ಪಾಂಚಾಲಿಯ ಹಾಡು

ಪಾಂಚಾಲಿಯ ಹಾಡು

ನಿನ್ನೆ ಪಾರ್ಥರು ಕೊಟ್ಟ 'ಪದ್ಯ ಪಾನ'ದ ಲಿಂಕು ನೋಡಿದೆ (http://padyapaana.com/) - 'ದ್ರೌಪದಿ ವಸ್ತ್ರಾಪಹರಣದ' ಚಿತ್ರವಿತ್ತು (72). ಷಟ್ಪದಿ, ಛಂಧಸ್ಸು ವ್ಯಾಕರಣ ಜ್ಞಾನ ನನಗಿಲ್ಲದ ಕಾರಣ, ಆ ಪ್ರಕಾರದಲ್ಲಿ ರಚಿಸಲು ನನಗೆ ಬರದು. ಆದರೂ ಚಿತ್ರ ನೋಡಿ ಮೂಡಿದ ದ್ರೌಪದಿಯ ಭಾವಗಳಿಗೆ ಧ್ವನಿ ಕೊಡಲು ನೋಡಿದೆ - ಅದರ ಫಲಿತ ಈ ಕೆಳಗಿದೆ, ಈಗ ಸಂಪದಿಗರ ಮುಂದೆ - ನಾಗೇಶ ಮೈಸೂರು

ಪಾಂಚಾಲಿಯ ಹಾಡು

ದುರುಳ ಸೆಳೆ ಸೆಳೆದನೆ ಬಳಿ ಸಾರಿ
ಕೈ ಸೆರಗಿಗಿಟ್ಟಾ ಧೂರ್ತತನ ಭಾರಿ
ಏನು ಮಾಡಲಿತ್ತೆ ಅಸಹಾಯಕತೆ
ಆಗಬೇಕಿತ್ತೆ ಭಾರತ ಮುನ್ನುಡಿಕಥೆ!

ನನ್ನಾರ್ತನಾದಕೆ ಕೃಷ್ಣಾ ಮುರಾರಿ
ಮಾನ ಕಾಪಾಡಿದನಲ್ಲವೆ ಆಭಾರಿ
ಜಟ್ಟಿಗಳೈವರೆ ಕುಳಿತರೆ ಮುದುರಿ
ಕೇಶವಾ ನೀನಿಲ್ಲದಿರಿನ್ಯಾರ ದಾರಿ!

ದ್ಯೂತದಲಿ ಕೂತವರವರೆ ಐವರು 
ಹರಿದಂಚಿದರೂ ನನ್ನೇಕೆ ಹೂತರು
ಪಣವಿಟ್ಟರು ಇಡಿಜೀವನ ಮುಡಿಪು
ಪಣಕಿಡೆ ಜೂಜಾಟಕೆ ಯಾರೆ ಕಾಪು?

ಯಾರೊ ದುರ್ಯೋಧನ ದುಷ್ಟಜನ  
ರಾಜಕೀಯಕೇಕೆಳೆಯೆ ಹೆಣ್ಗಳ ಮನ
ಲಜ್ಜೆಯೆ ಅಭರಣವಾದವರ ಜೀವನ
ಬಿಚ್ಚಲ್ಹೀಗೆಲ್ಲ ಸರಿಯೆ ಹೆಣ್ಣಲ್ಲ ಕವನ!

ಬಟ್ಟೆಯ ಬಿಚ್ಚೆ ಹುಚ್ಚುಚ್ಚೆ ಮನಸ್ವೇಚ್ಛೆ
ಯುಗಕೆಲ್ಲ ಸ್ಪೂರ್ತಿ ದುಷ್ಕರ್ಮಿ ಕೆಚ್ಚೆ
ಮೌನದೀ ಕೂತರೇಕೆಲ್ಲ ಮಹಾ ರಥಿ
ಉತ್ತೇಜಿಸಿದಂತಲ್ಲವೆ ಭವಿತಸಂತತಿ?

ಓದಲೇಕಿಷ್ಟಾಸೆ ಬೆತ್ತಲಿಸೀ ಗುಂಪಲೆ
ತಾಯ್ತಂಗಿಸತಿಗಳಿಗಿಷ್ಟೆ ಕಟ್ಟಿದ ಬೆಲೆ
ಬ್ರಹ್ಮಸೃಷ್ಟಿಯನೆ ನಮ್ಮುದರಕೆ ಕಟ್ಟಿ
ನಾವ್ಹೆತ್ತು ಅನುಭವಿಸಲೇಕಿ ದುರ್ಗತಿ?

ಸದ್ಯ ಜೀವಂತ ಮುರಾರಿಗೆ ಹೃದಯ
ಸಜ್ಜನರಿನ್ನೂ ಅಷ್ಟಿಷ್ಟಿದ್ದವರಾ ವಿಷಯ
ಹೇಗೊ ಬದುಕಿತೆ ದ್ವಾಪರದ ದ್ರೌಪತಿ
ಕಲಿಯುಗದಲಿ ಹೆಣ್ಣಿಗೆ ಏನಪ್ಪಾ ಗತಿ?
 
- ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
 

 

Comments

Submitted by partha1059 Fri, 06/21/2013 - 08:53

ಷಟ್ಪದಿ, ಛಂಧಸ್ಸು ವ್ಯಾಕರಣ ಜ್ಞಾನ ನನಗಿಲ್ಲದ ಕಾರಣ,>>> ನಾಗೇಶರವರೆ ನಿಮಗೆ ಅದೆಲ್ಲ ಬೇಡ ಬಿಡಿ, ಆಧಿಕವಿಯೊಬ್ಬರ ಮಾತು ಕೇಳಿಲ್ಲವೆ 'ಕುರಿತೋದದೆಯು ಕಾವ್ಯಪ್ರಯೋಗ ಪರಿಣಿತ ಮತಿಗಳು' ನೀವು. ಇರಲಿ ನಾನು ಆ ಲಿಂಕ್ ಕೊಟ್ಟಿದ್ದು ಅದೊಂದೆ ಚಿತ್ರಕ್ಕಲ್ಲ, ಅಂತಹ ನೂರಾರು ಚಿತ್ರಗಳು ಅಲ್ಲಿವೆ, ನೀವು ಹೇಳಿರುವ ಚಿತ್ರಕ್ಕೆ ಹಲವರು ತಮ್ಮ ಕವನ ರಚಿಸಿದ್ದಾರೆ ನೋಡಿ, ಹಾಗೆ ಅಲ್ಲಿ ಹತ್ತು ಹಲವು ರೀತಿಯ ಪ್ರಯೋಗಗಳಿವೆ. ಸಮಸ್ಯೆಗಳನ್ನು ಕೊಟ್ಟು ಅದಕ್ಕೆ ಪದ್ಯಗಳನ್ನು ಬಿಡಿಸುವುದು ಈ ರೀತಿ. ಒಂದೆ ಸಮಸ್ಯೆಗೆ ಹಲವರು ತಮ್ಮ ಪದ್ಯ ರಚಿಸಿದ್ದಾರೆ. ಹಲವರು ನಮ್ಮ ಸಂಪದಿಗರೆ ಇದ್ದಾರೆ ಅವರಲ್ಲಿ. ಸಂಪದದಲ್ಲಿ ತಮ್ಮ ಕವನ ಸದಾ ಪ್ರಕಟಿಸುವ ಹಂಸಾನಂದಿಯವರು ಇದ್ದಾರೆ ಅಲ್ಲದೆ ಶತಾವದಾನಿ ಗಣೇಶರು ಅಲ್ಲಿ ತಮ್ಮ ಸಲಹೆ ಕೊಡುತ್ತಿರುತ್ತಾರೆ. ನೀವು ಆದಾಗ ಅಲ್ಲಿ ನೋಡುತ್ತಿರಿ, ನಿಮ್ಮ ಕವನ ರಚಿಸುವ ಶಕ್ತಿಗೆ 'ಸಾಣೆ' ಹಿಡಿಯುತ್ತಿರಿ :-) . ಒಂದು ಉತ್ತಮ ಪ್ರಯೋಗವದು . ಛಂದಸ್ಸು ಅಲಂಕರಗಳ ಅಗತ್ಯವೇನಿಲ್ಲ -ಪಾರ್ಥಸಾರಥಿ
Submitted by ಗಣೇಶ Sun, 06/23/2013 - 20:30

In reply to by partha1059

ಪಾರ್ಥರೆ, ಆಧಿಕವಿಯ ಬಾಲ ತೆಗೆದು ಶತಾವದಾನಿಗೆ ಹಾಕಬೇಕೆಂದು ಸಂಪದ ಗಣೇಶನ ಸಲಹೆ.:) ನಾಗೇಶರೆ, ದ್ರುಪದನ ಮಗಳು ದ್ರೌಪದಿ(>>...ಹೇಗೊ ಬದುಕಿತೆ ದ್ವಾಪರದ ದ್ರೌಪತಿ...)ದುರ್ಗತಿ ಬಗ್ಗೆ ಕವನ ಚೆನ್ನಾಗಿದೆ. >>ಕಲಿಯುಗದಲಿ ಹೆಣ್ಣಿಗೆ ಏನಪ್ಪಾ ಗತಿ? :(
Submitted by makara Fri, 06/21/2013 - 19:24

ಪಾರ್ಥರಸಾರಥಿಗಳ ಮಾತಿಗೆ ನನ್ನದೂ ಸಹಮತವಿದೆ. ಶಾಸ್ತ್ರೀಯ ಸಂಗೀತದ ಶೈಲಿಗೆ ಒಂದು ಸೊಗಸಿರುತ್ತದೆ; ಅದೇ ರೀತಿ ಜಾನಪದ ಗೀತೆಗಳಿಗೆ ತಮ್ಮದೇ ಸೊಗಡು ಸೊಗಸು ಇರುತ್ತದೆ. ಅವುಗಳ ಕೋನಗಳಲ್ಲಿ ಅವುಗಳಲ್ಲಿ ಚೆನ್ನಾಗಿರುತ್ತವೆ. ಆದ್ದರಿಂದ ನಿಮ್ಮದು ವ್ಯಾಕರಣ ಬದ್ಧ ಅಥವಾ ಛಂದೋಬದ್ಧವಾಗಿಲ್ಲವೆಂದು ಬೇಸರಿಸುವ ಅಗತ್ಯವಿಲ್ಲ. ಕಾವ್ಯಕ್ಕೆ ವ್ಯಾಕರಣದ ದೋಷವಿಲ್ಲ ಎಂದು ಬೇಂದ್ರೆಯವರು ಹೇಳುತ್ತಿದ್ದರು ಎನ್ನುವುದನ್ನು ಸಂಪದದ ಒಂದು ಲೇಖನದಲ್ಲಿ ಓದಿದ ನೆನಪು. ಇರಲಿ, ಬಿಡಿ ಒಟ್ಟಿನಲ್ಲಿ ಸುಂದರವಾದ ಕವನಕ್ಕೆ ಧನ್ಯವಾದಗಳು, ನಾಗೇಶರೆ. ಮೂರನೇ ಪಂಕ್ತಿಯ ಎರಡನೇ ಸಾಲಿನ ’ಹೂತರು’ ಶಬ್ದವನ್ನು ಸ್ವಲ್ಪ ವಿವರಿಸಿ. ದ್ಯೂತದಲಿ ಕೂತವರವರೆ ಐವರು ಹರಿದಂಚಿದರೂ ನನ್ನೇಕೆ ಹೂತರು
Submitted by nageshamysore Fri, 06/21/2013 - 19:43

In reply to by makara

ಶ್ರೀಧರರೆ, ಪೂರ್ಣತೆಗಾಗಿ ಪೂರ್ತಿ 4 ಸಾಲನ್ನು ವಿವರಿಸಿದ್ದೇನೆ - ನಾಗೇಶ ಮೈಸೂರು ದ್ಯೂತದಲಿ ಕೂತವರವರೆ ಐವರು ಹರಿದಂಚಿದರೂ ನನ್ನೇಕೆ ಹೂತರು ಸಾರಾಂಶ: (ದ್ರೌಪದಿಯ ಮಾತಿನಲ್ಲಿ) - ಜೂಜಿಗೆ ಕೂತ ಈ ಐವರು ಪತಿಗಳಿಗೂ, ನನ್ನನ್ನೆ ಸಮವಾಗಿ ಹರಿದು ಹಂಚಿದೆ ಭೇಧ ಭಾವ ಮಾಡದೆ; ಅಂತಿದ್ದರೂ ನಾನೊಂದು ಜೀವವಿರುವ, ಮನಸಿರುವ, ಘನತೆ, ಗೌರವವಿರುವ ಹೆಣ್ಣು ಎಂಬುದನ್ನೂ ಮರೆತು, ನ್ನನ್ನ ವ್ಯಕ್ತಿತ್ವವನ್ನು ಎಲ್ಲರ ಕಣ್ಣು ಮುಂದೆಯೆ (ಸಾರ್ವಜನಿಕವಾಗಿ) ಲೆಕ್ಕಕ್ಕಿಲ್ಲದ ಹಾಗೆ ಹೂತು ಹಾಕಿಬಿಟ್ಟರಲ್ಲಾ?(ನನ್ನನ್ನು ಜೂಜಿಗೆ ಪಣಕ್ಕಿಡುವ ವಸ್ತುವೆಂಬಂತೆ ಪರಿಗಣಿಸಿ)  ಪಣವಿಟ್ಟರು ಇಡಿಜೀವನ ಮುಡಿಪು ಪಣಕಿಡೆ ಜೂಜಾಟಕೆ ಯಾರೆ ಕಾಪು? ನಾನು ಇಡಿ ಜೀವನವನ್ನು ಇವರಿಗಾಗಿಯೆ ಪಣವಿಟ್ಟರೂ (ಮುಡಿಪಾಗಿಟ್ಟರು), ಅಂತಹ ಇವರುಗಳೆ ಗಣನೆಯಿಲ್ಲದವರಂತೆ ನನ್ನನ್ನು ಜೂಜಾಟಕೆ 'ಪಣ'ವಾಗಿಟ್ಟರಲ್ಲಾ, ಇನ್ಯಾರು ನನ್ನ ರಕ್ಷಿಸುವರೆಂದು ನಂಬಲಿ ?
Submitted by H A Patil Sat, 06/22/2013 - 18:44

ನಾಗೇಶ ಮೈಸೂರು ರವರಿಗೆ ವಂದನೆಗಳು ' ಪಾಂಚಾಲಿಯ ಹಾಡು ' ಕವನ ಓದಿದೆ, ಪಾಂಡವರು ಮತ್ತು ಕೌರವರ ದ್ಯೂತ್ಯದಾಟದ ಇಡೀ ಚಿತ್ರಣ ಕಣ್ಮುಂದೆ ತೇಲಿ ಬಂತು, ಪಾಂಡವರ ಆ ಕ್ಷಣದ ಅಸಹಾಯಕತೆ ವಿಷಾದ ತರಿಸಿತು. ಕವನದ ನಿಮ್ಮ ಆಶಯ ಚೆನ್ನಾಗಿದೆ. ಇನ್ನೂ ನೀವು ವರ್ತಮಾನದ ಸ್ಥಿತಿಯಲ್ಲಿ ಭರವಸೆ ಕಳೆದು ಕೊಂಡಿಲ್ಲ, ನಿಮ್ಮ ಆಶಾವಾದ ಮೆಚ್ಚುವಂತಹುದು, ಎಂತಹ ಪರಿಸ್ಥಿತಿಯಲ್ಲೂ ನಾವು ಆಶಾವಾದ ಕೈಬಿಡಬಾರದು. ಅತ್ಯುತ್ತಮ ಕವನ ನೀಡಿದ್ದಿರಿ ಧನ್ಯವಾದಗಳು.
Submitted by nageshamysore Sun, 06/23/2013 - 08:12

In reply to by H A Patil

ಪಾಟೀಲರಿಗೆ ನಮಸ್ಕಾರ. ತಮ್ಮ ಎಂದಿನ ಉತ್ತೇಜನ, ಪ್ರೋತ್ಸಾಹಕ್ಕೆ ಧನ್ಯವಾದಗಳು. ಹೀಗೆ ಮಾರ್ಗದರ್ಶನ ಕೊಡುತ್ತಾ ಇರಲು ನಿಮ್ಮ ಆರೋಗ್ಯ ಸದಾ ಸಹಕರಿಸುತ್ತಿರಲೆಂದು ಆ ವಿಧಾತನಲ್ಲಿ ನನ್ನ ಕೋರಿಕೆ - ನಾಗೇಶ ಮೈಸೂರು
Submitted by venkatb83 Sat, 06/22/2013 - 18:58

ಕಲಿಯುಗದಲಿ ಹೆಣ್ಣಿಗೆ ಏನಪ್ಪಾ ಗತಿ? ;(( ಅಂದು ಒಬ್ಬ ದುಶ್ಯಾಸನ -ದುರ್ಯೋಧನ - ಇಂದು .... ?? ದಿನಂಪ್ರತಿ ದಿನ ಪತ್ರಿಕೆ ಓದುವ - ಟೀವಿ ನೋಡುವ ನಮಗೆ ಗೊತ್ತು ... !! ನಾಗೇಶ್ ಅವರೇ ನೀವು ಬರೆವ ಕವನಗಳನ್ನು ನೋಡುವಾಗ ಓದುವಾಗ ನನ್ನ ಮನದಲ್ಲಿ ಮೂಡುವ ಭಾವ ಇವರ್ಯಾಕೆ ಇಷ್ಟು ತಡವಾಗಿ ಸಂಪದ ಸೇರಿದರು ಎಂದು (ಇಲ್ಲಿಗೆ ಸೇರಿ ೩ ತಿಂಗಳು ಎರಡು ವಾರ ಆಗಿದೆ )..!! ಆದರೂ ಲೇಟ್ ಆದರೂ ಲೇಟೆಸ್ಟ್ ಆಗಿ ಸೇರಿರುವಿರಿ .. ಇನ್ನು ಈ ಕವನದ ಬಗ್ಗೆ ಪಾಂಚಾಲಿ ಯಾವತ್ತೂ ಬರಹಗಾರರಿಗೆ - ಮಹಿಳ ಹೋರಾಟಗಾರರಿಗೆ ಸ್ಪೂರ್ತಿ . ಈ ಬಗ್ಗೆ ಈ ಹಿಂದೆಯೂ ಹಲವು ಗದ್ಯ ಬರಹಗಳು ಪದ್ಯ ಬರಹಗಳು ಇಲ್ಲಿ ಬಂದಿವೆ . ಪಾಂಚಾಲಿಯ ತವಕ ತಲ್ಲಣ -ತೆರೆದಿಟ್ಟ ಬರಹ .. ಸೂಪರ್ ಮಾರಾರೆ .. ಶುಭವಾಗಲಿ \ ।
Submitted by nageshamysore Sun, 06/23/2013 - 08:37

In reply to by venkatb83

ಸಪ್ತಗಿರಿಗಳೆ ನಮಸ್ಕಾರ,  <<<<<<ಇವರ್ಯಾಕೆ ಇಷ್ಟು ತಡವಾಗಿ ಸಂಪದ ಸೇರಿದರು ಎಂದು (ಇಲ್ಲಿಗೆ ಸೇರಿ ೩ ತಿಂಗಳು ಎರಡು ವಾರ ಆಗಿದೆ )>>>>>>> ಹೇಳಿಕೊಳ್ಳಲು ತುಸು ಮುಜುಗರವೆನಿಸುತ್ತದೆ - ನನಗೆ ಕನ್ನಡದಲ್ಲಿ ಸಂಪದದಂತಹ ವೇದಿಕೆಯಿದೆ ಎಂದು ಗೊತ್ತಾಗಿದ್ದೆ ಸುಮಾರು ನಾಲ್ಕು ತಿಂಗಳ ಹಿಂದೆ. ಹದಿನೈದು ವರ್ಷಗಳಿಂದ ದೇಶದಿಂದಾಚೆಯೆ ಸುತ್ತುತ್ತಿದ್ದುದ್ದಕ್ಕೊ ಏನೊ, ಅಥವಾ ಹೊಟ್ಟೆಪಾಡಿನ ಕೆಲಸಗಳು ಮತ್ತು ಇಹ ಜೀವನ ಸಂಘರ್ಷಗಳು ಅಂಟಿಸುವ ಅನಿವಾರ್ಯದ ಬೆನ್ನು ಹತ್ತಿದ್ದಕ್ಕೊ - ಸುಮಾರು ಇಪ್ಪತ್ತು ವರ್ಷಗಳಿಂದ ಬರಹವೆ ನಿಂತು ಹೋಗಿತ್ತು. 2012ರ ಜೂನಿನಲ್ಲಿ (ಏಳನೆ ತಾರೀಖೆಂದು ಕಾಣುತ್ತದೆ) ಇದ್ದಕ್ಕಿದ್ದ ಹಾಗೆ ಒಂದು ನಿದ್ದೆ ಬರದ ನಡುರಾತ್ರಿ ಬರೆಯದೆ ಇರಲಾಗದ ಬೇಗುದಿ ಒಳಗಿಂದ ಗುದ್ದಿ ಬಂದು ಕವನವಾಗತೊಡಗಿತು - ಆ ರಾತ್ರಿ ಹುಟ್ಟಿದ ಕವನವೆ 'ಸಾವೆಂಬ ಸಕಲೇಶಪುರ....' (ಸಂಪದದಲ್ಲಿ ಇತ್ತೀಚೆಗೆ ಪ್ರಕಟಿಸಿದ್ದೇನೆ; ಗೆಳೆಯರೊಬ್ಬರ ಪ್ರಾಯದ ವಯಸಿನ ಬಂಧುವೊಬ್ಬರ ಸಾವಿನ ಸುದ್ದಿಯ ಹಿನ್ನಲೆಯಲ್ಲಿ ಜನಿಸಿದ ಕವನವದು). ಅಲ್ಲಿಂದಾಚೆಗೆ ಆದಷ್ಟು 'ಕನ್ನಡಮ್ಮನ ಸಾಲ' ತೀರಿಸುವ ಪ್ರಯತ್ನ ನಡೆದಿದೆ. ಸಂಪದದ ಮೂಲಕ ತಮ್ಮಂತಹವರನ್ನೆಲ್ಲ ತಲುಪುವ ಸೌಭಾಗ್ಯವೂ ಸಿಕ್ಕಿದೆ (ಸಂಪದಕ್ಕೆ ಮತ್ತು ಸಂಪದ ನಿರ್ವಹಣ / ಓದುಗ ಬಳಗಕ್ಕೆ ನಾನು ಹೇಗೆ ಕೃತಜ್ಞತೆ ಹೇಳಬೇಕೊ ಗೊತ್ತಿಲ್ಲ). ಸಾವಿರಕ್ಕೂ ಮಿಕ್ಕಿ ಕವನಗಳನ್ನು ಬರೆಸಿ ಕೈಹಿಡಿದು ನಡೆಸುತ್ತಿರುವ ಆ ಕನ್ನಡಾಂಬೆಯ ಪ್ರೇರಣೆ, ತಮ್ಮೆಲ್ಲರ ಉತ್ತೇಜನ, ಪ್ರೋತ್ಸಾಹವೆ ಸ್ಪೂರ್ತಿಯ ಮೂಲ :-) 'ಮನದೊರತೆ ಬತ್ತುವವರೆಗೆ ನಿರತ ನಾ ಬರೆವ ಸೋಗೆ' ಮತ್ತೆ ಧನ್ಯವಾದಗಳೊಂದಿಗೆ - ನಾಗೇಶ ಮೈಸೂರು