ಚಿಕ್ಕ ಚಿಕ್ಕ ಘಟನೆಗಳಿಂದ ಕಲಿಯಬೇಕಾದ್ದು ಸಾಕಷ್ಟು…ಭಾಗ-2
ಘಟನೆ-1
ನಿನ್ನೆ ಸತ್ಸಂಗದಲ್ಲಿ ಒಂದು ಪುಟ್ಟ ಸಂಭಾಷಣೆ ನಡೆಯಿತು. ನನಗೆ ಖುಷಿ ಕೊಡ್ತು. ಅದನ್ನು ಯಥಾವತ್ತಾಗಿ ಜನಮಿತ್ರ ಓದುಗರ ಗಮನಕ್ಕೆ ತಂದಿರುವೆ. ಇದು ಪ್ರತಿಕ್ರಿಯೆಗಾಗಿ ಬರೆದದ್ದಲ್ಲ. ಈ ಬರಹ ಓದಿ ಅಧ್ಯಯನದ ಕೊರತೆ ಇದೆ. ಜಾಳು ಜಾಳಾಗಿದೆ, ಮುಂತಾದ ಪ್ರತಿಕ್ರಿಯೆಗಳಿಂದ ಏನೂ ಪ್ರಯೋಜನವಿಲ್ಲ. ಇಲ್ಲಿ ಬುದ್ಧಿಗೆ ಮಹತ್ವವಿಲ್ಲ.
ವಿಜ್ಞಾನ ಮತ್ತು ಅಧ್ಯಾತ್ಮ:
ಶಿಷ್ಯ: ವಿಜ್ಞಾನ ಮತ್ತು ಅಧ್ಯಾತ್ಮದ ಲಾಭ ನಷ್ಟ ಗಳನ್ನು ಒಂದೆರಡು ಮಾತುಗಳಲ್ಲಿ ಹೇಳಿ.
ಗುರು: ವಿಜ್ಞಾನ ಪ್ರಶ್ನೆಗಳನ್ನು ಕೊಡುತ್ತೆ. ಅಧ್ಯಾತ್ಮ ಸಮಾಧಾನವನ್ನು ಕೊಡುತ್ತೆ. ಅಂಗಡಿಯಲ್ಲಿ ಹಣಕೊಟ್ಟು ಸಮಾಧಾನವನ್ನು ಕೊಂಡುತರಲು ಸಾಧ್ಯವೇ? ಅದನ್ನು ಅಧ್ಯಾತ್ಮ ಕೊಡಬಲ್ಲದು. ವಿಜ್ಞಾನವು ನಿಮ್ಮ ಭೋಗ ಜೀವನಕ್ಕೆ ಎಷ್ಟು ಬೇಕಾದರೂ ಸವಲತ್ತನ್ನು ಒದಗಿಸುತ್ತಲೇ ಇದೆ. ಅದರಿಂದ ಶಾಶ್ವತ ಆನಂದ ಸಿಕ್ಕಲು ಸಾಧ್ಯವೇ? ಸವಲತ್ತುಗಳು, ಸಲಕರಣೆಗಳು ಹೆಚ್ಚಿದಂತೆಲ್ಲಾ ಮತ್ತೆ ಮತ್ತೆ ಇನ್ನೇನೋ ಹೊಸ ಹೊಸ ಅನ್ವೇಶಣೆಗಳು ನಡೆಯುತ್ತಲೇ ಇವೆ. ಇದಕ್ಕೆ ಕೊನೆ ಅನ್ನುವುದು ಇಲ್ಲ. ವಿಜ್ಞಾನವೇ ಹಾಗೆ. ಹೊಸ ಹೊಸದನ್ನು ಕೊಡುತ್ತಲೇ ಇದೆ. ಆದರೆ ಮನುಷ್ಯನ ಚಿಂತೆ ದೂರವಾಗಲೇ ಇಲ್ಲ. ಹೆಚ್ಚು ಹೆಚ್ಚು ಸೌಕರ್ಯಗಳು ಸಿಕ್ಕಿದಂತೆಲ್ಲಾ ನೆಮ್ಮದಿ ಸಿಕ್ಕಬೇಕಿತ್ತಲ್ಲವೇ? ಸಿಕ್ಕಿದೆಯೇ? ಹಾಗಾದರೆ ಏನು ಪ್ರಯೋಜನ? ಯಾವುದರಿಂದ ಮನುಷ್ಯನಿಗೆ ನೆಮ್ಮದಿ ಸಿಕ್ಕೀತು? ನೀವೀಗ ಒಂದು ಗಂಟೆ ಕುಳಿತು ಸಾಮೂಹಿಕವಾಗಿ ಭಜನೆ ಮಾಡಿದಿರಿ. ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದಿರಿ, ಧ್ಯಾನ ಮಾಡಿದಿರಿ. ಈಗ ನಿಮ್ಮ ಮನ:ಸ್ಥಿತಿ ಹೇಗಿದೆ?
ಶಿಷ್ಯ: ಮನಸ್ಸು ಪ್ರಫುಲ್ಲವಾಗಿದೆ. ಹಗುರವಾಗಿದೆ.
ಗುರು: ಎಷ್ಟು ಹಣ ಖರ್ಚಾಯ್ತು?
ಶಿಷ್ಯ: ಹಣ ಖರ್ಚಾಗುವುದರ ಬದಲು ಇವತ್ತು ಇದೇ ಸಮಯದಲ್ಲಿ ನಾನು ಸ್ನೇಹಿತರೊಡನೆ ಖುಷಿಗಾಗಿ ಖರ್ಚುಮಾಡುತ್ತಿದ್ದ ೨೦೦ ರೂಪಾಯಿ ಉಳಿಯಿತು.
ಗುರು: ಇಲ್ಲಿಯವರಗೆ ಸುಖ ಬೋಗಗಳಿಗಾಗಿ ಎಷ್ಟು ಖರ್ಚುಮಾಡಿದ್ದೀರಿ?
ಶಿಷ್ಯ: ಕಳೆದ ಒಂದೆರಡು ವರ್ಷಗಳಲ್ಲಿ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಲಗ್ಷುರಿ ಐಟಮ್ ಗಳನ್ನು ಕೊಂಡಿದ್ದೇನೆ. ಅವನ್ನು ಮನೆಯಲ್ಲಿ ಕಾಪಾಡಲು ಒಬ್ಬ ಮನೆಕೆಲಸದವರಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಕೊಡುತ್ತೇನೆ. ಆದರೂ ನಿತ್ಯವೂ ಗಲಾಟೆ ತಪ್ಪಿದ್ದಲ್ಲ. ಅದು ಹಾಳಾಯ್ತು, ಇದರಮೇಲೆ ಧೂಳು ಒರೆಸಲಿಲ್ಲ, ಇತ್ಯಾದಿ, ಇತ್ಯಾದಿ. ಸತ್ಸಂಗಕ್ಕೆ ಬರಲು ಶುರುವಾಗಿ ಆರು ತಿಂಗಳಾಯ್ತು. ಅಲ್ಲಿಂದ ಒಂದು ರೂಪಾಯಿಯ ಸಲಕರಣೆಗಳನ್ನೂ ಕೊಂಡಿಲ್ಲ. ಹೆಚ್ಚಿನ ಖರ್ಚೇ ಇಲ್ಲ.
ಗುರು: ಇನ್ನು ನಾನು ಹೇಳುವುದೇನಿದೆ? ಎಲ್ಲಾ ನೀವೇ ಅನುಭವಿಸಿದಿರಿ.
ಕೊಸರು: ಇನ್ನು ನಾನೇನು ಬರೆಯಲಿ? ಅಲ್ಲಿ ನಡೆದ ಸಂಭಾಷಣೆಯನ್ನು ಕೇಳಿದವರ ಮೇಲೆ ಆದಷ್ಟು ತೀವ್ರ ಪರಿಣಾಮ ಇಲ್ಲಿ ಓದಿದವರ ಮೇಲೆ ಆಗಲಾರದೆಂದು ನನಗೆ ಗೊತ್ತು. ಗುರುವಿನ ಪ್ರತ್ಯಕ್ಷ ಸಾನ್ನಿಧ್ಯವೇ ಹಾಗೆ.
ಘಟನೆ-2
ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲೇನು?
ಹಳಸಿನಹಣ್ಣು ಅಪರೂಪಕ್ಕೆ ಮನೆಗೆ ತಂದಿದ್ದೆ. ನಮ್ಮ ಪಕ್ಕದ ಮನೆ ಸೂರಿ ಬಂದ.ಅಂಕಲ್ , ಹಳಸಿನ ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ? ಅಂತಾ ಹೇಳ್ತಾ ನನ್ನ ಉತ್ತರವನ್ನೂ ಕೇಳದೆ ಪಕ್ಕದಲ್ಲಿ ಕುಳಿತು ನಾನು ಹಣ್ಣು ಕೊಯ್ದಂತೆಲ್ಲಾ ಅದರಿಂದ ತೊಳೆ ಬಿಡಿಸುತ್ತಾ, ಮಧ್ಯೆ ಮಧ್ಯೆದಲ್ಲಿ , ಒಂದು ತೊಳೆ ರುಚಿ ನೋಡ್ತೀನಿ, ಅಂತಾ ಹಣ್ಣು ಬಿಡಿಸುವುದರಲ್ಲಿ ಅರ್ಧ ಖಾಲಿ ಮಾಡಿದ್ದ.
ನನ್ನ ಮಗ " ಅಪ್ಪಾ, ಹಳಸಿನ ಹಣ್ಣು ತಿಂದ್ರೆ ಏನೂ ತೊಂದರೆ ಆಗಲ್ವಾ? ಊಟಕ್ಕಿಂತ ಮುಂಚೆ ತಿನ್ ಬೇಕೂ ಅಂತಾರೆ, ಅದರ ಬೀಜ ಸುಮ್ನೆ ಬಿಸಾಕೋದ? " ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳ್ತಾ ಕೂತಿದ್ದ. ಹಣ್ಣು ಬಿಡಿಸಿ ಮುಗಿದಮೇಲೆ ನನ್ನ ಪತ್ನಿ ಅಡಿಗೆ ಮನೆಯೊಳಗಿಂದಲೇ ಕೂಗಿ ಹೇಳಿದ್ಲು" ಪಕ್ಕದ ಮನೆಗೆ ಅರ್ಧ ಕೊಟ್ಟು ಕಳಿಸಿ, ಸೂರಿ ಅಪ್ಪಂಗೆ ಹಳಸಿನ ಹಣ್ಣು ಅಂದ್ರೆ ತುಂಬಾ ಇಷ್ಟ."
-"ಹೌದು ಅಂಕಲ್ ನಮ್ಮಪ್ಪಂಗೆ ಹಳಸಿನ ಹಣ್ಣು ಅಂದ್ರೆ ಬಲು ಇಷ್ಟ. ಆದರೆ ನಮ್ಮಮ್ಮ ಯಾವಾಗ್ಲೂ ಅವರ ಜೊತೆ ಪೇಟೆಗೆ ಹೋಗ್ದಲೇ ಇರುಲ್ಲ, ನಮ್ಮಪ್ಪ ಹಳಸಿನ ಹಣ್ಣು ತರೋದಕ್ಕೆ ಅಮ್ಮ ಬಿಡಲ್ಲ."
- ಆಯ್ತಪ್ಪ ,ಒಳಗಡೆ ಹೋಗಿ ಒಂದು ಪಾತ್ರೆ ತಗೊಂಡು ಬಾ, ಹಣ್ಣು ತಗೊಂಡು ಹೋಗು.
ಅಡಿಗೆ ಮನೆಗೆಹೋದ ಸೂರಿ ಒಂದು ಸ್ಟೀಲ್ ಬಾಕ್ಸ್ ತಂದ, ಅದಕ್ಕೆ ಎಷ್ಟು ಹಾಕಿದರೂ ಅದರ ಅರ್ಧಾನೂ ತುಂಬಲಿಲ್ಲ." ಇವು ನಾಲ್ಕು ತೊಳೆ ನಮ್ಮನೆಗಿರಲಿ, ಇದನ್ನು ತಗೊಂಡು ಹೋಗು" ಅಂತಾ ಅವನಿಗೆ ಹಣ್ಣು ಕೊಟ್ಟು ಕಳಿಸಿದೆ.
Comments
ಚಿಕ್ಕದಾದ ಚಿಂತನಯೋಗ್ಯ
ಚಿಕ್ಕದಾದ ಚಿಂತನಯೋಗ್ಯ ಪ್ರಸಂಗವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ. ಧನ್ಯವಾದಗಳು ಸರ್. ಹಲವು ಬಾರಿ ನಾವು ನಿರ್ಲಕ್ಷಿಸಿಬಿಡುವ ಸಣ್ಣ ಸಂಗತಿಗಳೇ ನಮಗೆ ಬದುಕಿನ ಬಗೆಗೆ ಮಹತ್ವದ ಪಾಠವನ್ನು ಕಲಿಸುತ್ತವೆ.
In reply to ಚಿಕ್ಕದಾದ ಚಿಂತನಯೋಗ್ಯ by hema hebbagodi
ಧನ್ಯವಾದಗಳು, ಹೇಮಾ ಭಗಿನಿ.
ಧನ್ಯವಾದಗಳು, ಹೇಮಾ ಭಗಿನಿ.
ಅಧ್ಯಯನದ ಕೊರತೆ ಇದೆ.
ಅಧ್ಯಯನದ ಕೊರತೆ ಇದೆ. ಜಾಳುಜಾಳಾಗಿದೆ :)
In reply to ಅಧ್ಯಯನದ ಕೊರತೆ ಇದೆ. by ಗಣೇಶ
ಗಣೇಶ್, ಅದೆಷ್ಟು ಕೀಟಲೆ
ಗಣೇಶ್, ಅದೆಷ್ಟು ಕೀಟಲೆ ಮಾಡುತ್ತೀರೋ ಮಾಡಿ :)