ಬಾಲಿವುಡ್ ನ ನೂರು ವರ್ಷ

ಬಾಲಿವುಡ್ ನ ನೂರು ವರ್ಷ

ಮೊನ್ನೆ ಶುಕ್ರವಾರ ಬಾಲಿವುಡ್ ಗೆ ೧೦೦ ವರ್ಷಗಳು ತುಂಬಿದವಂತೆ. ೧೮೯೫ ರಲ್ಲಿ ಪ್ಯಾರಿಸ್ ನಗರದಲ್ಲಿ ಆರಂಭವಾದ ಸಿನೆಮಾ ಆರೇ ತಿಂಗಳಿನಲ್ಲಿ ಮುಂಬೈ ತೀರವನ್ನು ತಲುಪಿ ಜನರನ್ನು ಮಂತ್ರ ಮುಗ್ಧ ರನ್ನಾಗಿಸಿತು. ಕೂಡಲೇ ಈ ತಂತ್ರ ಜ್ಞಾನವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡ ಭಾರತೀಯ ಒಂದು, ಎರಡು ರೀಲ್ ಗಳ ಪುಟ್ಟ ಸಿನೆಮಾದೊಂದಿಗೆ ಚಲನ ಚಿತ್ರದೊಂದಿಗಿನ ತನ್ನ ಸಂಬಂಧಕ್ಕೆ ನಾಂದಿ ಹಾಡಿದ. ಬಡ ದೇಶವಾದರೂ, ಒಪ್ಪತ್ತಿಗೂ ಗತಿಯಿಲ್ಲದೆ, ಆಗಸವನ್ನು ಸೂರಾಗಿಸಿಕೊಂಡರೂ ಬಾಲಿವುಡ್ ಮಾತ್ರ ರೀಲ್ ಮೇಲೆ ರೀಲುಗಳಂತೆ ಚಿತ್ರಗಳನ್ನ ತಯಾರಿಸಿ ಜನ ಹಸಿವನ್ನು ಮರೆಯಲು ಸಹಾಯ ಮಾಡಿತು. ಭಾರತೀಯರಿಗೆ ಕಥೆ ಕೇಳೋದು, ಕೇಳಿದ ಕಥೆಯನ್ನೇ ಮತ್ತೊಮ್ಮೆ ಕೇಳೋದು ಮೋಜಿನ ಸಂಗತಿಯಂತೆ. ಸಿನಿಮಾ ಬಂದಾಗಲೂ ಆಗಿದ್ದಷ್ಟೇ. ಒಂದೇ ಸಿನಿಮಾವನ್ನು ಹಲವು ಸಲ ನೋಡುವ ಜನರಿದ್ದಾಗ ಬಾಲಿವುಡ್ ವ್ಯಾಪಾರ ಸರಾಗ ವಾಯಿತು. ಅದರ ಮೇಲೆ ನಿಜ ಜೀವನಕ್ಕೆ ಯಾವುದೇ ರೀತಿಯಿಂದಲೂ ಹೊಂದದ ಬದುಕಿನ ರೀತಿಯನ್ನು ತೆರೆಯ ಮೇಲೆ ತೋರಿಸಿದಾಗ ಬಂದ ಶಿಳ್ಳೆ ನೋಡಿ ಬಾಲಿವುಡ್ ಗೆ ಯಶಸ್ಸಿನ ಮಂತ್ರ ಏನು ಎಂದು ಹೇಳಲು ಪಂಡಿತರ ಅವಶ್ಯಕತೆ ಬರಲಿಲ್ಲ.

ಸಿನಿಮಾ ಒಂದು ಅತ್ಯಂತ ಶಕ್ತಿಶಾಲೀ ಮತ್ತು ಪ್ರಭಾವಶಾಲೀ ಮಾಧ್ಯಮ. ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದಾಗ ಸಮಾಜದ ಪರಿವರ್ತನೆ ಬಹು ಸುಲಭ. ಆದರೆ ಸಮಾಜ ಪರಿವರ್ತಿಸುವ ಚಿತ್ರಗಳು ಬಂದಾಗ ಅವುಗಳಿಗೆ ಸಿಗುವ ಪ್ರತಿಕ್ರಿಯೆ, ಪ್ರೋತ್ಸಾಹ ಕಂಡ ಬಾಲಿವುಡ್ ಸಿಕ್ಕಾಪಟ್ಟೆ ಹಣ ಹಾಕಿ ಕೈ ಸುಟ್ಟುಕೊಳ್ಳಬಾರದು ಎಂದು ಅಂಗ ಸೌಷ್ಟವಗಳ ಪ್ರದರ್ಶನಕ್ಕೆ ಕೈ ಹಾಕಿತು. ಪ್ರತೀ ಚಿತ್ರದಲ್ಲೂ ಒಂದು ಕ್ಯಾಬರೆ ನೃತ್ಯ ಇರಲೇಬೇಕು. ಜನರನ್ನು ಉದ್ರೇಕಿ ಸುತ್ತಿದ್ದ ಈ ನೃತ್ಯಗಳು ಕಾಲಕ್ರಮೇಣ ಪ್ರತೀ ಹಾಡಿನಲ್ಲೂ ಕಾಣಲು ಸಿಕ್ಕಿತು. ಈಗಂತೂ ವಾತ್ಸ್ಯಾಯನನ ಎಲ್ಲಾ ಭಂಗಿಗಳೂ ಲಭ್ಯ ಹಾಡುಗಳಲ್ಲಿ. ಈ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಹಣ ಚೆಲ್ಲಾಡಲು ಸಹಾಯಕಾರಿಯಾದವು.

ಸಮಾಜದ ಕಡೆ ಬಾಲಿವುಡ್ ತನ್ನ ದೃಷ್ಟಿ ಹರಿಸಲೇ ಇಲ್ಲ ಎಂದೂ ಹೇಳುವಂತಿಲ್ಲ. ಅಸ್ಪೃಶ್ಯತೆ ಬಗೆಗಿನ ೧೯೩೬ ರ "ಅಚ್ಚುತ್ ಕನ್ಯಾ", ವಿಧವಾ ವಿವಾಹದ ಮೇಲಿನ ಏಕ್ ಹೀ ರಾಸ್ತಾ (೧೯೫೬), ವರದಕ್ಷಿಣೆ ಬಗೆಗಿನ ದಹೇಜ್ (೧೯೫೦) ಚಿತ್ರಗಳು ವ್ಯಾಪಾರೀ ಮನೋಭಾವ ಬಿಟ್ಟು ಸಮಾಜದ ಕಡೆ ಗಮನ ಹರಿಸಿದವು.

ಉತ್ತರ ಮತ್ತು ದಕ್ಷಿಣ ಭಾರತ ದಿಕ್ಕುಗಳಂತೆ ಯೇ ವಿರುದ್ಧ ಹಲವು ವಿಷಯಗಳಲ್ಲಿ. ಉತ್ತರ ಭಾರತೀಯ ಮತ್ತು ದಕ್ಷಿಣ ಭಾರತೀಯ ರ ನಡುವಿನ ಚಿತ್ರವನ್ನ ೧೯೫೬ ರಲ್ಲಿ ನಿರ್ದೇಶಕ ಮೋಹನ್ ಸೆಹಗಲ್ ನಿರ್ಮಿಸಿ ಸುದ್ದಿ ಮಾಡಿದರು. ಈ ಚಿತ್ರದಲ್ಲಿ ಉತ್ತರದ ಪಂಜಾಬಿ ಯುವಕ ತಮಿಳು ಮೂಲದ ಪ್ರೆಯಸಿಯಲ್ಲಿ ಹೇಳುತ್ತಾನೆ, ಅವನ ತಂದೆಯ ಪ್ರಕಾರ, ಒಂದು ನಾಗರ ಹಾವೂ, ದಕ್ಷಿಣ ಭಾರತೀಯನೂ ಎದುರಾದರೆ ಮೊದಲು ಮದ್ರಾಸಿ ಯನ್ನು ಕೊಲ್ಲಬೇಕಂತೆ. ಹೇಗಿದೆ ಸಂಬಂಧ, ಮತ್ತು ನಮ್ಮ ಬಗೆಗಿನ ಅವರ ಒಲವು. ಈ ಒಲವನ್ನು ಈಗಲೂ, ವಿಶೇಷವಾಗಿ ಬೆಂಗಳೂರಿಗರಿಗೆ ಕಾಣಲು ಸುಲಭ ಸಾಧ್ಯವಂತೆ.

ಬಾಲಿವುಡ್ ನಮ್ಮ ಸಮಾಜದ ಮೇಲೆ ಯಾವುದೇ ರೀತಿಯಿಂದಲೂ ಒಳ್ಳೆಯ ಪರಿಣಾಮ ಬೀರುತ್ತಿಲ್ಲ ಎನ್ನುವ ದೂರು ಜೋರಾಗಿ ಕೇಳಿಸುತ್ತಿದೆ. ಬೆಳಗಾದರೆ ನಾವು ಓದುವ ಹಸುಳೆ ಯಿಂದ ಹಿಡಿದು ಇಳಿವಯಸ್ಸಿನ ಮಹಿಳೆಯ ಮೇಲೆ ನಡೆಯುವ ಅತ್ಯಾಚಾರಕ್ಕೆ ಕಾರಣ ನಟಿಯರಿಗೆ ಉಡುಗೆಯ ಮೇಲಿನ ವೈರಾಗ್ಯ ಕಾರಣವಂತೆ. ಹಣಕ್ಕಾಗಿ ಬಿಚ್ಚಿದ್ದೇ ಬಿಚ್ಚಿದ್ದು. ನಿರ್ದೇಶಕ ಸ್ವಲ್ಪ ಬಿಚ್ಚಿದರೆ ಸಾಕು ಎಂದರೆ ಸ್ವಲ್ಪ ಉಟ್ಟರೆ ಸಾಕು ಎಂದು ತಪ್ಪಾಗಿ ಕೇಳಿಸಿಕೊಳ್ಳುವ ನಟಿಯರಿಗೆ ಬಿಚ್ಚುವುದರಲ್ಲಿ ಅದೇನೋ ಒಂದು ಸುಖ. ತಮ್ಮ ಅಂಗ ಸೌಷ್ಠವ ಪ್ರದರ್ಶನಕ್ಕಿಟ್ಟು ಜನರನ್ನು ಉದ್ದೀಪಿಸುವ ತಾರೆಯರು ತಾವು ಮಾತ್ರ ಬಾಡಿ ಗಾರ್ಡ್ ಗಳ ರಕ್ಷಣೆಯಲ್ಲಿ ಸುರಕ್ಷಿತ. ದಾರಿಹೋಕ, ಹೊಟ್ಟೆ ಪಾಡಿಗೆಂದು ಹೊರಹೋಗುವ ಬಡಪಾಯಿ ಮಹಿಳೆಯರು ಕಾಮ ಪಿಪಾಸುಗಳಿಗೆ ಬಲಿ. ಇದು ಬಾಲಿವುಡ್ ನ ನೂರು ವರ್ಷ ಗಳ ವೀರಗಾಥೆ.

Rating
No votes yet

Comments

Submitted by makara Tue, 05/07/2013 - 00:04

ಅಬ್ದುಲ್ಲಾ ಅವರೆ,
ಗಾಂಧಿ ಮಿತವ್ಯಯ ಮಾಡಿ ಎಂದು ಹೇಳಿದ್ದನ್ನು ಸರಿಯಾಗಿ ಪಾಲಿಸುತ್ತಿರುವ ಏಕೈಕ ಭಾರತೀಯರೆಂದರೆ ಬಾಲಿವುಡ್ಡಿನ ಹಾಗೂ ಇತರೇ ವುಡ್ಡುಗಳ ಮಂದಿ.

Submitted by Sachin LS Tue, 05/07/2013 - 19:10

ವಿಪರ್ಯಾಸವೆಂದರೆ ಈಗೀಗ‌ ಕನ್ನಡದವರು ಕೂಡ‌ ಐಟಂ ಹಾಡುಗಳ‌ ಅನುಕರಣೆ ಮಾಡುತ್ತಿರುವುದು.. ಹೀಗೆ ಮುಂದುವರೆದು ಮುಂದೊಂದು ದಿನ‌ ಕನ್ನಡದ‌ ಬಗ್ಗೆಯೂ ಹೀಗೊಂದು ಬ್ಲಾಗ್ ಬರದಿದ್ದರೆ ಸಾಕು..

Submitted by venkatesh Tue, 05/07/2013 - 20:17

In reply to by Sachin LS

ಈಗಿನ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ, ಇಂಟರ್ನೆಟ್,(ಬಟನ್ ಒತ್ತಿದರೆ ಎಲ್ಲೆಲ್ಲೂ ಲೈಂಗಿಕ ಚಿತ್ರಗಳ ಹಾವಳಿ) ಹಲವಾರು ’ಸ್ಟಾಂಡ್ ಅಪ್ ಕಾಮೆಡಿಗಳು’, ಧಾರಾವಾಹಿಗಳು, ಜಾಹಿರಾತುಗಳು ಮೊದಲಾದವುಗಳಂತೆ, ಬಾಲೀವುಡ್ಡೂ ಹೊರತಲ್ಲ.ರಸ್ತೆಯಲ್ಲಿ ನಮ್ಮನ್ನು ದಿಕ್ಕುಗೆಡೆಸುವ ಖಡ್ಡ, ಕೊಳಕು, ದಿಕ್ಕೆಟ್ಟು ಓಡುವ ವಾಹನಗಳು, ಮೈಮೇಲೆ ಪ್ರಜ್ಞೆಯಿಲ್ಲದೆ ಸೈಕಲ್, ಮೋಟರ್ ಸೈಕಲ್, ರಿಕ್ಷಾ, ಗಾಡಿ ಓಡಿಸುವ ನಮ್ಮವರೇ ಆದ ಜನರ ಮಧ್ಯೆ ಆತಂತಕದಿಂದ ನುಸುಳಿಬಂದು ಮನೆ ಸೇರುತ್ತೇವಲ್ಲವೇ; ಹೀಗೆಯೇ ಎಲ್ಲವನ್ನೂ ನಾವು ಮನಸ್ಸಿನಲ್ಲಿ ನುಂಗಿ ಅನುಭವಿಸಬೇಕಲ್ಲವೇ !?

Submitted by venkatesh Wed, 05/08/2013 - 06:23

In reply to by venkatesh

ಬಾಲಿವುಡ್ ನ್ನು ವೈಭವೀಕರಿಸುಸುವರು ನಾವೇ. ಆದರೆ ಅದು ಈ ಮಟ್ಟಕ್ಕೆ ಬೆಳೆದಾಗ ಅದನ್ನು ಇಂದಿನ ವಿಶ್ವದ ವ್ಯಾಪಾರಗಳಿಗೆ ಹೋಲಿಸುತ್ತಾ, ಅದರ ಜೊತೆ ಸ್ಪಂದಿಸುತ್ತಾ, ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದ್ದನ್ನು ಕಿತ್ತೊಗೆದು, ಮುಂಡೆಸಾಗಲು ಕಲಿಯದೆ, ಸುಮ್ಮನೆ ಗೊಣಗಿದರೆ ಹೇಗೆ ? ಇಂದಿನ ದಿನಗಳಲ್ಲಿ ಮನರಂಜನೆ ಬೇಕೆಂದರೆ, ಮತ್ತೆ ಬಾಲಿವುಡ್ ಅವಲಂಭಿಸದೆ ಗತಿಯಿಲ್ಲ. ಇದೆ ವಲಯದಲ್ಲಿ ಇಂದಿಗೂ ಒಗ್ಗಿಕೊಂಡು ತಮ್ಮ ಹೆಸರನ್ನು ಮುಗಿಲೆತ್ತರಕ್ಕೆ ಏರಿಸಿ, ಭಾರತದ ಸಿನಿಮಾ ರಂಗಕ್ಕೆ ಒಂದು ಗೌರವಶಾಲಿ ವ್ಯಕ್ತಿತ್ವವನ್ನು ಒದಗಿಸಿ ಕೊಟ್ಟಿರುವ ಅಮಿತಾಬ್ ಬಚ್ಚನ್ ನವ ಯುವಕ ಜನಾಂಗಕ್ಕೆ ಸೇರಿದವರೇ ? ಅವರನ್ನು ನೋಡಿ ನಾವು ಕಲಿಯಬೇಕು. ನಮ್ಮ ಮಕ್ಕಳೇ ಈಗ ತುಂಡು ಬಟ್ಟೆಯನ್ನು ಉಡುತ್ತಾರೆ. ಮಡದಿ ನೈಟಿ ಹಾಕಿಕೊಂಡೇ ಭಾಜಿ ತರಲು, ಮಕ್ಕಳನ್ನು ಶಾಲೆಗೆ ಕಲಿಸಲು ಮನೆಯಿಂದ ಹೊರಗೆ ಬರುತ್ತಾಳೆ. ಇತ್ಯಾದಿ ಇತ್ಯಾದಿ. ಇವೆಲ್ಲ ನಮ್ಮ ಇಂದಿನ ಜೀವನದ ಭಾಗಗಳು. ಯಾವುದನ್ನು ಬಿಡುವಂತಿಲ್ಲ. ಆಧುನಿಕತೆಯ ವಿಶ್ವದಲ್ಲಿ ಭರದಿಂದ ಭೋರ್ಗರೆದು ಹರಿಯುವ ನದಿಯಲ್ಲಿ ನಾವು ಸಾಗುವುದನ್ನು ಕಲಿಯದೆ ವಿಧಿಯಿಲ್ಲ. ಕೆಟ್ಟದ್ದರಲ್ಲಿ ಒಳ್ಳೆಯದನ್ನು ಹುಡುಕುವ ಕಲೆಯಲ್ಲಿ ನೈಪುಣ್ಯತೆ ಗಳಿಸಿದವನೆ ಜಾಣ. ಬೇಗಾನ ಶಾಡಿಮೆ ಅಬ್ದುಲ್ಲಾ ದಿವಾನ !

Submitted by harshagatt Mon, 05/27/2013 - 10:54

namaskara,
adhu bollywood na nuuru varsha alla. Adhu ondu cinema da nooru varsha asthe. :))
inthi,
harsha gatt
www.koolsisya.com