ಕತೆ : ಮನಸೆ

ಕತೆ : ಮನಸೆ

ಅವನ ಮನಸಿಗೆ ವಿಚಿತ್ರವೆನಿಸಿತ್ತು. ಅವನು ಎಂದು ಆ ಲೋಕಕ್ಕೆ ಬಂದ ನೆನಪಿಲ್ಲ. ಅಂದು ಕೊಳ್ಳುತ್ತಿದ್ದ
" ಹುಟ್ಟಿ ಐವತ್ತು ವರ್ಷಗಳಾಯಿತೇನೊ ಎಂದು ಈ ಅನುಭವವಾಗಿರಲಿಲ್ಲವೆ " ಎಂದು.
ರಾತ್ರಿ ಮಲಗಿ ಅರ್ಧ ಒಂದು ಘಂಟೆ ಕಳೆದಿತ್ತೇನೊ ಅವನ ಮನ ಅದ್ಯಾವುದೋ ಲೋಕವನ್ನು ಪ್ರವೇಶಿಸಿತ್ತು. ಗಾಳಿಯಲ್ಲಿ ತೇಲುವ ಸುಂದರ ಅನುಭವ. ಸುತ್ತಲು ಕಾಮನ ಬಿಲ್ಲು ಕಟ್ಟಿರುವಂತೆ ವರ್ಣಗಳ ಲೋಕ. ನಡೆಯುವಾಗಲು ತೇಲುತ್ತಿರುವ ಅನುಭವ. ಯಾವುದೆ ಬಂಧನವಿಲ್ಲದ ಸುಮದುರ ಅನುಭವ.

ನಂತರ ಗಮನಿಸಿದ ತಾನೋಬ್ಬನೆ ಅಲ್ಲ ಅಲ್ಲಿರುವುದು, ತನ್ನಂತೆ ನೂರಾರು ಸಾವಿರಾರು ಮನಸುಗಳು ಅಲ್ಲಿ ವಿಹರಿಸುತ್ತಿವೆಯಲ್ಲ. ಹಾಗಾದರೆ ಇದು ಯಾವ ಲೋಕ. ಒಡನೆ ಅವನಿಗೆ ಒಂದು ಅನುಮಾನ ಆವರಿಸಿತು.
’ಹಾಗಾದರೆ ನಾನು ರಾತ್ರಿ ಮಲಗಿದ ನಂತರ ಸತ್ತು ಹೋದೆನ, ಇದು ಯಮಲೋಕವೊ ಇಂದ್ರಲೋಕವೊ ಇರಬಹುದೆ?"
 ತಕ್ಷಣ ಅಂದು ಕೊಂಡ ಇರಲಾರದು, ಯಮಲೋಕವಿದ್ದಲ್ಲಿ ಮನಸು ಇಷ್ಟು ಹಗುರವಿರಲಾರದು, ಹಿಂಸೆ ತುಂಬಿರುತ್ತಿತ್ತು ಅನ್ನಿಸುತ್ತೆ ಹಾಗಿದ್ದಲ್ಲಿ ಇದು ಇಂದ್ರಲೋಕವೆ ಇರಬಹುದೆ. ಅಂದರೆ ತಾನು ಭೂಮಿಯನ್ನು ಬಿಟ್ಟು ದೇಹವನ್ನು ತ್ಯಜಿಸಿ ಮೇಲಿನ ಲೋಕಕ್ಕೆ ಬಂದಿರುವೆನೆ. ಹೆಂಡತಿ ಮಕ್ಕಳು ಎಲ್ಲರನ್ನು ತೊರೆಸಿ ತನಗೆ ಅರಿವಿಲ್ಲದೆ ಸಾವು ತನ್ನನ್ನು ಇಲ್ಲಿಗೆ ಕರೆತಂದಿದೆಯ

ಹಾಗೆ ಗಮನಿಸಿದ, ತನ್ನನ್ನು ಹಲವಾರು ಮನಸುಗಳು ಗಮನಿಸುತ್ತಿವೆ, ಅವರೆಲ್ಲರು ತನ್ನತ್ತ ನೋಡಿ ಮುಗುಳ್ನಗುವುದು ಕಾಣುತ್ತಿದೆ ಆದರೆ ತಾನು ಯಾರ ಜೊತೆಗು ಮಾತನಾಡಲು ಸಾದ್ಯವಾಗುತ್ತಿಲ್ಲ. ಅಸಲಿಗೆ ಮಾತನಾಡಲು ಬೇಕಾದ ದೇಹವೆ ಇಲ್ಲವಲ್ಲ. ಹಾಗೆ ಸುಖಾನುಭವದ ಜೊತೆ ಸುತ್ತುತ್ತಿರಬೇಕಾದರೆ. ಅಲ್ಲೊಂದು ಸುಂದರ ಮುಖ ಕಾಣಿಸಿತು, ಹೂವಿನ ಮಂಟಪದಲ್ಲಿ ಕುಳಿತ ಮನ್ಮಥನ ತರದಲ್ಲಿ, ತೇಲುತ್ತಿರುವ ಸುಖಾಸನದಲ್ಲಿ ಕುಳಿತಿದ್ದ, ಆ ವ್ಯಕ್ತಿ , ಅವನನ್ನು ಕುರಿತು ಕೇಳಿತು
"ಸ್ವಾಗತ ಮನಸುಗಳ ಲೋಕಕ್ಕೆ, ಹೇಗಿದೆ ಇಲ್ಲಿಯ ಅನುಭವ"
ಮೊದಲ ಬಾರಿಗೆ ಅಲ್ಲಿಯ ಒಂದು ಜೀವಿ ಅವನೊಡನೆ ಮಾತನಾಡಿತ್ತು. ಆದರೆ ಅಲ್ಲಿ ವಿಚಿತ್ರವೊಂದಿತ್ತು, ದ್ವನಿ ಅವನಿಗೆ ಕೇಳಿಸಿತು ಹೊರತಾಗಿ , ಅ ವ್ಯಕ್ತಿ ಮಾತನಾಡಲೆ ಇಲ್ಲ, ಅವನತ್ತ ನೋಡಿ ಮುಗುಳ್ನಗುತ್ತಿತ್ತು. ಅಂದರೆ ಇದು ಮನಸುಗಳ ನಡುವಿನ ಸಂಬಾಷಣೆ ಇರಬಹುದೆ
"ಖಂಡಿತ, ನೀನು ಪ್ರಯತ್ನಪಡು ಹಾಗೆ ಮಾತನಾಡಬಹುದು, ಅದರಲ್ಲಿ ವಿಶೇಷವೇನು ಇಲ್ಲ. ಇಲ್ಲಿ ಬರಿ ಮನಸುಗಳದೆ ಲೋಕ, ಮತ್ತೆ ಯಾರಿಗು ಪ್ರವೇಶವಿಲ್ಲ"
ಅವನು ಹೇಳಿದ
"ನನಗೆ ಸಂತಸವಾಗುತ್ತಿದೆ, ಇಲ್ಲಿಯ ಅನುಭವವು ಹಿತಕರವಾಗಿದೆ, ಆದರೆ ಒಂದು ಅನುಮಾನ, ಮನಸಿನ ಲೋಕವೆಂದರೆ ಏನು?. ನಾನು ಇಲ್ಲಿ ಹೇಗೆ ಬಂದೆ, ನಾನು ಈಗ ಸತ್ತಿರುವೆನ? "

ಅತ್ತಲಿಂದ ಹಿತಕರವಾದ ಮುಗುಳ್ನಗು
"ನೋಡಿದೆಯ ನೀನು ಸಹ ಮನಸಿನ ಮೂಲಕವೆ ಮಾತನಾಡಲು ಕಲಿತೆಯಲ್ಲ.  ಇಂತಹ ಸುಖದ ಮನಸಿನಲ್ಲು ಇಷ್ಟೊಂದು ಪ್ರಶ್ನೆಯೆ. ಎಲ್ಲವು ತಿಳಿಯುತ್ತದೆ, ನೀನು ಸತ್ತಿಲ್ಲ ಬದುಕಿಯೆ ಇರುವೆ, ಅದಕ್ಕಾಗಿಯೆ ನಿನ್ನ ಮನ ಯೋಚಿಸುತ್ತಿದೆ. ಮನಸಿನ ಲೋಕವೆಂದರೆ ಮನಸಿನ ಲೋಕ ಅಷ್ಟೆ ಅನುಮಾನ ಏನಿದೆ ಅದರಲ್ಲಿ. ಪ್ರಪಂಚದಲ್ಲಿ ಎಷ್ಟೊ ದೇಶಗಳಿವೆ, ನೆಲ ಜಲ ವಾಯು ಲೋಕಗಳಿವೆ ಹಾಗೆ ಇದು ಮನಸಿನ ಲೋಕ."

ಅವನು ಹೇಳಿದ "ಸರಿ ಅರ್ಥವಾಯಿತು, ಇದು ಮನಸಿನ ಲೋಕ, ಆದರೆ ಇಲ್ಲಿ ಬರುವದಾದರು ಹೇಗೆ, ಬೇಕು ಎಂದಾಗ ಬರಬಹುದೆ, ಇಲ್ಲಿಗೆ ಒಡೆಯನಾರು. ಮತ್ತೆ ಹಿಂದೆ ಹೋಗುವದು ಹೇಗೆ"

ಎದುರಿಗೆ ಇರುವನ ಮುಖದಲ್ಲಿ ಸುಂದರ ನಗೆ ತುಂಬಿಕೊಂಡಿತು

"ಇಲ್ಲಿ ಬರುವುದು ಸುಲುಭ ನಿನಗೆ ಬೇಕು ಅಂದಾಗ ಬರಬಹುದು. ಇಲ್ಲಿ ನಿನ್ನ ಮನಸಿಗೆ ನೀನೆ ಒಡೆಯ. ಇಷ್ಟು ತಿಳಿ, ಯಾವಾಗ ನಿನ್ನ ಮನ ಎಲ್ಲ ಇಂದ್ರೀಯಗಳಿಂದ ಮುಕ್ತವಾಗುವುದು, ಆಗ ನೀನೆ ಮನಸಿನ ಒಡೆಯ. ಯಾರು ಇಂದ್ರೀಯ ಮುಕ್ತರೊ ಅವರು ಈ ಲೋಕಕ್ಕೆ ಬರಬಹುದು. ಎಲ್ಲಿಯವರೆಗು ಅವರು ಇಂದ್ರಿಯ ಮುಕ್ತರೊ ಅಲ್ಲಿಯವರೆಗು ಪ್ರವೇಶ ಸಿದ್ದ. ಪುನಃ ಅವರು ಇಂದ್ರೀಯಗಳ ವಶವಾದರೆ ಸರಿ ಅವರ ಮನ ದೇಹದಲ್ಲಿ ಬಂದಿ. ದೇಹದಿಂದ ಹೊರಗೆ ಬರಲಾರರು."

ಅವನಿಗೆ ಇನ್ನು ಅರ್ಥವಾಗಿರಲಿಲ್ಲ, ದೇಹವನ್ನು ತೊರೆದು ಅಲ್ಲಿ  ಬರುವುದು ಹೇಗೆಂದು

ಅವನ ಮನದ ಮಾತು ಅರ್ಥಮಾಡಿಕೊಂಡವನಂತೆ ಎದುರಿಗಿರುವ ವ್ಯಕ್ತಿ ಹೇಳಿದ

"ನೀನು ಇಷ್ಟು ದಿನ ಒಂದು ವಿಷಯ ಚಿಂತಿಸಿದ್ದೀಯ, ಹಗಲೆಲ್ಲ ನಿನ್ನ ಮನ ಯಾವಾಗಲು ಎನಾದರು ಯೋಚನೆಯಲ್ಲಿಯೆ ಇರುವುದುಅಲ್ಲವೆ, ಆದರೆ ನೀನು ಮಲಗಿ ನಿದ್ರಿಸುವಾಗ ನಿನ್ನ ಮನ  ಏನು ಮಾಡುತ್ತಿರುವುದು. ಎಚ್ಚರದಲ್ಲಿ ಒಂದು ಕ್ಷಣ ಸುಮ್ಮನಿರದ ಮನ ನಿನ್ನ ದೇಹ ನಿದ್ರೆಯನ್ನು ಅಪ್ಪುವಾಗ, ಎಲ್ಲಿ ಹೋಗುವುದು?"

ಅವನು ಹೇಳಿದ
"ಎಲ್ಲಿ ಏನು ಮನಸ್ಸು ನಿದ್ರೆಮಾಡುವುದು, ಮೆದುಳು ಸ್ಥಬ್ದವಾಗುವುದು"

ಎದುರಿಗಿರುವ ಪುರುಷ ಹೇಳಿದ
"ಹಾಗಲ್ಲ, ಮನ ಯಾವ ಕ್ಷಣದಲ್ಲು ಸುಮ್ಮನಿರದು, ದೇಹ ನಿದ್ರೆ ಮಾಡುವಾಗ, ಮನಸು ಕಡೆಗೆ ಕನಸಿನ, ಸ್ವಪ್ನದ ರೂಪದಲ್ಲಾದರು ಚಟುವಟಿಕೆ ನಡೆಸೆ ತೀರುವುದು, ವಿವಿದ ಭಾವಗಳು ಸ್ವಪ್ನ ರೂಪದಲ್ಲಿ  ಹೊರಬರುವುದು"

ಅವನು ಹೇಳಿದ

"ಅರ್ಥವಾಯಿತು, ಅಂದರೆ ನಾನೀಗ ಸ್ವಪ್ನದಲ್ಲಿರುವೆ ಅಲ್ಲವೆ ?"

ಎದುರಿನ ಪುರುಷ ಹೇಳಿದ
"ಇಲ್ಲಿ ಇದು ಸ್ವಪ್ನಕ್ಕಿಂತ ಬೇರೆಯದೆ ಆದ ಸ್ಥಿಥಿ, ನೀನು ಸ್ವಪ್ನಕಾಣುವಾಗಲು ನಿನ್ನ ಮನ ದೇಹದ ಇಂದ್ರೀಯಗಳ ಅದೀನದಲ್ಲಿರುವುದು.ಯಾರ ಮನಸು ಇಂದ್ರೀಯ ಮುಕ್ತವೊ ಅವರು ದೇಹ ಮುಕ್ತರು,  ಅಂತಹ ಒಂದು ಸಹಜ ಸ್ಥಿಥಿಯನ್ನು ತಲುಪಿದಾಗ, ಇಲ್ಲಿ ಬರುವದಕ್ಕೆ ಅರ್ಹರು.  ನೀನು ದಿನಾ ರಾತ್ರಿ ಮಲಗುವೆ ಅಲ್ಲವೆ. ನಮ್ಮ ಎಚ್ಚರದ ಸ್ಥಿಥಿಯಲ್ಲಿ ಮನಸ್ಸು ಒಂದೆ ಒಂದು ಕ್ಷಣವದರು ಸುಮ್ಮನಿರುವುದೆ? ಇಲ್ಲ ಅಲ್ಲವೆ? ಸದಾ ಏನಾನ್ನಾದರು ಚಿಂತಿಸುತ್ತಲೆ ಇರುವುದು. ಕೆಲವೊಮ್ಮೆ ನಿನ್ನ ಕೈಗಳು ಕೆಲಸಮಾಡುವಾಗಲು, ಊಟ ತಿಂಡಿ ಮಾಡುವಾಗಲು,  ಹೆಂಡತಿ ಮಕ್ಕಳೊಡನೆ ಇರುವಾಗಲು ನಿನ್ನ ಮನ ಸದಾ ಏನನ್ನಾದರು ಚಿಂತಿಸುತ್ತಲೆ ಇರುವುದು.  ಆದರೆ ಒಮ್ಮೆ ನೀನ ಮನ ಎಲ್ಲ ಚಿಂತನೆಗಳಿದೆ ದೂರವಾಗಿ ನಿಶ್ಯಬ್ದವಾಗಿ ಇರಬಲ್ಲದು ಎಂದರೆ, ಅದು ದೇಹದಿಂದ ಮುಕ್ತವಾಗಲು ಸುಲುಭ. ಆಗ ಅದು ದೇಹವನ್ನು ಬಿಟ್ಟು ಸಹ ಹೊರಗೆ ಸಂಚಾರ ನಡೆಸಬಲ್ಲದು, ಅದನ್ನು ಯೋಗದ ಮೂಲಕ ಕೆಲವರು ಸಾದ್ಯವಾಗಿಸುವರು. ಆದರೆ ಕೆಲವರಿಗೆ ಅದು ಸಹಜವಾಗಿಯೆ ಬರುವುದು. ಅಂತಹ ಸ್ಥಿಥಿಯಲ್ಲಿ, ಅವರು ರಾತ್ರಿ ಮಲಗುವಾಗ ದೇಹವನ್ನು ನೆಲ್ಲಕ್ಕೆ ಒರಗಿಸಿ, ಕಣ್ಣು ಮುಚ್ಚುವಾಗಲೆ , ಮನಸು ದೇಹದಿಂದ ಮುಕ್ತವಾಗಿ ಸಂಚಾರ ನಡೆಸುವುದು, ಅಂತಹ ಮನಸುಗಳೆಲ್ಲ ಒಂದಡೆ ಸೇರುವೆವು ಅದುವೆ ಮನಸಿನ ಲೋಕ. ಇಲ್ಲಿ ದೇಹಭಾವವಿಲ್ಲ, ಹಾಗೆಯೆ ಇಂದ್ರೀಯಗಳ ಹಿಡಿತವಿಲ್ಲ"

ಅವನು ಹೇಳಿದ
"ಸರಿ ಆದರೆ ನಾನಿಗ ಸದಾ ಇಲ್ಲಿಯೆ ಇರುವೆನೆ,ಅಲ್ಲಿ ನನ್ನ ದೇಹ ಎಚ್ಚರಗೊಂಡರೆ ಏನು ಆಗುವುದು"

ಪುರುಷ ನಕ್ಕ
"ನಿನ್ನ ದೇಹ ಒಮ್ಮೆ ಎಚ್ಚರಗೊಂಡರೆ ಮುಗಿಯಿತು, ನೀನು ಸಹಜವಾಗಿಯೆ ಇಲ್ಲಿಂದ ಹೊರಹೋಗುವೆ, ನಿನ್ನ ಮನ ನಿನ್ನ ದೇಹವನ್ನು ಪುನಃ ಪ್ರವೇಶಿಸಿವುದು. ನಿನ್ನ ದೇಹ ತನ್ನ ನಿದ್ದೆಯ ಸಮಾದಿ ಸ್ಥಿಥಿಯಿಂದ ಎಚ್ಚರವಾಗುವ ಸ್ಥಿಥಿ ತಲುಪಿದೊಡನೆ ನಿನಗೆ ಇಲ್ಲಿ ಅರಿವಾಗುವುದು ನೀನು ಇಲ್ಲಿಂದ ಹೊರಡಬೇಕು ಎಂದು . ಆದರೆ ನೆನಪಿಡು, ಈ ಲೋಕದಲ್ಲಿ ನಿನ್ನ ಮನ ಒಮ್ಮೆ ಯಾವುದಾದರು ಭಾವನೆಗಳಿಗೆ ಒಳಗಾದರೆ, ಇಂದ್ರೀಯ ಸಂಬಂದಿತ ವಿಷಯಗಳಿಗೆ ವಶವಾದರೆ , ಪುನಃ ಇಲ್ಲಿ ಬರುವುದು ಕಷ್ಟ. ಪುನಃ ದೇಹದಲ್ಲಿ ಇದ್ದು ನೀನು ಈ ಸ್ಥಿಥಿಯನ್ನು ಸಾದಿಸುವವರೆಗು ಕಾಯಬೇಕು"

ಅವನು ಕೇಳಿದ
"ಅಂದರೆ ಇಂದ್ರೀಯಗಳ ಭಾವನೆ ತಟ್ಟುವುದು ಅಂದರೆ ಪಾಪವೆ,  ಅದಕ್ಕಾಗಿಯೆ ಈ ಸ್ವರ್ಗದಿಂದ ಹೊರಬೇಕು ಎಂದಲ್ಲವೆ ನಿನ್ನ ಮಾತಿನ ಅರ್ಥ"

ಪುರುಷ ನಗುತ್ತಿದ್ದ
"ಇಲ್ಲ , ಇಲ್ಲಿ ಸ್ವರ್ಗ ನರಕಗಳ ಮಾತೆ ಇಲ್ಲ,  ಪಾಪ ಪುಣ್ಯ ಎಲ್ಲ ಭಾವಗಳಿಂದ ಹೊರತಾದ ಲೋಕವಿದು, ನಿನ್ನ ಪಾಪ ಭಾವ ಹೇಗೆ ಮನಸಿಗೆ ಬಂದನವೊ ಹಾಗೆ ಪುಣ್ಯವೆನ್ನುವ ಭಾವ ಸಹ ಬಂದನವೆ. ಪಾಪ ಪುಣ್ಯ ಎಲ್ಲದರಿಂದ ದೂರವಾದ ಲೋಕವಿದು, ಶುದ್ದ ಶೂನ್ಯರಿಗೆ ಇಲ್ಲಿ ಪ್ರವೇಶ"

ಅವನಿಗೆ ಈಗ ಸ್ವಲ್ಪ ಸ್ವಲ್ಪ ಅರ್ಥವಾದಂತೆ ಅನ್ನಿಸಿತು. ಎಲ್ಲ ಭಾವಗಳಿಂದ ಮುಕ್ತವಾದ ಇಲ್ಲಿ ಇರುವುದು ಪರಮ ಸುಖ ಅಂದುಕೊಳ್ಳುತ್ತಿದ್ದ. ಹಕ್ಕಿಯಂತ ಅವನ ಮನ ಅಲ್ಲೆಲ್ಲ ಸುತ್ತುತ್ತಿತ್ತು. ಹಸಿವು ನಿದ್ರೆ  ದೇಹಭಾವ, ನಗು ಅಳು ಕರುಣೆ ಎಲ್ಲದರಿಂದ ಹೊರತಾದ ಮನದ ಭಾವ ಅವನಲ್ಲಿ ಮುಕ್ತಭಾವವನ್ನು ತುಂಬುತ್ತಿತ್ತು.

ಆ ಕ್ಷಣದಲ್ಲಿಯೆ ಅವನಲ್ಲಿ ಎಂತದು ಒಂದು ಆತುರ ಹೊತ್ತಿತ್ತು, ತಾನೀಗ ದೇಹದ ಹತ್ತಿರ ಹೋಗಲೆ ಬೇಕು ಎನ್ನುವ ಆತುರತೆ, ಅವನಿಗೆ ಅರ್ಥವಾಯಿತು, ಬಹುಷಃ ತನ್ನ ದೇಹ ಎಚ್ಚರಗೊಳ್ಳುತ್ತಿದೆ, ನಿದ್ರೆಯ ವಶದಲ್ಲಿರುವ ದೇಹ ಎಚ್ಚರಗೊಳ್ಳುತ್ತಿದೆ ಎಂದು ಆತುರದಿಂದ ಹೊರಬಾಗಿಲಿನತ್ತ ಹೊರಟ. ಅವನ ಮನ ಅತಿವೇಗವನ್ನು ಪಡೆಯಿತು, ಬಾಗಿಲು ದಾಟಬೇಕು ಹೊರಹೋಗಬೇಕು ಅನ್ನುವಾಗಲೆ ಎದುರಿನಿಂದ ಮತ್ಯಾರೊ ಒಳಗೆ ಪ್ರವೇಶಿಸಿದರು,  ಚಿಕ್ಕ ಬಾಗಿಲಿನಿಂದ ಹೊರಹೋಗುವ ಆತುರದಲ್ಲಿ ಅವನ ಮನಸ್ಸು ಹೊರಗಿನಿಂದ ಬಂದ ಮನಸಿಗೆ ಡಿಕ್ಕಿ ಹೊಡೆಯಿತು. ಆ ಅಘಾತಕ್ಕೆ ಹೊರಗಿನಿಂದ ಬಂದ ಮನ ಕೆಳಗೆ ಬಿದ್ದಿತು.

"ಛೆ ತನ್ನ ಆತುರದಿಂದ ಎದುರಿಗೆ ಬಂದವರನ್ನು ಬಿಳಿಸಿದೆನಲ್ಲ, ಎನ್ನುವ ಪಶ್ಚಾಪದೊಡನೆ
"ಕ್ಷಮಿಸಿ" ಎನ್ನುತ್ತ ಕೆಳಗೆ ಬಿದ್ದ ಮನದತ್ತ ನೋಡಿದ

"ಲೀಲಾ!!!" ಎನ್ನುವ ಉದ್ಗಾರ ಅವನ ಮನದಿಂದ ಹೊರಬಿತ್ತು

ಹೌದು ಲೀಲ ಅನ್ನುವ ಆಕೆ ಅವನಿಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಪರಿಚಯ ಅನುಭವ. ತಾನು ಕಾಲೇಜು ಓದುವಾಗ ಪರಿಚಿತಳಾದ ಆಕೆ ಅವನೊಡನೆ ಒಂದಾಗಿ ಬೆರೆತುಹೋಗಿದ್ದಳು. ಎರಡು ವರ್ಷಕ್ಕಿಂತ ಹಿರಿದಾದ ಅವಳ ಒಡೆನಾಟ, ಕಾಲೇಜಿನ ಕಡೆಯ ದಿನಗಳಲ್ಲಿ ಮುರಿದುಬಿತ್ತು. ಜಾತಿ, ಹಣ , ಸಾಮಾಜಿಕ ಸ್ಥಿಥಿ ಇಂತಹ ಹತ್ತು ಹಲವು ಅಡಚಣೆಗಳು ಅವರಿಬ್ಬರ ನಡುವೆ ಗೋಡೆ ಎಬ್ಬಿಸಿತ್ತು. ಅವನ ಮುಗ್ದವಾಗ ಮನಸನ್ನು ಘಾಸಿಗೊಳಿಸಿ ಅವಳು , ಅವನಿಗಿಂತ ಉತ್ತಮ ಸ್ಥಿಥಿಯಲ್ಲಿರುವ ಹುಡುಗನಿಗೆ ಮನಸೋತು , ದೂರ ನಡೆದಿದ್ದಳು.

ಅವಳ ಅಗಲಿಕೆಯ ನಿರ್ದಾರವನ್ನು ಅವನ ಮನಸ್ಸು ಒಪ್ಪಿರಲೆ ಇಲ್ಲ. ಅವಳ ದ್ಯಾನದಲ್ಲೆ ಬಹಳ ವರ್ಷ ಕಳೆದು ಕಡೆಗೊಮ್ಮೆ ಅವಳನ್ನು ಮರೆತು ಒಬ್ಬ ಹುಡುಗಿಯನ್ನು ಮದುವೆಯಾಗಿ ಸಂಸಾರಿಯಾಗಿದ್ದ. ಹಗಲು ಇರುಳು ಅವನ ಮನದಲ್ಲಿ ನಿಂತು ಅವನನ್ನು ಕಾಡಿಸುತ್ತಿದ್ದ ಆಕೆ ಈ ನಡುವೆ ಮನದಿಂದ ಸ್ವಲ್ಪ ದೂರವಾಗಿದ್ದಳು.  ಅವನ ಮನ ಸಮಸ್ಥಿಥಿಯನ್ನು ಕಂಡುಕೊಂಡಿತ್ತು ಅನ್ನುವಾಗಲೆ ಈಗ ಅವಳ ದರ್ಶನವಾಗಿತ್ತು. ಅವಳಿಗಾದರು ಅಷ್ಟೆ ತನ್ನ ಯೌವನದ ದಿನಗಳ ಆತುರ ನಿರ್ದಾರದಿಂದ ಪಶ್ಚಾತಾಪ ಪಟ್ಟಿದಳು, ಅವಳ ಮನ ಇಂದಿಗು ಅವನನ್ನು ನೆನೆಯುತ್ತಿತ್ತು. ಈಗ ಅವನ ಮನ ಮನಸಿನ ಲೋಕದಲ್ಲಿ ಅವಳನ್ನು ನೋಡಿತ್ತು, ಒಮ್ಮೆಲೆ ಹಿಂದಿನ ಎಲ್ಲ ಭಾವನೆಗಳು ಅವನನ್ನು ಆಕ್ರಮಿಸಿದವು. ತನ್ನನ್ನು ತೊರೆದು ಹೋದ ಅವಳ ಕ್ರಿಯೆಯಿಂದ ಮನ ದಗ್ದವಾಗಿ ಹೋಗಿದ್ದ ಸ್ಥಿಥಿ ಮತ್ತೆ ಮರುಕಳಿಸಿತು.
"ಲೀಲಾ... ಲೀಲಾ" ಎನ್ನುವ ಹೆಸರನ್ನು ಅವನ ಮನ ದುಃಖದಿಂದ ಉದ್ಗರಿಸಿತು.

ನೋಡುವಾಗಲೆ ಅವನ ಮನ ಪುನಃ ಅವನ ದೇಹವನ್ನು ಪ್ರವೇಶಿಸಿತು.

=============================================

ಶ್ರೀನಿವಾಸನ ಸ್ವಭಾವವೆ ಹಾಗೆ ಕೆಲವು ದಿನ ನಗು ನಗುತ್ತಲೆ ಇರುವ, ಕೆಲವೊಮ್ಮೆ ಅವನ ಮನ ಯಾವುದೊ ದುಃಖದಲ್ಲಿರುವಂತೆ ಚಡಪಡಿಸುವುದು. ಸುಂದರ ಸಂಸಾರ ಹೆಂಡತಿ ಮುದ್ದಾದ ಮಕ್ಕಳು, ಅವನಿಗೆ ಯಾವ ಕೊರತೆ ಇರದಿದ್ದರು, ಮನಸನಲ್ಲಿ ಅವನು ಸುಖಿಯಲ್ಲ.  ಯಾವುದರಲ್ಲಿಯು ಎಂತದೊ ಅಸಮಾದಾನ. ತಾನು ಜೀವದಲ್ಲಿ ಏನೊ ಕಷ್ಟ ಬೀಳುತ್ತಿರುವನಂತೆ, ಎಂತದೊ ಬಂಧನದಲ್ಲಿರುವನಂತೆ ಚಡಪಡಿಸುವನು. ತನಗೆ ಯಾರಿಂದಲೊ ಅನ್ಯಾಯವಾಗಿದೆ ಎನ್ನುವ ಭಾವದೊಡನೆ  ಎಲ್ಲರೊಡನೆ
ವ್ಯವಹರಿಸುವನು, ಅವನ ಮಕ್ಕಳಿಗು ಅಷ್ಟೆ ಅಪ್ಪನ ಸ್ವಭಾವ ಅರ್ಥವಾಗುತ್ತಿರಲಿಲ್ಲ ಏಕೆ ಹೀಗೆ ಆಡುವರೆಂದು. ಆದರೆ ಲೀಲ ಅವನ ಮನದ ಆಳದಲ್ಲಿ ಎಲ್ಲೊ ಬೇರು ಬಿಟ್ಟಿದ್ದಳು. ಅವನ ಜೀವನದ ಎಲ್ಲ ಆಗುಹೋಗುಗಳಲ್ಲಿ ಅವನನ್ನು ನಿಯಂತ್ರಿಸುತ್ತಿದ್ದಳು.

ಕೆಲವು ದಿನಗಳಿಂದ ಅವನ ಮನ ಮುಕ್ತವಾಗಿತ್ತು. ಎಲ್ಲರೊಡನೆ ನಗುತ್ತ ವ್ಯವಹರಿಸುತ್ತಿದ್ದನು. ಅವನ ಮಕ್ಕಳು ಹೆಂಡತಿ ಎಲ್ಲರು ಸಮಾದಾನದಲ್ಲಿದ್ದರು

ಅಂದು ಅವನು ಏಳುವಾಗಲೆ ಅದೇಕೊ ಅವನ ಮನ ದುಗುಡದಲ್ಲಿದ್ದಿತು. ಎಂದೊ ಅವನಿಂದ ದೂರವಾದ ಲೀಲ ಅವನ ಮನವನ್ನು ಆವರಿಸಿದ್ದಳು. ಅದೇಕೊ ಪ್ರಪಂಚವನ್ನೆ ದ್ವೇಷಿಸುವಂತೆ ಅವನ ಮನ ಕುದಿಯುತ್ತಿತ್ತು. ಮನದಲ್ಲಿ ಯಾವುದೊ ರೋಷ ಅಸಮದಾನ ತುಂಬಿತುಳುಕುತ್ತಿತ್ತು. ಅಂದುಕೊಂಡ ಇಂದು ಮನವೇಕೊ ಸರಿಯಿಲ್ಲ , ರಾತ್ರಿಯ ಒಳಗೆ ಆಫೀಸಿನಲ್ಲಿ ಸಹ ಇನ್ಯಾರರ ಕೈಲಿ ಜಗಳವಾಡಬೇಕೊ. ನಿಧಾನವಾಗಿ ಹಾಸಿಗೆಯಿಂದೆ ಎದ್ದು ಮುಖತೊಳೆಯಲು ನಡೆದ.

-ಮುಗಿಯಿತು.





 

Rating
No votes yet

Comments

Submitted by nageshamysore Mon, 06/17/2013 - 20:32

ಪಾರ್ಥ ಸಾರ್ ನಮಸ್ಕಾರ, ಮನಸಿನ ಮಲ್ಟಿ ಮೀಡಿಯವನ್ನೆ ತೆಗೆದಿಟ್ಟು ಅದರ ವಿಶ್ವರೂಪ ದರ್ಶನ ಮಾಡಿಸಿದಂತಾಯ್ತು. ಇಂಥಹ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಬರೆಯುವುದು ಸುಲಭವಲ್ಲ.  ಈ ಕಥೆ ಬರೆಯುವಾಗ ಇದು ನಿಮ್ಮನ್ನು ಸಾಕಷ್ಟು ತಿಣುಕಾಡಿಸಿರಬೇಕೆನಿಸಿತು ; ಅಥವ ಕತೆಗಾರರಾಗಿ ನಿಮಗೆ ಲೀಲಾಜಾಲವಾಗಿ ಬಂದಿರಲಿಕ್ಕೂ ಸಾಕು. ಮನಸನ್ನು ಹಿಡಿದಿಡುವ ಬಗ್ಗೆ, ಮತ್ತದರ ಸ್ವರೂಪದ ಕಲ್ಪನೆಯ ಚಿತ್ರಣ ಮನೋಹರವಾಗಿ ಬಂದಿದೆ - ನಾಗೇಶ ಮೈಸೂರು, ಸಿಂಗಪುರದಿಂದ