ಚಿಕಿತ್ಸೆಗೊಂದು ಚಿಂತೆ

ಚಿಕಿತ್ಸೆಗೊಂದು ಚಿಂತೆ

 
"...ಏನ್ ರಶ್ ಅದರಿ ಟೀಚರ ಹಾಳಾದ್ 'ಸೂಪರ್' ಇವತ್ತು,ಒಂದೊಂದ್ ದಿನ ಇಷ್ಟು ಖಾಲಿ ಇರ್ತದ, ಇವತ್ತ್ ನೋಡಿದ್ರ ಈ ಪರಿ ಮಂದಿ ತುಂಬ್ಯಾರ, ಇಷ್ಟ್ ಮಂದಿ ದಿನಾ ಎಲ್ಲಿ ಹೋಗ್ತಾರೋ ಸುಡ್ಲಿ,ಇವತ್ತಂತು ರಿಸೆರ್ವಶನ್ ಡಬ್ಬಿನಾಗ ಒಬ್ಬಾತ ನನ್ನ್ ಜೊತಿ ಝಗಳಕ್ಕ ನಿಂತ್ ಬಿಟ್ಟ.ಒಟ್ಟ ಈ ಬ್ಹೊಗಿನಾಗ ಕೂಡ್ಬ್ಯಾಡ ಅಂತಾನ.ಇಂಗ್ಲಿಷ್ನಾಗ ಬ್ಯಾರೆ ಥಡಾ-ಥಡಾ ಬೈಲಿಕ್ಕೆ ಶುರು ಮಾಡಿಬಿಟ್ಟ.ಜನರಲ್ ಮಂದಿಗೆ ಈ ಬ್ಹೊಗಿನಾಗ ಎಂಟ್ರಿನ ಇಲ್ಲಾ ಅಂತ ಮಾರಿ-ಮಾರಿ ತಿವಿಲಿಕ್ಕೆ ಹತ್ಯಾನ.ನಾನ್ ಇಷ್ಟು ದಿನ ಸಾಲಿ ಕಲ್ಸಿದ್ರು ನನಗ ಈ ಇಂಗ್ಲಿಷ್ ಒಂದ್ ಬರಂಗಿಲ್ಲಾ ನೋಡ್ರಿ ಟೀಚರ.ನನ್ ಮಗಳಿರಬೇಕಿತ್ತು,ಆಕಿ ಆತಗ ಸರಿ-ಸರಿ ಉತ್ತರ ಕೊಡ್ತಿದ್ಲು.ಹೋಗ್ಲಿ, ನಿಮ್ಮ ಭೋಗಿ ಒಂಚೂರ್ ಹರಾಹುರಿ ಅದ ನೋಡ್ರಿ.ರಾಯಚೂರ್ ಮುಟ್ಟತನಾ ನಮಗ ಈ ಕಿರಿಕಿರಿ ತಪ್ಪಿದ್ದಲ್ಲ ನೋಡ್ರಿ" ಎಂದು ತರಾತುರಿಯಲ್ಲಿ ನನ್ನ ಭೋಗಿಗೆ ಹತ್ತಿದ ಒಬ್ಬ ಹೆಂಗಸು ತನ್ನ ಸಹೋದ್ಯೋಗಿ ಜೊತೆಗೆ ಹರಟುತ್ತಾ ಕುಳಿತ್ತಿದ್ದಳು.
 
ಹಿಂದಿನ ಸಂಜೆ ಮುಂಬೈ ಬಿಟ್ಟ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ,ಚೆನ್ನೈ ಮುಟ್ಟುವ ಧಾವಂತದಲ್ಲಿ ಎದುರುಸಿರು ಬಿಡುತ್ತಾ ಕಲ್ಬುರ್ಗಿ ಧಾಟಿ ರೈಚೂರ್ ಕಡೆ ತನ್ನ ಪ್ರಯಾಣ ಮುಂದುವರೆಸಿತ್ತು.ವಾಡಿ ಜಂಕ್ಷನ್ ಬರುವಷ್ಟರಲ್ಲಿ ತಮ್ಮನ್ನು ನಿದ್ದೆಯಿಂದ ಹೊಡೆದೆಬ್ಬಿಸಿದ ಬಿಸಿಲಿನ ಝಳಕ್ಕೆ ಟ್ರೇನಿನ ಒಳಗಿದ್ದ ಪ್ರಯಾಣಿಕರು ಹಿಡಿ ಶಾಪ ಹಾಕುತ್ತಾ ನೆಟಗಿ ಮುರಿಯುತ್ತಿದ್ದರು."ಹಾ..ಹಾ ಏನ್ ಬಿಸ್ಲು.. ಇನ್ನ ಫೆಬೃವರಿನಾಗೆ ಹಿಂಗ್ ಬಿಸ್ಲಿದ್ರೆ ಏಪ್ರಿಲ್-ಮೇ ಗತಿ ದೇವ್ರೇ ಬಲ್ಲಾ.." ಎಂದೆಂದೂ ಕೊಳ್ಳುತ್ತಾ ಎದ್ದು ಹಲ್ಲು-ಮಾರಿ ಮಾಡಿಕೊಳ್ಳಲು ಓಡಾಡುತ್ತಿದ್ದರು.ಗುಲ್ಬರ್ಗಾ(ಕಲ್ಬುರ್ಗಿ) ಹಾಗೂ ರೈಚೂರ್ ನಡುವೆ ಅತ್ಯಂತ ವೇಗವಾಗಿ ಆಫಿಸ್ ವೇಳೆಗೆ ಸರಿಯಾಗಿ ಜನರನ್ನು ರೈಚೂರ್ ತಲುಪಿಸುವ ಏಕೈಕ ಟ್ರೈನ್ ಇದಾಗಿದ್ದರಿಂದ ಸುಮಾರು ಸಂಖೆಯಲ್ಲಿ ಜನರು ಈ ಟ್ರೈನಿನಲ್ಲಿ ಪ್ರಯಾಣಿಸುತ್ತಿದ್ದರು. ಜನ ಜನರಲ್ ಟಿಕೆಟ್ ತೆಗೆದುಕೊಂಡು ರೈಚೂರ್ ಬರುವವರೆಗೂ ಯಾವುದಾದರು ಸಿಕ್ಕ ಡಬ್ಬಿಯಲ್ಲಿ ಕೂತು ಪ್ರಯಾಣ ಮಾಡುವುದು ಇವರಲ್ಲಿ ಒಂದು ಅಲಿಖಿತ ನಿಯಮ.ಆದರೆ ಕೆಲವೊಮ್ಮೆ ಟಿಕಿಟ್ ಕಲೆಕ್ಟರ್ ಅಥವಾ ಸಹಪ್ರಯಾಣಿಕರಿಂದ ಬೈಸಿಕೊಂಡು ಯಾತನೆ ಅನುಭವಿಸುವುದು ಅವರ ನಿತ್ಯ ನರಕದ ಒಂದು ಭಾಗ.
  
"ಇವರ್ನ್ನ ಎಲ್ಲೋ ನೋಡಿದ್ಹಂಗ್ ಅದಲ್ಲಾ ? .." ಎಂದು ನನ್ನ ಮನಸ್ಸು ಹೇಳಿದರೂ ,ಮತ್ತೊಮ್ಮೆ , ಇರ್ಲಿಕ್ಕಿಲ್ಲಾ, ಕಲ್ಬುರ್ಗಿಯೊಳಗೆ ನನಗ ಗೊತ್ತಿದ್ದವ್ರು ಈಗ ಯಾರು ಇಲ್ಲಾ ಹಿಂಗಾಗಿ ಇವ್ರ್ ಪರಿಚಯ ನನಗ ಇಲ್ಲಾ ಎಂದು ಖಾತ್ರಿ ಮಾಡಿಕೊಂಡೆ.
 
ಆಕೆ ಒಬ್ಬ ಮಧ್ಯ ವಯಸ್ಸಿನ ಹೆಂಗಸು,ನೈಲಾನ್ ಕೈ ಚೀಲದಲ್ಲಿ ಇದ್ದ ಟಿಫಿನ್ ಡಬ್ಬಿ ಹಾಗು ಕೆಲ ಪುಸ್ತಕಗಳು ಆಕೆ ಶಿಕ್ಷಕಿ ಎಂದು ಹೇಳುತ್ತಿತ್ತು. ನಮ್ಮ ಹೈದ್ರಾಬಾದ್ ಕರ್ನಾಟಕದ ಶಾಲೆಗಳಲ್ಲಿ ತನ್ನ ಜೀವನದ ಬಹುಭಾಗವನ್ನು ಸೋಸಿ ಸೋತು ಸುಣ್ಣವಾದ ವ್ಯಕ್ತಿತ್ವ,ಎಣ್ಣೆಗೆಂಪು ಬಣ್ಣ,ಬುಡುಮಿಕಾಯಿಯ ಹಾಗೆ ಕುಳ್ಳನೆಯ ಧಡೂತಿ ಶರೀರ.ಹೆರಳಿನ ಕೋನೆಯನ್ನು ಒಂದು ಕೆಂಪು ರಿಬ್ಬನ್ನಿಂದ ಗುತ್ತಾಗಿ ಕಟ್ಟಿದ್ದರಿಂದ ಅದು ಒಂದು ಚೋಳಿನ ಕೊಂಡಿಯಂತೆ ಸೆಟೆದು ನಿಂತಿತ್ತು.ಯಾವುದೇ ಚೌರಿಯ ಸಹಾಯವಿಲ್ಲದೆ ಇದ್ದ ಅದಷ್ಟೇ ಕುದಲಗಳನ್ನು ಯಾವುದೇ ನಾಜುಕಿಲ್ಲದೆ ಚಿಕ್ಕ ಹುಡುಗಿಯರ ಹಾಗೆ ಕಟ್ಟಿದ್ದು ಸ್ವಲ್ಪ ಕುತೂಹಲವಾಗಿ ಕಂಡರೂ ಅದು ಅವರ ಯಥಾರ್ಥಕ್ಕೆ ಹಿಡಿದ ಕನ್ನಡಿಯಾಗಿತ್ತು.
 
ಸೀಟು ಸಿಕ್ಕ ಖುಷಿಯಲ್ಲಿ ಟೀಚರ್ ಸುಧಾರಿಸಿಕೊಳ್ಳುತ್ತಾ ಅವರ ಸಹುದ್ಯೋಗಿಯೊಂದಿಗೆ " ಅಂದಂಗ್ ಎಲ್ಲಿಗಿ ಬಂತ್ರಿ ನಿಮ್ಮ ಸೆನ್ಸಸ್ ಕೆಲ್ಸಾ ? ನಿಮ್ಮ ಕೋಟಾ ಮುಗಿತೋ ,ಇಲ್ಲೋ ?...ಟ್ರೇನಿಂಗ ಹೆಂಗಾಯಿತು..? ಯಂದದ ಇದರ ಲಾಸ್ಟ್ ಡೇಟ್.." ಎಂದು ಹರಟುತ್ತಿದ್ದರು.
 
ಇತ್ತೀಚಿಗೆ ಒಪ್ಪಿಸಿದಂಥಾ ಜನಗಣತಿಯ ಎಲ್ಲ ಮಜಲುಗಳನ್ನು ಅವರಿಬ್ಬರೂ ಚರ್ಚಿಸುತ್ತಿದ್ದರಿಂದ ನಾನು ಕುತೂಹಲದಿಂದ ಅವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದೆ. ನಮ್ಮ ದೇಶದ ವೈವಿದ್ಯತೆಯ ದೃಷ್ಟಿಯಿಂದ ಜನಗಣತಿಯ ಅಭಿಯಾನ ಒಂದು ಸವಾಲೇ ಸರಿ.ನೀವು ಇದರಲ್ಲಿ ಭಾಗಿಯಾಗಿದ್ದಾರೆ ಅವರು ನಿಮಗೆ ಪ್ರಶ್ನೆಗಳನ್ನು ಕೇಳಿ ಒಂದು ಉದ್ದನೆಯ ಪಟ್ಟಿ ತುಂಬಿಸಿಕೊಳ್ಳುವುದು ನಿಮಗೆ ಗೊತ್ತಿರುವ ವಿಶಯ.
 
ಹೀಗೆ ಮಾತಾಡುತ್ತಾ ಅವರು ನಾನು ರೈಚುರಿನಲ್ಲಿ ಓದುತ್ತಿದ್ದ ರಾಮಶಾಲೆಯ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಂಡೆ.ರಾಮ ಶಾಲೆ ಎಂದೇ ಪ್ರಸಿದ್ಹಿ ಪಡೆದ ಶಾಲೆಯ ನಿಜವಾದ ಹೆಸರು ಶ್ರೀ ಶಾರದಾ ಕನ್ಯಾ ಪಾಠಶಾಲೆ,ಆದರೆ ಸಾಕಷ್ಟು ಸಂಖ್ಯೆಯ 'ವರ' ವಿದ್ಯಾರ್ಥಿಗಳನ್ನು ಅವರು ಸೇರಿಸಿಕೊಳ್ಳುತ್ತಿದ್ದರು.ಆದರೆ ಹೆಸರು ಮಾತ್ರ ಇನ್ನೂ ಕನ್ಯಾ ಪಾಠ ಶಾಲೆಯಾಗಿ ಉಳಿದು ಬಿಟ್ಟಿದೆ.ಈ ಕುರಿತಾಗಿ ಸಾಕಷ್ಟು ಸ್ನೇಹಿತರು ನನ್ನನ್ನು ರೇಗಿಸುತ್ತಿದ್ದ ವಿಚಾರ ನನಗೆ ಇಗಲೂ ನೆನಪಿದೆ.
 
ನಾನು ಕಲಿತ ಶಾಲೆಯ ಟೀಚರ್ ಇವರಾಗಿದ್ದರಿಂದ ಇವರ ಪರಿಚಯ ನನಗಿರಬಹುದೆಂಬ ನನ್ನ ಮೊದಲಿನ ಅನುಮಾನ ಈಗ ಸ್ಪುಟವಾಗತೊಡಗಿತು. ತಲೆಗೆ ಸ್ವಲ್ಪ ಕೆಲಸ ಕೊಟ್ಟಮೇಲೆ "ನೀವು ರಮಾ ಟೀಚರ್ ಹೌದಲ್ರೀ ?" ಎಂದು ಕೇಳಿದೆ.ಆಗ ಅವರು ಹೌದೆಂದು ನನ್ನ ಪರಿಚಯ ಮಾಡಿಕೊಂಡಮೇಲೆ ಸಹಜವಾದ "ಅರಾಮಿದ್ದಿರೀ.. ? ನೀವು ಆರಾಮ..?"ಗಳಾದವು.
 
ಮುಂದೆ ಅವರು ನಮ್ಮ ಶಾಲೆಯ ಕುರಿತು ಮಾತಾಡುತ್ತಾ ಬಹಳ ಭಾವನಾತ್ಮಕವಾಗಿ ತಮ್ಮ ಹಲವಾರು ಸಹದ್ಯೋಗಿಗಳ ಜೊತೆಗಿನ ಸಿಹಿ ಘಳಿಗೆಗಳನ್ನು ನೆನಪಿಸಿಕೊಳ್ಳುತ್ತಾ "ನೀವ್ ಇದ್ದಾಗ ಚ್ಹೊಲೋ ಇತ್ತ್  ನೋಡಪಾ..ಮೊದಲಿನಂಗ ಸಾಲಿ ಕಲ್ಸೋ ಮಜಾ ಈಗ ಉಳದಿಲ್ಲ ನೋಡು" ಎಂದು ಪದೆ ಪದೆ ಹೇಳುತ್ತಿದ್ದುದು ಅವರು ಇತ್ತೀಚಿಗೆ ಅನುಭವಿಸುತ್ತಿರುವ ಮಾನಸಿಕ ಒತ್ತಡಗಳ ಒಂದು ಸೂಕ್ಷ್ಮ ಪರಿಚಯ ತೆರೆದಿಟ್ಟಿತು.ಬದಲಾಗುತ್ತಿರುವ ತೀವ್ರ ಸ್ವರೂಪದ ಸ್ಪರ್ಧಾತ್ಮಕ ಶೈಕ್ಷಣಿಕ ಪದ್ಧತಿ,ಕ್ಷಯವಾಗುತ್ತಿರುವ ಗುರು ಶಿಷ್ಯರ ಸಂಬಂಧ, ಚುನಾವಣೆ,ಜನಗಣತಿ, ಹೀಗೆ ಇನ್ನು ಹೆಚ್ಚಿದ ಹಲವು ನಿರೀಕ್ಷೆಗಳಿಂದ ಅವರು ಬಸವಳಿದು ಹೋಗಿದ್ದಾರೆ ಎಂದೆನಿಸಿತು.
 
ಹೀಗೆ ಮಾತು ಮಾತಲ್ಲಿ ಅವರು ತಮ್ಮ ದಿನಚರಿಯ ಬಗ್ಗೆ ಹೇಳುತ್ತಾ ತಮ್ಮ ಪ್ರತಿ ದಿನದ ರಾಯಚೂರು-ಗುಲ್ಬರ್ಗಾ ನಡುವಿನ ಪ್ರಯಾಣ ಹಾಗು ಗುಲ್ಬರ್ಗಾದಲ್ಲಿ ತಾವು ಬಾಡಿಗೆ ಮನೆ ಮಾಡಿರುವುದಾಗಿಯೂ ಹೇಳಿದರು. ನನಗೆ ತಿಳಿದ ಮಟ್ಟಿಗೆ ರಮಾ ಟೀಚರ್ ಕಳೆದ 30 ವರ್ಷಗಳಿಂದ ರಾಯಚುರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರು ಅಲ್ಲಿಯೇ ಸ್ವಂತ ಮನೆ ಮಾಡಿಕೊಂಡಿದ್ದರು.ಹೀಗಾಗಿ ನಾನು ಅವರಿಗೆ "ಟೀಚರ್, ನಿಮ್ಮ ಮನಿ ರೈಚೂರ್ನಾಗ ಅದಲ್ರಿ,ಮತ್ತ ನೀವ್ಯಾಕ ಟ್ರೈನ್ನಾಗ ಅಡ್ದ್ಯಡಿಕೋತ ಇಷ್ಟೊಂದ್ ಹೈರಾಣ್ ಆಗ್ತೀರಿ"ಎಂದು ಕೇಳಿದೆ.
 
ಆಗವರು ,"ನೋಡಪಾ, ಈ ಸ್ವಲ್ಪ ದಿನಗಳ ಹಿಂದೆ ಅಚಾನಕ್ಕಾಗಿ ವಯಸ್ಸಿಗೆ ಬಂದ ಮಗನ್ನ ಕಳ್ಕೊಂಡೆ,ತಡಿಲಾರದಷ್ಟ ದುಃಖ ಆಗ್ಯದ ,ದುಃಖ ಮರಿಬೇಕೆಂದ್ರ ಜನರ ಜತಿ ಬೆರಿಬೇಕು,ಇಲ್ಲಾಂದ್ರ ಆ ಅಘಾತದಿಂದ ಜೀವನ ಹಿಂಡಿ ಹಿಪ್ಪಿ ಆಗ್ತದ,ರಾಯಚುರ್ನಾಗ ಇದ್ರ ಅದ ಗುಂಗ್ನಾಗ ನೆನೆಪ್ ಭಾಳ ಕಾಡ್ತದಪಾ.. ಹಿಂಗಾಗಿ ಏಕಾಏಕಿ ರಾಯಚೂರ್ ಬಿಟ್ಟ್ ಗುಲ್ಬರ್ಗಾ ಸೇರಿದ್ವಿ.ಹೀಂಗ ಕೆಲ್ಸದಾಗ,ರಾಯಚೂರ್-ಗುಲ್ಬರ್ಗಾ ನಡುವ ಹೋಗೋ ಬರೋ ಮಂದಿ ಜೊತಿ ಮಾತಾಡ್ಕೋತ ಸ್ವಲ್ಪರೆ ಮಗ ಕಳ್ಕೊಂಡ ದುಃಖ ಮರಿಯೋ ಪ್ರಯತ್ನ ಮಾಡ್ತೀನಿ.ಮಗನ್ನ ಕಳ್ಕೊಂಡ ದುಃಖದ ಮುಂದ ಈ ಟ್ರೈನ್ನಾಗ ದಿನಾ ಪಡೋ ಝನ್ಜಾಟ ಏನ್ ಧೋಡದಲ್ಲ ಬಿಡ.." ಎಂದು ಹೇಳಿದರು.
 
ಟ್ರೈನಿನಿಂದ ಇಳಿದ ಮೇಲೆ ನಾನು ಅವರು ಒಂದೇ ಆಟೋದಲ್ಲಿ ಕುಳಿತೆವು,ಆಟೋ ನನ್ನನ್ನು ಹತ್ತಿರದ ಬಸ್ಸ್ ಸ್ಟ್ಯಾಂಡಿಗೆ ಬಿಟ್ಟು ರಾಮ ಶಾಲೆಯ ಕಡೆಗೆ ಹೊರಟಿತು.
 
Rating
No votes yet

Comments