೫೭. ಶ್ರೀ ಲಲಿತಾ ಸಹಸ್ರನಾಮ ೧೭೬ರಿಂದ ೧೮೧ನೇ ನಾಮಗಳ ವಿವರಣೆ

೫೭. ಶ್ರೀ ಲಲಿತಾ ಸಹಸ್ರನಾಮ ೧೭೬ರಿಂದ ೧೮೧ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೧೭೬ - ೧೮೧

Nirvikalpā निर्विकल्पा (176)

೧೭೬. ನಿರ್ವಿಕಲ್ಪಾ

           ವಿಕಲ್ಪವೆಂದರೆ ತಪ್ಪು ತಿಳುವಳಿಕೆ ಅಥವಾ ತಪ್ಪು ಕಲ್ಪನೆ. ಇದಕ್ಕೆ ಪರ್ಯಾಯವೆನ್ನುವ ಅರ್ಥವೂ ಇದೆ. ’ಕುದುರೆಗೆ ಕೊಂಬುಗಳಿವೆ’ ಎನ್ನುವ ಆಲೋಚನೆಯು ವಿಕಲ್ಪವೆಂದು ಕರೆಯಲ್ಪಡುತ್ತದೆ. ದೇವಿಯು ಅಂತಹ ಆಲೋಚನೆಗಳು ಇಲ್ಲದವಳಾಗಿದ್ದಾಳೆ. ನಿರ್ವಿಕಲ್ಪವೆಂದರೆ ನಾಮ, ರೂಪ, ವರ್ಗ, ಮೊದಲಾದವುಗಳ ರಾಹಿತ್ಯತೆ. ಧ್ಯಾನದ ಪರಿಭಾಷೆಯಲ್ಲಿ ನಿರಂತರ ಗ್ರಹಿಕೆ ಅಥವಾ ನಿರ್ವಿಕಲ್ಪ ಪ್ರತ್ಯಕ್ಷ ಮತ್ತು ಅದರ ಉನ್ನತ ಹಂತವು ನಿರ್ವಿಕಲ್ಪ ಸಮಾಧಿ ಎಂದು ಕರೆಯಲ್ಪಟ್ಟಿದೆ. ಸಮಾಧಿ ಸ್ಥಿತಿಯಲ್ಲಿ ಮನಸ್ಸು ಒಂದು ನಿರ್ಧಿಷ್ಠ ವಸ್ತುವಿನೊಂದಿಗೆ ತಾದಾತ್ಮ್ಯ ಹೊಂದಿರುತ್ತದೆ. ನಿರ್ವಿಕಲ್ಪ ಸಮಾಧಿ ಸ್ಥಿತಿಯಲ್ಲಿ ವ್ಯಕ್ತಿಗೆ ಮತ್ತು ಅವನ ಲಕ್ಷ್ಯಕ್ಕೆ ಯಾವುದೇ ಭೇದವಿರುವಿದಿಲ್ಲ. ಇದು ಪ್ರತ್ಯೇಕತೆಯ ಕುರಿತಾದ ತಿಳುವಳಿಕೆ ಅಥವಾ ವ್ಯತ್ಯಾಸವಿಲ್ಲದಿರುವಿಕೆಯ ಅನುಭವ.

          ವಿ+ಕಲ್ಪ=ವಿಕಲ್ಪ. ವಿ ಎಂದರೆ ವ್ಯತಿರೇಕತೆ ಮತ್ತು ಕಲ್ಪ ಎಂದರೆ ಪ್ರತಿಪಾದನೆ ಅಥವಾ ಸಿದ್ಧಾಂತ ಮತ್ತು ಇಲ್ಲಿ ವಿಕಲ್ಪವೆಂದರೆ ಒಟ್ಟಾರೆಯಾಗಿ ಸಿದ್ಧಾಂತಕ್ಕೆ ವಿರುದ್ಧವಾದದ್ದು. ಇಲ್ಲಿ ಸಿದ್ಧಾಂತವೆಂದರೆ ಪರಬ್ರಹ್ಮವನ್ನು ಸೂಚಿಸುತ್ತದೆ. ಆದ್ದರಿಂದ ಈ ನಾಮವು ದೇವಿಯು ಪರಬ್ರಹ್ಮವೆಂದು ಸೂಚಿಸುತ್ತದೆ ಮತ್ತು ಆಕೆಯನ್ನು ಪರಬ್ರಹ್ಮವೆಂದು ಸಂಭೋದಿಸುವ ಸಿದ್ಧಾಂತದಲ್ಲಿ ಯಾವುದೇ ವಿಧವಾದ ವಿಕಲ್ಪವಿಲ್ಲ. ಈ ನಾಮವು ಅದು ವಿಷಯವೇ ಆಗಿರಲಿ ಅಥವಾ ಲಕ್ಷ್ಯವೇ ಆಗಿರಲಿ ಅದು ದೇವಿಯಿಂದ ಬೇರ್ಪಡಿಸಲಾಗದು ಎನ್ನುವ ಅರ್ಥವನ್ನೂ ಕೊಡುತ್ತದೆ.

          ಪತಂಜಲಿಯ ಯೋಗ ಸೂತ್ರವು (೧.೯), "ಶಬ್ದಜ್ಞಾನಾನುಪಾತೀ ವಸ್ತುಶೂನ್ಯೋ ವಿಕಲ್ಪಃ" ಅಂದರೆ (ಆಧಾರವಾದ) ವಸ್ತುವಿಲ್ಲದೆ (ಕೇವಲ) ಶಬ್ದಜ್ಞಾನವನ್ನನುಸರಿಸಿ ಏಳುವ (ಚಿತ್ತವೃತ್ತಿಯೇ) ವಿಕಲ್ಪ, ಎಂದು ಹೇಳುತ್ತದೆ.

          ಬ್ರಹ್ಮಸೂತ್ರವು (೩.೨.೧೪), "ಪರಬ್ರಹ್ಮವು ಖಂಡಿತವಾಗಿ ಅಕಾರ ರಹಿತವಾಗಿದೆ, ಏಕೆಂದರೆ ಅದು ಪ್ರಬಲವಾದ ಭಾಷ್ಯವಾಗಿದೆ." ಇಲ್ಲಿ ಪ್ರಬಲವಾದ ಭಾಷ್ಯವೆಂದರೆ ಉಪನಿಷತ್ತುಗಳ ಭೋದನೆಗಳು.

Nirābādhā निराबाधा (177)

೧೭೭. ನಿರಾಬಾಧಾ

          ದೇವಿಯು ಯಾತನೆಯಿಲ್ಲದವಳಾಗಿದ್ದಾಳೆ. ಆಕೆಯು ಭ್ರಮೆಯಿಂದ ವಿಚಲಿತಳಾಗುವುದಿಲ್ಲ. ಭ್ರಮೆಯು ಒಂದು ವಸ್ತುವನ್ನು ತಪ್ಪಾಗಿ ಗುರುತಿಸುವುದರಿಂದ ಉಂಟಾಗುತ್ತದೆ. ಉದಾಹರಣೆಗೆ, ಕತ್ತಲೆಯಲ್ಲಿ ಒಂದು ಹಗ್ಗವನ್ನು ಹಾವೆಂದು ತಪ್ಪಾಗಿ ಗುರುತಿಸುವುದು ಭ್ರಮೆಯಾಗಿದೆ. ಭ್ರಮೆಯಿಂದಾಗಿ ಹೆದರಿಕೆ, ಕಾಮ, ಮೊದಲಾದವುಗಳು ಉಂಟಾಗುತ್ತವೆ. ದೇವಿಯೇ ಇಂತಹ ಭ್ರಮೆಗಳಿಗೆ ಕಾರಣಳಾಗಿರುವುದರಿಂದ (ಮಾಯೆಯಾಗಿರುವುದರಿಂದ), ಆಕೆಯು ಯಾವುದೇ ರೀತಿಯಾದ ಭ್ರಮೆಗೊಳಪಡುವ ಪ್ರಶ್ನೆಯೇ ಇಲ್ಲ, ಮತ್ತೊಂದು ವಿಷಯವೇನೆಂದರೆ ಬ್ರಹ್ಮಕ್ಕೆ ಭ್ರಮೆ ಮೊದಲಾದ ಗುಣಗಳಿಲ್ಲ.

Nirbhedā निर्भेदा (178)

೧೭೮. ನಿರ್ಭೇದಾ

          ದೇವಿಯು ಭೇದಗಳಿಲ್ಲದವಳಾಗಿದ್ದಾಳೆ. ಬಹುಶಃ ಇಲ್ಲಿ ಭೇದವೆಂದರೆ ಅವಳಿಗೂ ಮತ್ತು ಶಿವನಿಗೂ ಇರುವ ಭೇದವಾಗಿರಬಹುದು. ಆದ್ದರಿಂದ ವಿವೇಕವುಳ್ಳವರು ಶಿವ ಮತ್ತು ಶಕ್ತಿಯರಲ್ಲಿ ಯಾವುದೇ ವಿಧವಾದ ಭೇದವನ್ನು ಎಣಿಸರು. ಇವರ ಸಂಯುಕ್ತ ರೂಪವೇ ಪರಬ್ರಹ್ಮವಾಗಿದೆ ಮತ್ತು ಇವರೀರ್ವರ ನಡುವೆ ಭೇದವಿಲ್ಲ. ಈ ಸಂಯುಕ್ತ ರೂಪದ ಗುಣಗಳನ್ನೇ ಈ ಸಹಸ್ರನಾಮಾವಳಿಯಲ್ಲಿ ವರ್ಣಿಸಲಾಗುತ್ತಿದೆ. ಸಹಸ್ರನಾಮದ ಎಲ್ಲಾ ನಾಮಗಳೂ ಲಲಿತಾಂಬಿಕೆಯನ್ನು ಸಂಭೋದಿಸಿ ಹೇಳಿದ್ದರೂ ಕೂಡಾ ಅದನ್ನು ಆಕೆಗೆ ವೈಯ್ಯಕ್ತಿಕವಾಗಿ ಆರೋಪಿಸಬಾರದು ಮತ್ತು ಇಲ್ಲಿರುವ ನಾಮಗಳನ್ನು ಶಿವ-ಶಕ್ತಿಯರ ಸಂಯುಕ್ತ ರೂಪವನ್ನು ಉದ್ದೇಶಿಸಿ ಹೇಳಲಾಗಿದೆ. ಸೌಂದರ್ಯ ಲಹರಿಯು ಶಿವ ಅಥವಾ ಶಕ್ತಿ ಒಬ್ಬರನ್ನೊಬ್ಬರು ಅವಲಂಭಿಸದೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಾರರು ಎಂದು ಹೇಳುತ್ತದೆ. ಕೂರ್ಮ ಪುರಾಣವು ಪರಮ ಶಕ್ತಿಯು ಅನಂತವಾದದ್ದೆಂದು, ಅದು ಯಾವುದೇ ವಿಧವಾದ ಭೇದಗಳಿಂದ ಮುಕ್ತವಾಗಿದೆಯೆಂದೂ ಮತ್ತು ಅದು ಎಲ್ಲಾ ವಿಧವಾದ ಭೇದಗಳನ್ನು ನಾಶಮಾಡುತ್ತದೆಂದು ಹೇಳುತ್ತದೆ (ಇದನ್ನೇ ಮುಂದಿನ ನಾಮದಲ್ಲಿ ವಿವರಿಸಲಾಗಿದೆ).

Bhedanāśinī भेदनाशिनी (179)

೧೭೯. ಭೇದನಾಶಿನೀ

          ದೇವಿಯು ತನ್ನ ಭಕ್ತರ ಮನಸ್ಸಿನಲ್ಲಿರುವ ಎಲ್ಲಾ ವಿಧವಾದ ಭೇದಗಳನ್ನು ನಾಶಮಾಡುತ್ತಾಳೆ. ಭೇದವೆಂದರೆ ದ್ವೈತ್ವತೆ, ಯಾವಾಗ ಭೇದವು ನಾಶವಾಗುವುದೋ ಆಗ ಎರಡನೆಯದು ಇರುವುದಿಲ್ಲ. ಈ ಭೇದವನ್ನು ಜ್ಞಾನವನ್ನು ಪಡೆಯುವುದರ ಮೂಲಕ ಹೊಂದಬಹುದು ಮತ್ತು ದೇವಿಯು ತನ್ನ ಭಕ್ತರಿಗೆ ಈ ವಿಧವಾದ ಜ್ಞಾನವನ್ನು ಕರುಣಿಸುತ್ತಾಳೆ. ಈ ಸಹಸ್ರನಾಮದ ಫಲಶ್ರುತಿಯು (ಈ ಸಹಸ್ರನಾಮವನ್ನು ಪಠಿಸುವುದರ ಮೂಲಕ ಉಂಟಾಗುವ ಒಳಿತುಗಳು) ದೇವಿಗೆ ಹಾಗೂ ಆಕೆಯ ಭಕ್ತರಲ್ಲಿ ಭೇದವಿಲ್ಲವೆಂದು ಸಾರುತ್ತದೆ. ಈ ಸಹಸ್ರನಾಮದ ರಚನಕಾರರಾಗಲಿ ಅಥವಾ ಇತರೇ ಮಹತ್ವದ ಸ್ತುತಿ/ಸಹಸ್ರನಾಮಗಳ ಕೃತಿಕಾರರು ಯಾವಾಗಲೂ ಕೆಲವು ಶ್ಲೋಕಗಳನ್ನು ಮುಖ್ಯವಾದ ಪಾಠಾಂಶವಾದ ನಂತರ ಮುಕ್ತಾಯದ ಭಾಗದಲ್ಲಿ ಸೇರಿಸುತ್ತಾರೆ ಇದನ್ನೇ ಫಲಶ್ರುತಿ ಅಥವಾ ಅಂತಿಮ ಭಾಗವೆನ್ನಬಹುದು. ಸಾಮಾನ್ಯವಾಗಿ ಈ ಅಂತಿಮ ಘಟ್ಟದ ಶ್ಲೋಕಗಳಲ್ಲಿ ಈ ಸಹಸ್ರನಾಮವನ್ನು ಹೇಗೆ ಉಚ್ಛರಿಸಬೇಕು, ಅವನ್ನು ಯಾವ ಸಮಯಗಳಲ್ಲಿ ಹೇಳಿಕೊಳ್ಳಬೇಕು ಮತ್ತು ಈ ರೀತಿ ಪಾರಾಯಣ ಮಾಡುವುದರಿಂದ ಆಗುವ ಒಳಿತುಗಳೇನು ಎನ್ನುವದನ್ನು ವಿಶದಪಡಿಸುತ್ತವೆ. (ಫಲಶ್ರುತಿಯ ಕುರಿತಾದ ಸಂಕ್ಷಿಪ್ತ ವಿವರಣೆಯನ್ನು ಸಹಸ್ರನಾಮದ ಕಡೆಯಲ್ಲಿ ನೋಡೋಣ).

Nirnāśā निर्नाशा (180)

೧೮೦. ನಿರ್ನಾಶಾ

          ದೇವಿಯು ನಾಶವಿಲ್ಲದವಳಾಗಿದ್ದಾಳೆ. ಬ್ರಹ್ಮವು ವಿನಾಶಕ್ಕೆ ಅತೀತವಾಗಿದೆ. ಅನಂತತೆಯೇ ನಿನ್ನ ಹೆಸರು ಪರಬ್ರಹ್ಮ! ತೈತ್ತರೀಯ ಉಪನಿಷತ್ತು (೨.೧) ಹೇಳುತ್ತದೆ, "ಸತ್ಯಂ ಜ್ಞಾನಮ್ ಅನಂತಮ್ ಬ್ರಹ್ಮ" ಎಂದರೆ ಬ್ರಹ್ಮವು ಸತ್ಯವಾದದ್ದು, ಜ್ಞಾನವುಳ್ಳದ್ದು ಮತ್ತು ಅನಂತವಾದದ್ದು.

Mṛtyu-mathanī मृत्यु-मथनी (181)

೧೮೧. ಮೃತ್ಯು-ಮಥನೀ

          ದೇವಿಯು ತನ್ನ ಭಕ್ತರ ಮರಣವನ್ನು ವಿನಾಶಗೊಳಿಸುತ್ತಾಳೆ. ಮೃತ್ಯುವೆಂದರೆ ಸಾವು. ಯಾರು ಸಾವಿಲ್ಲದವರೋ ಅವರು ಮಾತ್ರ ಅಮೃತತ್ವದ ವರವನ್ನು ಕೊಡಬಲ್ಲರು. ಸಾವೆಂದರೆ ಪುನರ್ಜನ್ಮ ಆದ್ದರಿಂದ ದೇವಿಯು ತನ್ನ ಭಕ್ತರು ಪುನಃ ಜನನ ಹೊಂದಲು ಬಿಡುವುದಿಲ್ಲ. ಇದರ ಅರ್ಥವೇನೆಂದರೆ ದೇವಿಯು ತನ್ನ ಭಕ್ತರ ಎಲ್ಲಾ ಕರ್ಮಗಳನ್ನು ನಾಶಮಾಡುತ್ತಾಳೆ. ಭಕ್ತನೆಂದರೆ ಕೇವಲ ದೇವಿಯ ಉಪಾಸನೆಯನ್ನು ಮಾಡುವವನಲ್ಲ. ಯಾರು ತನ್ನನ್ನು ದೇವಿಯೊಂದಿಗೆ ಗುರುತಿಸಿಕೊಳ್ಳಬಲ್ಲನೋ ಅಂತಹವನೇ ಭಕ್ತನೆನಿಸಿಕೊಳ್ಳುತ್ತಾನೆ ಮತ್ತು ಈ ರೀತಿಯಾದ ಹಂತವು ಅವಿರತ ಧ್ಯಾನದಿಂದ ಮಾತ್ರವೇ ಹೊಂದಲ್ಪಡುತ್ತದೆ.

******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 176-181 http://www.manblunder.com/2009/09/lalitha-sahasranamam-176-181.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
No votes yet

Comments

Submitted by nageshamysore Fri, 06/28/2013 - 20:49

ಶ್ರೀಧರರೆ, 176-181, ತಮ್ಮ ಅವಗಾಹನೆ, ಪರಿಶೀಲನೆಗೆ ಸಿದ್ದ, ಈ ಕೆಳಗಿನ ಲಿಂಕಿನಲ್ಲಿ - ನಾಗೇಶ ಮೈಸೂರು :-)
(ಈ ವಿಧಾನ ಕೆಲಸ ಮಾಡುವುದೆ ಪ್ರಯತ್ನಿಸಿ ನೋಡೋಣ. ನಿಮ್ಮ ಪರಿಷ್ಕರಣೆಯನ್ನು / ಸಲಹೆಗಳನ್ನು ''leave a reply'' ನಲ್ಲಿ ಹಾಕಿ. ಅದರ ಆಧಾರದ ಮೇಲೆ ಮೂಲ ಆವೃತ್ತಿಯನ್ನು ತಿದ್ದಿ ಕೊನೆಯ ಆವೃತ್ತಿಯನ್ನು ಸಂಪದಕ್ಕೆ ಸೇರಿಸೋಣ - ಪ್ರತಿಕ್ರಿಯೆಯಾಗಿ)
https://ardharaatriaalaapagalu.wordpress.com/%e0%b2%b6%e0%b3%8d%e0%b2%b…

Submitted by ಗಣೇಶ Sat, 06/29/2013 - 00:18

In reply to by nageshamysore

ನಾಗೇಶರೆ, ಪರಿಷ್ಕರಣೆ/ ಸಲಹೆಗಳನ್ನೆಲ್ಲಾ ಇಲ್ಲಿ ಮಾಡಿ ಕೊನೆಯ ಆವೃತ್ತಿಯನ್ನು ಅಲ್ಲಿ ಹಾಕಿ. ನೀವು ತಪ್ಪಿದ್ದು ನಮಗೂ ಗೊತ್ತಾಗಬೇಕಲ್ಲಾ :)

Submitted by nageshamysore Sat, 06/29/2013 - 05:17

In reply to by ಗಣೇಶ

ಗಣೇಶ್ ಜಿ, ನಿಮ್ಮಿಂದ ನಿರೀಕ್ಷಿಸಿದ್ದ ಪ್ರತಿಕ್ರಿಯೆ :-) ಒಂದು ಕೆಲಸ ಮಾಡೋಣ ಒಟ್ಟು ಎರಡು ಪ್ರತಿಕ್ರಿಯೆ ಹಾಕೋಣ - ಒಂದು ಪರಿಷ್ಕೃತ ಪ್ರತಿಕ್ರಿಯೆ ಮತ್ತೊಂದು ಎಲ್ಲಾ ತಪ್ಪುಗಳ ಸಂಗ್ರಹಿತ ಪ್ರತಿಕ್ರಿಯೆ. ಆಗ ನಿಮಗೆ ಮಾರ್ಕ್ಸ್ ಕಟ್ ಮಾಡಲೂ ಸುಲಭವಾಗುತ್ತೆ!

ಅಂದ ಹಾಗೆ ಈಗಲೂ ಎಲ್ಲಾ ತಪ್ಪುಗಳನ್ನು ನೋಡಬಹುದು 'ಕಾಮೇಂಟ್ಸ್' ರೂಪದಲ್ಲಿ - ಸ್ವಲ್ಪ ಕೊಂಡಿಯನ್ನು ಗಿಂಡಬೇಕಷ್ಟೆ. ಆದರೂ, ಶ್ರೀಧರರೂ ನಿಮ್ಮದೆ ಅಭಿಪ್ರಾಯ ಹೊಂದಿದ್ದರೆ, ಮತ್ತೆ ಹಳೆ ವಿಧಾನಕ್ಕೆ ಹೋಗಲಿಕ್ಕೆ ನನದೇನೂ ಅಭ್ಯಂತರವಿಲ್ಲ. ಹೆಚ್ಚು ಜನ ನೋಡಿ ತಪ್ಪು ಕಂಡು ಹಿಡಿದಷ್ಟು, ಸರಿಪಡಿಸುವ ಅವಕಾಶ ಸಿಕ್ಕಿ , ಬರಹ ಅಷ್ಟರ ಮಟ್ಟಿಗೆ ಉತ್ತಮಗೊಳ್ಳಲು ಸಾಧ್ಯ; ನಾನಂತೂ ಪರಿಪೂರ್ಣನಲ್ಲವಾಗಿ ಸಾಕಷ್ಟು ತಪ್ಪುಗಳು ಖಂಡಿತ ಘಟಿಸಲಿವೆ :-)

- ನಾಗೇಶ ಮೈಸೂರು

Submitted by nageshamysore Wed, 07/03/2013 - 18:45

ಶ್ರೀಧರರೆ, ನೀವಿನ್ನು ಗೂಗಲ್ ಕ್ರಾಶ್ ರಿಕವರಿಯಲ್ಲಿ ನಿರತರಿರುವುದರಿಂದ , ಸಂಪದದಲ್ಲೆ ಕವನ ಹಾಕುತ್ತೇನೆ - ನಿಮ್ಮ ತೊಂದರೆಯೆಲ್ಲ ಕಳೆದ ಮೇಲೆ ನಿಧಾನವಾಗಿ ಪರಿಷ್ಕರಿಸೋಣ - ನಾಗೇಶ ಮೈಸೂರು

೧೭೬. ನಿರ್ವಿಕಲ್ಪಾ
ವ್ಯತಿರೇಕದ ಸಿದ್ದಾಂತ, ತಪ್ಪು ಕಲ್ಪನೆಯೆ ವಿಕಲ್ಪ
ನಾಮ, ರೂಪ, ವರ್ಗಾರಾಹಿತ್ಯತೆಯೆ ನಿರ್ವಿಕಲ್ಪ
ತಾದಾತ್ಮ್ಯತೆ ಸಮಾಧಿಸ್ಥಿತಿ ವ್ಯಕ್ತಿ ಲಕ್ಷ್ಯದಲಿ ಐಕ್ಯ
ದೇವಿ ಪರಬ್ರಹ್ಮವೆನುವ ತತ್ವಕಿಲ್ಲ ವಿಕಲ್ಪದ ಸಖ್ಯ!

೧೭೭. ನಿರಾಬಾಧಾ
ಇರುಳಿನ ಹಗ್ಗವನೆ ಹಾವಾಗಿ ತೋರುವ ಭ್ರಮೆ
ಭಯ ಭೀತಿ ಕಾಮನೆ ಹುಟ್ಟಿಸೊ ಮಾಯೆ ತಾನೆ
ವಿಚಲಿತಳಾಗದೆ ಭ್ರಮೆಗೆ, ಅತೀತಳು ಯಾತನೆಗೆ
ಮಾಯೆ ಕವಿಸುವ ಬ್ರಹ್ಮಾ, ಭ್ರಮೆಯೆಲ್ಲಿ ಲಲಿತೆಗೆ!

೧೭೮. ನಿರ್ಭೇಧಾ 
ಶಿವ ಶಕ್ತಿ ನಡುವಲಿ ಭೇಧವೆಣಿಸೆ ಅವಿವೇಕ
ಸಂಯುಕ್ತ ರೂಪವೆ ಪರಬ್ರಹ್ಮದ ನಿಜಮುಖ
ಪರಸ್ಪರ ಅವಲಂಬನೆಯಾಗೆಲ್ಲಾ ನಿರ್ವಹಣೆ
ಭೇಧ ಮುಕ್ತಿ ವಿನಾಶಕೀ ಅನಂತ ಶಕ್ತಿ ತಾನೆ!

೧೭೯. ಭೇದನಾಶಿನೀ 
ಭೇದವೆಂದರೆ ದ್ವೈತ್ವತೆ, ನಾಶವಾಗೆ ಉಳಿವುದು ಏಕತೆ
ಭೇದಜ್ಞಾನ ಕರುಣಿಸೊ, ದೇವಿ-ಭಕ್ತರಲಿಲ್ಲ ಅಸಮಾನತೆ 
ಮನದೆಲ್ಲತರ ಭೇದ, ನಾಶಮಾಡುತ ಲಲಿತಾ ಭವಾನಿ
ನಿಜಭಕ್ತಗೀವ ಫಲಶ್ರುತಿ, ಸಾರುತಲವಳೆ ಭೇದನಾಶಿನೀ!

೧೮೦. ನಿರ್ನಾಶಾ 
ಸತ್ಯ ಜ್ಞಾನ ಅನಂತತೆಯ ಸಂಗಮವಾಗಿಹ ಬ್ರಹ್ಮ
ಅನಂತತೆಯ ಅನಂತತೆಯೆ ತಾನಲ್ಲವೆ ಪರಬ್ರಹ್ಮ
ವಿನಾಶಾತೀತ ಬ್ರಹ್ಮ, ಗುಣಲಕ್ಷಣವದಾಗದೆ ನಾಶ
ದೇವಿಗು ಅನುರಣಿತ, ಲಲಿತೆಯನಾಗಿಸಿ ನಿರ್ನಾಶ!

೧೮೧. ಮೃತ್ಯು-ಮಥನೀ 
ಪೂಜಾ ಉಪಾಸನೆ ಹಂತ, ಮೀರುತಲೆ ಮೇಲೆರುತ
ಅವಿರತ ಧ್ಯಾನಿಸೆ ಭಕ್ತ, ತನ್ನನೆ ದೇವಿಯಾಗಿಸುವತ್ತ
ಜಯಿಸೆ ಭಕ್ತಗೆ ಪುನರ್ಜನ್ಮ-ಕರ್ಮ ವಿನಾಶಿಸಿ ಜನನಿ
ಸಾವಿಗೆ ಮುಕ್ತಿಯುಣಿಸಿ, ಸಲಹುವ ಮೃತ್ಯು-ಮಥನೀ!

Submitted by makara Fri, 07/05/2013 - 06:22

In reply to by nageshamysore

ನಾಗೇಶರೆ,
ಮೃತ್ಯು ಮಥನೀ ಅತ್ಯಂತ ಸುಂದರವಾಗಿ ಮೂಢಿ ಬಂದಿದೆ. ಕೆಳಗಿನ ಕಣ್ತಪ್ಪಿನ ದೋಷಗಳನ್ನು ಸರಿಪಡಿಸಿದರೆ ಈ ಕಾವ್ಯದಲ್ಲಿ ಬದಲಿಸುವುದು ಮತ್ತೇನೂ ಇಲ್ಲ.
೧೭೬. ನಿರ್ವಿಕಲ್ಪಾ
ನಾಮ, ರೂಪ, ವರ್ಗಾರಾಹಿತ್ಯತೆಯೆ ನಿರ್ವಿಕಲ್ಪ
ವರ್ಗಾರಾಹಿತ್ಯತೆಯೆ=ವರ್ಗರಾಹಿತ್ಯತೆಯೆ

೧೭೮. ನಿರ್ಭೇದಾ
ಭೇಧ ಮುಕ್ತಿ ವಿನಾಶಕೀ ಅನಂತ ಶಕ್ತಿ ತಾನೆ!
ಭೇಧ=ಭೇದ , ವಿನಾಶಕೀ=ವಿನಾಶಕಿ

ಧನ್ಯವಾದಗಳೊಂದಿಗೆ,
ಶ್ರೀಧರ್ ಬಂಡ್ರಿ
ಮೇಲಿನ ತಿದ್ದುಪಡಿಯನ್ನು ನೀವು ಕೊಟ್ಟ ಕೊಂಡಿಯಲ್ಲಿ ಸೇರಿಸಲು ಪ್ರಯತ್ನಿಸಿದ್ದೆ. ಆದರೆ ನನ್ನ ಬ್ರೌಸರ್‌ನಲ್ಲಿ/ಸರ್ವರಿನಲ್ಲಿ ಏನೋ ಸಮಸ್ಯೆ ಇರುವಂತಿದೆ ಹಾಗಾಗಿ ಅದನ್ನು ಅಲ್ಲಿ ಸೇರಿಸಲಾಗಲಿಲ್ಲ. ಇಂದೇಕೋ ಚೆನ್ನಾಗಿ ಕೆಲಸ ಮಾಡುತ್ತಿದೆ; ಉಳಿದವರಿಗೂ ಮರು ಪ್ರತಿಕ್ರಿಯೆ ನೀಡುತ್ತೇನೆ.

Submitted by nageshamysore Fri, 07/05/2013 - 17:36

In reply to by makara

ಶ್ರೀಧರರೆ ೧೭೬ ಮತ್ತು ೧೭೮ ತಿದ್ದುಪಡಿಯಾದ ಆವೃತ್ತಿ ಸಿದ್ದ - ನಾಗೇಶ ಮೈಸೂರು :-)

೧೭೬. ನಿರ್ವಿಕಲ್ಪಾ
ವ್ಯತಿರೇಕದ ಸಿದ್ದಾಂತ, ತಪ್ಪು ಕಲ್ಪನೆಯೆ ವಿಕಲ್ಪ
ನಾಮ, ರೂಪ, ವರ್ಗರಾಹಿತ್ಯತೆಯೆ ನಿರ್ವಿಕಲ್ಪ
ತಾದಾತ್ಮ್ಯತೆ ಸಮಾಧಿಸ್ಥಿತಿ ವ್ಯಕ್ತಿ ಲಕ್ಷ್ಯದಲಿ ಐಕ್ಯ
ದೇವಿ ಪರಬ್ರಹ್ಮವೆನುವ ತತ್ವಕಿಲ್ಲ ವಿಕಲ್ಪದ ಸಖ್ಯ!

೧೭೮. ನಿರ್ಭೇಧಾ
ಶಿವ ಶಕ್ತಿ ನಡುವಲಿ ಭೇಧವೆಣಿಸೆ ಅವಿವೇಕ
ಸಂಯುಕ್ತ ರೂಪವೆ ಪರಬ್ರಹ್ಮದ ನಿಜಮುಖ
ಪರಸ್ಪರ ಅವಲಂಬನೆಯಾಗೆಲ್ಲಾ ನಿರ್ವಹಣೆ
ಭೇದ ಮುಕ್ತಿ ವಿನಾಶಕಿ ಅನಂತ ಶಕ್ತಿ ತಾನೆ!

Submitted by nageshamysore Wed, 07/17/2013 - 19:29

In reply to by nageshamysore

ಶ್ರೀಧರರೆ ೧೭೬ ಮತ್ತು ೧೭೮ ತಿದ್ದುಪಡಿಯಾದ ಆವೃತ್ತಿ ಜತೆಗೆ ಅಂತಿಮ ಕೊಂಡಿ ಸೇರಿಸುತ್ತಿದ್ದೇನೆ, ಹಾಗೆಯೆ ೧೭೮ ಮತ್ತೊಂದು ಕಡೆ 'ಭೇದ' ಪದ ತಪ್ಪಾಗಿತ್ತು, ಅದನ್ನು ತಿದ್ದಿದ್ದೇನೆ  - ನಾಗೇಶ ಮೈಸೂರು :-)
೧೭೮. ನಿರ್ಭೇಧಾ
ಶಿವ ಶಕ್ತಿ ನಡುವಲಿ ಭೇದವೆಣಿಸೆ ಅವಿವೇಕ
ಸಂಯುಕ್ತ ರೂಪವೆ ಪರಬ್ರಹ್ಮದ ನಿಜಮುಖ
ಪರಸ್ಪರ ಅವಲಂಬನೆಯಾಗೆಲ್ಲಾ ನಿರ್ವಹಣೆ
ಭೇದ ಮುಕ್ತಿ ವಿನಾಶಕಿ ಅನಂತ ಶಕ್ತಿ ತಾನೆ!
ಅಂತಿಮ ಕೊಂಡಿ : https://ardharaatria...

ಮತ್ತೊಮ್ಮೆ ಅಂತಿಮ ಕೊಂಡಿ ನೀಡುತ್ತಿದ್ದೇನೆ - ಈ ಬಾರಿಯೂ ಸರಿಯಾಗಿ ಕೆಲಸ ಮಾಡದಿದ್ದರೆ, ನೀವಾಗಲೆ ಹೇಳಿದ ಹಾಗೆ ಆ ಪುಟದಲ್ಲಿ ಸಂಖ್ಯೆಯ ಮೇಲೆ ಕ್ಲಿಕ್ ಮಾಡುವ ಎರಡನೆ ಸಾಧ್ಯತೆಯನ್ನೆ ಬಳಸಬೇಕಾಗುತ್ತದೆ - ನಾಗೇಶ ಮೈಸೂರು: https://ardharaatria...