ಸರಿ ತಪ್ಪುಗಳ ಲೆಕ್ಕ (ಚಿತ್ರಗುಪ್ತ ವಾಗ್ವಾದ - ಪೂರ್ವಾರ್ಧ: ಲಘು ಹಾಸ್ಯದ ಧಾಟಿ)
ಪಾಪ ಪುಣ್ಯಗಳ ಭೀತಿ ಮತ್ತು ಅದರ ಲೆಕ್ಕವಿಡುವ ನಿಯಂತ್ರಣಾಧಿಕಾರಿ ಚಿತ್ರಗುಪ್ತನ ಪರಿಕಲ್ಪನೆ ನಮ್ಮ ಪ್ರಜ್ಞೆಗಳಲ್ಲಿ ಅರಿತೊ, ಅರಿವಿಲ್ಲದೆಯೊ ಅವಿತು ಸದಾ ಕಾಡುವ ಚಿತ್ರ. ಆ ನಂಬಿಕೆಯ ಅಡಿಗಟ್ಟಿನಲ್ಲಿ, ಈ ಕವನ ಚಿತ್ರಗುಪ್ತನೊಡನೆಯ ಸಂವಾದವಾಗಿ ಲಘುಹಾಸ್ಯ, ವ್ಯಂಗ್ಯದ ರೂಪದಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ.
ಸರಿ ತಪ್ಪುಗಳ ಲೆಕ್ಕ (ಚಿತ್ರಗುಪ್ತ ವಾಗ್ವಾದ)
--------------------------------------------
ಯಾರಪ್ಪ ನೀ ಮಡೆಯ ಕರಿ ಚಿತ್ರಗುಪ್ತ
ಬರೆದಿರುವೆಯಂತೆ ನಮ್ಮ ಸರಿ ತಪ್ಪುಗಳ ಲೆಕ್ಕ
ಇಟ್ಟು ತೊಗಲಿನ ಕಡತ ಪ್ರತಿ ನಿಮಿಷ, ದಿವಸ
ಕೂಡಿ ಕಳೆಯುವೆಯಂತೆ ಪಾಪ ಪುಣ್ಯದ ಗೊಲಸ!
ಯಾರಪ್ಪ ಸಾಚ, ಎಲ್ಲರ ದೋಸೆಯೂ ತೂತು
ನಮ್ಮಂತ ಕವಿ'ಗಳಿಗೆ' ಕಾವಲಿಯೆ ಹೋಯ್ತು
ಏನೊ ಮಾಡುವ ಗಮನ, ನೂರೆಂಟು ಕಿರಿಕಿರಿ ಮನ
ಬಿಡುವೆಲ್ಲಿ ಲೆಕ್ಕಿಸಲು ಸರಿ ತಪ್ಪಿನ ಹವನ?
ನೀನೆಂತ ಖಾಲಿ, ಏನು ಕೆಲಸವಿಲ್ಲದ ಕೂಲಿ
ಯಾಕೆ ಬೇಕೊ ಕಾಣೆ ನಮ್ಮೆಲ್ಲರ ಉಸಾಬರಿ
ನಮ್ಮಲ್ಲೆ ನೂರೆಂಟು ಕೋರ್ಟು, ಕಛೇರಿಗಳುಂಟು
ನಡುವೆ ನಿನಗೇಕೆ ಬೇಕೋ ನಮ್ಮ ಲೆಕ್ಕದ ಗಂಟು?
ಸ್ವರ್ಗ ನರಕದ ಮನೆಗೆ ನೀನೆ ಪೂಜಾರಿ
ಯಮಧರ್ಮನಾಣತಿಗು ನಿನ್ನ ಕೃಪೆಯ ದಾರಿ
ಎದುರ್ಹಾಕಿಕೊಂಡರೆ ನೀ ಹತ್ತಿಸಿಬಿಡುವೆ ಲಾರಿ
ಮನದಲಿಡಬೇಡ ಸೇಡು ನಾ ಆಗುವೆನು ಆಭಾರಿ!
ಹೆದರಿಸಬೇಡಯ್ಯ ಹೇಳಿ ನರಕಗಳ ಶಿಕ್ಷೆ
ಅದಕೂ ಭೀಕರ ನಮ್ಮ ಇಹ ಜೀವನದ ಕಕ್ಷೆ
ನೀನಿನ್ನೂ ನೋಡಿಲ್ಲ ನಮ್ಮ ಮಂತ್ರಿ, ಪೋಲೀಸು
ನಿನಗು ಬೆಂಡೆತ್ತುವ ಲಾಠಿ, ನಮ್ಮ 'ಲಾ' ಸೂಟು!
ಕಾದ ಕೊಪ್ಪರಿಗೆಯೆಣ್ಣೆ, ಛೇಧನದ ಕತ್ತಿ, ಭಲ್ಲೆ
ಕುಳುಗುಡಿಸೊ ಶೀತದ ಕೋಣೆ, ಬಿಸಿಲೋಹ ಕಡಲೆಣ್ಣೆ
ಅಂಗ ಛೇಧನ ಶಾಲೆ, ಕಚ್ಚುವ ಹಾವುಗಳ ಶೂಲೆ
ಒಂದೂ ಮೀರಿಸಲಾಗದು ನಮ್ಮ ಟ್ರಾಫಿಕ್ಕಿನ ಕಗ್ಗೊಲೆ!
ಇಲ್ಲೆ ಎಷ್ಟೊಂದುಂಟು ನರಕಗಳ ಸ್ಯಾಂಪಲ್ಲು
ದಿನ ಸತ್ತು ಬದುಕಿರುವ ಬಡಪಾಯಿ 'ಗೋಳು'
ಬದುಕಿದ ಪ್ರತಿದಿನ ಶಿಕ್ಷೆ, ಹಣೆಬರಹ ಮುಕ್ತ
ಮಾಡಿ ಬಿಡಬಾರದೆ ನಮ್ಮ ಲೆಕ್ಕಗಳ ಚುಕ್ತಾ?
-------------------------------------
- ನಾಗೇಶ ಮೈಸೂರು
-------------------------------------
Comments
"ಯಮಧರ್ಮನಾಣತಿಗು ನಿನ್ನ ಕೃಪೆಯ
In reply to "ಯಮಧರ್ಮನಾಣತಿಗು ನಿನ್ನ ಕೃಪೆಯ by venkatb83
ಸಪ್ತಗಿರಿಗಳೆ ನಮಸ್ಕಾರ, ನಿಮ್ಮ