ಹಸುರು ಹೆಜ್ಜೆ

ಹಸುರು ಹೆಜ್ಜೆ

ಪುಸ್ತಕದ ಲೇಖಕ/ಕವಿಯ ಹೆಸರು
ಅಡ್ಡೂರು ಕೃಷ್ಣರಾವ್
ಪ್ರಕಾಶಕರು
ಕೃಷಿ ಅನುಭವ ಕೂಟ
ಪುಸ್ತಕದ ಬೆಲೆ
60

‘ಭೂಮಿಗೆ ನಮ್ಮ ಅವಶ್ಯಕತೆಗಳನ್ನು ಪೂರೈಸುವ ಶಕ್ತಿಯಿದೆ ದುರಾಶೆಗಳನ್ನಲ್ಲ’ ಕೇಳಿ ಕೇಳಿ ಕ್ಲೀಷೆಯಾಗಿರುವ ಮಾತು. ‘ಪರಿಸರ ಉಳಿಸಿ ಮರ ಗಿಡ ಬೆಳಸಿ’, ‘ಕಾಡಿದ್ದರೆ ನಾಡು ನಾಡಿದ್ದರೆ ನಾವು’.. ಇಂತಹ ಹತ್ತು ಹಲವು ಮಾತುಗಳನ್ನು ‘ಪರಿಸರ ದಿನ’ದ ಭಾಷಣಗಳಲ್ಲಿ ಬರಹಗಳಲ್ಲಿ ನೋಡುತ್ತಲೋ ಓದುತ್ತಲೋ ಕೇಳುತ್ತಲೋ ಇರುತ್ತೇವೆ. ಆದರೆ ನಮ್ಮಲ್ಲಿ ಎಷ್ಟು ಮಂದಿಗೆ ‘ಹೌದು ಪರಿಸರವನ್ನು ಉಳಿಸಿಕೊಳ್ಳಲು ನಾನು ಕೂಡ ಪ್ರಯತ್ನಪಡಬೇಕು’ ಎಂದು ಮನಸ್ಸು ಎಚ್ಚರಗೊಳ್ಳುತ್ತದೆ? ನಮ್ಮಿಂದಾಗಬಹುದಾದ್ದನ್ನು ‘ಅಯ್ಯೋ ಬಿಡಿ ನಾವೊಬ್ಬರು ಮಾಡಿದ ಮಾತ್ರಕ್ಕೆ ಎಲ್ಲಾ ಸರಿಹೋಗುತ್ತಾ?’ ಎನ್ನುವ ಸಿನಿಕತನ ಬಿಟ್ಟು ಮಾಡಲು ಸಾಧ್ಯವಾಗುತ್ತದೆ? ಸುತ್ತಲ ಬದುಕನ್ನು ಹಸನುಗೊಳಿಸಿದರೆ ನಮ್ಮ ಬದುಕು ಹಸನಾಗುತ್ತದೆ ಎಂದು ಪ್ರಯತ್ನಿಸುತ್ತಿರುವವರಿಂದಲೇ ನಮ್ಮ ಬದುಕು ಇಂದಿಗೂ ಸಹನೀಯವಾಗಿರುವುದು. ಅಂತಹ ವ್ಯಕ್ತಿಗಳೇ ‘ನಮ್ಮಿಂದಲೂ ಈ ಕೆಲಸ ಸಾಧ್ಯ’ ಎಂದೆನಿಸುವಂತೆ ಮಾಡುವ ಪ್ರೇರಣೆ ನೀಡುತ್ತಿರುವುದು ಅಲ್ಲವೇ?

ಇಷ್ಟೆಲ್ಲ ಪೀಠಿಕೆ ಯಾವುದಕ್ಕೆ ಎಂದು ಅನ್ನಿಸುತ್ತಿರಬೇಕಲ್ಲ. “ಹಸುರು ಹೆಜ್ಜೆ” ಎನ್ನುವ ಪುಸ್ತಕ ಓದುತ್ತಾ ಮನಸ್ಸು ತನ್ನೊಂದಿಗೆ ತಾನೇ ಹೀಗೆ ಮಾತಾಡಿಕೊಂಡಿತು. ಇದು ಅಡ್ಡೂರು ಕೃಷ್ಣರಾವ್‍ ಅವರ ಅಂಕಣಗಳ ಸಂಗ್ರಹ. ಸಂಪದದ ಓದುಗರಿಗೆ ಬಹಳ ಚಿರಪರಿಚಿತವಾದ ಹೆಸರು. ಇವರು ಬೇರೆ ಬೇರೆ ಪತ್ರಿಕೆಗಳಿಗೆ ಬರೆದ ಆಯ್ದ ಲೇಖನಗಳನ್ನು ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ. ತಮ್ಮ ಈ ಬರವಣಿಗೆಯ ಹಿಂದಿನ ಉದ್ದೇಶವನ್ನು ಲೇಖಕರು ಹೀಗೆ ಹೇಳುತ್ತಾರೆ: “ಅದೊಂದು ದಿನ ತಂದೆ ಅಡ್ಡೂರು ಶಿವಶಂಕರರಾಯರಿಂದ ನನಗೆ ಫೋನ್‍. ಕಳೆದ 50 ವರುಷಗಳಿಂದ ಕೃಷಿಯೇ ಅವರ ಬದುಕು. ಆದರೆ ತೆಂಗಿನಕಾಯಿಗಳ ಬೆಲೆ ಕುಸಿತ, ಕೃಷಿಯನ್ನು ಆಧರಿಸಿ ಬದುಕಬಹುದೆಂಬ ಅವರ ನಂಬಿಕೆಯನ್ನೇ ಅಲುಗಾಡಿಸಿತು.

ಆಗ ನಿರ್ಧರಿಸಿದೆ:

ಹಸುರು ಲೋಕದಲ್ಲಿ ನಾಲ್ಕು ದಶಕಗಳ ಪಯಣದಲ್ಲಿ ಕೃಷಿ, ಕೃಷಿಕರು, ಗ್ರಾಮೀಣ ಬದುಕು ಹಾಗೂ ಪರಿಸರದ ಬಗ್ಗೆ ಹೆಪ್ಪುಗಟ್ಟಿದ ನನ್ನ ಅನುಭವಗಳನ್ನು ದಾಖಲಿಸಬೇಕೆಂದು.

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಇಳಿದು ಬರುವ ಮರದ ದಿಮ್ಮಿಗಳು ತುಂಬಿದ ಲಾರಿಗಳನ್ನು ಕಂಡಾಗ, ದೂರದ ಕಾಡಿಗೆ ಬೆಂಕಿಬಿದ್ದು ಅಲ್ಲಿನ ಜೀವವೈವಿಧ್ಯವೆಲ್ಲ ಸುಟ್ಟು ಹೋದಾಗ ತುಡಿಯುವ ಮನದ ನೋವಿಗೆ ಮಾತಾಗಬೇಕೆಂದು.

ಹಕ್ಕಿಗಳು, ಜೇಡಗಳಂತಹ ಜೀವಜಾಲದ ಕೊಂಡಿಗಳ ಸಂಖ್ಯೆ ಕ್ಷೀಣಿಸುವಾಗ ಮೇಲ್ನೋಟಕ್ಕೆ ಕಾಣದ್ದನ್ನು ಬೊಟ್ಟು ಮಾಡಿ ತೋರಿಸಬೇಕೆಂದು.

ಹಳ್ಳಿಗಾಡಿನ ಜನರ ಅನುಶೋಧನೆಗಳನ್ನೂ ಬೆರಗುಗೊಳಿಸುವ ಆವಿಷ್ಕಾರಗಳನ್ನೂ ಪಾರಂಪರಿಕ ಜ್ಞಾನದ ತುಣುಕಗಳನ್ನೂ ಇತರರ ಜೊತೆ ಹಂಚಿಕೊಳ್ಳಬೇಕೆಂದು.

ಕೃಷಿರಂಗದಲ್ಲಿ ನಿರಾಶೆ ಹಾಗೂ ಹತಾಶೆ ಕವಿದಿರುವಾಗ, ಆಶಾಭಾವ ಚಿಮ್ಮಿಸಿ, ಆತ್ಮವಿಶ್ವಾಸ ಬೆಳೆಸಬಲ್ಲ ಸಾಧಕರನ್ನೂ ಸಾಧನೆಗಳನ್ನೂ ಪರಿಚಯಿಸಬೇಕೆಂದು.”

ಅವರ ಈ ಮಾತುಗಳಿಗೆ ಪೂರಕವಾಗಿಯೇ ಪುಸ್ತಕವಿದೆ. ಪುಸ್ತಕದಲ್ಲಿ ‘ಸುದ್ದಿಯಾಗದ ಸಾಧಕರು’, ‘ಕೃಷಿಯ ಚದುರಂಗ’ ‘ಪರಿಸರದ ಸೀಳುನೋಟಗಳು’, ‘ನೀರಿನ ಒಳನೋಟಗಳು’ ಎಂಬ ನಾಲ್ಕು ಭಾಗಗಳಿವೆ. ಇದು ಸುಮ್ಮನೆ ಓದಿ ಪಕ್ಕಕ್ಕಿಡುವ ಪುಸ್ತಕವಲ್ಲ. ನೀವು ಬೇಕೆಂದರೂ ಬೇಡವೆಂದರೂ ನಿಮ್ಮನ್ನು ಇದರಲ್ಲಿನ ವಿಷಯಗಳು ಕಾಡತೊಡಗುತ್ತವೆ. ಇದು ಅವರ ಬರವಣಿಗೆಯ ಯಶಸ್ಸು.

ಪರಿಸರ ಮತ್ತು ಕೃಷಿ ಕೇಂದ್ರಿತವಾದ ವಿಚಾರಗಳು, ನಾವು ಅಭಿವೃದ್ಧಿ ಎಂದುಕೊಂಡಿರುವ, ಪ್ರಗತಿ ಎಂದುಕೊಂಡಿರುವ ನಮ್ಮ ಹಲವು ನಡೆಗಳನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ‘ಬೇಸಾಯ ಎಂದರೆ ನೀ ಸಾಯ ನಾ ಸಾಯ ಮನೆಮಂದಿ ಸಾಯ’ ಎನ್ನುವ ನಾಣ್ಣುಡಿಯನ್ನು ಸುಳ್ಳು ಮಾಡುವಂತೆ ಬದುಕುತ್ತಿರುವ ಹಲವರ ಬದುಕಿನ ನುಡಿಚಿತ್ರಗಳಿಲ್ಲಿವೆ. ಮರಿಯೋ ಸಲ್ದಾನಾ, ಕೆ.ಆರ್‍.ಸೇತ್ನಾ, ಬೀರೇಗೌಡರು, ಬಿ.ಎಲ್‍.ಶೋಬನಬಾಬು, ರಾಜೀವ್‍ ಅಲುವೇಲ್‍ಕರ್‍ ಉರುಫ್‍ ಆ್ಯಂಡಿ, ಡಾ.ಸಂಜೀವ ಕುಲಕರ್ಣಿ, ಕುಮಾರಪ್ಪ, ಬಸವರಾಜು, ಇಂಜಿನಿಯರ್‍ ಪ್ರಸನ್ನ.. ಇವರೆಲ್ಲ ಕೃಷಿಯಲ್ಲಿ ಬದುಕನ್ನು ಕಟ್ಟಿಕೊಂಡವರು. ಸಾವಯವ ಕೃಷಿಯ ಮೂಲಕ ಭೂಮಿಗೆ ಮತ್ತು ತಮ್ಮ ಬದುಕಿಗೆ ಹೊಸ ಚೈತನ್ಯವನ್ನು ಪಡೆದುಕೊಂಡವರು. ವೇಗ ಮತ್ತು ಕೊಳ್ಳುಬಾಕತನದಿಂದ ದೂರವಾದ ಸರಳ, ಸಹಜ ಬದುಕಿನ ಪಾಠಗಳನ್ನು ಇವರು ಬದುಕಿ ಉಳಿದವರಿಗೆ ಕಲಿಸುತ್ತಿದ್ದಾರೆ. ಸಹಜ ಕೃಷಿ ಪದ್ಧತಿ ಮತ್ತು ಭೂಮಿಯ ಆರೋಗ್ಯ ಹಾಳುಗೆಡವದೆ ಕೃಷಿ ನಡೆಸುತ್ತಿರುವುದು ಇವರೆಲ್ಲರ ಅಗ್ಗಳಿಕೆ. ಇಂತಹ ಬದುಕುಗಳಲ್ಲವೇ ನಮಗಿಂದು ಮಾದರಿಯಾಗಬೇಕಾದದ್ದು?

ಇವರೊಂದಿಗೆ ಪಾರಂಪರಿಕ ಜ್ಞಾನವನ್ನು ಮೇಳೈಸಿಕೊಂಡು ಹೊಸ ಪರಿಸರ ಸ್ನೇಹಿ ಅನುಶೋಧನೆಗಳನ್ನು ಮಾಡಿದ ಸಾಧಕರನ್ನು ಪರಿಚಯಿಸುತ್ತಾರೆ. ತೆಂಗಿನ ಸಿಪ್ಪೆ ಸುಲಿಯುವ ಯಂತ್ರ ತಯಾರಿಸಿದ ಜಯಶೀಲನ್‍, ಭತ್ತದ ತಳಿ ಅಭಿವೃದ್ಧಿ ಪಡಿಸಿದ ಎಂ.ಲಿಂಗಮಾದಯ್ಯ, ಹೆಜ್ಜೆ ಗಣಿತ ಎಂಬ ಜಮೀನು ಅಳೆಯುವ ವಿಧಾನ ಇಂತಹವರ ಮಾಹಿತಿ ಅಚ್ಚರಿ ಹುಟ್ಟಿಸುವಂತಿವೆ. “ಶೋಧಯಾತ್ರೆಯಲ್ಲಿ ಪತ್ತೆಯಾದ ಮಲೆನಾಡಿನ ಅನುಶೋಧಕರು” ಲೇಖನದಲ್ಲಿ ಇಂತಹ ಹಲವು ಪ್ರತಿಭೆಗಳ ಪರಿಚಯ ಮಾಡಿಕೊಡುತ್ತಾರೆ.

‘ಕೃಷಿಯ ಚದುರಂಗ’ ಭಾಗದಲ್ಲಿ ಜಾಗತೀಕರಣ, ಉದಾರೀಕರಣಗಳ ದವಡೆಗೆ ಸಿಕ್ಕು ನರಳುತ್ತಿರುವ ಕೃಷಿಕರು ಹಾಗೂ ಪಾರಂಪರಿಕ ಕೌಶಲ್ಯಗಳ ಕುಶಲಕರ್ಮಿಗಳ ಹಾಡು-ಪಾಡಿದೆ. ತೆಂಗಿನ ನಾರಿನ ಉದ್ಯಮ, ಬೀಗಗಳ ಉದ್ಯಮ, ನಮ್ಮ ಹಣ್ಣು ಬೆಳೆಗಾರರು, ಕರಿಮೆಣಸು ಬೆಳೆಗಾರರು ಇವರುಗಳು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾರೆ. ದುರಾಸೆಗೆ ಅಡಿಯಾಳಾಗಿ ಕಳಪೆ ಮಟ್ಟದ ಮೆಣಸಿನಪುಡಿ ರಫ್ತಿಗೆ ಮುಂದಾಗಿರುವುದರ ಕುರಿತು ಹೇಳುತ್ತಾ ಇದು ಭವಿಷ್ಯದಲ್ಲಿ ಬೀರುವ ಪರಿಣಾಮದ ಕುರಿತು ಎಚ್ಚರಿಸುತ್ತಾರೆ. ಹಾಗೆಯೇ ಸ್ವಯಂಕೃತ ಅಪರಾಧಗಳಿಂದ ರೈತರು ನಷ್ಟಕ್ಕೊಳಗಾಗುವುದನ್ನು ಟೊಮೊಟೊ ಬೆಳೆಯ ಉದಾಹರಣೆ ನೀಡುತ್ತಾರೆ. ‘ಗ್ರಾಮೀಣ ಬಡತನ ನಿವಾರಿಸಬಲ್ಲ ಅಭಿವೃದ್ಧಿ ಮಾದರಿ’ ಲೇಖನ ನಮ್ಮ ಅಭಿವೃದ್ಧಿ ಯೋಜನೆಗಳ ಸಾಫಲ್ಯತೆ-ನ್ಯೂನತೆಗಳಿಗೆ ಹಿಡಿದ ಕನ್ನಡಿ. ‘ಕೂಲಿಗಾಗಿ ಕಾಳು’ ಯೋಜನೆಯಂತೆ ‘ಕೌಶಲ್ಯಕ್ಕಾಗಿ ಕಾಳು’ ಯೋಜನೆ ಮಾಡಬಾರದೆ ಎಂದು ಹೇಳುವುದು ಲೇಖಕರ ಸೂಕ್ಷ್ಮಗ್ರಾಹಿ ಮನಸ್ಸು ಮತ್ತು ಒಳನೋಟಗಳಿಂದ ಕೂಡಿದ ಚಿಂತನೆಗೆ ಸಾಕ್ಷಿ.

‘ಪರಿಸರದ ಸೀಳುನೋಟಗಳು’ ಸುತ್ತಲ ಜೀವಸಂಕುಲದ ಬಗೆಗಿನ ಕಾಳಜಿಯನ್ನು ಕುರಿತದ್ದು. ಕಾಡಿನ ನಾಶ, ನಮ್ಮ ಬದುಕಿನ ವಿಧಾನಗಳು ಸುತ್ತಲ ಪರಿಸರ ಮತ್ತು ಜೀವಸಂಕುಲಕ್ಕೆ ಹಾನಿ ಉಂಟುಮಾಡುತ್ತಿರುವ ಪರಿಣಾಮಗಳನ್ನು ಬಿಡಿಸಿಡುತ್ತದೆ. ಕಾಡಿನ ನಾಶದಿಂದಾಗಿ ಕೋತಿಗಳಿಗೆ ಆಗುತ್ತಿರುವ ತೊಂದರೆ, ಕ್ಷೀಣಿಸುತ್ತಿರುವ ಹದ್ದಿನ ಸಂತತಿಗೆ ನಮ್ಮ ಅಭಿವೃದ್ಧಿ ಪಥಗಳ ಕೊಡುಗೆ, ಹಕ್ಕಿಗಳ ನಾಶಕ್ಕೆ ಕಾರಣವಾಗುತ್ತಿರುವ ವರ್ತನೆಗಳು ಇದರಿಂದ ಪರಿಸರದಲ್ಲಿ ಉಂಟಾಗುವ ಅಸಮತೋಲನ ಇವುಗಳ ಬಗ್ಗೆ ಚಿಂತನೆಗೆ ಹಚ್ಚುವಂತಹ ಬರಹಗಳಿವೆ.

‘ನೀರಿನ ಒಳನೋಟಗಳು’ ಇಂದಿನ ನಮ್ಮ ಬದುಕಿನಲ್ಲಿ ನಾವು ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಹೇಗೆ ನಾವೇ ಕಾರಣವಾಗಿದ್ದೇವೆ ಎನ್ನುವುದನ್ನು ತೋರಿಸಿಕೊಡುವುದರೊಂದಿಗೆ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೇನು ಗತಿ? ಎನ್ನುವುದನ್ನು ಹೇಳುತ್ತದೆ. ‘ಅಯ್ಯನ ಕೆರೆಯ ಪಾಠ’, ‘ಮಳೆಗೆ ತಕ್ಕ ತಾಳ’, ‘ನದಿಯನ್ನಲ್ಲ, ಮನಸ್ಸನ್ನು ತಿರುಗಿಸೋಣ’ ಈ ಶೀರ್ಷಿಕೆಗಳೇ ಹೇಳಬೇಕಾದ್ದನ್ನೆಲ್ಲ ಹೇಳುವಷ್ಟು ಧ್ವನಿಪೂರ್ಣವಾಗಿವೆ.

ಹೇಳಬೇಕಾದ್ದನ್ನು ಅನಗತ್ಯವಾಗಿ ವಿಳಂಬಿಸದೆ, ಚಿಕ್ಕದಾಗಿ, ಚೊಕ್ಕವಾಗಿ ಮನಕ್ಕೆ ಮುಟ್ಟುವಂತೆ ಬರೆಯುವ ಶೈಲಿ ಕೃಷ್ಣರಾಯರಿಗೆ ಸಿದ್ಧಿಸಿದೆ. ಇದು ಅವರ ಜನರೊಂದಿಗಿನ ನಿರಂತರ ಒಡನಾಟ ಮತ್ತು ಓಡಾಟಗಳ ಫಲಶ್ರುತಿಯೆನಿಸುತ್ತದೆ. ಇದರೊಂದಿಗೆ ನಿರಂತರವಾಗಿ ಎಚ್ಚರದಲ್ಲಿದ್ದು ಎಲ್ಲವನ್ನೂ ಒಳಗೊಳ್ಳಬಲ್ಲ ಅವರ ತೆರೆದ ಮನಸ್ಸು ತನ್ನ ಅರಿವಿಗೆ ಬಂದಿದ್ದನ್ನು ಹೇಗೆ ಬಿಡದೆ ಹೀರಿಕೊಳ್ಳುತ್ತದೆ ಎಂಬುದು ಅವರ ಈ ಲೇಖನಗಳನ್ನು ಓದಿದಾಗ ತಿಳಿಯುತ್ತದೆ. ಒಟ್ಟಂದದಲ್ಲಿ ಈ ಪುಸ್ತಕ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಎನ್ನುವುದನ್ನು ಮನಕ್ಕೆ ನಾಟಿಸುತ್ತದೆ. ಬದುಕಿನ ರಿಯಲ್‍ ಹೀರೋಗಳ ಪರಿಚಯ ಮಾಡಿಕೊಡುತ್ತ ನಾವು ಹೇಗೆ ಬದುಕಬೇಕು ಎನ್ನುವುದಕ್ಕೆ ಮಾದರಿ ಒದಗಿಸುತ್ತದೆ.

Comments

Submitted by lpitnal@gmail.com Tue, 05/28/2013 - 22:54

ಆಡ್ಡೂರು ಕೃಷ್ಣರಾವ್ ಬರೆದ ಹಸಿರು ಹೆಜ್ಜೆ ಪುಸ್ತಕದ ಪರಿಚಯದ ಜೊತೆಗೆ ಅದರ ಒಳಪುಟಗಳಲ್ಲಿಯ ಕೌತುಕಗಳನ್ನು ಬಿಡಿಸಿಡುತ್ತ ಆಡ್ಡೂರರ ಪರಿಸರ ಪ್ರೇಮ, ಕೃಷಿಯ ಒಳಹೊರ ಬದುಕುಗಳ ಕುರಿತು ತಿಳಿಸುತ್ತ ಸಾಗುವ ಬರಹವೂ ಚನ್ನಾಗಿದೆ ಹೇಮಾಜಿ,. ಉತ್ತಮ ಪುಸ್ತಕವೊಂದನ್ನು ಪರಿಚಿಯಿಸಿದುದಕ್ಕೆ ಧನ್ಯವಾದಗಳು

Submitted by nageshamysore Wed, 05/29/2013 - 03:18

ಹೇಮಾರವರೆ ನಮಸ್ಕಾರ, ಮಾಮೂಲಿಗಿಂತ ಭಿನ್ನವಾದ ವಿಷಯ ಕುರಿತಾದ ಪುಸ್ತಕ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ನೀವಂದ ನಿಜವಾದ ಹೀರೋಗಳು, ಬೆಳಕಿಗೆ ಬರದೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುವಂತಹವರು. ಹೀಗಾಗಿ ಅವರ ಕುರಿತು ಪ್ರಚಾರವು ಹೆಚ್ಚಿರುವುದಿಲ್ಲ. ನಿಮ್ಮ ಪುಸ್ತಕ ಪರಿಚಯ ಆ ದೃಷ್ಟಿಯಿಂದಲೂ ಗಮನಾರ್ಹ  - ನಾಗೇಶ ಮೈಸೂರು, ಸಿಂಗಪುರದಿಂದ

Submitted by spr03bt Thu, 05/30/2013 - 15:27

ಸ೦ಪದ ಸಮ್ಮಿಲನಕ್ಕೆ ಹೋದಾಗ ಸ್ವತಃ ಅಡ್ಡೂರರಿ೦ದಲೇ ಈ ಪುಸ್ತಕವನ್ನು ಕೊ೦ಡಿದ್ದೆ. ಬಹಳ ಅದ್ಭುತವಾಗಿದೆ. ಕೃಷಿಯಲ್ಲಿ ಸಾಧನೆ ಮಾಡಿದ ಹಲವು ವ್ಯಕ್ತಿಗಳ ಬಗ್ಗೆ ಸರಳವಾಗಿ ಬರೆದಿದ್ದಾರೆ. ಎಲ್ಲರೂ ಓದಲೇಬೇಕಾದ೦ಥ ಪುಸ್ತಕ. ಇದನ್ನು ಸ೦ಪದಿಗರಿಗೆ ಪರಿಚಯ ಮಾಡಿಸಿದ ಹೇಮ ಅವರಿಗೆ ವ೦ದನೆಗಳು.