ಎಕ್ಕೆ ಹೂವು...!
ನಳ ನಳಿಸುವ ಹಸಿರು ಎಲೆಗಳ
ಎಕ್ಕೆಯ ಪೊದೆ
ಬಿಳಿಯ ಹೂಗುಚ್ಛಗಳರಳಿಸಿ
ನಲಿಯುತ್ತ ನಿಂತಿದೆ
ನೋಡುತ್ತ ನಿಂತಿದ್ದಾಳೊಬ್ಬ
ಮುಗ್ಧ ಭಾವದ ಮುಗುದೆ
ನಿರಪೇಕ್ಷ ಭಾವ ಹೊತ್ತು
ಬಡಕಲು ಶರೀರ ಶಾಮಲ
ವರ್ಣ ಮಲಿನ ಬಟ್ಟೆ ಎಣ್ಣೆ
ಕಾಣದ ದಪ್ಪ ಕರಿಗೂದಲು
ನೀಳವೇಣಿ ಮುಡಿಕಟ್ಟಿ
ನಿಂತಿದ್ದಾಳೆ ಬಟಾ ಬಯಲಿನಲಿ
ಸುಮಗಳ ಧ್ಯಾನದಲಿ ವಿಹರಿಸಲು
ಆಕೆ ರಾಜಕುವರಿಯೆ..?
ಶೋಷಿತನ ಬಡ ಮಗಳವಳು
ಬೆರಗುಗಂಗಳಾಗಿದ್ದಾಳೆ
ವಿಕಸಿತ ಸುಮಗಳ ಅಂದ ಕಂಡು
ಅದನು ಕಿತ್ತು ಮುಡಿವ
ಆಶೆಯೆ ಕುಮುದೆ..?
ಅದೊಂದು ಹೂವೆ ?
ಬಿಳಿಯೂ ಒಂದು ಬಣ್ಣವೆ..?
ಬಿಳಿ ಸೂತಕದ ಸಂಕೇತ
ಹೋಗಲಿ
ಸುವಾಸನೆಯಾದರೂ
ಇದೆಯೆ ? ಅದೂ ಇಲ್ಲ
ಅದು ಸೂತಕದ
ಸಂಕೇತ ಮಾತ್ರವೆ ಅಲ್ಲ
ಶುಭ್ರತೆಯ ಸಂಕೇತ ಕೂಡ
ಮುಗುದೆ ನಿರಾಶೆ ಬೇಡ..!
ಕಳೆದ
ನಿನ್ನ ಜೀವನ ವ್ಯರ್ಥವಲ್ಲ
ಅದರಂತೆ
ಕಾಡು ಎಕ್ಕೆಯ ಹೂವಿನ
ಬದುಕು ಕೂಡ
ಜೊತೆಗೆ ಅದೊಂದು ಔಷಧಿಯ
ಗುಣಭರಿತ ಸಸ್ಯ ಕೂಡ
ಬರಿ ಬಣ್ಣ ಬೀರಿದರೇನು ?
ಕಂಪು ಸೂಸಿದರೇನು
ಕಗ್ಗಲ್ಲ ಸಂದಿಯಲಿ ಕೂಡ
ಸುಮಗಳು ಬಿರಿದು ಅರಳಿ
ಮುಗುಳ್ನಗುತ್ತವೆ
ನಿರಪೇಕ್ಷ ಭಾವ ಹೊತ್ತು
*
Rating
Comments
ಪಾಟೀಲರಿಗೆ ನಮಸ್ಕಾರ,
ಪಾಟೀಲರಿಗೆ ನಮಸ್ಕಾರ,
ನಿರಪೇಕ್ಷ ಭಾವದ ಹೂವನ್ನು ಎಕ್ಕದಿಂದೆತ್ತಿ ಮುಗುದೆಗೂ ಮುಡಿಸಿ ಸಂತೈಸುತ, ಆಶೆ-ನಿರಾಶೆಗಳ ಸರ ಪೋಣಿಸಿ ತಲೆದಡವುತ್ತ, ಇದೆಲ್ಲ ಸಹಜ ಜೀವನದ ಸರಕು ಎನ್ನುವ ಕವಿಭಾವದ ತಾತ್ಪರ್ಯ ಮೆಚ್ಚಿಕೆಯಾಯ್ತು.
-ನಾಗೇಶ ಮೈಸೂರು, ಸಿಂಗಪುರದಿಂದ
In reply to ಪಾಟೀಲರಿಗೆ ನಮಸ್ಕಾರ, by nageshamysore
ನಾಗೇಶ ಮೈಸೂರು ರವರಿಗೆ ವಂದನೆಗಳು
ನಾಗೇಶ ಮೈಸೂರು ರವರಿಗೆ ವಂದನೆಗಳು
' ಎಕ್ಕೆ ಹೂವು ' ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ ಕವನದ ಮೆಚ್ಚುಗೆಗೆ ಧನ್ಯವಾದಗಳು.
ಸುಂದರ ಭಾವ, ಪಾಟೀಲರೇ. ಬಿಳಿ
ಸುಂದರ ಭಾವ, ಪಾಟೀಲರೇ. ಬಿಳಿ ಸೂತಕದ ಸಂಕೇತ ಎಂಬುದನ್ನು ಒಪ್ಪಲು ಕಷ್ಟವೆನಿಸಿದೆ. ಈ ಕುರಿತು ಚಿಂತಿಸಬೇಕು!
In reply to ಸುಂದರ ಭಾವ, ಪಾಟೀಲರೇ. ಬಿಳಿ by kavinagaraj
ಕವಿ ನಾಗರಾಜ ರವರಿಗೆ ವಂದನೆಗಳು
ಕವಿ ನಾಗರಾಜ ರವರಿಗೆ ವಂದನೆಗಳು
ಈ ಕವನ ಕುರಿತು ತಾವು ಬರೆದೆ ಪ್ರತಿಕ್ರಿಯೆ ಓದಿದೆ, ಕವನದ ಸುಂದರ ಭಾವವನ್ನು ಗುರುತಿಸಿ ' ಬಿಳಿ ಸೂತಕದ ಸಂಕೇತ ಎಂಬುದನ್ನುಒಪ್ಪಲು ಕಷ್ಟವೆನಿಸಿದೆ ' ಎಂದಿದ್ದೀರಿ, ತಮ್ಮ ಭಾವನೆ ನನಗೆ ಅರ್ಥವಾಗುತ್ತೆ, ಕವನದ ಸಂಧರ್ಭದಲ್ಲಿ ಆ ಪದ ಸೂಕ್ತ ಎನಿಸಿ ಆ ಪದದ ಬಳಕೆ ಮಾಡಿದೆ ಅಷ್ಟೆ, ಬಿಳಿ ಸೂತಕದ ಸಂಕೇತ ಮಾತ್ರವೆ ಅಲ್ಲ ಅದು ಶುಭ್ರತೆಯ ಸಂಕೇತ ಕೂಡ, ಜೊತೆಗೆ ಬಿಳಿ ಬಣ್ಣದಲ್ಲಿ ಕಾಮನಬಿಲ್ಲಿನ ಏಳು ವರ್ಣಗಳು ಮಿಳಿತವಾಗಿವೆ ಎನ್ನುವುದೂ ಸಹ ಒಂದು ಸತ್ಯ, ನಿನ್ನೆ ನಿಮ್ಮ ಹಾಗೂ ಗಣೇಶರವರ ಪ್ರತಿಕ್ರಿಯೆಗಳಿಗೆ ಮರು ಪ್ರತಿಕ್ರಿಯಿಸಲು ತಲಾ ನಾಲ್ಕು ನಾಲ್ಕು ಸಾರಿಗಳಂತೆ ಪ್ರಯತ್ನಿಸಿದೆ, ಬೆಳಚ್ಚು ಮಾಡಿದ್ದು ಸೇವ್ ಆಗುತ್ತಲೆ ಇರಲಿಲ್ಲ, ಇವತ್ತು ಗಣಕ ಯಂತ್ರ ಸರಿಯಾಗಿದೆ ಮರು ಪ್ರತಿಕ್ರಿಯಿಸುತ್ತಿದ್ದೇನೆ, ವಿಳಂಬಕ್ಕೆ ನಿಮ್ಮಬ್ಬರಿಂದಲೂ ಕ್ಷಮೆಯಿರಲಿ ಧನ್ಯವಾದಗಳು.
In reply to ಕವಿ ನಾಗರಾಜ ರವರಿಗೆ ವಂದನೆಗಳು by H A Patil
>>ವಿಳಂಬಕ್ಕೆ ನಿಮ್ಮಬ್ಬರಿಂದಲೂ
>>ವಿಳಂಬಕ್ಕೆ ನಿಮ್ಮಬ್ಬರಿಂದಲೂ ಕ್ಷಮೆಯಿರಲಿ.--> ಪಾಟೀಲರೆ, ನಿಮಗೆ ಗಣಕ ಯಂತ್ರ "ಕೈ"ಕೊಟ್ಟಿತು. ನನಗೆ ಕರೆಂಟು "ಕೈ" ಕೊಡುತ್ತಿರುತ್ತದೆ. :)
ಪಾಟೀಲರೆ ಕವನ ಚೆನ್ನಾಗಿದೆ.
ಪಾಟೀಲರೆ ಕವನ ಚೆನ್ನಾಗಿದೆ. ಬಿಳಿಯಎಕ್ಕದ ಹೂವಿನ ಬಗ್ಗೆ ಇಲ್ಲಿನ ಪ್ರತಿಕ್ರಿಯೆಗಳನ್ನು ನೋಡಿ- http://sampada.net/blog/%E0%B2%97%E0%B2%A3%E0%B3%87%E0%B2%B6/30/03/2011…
In reply to ಪಾಟೀಲರೆ ಕವನ ಚೆನ್ನಾಗಿದೆ. by ಗಣೇಶ
ಗಣೇಶ ರವರಿಗೆ ವಂದನೆಗಳು
ಗಣೇಶ ರವರಿಗೆ ವಂದನೆಗಳು
ಈ ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ ಹಾಗೂ ತಾವು ಕೊಟ್ಟ ಲಿಂಕ್ ಗಳನ್ನು ಬಳಸಿ ನೋಡಿದೆ, ಎಕ್ಕೆ ಹೂ ವಿನ ಬಗೆಗೆ ಅನೇಕ ಉಪಯುಕ್ತ ಮಾಹಿತಿಗಳು ದೊರಕಿದವು, ಸುಂದರ ಎಕ್ಕೆ ಹೂವುಗಳನ್ನು ನೊಡಲು ಒಂದು ಅವಕಾಶ ದೊರೆಯಿತು ಧನ್ಯವಾದಗಳು.