೪೦. ಶ್ರೀ ಲಲಿತಾ ಸಹಸ್ರನಾಮ ೯೯ರಿಂದ ೧೦೩ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೯೯-೧೦೩
Mūlādhāraika-nilayā मूलाधारैक-निलया (99)
೯೯. ಮೂಲಾಧಾರೈಕ-ನಿಲಯಾ
ದೇವಿಯು ಮೂಲಾಧಾರ ಚಕ್ರದಲ್ಲಿ ನಿವಸಿಸುತ್ತಾಳೆ. ಮೂಲವೆಂದರೆ ಬೇರು ಮತ್ತು ಆಧಾರವೆಂದರೆ ಎತ್ತಿಹಿಡಿಯುವುದು. ಆದ್ದರಿಂದ ಮೂಲಾಧಾರ ಚಕ್ರವನ್ನು ಬುನಾದಿ ಚಕ್ರವೆಂದು ಕರೆದಿದ್ದಾರೆ. ಮೂಲಾಧಾರ ಚಕ್ರದ ಕುರಿತಾಗಿ ವಿಶೇಷ ಅಧ್ಯಯನವನ್ನು ೫೧೪ರಿಂದ ೫೨೦ನೇ ನಾಮಾವಳಿಗಳವರೆಗೆ ಮಾಡಲಾಗಿದೆ.
Brahmagranthi-vibhedini ब्रह्मग्रन्थि-विभेदिनी (100)
೧೦೦. ಬ್ರಹ್ಮಗ್ರಂಥಿ- ವಿಭೇದಿನೀ
ದೇವಿಯು ಬ್ರಹ್ಮಗ್ರಂಥಿಯನ್ನು ಛೇದಿಸುತ್ತಾಳೆ. ಕುಂಡಲಿನಿಯ ಮಾರ್ಗದಲ್ಲಿ ಮೂರು ಗಂಟುಗಳಿವೆ ಅವನ್ನು ಗ್ರಂಥಿಗಳೆನ್ನುತ್ತಾರೆ. ಈ ಗ್ರಂಥಿಗಳನ್ನು ಛೇದಿಸಿದಾಗ ಅವುಗಳ ಮೂಲಕ ಕುಂಡಲಿನಿಯು ಉನ್ನತ ಚಕ್ರಗಳಿಗೆ ಹೋಗಲು ಮಾರ್ಗವುಂಟಾಗುತ್ತದೆ. ಮೊದಲನೆಯದಾದ ಬ್ರಹ್ಮಗ್ರಂಥಿಯು ಮೂಲಾಧಾರ ಚಕ್ರದ ಮೇಲುಗಡೆ ಮತ್ತು ಸ್ವಾಧಿಷ್ಟಾನ ಚಕ್ರದ ಕೆಳಗಡೆ ಇರುತ್ತದೆ. ಕುಂಡಲಿನಿಯು ಈ ಗ್ರಂಥಿಯನ್ನು ಛೇದಿಸಿದಾಗ ಮಾತ್ರ ಸ್ವಾಧಿಷ್ಟಾನ ಚಕ್ರಕ್ಕೆ ಹೋಗಲು ಅನುಕೂಲವಾಗುತ್ತದೆ.
Maṇipūrāntha-ruditā मणिपूरान्थ-रुदिता (101)
೧೦೧. ಮಣಿಪೂರಾಂತ-ರುದಿತಾ
ದೇವಿಯು ಮಣಿಪೂರಕದಲ್ಲಿ (ನಾಭಿ ಚಕ್ರದಲ್ಲಿ) ಕಾಣಿಸಿಕೊಳ್ಳುತ್ತಾಳೆ. ಚೆನ್ನಾಗಿ ಅಲಂಕೃತಳಾದ ದೇವಿಯು ನಾಭಿ ಚಕ್ರದ ಸಿಂಹಾಸನದ ಮೇಲೆ ಆಸೀನಳಾಗಿರುತ್ತಾಳೆ ಎನ್ನುವುದನ್ನು ನಾಮಾವಳಿ ೯೮ರಲ್ಲಿ ನೋಡಿದ್ದೇವೆ. ಸೌಂದರ್ಯ ಲಹರಿಯ ೪೦ನೇ ಶ್ಲೋಕವು ಮಣಿಪೂರಕ ಚಕ್ರವನ್ನು ಬಹು ಸುಂದರವಾಗಿ ವರ್ಣಿಸುತ್ತದೆ. "ನಿನ್ನ ಮಣಿಪೂರಕ ಚಕ್ರದಲ್ಲಿ ನಿರಂತರವಾಗಿ ನೆಲೆಸಿರುವ, ಮಿಂಚಿನಂತಹ ಶಕ್ತಿಯ ರೂಪದಲ್ಲಿರುವಂತೆ ವರಪಡೆದಿರುವ, ಯಾರ ಕಾಂತಿಯು ಕತ್ತಲೆಗೆ ವಿರುದ್ಧವಾಗಿದೆಯೋ, ಕುಂಡಲಿನಿಯ ಆಭರಣಗಳಲ್ಲಿ ಅಡಕವಾಗಿರುವ ವಿವಿಧ ರತ್ನಗಳ ಪ್ರಭೆಯಿಂದ ಕಾಮನಬಿಲ್ಲು ಉಂಟಾಗಿದೆಯೋ ಮತ್ತು ಹರನ (ಬೆಂಕಿಯಿಂದ) ಮತ್ತು ಮಿಹಿರನ (ಸೂರ್ಯನಿಂದ/ಕೆಲವೊಂದು ನಿಘಂಟುಗಳು ಚಂದ್ರನಿಂದ ಎನ್ನುತ್ತವೆ) ತಾಪಗಳಿಂದ ತೃಷೆಗೊಂಡ ಪ್ರಪಂಚಗಳಿಗೆ ಮಳೆಯನ್ನು ಸುರಿಸುತ್ತದೆಯೋ ಆ ದಟ್ಟವಾದ ಕಡು-ನೀಲಿ ಮೇಘವನ್ನು ನಾನು ಪೂಜಿಸುತ್ತೇನೆ." ಗಾಢ ಧ್ಯಾನದ ಸ್ಥಿತಿಯಲ್ಲಿ ಬಿಲ್ಲಿನಾಕಾರದ ಪ್ರಬಲ ಕಾಂತಿಯು ಕಾಣಿಸುತ್ತದೆ. ಈ ಚಕ್ರದ ಕುರಿತಾದ ವಿಶೇಷ ಅಧ್ಯಯನವನ್ನು ನಾಮ ೪೯೫ರಿಂದ ೫೦೩ರವರೆಗೆ ಕೈಗೊಳ್ಳಲಾಗಿದೆ.
Viṣṇugranthi-vibhedinī विष्णुग्रन्थि-विभेदिनी (102)
೧೦೨. ವಿಷ್ಣುಗ್ರಂಥಿ-ವಿಭೇದಿನೀ
ದೇವಿಯು, ನಾಭಿಯ ಚಕ್ರದ ಸ್ವಲ್ಪ ಮೇಲೆ ಇರುವ ಎರಡನೇ ಗ್ರಂಥಿಯಾದ ವಿಷ್ಣುಗ್ರಂಥಿಯನ್ನು ಛೇದಿಸುತ್ತಾಳೆ. ಮಹಾ ವಿಷ್ಣುವು ಮಣಿಪೂರಕ ಚಕ್ರದಲ್ಲಿ ನಿವಸಿಸುತ್ತಾನೆ ಆದ್ದರಿಂದ ಮಣಿಪೂರಕ ಚಕ್ರದ ಮೇಲಿನ ಗ್ರಂಥಿಯನ್ನು ವಿಷ್ಣು ಗ್ರಂಥಿ ಎಂದು ಕರೆಯಲಾಗಿದೆ. ಈ ಜಗತ್ತನ್ನು ಸುಸ್ಥಿತಿಯಲ್ಲಿಡುವ ಹೊಣೆಯು ಮಹಾವಿಷ್ಣುವಿನದಾಗಿದೆ. ಯಾವಾಗ ಸಾಧಕನು ಈ ವಿಷ್ಣುಗ್ರಂಥಿಯನ್ನು ದಾಟಲು ಶಕ್ಯನಾಗುವನೋ ಅವನು ಸ್ಥಿತಾತೀತನಾಗುತ್ತನೆ ಅಂದರೆ ಈ ಸ್ಥಿತಿಯ ಅವಸ್ಥೆಗೆ ಅತೀತನಾಗುತ್ತಾನೆ. ಕೇವಲ ಜೀವಿಸುವುದು ಸಾಮಾನ್ಯ ಜೀವಿಗಳಿಗಷ್ಟೇ ಅನ್ವಯಿಸುತ್ತದೆ; ಇದರಿಂದ ಅತೀತರಾಗುಳಿಯುವವರು ಯೋಗಿಗಳು ಮತ್ತು ಋಷಿ-ಮುನಿಗಳು. ಈ ಯೋಗಿಗಳು ಚಿರಕಾಲ ಜೀವಿಸುವುದು ಅಮೃತ ಅಥವಾ ದೈವೀ ಮಕರಂದದ ಸೇವನೆಯಿಂದ ಎನ್ನುವುದರ ಕುರಿತಾಗಿ ಈ ಮೊದಲೇ ಚರ್ಚಿಸಲಾಗಿದೆ.
Ājñā-cakrāntarālasthā आज्ञा-चक्रान्तरालस्था (103)
೧೦೩. ಆಜ್ಞಾ-ಚಕ್ರಾಂತರಾಲಸ್ಥಾ
ದೇವಿಯು ಮೂರನೇ ಕಣ್ಣು ಎಂದು ಕರೆಯಲ್ಪಡುವ ಆಜ್ಞಾ ಚಕ್ರದಲ್ಲಿ ನಿವಸಿಸುತ್ತಾಳೆ. ಇದು ಆರು ಚಕ್ರಗಳಲ್ಲಿ ಕಡೆಯದಾಗಿದ್ದು ಈ ಚಕ್ರವು ಗುರುವಿಗೆ ಸೇರಿದ್ದು; ಇದರ ಮೂಲಕ ಆತನು ಸಾಧಕನಿಗೆ ಆಜ್ಞೆಗಳನ್ನು ವಿಧಿಸುತ್ತಾನೆ. ಈ ಚಕ್ರದಲ್ಲಿ ಸಾಧಕನಿಗೆ ಅಲ್ಪಪ್ರಮಾಣದ ಬ್ರಹ್ಮಜ್ಞಾನವು ಉಂಟಾಗುತ್ತದೆ. ಹಿಂದಿನ ಐದು ಚಕ್ರಗಳು ಪಂಚಭೂತಗಳಿಗೆ ಸಂಭಂದಿಸಿದರೆ, ಈ ಚಕ್ರವು ಮನಸ್ಸಿಗೆ ಸಂಭಂದಿಸಿದ್ದಾಗಿದೆ ಮತ್ತು ಜ್ಞಾನವನ್ನು ಸಂಪಾದಿಸಲು ಇರುವ ಸಾಧನವೇ ಮನಸ್ಸು. ಸೌಂದರ್ಯ ಲಹರಿಯ ೩೬ನೇ ಶ್ಲೋಕವು, ಈ ಚಕ್ರವನ್ನು ಹೀಗೆ ವರ್ಣಿಸುತ್ತದೆ. “’ಪರಾಚಿತ್’ನಿಂದ ಆವರಿಸಲ್ಪಟ್ಟು, ಕೋಟ್ಯಂತರ ಸೂರ್ಯ ಚಂದ್ರರ ಪ್ರಭೆಯುಳ್ಳ, ನಿನ್ನ ಆಜ್ಞಾ ಚಕ್ರದಲ್ಲಿ ನೆಲೆಸಿರುವ ಆ ಪರಮ ಶಂಭುವನ್ನು (ಪರಶಿವನನ್ನು) ನಾನು ಪೂಜಿಸುತ್ತೇನೆ". ಈ ಶ್ಲೋಕವು ಶಿವ ಮತ್ತು ಶಕ್ತಿಯರಿಬ್ಬರ ಮಾನಸ ಪೂಜೆಯ ಕುರಿತು ಒತ್ತಿ ಹೇಳುತ್ತದೆ. ಆಜ್ಞಾ ಚಕ್ರವು ಮನಸ್ಸಿನೊಂದಿಗೆ ಸಂಭಂದ ಹೊಂದಿದೆ. ಕೃಷ್ಣನು ಭಗವದ್ಗೀತೆಯ ೧೧ನೇ ಅಧ್ಯಾಯದ ೮ನೇ ಶ್ಲೋಕದಲ್ಲಿ ಹೀಗೆ ಹೇಳಿದ್ದಾನೆ. "ನಿನ್ನ ಭೌತಿಕ ಕಣ್ಣುಗಳಿಂದ ನೀನು ನನ್ನನ್ನು ನೋಡಲಾರೆ. ನಾನು ನಿನಗೆ ದಿವ್ಯವಾದ ದೃಷ್ಟಿಯನ್ನು (ಮೂರನೆಯ ಕಣ್ಣು ಅಥವಾ ಆಜ್ಞಾ ಚಕ್ರ) ಕೊಡುತ್ತಿದ್ದೇನೆ".
ಆಜ್ಞಾ ಚಕ್ರದ ಕುರಿತು ೫೨೧ರಿಂದ ೫೨೮ ನಾಮಾವಳಿಗಳಲ್ಲಿ ವಿವರವಾಗಿ ಹೇಳಲಾಗಿದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 99-103 http://www.manblunder.com/2009/08/lalitha-sahasranamam.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ.ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಶ್ರೀಧರರೆ, ತೆಂಡೂಲ್ಕರನ ಹಾಗೆ
ಶ್ರೀಧರರೆ, ತೆಂಡೂಲ್ಕರನ ಹಾಗೆ ಮೊದಲ ನೂರನ್ನು ಮುಟ್ಟಿಸಿ, ಒಂದು ಮೈಲಿಗಲ್ಲನ್ನು ದಾಟಿದಿರಿ ಮತ್ತು ದಾಟಿಸಿದಿರಿ, ಅಭಿನಂದನೆಗಳು. ಉಳಿದ ನೂರು ಹಾಗೆಯೆ ಸುಗಮವಾಗಿ ದಾಟಲೆಂದು ಹಾರೈಸುತ್ತ ಈ 99 ರಿಂದ 103 ರ ಕವನದ ಸಾರದ ಯತ್ನವನ್ನು ಜತೆಗಿಡುತ್ತಿದ್ದೇನೆ, - ನಾಗೇಶ ಮೈಸೂರು, ಸಿಂಗಪುರದಿಂದ
೯೯. ಮೂಲಾಧಾರೈಕ-ನಿಲಯಾ
ಮೂಲಾಧಾರಚಕ್ರಕೆ ಹೆಸರೆ ಬುನಾದಿ ಚಕ್ರ
ಮೂಲವೆಂದರೆ ಬೇರು ಮೂಲಸೃಷ್ಟಿ ಸಚಿತ್ರ
ಜೀವವನೆತ್ತಿಡಿದೆ ಶಿರದಿಂದುಗುಷ್ಟಕೆ ಆಧಾರ
ದೇವಿ ಲಲಿತೆ ನಿವಾಸಿನಿ ಮೂಲಾಧಾರ ಚಕ್ರ!
೧೦೦. ಬ್ರಹ್ಮಗ್ರಂಥಿ-ವಿಭೇದಿನೀ
ಕುಂಡಲಿನೀಪಥ ಮಾರ್ಗ ಮೂರು ತೊಡಕಂತೆ ಹುಡುಕೆ
ಗಂಟಿನ ರೂಪದಲಿಹ ಗ್ರಂಥಿಯನರಸಿ ಛೇಧಿಸೆ ತೊಡಕೆ
ತೆರೆದುಕೊಂಡಾ ಮಾರ್ಗ ಉನ್ನತ ಚಕ್ರಾರೋಹಣ ಯಾನ
ಬ್ರಹ್ಮಗ್ರಂಥಿ ವಿಭೇಧಿಸೆ ದೇವಿ ಸ್ವಾಧಿಷ್ಟಾನಚಕ್ರಕಾಗಮನ!
೧೦೧. ಮಣಿಪೂರಾಂತ-ರುದಿತಾ
ಶೋಭಿತೆ ಸಾಲಂಕೃತೆ ದೇವಿ ನಾಭಿ ಚಕ್ರಾಮಣಿಪೂರಕ
ಸಿಂಹಾಸನಾರೂಢ ಆಸೀನೆ ನಾಭಿಚಕ್ರವಾಸಿ ನಿರಂತರ
ಕೋರೈಸೊ ಮಿಂಚೆ ಶಕ್ತಿಯಾಗಿ ತಮ ಬೆಳಗಿಸೊ ಕಾಂತಿ
ಕುಂಡಲಿನಿಪ್ರಭೆಗಿಂದ್ರಚಾಪ ವರ್ಷಧಾರೆ ನೀಲ್ಮೇಘ ಭಕ್ತಿ!
೧೦೨. ವಿಷ್ಣುಗ್ರಂಥಿ-ವಿಭೇದಿನೀ
ಮಣಿಪೂರಕ ನಾಭಿ ಚಕ್ರ ನಿವಾಸಿತನೆ ಮಹಾವಿಷ್ಣು
ಹೊತ್ತು ವಿಷ್ಣುಗ್ರಂಥಿಯ ತಳದೆ ಜಗಸುಸ್ಥಿತಿ ಸಹಿಷ್ಣು
ಸ್ಥಿತಾತೀತ ಅವಸ್ಥಾತೀತ ಸಾಧಕ ದಾಟಿದರೀಗ್ರಂಥಿ
ಯೋಗಿ ಋಷಿ ಮುನಿ ಜೀವಿತ ಚಿರಕಾಲಾಮೃತಶಕ್ತಿ!
೧೦೩. ಆಜ್ಞಾ-ಚಕ್ರಾಂತರಾಲಸ್ಥಾ
ತ್ರಯೋನೇತ್ರ ಹೆಸರಾಂತ ಆಜ್ಞಾಚಕ್ರ ನಿವಾಸಿನಿ ದೇವಿ
ಸ್ವಾಧೀನ ಗುರುಮುಖೇನ-ಆಜ್ಞಾ ತಿಲ ಬ್ರಹ್ಮಜ್ಞಾನ ಛವಿ
ಮನೋಚಕ್ರ ಜ್ಞಾನಸಂಪಾದನೆ ಸಾಧನಕೆ ಮನಸೆ ದಾರಿ
ಆಜ್ಞಾಚಕ್ರ ಮಾನಸಪೂಜೆ ಶಿವಶಕ್ತಿಸಮಷ್ಟಿ ಗುರು ತೋರಿ!
In reply to ಶ್ರೀಧರರೆ, ತೆಂಡೂಲ್ಕರನ ಹಾಗೆ by nageshamysore
ದೇವಿಯ ಕೃಪೆಯಿದ್ದರೆ ಒಂದು
ದೇವಿಯ ಕೃಪೆಯಿದ್ದರೆ ಒಂದು ಶತಕವೇನು ಶತಕಗಳ ಶತಕಗಳ ಸರದಾರನಾಗಬಹುದು. ನಿಮ್ಮ ಕವಿತಾ ಪ್ರತಿಭೆ ನೋಡಿದಾಗ ನೀವೂ ಏಕೆ ಒಂದು ದೇವೀ ಶತಕ ಬರೆಯಬಾರದು? ಪ್ರಯತ್ನಿಸಿ ಖಂಡಿತಾ ಅದು ನಿಮ್ಮಿಂದ ಸಾಧ್ಯವಿದೆ, ನಾಗೇಶರೆ.
ವಿ.ಸೂ.: ನೀವು ಒಪ್ಪಿಕೊಳ್ಳದಿದ್ದರೆ ಗುಬ್ಬಣ್ಣನಿಗೆ ಹೇಳಿ ನಿಮ್ಮ ಹೆಸರನ್ನು ಮೊದಲೇ ನೋಂದಾಯಿಸಿ ಬಿಡುತ್ತೇನೆ...ಹುಷಾರ್! :))
In reply to ದೇವಿಯ ಕೃಪೆಯಿದ್ದರೆ ಒಂದು by makara
ಶ್ರೀಧರರೆ, ಗುಬ್ಬಣ್ಣನಿಗೆ ಮಾತ್ರ
ಶ್ರೀಧರರೆ, ಗುಬ್ಬಣ್ಣನಿಗೆ ಮಾತ್ರ ದಯವಿಟ್ಟು ಹೇಳಬೇಡಿ! ನಾನು ನಿಮ್ಮ ಮಾತನ್ನೆ ಕೇಳುತ್ತೇನೆ. ಇಲ್ಲದಿದ್ದರೆ ಉತ್ತರಾರ್ಧದಲ್ಲಿ ದಾಂಧಲೆಯೆಬ್ಬಿಸಿಬಿಟ್ಟಾನು ಆ ಮಹಾನ್ ಘಾಟಿ :-)
ಇನ್ನು ಕವಿತೆಯನ್ನು ಕುರಿತು ಹೇಳುವುದಾದರೆ - ನೀವು ಬರೆದುಕೊಂಡು ಹೋದ ಹಾಗೆ ನಿಮ್ಮ ಜತೆ ಹೂವ್ವಿನ ಜತೆ ನಾರು ಸ್ವರ್ಗಕ್ಕೆ ಹೋಗುವ ಹಾಗೆ ನಾನು ಹೀಗೆಯೆ ಬರೆದು ಸೇರಿಸಲು ಪ್ರಯತ್ನಿಸುತ್ತೇನೆ. ಕೊನೆಗೆಲ್ಲ ಸೂಕ್ತವಾಗಿದ್ದರೆ ಪರಿಷ್ಕರಿಸಿ ಒಟ್ಟುಗೂಡಿಸುವ ಸಾಧ್ಯತೆಯಿದ್ದೆ ಇದೆ - ದೇವಿಯ ಕೃಪೆ ಆಶೀರ್ವಾದವಿದ್ದರೆ ಅದೂ ಆಗಿ ಹೋಗಲಿ! ಕನಿಷ್ಟ ಸಂಪದದಲ್ಲಾದರೂ ಅದು ಬೆಳಕು ಕಾಣುವುದರಿಂದ ನನ್ನ ಉಳಿದ ಅಪ್ರಕಟಿತ ಸುಮಾರು 1500 ಕವನಗಳ ಪಾಡಂತೂ ಅದಕ್ಕೆ ಬರುವುದಿಲ್ಲ :-)
- ನಾಗೇಶ ಮೈಸೂರು, ಸಿಂಗಪುರದಿಂದ
In reply to ಶ್ರೀಧರರೆ, ಗುಬ್ಬಣ್ಣನಿಗೆ ಮಾತ್ರ by nageshamysore
ನಿಮ್ಮ ಮತ್ತು ಶ್ರೀಧರರ ಮಾತುಕತೆ
ನಿಮ್ಮ ಮತ್ತು ಶ್ರೀಧರರ ಮಾತುಕತೆ ಚೆನ್ನಾಗಿದೆ. ಯಾರು ಆ ಗುಬ್ಬಣ್ಣ?
In reply to ನಿಮ್ಮ ಮತ್ತು ಶ್ರೀಧರರ ಮಾತುಕತೆ by hariharapurasridhar
ಅಯ್ಯೊ ಶ್ರೀಧರ್ ರವರೆ, ಗುಬ್ಬಣ್ಣನ
ಅಯ್ಯೊ ಶ್ರೀಧರ್ ರವರೆ, ಗುಬ್ಬಣ್ಣನ ಹೆಸರಲ್ಲಿ ಶ್ರೀಧರ ಬಂಡ್ರಿಯವರು ನನ್ನ ಛೇಡಿಸುತ್ತಿದ್ದಾರೆ - ನಿನ್ನೆ ಸಂಪದದಲ್ಲಿ ಒಂದು ಉದ್ದನೆಯ ಹಾಸ್ಯ ಬರಹ ಹಾಕಿದ್ದೆ, ಅದರ ಮುಖ್ಯ ಹಾಸ್ಯ ಪಾತ್ರ ಗುಬ್ಬಣ್ಣ. ಅದರ ಲಿಂಕು ಇಲ್ಲಿದೆ ನೋಡಿ (ಅಥವ ಸಂಪದ ಎರಡನೆ ಪುಟದಲ್ಲಿದೆ ನೋಡಿ - ಗುಬ್ಬಣ್ಣನ-ಯೂನಿವೆರ್ಸಲ್-ಸ್ಟುಡಿಯೊ-ದಂಡಯಾತ್ರೆ ಅನ್ನೊ ಹೆಸರಿನಲ್ಲಿ ) - ನಾಗೇಶ ಮೈಸೂರು , ಸಿಂಗಪುರದಿಂದ
http://sampada.net/ಗುಬ್ಬಣ್ಣನ-ಯೂನಿವೆರ್ಸಲ್-ಸ್ಟುಡಿಯೊ-ದಂಡಯಾತ್ರೆ-%C2%A0