ಕನ್ನಡ ಮನ ಕನ್ನಡ ಜನ – ತ.ಸು.ಶಾಮರಾಯರು.
ಕೆಲವು ವ್ಯಕ್ತಿಗಳು ಮರದ ಹಾಗೆ. ತಮ್ಮಲ್ಲಿಗೆ ಬಂದವರಿಗೆ ಆಶ್ರಯ ನೀಡಿ ಅವರು ಬೆಳೆಯುವುದನ್ನು ನೋಡಿ ಸಂತೋಷ ಪಡುತ್ತಾರೆ. ತಮ್ಮ ಸ್ವಂತಕ್ಕಿಂತ ಹೆಚ್ಚಾಗಿ ಪರಹಿತವನ್ನೇ ಮುಖ್ಯವೆಂದು ತಿಳಿದು ಬದುಕುತ್ತಾರೆ. ಇವರು ಸದಾ ಪ್ರಾತಃಸ್ಮರಣೀಯರು. ತ.ಸು.ಶಾಮರಾಯರದು ಅಂತಹ ಬದುಕು. ಇಂದು ಅವರ ಜನ್ಮದಿನ.
ಕನ್ನಡಕ್ಕೆ ಸಾಹಿತ್ಯ ಪರಂಪರೆಯಿದ್ದಂತೆ ಕನ್ನಡದ್ದೇ ವಿಶಿಷ್ಟವಾದ ಗುರುಪರಂಪರೆಯಿದೆ. ಆ ಪರಂಪರೆಯಲ್ಲಿ ಆಗಿಹೋದ ಮೇಷ್ಟ್ರುಗಳ ಬಗೆಗೆ ಅನೇಕಾನೇಕ ದಂತಕತೆಗಳಿವೆ. ಮೈಸೂರು ವಿವಿಯಲ್ಲಿನ ಕನ್ನಡ ವಿಭಾಗದಲ್ಲಿ ಇಂತಹ ಮೇಷ್ಟ್ರುಗಳ ಒಂದು ದೊಡ್ಡ ಪರಂಪರೆಯಿದೆ. ಟಿ.ಎಸ್.ವೆಂಕಣ್ಣಯ್ಯ, ಕುವೆಂಪು, ಡಿ.ಎಲ್.ಎನ್, ತೀ.ನಂ.ಶ್ರೀ, ಪರಮೇಶ್ವರ ಭಟ್ಟರು.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರುಗಳ ವಿದ್ವತ್ತಿನ ಬಗೆಗೆ ಮಾತ್ರವಲ್ಲದೆ ತರಗತಿಗಳ ಬಗೆಗೆ ಶಿಷ್ಯವಾತ್ಸಲ್ಯದ ಬಗೆಗೆ ಅನೇಕ ಕತೆಗಳಿವೆ.
ತ.ಸು.ಶಾಮರಾಯರು ಇಂತಹ ಗುರುಪರಂಪರೆಗೆ ಸೇರಿದ್ದ ವ್ಯಕ್ತಿ. ಇವರ ಅಣ್ಣ ಟಿ.ಎಸ್.ವೆಂಕಣ್ಣಯ್ಯನವರ ಪ್ರಭಾವದಲ್ಲಿ ಬೆಳೆದ ಶಾಮರಾಯರು ವಿದ್ವತ್ತು, ಸಜ್ಜನಿಕೆ, ಶಿಷ್ಯವಾತ್ಸಲ್ಯಕ್ಕೆ ಹೆಸರಾದ ವ್ಯಕ್ತಿ. ಅವರ ಮನೆಯಲ್ಲಿ ಊಟಮಾಡಿ ಓದಿದವರು ಅದೆಷ್ಟೋ ಮಂದಿ. ವಿದ್ಯಾದಾನವನ್ನು ಪರಮಪೂಜ್ಯವೆಂದು ಭಾವಿಸಿದ್ದ ಮನೆತನ ಅವರದಾಗಿತ್ತು. ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಿಯರಾಗಿದ್ದ ಶಾಮರಾಯರು ಹಲವು ಬಡ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ಅವರ ಓದು ಸರಾಗವಾಗಿ ಸಾಗುವಂತೆ ನೋಡಿಕೊಳ್ಳುತ್ತಿದ್ದರು. ಅವರ ನಿರ್ವಾಜ್ಯ ಶಿಷ್ಯಪ್ರೇಮವನ್ನು ಜಿ.ಎಸ್.ಎಸ್, ಎನ್.ಎಸ್.ಎಲ್, ಪ್ರಭುಶಂಕರರು ಇನ್ನೂ ಮುಂತಾದ ಶಿಷ್ಯರು ನೆನೆಸಿಕೊಳ್ಳುತ್ತಾರೆ. ಜಿ.ಎಸ್.ಎಸ್ ತಮ್ಮ ಜನಪ್ರಿಯ ‘ಎದೆ ತುಂಬಿ ಹಾಡಿದೆನು’ ಕವನವನ್ನು ಶಾಮರಾಯರನ್ನೇ ಕುರಿತು ಬರೆದದ್ದು ಎಂದು ಹೇಳುತ್ತಾರೆ. ತಮ್ಮ ‘ಚದುರಿದ ಚಿಂತನೆ’ಗಳು ಕೃತಿಯಲ್ಲಿ ಶಾಮರಾಯರ ಬಗ್ಗೆ ಲೇಖನ ಬರೆದಿದ್ದಾರೆ. ಪ್ರಭುಶಂಕರರ ಕೃತಿ ‘ನಮನ’ದಲ್ಲಿ ಕೂಡ ಶಾಮರಾಯರ ಕುರಿತ ಲೇಖನವಿದೆ. ಜಾತಿ, ಮತ, ವರ್ಗಗಳನ್ನು ಮೀರಿದ ಶುದ್ಧ ಮಾನವೀಯ ನೆಲೆಗಟ್ಟಿನ ಅವರ ಸ್ವಭಾವ ಶಿಷ್ಯರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು.
ಪ್ರಭುಶಂಕರರ ಲೇಖನದಲ್ಲಿ ಅಂತಹ ಕೆಲವು ಪ್ರಸಂಗಗಳನ್ನು ಕಾಣಬಹದು. ಜಿ.ಎಸ್.ಶಿವರುದ್ರಪ್ಪನವರ ಬಡತನದ ಸ್ಥಿತಿಯನ್ನು ಸೂಕ್ಷ್ಮಜ್ಞರಾದ ಮೇಷ್ಟರು ಅರಿತುಕೊಂಡು ಅವರನ್ನು ತಮಗೆ ಪರಿಚಯವಿದ್ದ ಸುತ್ತೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಜಿಗಳ ಬಳಿಗೆ ಕರೆದುಕೊಂಡು ಹೋಗುತ್ತಾರಂತೆ ಆಗ ಸ್ವಾಮೀಜಿಗಳು ’ಬ್ರಾಹ್ಮಣರಾಗಿ ನೀವು ಲಿಂಗಾಯತನಿಗೆ ಶಿಫಾರಸ್ಸು ಮಾಡುತ್ತಿರುವಿರಲ್ಲ’ ಎಂದು ತಮಾಷೆಗೆ ಹೇಳಿದರಂತೆ. ತಕ್ಷಣ ಸಿಡಿಮಿಡಿಗೊಂಡ ಶಾಮರಾಯರು ‘ನನ್ನ ಶಿಷ್ಯರೆಲ್ಲ ನನ್ನ ಮಕ್ಕಳು. ಅವರಿಗೆ ಜಾತಿಗೀತಿ ಇಲ್ಲ’ ಎಂದರಂತೆ. ಸ್ವಾಮೀಜಿಗಳು ನಕ್ಕು ಶಿವರುದ್ರಪ್ಪನವರಿಗೆ ಬೇಕಾದ ಅನುಕೂಲಗಳನ್ನು ಒದಗಿಸಿದರಂತೆ.
ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಮಂತ್ರಿಗಳಾಗಿದ್ದ ನಜೀರ್ ಸಾಬರು ತಾವು ಮಂತ್ರಿಯಾದ ಕೂಡಲೇ ತಮ್ಮ ನೆಚ್ಚಿನ ಗುರುಗಳನ್ನು ಕಾಣಲು ಬಂದರಂತೆ. ಪ್ರೀತಿ ಅಭಿಮಾನಗಳಿಂದ ‘ಸರ್ ತಮ್ಮ ಆಶೀರ್ವಾದದಿಂದ ಈವತ್ತು ಮಂತ್ರಿಯಾಗಿದ್ದೇನೆ. ತಮಗೆ ನನ್ನಿಂದ ಏನಾದರೂ ಬೇಕಿದ್ದರೆ ಕೇಳಿ’ ಅಂದರಂತೆ. ಶಾಮರಾಯರು ನಗುತ್ತಾ ಕೇಳಿದ್ದನ್ನು ಕೊಡ್ತೀಯಾ ಎಂದರಂತೆ ನಜೀರ್ ಸಾಬರು ಕ್ಷಣವೂ ತಡಮಾಡದೆ ‘ಹೂಂ ಕೊಟ್ಟೆ’ ಎಂದರಂತೆ. ಆಗ ಶಾಮರಾಯರು ‘ನಿನಗೆ ಅಧಿಕಾರ ಇರುವಾಗ ನಾಲ್ಕು ಜನಕ್ಕೆ ಒಳ್ಳೆಯದು ಮಾಡ್ತೀನಿ ಅಂತ ನನಗೆ ಮಾತು ಕೊಡು’ ಅಂದರಂತೆ. ನಜೀರ್ ಸಾಬರು ಶಾಮರಾಯರ ಬಲಗೈ ತಮ್ಮ ತಲೆಯ ಮೇಲಿಟ್ಟುಕೊಂಡು ‘ಹಾಗೇ ಮಾಡ್ತೀನಿ ಆಶೀರ್ವಾದ ಮಾಡಿ ಸಾರ್’ ಎಂದು ಕೇಳಿಕೊಂಡರಂತೆ. ಶಾಮರಾಯರು ‘ ನಿನಗೆ ಆಶೀರ್ವಾದ ಮಾಡಬೇಕೆನೋ ಮಗು, ನನ್ನ ಆಶೀರ್ವಾದ ನಿನಗೆ ಇದ್ದೇ ಇದೆ. ಹೋಗು’ ಎಂದು ಕಳಿಸಿಕೊಟ್ಟರಂತೆ. ತಮ್ಮ ಶಿಷ್ಯರನ್ನು ಏಕವಚನದಲ್ಲಿ ಮಾತನಾಡಿಸುತ್ತಾ ‘ಮಗು’ ಎಂದು ಕರೆಯುತ್ತಿದ್ದ ಶಾಮರಾಯರು ವಿದ್ಯಾರ್ಥಿಗಳ ಪಾಲಿಗೆ ತಾಯಿಯಂತೆಯೇ ಇದ್ದರು. ಕುವೆಂಪು ಮುಂತಾದ ಮೇಷ್ಟ್ರುಗಳ ಜೊತೆ ಮಾತನಾಡಲು ಹೆದರುತ್ತಿದ್ದ ವಿದ್ಯಾರ್ಥಿಗಳು ಶಾಮರಾಯರ ಬಳಿ ಸಲುಗೆಯಿಂದ ಇರುತ್ತಿದ್ದರಂತೆ.
ನಜೀರ್ ಸಾಬರು ಮಂತ್ರಿಗಳಾಗಿದ್ದ ಕಾಲದಲ್ಲಿ ಶಾಮರಾಯರಿಗೆ ಬೆಂಗಳೂರಿನಲ್ಲಿ ಮನೆಕೊಡಿಸಲು ಪ್ರಯತ್ನಿಸಿದರಂತೆ ಆದರೆ ಶಾಮರಾಯರು ಅದನ್ನು ನಯವಾಗಿ ನಿರಾಕರಿಸಿದರಂತೆ. ಕಡೆಗೆ ಬಲವಂತದಿಂದ ಎಂ.ಐ.ಜಿ ಮನೆ ಕೊಡಿಸಲು ಮುಂದಾದರಂತೆ ಅದಕ್ಕೆ ಕಟ್ಟಬೇಕಿದ್ದ ಪ್ರಾರಂಭಿಕ ಮೊತ್ತ 8,000 ಕೂಡ ಶಾಮರಾಯರ ಬಳಿ ಇರಲಿಲ್ಲ. ಆ ಸಮಯದಲ್ಲಿ ಅವರ ಮನೆಗೆ ಬಂದ ಅವರ ಮತ್ತೊಬ್ಬ ಶಿಷ್ಯ ಲಕ್ಷ್ಮೀನಾರಾಯಣ ಭಟ್ಟರು ಶಾಮರಾಯರನನ್ನು ಅವರು ಬರೆದಿದ್ದ ಯಾವುದಾದರೂ ಪುಸ್ತಕವಿದ್ದರೆ ಪ್ರಕಟಣೆಗೆ ಕೊಡಿ ಎಂದು ಕೇಳಿದರಂತೆ. ತಾವೇ ಮನೆಯ ಅಟ್ಟ ಸೇರಿದ್ದ ಗಂಟೊಂದನ್ನು ತೆಗೆದು ಹುಡುಕಿದಾಗ ‘ಮೂರು ತಲೆಮಾರು’ ಕೃತಿಯ ಹಸ್ತಪ್ರತಿ ಸಿಕ್ಕಿತಂತೆ. ಅದನ್ನು ಪ್ರಕಟಿಸುವ ವ್ಯವಸ್ಥೆ ಮಾಡಿ ಶಾಮರಾಯರಿಗೆ ಹಣ ದೊರಕುವಂತೆ ಮಾಡಿದರಂತೆ.
ಮುಖ್ಯಮಂತ್ರಿ ಬಂಗಾರಪ್ಪನವರು ಕೂಡ ಶಾಮರಾಯರ ಶಿಷ್ಯರು. ತಮ್ಮ ಶಿಷ್ಯರ ಏಳಿಗೆಯನ್ನು ನೋಡಿ ಸದಾ ಸಂತೋಷಿಸುತ್ತಿದ್ದ ಮಾತೃಹೃದಯದ ಶಾಮರಾಯರು ಎಂದೂ ತಮ್ಮ ಶಿಷ್ಯರ ಬಳಿ ತಮಗಾಗಿ ಏನನ್ನು ಬೇಡಲಿಲ್ಲ ಎನ್ನುವುದು ಅವರ ಶುದ್ಧ ಚಾರಿತ್ರ್ಯ ಮತ್ತು ನೈತಿಕತೆಯನ್ನು ತೋರಿಸುತ್ತದೆ.
ಇಂತಹ ವ್ಯಕ್ತಿಗಳ ಬದುಕು, ನಡವಳಿಕೆಗಳೇ ನಮಗೂ ನಮ್ಮ ಮುಂದಿನ ತಲೆಮಾರಿಗೂ ಆದರ್ಶವಾಗಿರುವಂತದ್ದು.
ಚಿತ್ರ ಕೃಪೆ: ಅಂತರ್ಜಾಲ
Comments
ಪ್ರೊ. ಟಿ.ಎಸ್.