029 - ಇರುವೆ ಮತ್ತು ಒಂದು ತುಂಡು ರೊಟ್ಟಿಯ ಕಥೆ!
ಇದೊಂದು ಸಮಾನಾಂತರವಾಗಿ ನಡೆಯುವ ಕಥೆ - ಹೆಚ್ಚು ಕಡಿಮೆ ಎರಡೂ ದೇಶಗಳಲ್ಲಿ ಒಂದೆ ಸಮಯದಲ್ಲಿ ಒಂದೆ ಕಾಲಮಾನದಡಿಯಲ್ಲಿ ಆರಂಭವಾದ ಕಥಾನಕ. ಸುಲಭವಾಗಲೆಂದು ನೆರೆಹೊರೆಯಲಿರುವ ಮೇಲಿನ ದೇಶ ಹಾಗೂ ಕೆಳ ದೇಶವೆಂದು ಕರೆಯೋಣ.
ಈ ಕಥಾನಕದ ಪೀಠಿಕೆಯಾಗಿ ಸೂತ್ರದಾರ ಎರಡು ದೇಶದ ನೆಲಗಳ ನಡುವಲೆಲ್ಲೊ ಒಂದೆ ತರದ ಎರಡು ಚಚ್ಚೌಕಾಕಾರದ ರೊಟ್ಟಿಯ ತುಂಡೊಂದೊಂದನ್ನು ಹಾಕಿದ. ಎರಡು ನೆಲಗಳಲ್ಲು ಒಂದೆ ತರದ ಪರಿಸ್ಥಿತಿ, ಹಾಹಾಕಾರ, ಹೊಟ್ಟೆಗಿಲ್ಲದವರ ಸಮಾನ ಆಕ್ರಂದನ. ಹೀಗಾಗಿ ರೊಟ್ಟಿಯ ತುಂಡು ಬೀಳುತ್ತಿದ್ದಂತೆ ಅದೆಲ್ಲಿದ್ದವೊ - ನೂರಾರುಇರುವೆಗಳು ಬಂದು ಮುತ್ತಿಕೊಂಡವು ಎರಡು ನೆಲದಲ್ಲು. ಹರಿಹಾಯ್ದು ಮೇಲೆ ಬಿದ್ದು ಆ ತುಂಡಿನ ಮೇಲೆ ಹತೋಟಿ ಸಾಧಿಸಲು ಹೆಣಗತೊಡಗಿದವು. ಮೇಲಿನ ದೇಶದಲ್ಲೂ ಅದೆ ಪಾಡು, ಕೆಳಗಿನ ದೇಶದಲ್ಲೂ ಅದೆ ಪಾಡು. ಇರುವೆಗಳೇನೊ ಎರಡೂ ಕಡೆ ಅಸಂಖ್ಯಾತವೆ. ಆದರೆ ಹೇಳ ಕೇಳುವವರಿಲ್ಲದ ಅರಾಜಕತೆಯ ವಾತಾವರಣದಲ್ಲಿ ಎಲ್ಲರೂ ಎಲ್ಲಾ ಕಡೆಗೂ ಹೇಗೇಗೊ ದಿಕ್ಕು ದೆಸೆಯಿಲ್ಲದೆ ಎಳೆಯುತ್ತಾ ಸಾಗಿದ್ದರಿಂದ ರೊಟ್ಟಿಯು ಇದ್ದಲೆ ಆಚೀಚೆಗೆ ತುಸು ಅಲುಗಾಡಿತೆ ವಿನಃ ಮುಂದೆ ಸಾಗಲಿಲ್ಲ. ಅದನ್ನೆಲ್ಲಾ ನೋಡುತ್ತಾ ಗಮನಿಸುತ್ತಿದ್ದ ರಾಣಿ ಇರುವೆ ತುಸು ಕೂಗಾಡಿ, ಗಲಾಟೆ ಮಾಡಿದಾಗ ತುಸು ಬಲಕ್ಕೊ, ತುಸು ಎಡಕ್ಕೊ ಹೊರಳಿದ್ದರೂ, ಮತ್ತೆ ಕೆಲವೆ ಹೊತ್ತಲಿ ಅದನ್ನು ವಿರುದ್ಧ ದಿಕ್ಕಿನಲ್ಲಿ ಎಳೆದ ಬೇರೆ ಇರುವೆಗಳಿಂದಾಗಿ ಮತ್ತದೆ ಜಾಗಕ್ಕೆ ಬಂದು ಕೂತು ಬಿಟ್ಟಿರುತ್ತಿತ್ತು; ಅಥವ ಹೋಗಬಾರದ ಇನ್ನಾವುದೊ ದಿಕ್ಕಲಿ ಹೋಗಿ ನಿಂತುಬಿಡುತ್ತಿತ್ತು. ಒಟ್ಟಾರೆ ನೋಡಿದರೆ ಹಾಕಿದಾಗ ಹೇಗೆ ಎಲ್ಲಿತ್ತೊ ಅಲ್ಲೆ ಇರುವಂತೆ ಕಾಣುತ್ತಿತ್ತು.
ಇದನ್ನೆಲ್ಲ ಬಹು ಹೊತ್ತಿನ ತನಕ ನೋಡುತ್ತಿದ್ದ ಸೂತ್ರಧಾರನಿಗೆ ತುಸು ಕರುಣೆ ಬಂದಿತಾದರೂ, ಅವನು ಇಬ್ಬರ ಸಹಾಯಕ್ಕೂ ಸ್ವತಃ ಹೋಗಬಾರದೆಂದು ವಿಧಾತನ ಆಜ್ಞೆಯೆ ಇತ್ತಲ್ಲಾ? ಅದೂ ಅಲ್ಲದೆ ಇಬ್ಬರಲ್ಲಿ ಯಾರಿಗೂ ಹೆಚ್ಚುಗಾರಿಕೆ ಕರುಣೆಯೂ ತೋರುವಂತಿಲ್ಲ, ಸಮಾನವಾಗೆ ಕಾಣಬೇಕಿತ್ತು. ಸರಿ, ತುಸುವಾದರೂ ಸಹಾಯ ಮಾಡೋಣವೆಂದು ಎರಡೂ ಕಡೆಗೂ ರೊಟ್ಟಿಯನ್ನು ತುಂಡು ಮಾಡಲಾಗುವಂತೆ ಒಂದೊಂದು ಚಾಕುವನ್ನು ಎಸೆದ ಎರಡೂ ಕಡೆಗೆ; ಮತ್ತೆ ಮುಂದೇನಾಗುವುದೊ ನೋಡುತ್ತಾ ಕುಳಿತ ದೂರದಿಂದ. ಇನ್ನು ಅವನೇನೂ ಸಹಾಯ ಮಾಡುವಂತಿರಲಿಲ್ಲ. ಅವರವರ ಪಾಲಿಗೆ ಅವರವರನ್ನು ಬಿಟ್ಟು ಬಿಡಬೇಕಾದ ಅನಿವಾರ್ಯ.
ಮೊದಲಿಗೆ ಎರಡೂ ದೇಶದ ಇರುವೆಗಳು ಈ ಚಾಕುವನ್ನು ಗಮನಿಸಲಿಲ್ಲ. ಗಮನಿಸಿದರೂ ಅದರಿಂದೇನಾದೀತೆಂದು ನಿರ್ಲಕ್ಷಿಸಿ ತಮ್ಮ ಎಳೆದಾಟ ಮುಂದುವರೆಸಿದ್ದವು. ಅದರಲ್ಲಿ ಮೇಲಿನ ದೇಶದವೆಲ್ಲಾ ಬಹಳ ಕಷ್ಟಸಹಿಷ್ಣುವಾದ ಹಳದಿ ಬಣ್ಣದ ಸಮವಸ್ತ್ರ ತೊಟ್ಟ ಇರುವೆಗಳು. ಕೆಳಗಿನ ದೇಶದ ಇರುವೆಗಳೊ ಬಣ್ಣ ಬಣ್ಣದ ವಸ್ತ್ರ ತೊಟ್ಟ ಇರುವೆಗಳು; ಕಪ್ಪು, ಕೆಂಪು, ಬಿಳಿ - ಹೀಗೆ ಎಲ್ಲಾ ತರದ ಉಡುಗೆಯ ಮಿಶ್ರಣ ತುಂಬಿದ ಗುಂಪು. ಸ್ವಲ್ಪ ಸೋಮಾರಿತನ, ಆಲಸಿಕೆಯನ್ನು ಮೈಗೂಡಿಸಿಕೊಂಡಂತೆ ನಿರಾಳ ಸ್ವಭಾವದವರಂತೆ ಕಾಣುತ್ತಿತ್ತು.ಹಾಗೆಯೆ ಮೇಲಿನ ದೇಶದವೆಲ್ಲಾ ಒಂದೆ ಭಾಷೆಯಲ್ಲಿ ಮಾತನಾಡುತ್ತ ಪರಸ್ಪರರನ್ನು ಹುರಿದುಂಬಿಸುತ್ತಿದ್ದರೆ, ಕೆಳಗಿನ ದೇಶದವರದು ನೂರೆಂಟು ಭಾಷೆಯ ತರದೂದು. ಹೀಗಾಗಿ ಪರಸ್ಪರರಲ್ಲೆ ಸಂವಹನದಲ್ಲೂ ಗೊಂದಲ, ಪ್ರಶ್ನೆ, ತಪ್ಪನುಸರಣಿಕೆಯೂ ಸಾಮಾನ್ಯವಾದಂತಹ ಪರಿಸ್ಥಿತಿ.
ಇಂತಿರುವಾಗ ಮೇಲಿನ ದೇಶದ ಏನೂ ಮಾಡದೆ ಸುಮ್ಮನೆ ಕುಳಿತ ರಾಜ ಇರುವೆಯೊಂದರ ಗಮನ ಚಾಕುವಿನ ಮೇಲೆ ಬಿತ್ತು. ಅದೇನನಿಸಿತೊ, ಅದು ತಟ್ಟನೆ ರಾಣಿಯ ಹತ್ತಿರ ಹೋಗಿ ಅವಳ ಗಮನವನ್ನು ಚಾಕುವಿನತ್ತ ಸೆಳೆದು ವರದಿ ಒಪ್ಪಿಸಿತು. ಆ ಹಳದಿ ಉಡುಗೆ ತೊಟ್ಟಿದ್ದ ಬಿಳಿ ರಾಣಿ ಬಲು ಚಾಣಾಕ್ಷ ಇರುವೆ. ಮೆದುಳಿನಲ್ಲೆ ಏನೇನೊ ಆಲೋಚನೆ ಮಾಡಿದ್ದೆ, ಬಲಿಷ್ಟರಾದ ಹಲವು ರಾಜಾ ಇರುವೆಗಳನ್ನು ಆಯ್ದುಕೊಂಡು ಹಿಂಬಾಲಿಸಲು ಆಜ್ಞೆ ನೀಡಿತು. ಒಟ್ಟಾಗಿ ಹೋದ ಗುಂಪು ಆ ಚಾಕುವನ್ನು ತಳ್ಳಿಕೊಂಡು ರೊಟ್ಟಿಯ ಸಮೀಪಕ್ಕೆ ಸಾಗಿಸಿದವು. ಆ ರಾಜರಲ್ಲಿ ಒಂದು ಹೇಳಿತು, " ಈ ಚಾಕುವಿನಿಂದ ರೊಟ್ಟಿಯನ್ನು ತುಂಡು ತುಂಡಾಗಿಸಿಬಿಟ್ಟರೆ ಸಣ್ಣ ಸಣ್ಣ ತುಣುಕುಗಳಾಗಿ ಮುರಿದು ಬೀಳುತ್ತವೆ. ಆಮೇಲೆ ನಮ್ಮ ಸೈನಿಕರು ಅದನ್ನು ಸುಲಭವಾಗಿ ಗೂಡಿಗೆ ಸಾಗಿಸಿಬಿಡಬಲ್ಲರು"
ರಾಣಿ ಮಾತನಾಡದೆ ಅವರೆಲ್ಲರ ಮುಖವನ್ನೆ ದಿಟ್ಟಿಸಿತು. ನಂತರ ಅಸಮ್ಮತಿಯೆಂಬಂತೆ ತಲೆಯಾಡಿಸುತ್ತ ತನ್ನ ಗೂಡು ಕಟ್ಟುವ ಇಂಜಿನಿಯರು ಇರುವೆಯನ್ನು ಕರೆದು ಕಿವಿಯಲ್ಲಿ ಏನೊ ಹೇಳಿತು. ಆ ಇರುವೆ ಅರ್ಥವಾದಂತೆ ತಲೆಯಾಡಿಸಿ ಅವಸರದಲ್ಲಿ ಎಲ್ಲಿಗೊ ಓಡಿ ಹೋಯಿತು. ಅದೆ ಗಳಿಗೆಯಲ್ಲಿ ರಾಣಿ ಇರುವೆಯು ತನ್ನೆಲ್ಲ ಸೈನ್ಯಕ್ಕೂ ಎಳೆಯುವುದನ್ನು ನಿಲ್ಲಿಸಿ ತುಸು ಹೊತ್ತು ವಿಶ್ರಮಿಸುವಂತೆ ಆಜ್ಞಾಪಿಸಿತು. ಸರಿಯೆಂದು ಎಲ್ಲರೂ ಬೆವರೊರೆಸಿಕೊಳ್ಳುತ್ತಾ, ನೀರು ಕುಡಿಯುತ್ತಾ ತುಂಡಿನಿಂದ ದೂರ ಹೋಗಿ ವಿಶ್ರಮಿಸತೊಡಗಿದರು.
ಅಷ್ಟು ಹೊತ್ತಿಗೆ ಆ ಇಂಜಿನಿಯರು ಇರುವೆ ಮತ್ತೊಂದಷ್ಟು ಕಾರ್ಮಿಕ ಇರುವೆಗಳ ಜತೆ ವಾಪಸ್ಸು ಬಂತು. ಅದರ ಕೈಯಲ್ಲೀಗ ಒಂದು ದಾರದ ಉಂಡೆಯಿತ್ತು. ಅದನ್ನು ತಂದು ರಾಣಿಗೊಪ್ಪಿಸುತ್ತಿದ್ದಂತೆ, ಆ ರಾಣಿ ಇರುವೆ ಅದನ್ನೊಮ್ಮೆ ನೋಡಿ ಕಣ್ಣಲ್ಲೆ ಪರೀಕ್ಷಿಸಿ ಎಲ್ಲಾ ಸರಿಯಿದೆಯೆಂಬಂತೆ ಮತ್ತೆ ವಾಪಸ್ಸು ಕೊಟ್ಟಿತು. ಈಗ ಇಂಜಿನಿಯರು ಇರುವೆ, ಆ ದಾರವನ್ನು ಸಮಾನವಾದ ನಾಲ್ಕು ತುಂಡುಗಳಾಗಿ ಹಲ್ಲಿಂದಲೆ ಕತ್ತರಿಸಿತು. ನಂತರ ಒಂದೊಂದು ದಾರಕ್ಕೆ ಇಬ್ಬಿಬ್ಬರು ಕಾರ್ಮಿಕರಂತೆ ತುದಿಗಳನ್ನು ಹಿಡಿದುಕೊಳ್ಳಲು ಹೇಳಿತು. ಹೀಗೆ ತುದಿಯಿಡಿದ ಎಂಟು ಕಾರ್ಮಿಕರನ್ನು ಒಂದೊಂದೆ ಜೋಡಿಯಂತೆ ಕರೆಯುತ್ತ ಹೋಯ್ತು. ಮೊದಲ ಜೋಡಿ ರೊಟ್ಟಿಯ ನಡುಭಾಗಕ್ಕೆ ಬರುವಂತೆ ಹೇಳಿ, ದಾರ ರೊಟ್ಟಿಯ ನಡುವಿನಲ್ಲಿ ನೇರ ಸರಳ ರೇಖೆಯಲ್ಲಿ ಹಾದು ಹೋಗುವ ಹಾಗೆ ಎರಡು ಬದಿಯಲ್ಲೊಬ್ಬೊಬ್ಬರಂತೆ ಹಿಡಿದುಕೊಳ್ಳಲು ಹೇಳಿತು. ಈಗ ಮೇಲಿಂದ ನೋಡಿದರೆ ದಾರವು ಸರಿಯಾಗಿ ರೊಟ್ಟಿಯನ್ನು ಮಧ್ಯಕ್ಕೆ ಸಮಭಾಗವಾಗಿ ಕತ್ತರಿಸಿದಂತೆ ಕಾಣುತ್ತಿತ್ತು. ನಂತರ ಬಂದ ಮತ್ತೆರಡು ಕಾರ್ಮಿಕರೂ ಮತ್ತೊಂದು ದಾರದ ಎರಡು ತುದಿ ಹಿಡಿದು ಮೊದಲಿನ ಜೋಡಿಗೆ ಲಂಬವಾಗಿ ನಿಂತರು. ಈಗ ರೊಟ್ಟಿ ನಾಲ್ಕು ಸಮನಾದ ತುಂಡಿನಂತೆ ಕಾಣುತ್ತಿತ್ತು. ಆಗ ಉಳಿದ ಎರಡು ದಾರದ ತುಂಡುಗಳನ್ನು ಹಿಡಿದ ನಾಲ್ಕು ಕಾರ್ಮಿಕರು ಪಕ್ಕಪಕ್ಕದಲ್ಲಿದ್ದ ಇಬ್ಬರು ಕಾರ್ಮಿಕರ ನಡುವೆ ದಾರ ಹಿಡಿದು ನಿಂತರು. ಈಗ ಇಡಿ ರೊಟ್ಟಿಯು ಎಂಟು ಸಮನಾದ ತ್ರಿಭುಜದ ಆಕಾರದಲ್ಲಿ ಕಾಣತೊಡಗಿತು.
ಈಗ ಮತ್ತೆ ಮೇಲಿನ ದೇಶದ ಹಳದಿ ರಾಣಿಯ ಆಜ್ಞೆ - ಅಂತೆಯೆ ಉಳಿದ ಕಾರ್ಮಿಕರು ಓಡಿ ಆ ಚಾಕುವನ್ನೆತ್ತಿಕೊಂಡು ಬಂದರು. ಈಗ ಗುಂಪಿನಲ್ಲಿ ಶುರುವಾಯ್ತು ಕೆಲಸ - ಆ ಚಾಕುವಿನಲ್ಲಿ ದಾರದ ಗೆರೆಗನುಗುಣವಾಗಿ ಕತ್ತರಿಸುವ ಕೆಲಸ. ಹೀಗೆ ಇಡಿ ತಂಡ ವ್ಯವಸ್ಥಿತವಾಗಿ ಶಿಸ್ತಿನಿಂದ ಕೆಲಸ ಮಾಡುತ್ತಲೆ ರೊಟ್ಟಿಯು ಎಂಟು ಸಮಾನ ಗಾತ್ರದ ತ್ರಿಭುಜಗಳಾಗಿ ಕತ್ತರಿಸಲ್ಪಟ್ಟಿತು. ಆದರೆ ಹೊರ ನೋಟಕ್ಕೆ ಮಾತ್ರ ಮೊದಲಿನ ಹಾಗೆ ದಾರ ಹೊದಿಸಿದ ಒಂದೆ ತುಂಡಿನ ಹಾಗೆ ಕಾಣಿಸುತ್ತಿತ್ತು.
ಈಗ ಮತ್ತೆ ರಾಣಿಯ ಆಜ್ಞೆಯಾಯ್ತು - ವಿಶ್ರಮಿಸಿದ್ದ ಕಾರ್ಮಿಕರೆಲ್ಲ ಮತ್ತೆ ರೊಟ್ಟಿಯತ್ತ ಸಾಲುಸಾಲಾಗಿ ಬರಬೇಕೆಂದು. ಹಾಗೆ ಬರುತ್ತಲೆ ಅವರನ್ನು ಒಬ್ಬೊಬ್ಬರನ್ನಾಗಿ ನಿರ್ದೇಶಿಸುತ್ತ ಅವರು ಹೋಗಿ ಹಿಡಿಯಬೇಕಾದ ರೊಟ್ಟಿಯ ಬದಿಯನ್ನು ಅವರಿಗೆ ಹೇಳಿ ಕಳಿಸಲಾಯ್ತು. ಈಗ ಎಲ್ಲರು ಅವರವರ ಜಾಗದಲ್ಲಿ ಸ್ವಸ್ಥವಾಗಿ ನಿಂತ ತಕ್ಷಣ 'ಹುಕುಂ' ಹೊರಟಿತು ರೊಟ್ಟಿಯನ್ನೆಳೆಯಲು. ಎಲ್ಲರೂ ಅವರವರ ಬದಿಗೆ ಸೇರಿದ ರೊಟ್ಟಿಯನ್ನು ಬಲವನ್ನೆಲ್ಲ ಬಿಟ್ಟು ಎಳೆಯಲು ತೊಡಗಿದವು. ಅರೆರೆರೆ...ಏನಾಶ್ಚರ್ಯ? ರೊಟ್ಟಿಯ ತುಂಡು ಹೂವ್ವೆತ್ತಿದಂತೆ ಸಲೀಸಾಗಿ ಚಲಿಸುತ್ತಿದೆ! ಸಾಲಾದಕ್ಕೆಂಬಂತೆ ಎಂಟು ತ್ರಿಕೋನದ ತುಂಡು ಎಂಟು ದಿಕ್ಕಿಗೂ ಒಂದೆ ನೇರದಲ್ಲಿ ಚಲಿಸುತ್ತ ಸಾಗುತ್ತಿದೆ, ಮತ್ತಾವ ಕಡೆಗೂ ಹೊರಳದೆ. ಅದೆ ಸಮಯದಲ್ಲಿ ರಾಣಿ ನೇಮಿಸಿದ ಕೆಲವು ಕಾರ್ಮಿಕರ ಗುಂಪು ನಾಯಕನೊಬ್ಬನ ಮುಂದಾಳತ್ವದಲ್ಲಿ ಪ್ರತಿ ತುಂಡಿನಲ್ಲಿರುವ ಕಾರ್ಮಿಕ ಇರುವೆಗಳು ಜಾಗ ಬದಲಿಸದಂತೆ, ಬದಿಯನ್ನು ಬಿಟ್ಟು ಬೇರೆ ಬದಿಗೆ ಹೋಗದಂತೆ ನೋಡಿಕೊಳ್ಳುತ್ತಿವೆ. ಹಾಗೆ ಹೋದವರನ್ನು ಮತ್ತೆ ಮೊದಲ ಸಾಲಿಗೆ ತಳ್ಳುತ್ತ ರೊಟ್ಟಿಯ ತ್ರಿಕೋನ ಒಂದೆ ನೇರ ಹಾಗು ದಿಕ್ಕಿನಲ್ಲಿ ಸಾಗುವಂತೆ ನಿಯಂತ್ರಿಸುತ್ತಿವೆ.
ಮೇಲಿನಿಂದ ನೋಡುತ್ತಿದ್ದ ಸೂತ್ರಧಾರ ನಸುನಕ್ಕ. ಅವನಿಗೆ ಎಂಟು ದಿಕ್ಕಿಗೂ ಸಾಗುತ್ತಿರುವ ಎಂಟು ಹಳದಿ ತ್ರಿಕೋನಗಳು ಕೆಂದ್ರದಿಂದ ಹಂಚಿದ ಎಂಟು ತ್ರಿಜ್ಯಗಳ ಹಾಗೆ ಕಾಣುತ್ತಿದೆ. ಆ ಕೇಂದ್ರದಲ್ಲಿ ಕುಳಿತು ಸೇವೆಮಾಡಿಸಿಕೊಳ್ಳುತ್ತಿರುವ ಬಿಳಿ ರಾಣಿಯ ಸುತ್ತಲು ಒಂದು ಗುಂಪು ನಿಂತಿದೆ - ಕೆಂದ್ರದಲ್ಲಿದ್ದ ರೊಟ್ಟಿಯ ವೃತ್ತಾಕಾರದ ಸಣ್ಣ ತುಂಡೊಂದನ್ನು ಅಲ್ಲೆ ಕಾಯುತ್ತ. ಅದ್ಯಾವ ಮಾಯದಲ್ಲಿ ಆ ತುಂಡನ್ನು ಹಲ್ಲಿಂದಲೆ ಕಡಿದು ಮಾಡಿದ್ದವೊ ಆ ಇಂಜಿನಿಯರು ಕಾರ್ಮಿಕ ಇರುವೆಗಳು, ಯಾರಿಗೂ ಅರಿವಿಲ್ಲ. ಎಲ್ಲ ಅವರವರ ಎಳೆಯುವ ಗಮನದಲ್ಲಿದ್ದಾಗ ತಮ್ಮ ಹಲ್ಚಳಕ, ಕೈಚಳಕ ತೋರಿಸಿಬಿಟ್ಟಿವೆ, ಈ ರಾಣಿಯ ವಿಧೇಯ ಇರುವೆಗಳು. ಈಗ ರಾಣಿಯಿತ್ತ ಕೆಂಪು ಸರದ ಬಹುಮಾನ ಧರಿಸಿ ಇನ್ನೂ ಬೀಗುತ್ತಿವೆ. ಅವರ ಚಾತುರ್ಯಕ್ಕೆ ಮೆಚ್ಚಿದ ಸೂತ್ರಧಾರ ವಿಧಾತನಿತ್ತಿದ್ದ ಆಜ್ಞೆಯಂತೆ ಅವರ ಕಡೆ ಮತ್ತೊಂದು ರೊಟ್ಟಿಯ ತುಂಡನ್ನು ಎಸೆದ. ಈಗ, ಏನು ಮಾಡಬೇಕೆಂದು ಮೇಲಿನ ದೇಶದ ಇರುವೆಗಳಿಗೆ ಚೆನ್ನಾಗಿ ಗೊತ್ತು. ಅವು ನಗುತ್ತಲೆ ರೊಟ್ಟಿಯ ಸುತ್ತ ಸುತ್ತುತ್ತ ನಾಟ್ಯ ಮಾಡಲಾರಂಭಿಸುತ್ತಿವೆ.
ಇದೆ ಹೊತ್ತಲ್ಲಿ ಕೆಳ ದೇಶದಲ್ಲಿ - ಅಲ್ಲಿನ ಅರಾಜಕತೆ ಮುಗಿದಿಲ್ಲ. ರಾಣಿಯ ಮಾತನ್ನು ಯಾರು ಕೇಳುತ್ತಲೂ ಇಲ್ಲ. ಕೆಲವರು ರೊಟ್ಟಿಯನ್ನು ಹೇಗ್ಹೇಗೊ ಎಳೆಯುತ್ತ ಬಳಲುತ್ತಿದ್ದರೆ, ಮತ್ತೆ ಕೆಲವರು ಎಳೆದಂತೆ ನಟಿಸುತ್ತಿದ್ದಾರೆ. ಇನ್ನು ಕೆಲವರು ಅದರ ಗೊಡವೆಯೆ ಬೇಡವೆಂದು ದೂರ ಹೋಗಿ ಹಾಯಾಗಿ ನಿದ್ರಿಸುತ್ತಿದ್ದಾರೆ. ಮತ್ತೆ ಕೆಲವು ಆಸೆಬುರುಕರು ಸಿಕ್ಕಿದವರಿಗೆ ಸೀರುಂಡೆಯೆಂದು ಎಳೆಯುವ ಹಾಗೆ ನಟಿಸುತ್ತಾ ಹಾಗೆಯೆ ಅಲ್ಲಿಂದಲೆ ಚೂರು ಚೂರಾಗಿ ತುದಿ ಕಡಿಯುತ್ತ ತಿಂದು ಹಾಕುತ್ತಿದ್ದಾರೆ. ಹೀಗಾಗಿ, ಈಗಾಗಲೆ ರೊಟ್ಟಿಯ ತುದಿಯೆಲ್ಲಾ ಮುಕ್ಕಾಗಿ ಅಷ್ಟಾಕೃತಿಯಂತಾಗಿಬಿಟ್ಟಿದೆ. ನಾನೊಬ್ಬನು ತಾನೆ, ಯಾರಿಗೂ ಕಾಣದಂತೆ ತಿಂದುಬಿಟ್ಟರೆ ಆಯ್ತು ಎಂದುಕೊಂಡೆ ಎಲ್ಲರೂ ಗುಟ್ಟಾಗಿ ರುಚಿ ನೋಡುತ್ತಿದ್ದಾರೆ.
ಈ ಹೊತ್ತಿಗೆ ಸರಿಯಾಗಿ ಅವರಲ್ಲಿ ಕೆಲವು ನಿಷ್ಟಾವಂತರ ಕಣ್ಣು ಪಕ್ಕದ ಮೇಲಿನ ದೇಶದತ್ತ ಬೀಳುತ್ತದೆ - ಅರೆರೆ ಇದೇನು? ಅವರಿಗೆ ಮೇಲಿಂದ ಮತ್ತೊಂದು ರೊಟ್ಟಿ ಬೀಳುತ್ತಿದೆಯಲ್ಲಾ ಎಂದು. ತಮಗೂ ಬಿದ್ದೀತೆಂಬ ಆಸೆಯಿಂದ ಕಾದರೂ ಏನೂ ಪ್ರಯೋಜನವಾಗುವುದಿಲ್ಲ. ಸರಿ, ಈಗ ಒಂದು ಕಡೆ ಕುತೂಹಲ, ಮತ್ತೊಂದು ಕಡೆ ಹೊಟ್ಟೆಕಿಚ್ಚು; ಅಲ್ಲೇನಾಗುತ್ತಿದೆ ನೋಡೆಬಿಡುವ ಎಂದು ಹತ್ತಿರದ ಎತ್ತರದ ಗುಡ್ಡವೊಂದನ್ನು ಹತ್ತಿ ನೋಡುತ್ತಾರೆ, ಆಗೆಲ್ಲ ನಿಚ್ಚಳವಾಗುತ್ತದೆ. ಎಂಟು ದಿಕ್ಕಿಗೂ ಸಾಗುತ್ತಿರುವ ರೊಟ್ಟಿಯ ತ್ರಿಕೋನ, ಹೊಸ ತುಂಡು, ಅಲ್ಲೆ ಬಿದ್ದ ದಾರ, ಚಾಕು ಎಲ್ಲವು ಕಂಡಾಗ ಜ್ಞಾನೋದಯವಾದಂತೆ ಎಲ್ಲ ಕೆಳಗೆ ಓಡುತ್ತಾರೆ. ಆಗಲೂ ಯಾರೂ ರಾಣಿಯ ಮಾತು ಕೇಳುತ್ತಿಲ್ಲ. ಏಳೆಂಟು ನಾಯಕರೆ ಹುಟ್ಟಿಕೊಂಡಂತೆ ಕಾಣುತ್ತಿದೆ. ಒಂದೆ ಬಣ್ಣದ ಸಮವಸ್ತ್ರ ಧರಿಸಿದ ಗುಂಪು ಒಬ್ಬೊಬ್ಬ ನಾಯಕನ ಹಿಂದೆ ನಿಂತಿವೆ. ಕೆಲವು ಕಡೆ ಅದರೊಳಗೂ ಎರಡು ಮೂರು ಗುಂಪು, ನಾಯಕರು ಕಾಣುತ್ತಿದ್ದಾರೆ. ಆಗ ಇದ್ದಕ್ಕಿದ್ದಂತೆ ಹಾಹಾಕಾರ, ಸದ್ದು. ಒಂದು ಸಣ್ಣ ಗುಂಪು ಚಾಕು ಹಿಡಿದು ರೊಟ್ಟಿಯ ಮೇಲೆ ಬಿದ್ದು ಸಿಕ್ಕ ಸಿಕ್ಕ ಹಾಗೆ ಕತ್ತರಿಸತೊಡಗುತ್ತದೆ. ನೋಡುತ್ತಿದ್ದಂತೆ ಉಳಿದವರು ಮುಗಿಬೀಳುತ್ತಾರೆ.
ಹೀಗೆ ಒಬ್ಬರನ್ನು ನೋಡಿ ಒಬ್ಬರು ಸಣ್ಣ ಸಣ್ಣ ಗುಂಪುಗಳಾಗಿ ರೊಟ್ಟಿಯ ಮೇಲೆ ಬಿದ್ದು, ಚಾಕುವನ್ನು ಕಿತ್ತುಕೊಂಡು ಸಿಕ್ಕ ಸಿಕ್ಕ ಕಡೆ ಕೊಚ್ಚುತ್ತ , ಸಣ್ಣ ಸಣ್ಣ ತುಂಡುಗಳಾಗಿಸುತ್ತ ಸಿಕ್ಕಿದ ಕಡೆ ಎಳೆದುಕೊಂಡು ಓಡತೊಡಗುತ್ತಾರೆ. ಅರ್ಧ ನೆಲದ ಪಾಲಾದರೆ, ಒಂದಷ್ಟು ಹುಡಿಯಾಗಿ ಉದುರಿ ಹೋಗುತ್ತದೆ. ಕೈಗೆ ಸಿಕ್ಕಿದ ಸಣ್ಣ ತುಂಡುಗಳನ್ನು ಸಿಕ್ಕ ಸಿಕ್ಕ ಕಡೆ ಎಳೆಯುತ್ತ ಎಲ್ಲಿಗೆಲ್ಲಿಗೊ ಹೇಗ್ಹೇಗೊ ತೂರಿಸುತ್ತ ಸಾಗುತ್ತವೆ ಇರುವೆಗಳು. ಅದರಲ್ಲೆ ಬಲಿಷ್ಟರಾದ ಕೆಲವು, ತುಂಡನ್ನು ತಮಗೆ ಬೇಕಾದ ಕಡೆಗೆ ಉರುಳಿಸುತ್ತಾ ತಮ್ಮ ಮನೆ ತಲುಪಿದಾಕ್ಷಣ ಒಳ ಸೇರಿಸಿ ಬಾಗಿಲು ಹಾಕಿಕೊಳ್ಳುತ್ತವೆ. ಅರ್ಧ ಗಂಟೆ ಕಳೆಯುವಷ್ಟರಲ್ಲಿ ಇಡಿ ಜಾಗದಲ್ಲಿ ಒಂದು ತುಣುಕು ರೊಟ್ಟಿಯೂ ಇದ್ದ ಕುರುಹೆ ಇಲ್ಲದ ಹಾಗೆ ಎಲ್ಲವೂ ಮಾಯ!
ಮೇಲಿಂದ ನೋಡುತ್ತಾನೆ ಸೂತ್ರಧಾರ - ಪಾಪ ಅಸಹಾಯಕತೆಯಿಂದ ತಲೆ ಮೇಲೆ ಕೈ ಹೊತ್ತು ಕೂತಿದ್ದಳೆ ರಾಣಿ. ಅವಳ ಸುತ್ತ ಕೆಲವೆ ಕೆಲವು ಬಣ್ಣ ಬಣ್ಣದ ದಿರುಸು ತೊಟ್ಟ ಇರುವೆಗಳು - ಬಹುಷಃ ನಿಷ್ಟಾವಂತ ಕಾಳಜಿಯಿರುವ ಗುಂಪಿರಬೇಕು. ಅವರ ದಯನೀಯ ಸ್ಥಿತಿಗೆ ಕನಿಕರಗೊಂಡು ವಿಧಾತನ ಆಜ್ಞೆಯಿರದಿದ್ದರೂ ಒಂದು ಹಳಸಾಗುತ್ತಿದ್ದ ಹಳೆಯ ರೊಟ್ಟಿಯೊಂದನ್ನು ಎಸೆಯುತ್ತಾನೆ, ನಿಷ್ಟಾವಂತರಾದರೂ ಈ ಬಾರಿ ಸರಿಯಾಗಿ ಸಂಭಾಳಿಸುತ್ತಾರ ನೋಡೋಣವೆಂದು.
ರೊಟ್ಟಿಯ ತುಂಡು ಬಂದು ಬೀಳುತ್ತಿದ್ದಂತೆ, ತಲೆಯ ಮೇಲೆ ಕೈ ಹೊತ್ತವರ ಮುಖದ ಮೇಲೂ ಬೆಳಕು; ಬಹುಶಃ ಚಿಕ್ಕ ಗುಂಪಿರುವುದಕ್ಕೊ ಏನೊ, ಈ ಬಾರಿ ಕನಿಷ್ಟ ಸರಿಯಾದ ರೀತಿಯಲ್ಲಿ ಸುತ್ತುವರಿದು ರೊಟ್ಟಿಯನ್ನು ಕತ್ತರಿಸುವ ಕುರಿತು ಚರ್ಚೆ ನಡೆಯುತ್ತದೆ. ಯಾರೊ ಬುದ್ದಿವಂತನೊಬ್ಬ ರೊಟ್ಟಿಯನ್ನು ಒಂದೆ ಸಮಕ್ಕೆ ಕತ್ತರಿಸುವ ಬದಲು ಬಣ್ಣದ ಗುಂಪಿನ ಇರುವೆಗಳ ಸಂಖ್ಯೆಯ ಆಧಾರದ ಮೇಲೆ ಸಣ್ಣ, ಮಧ್ಯಮ ಹಾಗೂ ದೊಡ್ಡ ಆಕಾರದ ತುಂಡಾಗಿಸಲು ಸಲಹೆ ನೀಡುತ್ತಾನೆ. ಎಲ್ಲರು ಅದನ್ನೆ ಅನುಮೋದಿಸಿದಾಗ ಕತ್ತರಿಸುವ ಕೆಲಸ ಶುರುವಾಗುತ್ತದೆ. ರಾಣಿಯೆ ಮುಂದೆ ನಿಂತು ಪ್ರತಿ ತುಂಡಿಗೂ ಒಬ್ಬೊಬ್ಬ ನಿಷ್ಟಾವಂತನನ್ನು ಮುಂದಾಳಾಗಿಸಿ, ಅದನ್ನು ಸಾಗಿಸಿ, ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ಹಂಚುವ ಜವಾಬ್ದಾರಿಯನ್ನು ವಹಿಸುತ್ತಾಳೆ.
ಅದರಂತೆ ತುಂಡುಗಳ ಸಾಗಾಣಿಕೆ ಆರಂಭವಾಗುತ್ರದೆ - ನೂರೆಂಟು ದಿಕ್ಕಿನಲ್ಲಿ. ಅಷ್ಟು ಹೊತ್ತಿನ ತನಕ ಅದೆಲ್ಲಿತ್ತೊ ಹೇಗಿತ್ತೊ - ಅವಿತಿದ್ದ ಬೇರೆ ಬೇರೆ ಬಣ್ಣದ, ದಿರುಸಿನ ಇರುವೆಗಳು ಮಧ್ಯದಲ್ಲಿ ಬಂದು ಸೇರಿಕೊಂಡು ಜತೆಗೆ ಸಾಗತೊಡಗುತ್ತವೆ, ದೊಡ್ಡ ಸಂಖ್ಯೆಯಲ್ಲಿ. ತಲುಪಬೇಕಾದ ತಾಣ ಬಂದಾಗ ಮುಖಂಡ ನೋಡುತ್ತಾನೆ - ಅರೆ....ದಾರಿಯಲ್ಲೆ ಯಾರೊ ಕೆಲವರು ಪುಂಡರು ಆಗಲೆ ತುದಿ ಕಚ್ಚಿ ಅಷ್ಟಿಷ್ಟು ತಿಂದು ಹಾಕಿಬಿಟ್ಟಿದ್ದಾರೆ! ಉಳಿದಿದ್ದು ಸಹ ಹತ್ತು ಜನಕ್ಕೆ ಸಾಕಾಗುವಂತಿದ್ದರೆ, ಅಲ್ಲಿ ನೂರು ಜನ ಬಂದು ಸೇರಿಬಿಟ್ಟಿದ್ದಾರೆ...ಅದೂ ಸಾಲದೆಂಬಂತೆ, ಬಿಳಿಯ, ಕಪ್ಪುನ, ಕೆಂಪಿನ ಎಲ್ಲಾ ದಿರುಸಿನ ಇರುವೆಗಳು ಪಾಲಿಗೆ ಕಾದು ನಿಂತಿವೆ. ಮುಖಂಡ ತುಸು ಗಲಿಬಿಲಿಗೊಂಡರೂ, ಕೊನೆಗೆ ಮತ್ತದೆ ಸೂತ್ರ ಹಿಡಿಯುತ್ತಾನೆ - ಇಡೀ ರೊಟ್ಟಿಯ ತುಂಡನ್ನು ಮತ್ತೆ ಬಣ್ಣದ ಗುಂಪಿನ ಸಂಖ್ಯೆಗನುಸಾರವಾಗಿ ವಿಭಾಗಿಸಿ ಆಯಾ ಗುಂಪಿನ ಮರಿ ನಾಯಕರ ವಶಕ್ಕೊಪ್ಪಿಸುತ್ತಾನೆ. ದುರಂತವೆಂದರೆ, ಈ ಮರಿ ನಾಯಕರಲ್ಲಿ ಅರ್ಧಕ್ಕರ್ಧ ಆಗಲೆ ರೊಟ್ಟಿ ಕದ್ದು ಓಡಿದವರು. ಈ ಬಾರಿಯೂ ತುಂಡನ್ನು ಕಬಳಿಸಲಷ್ಟೆ ಅವರ ಹವಣಿಕೆಯೆ ಹೊರತು ಹಂಚಲಲ್ಲ. ಆದರೂ ಹಂಚಿದ ನಾಟಕ ಮಾಡಿ ಉಳಿದಿದ್ದನ್ನು ತಮ್ಮ ಉಗ್ರಾಣಕ್ಕೆ ಸೇರಿಸುತ್ತಾರೆ. ಎಲ್ಲೊ ಒಂದೆರೆಡು ಕಡೆ ಬಿಟ್ಟರೆ, ಕೆಳಗಿನ ದೇಶದ ಎಲ್ಲಾ ಕಡೆ ಇದೆ ಪುನರಾವರ್ತನೆಯಾಗಿ ಸುಮಾರು ತೊಂಭತ್ತು ಭಾಗ ಅಪವ್ಯಯವಾಗಿ, ಬರಿ ಹತ್ತರಷ್ಟಷ್ಟೆ ನಿಜಕ್ಕೂ ಸೇರಬೇಕಾದವರ ಪಾಲಿಗೆ ಸಿಗುತ್ತದೆ. ಅವರಂತೂ ಯಾರಿಗೂ ದೂರುವಂತಿಲ್ಲ, ದೂರಿದರು ಕೇಳುವವರಿಲ್ಲದ ಪರಿಸ್ಥಿತಿ; ಪಾಲಿಗೆ ಬಂದದ್ದೆ ಪಂಚಾಮೃತ ಎನ್ನುತ್ತ ನಡೆಯುವ ಜಾಯಮಾನ, ಅನಿವಾರ್ಯ.
ಒಟ್ಟಾರೆ ಎರಡು ದೇಶಗಳವರೂ ತಮಗೆ ತೋಚಿದ ಹಾಗೆ, ಬೇಕಿದ್ದ ಹಾಗೆ ನಿಭಾಯಿಸುವ ಸೂತ್ರ ಅಳವಡಿಸಿಕೊಂಡು ಮುನ್ನುಗ್ಗುತ್ತಾರೆ. ಮೇಲಿಂದ ಇದನ್ನೆಲ್ಲ ಗಮನಿಸುತ್ತಿರುವ ಸೂತ್ರಧಾರ, ಅಂದಿನಿಂದ ದಿನಕ್ಕೊಂದರಂತೆ ಒಂದೊಂದು ಹೊಸ ರೊಟ್ಟಿಯನ್ನು ಎರಡೂ ಕಡೆಗೆ ಎಸೆಯುತ್ತಾ ಹೋಗುತ್ತಾನೆ. ಎರಡು ದೇಶಗಳು ತಾವು ಹಿಂದೆ ಹೂಡಿದ್ದ ವಿಧಾನಗಳ ತುಸು ಆಸುಪಾಸಿನಲ್ಲೆ ಮುಂದುವರೆಯುತ್ತ ತಮ್ಮ ತಮ್ಮ ದಾರಿಯಲ್ಲೆ ಮುಂದುವರೆಯುತ್ತವೆ.
ಹೀಗೆ ಕೆಲ ವರ್ಷಗಳು ಕಳೆಯುತ್ತವೆ. ಪರಿಸ್ಥಿತಿಯಲ್ಲೇನೂ ಹೆಚ್ಚು ಬದಲಾವಣೆ ಕಾಣಿಸದಿದ್ದರೂ, ಮೇಲಿನ ದೇಶದಲ್ಲಿ ಮೊದಲಿನ ಹಸಿವಿನ ಹಾಹಾಕಾರ ಇದ್ದಂತೆ ಕಾಣುತ್ತಿಲ್ಲ. ಎಲ್ಲವೂ ಸದ್ದಿಲ್ಲದ ಮೌನದಲ್ಲಿ ಸಾಗಿದಂತೆ ಕಾಣುತ್ತದೆ. ಕೆಳ ದೇಶದಲ್ಲಿ, ಏನೊ ನಿಯಂತ್ರಣದಲ್ಲಿ ನಡೆದಂತೆ ಕಂಡರೂ ಹಸಿವಿನ ಕೂಗು, ಅರಾಜಕತೆ, ಮೋಸ, ವಂಚನೆ ಹಾಗೆ ನಡೆದಿದೆ. ಅಲ್ಲೊಮ್ಮೆ, ಇಲ್ಲೊಮ್ಮೆ ಅದರ ಕುರಿತು ಹುಯಿಲೆದ್ದರೂ ಸ್ವಲ್ಪ ಸಮಯದ ತರುವಾಯ ಎಲ್ಲವೂ ತಣ್ಣಗಾಗಿ ಯಥಾರೀತಿ ಹಳೆಯ ಹಾದಿಯಲ್ಲಿ ಸಾಗುವ ಕಥೆ. ಜತೆಗೆ ಸಿಕ್ಕುವ ರೊಟ್ಟಿ ಸಾಕಾಗದೆ ಸದಾ ಒದ್ದಾಟದ ಪರದಾಟ.
ಆದರೆ ಮೇಲಿನ ದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೇನೊ ಕ್ರಾಂತಿ ನಡೆದಿರುವಂತೆ ಕಾಣುತ್ತದೆ. ಅಂದಿನ ದೊಡ್ಡ ಸಭೆಯಲ್ಲೂ ರಾಣಿಯ ಸಮೇತ ಎಲ್ಲ ಮುಖಂಡರ ಮಂತ್ರಾಲಯದ ಕೂಟವೆ ಸೇರಿದೆ. ಚರ್ಚೆಯ ವಿಷಯ - ದಿನೆ ದಿನೆ ಬಂದು ಸೇರಿದ ರೊಟ್ಟಿಯ ತುಂಡು ಉಗ್ರಾಣದಲ್ಲಿ ಬಂದು ಸೇರಿ ಹೆಚ್ಚುವರಿ ಸರಕಾಗುತ್ತಿದೆ; ತಿಂದುಂಡು ಮಿಕ್ಕಿದ ಸರಕನ್ನಿಡಲು ಜಾಗ ಸಾಲುತ್ತಿಲ್ಲ, ಹಾಗೆ ಕೆಡದಂತೆ ಇಡಲು ಕಷ್ಟವಾಗುತ್ತಿದೆ ಎಂಬ ಅಳಲು. ಜತೆಗೆ ರೊಟ್ಟಿ ಬಂದು ಬಿದ್ದ ಜಾಗದಿಂದ ಸಾಗಾಣಿಕೆಗೆ ಸುಲಭವಿರದ ವ್ಯವಸ್ಥೆಯಿಂದಾಗಿ ತುಂಬ ಶ್ರಮವೂ ವ್ಯಯವಾಗುತ್ತಿರುವ ಖೇದ. ಬಿಸಿ ಬಿಸಿ ಚರ್ಚೆಯ ನಂತರ ಅವರೆಲ್ಲ ನಿರ್ಧರಿಸುತ್ತಾರೆ - ಹೆಚ್ಚುವರಿ ಸರಕನ್ನು ಉಗ್ರಾಣದಲ್ಲಿಟ್ಟು ಹಾಳುಗೆಡವುವ ಬದಲು ಕೆಳ ದೇಶದಂತ ಹೊರ ದೇಶಗಳಿಗೆ ಮಾರಿ ಹಣ ಸಂಪಾದಿಸುವುದೆಂದು. ಹಾಗೆ ಬಂದ ಹಣದಿಂದ ಈಗಿರುವ ಕಚ್ಛಾ ರಸ್ತೆಗಳನ್ನು ಮಾರ್ಪಡಿಸಿ ಉತ್ತಮ ಸಾಗಾಣಿಕಾ ವ್ಯೂಹವಾಗಿ ಬದಲಿಸುವುದು; ಹಾಗೆಯೆ ಸಾಗಾಣಿಕೆಗೆ ಈಗಿರುವ ಇರುವೆಗಳ ಬದಲು ದೊಡ್ಡ ಸಾಗಾಣಿಕಾ ವಾಹನಗಳನ್ನು ಖರೀದಿಸುವುದು.
ನೋಡು ನೋಡುತ್ತಿದ್ದಂತೆ ಅಲ್ಲಿ ಹೊಸ ಹೊಸ ರಸ್ತೆಗಳೇಳತೊಡಗುತ್ತವೆ. ಹೊಸಹೊಸ ಉಗ್ರಾಣಗಳು ಕಟ್ಟಲ್ಪಡುತ್ತವೆ. ರಸ್ತೆಗಳೆಲ್ಲ ದೊಡ್ಡದಾಗಿ, ಹೊಸದಾಗಿ ದೊಡ್ಡ ದೊಡ್ಡ ವಾಹನಗಳು ಓಡಾಡತೊಡಗುತ್ತವೆ. ಬರಿಯ ರಸ್ತೆಯೆ ಅಲ್ಲದೆ ನೀರಿನಲ್ಲೂ, ಆಕಾಶದಲ್ಲು ಸರಕು ಸಾಗಿಸುವ ಪ್ರಕ್ರಿಯೆ ಶುರುವಾಗಿ ಇದ್ದಕ್ಕಿದ್ದಂತೆ ಎಲ್ಲವೂ ವೇಗವಾಗಿ ನಡೆಯುತ್ತಿರುವಂತೆ ಕಾಣತೊಡಗುತ್ತದೆ. ಈ ನಡುವೆ, ಇದೆಲ್ಲಾ ಕೆಲಸ ನಡೆಸಲು ಮಂದಿ ಬೇಕಲ್ಲಾ? ಕೆಲಸವಿಲ್ಲದ ಎಷ್ಟೊ ಜನಕ್ಕೆ ಇದರಿಂದ ಕೆಲಸ ಸಿಕ್ಕಿ ಎಲ್ಲರ ಕೈಲೂ ಅಷ್ಟಿಷ್ಟು ಕಾಸು ಕಾಣತೊಡಗುತ್ತದೆ. ಇದರ ಬಗಲಲ್ಲೆ ರೊಟ್ಟಿಯನ್ನು ಪರದೇಶಕ್ಕೆ ಮಾರುವ ಸಲುವಾಗಿ ಒಂದಷ್ಟು ಜನರ ಮತ್ತು ಕೆಲಸಗಳ ಉತ್ಪತ್ತಿಯಾಗುತ್ತದೆ. ಅಷ್ಟರಲ್ಲೆ ಯಾರೊ ಒಬ್ಬ ಮೇಧಾವಿ ಬರಿ ರೊಟ್ಟಿ ಮಾತ್ರ ಯಾಕೆ? ಏನೆಲ್ಲಾ ಸಾಧ್ಯವೊ ಅದೆಲ್ಲ ಮಾಡಬಹುದಲ್ಲಾ? ಹೇಗೂ ಮೂಲಭೂತ ಸೌಕರ್ಯವಾಗಿ ಸಾಗಾಣಿಕೆ ವ್ಯವಸ್ಥೆ, ಕೆಲಸ ಮಾಡುವ ಜನ ಇದ್ದೆ ಇದ್ದಾರಲ್ಲ? ಎಂದು ಮತ್ತಾವುದೊ ಗಿರಣಿಯನ್ನು ಆರಂಭಿಸುತ್ತಾನೆ. ಸರಿ, ಒಂದರ ಹಿಂದೆ ಒಂದರಂತೆ ಪರಸ್ಪರ ಅವಲಂಬಿತ ಉದ್ಯಮಗಳು ಬೆಳೆಯುತ್ತ ಬೆಳೆಯುತ್ತ ಒಂದು ದೊಡ್ಡ ಆರ್ಥಿಕ ವ್ಯವಸ್ಥೆಯ ಸೃಷ್ಟಿಯೆ ಆಗಿಬಿಡುತ್ತದೆ. ಹಾಗೆಯೆ ಸಂಪತ್ತು , ಐಶ್ವರ್ಯಗಳ ಹೊಳೆಯೆ ಹರಿದು ದೇಶದ ಹಣಕಾಸಿನ ಪರಿಸ್ಥಿತಿ ಬಲಾಢ್ಯವಾಗುತ್ತ ಹೋಗುತ್ತದೆ. ಬಲಾಢ್ಯ ದೇಶವೆಂದ ಮೇಲೆ ಸೈನ್ಯ ಬಲಯುತವಾಗಬೇಕು, ಹೆಚ್ಚು ಶಕ್ತಿಯುತವಾಗಬೇಕು; ಅಂದ ಮೇಲೆ ಹೊಸ ಹೊಸ ಆಯುಧ ಕೊಳ್ಳಬೇಕು, ಸೈನ್ಯವನ್ನು ನವೀಕರಿಸಬೇಕು - ಅದೆಲ್ಲಕ್ಕೂ ಅಪಾರ ಹಣ ಬೇಕು.. ಆದರೆ ಮೇಲ್ದೇಶದಲ್ಲೀಗ ಹಣಕ್ಕೇನು ಕೊರತೆಯಿಲ್ಲವಲ್ಲ!
ಕೆಳ ದೇಶದ ಜನ ಇದನ್ನೆಲ್ಲ ಕೇಳುತ್ತಿದ್ದಾರೆ, ಕೆಲವರು ನೋಡುತ್ತಿದ್ದಾರೆ ಸಹ. ಆದರೆ ಮುಕ್ಕಾಲು ಪಾಲು ಜನ ಅವರದೆ ಆದ ಮೂರ್ಖರರಮನೆಯ ಪ್ರಲಾಪದಲ್ಲಿ ತಲ್ಲೀನರಾಗಿಬಿಟ್ಟಿದ್ದಾರೆ. ನಿನ್ನೆ ಮೊನ್ನೆಯವರೆಗೂ ತಮ್ಮ ಹಾಗೆ ಇದ್ದ ಜನ ಈಗ ದಿಢೀರನೆ ಶ್ರೀಮಂತರಾಗಿಬಿಟ್ಟರೆಂದರೆ ಅವರಿಗೆ ನಂಬಲಾಗುತ್ತಿಲ್ಲ. ಅದೆಲ್ಲ ಸುಳ್ಳು, ಉತ್ಪ್ರೇಕ್ಷೆಯೆಂದೆ ಅವರ ಅನಿಸಿಕೆ. ಅಲ್ಲದೆ, ಮೇಲ್ದೇಶದಲ್ಲಿರುವುದು ನಿರಂಕುಶ ಪ್ರಭುತ್ವ; ಅಲ್ಲಿ ಬಿಚ್ಚಿಡುವುದಕ್ಕಿಂತ ಬಚ್ಚಿಡುವುದೆ ಹೆಚ್ಚು. ಹೀಗಾಗಿ ಬರಿಯ ಸುಳ್ಳನ್ನೊ, ಅಥವಾ ಅರ್ಧಸತ್ಯದ ಹೂರಣವನ್ನೊ ಹೊರಗೆ ತೋರಿಸಿಕೊಳ್ಳುತ್ತಿದ್ದಾರೆ. ಒಳಗೆಲ್ಲ ಬರಿ ಹುಳುಕೆ ಇದ್ದರು ಅಲ್ಲಿನ ವ್ಯವಸ್ಥೆ ಅದನ್ನು ಬಯಲಾಗಿಸಲು ಬಿಡದು; ನಮ್ಮದು ಪಾರದರ್ಶಕ ವ್ಯವಸ್ಥೆ. ಹೀಗಾಗಿ ಹುಳುಕಾಗಲಿ, ಹೊಳಪಾಗಲಿ ಎಲ್ಲವೂ ತಟಕ್ಕನೆ ಎದ್ದು ಕಂಡುಬಿಡುತ್ತದೆ - ಹೀಗೆಲ್ಲಾ ಏನೇನೊ ಸಮಾಧಾನಿಸಿಕೊಳ್ಳಲು ಯತ್ನಿಸುತ್ತಾರೆ. ಆದರೂ ಆತಂಕ, ತುಸು ಅಸೂಯೆ, ಈರ್ಷೆ ಎಲ್ಲವೂ ಮಿಳಿತವಾದ ಭಾವ; ಜತೆಗೆ ತಮ್ಮ ನಾಡಿನಲ್ಲಿ ಅದರ ತುಸು ಪಾಲಿನ ಪ್ರಗತಿಯಾದರೂ ಕಾಣುತ್ತಿಲ್ಲವಲ್ಲ ಎಂಬ ಅಸಹಾಯಕ ವೇದನೆ.
ಉಪಸಂಹಾರ:
--------------------
ಇದೆಲ್ಲಾ ಶುರುವಾಗಿ ಈಗ ಇಪ್ಪತ್ತು ವರ್ಷಗಳೆ ಕಳೆದಿವೆ. ಸೂತ್ರಧಾರ ಇಂದೇಕೊ ತುಸು ಆತುರದಲ್ಲಿದ್ದಾನೆ. ಎರಡು ದೇಶಗಳ ಕಡತಗಳನ್ನೆಲ್ಲ ನೀಟಾಗಿ ಧೂಳು ಹೊಡೆದು ಶಿಸ್ತಿನಲ್ಲಿ ಅಲಂಕರಿಸಿಟ್ಟಿದ್ದಾನೆ. ಇಂದು ವಿಧಾತನು ಬರುವ ದಿನ ಮತ್ತು ಎರಡು ಕಡೆಯ ಪ್ರಗತಿ ದುರ್ಗತಿಗಳನ್ನು ಪರಾಮರ್ಶಿಸುವ ಸಮಯ. ವಿಧಾತನ ಬಳಿ ಹೆಚ್ಚು ಸಮಯವಿಲ್ಲ - ಇಡಿ ಬ್ರಹ್ಮಾಂಡದ ಜವಾಬ್ದಾರಿಯನ್ನು ಹೆಗಲಿಗೊತ್ತಿರುವ ಅವನಿಗೆ ಸಣ್ಣ ಪುಟ್ಟ ದೇಶಗಳ ಕುರಿತು ತಲೆ ಕೆಡಿಸಿಕೊಳ್ಳುವಷ್ಟು ವ್ಯವಧಾನವಿಲ್ಲ - ಹೀಗೆ ಎಂದಾದರೊಮ್ಮೆ ಸ್ಥಿತಿಗತಿಗಳನ್ನು ಪರಾಮರ್ಶಿಸಿ ಸೂಕ್ತ ಬಹುಮಾನ, ದಂಡನೆಗಳನ್ನು, ಆದೇಶಗಳನ್ನು ಕೊಡುವುದನ್ನು ಬಿಟ್ಟರೆ. ಅದನ್ನು ಸುಲಭವಾಗಿಸಲೆಂದೆ ಯಾವಾಗಲೂ ಎರಡೆರಡು ಹತ್ತಿರದ ದೇಶಗಳನ್ನು ಜೋಡಿಯಾಗಿ ಪರಿಗಣಿಸುತ್ತಾನೆ - ಹೋಲಿಕೆಗೂ ಸುಲಭವಾಗುವಂತೆ.
ಇಂದು ವಿಧಾತನ ಕೆಲಸ ಅಷ್ಟೇನು ಕಷ್ಟವಿಲ್ಲ, ಎಲ್ಲ ಲೆಕ್ಕಾಚಾರ ಕಪ್ಪುಬಿಳಿಯಲ್ಲಿ ಸ್ಪಷ್ಟವಾಗೆ ಇದೆ. ಇಬ್ಬರಿಗೂ ಒಂದೆ ಬಗೆಯ ಸಂಪನ್ಮೂಲಗಳನ್ನು ಸಮಾನ ಪ್ರಮಾಣದಲ್ಲಿ ಹಂಚಲಾಗಿದೆ. ಇಬ್ಬರೂ ಹೆಚ್ಚುಕಡಿಮೆ ಒಂದೆ ಆರಂಭಿಕ ಸ್ಥಿತಿಯಲ್ಲಿದ್ದವರು. ಹಾಗೆ ನೋಡಿದರೆ ಮೇಲ್ದೇಶದವರು ತುಸು ಹೆಚ್ಚು ದೊಡ್ಡ ಹಾಗೂ ಹೆಚ್ಚು ಪ್ರಜೆಗಳ ನಾಡು; ಆದರೂ ಎರಡು ದೇಶಕ್ಕೂ ಹಂಚಿದ ಸಂಪತ್ತು ಒಂದೆ ಮೊತ್ತದ್ದು. ಆದರೆ ಮೇಲ್ದೇಶದವರು ಅದನ್ನು ಸರಿಯಾಗಿ ಬಳಸಿ ಸ್ವಾವಲಂಭಿಗಳಾಗಿ ಹೋಗಿದ್ದಾರೆ. ಕೆಳ ದೇಶದವರು ಅಷ್ಟೊ ಇಷ್ಟೊ ಪ್ರಗತಿಸಿದ್ದರೂ, ಎಲ್ಲಿ ಹಾಸಿದ್ದು ಅಲ್ಲೆ ಇದೆ. ಬಡತನ, ನೋವು, ನಿರಾಶೆ, ಯಾತನೆ, ವೇದನೆ ಬಿಟ್ಟು ಹೋಗುವಂತೆ ಕಾಣುತ್ತಲೂ ಇಲ್ಲ. ವ್ಯವಸ್ಥೆಯೆ ಅವಸ್ಥೆಯಾದಂತೆ ಕಾಣುತ್ತದೆ.
ವಿಧಾತ ಹೊರಡುವ ಮುನ್ನ ಸೂತ್ರಧಾರನಿಗೆ ಹೇಳುತ್ತಾನೆ - ಮೇಲ್ದೇಶಕ್ಕೆ ಪ್ರತಿದಿನ ಮಾಮೂಲಿ ರೊಟ್ಟಿಯ ಜತೆ ಜತೆಗೆ ಒಂದೊಂದು ಚಿನ್ನದ ರೊಟ್ಟಿಯನ್ನು ಕೊಡಲು ಹೇಳುತ್ತಾನೆ - ಸಾಧನೆಗೆ ಬಹುಮಾನವಾಗಿ. ಹಾಗೆಯೆ, ಅತಂತ್ರವಾಗಿ ಹಾಳಾಗುತ್ತಿರುವ ರೊಟ್ಟಿಯ ಮೊತ್ತವನ್ನು ಪರಿಗಣಿಸಿ ಕೆಳ ದೇಶದವರಿಗೆ ಮೊದಲಿಗಿಂತ ಚಿಕ್ಕ ಗಾತ್ರದ ರೊಟ್ಟಿಯನ್ನು ಕೊಡಲು ಆದೇಶಿಸುತ್ತಾನೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಆ ರೊಟ್ಟಿಯ ಪ್ರಮಾಣವನ್ನು ಮತ್ತಷ್ಟು ಕುಗ್ಗಿಸಲೂ ಸೂತ್ರಧಾರನಿಗೆ ಅಧಿಕಾರ ಕೊಟ್ಟುಬಿಡುತ್ತಾನೆ.
ಈಗಲೂ ಆ ಎರಡು ದೇಶಗಳು ಹಾಗೆಯೆ ಮುಂದುವರೆದಿವೆ - ಮೇಲ್ದೇಶ ಹೆಚ್ಚೆಚ್ಚು ಶ್ರೀಮಂತವಾಗುತ್ತ, ಬಲಿಷ್ಟವಾಗುತ್ತ ಸಾಗುತ್ತಿದ್ದರೆ, ಕೆಳದೇಶ ಮತ್ತಷ್ಟು ಬಡವಾಗದಿರಲು ಹೆಣಗುತ್ತ, ಸಿಕ್ಕಿದ ಚೂರು ರೊಟ್ಟಿಗೂ ಹೊಡೆದಾಡುತ್ತಾ, ಹೆಣಗಾಡುತ್ತ ಸಾಗುತ್ತಿದೆ.
-----------------------------------------------------------------------------------------------------------------------------------
ನಾಗೇಶ ಮೈಸೂರು, ಸಿಂಗಾಪುರದಿಂದ
(nageshamysore.wordpress.com)
-----------------------------------------------------------------------------------------------------------------------------------
ಮುಗಿಸುವ ಮುನ್ನ: ಇಂತಹ ಎರಡು ದೇಶಗಳು ಯಾರದವಾದರೂ ಆಗಿರಬಹುದು. ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೇರಿಕ ಜೋಡಿ, ಉತ್ತರ ಮತ್ತು ದಕ್ಷಿಣ ಕೊರಿಯಾ ಅಂತರ, ಅಷ್ಟೇಕೆ ನಮ್ಮ ಭಾರತ ಮತ್ತು ಚೀನ ಹೋಲಿಕೆ. ಇಲ್ಲಿ ಮುಖ್ಯ ದೇಶವಲ್ಲ ; ವಿಚಾರ ಮತ್ತು ನೀತಿ.
Comments
ಕತೆ ಸಣ್ಣದಲ್ಲ, ಆದರು ಒಂದು ವಿಷಯ
In reply to ಕತೆ ಸಣ್ಣದಲ್ಲ, ಆದರು ಒಂದು ವಿಷಯ by partha1059
ನಮಸ್ಕಾರ ಪಾರ್ಥ ಸಾರ್,
ನಾಗೇಶ್ ಅವರೆ,
In reply to ನಾಗೇಶ್ ಅವರೆ, by makara
ನಮಸ್ಕಾರ ಶ್ರೀಧರರವರೆ,
In reply to ನಮಸ್ಕಾರ ಶ್ರೀಧರರವರೆ, by nageshamysore
ನಾಗೇಶ್ ಅವರೆ,
In reply to ನಾಗೇಶ್ ಅವರೆ, by makara
ಶ್ರೀಧರ ಅವರೆ,
ನಾಗೇಶ್ ಅವರೆ, ಬಹಳ ಸುಂದರವಾಗಿದೆ
In reply to ನಾಗೇಶ್ ಅವರೆ, ಬಹಳ ಸುಂದರವಾಗಿದೆ by Vasant Kulkarni
ವಸಂತ ಕುಲಕರ್ಣಿಯವರೆ,