ಲದೇ ತೀರ್ಮಾನಿಸಬಹುದು.*
(* ಪುಣೆಯ ಭಂಡಾರ್ಕರ್ ಪ್ರಾಚ್ಯ ಸಂಶೋಧನಾ ಸಂಸ್ಥೆಯು ಪ್ರಕಟಿಸಿರುವ ವಿ.ಎಸ್. ಸುಖ್ತಂಕರ್ ಅವರಿಂದ ಸಂಪಾದಿತವಾಗಿರುವ ಮಹಾಭಾರತದ ವಿಮರ್ಶಾತ್ಮಕ ಸಂಪುಟದಲ್ಲಿ ಈ ಕಥಾ ಭಾಗವನ್ನು ಸಂಪೂರ್ಣವಾಗಿ ಬಿಟ್ಟಿರುವುದು ನಮ್ಮ ಅಭಿಪ್ರಾಯವನ್ನು ಸಮರ್ಥಿಸುತ್ತದೆ),
ಮಹಾಭಾರತದ ಕರ್ಣ ಪರ್ವದ ೬೮ರಿಂದ ೭೧ - ಈ ನಾಲ್ಕು ಅಧ್ಯಾಯಗಳಲ್ಲಿ ನಿರೂಪಿತವಾಗಿರುವ ಕೃಷ್ಣನ ವ್ಯಕ್ತಿತ್ವದ ಘನತೆ ಹಾಗೂ ಅವನ ವಿವೇಚನಾ ಕುಶಲತೆಗಳನ್ನು ಕುರಿತ ಇನ್ನೊಂದು ಸಂಗತಿಯನ್ನೂ ಇಲ್ಲಿ ಪ್ರಸ್ತಾಪಿಸುವುದು ಅನುಚಿತವೆನಿಸಲಾರದು. ಅರ್ಜುನನು ಆವೇಶಭರಿತನಾಗಿದ್ದ ಒಂದು ಸಂದರ್ಭದಲ್ಲಿ ತನ್ನ ದಿವ್ಯಾಸ್ತ್ರವಾದ ಗಾಂಡೀವ ಧನುಸ್ಸಿನ ಬಗ್ಗೆ ಹಗುರವಾಗಿ ಮಾತನಾಡುವವರ ತಲೆ ಉರುಳಿಸುವೆನೆಂದು ಪ್ರತಿಜ್ಞೆ ಮಾಡಿದ್ದನು. ಒಮ್ಮೆ ಯುಧಿಷ್ಠಿರನು ಕರ್ಣನನ್ನೆದುರಿಸಲು ಸಾಧ್ಯವಾಗದೆ ರಣರಂಗದಿಂದ ಹಿಮ್ಮೆಟ್ಟಿ ಹೇಗೋ ಜೀವ ಉಳಿಸಿಕೊಂಡು ತನ್ನ ಶಿಬಿರಕ್ಕೆ ಮರಳಬೇಕಾಯಿತು. ಅರ್ಜುನನು ಅವನ ಸ್ಥಿತಿ ಹೇಗಿದೆ ಎಂದು ನೋಡಲು ಬಂದಾಗ, ಅವನು ಕರ್ಣನನ್ನು ಇನ್ನೂ ಕೊಂದಿಲ್ಲವೆಂಬುದನ್ನರಿತು ಅಸಮಾಧಾನದಿಂದ ’ನಿನ್ನ ಗಾಂಡೀವವನ್ನು ಎಸೆ ಆಚೆ!’ ಎಂದು ಮೂದಲಿಸಿದನು. ತನ್ನ ಪ್ರತಿಜ್ಞೆಗೆ ಬದ್ಧನಾಗಿ ಅರ್ಜುನನು ಇನ್ನೇನು ಯುಧಿಷ್ಠಿರನ ಮೇಲೆರಗಲು ತೊಡಗಿದಾಗ, ಕೃಷ್ಣನು ಅವನನ್ನು ತಡೆದು, ಅವನ ವಿವೇಕವನ್ನು ಪ್ರಚೋದಿಸುವುದಕ್ಕಾಗಿ ಧರ್ಮ ಮತ್ತು ಸತ್ಯದ ಬಗ್ಗೆ ಅದ್ಭುತವೂ ಸನಾತನವೂ ಆದ ಉಪದೇಶವನ್ನು ನೀಡಿದನು.
ಆ ಉಪದೇಶದ ಸಾರ ಇದು: ಸತ್ಯವು ಧರ್ಮದಿಂದ, ಅಸತ್ಯವು ಅಧರ್ಮದಿಂದ ಪ್ರೇರಿತ. ಲೋಕ ಹಿತಸಾಧಕವಾದುದೇ ಧರ್ಮ. ಆದುದರಿಂದ ಸತ್ಯವೆನಿಸಿಕೊಳ್ಳುವುದೆಲ್ಲಾ ಲೋಕಹಿತ ಸಾಧಕವಾದುದಾಗಿರಬೇಕು, ಎಂದ ಮೇಲೆ ಲೋಕಹಿತ ಸಾಧನೆಯೇ ಸತ್ಯದ ಒರೆಗಲ್ಲು. ಈ ನಿಟ್ಟಿನಿಂದ ನೋಡಿದಾಗ ಒಂದು ಅಸತ್ಯದಿಂದ ಲೋಕಹಿತ ಸಾಧನೆಯಾಗುವುದಾದರೆ ಅದನ್ನು ಸತ್ಯವೆಂದೂ, ಒಂದು ಸತ್ಯದಿಂದ ಲೋಕಹಿತ ಸಾಧನೆಯಾಗದಿದ್ದರೆ ಅದನ್ನು ಅಸತ್ಯವೆಂದೂ ಪರಿಗಣಿಸಬೇಕಾಗುತ್ತದೆ.
೪. ಕೃಷ್ಣನು ತನ್ನ ಸುದರ್ಶನ ಚಕ್ರದಿಂದ ಸೂರ್ಯಬಿಂಬವನ್ನು ಮರೆಮಾಡಿ, ಸೂರ್ಯಾಸ್ತವಾಯಿತೆಂದು ಜಯದ್ರಥನಿಗೆ ಭ್ರಮೆಯನ್ನುಂಟು ಮಾಡಿ, ಮೋಸದಿಂದ ಅವನನ್ನು ಅರ್ಜುನನಿಂದ ಕೊಲ್ಲಿಸಿದನು ಎಂಬ ಆರೋಪ.
ಸಿಂಧು ರಾಜ್ಯದ ರಾಜ ಜಯದ್ರಥ ಕೌರವರ ಭಾವಮೈದ, ಯುದ್ಧದಲ್ಲಿ ಕೌರವರ ಪರವಾಗಿ ಹೋರಾಡುತ್ತಿದ್ದವನು. ಪಾಂಡವರು ವನವಾಸದಲ್ಲಿದ್ದಾಗ ಒಮ್ಮೆ ದ್ರೌಪದಿಯನ್ನು ಅಪಹರಿಸಿದ್ದವನು. ಪಾಂಡವರಿಂದ ಹಿಡಿಯಲ್ಪಟ್ಟು ಶಿಕ್ಷಿಸಲ್ಪಟ್ಟಿದ್ದವನು. ದ್ರೌಪದಿಯನ್ನು ಅವನ ಹಿಡಿತದಿಂದ ಬಿಡಿಸಿಕೊಳ್ಳಲಾಗಿತ್ತು. ಮುಂದೆ ಕೌರವ ಸೈನ್ಯ ಒಡ್ಡಿದ್ದ ಚಕ್ರವ್ಯೂಹದೊಳಗೆ ನುಗ್ಗಿ ಸಿಕ್ಕಿಕೊಂಡಿದ್ದ ಅರ್ಜುನ-ಸುಭದ್ರೆಯರ ಮಗ ವೀರಬಾಲಕ ಅಭಿಮನ್ಯುವು ಅದರಿಂದ ಬಿಡಿಸಿಕೊಳ್ಳಲು ಹವಣಿಸಿದ್ದ. ಅರ್ಜುನನನ್ನು ಬಿಟ್ಟು ಉಳಿದ ನಾಲ್ಕು ಪಾಂಡವರನ್ನು (ರಣರಂಗದ ಇನ್ನೊಂದೆಡೆ ಹೋರಾಡುತ್ತಿದ್ದ ಅರ್ಜುನನಿಗೆ ಈ ಪ್ರಸಂಗದ ಅರಿವಿಲ್ಲದ್ದರಿಂದ) ತಡೆಯುವುದರಲ್ಲಿ ಪ್ರಮುಖ ಪಾತ್ರವನ್ನು ಈ ಜಯದ್ರಥನು ವಹಿಸಿದ್ದನು. ಇದರ ಪರಿಣಾಮವಾಗಿ ಕೌರವ ಸೈನ್ಯದ ಯೋಧರೆನಿಸಿಕೊಂಡಿದ್ದವರಿಂದ ಯುದ್ಧದ ನೀತಿ ನಿಯಮಗಳು ಗಾಳಿಗೆ ತೂರಲ್ಪಟ್ಟು ಆ ವೀರಬಾಲಕನ ಅತ್ಯಂತ ಕ್ರೂರವಾದ ವಧೆಯಾಯಿತು. ಇದನ್ನರಿತ ಅರ್ಜುನನು ಮರುದಿನ ಸೂರ್ಯಾಸ್ತವಾಗುವುದರೊಳಗೆ ಜಯದ್ರಥನನ್ನು ವಧಿಸುವೆನು, ಇಲ್ಲವೋ ಅಗ್ನಿಗೆ ಆತ್ಮಾರ್ಪಣೆ ಮಾಡಿಕೊಳ್ಳುವೆನು ಎಂದು ಪ್ರತಿಜ್ಞೆ ಮಾಡಿದನು. ಅವನ ಈ ಘೋರ ಪ್ರತಿಜ್ಞೆಯಿಂದ ಭೀತರಾದ ಕೌರವರು ಮರುದಿನ ಸೂರ್ಯಾಸ್ತದವರೆಗೆ ಅರ್ಜುನನಿಗೆ ಕಾಣಿಸದಂತೆ ಜಯದ್ರಥನನ್ನು ಮರೆಯಲ್ಲಿರಿಸಲು ಪ್ರಯತ್ನಿಸಿದರು. ಮಾರನೆಯ ಇಡೀ ದಿನ ಅವಿರತವಾಗಿ ಅತ್ಯಂತ ಭಯಂಕರವಾದ ಹೋರಾಟ ನಡೆಸಿದರೂ ಜಯದ್ರಥನ ಸುಳಿವೇ ಸಿಗಲಿಲ್ಲ ಅರ್ಜುನನಿಗೆ. ಆ ಸಂದರ್ಭದಲ್ಲಿ ಕೃಷ್ಣನು ತನ್ನ ಯೋಗಶಕ್ತಿಯಿಂದ (ಸುದರ್ಶನ ಚಕ್ರದಿಂದಲ್ಲ) ಜಯದ್ರಥನಿಗೆ ಸೂರ್ಯಾಸ್ತವಾಯಿತೆಂಬ ಭ್ರಾಂತಿಯುಂಟಾಗುವಂತೆ ಮಾಡಿದನು. ಜಯದ್ರಥನು ಭಯವಿಮುಕ್ತನಾದೆನೆಂಬ ಉಲ್ಲಾಸದಿಂದ ತಲೆಯೆತ್ತಿದೊಡನೆ ಅರ್ಜುನನಿಂದ ವಧಿಸಲ್ಪಟ್ಟನು (ಮಹಾಭಾರತ, ದ್ರೋಣಪರ್ವ, ೧೪೬.೬೪-೬೮). ಅಧರ್ಮದ ಪಕ್ಷವಹಿಸಿ ಹೋರಾಡುತ್ತಾ ಜಯದ್ರಥನು ಎರಡು ಪಾಪಕೃತ್ಯಗಳನ್ನೆಸಗಿದ್ದರಿಂದ, ಅರ್ಜುನ ಅವನನ್ನು ಕೊಂದದ್ದು, ಧರ್ಮದ ಪುನರುತ್ಥಾನ ಕಾರ್ಯದಲ್ಲಿ ನಿರತನಾಗಿದ್ದ ಕೃಷ್ಣ ಅವನಿಗೆ ನೆರವಾದದ್ದು ನ್ಯಾಯವೇ ಆಯಿತು.
೫. ನೆಲದಲ್ಲಿ ಹೂತು ಹೋಗಿದ್ದ ರಥ ಚಕ್ರವನ್ನು ಮೇಲೆತ್ತುವ ಪ್ರಯತ್ನದಲ್ಲಿ ನಿರಾಯುಧನಾಗಿದ್ದ ಕರ್ಣನನ್ನು ವಧಿಸಲು ಕೃಷ್ಣನು ಅರ್ಜುನನನ್ನು ಪ್ರೇರೇಪಿಸಿದ್ದು, ಧರ್ಮದ ಎಲ್ಲಾ ನಿಯಮಗಳಿಗೆ ವಿರುದ್ಧವಾದ, ಹೇಡಿತನದ ಕೃತ್ಯವಲ್ಲವೇ? ಎನ್ನುವ ಆರೋಪ.
ಕರ್ಣಪರ್ವದ ೯೦-೯೧ನೆಯ ಅಧ್ಯಾಯಗಳಲ್ಲಿ ಈ ಪ್ರಸಂಗದ ವಿವರವಾದ ನಿರೂಪಣೆಯಿದೆ. ಅದೇ ಪರ್ವದ ೯೦ನೇ ಅಧ್ಯಾಯದ ೧ರಿಂದ ೧೪ನೇ ಶ್ಲೋಕಗಳಲ್ಲಿ ಕರ್ಣನು ಮಾಡಿದ ಅಪವಾದವನ್ನು ಕೃಷ್ಣನು ಖಂಡಿಸಿದ ರೀತಿ ಅದೆಷ್ಟು ತರ್ಕಬದ್ಧವೂ ಶಕ್ತಿಯುತವೂ ಆಗಿತ್ತೆಂದರೆ, ಕರ್ಣನು ಲಜ್ಜೆಯಿಂದ ತನ್ನ ಮಾತನ್ನು ತಾನೇ ನುಂಗಿಕೊಳ್ಳಬೇಕಾಯಿತು (ಕರ್ಣಪರ್ವ ಅಧ್ಯಾಯ ೯೦, ಶ್ಲೋಕ ೧೫).
ಕೃಷ್ಣನ ವಾದ ಸರಳವಾಗಿತ್ತು. ಧರ್ಮದ ಎಲ್ಲ ನಿಯಮಗಳನ್ನು ಬದಿಗೊತ್ತಿ ಕೌರವರು ಪಾಂಡವರನ್ನು ಅರಗಿನರಮನೆಯಲ್ಲಿ ಸುಡುವ, ಭೀಮನಿಗೆ ವಿಷವುಣಿಸಿ ಕೊಲ್ಲುವ, ದ್ರೌಪದಿಯನ್ನು ಅವಮಾನಿಸುವ, ಮೋಸದ ಪಗಡೆಯಾಟದಲ್ಲಿ ಅವರ ಭಾಗದ ರಾಜ್ಯವನ್ನು ಕಬಳಿಸುವ, ಹೇಯ ಕೃತ್ಯಗಳ ಮೂಲಕ ಪಾಂಡವರಿಗೆ ಹಾನಿಯನ್ನುಂಟುಮಾಡಿ ಅವರನ್ನು ನಾಶಗೊಳಿಸುತ್ತಿದ್ದಾಗ ಕರ್ಣ ಅವರಿಗೆ ಬೆಂಬಲವಾಗಿ ನಿಂತು ಅವರ ಪಾಪಕೃತ್ಯಗಳಲ್ಲಿ ಭಾಗಿಯಾಗಿರುವಾಗ, ಅವನಿಗೆ ಧರ್ಮದ ಬಗ್ಗೆ ಮಾತನಾಡುವ ಅಧಿಕಾರವೆಲ್ಲಿದೆ?
ಕರ್ಣನು ನಿರಾಯುಧನಾಗಿ ನಿಸ್ಸಹಾಯಕನಾಗಿದ್ದಾಗ ಕೊಲ್ಲಲ್ಪಡಲಿಲ್ಲ, ಸಹಜವಾಗಿ ಹೋರಾಡುತ್ತಲೇ ಸಾವನ್ನಪ್ಪಿದನು.
೬. ಭೀಮ-ದುರ್ಯೋಧನರ ಗದಾಯುದ್ಧದ ಸಮಯದಲ್ಲಿ, ಆ ಯುದ್ಧದ ನಿಯಮದಂತೆ ನಾಭಿಯಿಂದ ಕೆಳಗೆ ಗದಾಪ್ರಹಾರ ಮಾಡುವುದು ನಿಷೇಧವಾಗಿದ್ದರೂ ಕೃಷ್ಣನು ಧುರ್ಯೋಧನನ ತೊಡೆಮುರಿಯುವೆನೆಂದು ಭೀಮನು ಮಾಡಿದ್ದ ಪ್ರತಿಜ್ಞೆಯನ್ನು ಅವನಿಗೆ ಜ್ಞಾಪಿಸಿದ್ದು ತನ್ನ ತೊಡೆಯನ್ನೇ ತಟ್ಟಿ ತೋರಿ.
ಯುದ್ಧದ ಬಗ್ಗೆ ಕೃಷ್ಣನ ವಿಮರ್ಶೆಯನ್ನು ಕೇಳಿ, ದುಯೋಧನನ ಕೈಮೇಲಾಗುತ್ತದೆ ಎಂಬುದನ್ನರಿತಾಗ ವಾಸ್ತವವಾಗಿ ಭೀಮನನ್ನು ಎಚ್ಚರಿಸಿದವನು ಅರ್ಜುನ (ಶಲ್ಯಪರ್ವ, ಅಧ್ಯಾಯ ೫೮, ಶ್ಲೋಕ ೨೧).
ನಾಭಿಯಿಂದ ಕೆಳಗೆ ಹೊಡೆಯುವುದು ಗದಾಯುದ್ಧದಲ್ಲಿ ನಿಷೇಧವಾಗಿದ್ದರೂ ಭೀಮ ದರ್ಯೋಧನನ ಎಡತೊಡೆ ಮುರಿಯುವಂತೆ ಹೊಡೆಯಬೇಕಾಯಿತು; ಏಕೆಂದರೆ, ಅ ತೊಡೆಯನ್ನು ನಗ್ನವಾಗಿಸಿಕೊಂಡು ದ್ರೌಪದಿಗೆ ಅವಮಾನ ಮಾಡಿದ್ದ. ಆ ದಿನವೇ ಭೀಮ ಆ ತೊಡೆಯನ್ನು ಮುರಿಯುವೆನೆಂದು ಪ್ರತಿಜ್ಞೆ ಮಾಡಿದ್ದ (ಸಭಾಪರ್ವ, ಅಧ್ಯಾಯ ೬೦, ಶ್ಲೋಕ ೧೦ರಿಂದ ೧೪). ಹೀಗೆ ಮಾಡದೇ ಇದ್ದಿದ್ದರೆ, ಕೃಷ್ಣನು ಖಚಿತವಾಗಿ ಹೇಳುತ್ತಿದ್ದಂತೆ, ದುರ್ಯೋಧನನೇ ಗೆದ್ದು ಅವನ ದುರಾಡಳಿತದಿಂದ ರಾಜ್ಯದ ಜನ ದುಃಖತಪ್ತರಾಗುತ್ತಿದ್ದರು. ಗದಾಯುದ್ಧದ ನಿಯಮವೊಂದರ ಉಲ್ಲಂಘನೆಯಿಂದ ಆಗುವ ಅನರ್ಥಕ್ಕಿಂತ ಧರ್ಮದ ನಾಶದಿಂದ ಆಗುವ ಅನರ್ಥ ಹೆಚ್ಚಿನದಲ್ಲವೇ? ಪ್ರಾಣ ಉಳಿಸುವುದಕ್ಕಾಗಿ ವೈದ್ಯರು ದೇಹದ ಕಲುಷಿತ ಅಂಗವೊಂದನ್ನು ಕತ್ತರಿಸಿ ಹಾಕಿದಂತಲ್ಲವೇ ಇದು?
೭. ತಡೆಯುವ ಸಾಮರ್ಥ್ಯವಿದ್ದರೂ ಭ್ರಾತೃಕಲಹದಿಂದ (ದಾಯಾದಿ ಕಲಹದಿಂದ) ಯಾದವ ಕುಲ ನಾಶವಾಗುವುದನ್ನು ಕೃಷ್ಣನು ತಡೆಯಲಿಲ್ಲ. ಅದರ ವಿನಾಶ ಕಾರ್ಯದಲ್ಲಿ ಅವನೂ ಭಾಗಿಯಾದ - ಎಂಬ ಆಪಾದನೆ.
ವಿಪರೀತ ಮದ್ಯಪಾನಾಸಕ್ತಿಯಿಂದ ಯಾದವಕುಲ ಸುಧಾರಿಸಲಾಗದಷ್ಟು ಕೆಟ್ಟುಹೋಗಿತ್ತು. ಅದರ ಸುಧಾರಣೆಗಾಗಿ ಕೃಷ್ಣ ಮಾಡಿದ ಪ್ರಯತ್ನವೆಲ್ಲ ನಿರರ್ಥಕವಾಯಿತು. ಕೃಷ್ಣ ಇದ್ದದ್ದು ಧರ್ಮರಕ್ಷಣೆಗಾಗಿ, ತನ್ನ ಬಂಧು ಜನರ ರಕ್ಷಣೆಗಾಗಿ ಮಾತ್ರ ಯಾವತ್ತೂ ಅಲ್ಲ, ಯಾದವಕುಲ ವಿನಾಶದಲ್ಲಿ ಅವನ ಪಾತ್ರ ಮೆಚ್ಚತಕ್ಕದ್ದೇ!
೮. ಕೃಷ್ಣನ ದೇಹದ ಅಂತ್ಯ ಅತೀ ಸಾಮಾನ್ಯವೆನಿಸಿತು, ಸಾಮಾನ್ಯ ಬೇಡನೊಬ್ಬನಿಂದ ಅದು ಕೊಲ್ಲಲ್ಪಟ್ಟದ್ದು- ಎಂಬ ಟೀಕೆ.
ಕೃಷ್ಣನು ದೇಹ ತ್ಯಜಿಸಿದ್ದು ಸ್ವ-ಇಚ್ಛೆಯಿಂದ, ಯೋಗದಲ್ಲಿ (ವಿಷ್ಣು ಪುರಾಣ, ೫.೩೭.೭೫). ಭಾಗವತದ ಪ್ರಕಾರ (೧೧.೩೧.೬) ಅವನ ದೇಹವೂ ದಿವ್ಯವಾಗಿದ್ದುದರಿಂದ ಸದೇಹಿಯಾಗಿ ನಿರ್ಯಾಣ ಹೊಂದಿದನು.
ಜರನೆಂಬ ವ್ಯಾಧನು ಕೃಷ್ಣನನ್ನು ಕೊಂದನು ಎಂಬ ಕಥೆ, ವೃದ್ಧಾಪ್ಯ (ಜರ)ದಿಂದ ಕೃಷ್ಣನ ನಿಧನವಾಯಿತು ಎಂಬುದರ ರೂಪಾಲಂಕಾರವಾಗಿರಬಹುದು. ಈ ಕಥೆಯು ನಿಜವಾಗಿ ನಡೆದದ್ದೇ ಎಂದುಕೊಂಡರೂ ಕೃಷ್ಣನ ಘನತೆಗೆ ಕುಂದುಂಟು ಮಾಡುವಂತದ್ದೇನೂ ಅದರಲ್ಲಿ ಇಲ್ಲ. ಜೀವನದ ಉದ್ದೇಶ ಈಡೇರಿದ ಮೇಲೆ ಭೌತಿಕ ದೇಹವನ್ನು ಹೇಗೆ ತ್ಯಜಿಸಬೇಕೆಂಬುದು ಆ ದೇಹವನ್ನು ಧರಿಸಿದ ವ್ಯಕ್ತಿಗೆ ಸಂಬಂಧಪಟ್ಟದ್ದು. ಅವನ ಘನತೆಗೆ ಅದರಿಂದ ಯಾವ ರೀತಿಯಲ್ಲೂ ಕುಂದು ಬರುವುದಿಲ್ಲ. ಬುದ್ಧನಿಗೆ ವಿಷಪ್ರಾಶನವಾಯಿತು, ಸಿಖ್ ಗುರುಗಳಲ್ಲಿ ಕೆಲವರು ಬರ್ಬರರ ದೌರ್ಜನ್ಯಕ್ಕೆ ಬಲಿಯಾಗಿ ಹುತಾತ್ಮರಾದರು. ಶ್ರೀ ರಾಮಕೃಷ್ಣರು ದುರಾಶೆಯಿಂದ ವಿಶ್ವಾಸಘಾತುಕನಾಗಿದ್ದ ಅರ್ಚಕನೊಬ್ಬನಿಂದ ಒದೆಯಲ್ಪಟ್ಟರು. ಆದರೇನು, ಆ ಮಹಾತ್ಮರೆಲ್ಲ ಇಂದಿಗೂ ಎಂದೆಂದಿಗೂ ಲೋಕವಂದ್ಯರು! ಅವರ ಜೀವನದಲ್ಲಿ ನಡೆದ ಅಂತಹ ಹಲವು ಘಟನೆಗಳು ಅವರ ದಿವ್ಯಪ್ರಕಾಶವನ್ನು ಇನ್ನೂ ಉಜ್ವಲಗೊಳಿಸಿವೆ.
*ಶುಭಂ*
ಚಿತ್ರಕೃಪೆ: http://www.google.co.in/imgres?sa=X&hl=en&biw=1366&bih=615&tbm=isch&tbnid=0W8hfRYNK0zMUM:&imgrefurl=http://kunalpages.blogspot.com/2010/11/proof-of-happening-of-mahabharat.html&docid=yr1PtEV7V7yWzM&imgurl=http://2.bp.blogspot.com/_jdTCPnD52kk/TOIhKSpMH7I/AAAAAAAAAJY/9QILYnFUuh4/s1600/mahabharat1.jpg&w=450&h=307&ei=gkSWUa38BoSFrAeGtoH4Cg&zoom=1&ved=1t:3588,r:9,s:0,i:187
Comments
ನಾರಿಯ ಸೀರೆ ಕದ್ದ, ರಾಧೆಯ ಮನವ
ನಾರಿಯ ಸೀರೆ ಕದ್ದ, ರಾಧೆಯ ಮನವ ಗೆದ್ದ, ಕಳ್ಳರ ಕಳ್ಳ ಕೃಷ್ಣ......ಆತನ ಮೇಲೆ ಆರೋಪಿಸುವುದೆಲ್ಲಾ ಭಕ್ತಿಯಿಂದಲೇ...; ಹೋಲಿಸುವಾಗ ಯಾವಾಗಲೂ ದೊಡ್ಡವರೊಂದಿಗೇ ಹೋಲಿಸಿಕೊಳ್ಳಬೇಕು. ತನ್ನ ಕಳ್ಳ ಕೆಲಸಗಳಿಗೆ ಸ್ವಾಮಿಗಳು ಕೃಷ್ಣನ ಹೆಸರ ಬಳಸುತ್ತಿದ್ದರು, ಬಳಸಿಕೊಂಡಿದ್ದಾರೆ,ಬಳಸಿಕೊಳ್ಳುವರು.:) ಎರಡು ಹೆಂಡತಿ ಇರುವವರನ್ನ ಕೆಲವರು"ಆತನೋ ಕೃಷ್ಣ ಪರಮಾತ್ಮ" ಎನ್ನುವರು. ಬೇಸರವಾಗುವುದು..ಆದರೆ ಏನು ಮಾಡುವುದು... ಶ್ರೀಧರ್ಜಿ, ಸುಮನ್ ದೇಸಾಯಿಯವರ ಲೇಖನ, ಹಾಗೂ ತಮ್ಮ ಪೂರ್ತಿ ಆಧಾರ ಸಹಿತ ವಿವರಣಾತ್ಮಕ ಲೇಖನಕ್ಕೆ ಧನ್ಯವಾದಗಳು.
In reply to ನಾರಿಯ ಸೀರೆ ಕದ್ದ, ರಾಧೆಯ ಮನವ by ಗಣೇಶ
ಗಣೇಶ್..ಜಿ;
ಗಣೇಶ್..ಜಿ;
ಉತ್ತೇಜನಾಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು. ಎರಡು ಹೆಂಡತಿಯಿರುವವನು ಕೃಷ್ಣ ಪರಮಾತ್ಮ ಎಂದುಕೊಂಡರೆ ಸರಿ; ಆದರೆ ಅವನು ಕೃಷ್ಣನಂತೆ ಎರಡೂ ಕಡೆ ಇರಬಲ್ಲನೇ? ಎನ್ನುವುದೇ ಪ್ರಶ್ನೆ. ಇರಲಿ ಬಿಡಿ, ಆದಕ್ಕಿಂತ ಹೆಚ್ಚಿನದಾಗಿ ನನ್ನನ್ನು ಕಾಡಿದ್ದು ಕೃಷ್ಣನ ಅವಸಾನದ ಕುರಿತು ಕೆಲವರು ಅವಹೇಳನಕಾರಿಯಾಗಿ ಬರೆಯುತ್ತಿದ್ದದ್ದು. ಇದಕ್ಕೆ ಸೂಕ್ತ ಉತ್ತರ ಸ್ವಾಮಿ ಹರ್ಷಾನಂದರ ಬರಹದಲ್ಲಿದೆ ಎನ್ನುವುದೇ ಸಮಾಧಾನಕರ ವಿಷಯ. ಕಡೆಯಲ್ಲಿ ನಿಮ್ಮ ಶೈಲಿಯ ಒಂದು ಜೋಕು (ಇದನ್ನಾಗಲೇ ಪಾರ್ಥರ ಲೇಖನವೊಂದಕ್ಕೆ ಹಂಚಿಕೊಂಡಂತೆ ನನೆಪು).
ನನ್ನ ಮಗ ಥೇಟ್ ಗಾಂಧೀ ತರಹ ಕಣ್ರೀ. ಗಾಂಧಿ ಸುಳ್ಳು ಹೇಳಿದ ನಮ್ಮವನೂ ಸಹ, ಗಾಂಧೀನೂ ಮನೆಯಲ್ಲಿ ದುಡ್ಡು ಕದ್ದ, ನಮ್ಮವನೂ ಕದ್ದ, ಗಾಂಧಿ ಸಿಗರೇಟು ಸೇದಿದ, ಮಾಂಸ ತಿಂದ, ನಮ್ಮವನೂ ಸಹ ಅದನ್ನೇ ಮಾಡಿದ. ಈಗ ಹೇಳಿ ನಮ್ಮವನು ಗಾಂಧಿ ಹೌದೋ ಅಲ್ಲವೋ? ಆದ್ರೆ ಒಂದೇ ವ್ಯತ್ಯಾಸ ಕಣ್ರೀ ಗಾಂಧಿ ದೊಡ್ಡವನಾದ್ಮೇಲೆ ಇವನ್ನೆಲ್ಲಾ ಬಿಟ್ಟ ಆದ್ರೆ ನಮ್ಮವನು ಬಿಟ್ಟಿಲ್ಲಾ ಅಷ್ಟೇ! ...ಆದ್ದರಿಂದ ನಮ್ಮ ಸ್ವಾಮಿಗಳೆಲ್ಲಾ ಕೃಷ್ಣನಂತೇ ಅಲ್ಲವೇ?
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಗಣೇಶ್..ಜಿ; by makara
ಶ್ರೀಧರರಜಿ ಮತ್ತು ಗಣೇಶಜಿ,
ಶ್ರೀಧರರಜಿ ಮತ್ತು ಗಣೇಶಜಿ,
ಹಿಂದೆ ನಾನೊಂದು ಲಘುಹಾಸ್ಯದ ಕವನ ಬರೆದಿದ್ದೆ - ಅದರಲ್ಲಿ ಕೃಷ್ಣ ಅದು ಹೇಗೆ ಎಲ್ಲಾ ಕಡೆ ಒಂದೆ ಬಾರಿ ಒಂದೆ ರೂಪದಲ್ಲಿ ಇರಲು ಸಾಧ್ಯ ಅಂತ ಮಗ ಅಪ್ಪನಿಗೆ ಪ್ರಶ್ನೆ ಹಾಕುತ್ತಾನೆ. ಅಪ್ಪ ಉತ್ತರಿಸಲು ಒದ್ದಾಡುತ್ತಾ ಕೊನೆಗೆ ತಟ್ಟನೆ 'ಕೃಷ್ಣನ ಹತ್ತಿರ ಇತ್ತೊಂದು ಮಾನವ ಜೆರಾಕ್ಸ್..ಅದರಿಂದ ತನ್ನನ್ನು ತಾನೆ ಎಷ್ಟು ಬೇಕಾದರೂ ಕಾಪಿ ಮಾಡಿ ಹಂಚಿಕೊಳ್ಳುತ್ತಿದ್ದ' ಅಂತ. ಈಗ ಕ್ಲೋನಿಂಗಿನಲ್ಲಿ ಹೆಚ್ಚು ಕಡಿಮೆ ಇದೆ ತತ್ವ...ಆ ಕಾಲದಲ್ಲಿ ಇದೆಲ್ಲಕ್ಕು ಮೀರಿದ ಮತ್ತಾವ ಪ್ರಕ್ರಿಯೆ ಬಳಸಿ ಇದನ್ನು ಸಾಧ್ಯವಾಗಿಸಿದನೊ ಆ ಶ್ರೀ ಕೃಷ್ಣ ಪರಮಾತ್ಮ! (ಅಂದ ಹಾಗೆ, ನನ್ನ ಕವನದಲ್ಲಿ ಮಗ ಕೊನೆಗೆ ಕೇಳುತ್ತಾನೆ - ಜೆರಾಕ್ಸ್ ಬರಿ ಬ್ಲಾಕ್ ಅಂಡ್ ವೈಟು ಮಾತ್ರ ಸಾಧ್ಯ ಅಲ್ವಾ ಅನ್ನುತ್ತಾನೆ, ಅದು ಬೇರೆ ವಿಷಯ ಬಿಡಿ)
-ನಾಗೇಶ ಮೈಸೂರು, ಸಿಂಗಾಪುರದಿಂದ
In reply to ಶ್ರೀಧರರಜಿ ಮತ್ತು ಗಣೇಶಜಿ, by nageshamysore
ಕೃಷ್ಣ ದೇವರಲ್ಲವೇ ಹಾಗಾಗಿ ಅವನ
ಕೃಷ್ಣ ದೇವರಲ್ಲವೇ ಹಾಗಾಗಿ ಅವನ ಬಳಿ ಕಲರ್ ಝೆರಾಕ್ಸ್ ಇತ್ತು ನಾವು ಹುಲು ಮಾನವರು ಹಾಗಾಗಿ ನಮ್ಮ ಬಳಿ ಸಾಧಾರಣ ಝೆರಾಕ್ಸ್ ಇತ್ತು. ಈಗ ಕಲರ್ ಝೆರಾಕ್ಸ್ ಬಂದಿರುವುದರಿಂದ ನಾವೂ ದೇವರಾಗುವ ಹಾದಿಯಲ್ಲದ್ದೇವೆ! :)) ನಿಮ್ಮ ಕವನದ ಹಾಸ್ಯ ತುಣುಕೊಂದನ್ನು ಕೊಟ್ಟು ನಗೆಚಿಮ್ಮುಸುವಂತೆ ಮಾಡಿದ್ದೀರ, ಧನ್ಯವಾದಗಳು ನಾಗೇಶ್..ಜಿ!