ಮನವೆಂಬ ಮರ್ಕಟ
ರಂಗಶಂಕರದಲ್ಲಿ ಮೇ ತಿಂಗಳ 14 ಮತ್ತು 15ನೇ ತಾರೀಖಿನಂದು ಎಲ್ಲಿ ಜಾರಿತೋ ಮನವು ಎಂಬ ನಾಟಕದ ಪ್ರದರ್ಶನವಿತ್ತು. ಈ ನಾಟಕವನ್ನು ಗಣೇಶ್ ಯಾದವ್ ನಿರ್ದೇಶಿಸಿದ್ದು, ರಚನೆ: ಚಂದ್ರಶೇಖರ್ ಫನ್ಸಳ್ಕರ್ ಮತ್ತು ಅನುವಾದ: ಸುಂದರಶ್ರೀ ಅವರದು. ಈ ನಾಟಕ ನೋಡಿದ ಮೇಲೆ ನನಗೆ ಕಾಡಿದ ವಿಷಯಗಳನ್ನು, ಚಿಂತನೆಗೊಳಪಡಿಸಿದ ಸಂಗತಿಗಳನ್ನು ಈ ಲೇಖನದ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ. ಎಲ್ಲಿ ಜಾರಿತೋ ಮನವು ಈ ಹೆಸರೇ ಹೇಳುತ್ತಿದೆ ಇದೊಂದು ಮನಸ್ಸಿನ ಅಭಿವ್ಯಕ್ತಿ ಅಂತ. ಇಡೀ ನಾಟಕ ಮನಸ್ಸಿನ ವರ್ತನೆ, ಆಟ ಹಾಗೂ ಹುಡುಕಾಟವನ್ನು ಚಿತ್ರಿಸುತ್ತಾ ಸಾಗುತ್ತದೆ. ನನ್ನ ಮನಸ್ಸಿಗೆ ಅದು ಯಾಕೋ ಸರಿ ಕಾಣ್ತಿಲ್ಲ, ಮನಸ್ಸು ಈಗ ಏನು ಹೇಳ್ತಿದೆ ಅಂದರೆ, ಇವತ್ತು ನನ್ನ ಮನಸ್ಸೇ ಸರಿ ಇಲ್ಲ, ಮನಸ್ಸು ಬಿಚ್ಚಿ ಮಾತಾಡು. ಹೀಗೆ ಎಷ್ಟು ಬಾರಿ ನಾವು ಈ ಪದವನ್ನು ಬಳಸುತ್ತಾ ಇರ್ತೇವೆ ಅನ್ನೋದರ ಲೆಕ್ಕ ಬೇಡ, ಆದರೆ ಈ ಎಲ್ಲಾ ಭಾವನೆಗಳ ಹಿಂದಿರುವ ಮನಸ್ಸೆಂಬ ಒಡೆಯನನ್ನು ಸ್ವಲ್ಪಮಟ್ಟಿಗೆ ಅರ್ಥ ಮಾಡಿಸಲಿಕ್ಕೆ ಈ ನಾಟಕ ಪ್ರಯತ್ನಿಸಿದೆ. ಹಾಗೆಯೇ ನಾವು ಕೂಡ ಆ ಕಡೆಗೆ ಹೆಜ್ಜೆ ಹಾಕೋಣ.
ದಾಂಪತ್ಯದಲ್ಲಿ ಕಾಣದ ಸುಖ ಮತ್ತೊಂದು ಪ್ರೇಮದ ಅಪ್ಪುಗೆಯಲ್ಲಿ ಪಡೆಯಲು ಯತ್ನಿಸುವ ಜೋಡಿಗಳ ಕಥಾನಕವಿದು. ತನ್ನ ಗಂಡನ ಪ್ರೀತಿಯಿಂದ ವಂಚಿತಳಾದ ಹೆಣ್ಣು , ತನ್ನ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುವ ಮತ್ತೊಬ್ಬ ವಿವಾಹಿತ ವ್ಯಕ್ತಿಯನ್ನು ಪ್ರೀತಿಸುತ್ತಾಳೆ. ಅವನೊಂದಿಗೆ ಬೆರೆಯುತ್ತಾಳೆ. ಈ ರೀತಿ ಸಾಗಿದ ಪ್ರೀತಿ ಸುಮಾರು ಒಂದೂವರೆ ವರ್ಷದವರೆಗೂ ಉಮ್ಮಸ್ಸು, ಉತ್ಸಾಹದಿಂದ ಸಾಗುತ್ತದೆ. ಆದರೆ ಕಾಲಕ್ರಮೇಣ ಆ ಹೆಣ್ಣಿಗೆ ಆ ಬಂಧನದಿಂದ ಮುಕ್ತವಾಗಬೇಕು ಅನ್ನಿಸಿ ಅದನ್ನು ಅವನೊಂದಿಗೆ ಹೇಳಿದಾಗ, ಅವನು ಅದನ್ನು ನಿರಾಕರಿಸುತ್ತಾನೆ. ಅವಳ ನಿರ್ಧಾರ ಅಚಲವಾಗಿದ್ದನ್ನು ಕಂಡು ಪೀಡಿಸುತ್ತಾನೆ, ಕಾಡುತ್ತಾನೆ, ಏನೂ ಪ್ರಯೋಜನವಾಗದ ಕಾರಣ ಅವಳ ನೆನಪುಗಳಿಂದ ಹೊರಬರಲು ಪ್ರಯತ್ನಿಸುತ್ತಾನೆ. ಇದಿಷ್ಟೂ ಈ ನಾಟಕದ ತುಣುಕುನೋಟ.
ಇಲ್ಲಿ ಬಿಡಿ ಬಿಡಿಯಾಗಿ ಬಿಚ್ಚಿಕೊಳ್ಳುವ ಮನಸ್ಸಿನ ವರ್ತನೆ, ಯಾವ ಸಂದರ್ಭದಲ್ಲಿ ಹೇಗೆ ಕೆಲಸ ಮಾಡುತ್ತದೆ ಅನ್ನುವ ಕುತೂಹಲವನ್ನು ಹುಟ್ಟುಹಾಕುವುದರ ಜೊತೆಗೆ, ಯಾವುದೇ ಪ್ರೀತಿ ಬಂಧನವಾದಾಗ ಅದರಿಂದ ಹೊರಬರಲು ಮನಸ್ಸು ಏಕೆ ತುಡಿಯುತ್ತದೆ, ಹಾಗಾದರೆ ನಿಜವಾಗಿಯೂ ಬೇಕಾಗಿದ್ದು ಏನು? ಸ್ವೇಚ್ಚಾಚಾರವೇ? ಅದೇ ಪ್ರೀತಿಯ ಮತ್ತೊಂದು ಮುಖವೇ? ಈ ಎಲ್ಲಾ ಗೊಂದಲಗಳನ್ನು ಈ ನಾಟಕ ಹುಟ್ಟುಹಾಕುತ್ತದೆ. ಬಯಸಿ ಪಡೆದ ಪ್ರೀತಿಯೂ ಕೂಡ ಕೆಲ ದಿನಗಳ ನಂತರ ಮಾಸಲಿಕ್ಕೆ ಕಾರಣವೇನು, ತನ್ನೊಳಗೆ ಮನೆಮಾಡಿರುವ ಮತ್ತು ಕಾಡುವ ಪರಿಪೂರ್ಣತೆಯ ಹುಡುಕಾಟವೇ, ಅದು ನಾನು ಕಂಡ ವ್ಯಕ್ತಿಯಲ್ಲಿ ಸ್ವಲ್ಪ ಗೋಚರಿಸಿದಾಗ ಸಾಂಗತ್ಯ, ಆ ಸಾಂಗತ್ಯವು ನಂತರದಲ್ಲಿ ಅಪರಿಪೂರ್ಣತೆಯಲ್ಲೇ ನಿಲ್ಲುವುದನ್ನು ಕಂಡಾಗ ಬಹುಶಃ ನಾವು ನಮ್ಮ ಎದುರಿಗಿನ ವ್ಯಕ್ತಿಯನ್ನು, ವ್ಯಕ್ತಿತ್ವವನ್ನು ಹಾಗೆ ಪ್ರೀತಿಸದೆ, ನಮ್ಮೊಳಗಿನ ಗುಣಗಳನ್ನು ಆರೋಪಿಸಿ ನೋಡುತ್ತಿರುತೇವೆ ಎಂಬುದು ಖಚಿತವಾಗುತ್ತದೆ.
ಮನಸ್ಸಿನ ವರ್ತನೆಯ ಮತ್ತೊಂದು ಮುಖ, ನಾನು ನನ್ನ ಸಂಗಾತಿಯನ್ನು ಪ್ರೀತಿಸದಿದ್ದರೂ ಅವರಿಂದ ಯಾವುದೇ ಅಸಡ್ಡೆ, ಅಸಹನೆ, ತಿರಸ್ಕಾರ ಕಂಡಲ್ಲಿ ಸಹಿಸಿಕೊಳ್ಳುವುದಕ್ಕೆ ತಯಾರಿರುವುದಿಲ್ಲ, ಅದು ನನ್ನ ಅಹಂಗೆ ಬೀಳುವ ಪೆಟ್ಟು ಆಗಿರುತ್ತದೆ. ಅಲ್ಲದೆ ಒಂದು ಪಕ್ಷದಲ್ಲಿ ನಾನು ಗಾಢವಾಗಿ ಪ್ರೀತಿಸಿದ ವ್ಯಕ್ತಿ ತಿರಸ್ಕರಿಸಿದರೆ, ಅವರ ಬಗೆಗೆ ಅಸಮಾಧಾನ ಮತ್ತು ನನ್ನೊಟ್ಟಿಗೆ ಇರುವ ವ್ಯಕ್ತಿಯ ಬಗೆಗೆ ಕಾಳಜಿ, ಅನುಕಂಪ ಮೂಡುವುದನ್ನು ಗಮನಿಸಿದರೆ, ಒಂದನ್ನು ಕಳೆದುಕೊಂಡಾಗ ತಕ್ಷಣ ಮನಸ್ಸು ಇನ್ನೊಂದಕ್ಕೆ ಅಂಟಿಕೊಳ್ಳುವ ಪ್ರಕ್ರಿಯೆಯನ್ನು ಕಾಣಬಹುದು.
ಒಟ್ಟಿನಲ್ಲಿ ಇದನ್ನೆಲ್ಲಾ ಸೂಕ್ಷ್ಮವಾಗಿ ವಿಚಾರಮಾಡಿದಾಗ ಮನಸ್ಸು ಮರ್ಕಟವೆಂಬುದು ಖಾತ್ರಿಯಾಗುವುದಲ್ಲದೆ, ಮನಸ್ಸಿನ ವೈಪರೀತ್ಯಗಳನ್ನು ತಿಳಿಸುವ ಈ ನಾಟಕ ಎಲ್ಲೋ ಒಂದು ಕಡೆ ನಾನು ಏನು ಎಂಬುದನ್ನು ಅರ್ಥಮಾಡಿಕೊಳ್ಳಲು, ಆ ನಿಟ್ಟಿನಲ್ಲಿ ನಾವು ಆಲೋಚನಾಶೀಲರಾಗುವಂತೆ ಮತ್ತು ನಮ್ಮೆಲ್ಲಾ ಸುಖ-ದುಃಖಗಳಿಗೆ ಕಾರಣವೇನೆಂಬುದನ್ನು ಪ್ರಶ್ನಿಸುವ ಹಂತಕ್ಕೆ ತಂದು ನಿಲ್ಲಿಸುತ್ತದೆ. ಮನಸ್ಸಿನ ಹಿಡಿತ ಸಾಧ್ಯವಾಗದಿದ್ದಲ್ಲಿ ಎದುರಿಸುವ ಅಪಾಯಗಳು ಹೆಚ್ಚು ಎಂದು ಹೇಳುತ್ತಾ, ಒಂದೆರೆಡು ಸ್ಷೂಕ್ಷ್ಮತೆಗಳನ್ನು ಮಾತ್ರ ಈ ಲೇಖನದಲ್ಲಿ ಬಿಚ್ಚಿಡಲಾಗಿದ್ದು ಮನಸ್ಸಿನ ಅರ್ಥ ವಿಶಾಲವಾದ ಸಮುದ್ರದ ಹಾಗೆ ಎಂದು ತಿಳಿಸಲು ಬಯಸುತ್ತೇನೆ.
Comments
ನಾಟಕದ ಓಟವನ್ನು ಎಳೆ ಎಳೆಯಾಗಿ