೩೬. ಶ್ರೀ ಲಲಿತಾ ಸಹಸ್ರನಾಮ ೯೦ ಮತ್ತು ೯೧ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೯೦ - ೯೧
Kulāmṛtaika-rasikā कुलामृतैक-रसिका (90)
೯೦. ಕುಲಾಮೃತೈಕ-ರಸಿಕಾ
ಈ ನಾಮದಿಂದ ಹಿಡಿದು ೧೧೧ನೇ ನಾಮದವರೆಗೆ ಲಲಿತಾಂಬಿಕೆಯ ಸೂಕ್ಷ್ಮಾತಿಸೂಕ್ಷ್ಮ ರೂಪದ ಕುರಿತಾಗಿ ಚರ್ಚಿಸಲಾಗುತ್ತದೆ. ದೇವಿಯ ಸೂಕ್ಷ್ಮರೂಪವು ಮಂತ್ರ ರೂಪವಾಗಿದೆ; ಅದು ಪಂಚದಶೀ ಅಥವಾ ಷೋಡಶೀ ಆಗಿರಬಹುದು. ಅವಳ ಅತೀ ಸೂಕ್ಷ್ಮರೂಪವು ಕಾಮಕಲಾ ರೂಪವಾಗಿದೆ ಮತ್ತು ಸೂಕ್ಷ್ಮಾತಿಸೂಕ್ಷ್ಮ ರೂಪವು ಕುಂಡಲಿನೀ ಆಗಿದೆ. ಈ ಇಪ್ಪತ್ತೆರಡು ನಾಮಗಳ ಹೊರತಾಗಿ ಪ್ರತಿಯೊಂದೂ ಚಕ್ರದ ವಿವರವಾದ ಚಿತ್ರಣವು ನಮಗೆ ೪೭೫ರಿಂದ ೫೩೪ನೇ ನಾಮಗಳವರೆಗೆ ಸಿಗುತ್ತವೆ. (ಆದರೆ ಈ ವಿವರಣೆಗಳು ’ಯೋಗಿನೀ ನ್ಯಾಸ’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಬರುತ್ತವೆ ಮತ್ತು ಅವು ಹೆಚ್ಚಾಗಿ ಚಕ್ರಗಳ ಭೌತಿಕ ವಿನ್ಯಾಸವನ್ನು ಕುರಿತಾಗಿ ತಿಳಿಸುತ್ತವೆ).
ದೇವಿಯು ’ಕುಲಾ’ ರುಚಿಯನ್ನು ಇಷ್ಟಪಡುತ್ತಾಳೆ. ಕುಲಾ ಎಂದರೆ ಅಮೃತದ ಪರಿಮಳವಿರುವ ಮಕರಂದವಾಗಿದ್ದು ಅದು ಸಹಸ್ರಾರ ಚಕ್ರದಿಂದ ಹರಿಯುತ್ತದೆ. ಯಾವಾಗ ಕುಂಡಲಿನಿಯು ಸಹಸ್ರಾರ ಚಕ್ರವನ್ನು ತಲುಪಿ ಶಿವನೊಂದಿಗೆ ಸಂಯೋಗ ಹೊಂದುವುದೋ ಆಗ ಮಕರಂದದ ರೀತಿಯ ದ್ರವವು(ಅಮೃತವು) ಗಂಟಲಿನೊಳಕ್ಕೆ ಹರಿಯುತ್ತದೆ. ಇದನ್ನು ‘ಅಮೃತವರ್ಷಿಣಿ’ ಎಂದೂ ಕರೆಯುತ್ತಾರೆ. ದೇವಿಯು ಈ ‘ಕುಲಾ’ವನ್ನು ಇಷ್ಟಪಡುತ್ತಾಳೆ ಏಕೆಂದರೆ ಇದರ ರುಚಿಗಾಗಿ ಅಲ್ಲ ಆದರೆ ಶಿವನೊಂದಿಗೆ ಅವಳ ಕೂಡುವಿಕೆಯಿಂದಾಗಿ. ಈ ಕುಲಾ ದ್ರವವು ಕುಂಡಲಿನಿಯು ಸಹಸ್ರಾರವನ್ನು ತಲುಪಿದರೆ ಮಾತ್ರ ಬಿಡುಗಡೆಯಾಗುತ್ತದೆ. ದೇವಿಯು ಶಿವನಿಂದ ಯಾವತ್ತೂ ದೂರವಿರಲು ಬಯಸಲಾರಳು. ಆದ್ದರಿಂದ ಅವಳನ್ನು ’ಮಹಾ ಸುವಾಸಿನಿ’ (ನಾಮ ೯೭೦) ಎಂದು ಕರೆದಿದ್ದಾರೆ; ಅಂದರೆ ಸ್ತ್ರೀಯರಲ್ಲಿ ಪರಮೋತ್ತಮಳು (ಪರಮ ಸುಮಂಗಳಿ) ಎಂದರ್ಥ. ‘ಕುಲಾ’ ಎಂದರೆ ಭೂಮಿಯ ಹೀರುವಿಕೆ ಎನ್ನುವ ಅರ್ಥವೂ ಇದೆ. ಇದು ಮೂಲಾಧಾರ ಚಕ್ರವನ್ನು ಸೂಚಿಸುತ್ತದೆ; ಎಕೆಂದರೆ ಮೂಲಾಧಾರ ಚಕ್ರವು ಪಂಚಭೂತಗಳಲ್ಲಿ ಭೂಮಿಗೆ ಸಂಭಂದಿಸಿದ್ದಾಗಿದೆ. ಮೂಲಾಧಾರ ಚಕ್ರದಿಂದ ಸಹಸ್ರಾರದವರೆಗೆ ಕುಂಡಲಿನಿಯ ಮಾರ್ಗವನ್ನೂ ಕೂಡಾ ‘ಕುಲಾ’ ಎಂದು ಕರೆಯುತ್ತಾರೆ. ಸೌಂದರ್ಯ ಲಹರಿಯ ೧೦ನೇ ಶ್ಲೋಕವು, "ಕುಲಕುಂಡೆ ಕುಹಾರಿಣಿ" (ಭಗ/ವಿತಪ ಇವುಗಳ ಪ್ರದೇಶದಲ್ಲಿರುವ ಅಥವಾ ಎರಡು ವಿಸರ್ಜನಾಂಗಗಳ ಮಧ್ಯಭಾಗದಲ್ಲಿರುವ ಸಣ್ಣ ರಂಧ್ರ) ಎಂದು ಹೇಳುತ್ತದೆ. ಈ ರಂಧ್ರದ ಮೂಲಕ ಕುಂಡಲಿನಿಯು ಉನ್ನತ ಮಟ್ಟದ ಚಕ್ರಗಳಿಗೆ ಏರುತ್ತದೆ. ಋಷಿಗಳು ಸಹಸ್ರಾರದಲ್ಲಿ ಉತ್ಪನ್ನವಾಗುವ ‘ಅಮೃತವರ್ಷಿಣಿಯ’ ಸುಧೆಯನ್ನು ಕುಡಿದು ಅದರಿಂದಲೇ ಜೀವಿಸುತ್ತಾರೆ ಮತ್ತು ಅವರ ಭೌತಿಕ ದೇಹಕ್ಕೂ ಇದರಿಂದ ಸಾವುಂಟಾಗುವುದಿಲ್ಲ.
ಇನ್ನೂ ಒಂದು ರೀತಿಯ ವಿಶ್ಲೇಷಣೆಯಿದೆ. ಕುಲಾ ಎಂದರೆ ‘ತ್ರಿಪುಟಿ’ (ಅಂದರೆ ಮೂರು ಶಬ್ದಗಳು ಒಂದೇ ಗುರಿಯೆಡೆಗೆ ಕೊಂಡೊಯ್ಯುತ್ತವೆ). ಈ ಸಂದರ್ಭದಲ್ಲಿ, ಜ್ಞಾತೃ, ಜ್ಞಾನಿ ಮತ್ತು ಜ್ಞಾನ ಈ ಮೂರನ್ನೂ ಸೇರಿಸಿ ತ್ರಿಪುಟಿ ಎಂದಿದ್ದಾರೆ. ಇಲ್ಲಿ ಜ್ಞಾತೃವು ಸಾಧಕನಾದರೆ, ಜ್ಞಾನವು ಸಾಧಕನನ್ನು ಜ್ಞಾನಿಯ ಬಳಿಗೆ ಕೊಂಡೊಯ್ಯುವ ಸಾಧನಾವಾಗಿದೆ ಮತ್ತು ಇಲ್ಲಿ ಜ್ಞಾನಿಯು ಲಲಿತಾಂಬಿಕೆಯಾಗಿದ್ದಾಳೆ. ಈ ಮೂರರಲ್ಲಿ ಯಾವುದೇ ವ್ಯತ್ಯಾಸವು ಕಂಡು ಬಾರದಿದ್ದಾಗ ಉಂಟಾಗುವ ಜ್ಞಾನವು ಆತ್ಮಸಾಕ್ಷಾತ್ಕಾರಕ್ಕೆ ದಾರಿ ಮಾಡಿ ಕೊಡುತ್ತದೆ. ಈ ಹಂತದಲ್ಲಿ ದ್ವೈತ ಭಾವನೆಯು ನಾಶವಾಗಿ ಕೇವಲ ಅದ್ವೈತವು ಬೆಳಗಲಾರಂಭಿಸುತ್ತದೆ.
Kulasaṅketa-pālinī कुलसङ्केत-पालिनी (91)
೯೧. ಕುಲಸಂಕೇತ-ಪಾಲಿನೀ
ಈ ನಾಮದಲ್ಲಿ ಕುಲವೆಂದರೆ ವಂಶಾವಳಿ. ದೇವಿಯು ತನ್ನ ಭಕ್ತರ ವಂಶಾವಳಿಯ ಗೌಪ್ಯತೆಯನ್ನು ಕಾಪಾಡುತ್ತಾಳೆ.
ದೇವಿಗೆ ಸಂಭದಿಸಿದುದೆಲ್ಲವೂ ಅತ್ಯಂತ ನಿಗೂಢವಾದದ್ದಾಗಿದೆ. ಉದಾಹರಣೆಗೆ ಅವಳ ಪಂಚದಶೀ ಮತ್ತು ಷೋಡಶೀ ಮಂತ್ರಗಳು, ಅವಳ ಕಾಮಕಲಾ ರೂಪ, ಮತ್ತು ಅವಳ ಕುಂಡಲಿನೀ ರೂಪ, ‘ನವಾವರಣ’ವೆಂದು ಕರೆಯಲ್ಪಡುವ ಅವಳ ವಿಧಿಬದ್ಧ ಪೂಜೆ ಮೊದಲಾದವು. ಇವೆಲ್ಲವುಗಳಲ್ಲಿ ಅವಳ ಕಾಮಕಲಾ ರೂಪ ಮತ್ತು ಪಂಚದಶೀ ಮಂತ್ರಗಳು ಅತ್ಯಂತ ನಿಗೂಢವಾಗಿವೆ. ಇಲ್ಲಿ ರಹಸ್ಯವು ಎರಡು ಕಾರಣಗಳಿಗೆ ಇದೆ. ಈ ರೀತಿಯ ಮಂತ್ರಗಳನ್ನು ಸಾರ್ವಜನಿಕವಾಗಿ ವಿವರವಾಗಿ ಚರ್ಚಿಸಬಾರದು ಏಕೆಂದರೆ ಅವು ತಪ್ಪು ಜನರ ಕೈಸೇರಿದರೆ, ಇಂತಹ ಮಂತ್ರಗಳ ಮೇಲೆ ಅವರು ಪ್ರಭುತ್ವವನ್ನು ಸಾಧಿಸಿ ಸಮಾಜಕ್ಕೆ ಹಾನಿಯನ್ನುಂಟು ಮಾಡಬಹುದು. ಎರಡನೆಯದಾಗಿ ಅವಳ ಭೌತಿಕ ಮತ್ತು ಕಾಮಕಲಾ ರೂಪಗಳು ಬಹಳ ನಿಕಟತೆಯಿಂದ ಕೂಡಿರುವುದರಿಂದ (ವೈಯಕ್ತಿಕ ವಿಷಯವಾಗಿರುವುದರಿಂದ) ಅವುಗಳನ್ನು ಬಹಳ ವಿವರವಾಗಿ ತಿಳಿಸಲಾಗದು ಮತ್ತು ತಿಳಿಸಕೂಡದು. ಆದರೆ ಅವನ್ನು ಹಾಗೆಯೇ ರಹಸ್ಯವಾಗಿಡುವುದನ್ನು ಮುಂದುವರೆಸಿದರೆ ಯಾರು ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವುಗಳಲ್ಲಿ ಅಂತರ್ಗತವಾಗಿರುವ ನಿಜವಾದ ಅರ್ಥವನ್ನು ತಿಳಿಯಬಯಸುತ್ತಾರೆಯೋ ಅವರು ಇದರಿಂದ ವಂಚಿತರಾಗಬಹುದು. ಆದ್ದರಿಂದ ಈ ಮಾಲಿಕೆಯಲ್ಲಿ ನಾಮಗಳನ್ನು ಹೇಗೆ ವಿಶ್ಲೇಷಿಸಬೇಕು ಎನ್ನುವುದರ ಕುರಿತಾಗಿ ಕೆಲವೊಂದು ವಿವರಗಳನ್ನು ಕೊಡಲಾಗಿದೆ. ಈ ನಾಮವು ದೇವಿಯು ತನ್ನಷ್ಟಕ್ಕೆ ತಾನೇ ಈ ರೀತಿಯ ರಹಸ್ಯಗಳನ್ನು ಅದಕ್ಕೆ ಯೋಗ್ಯರಲ್ಲದವರಿಂದ ಹೇಗೆ ಕಾಪಾಡಿಕೊಳ್ಳಬೇಕೆಂದು ಬಲ್ಲಳು ಎಂದು ತಿಳಿಸುತ್ತದೆ.
******
Comments
ಆತ್ಮೀಯರೆ,
ಆತ್ಮೀಯರೆ,
Kulāmṛtaika-rasikā कुलामृतैक-रसिका (90)
೯೦. ಕುಲಾಮೃತೈಕ-ರಸಿಕಾ
ಈ ನಾಮದ ವಿಶ್ಲೇಷಣೆಯ ಕಡೆಯ ಪಂಕ್ತಿಯಲ್ಲಿ; ಜ್ಞೇಯ ಎನ್ನುವ ಶಬ್ದದ ಬದಲಾಗಿ ಜ್ಞಾನಿ ಎನ್ನುವ ಶಬ್ದವನ್ನು ತಪ್ಪಾಗಿ ಬಳಸಿದ್ದೇನೆ. ಜ್ಞೇಯ ಎಂದರೆ ತಿಳಿಯಬೇಕಾದವನು ಮತ್ತು ಜ್ಞಾನಿ ಎಂದರೆ ತಿಳಿದವನು. ಆದ್ದರಿಂದ ಇದು ತಾಂತ್ರಿಕವಾಗಿ ತಪ್ಪಾಗುತ್ತದೆ. ಅದನ್ನು ಸರಿಪಡಿಸಿ ಕೆಳಗಿನಂತೆ ಓದಿಕೊಳ್ಳಬೇಕಾಗಿ ವಿನಂತಿ.
ಇನ್ನೂ ಒಂದು ರೀತಿಯ ವಿಶ್ಲೇಷಣೆಯಿದೆ. ಕುಲಾ ಎಂದರೆ ‘ತ್ರಿಪುಟಿ’ (ಅಂದರೆ ಮೂರು ಶಬ್ದಗಳು ಒಂದೇ ಗುರಿಯೆಡೆಗೆ ಕೊಂಡೊಯ್ಯುತ್ತವೆ). ಈ ಸಂದರ್ಭದಲ್ಲಿ, ಜ್ಞಾತೃ, ಜ್ಞಾನ, ಜ್ಞೇಯ ಈ ಮೂರನ್ನೂ ಸೇರಿಸಿ ತ್ರಿಪುಟಿ ಎಂದಿದ್ದಾರೆ. ಇಲ್ಲಿ ಜ್ಞಾತೃವು ಸಾಧಕನಾದರೆ, ಜ್ಞಾನವು ಸಾಧಕನನ್ನು ಜ್ಞೇಯದ ಬಳಿಗೆ ಕೊಂಡೊಯ್ಯುವ ಸಾಧನಾವಾಗಿದೆ ಮತ್ತು ಇಲ್ಲಿ ಜ್ಞೇಯವು ಲಲಿತಾಂಬಿಕೆಯಾಗಿದ್ದಾಳೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಶ್ರೀಧರರಿಗೆ ನಮಸ್ಕಾರ,
ಶ್ರೀಧರರಿಗೆ ನಮಸ್ಕಾರ, ಸೂಕ್ಷ್ಮಾತಿಸೂಕ್ಷ್ಮದ ಆರಂಭಕ್ಕೆ :-)
೯೦. ಕುಲಾಮೃತೈಕ-ರಸಿಕಾ
ಸೂಕ್ಷ್ಮಾತಿಸೂಕ್ಷ್ಮ ರೂಪ ಕುಂಡಲಿನಿ ಸ್ವರೂಪ
ಸಹಸ್ರಾರದೆ ಸಂಗಮಿಸೆ ಕುಲಾದ್ರವಾಲಾಪ
ಅಮೃತವರ್ಷ ಮುದ ಕೂಡೆ ಶಿವನಾಮೋದ
ತ್ರಿಪುಟಿ ಸಮತೆಗಮ್ಯ ಆತ್ಮಸಾಕ್ಷಾತ್ಕಾರ ಕದ!
೯೧. ಕುಲಸಂಕೇತ-ಪಾಲಿನೀ
ರಕ್ಷಿಸೆ ಪ್ರೀತಿ ಅಪಾತ್ರದಾನವಾಗದದ ರೀತಿ
ನಿಗೂಢ ಮಂತ್ರವ ಜತನದೆ ಕಾಪಾಡೆ ಸ್ಮೃತಿ
ನಿಕಟತೆ ವೈಯಕ್ತಿಕತೆಗಪಚಾರವಾಗದ ರೀತಿ
ಯೋಗ್ಯ ಸಾಧಕರಿಗೆ ಹಸ್ತಗತವಾಗುವ ನೀತಿ!
- ನಾಗೇಶ ಮೈಸೂರು, ಸಿಂಗಪೂರದಿಂದ
In reply to ಶ್ರೀಧರರಿಗೆ ನಮಸ್ಕಾರ, by nageshamysore
ನಾಗೇಶ್ ಅವರೆ,
ನಾಗೇಶ್ ಅವರೆ,
ಬಹಳ ಸೊಗಸಾಗಿ ಈ ಎರಡೂ ನಾಮಗಳ ಸಾರವನ್ನು ಹಿಡಿದಿಟ್ಟಿದ್ದೀರ. ನನಗಂತೂ ಕುಲಸಂಕೇತಪಾಲಿನಿಯನ್ನು ನೀವು ವರ್ಣಿಸಿರುವ ರೀತಿ ಅತ್ಯದ್ಭುತವೆನಿಸಿತು. ಖಂಡಿತಾ, ಜಗನ್ಮಾತೆಯ ಕೃಪೆ ನಿಮ್ಮ ಮೇಲಿದೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ನಾಗೇಶ್ ಅವರೆ, by makara
ಶ್ರೀಧರರೆ , ನಾಮದ ಸಾರ ಚೆನ್ನಾಗಿ
ಶ್ರೀಧರರೆ , ನಾಮದ ಸಾರ ಚೆನ್ನಾಗಿ ಬಂದಿದ್ದರೆ ಅದರ ಶ್ರೇಯಸ್ಸು ಮೂಲ ಲೇಖನ ಸೊಗಸಾಗಿ ಅನುವಾದಿಸಿದ ನಿಮಗೆ ಸಲ್ಲಬೇಕು! ನಾನು ಬರೆದಿದ್ದಾದರು ಅಲ್ಲಿಂದಲೆ ತಾನೆ? ಅದೇನೆ ಇದ್ದರೂ, ಆ ದೇವಿಯ ಕೃಪೆ ಈ ರೀತಿಯಲ್ಲಾದರು ನಮಗೆಲ್ಲರಿಗು ನಿರಂತರವಾಗಿರಲಿ :-) - ನಾಗೇಶ ಮೈಸೂರು, ಸಿಂಗಪುರದಿಂದ