ಅಮ್ಮ ಹಾಗೂ ಗಗನಜೀವಿ - ಲಕ್ಷ್ಮೀಕಾಂತ ಇಟ್ನಾಳ
ಅಮ್ಮ ಹಾಗೂ ಗಗನಜೀವಿ
- ಲಕ್ಷ್ಮೀಕಾಂತ ಇಟ್ನಾಳ
ತಾಯಿ ಎಂಬ ಕೌತುಕವ ಕಾಣಲೊಂದು ಅನ್ಯವ್ಯೋಮಿ
ನೂರು ಜ್ಯೋತಿ ವರುಷದಿಂದ ಹುಡುಕಿ ಹೊರಟು ಗಗನಗಾಮಿ
ಪಯಣದೊಳು ಭೂಮಿಗಾಗಿ ಚುಕ್ಕೆ ಚುಕ್ಕೆ ಅಲೆದು ಹೆಕ್ಕಿ,
ಮುಗಿಲು ಮೂರೇ ಗೇಣು ಅಂದು ಸೂರ್ಯಗೋಲ ಸಿಕ್ಕಿದಕ್ಕೆ
ಚಣದ ಕ್ಷಣವು ಚಿಗುರು ಮುನ್ನ ಭೂಮಿಗೋಲದೆಡೆಗೆ ಪಯಣ
ಬೆರಗುಗಣ್ಣಿನಿಂದ ಹುಡುಕಿ ಭರತಭೂಮಿಯನ್ನ!
ಅತ್ತ ಇತ್ತ ಹುಡುಕುತ, ದೂರ ಹೊಲ ಗದ್ದೆಯತ್ತ
ಧನ್ಯನಾಗಿ ಕಂಡಿತದು ತಾಯಿಮಾತೆಯನ್ನ!
ಪುಳಕ ಚಿಲುಮೆ ಚಿಮ್ಮಿ, ತಾಯಿರೂಪು ಕಣ್ಣು ದುಂಬಿ
ಕೋರಿತು ತಾಯಿಗೆ, ‘ಅಮ್ಮಾ’ ಒಮ್ಮೆ ನಿನ್ನಪ್ಪಲೆ!
ಯಾವ ಲೋಕವಾದರೇನು! ಮಗುವು ನನಗೆ ಮಗುವೇ ತಾನೆ
ಎಂದು ತಾಯಿ ಮಮತೆದೋರಿ ಕರೆದು ಅಪ್ಪಲು!
ತಾಯಿ ಕರುಳ ಬಳ್ಳಿ ಬೇರ ಉಸಿರ ತಿದಿಯ ಸ್ಪರ್ಶ
ಉದರ ಕರುಣೆ ಪ್ರೀತಿ ಮಳೆಯ ಸಿಂಚನದ ಹರ್ಷ
ಮುಗಿಲಲೊಮ್ಮೆ ಕೇಕೆ ಹಾಕಿ, ಅಂಬೆಗಾಲಲೊಮ್ಮೆ ನೂಕಿ
ಜೋಗುಳ ಕಥೆಯ ಚಂದಿರ, ಕೈತುತ್ತಿಗೆ ತಾ ಕೈಚಾಚಿದ!
ಮಮತೆ ಮುತ್ತು ಸ್ಪರ್ಶ ಪಡೆದು, ತಾಯಿಗೊಮ್ಮೆ ಕೋರಿತು,
ಅಮ್ಮನುದರ ಗರ್ಭದಲ್ಲಿ ತನಗೆ ಜನಿಸಲಾಸೆ ಎಂದಿತು!
ಜೋಗುಳ ಕತೆಗಳಾವಿ, ಮುಗಿಲು ಚುಕ್ಕೆ ಖಾಲಿ
ಕಳೆದುಹೋಗಿರುವೆ ಬದುಕಲಿ, ಕಂದನ ಬಿಟ್ಟು ಕಾವಲು
ಕಂದ, ನಿನ್ನ ಭೂಮಿ ಪಯಣ ಕ್ಷಣವೇ ತಡವಾಯಿತು!
ತಾಯಿ ಗರ್ಭದಲ್ಲಿ ಜನಿಸೊ ಆಸೆಯೀಗ ಕೈಗೂಡದು
ತಾಯ ರಕುತ ಬೆರೆಸಿ, ನಳಿಗೆಯಲ್ಲಿ ಭ್ರೂಣ ಬೆಳೆಸಿ
ತಾಯ ಗರ್ಭವನ್ನೆ ಕೃತಕವಾಗಿಸಿಹರು ಮನುಜರು!
ಪ್ರೀತಿ ಕರುಣೆ ಎದೆಯ ವರತೆ ಬತ್ತಿ ಬಾಡಿ ಹೋಗಿ
ತಾಯಿ ಮಗು ಕರುಳುಬಳ್ಳಿ ಕತೆಗಳಲ್ಲಿ ಕರಗಿಹೋಗಿ
ಅಮ್ಮನುದರ ಮಡಿಲಿನಲ್ಲಿ ಜನಿಸೋ ಆಸೆ ಭಗ್ನವಾಗಿ,
ಮತ್ತೆ ಬೇರೆ ಭೂಮಿ ಹುಡುಕಿ ಗಗನಜೀವಿ ತೆರಳಿತು!
Comments
ಇಟ್ನಾಳರೆ ನಮಸ್ಕಾರ, ತಾಯಿ
ಇಟ್ನಾಳರೆ ನಮಸ್ಕಾರ, ತಾಯಿ ಪ್ರೀತಿಯ ಹೊದಿಕೆಯಲ್ಲಿ, ಯಾಂತ್ರಿಕವಾಗುತ್ತಿರುವ ಸಂಬಂಧಗಳನ್ನು ಬಿತ್ತರಿಸುತ್ತಲೆ, ಮಾಯವಾಗುತ್ತಿರುವ ಪೂರಕ ವಾತಾವರಣಕ್ಕೆ ಖೇದಿಸುವ ಚಿತ್ರಣ ಚೆನ್ನಾಗಿ ಮೂಡಿದೆ.
- ನಾಗೇಶ ಮೈಸೂರು
ಅಮ್ಮನುದರದಲ್ಲಿ ಜನಿಸೋ ಆಸೆ...
ಅಮ್ಮನುದರದಲ್ಲಿ ಜನಿಸೋ ಆಸೆ... ಗಗನಜೀವಿಯ ಆಸೆ ಭಗ್ನಗೊಂಡಾಗ ನನಗೂ ನಿರಾಶೆಯಾಯಿತು. ಕವನ ಚೆನ್ನಾಗಿದೆ ಇಟ್ನಾಳರೆ.
ಲಕ್ಷ್ಮೀಕಾಂತ ಇಟ್ನಾಳರಿಗೆ
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
' ಅಮ್ಮ ಹಾಗೂ ಗಗನಜೀವಿ ' ಕವನ ಓದಿದೆ, ಅನ್ಯವ್ಯೋಮ ಜೀವಿ ಭೂಮಿಗೆ ತಾಯಿಯನ್ನು ಹುಡುಕಿಕೊಂಡು ಬರುವ ಕಲ್ಪನೆಯೆ ಒಂದು ಅದ್ಭುತ ಪರಿಕಲ್ಪನೆ. ಆ ಅನ್ಯ ವ್ಯೋಮಜೀವಿ ತನ್ನ ಜೊತೆಗೆ ನಮ್ಮನ್ನೂ ಕರೆದೊಯ್ದು ಮಾಡಿಸುವ ದರ್ಶನ ಅನನ್ಯವಾದುದು, ಬಹಳ ಸತ್ವ ಪೂರ್ಣವಾದ ರಚನೆ, ಧನ್ಯವಾದಗಳು.
ಆ