'ಗುಟ್ 'ಕಾ ಕಥೆ

Submitted by ಸುಧೀ೦ದ್ರ on Mon, 07/01/2013 - 12:10
 
೩೧ / ೦೫ / ೨೦೧೩
 
ಬಾಗ್ಮನೆ ತಂತ್ರಜ್ಞಾನ ಉದ್ಯಾನದ ಕಟ್ಟ ಕಡೆಯ ಕಟ್ಟಡದ ಎರಡನೇ ಮಹಡಿಯಲ್ಲಿ, ದ್ವಾರದಿಂದ ಸೀದಾ ಹೋದರೆ ಮೂರನೇ ಚೌಕದ  ಮೂಲೆಯಲ್ಲಿ ಕೂತಿದ್ದ ರಶ್ಮಿ ಇದ್ದಕ್ಕಿದ್ದ ಹಾಗೆ ಎದ್ದು ಮಹಡಿಯ ಮೆಟ್ಟಿಲ ಕಡೆ ಓಡಿದಳು. ಒಂದೇ ಸಮನೆ ಏದುಸಿರು ಬಿಡುತ್ತಾ ಮೆಟ್ಟಿಲುಗಳನ್ನು ಏರಿದ ರಶ್ಮಿ ಕಾವಲುಗಾರನ ತಡೆಯನ್ನು/ಅಪ್ಪಣೆಯನ್ನು ಮೀರಿ ಬಂದು ನಿಂತಿದ್ದು, ಹನ್ನೆರಡನೆ ಮಹಡಿಯ ಮೇಲಿರುವ ತಾರಸಿಯಲ್ಲಿ. ಪಶ್ಚಿಮದ ಆಗಸದಲ್ಲಿ ಸೂರ್ಯ ಇನ್ನೊಂದು ಕ್ಷಣದಲ್ಲಿ ಮುಳುಗಲಿದ್ದ. ಆಗಲೇ ಅವಳ ಮೊಬೈಲ್ ರಿಂಗಣಿಸಿತು. ಹತ್ತು ನಿಮಿಷದ ಕೆಳಗೆ ಕರೆ ಮಾಡಿದ್ದ ಆಕೆಯ ಗೆಳತಿ ಸೀಮಾ ಫೋನಿನಲ್ಲಿ ಏನು ಉಸುರಿದಳೋ? ಎರಡು ಸೆಕೆಂಡು ರಶ್ಮಿ ಕೈ ಕಟ್ಟಿ ತಲೆ ತಗ್ಗಿಸಿ ನಿಂತಿದ್ದಳು. ಅವಳು ಮತ್ತೆ ತಲೆ ಮೇಲೆತ್ತಿದಾಗ ಆಗಸದಲ್ಲಿ ಸೂರ್ಯ ಇರಲ್ಲಿಲ್ಲ, ಅದಾಗ ಉದಯಿಸುತ್ತಿದ್ದ ಚಂದ್ರ ತನ್ನನ್ನು ಕದ್ದು ನೋಡುತ್ತಿದ್ದಾನೇನೋ ಅನಿಸಿ ರಶ್ಮಿಯ ಮುಖ ಕಪ್ಪಿಟ್ಟಿತ್ತು. ತನ್ನನ್ನು ಕಾಡುತ್ತಿರುವ ಅಪರಾಧಿ ಪ್ರಜ್ಞೆಯಿಂದ ಮುಕ್ತಿಯಾಗಲು ನಡೆದಿರುವುದೆಲ್ಲವನ್ನು ಶಶಿಗೆ ಹೇಳಿಬಿಡಬೇಕೆಂದು ತೀರ್ಮಾನಿಸಿ ಕೆಳಗಿಳಿದು ಬಂದಳು.
 
                                                      *********************************
 
ನಾನು ರಶ್ಮಿ. ಹುಟ್ಟಿದ್ದು ಬೆಳೆದದ್ದು ಚಿನಾ ಹಳ್ಳಿಯ ಯಾವುದೋ ಒಂದು ಕುಗ್ರಾಮ. ಸುತ್ತ ಹತ್ತಾರು ಹಳ್ಳಿಗಳಿಗೆಲ್ಲ ಸೇರಿ ಇದ್ದಿದ್ದು ಒಂದೇ ಶಾಲೆ ಕಾಲೇಜು. ಎರಡು ಅಕ್ಕ ಪಕ್ಕದಲ್ಲೇ ಇತ್ತು. ನನ್ನ ಮನೆಗೂ ಶಾಲೆಗೂ ೨ ಕಿಮೀ ಅಂತರ. ನಾನು ಶಾಲೆಗೇ ಹೋಗಲು ಶುರು ಮಾಡಿದಾಗಿನಿಂದಲೂ ನನ್ನನ್ನು ಸೈಕಲ್ ಮುಂದಿನ ಸೀಟಿನಲ್ಲಿ ಕೂರಿಸಿಕೊಂಡು ಕರೆದೊಯ್ಯುತ್ತಿದ್ದುದು ನನ್ನ ಪಕ್ಕದ ಮನೆಯ, ಅದೇ ಶಾಲೆಯ ನನಗಿಂತಲೂ ೨ ವರ್ಷ ಹಿರಿಯನಾದ ರವಿಕುಮಾರ. ನನ್ನ SSLCವರೆಗೂ ನಮ್ಮ ಸೈಕಲ್ ಮೆರವಣಿಗೆ ಸಾಗಿತು, ಆಮೇಲೆ ರವಿಕುಮಾರ ಡಿಗ್ರಿ ಕಾಲೇಜಿಗೆ ಅಂತ ಪಟ್ಟಣ ಸೇರಿದ. ಆದರೆ ಅಷ್ಟರಲ್ಲಾಗಲೇ ನಾವು ಪರಸ್ಪರ ಒಬ್ಬರಿಗೊಬ್ಬರು ಆಕರ್ಷಿತರಾಗಿದ್ದೆವು. ನಾನು ಪಿಯುಸಿ ಓದುವಾಗ ಪಟ್ಟಣದಿಂದ ರವಿಕುಮಾರ ಬಂದಾಗಲೆಲ್ಲ, ನಾವಿಬ್ಬರೂ  ಕದ್ದು ಮುಚ್ಚಿ  ಭೇಟಿ ಮಾಡುತ್ತಿದ್ದೆವು. ಎರಡು ವರ್ಷ ಕಳೆದ್ದದ್ದೆ ಗೊತ್ತಾಗಲ್ಲಿಲ್ಲ. ಹೇಗೋ ಮಾಡಿ ಪಿಯುಸಿ ಪರೀಕ್ಷೆಯಲ್ಲಿ ನಾನು ಪಾಸಾಗಿದ್ದೆ. ಡಿಗ್ರಿ ಓದಲು ಪಟ್ಟಣಕ್ಕೆ ಹೋಗುತ್ತೀನಿ ಎಂದು ಹಠ ಮಾಡಿದಾಗ, ನನ್ನ ರವಿಯ ಕಳ್ಳಾಟ-ಚೆಲ್ಲಾಟ ಕಂಡಿದ್ದ ನಮ್ಮಿಬ್ಬರ ಮನೆಯವರೂ, ನಮಗೆ ಮದುವೆ ಮಾಡಿಬಿಟ್ಟರು. ಆಗ ನನಗೆ ೧೮ ರವಿಗೆ ೨೦ ವಯಸ್ಸು.
 
ರವಿಕುಮಾರನ ಹೆಂಡತಿಯಾಗಿ ಮೊದಲ ಬಾರಿ ನಾನು ಪಟ್ಟಣಕ್ಕೆ ಕಾಲಿಟ್ಟಿದ್ದು ೨೦೦೫ರಲ್ಲಿ.  ಮಾವ ತೀರಿದ್ದ ಒಬ್ಬರೇ ವಾಸವಾಗಿದ್ದ ರವಿಯ ಸೋದರತ್ತೆ ಮನೆಯಲ್ಲಿ ನಾನು ಸಂಸಾರ ಮಾಡಲು ಶುರುಮಾಡಿದ್ದೆ. ಡಿಗ್ರಿ ಪಾಸಾದರೆ ಸಾಕು, ಲಂಚ ಕೊಟ್ಟು ಯಾವುದಾದರೂ ಸರ್ಕಾರಿ ಕೆಲಸಕ್ಕೆ ತಗಲಾಕೊಳದು ಅಷ್ಟೇ ಅಂತ ರವಿ ತೀರ್ಮಾನಿಸಿ ವರ್ಷಗಳೇ ಆಗಿದ್ದವು. ಹತ್ತು ಲಕ್ಷದವರೆಗೂ ಲಂಚ ಕೊಡಲು ಅವರಪ್ಪ ಕೂಡ ಹೂ ಅಂದಿದ್ದರು. ಹಾಗಾಗಿ ರವಿ ಮೂವೈತ್ತೈದಕ್ಕಿಂತ ಹೆಚ್ಚಿಗೆ ಪಡೆದವನೇ ಅಲ್ಲ.
 
ರವಿ ಡಿಗ್ರಿ ಪಾಸಾದ, ಅವನಂದುಕೊಂಡಂತೆ ೮ ಲಕ್ಷಕ್ಕೆ ಸರ್ಕಾರಿ ಕೆಲಸದ ಡೀಲ್ ಸಿಕ್ಕಿತು. ಡೀಲ್ ಕೊಡಿಸಿದವರ ಕಂಡಿಶನ್ ಇತ್ತು. ಅದು ಒಂದು ವರ್ಷ ಕಾಯುವುದು. ಒಂದೇ ವರ್ಷ ತಾನೇ ಹೇಗೋ ಕಳೆದು ಹೋಗತ್ತೆ ಅಂತ ರವಿ ಅಪ್ಪ ಒಪ್ಪಿದ್ದರು.  ಸರದಿ ಪ್ರಕಾರ  ಒಂದು ವರ್ಷವಾದಮೇಲೆ ನಿನಗೆ ಆರ್ಡರ್ ಕಳಿಸುತ್ತೇವೆ, ಆಗ ಬಂದು ಸೇರಿಕೋ ಎಂದು ಹೇಳಿ ಡೀಲ್ ಕೊಡಿಸಿದವರು ಕಳಿಸಿದ್ದರು, ಮತ್ತು ಆಗಾಗ ಕರೆ ಮಾಡಿ ಹೆಚ್ಚು ಹಣ ಕೊಟ್ಟರೆ ಮಾತ್ರ ಬೇಗ ಕೊಡಿಸೋಕೆ  ಸಾಧ್ಯ ಎಂದು ಇಪ್ಪತೈದು ಐವತ್ತು ಸಾವಿರ ತೊಗೊತಿದ್ದರು.
 
ಒಂದು ವರ್ಷ ಕಳೆಯುತ್ತಾ ಬಂದಿತ್ತು. ಇನ್ನೇನು ರವಿ ಸರ್ಕಾರಿ ಕೆಲಸಕ್ಕೆ ಸೇರುವನು ಎಂದು ಅವರಪ್ಪ ಹಳ್ಳಿಲಿ ಬಾಡೂಟ ಹಾಕಿಸಿದ್ದರು. ದುರಾದೃಷ್ಟ, ವರ್ಷ ತುಂಬೋಕೆ ಒಂದು ವಾರವಿದೆ ಅನ್ನೋವಾಗ ಡೀಲ್ ಕೊಡಿಸಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ, ಅವನ ಏಜೆಂಟ್ ತಲೆಮರೆಸಿಕೊಂಡಿದ್ದ. ಹತ್ತು ಲಕ್ಷ ಕೈತಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ರವಿ ಅಪ್ಪ ಹೃದಯಾಘಾತದಿಂದ ಸತ್ತರು. ರವಿ ಅಪ್ಪ ಮಾಡಿದ್ದ ಸಾಲ ತೀರಿಸಲು ಹಳ್ಳಿಲ್ಲಿದ್ದ ಹೊಲ ಗದ್ದೆ ಮನೆ ಎಲ್ಲ ಮಾರಬೇಕಾಯಿತು. ಬರಿಗೈಯಲ್ಲಿ ಅಮ್ಮನ್ನನ್ನು ಕರಕೊಂಡು ಪಟ್ಟಣ್ಣಕ್ಕೆ ಬಂದ.
 
ಮತ್ತೆ ಒಂದು ವರ್ಷ ರವಿ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಸುತ್ತಾಡಿದ, ಸಿಕ್ಕ ಸಣ್ಣ ಪುಟ್ಟ ಕೆಲಸ ನೆಟ್ಟಗೆ ಮಾಡದೆ ಆಚೆ ದಬ್ಬಿಸಿಕೊಂಡು ವಾಪಸಾದ. ಮನೆಯಲ್ಲಿ ಯಾರ ಮಾತು ಕೇಳುತ್ತಿರಲ್ಲಿಲ್ಲ. ನಾನು ಕೊನೆ ವರ್ಷ ಡಿಗ್ರಿಲಿದ್ದೆ ಜೊತೆಗೆ ಸೀಮಾಳ ಸಲಹೆಯಂತೆ ಕಂಪ್ಯೂಟರ್ ಕೋರ್ಸ್ ಮಾಡ್ತಿದ್ದೆ. ಹಾಗಾಗಿ ರವಿ ಬಗ್ಗೆ ಹೆಚ್ಚಾಗಿ ಗಮನ ಹರಿಸಲು ಸಾಧ್ಯವಾಗಲ್ಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ನನಗೆ ಅವನ ಮೇಲೆ ಪ್ರೀತಿಯೇ ಇರಲ್ಲಿಲ್ಲ. ಪ್ರೀತಿ ಎಂದರೇನು ಅಂತಲೇ ತಿಳಿಯದ ವಯಸ್ಸಲ್ಲಿ ಬರೀ ಆಕರ್ಷಣೆಗೆ ಒಳಗಾಗಿ ಅವನನ್ನು ಮದುವೆಯಾಗಿದ್ದೆ.
 
ನಾನು ಡಿಗ್ರಿ ಪಾಸಾದ ಕೂಡಲೇ ಕಂಪ್ಯೂಟರ್ ಕಲಿತಿದ್ದರಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಹತ್ತು ಸಾವಿರ ರೂಪಾಯಿ ಸಂಬಳ. ರವಿ ಸಂತೋಷಪಡುವ ಬದಲು ಅಸೂಯೆ ಪಟ್ಟ. ಸಣ್ಣ ಪುಟ್ಟ ವಿಷಯಗಳಿಗೂ ನನ್ನನ್ನು ಪ್ರಶ್ನಿಸುತ್ತಿದ್ದ ಮತ್ತು ಅನುಮಾನಿಸುತ್ತಿದ್ದ. ಮೂರು ವರ್ಷಗಳ ಕಾಲ ಅವನ್ನನ್ನು ಸಹಿಸಿದೆ. ಅದೇ ಸಮಯದಲ್ಲಿ ರವಿ ಅಮ್ಮ ಮತ್ತೆ ಸೋದರತ್ತೆ ಸತ್ತಿದ್ದರು. ಯಾವಾಗಲೂ ಜಗಳದಲ್ಲಿ ನನ್ನ ಪರವಾಗಿ ನಿಲ್ಲುತ್ತಿದ್ದ ಅವರಿಬ್ಬರೂ ಈಗಿಲ್ಲ. ಹಾಗಾಗಿ ಮನೆಯಲ್ಲಿ ನನ್ನ ಗೋಳು ಕೇಳೋರಿಲ್ಲದೆ ಆಯಿತು. ಒಂದೊಂದು ಪೈಸಕ್ಕೂ ರವಿ ನನ್ನ ಜೀವ ಹಿಂಡುತ್ತಿದ್ದ.
 
 
೩೧ / ೦೫ / ೨೦೧೧
 
ನನಗಾಗ ೨೪. ರವಿಯ ಹಿಂಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು ಮತ್ತು ಅವನ ಆರೋಗ್ಯ ತೀರ ಹದಗೆಟ್ಟಿತ್ತು. ಅವನನ್ನು ಕಂಡರೆ ಅಸಹ್ಯವಾಗಿ ವಾಕರಿಕೆ ಬರುತ್ತಿತ್ತು. ಒಂದು ದಿನ ಗಟ್ಟಿ ನಿರ್ಧಾರ ಮಾಡಿ ಅವನಿಗೆ ವಿವಾಹ ವಿಚ್ಚೇದನ ನೀಡಲು ತೀರ್ಮಾನಿಸಿ ಅರ್ಜಿ ಸಲ್ಲಿಸಿದೆ. ಕೋರ್ಟಿನಲ್ಲಿ ತೀರ್ಪು ನನ್ನ ಪರ ಬಂದು ನಾನು ರವಿಗೆ ವಿಚ್ಚೇದನ ನೀಡಿದ್ದು ಮೂವತ್ತೊಂದು  ಮೇ ಎರಡು ಸಾವಿರದ ಹನ್ನೊಂದು.
 
ಸ್ವ ಇಚ್ಚೆಯಿಂದ ದಾದಿ ಕೆಲಸಕ್ಕೆ ಸೇರಿದ್ದ ಸೀಮಾ, ರವಿಯನ್ನು ನೋಡಿಕೊಳ್ಳಲು ಒಪ್ಪಿಕೊಂಡಳು. ತಿಂಗಳಿಗೆ ಐದು ಸಾವಿರ ಕೊಡುತ್ತಿದ್ದೆ ಅವಳಿಗೆ. ಆಗಷ್ಟೇ ನನಗೆ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಮೂವತ್ತೆರಡು ಸಾವಿರ ಸಂಬಳದ ಕೆಲಸ ಸಿಕ್ಕಿತ್ತು. ಸೀಮಾಳಿಗೆ, ಕೂರಲು ಏಳಲು ಮತ್ತೊಬ್ಬರ ಸಹಾಯ ಬೇಕಿದ್ದ ರವಿಯ ಪೂರ್ತಿ ಜವಾಬ್ದಾರಿ ವಹಿಸಿ  ನಾನು ಬೆಂಗಳೂರಿಗೆ ಬಂದು ಬಿಟ್ಟೆ.
 
 
೩೧ / ೦೫ / ೨೦೧೩
 
ಇಲ್ಲಿ ಕೆಲಸಕ್ಕೆ ಸೇರಿ ೨ ವರ್ಷವಾಯಿತು. ನನ್ನ ಜೊತೆ ಅತಿ ಸಲುಗೆ ಬೆಳೆಸಿಕೊಂಡಿರೋ ಶಶಿಗೆ ನಾನು ಹೇಳಿರೋದು ಕೇವಲ ನನ್ನ ಊರು ಮತ್ತು ನಾನೊಬ್ಬ ಅನಾಥೆ ಅವಿವಾಹಿತೆ  ಎಂದಷ್ಟೇ. ಇವತ್ತು ರವಿ ಸತ್ತಿದ್ದಾನೆ. ಈಗಲಾದರೂ ಎಲ್ಲಾ ವಿಷಯಗಳನ್ನು ಶಶಿಗೆ ಹೇಳಲೇಬೇಕು. ನಾನು ಬರುತ್ತೇನೆ.
 
                                              *******************************
 
ಹೇಳೋದಾದ್ರೆ ಪೂರ್ತಿ ಹೇಳು, ನಿನ್ನ ಮನಸ್ಸಿಗೆ ಸಮಾಧಾನವಾಗತ್ತೆ ಅಂತ ನಾನು ಕೇಳ್ತಾ ಇದ್ದೀನಿ, ಅದು ಅಲ್ದೆ ತಲೆಲ್ ಹುಳ ಬಿಟ್ಕೊಳಕ್ಕೆ ನನ್ ಕಥೆಗಳೇ ನಂಗೆ ಬೇಜಾನ್ ಇದೆ ಎಂದು ನಾನು ರಶ್ಮಿಗೆ ದಬಾಯಿಸಿದೆ.
 
ರಶ್ಮಿ ಮತ್ತೆ ಶುರು ಮಾಡಿದಳು... ರವಿ ಸತ್ತಿದ್ದು ಕ್ಯಾನ್ಸರ್ ಖಾಯಿಲೆಯಿಂದ. ಕ್ಯಾನ್ಸರ್ ಗೆ ಕಾರಣ ಆವ ನಾಕನೇ ಕ್ಲಾಸಿಂದಾನೆ ತಿನ್ನಲು ಶುರು ಮಾಡಿದ್ದ ಗುಟ್ಕಾ ಮತ್ತು ಹತ್ತನೇ ಕ್ಲಾಸಿಂದ ಶುರು ಮಾಡಿದ್ದ ಸಿಗರೇಟ್. ನಮ್ಮ ಮದುವೆಯಾದದ್ದು ೩೧ / ೦೩ / ೨೦೦೫. ಆ ದಿನ ಪಟ್ಟಣದ ಅವನ ಗೆಳೆಯರು ಮದುವೆಗೆ ವಿಶ್ ಮಾಡುವಾಗ ಹ್ಯಾಪಿ ಮ್ಯಾರೀಡ್ ಲೈಫ್ ಜೊತೆಗೆ ಹ್ಯಾಪಿ ಟೊಬ್ಯಾಕೊ ಡೇ ಮಗ ಅಂದಿದ್ದರು. ಅದೇನೆಂದು ನನಗಾಗ ಅರ್ಥ ಆಗಿರಲ್ಲಿಲ್ಲ. ಹತ್ತನೇ ಕ್ಲಾಸಲ್ಲಿ ಅವನು ಸಿಗರೇಟ್ ಸೇದುತ್ತಿದ್ದರೆ  ಸ್ವಲ್ಪ ದೂರದಲ್ಲಿ ಅವನಿಗೆ ಕಾಣದ ಹಾಗೆ ನಿಂತು ನನ್ನ ಗೆಳತಿಯರಿಗೆ ನಾನೇ ತೋರಿಸುತ್ತಿದ್ದೆ ನೋಡ್ರೆ ನಮ್ಮವರು ಹೇಗೆ ಹೊಗೆ ಬಿಡ್ತಾರೆ ಅಂತ.. ಆದ್ರೆ ಅದೇ ಅವನಿಗೆ ಹೊಗೆ ಹಾಕತ್ತೆ ಅಂತ ನನಗೆ ಗೊತ್ತಾದ ದಿನದಿಂದಲೂ ಅವನನ್ನು ಆ ಚಟದಿಂದ ದೂರಮಾಡಲು ಇನ್ನಿಲ್ಲದ ಪ್ರಯತ್ನಪಟ್ಟೆ. ನನ್ನ ಪ್ರಯತ್ನ ಸಫಲವಾಗಲ್ಲಿಲ್ಲ ಅವನು ಸತ್ತೇ ಹೋದ, ಈಗ ನನ್ನ ಪಾಲಿಗೆ ಉಳಿದಿರೋದು ಶಶಿ ಒಬ್ಬನೇ, ಅವನಿಗೆ ನಾನು ಎಲ್ಲವನ್ನು ಹೇಳಲೇ ಬೇಕು, ಬರ್ತೀನಿ ಎಂದು ನಡೆದೇ ಬಿಟ್ಟಳು.
 
೩೧ ಮೇ ೨೦೧೩ ರವಿ ಸತ್ತಿರೋದೆ ಒಂದು ವಿಶೇಷಾನ ಅಂತ ನೀವು ಯೋಚಿಸುತ್ತಿದ್ದರೆ, ಅಷ್ಟೇ ಅಲ್ಲ. ಕರ್ನಾಟಕ ಸರ್ಕಾರ ಅಂದಿನಿಂದ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿದೆ.
 
ಇಲ್ಲಿಗೆ ರಶ್ಮಿ ಹೇಳಿದ ಅವಳ  'ಗುಟ್ 'ಕಾ ಕಥೆ ಮತ್ತು ರವಿಯ ಗುಟ್ಕಾ ಕಥೆ ಮುಗಿಯಿತು. ಬರೆದದ್ದಕ್ಕೆ ನನಗೂ ಓದಿದ್ದಕ್ಕೆ ನಿಮಗೂ ಆಕೆ ಧನ್ಯವಾದ ತಿಳಿಸಿದ್ದಾಳೆ.
 
                                                     *****************************
Rating
No votes yet

Comments

kavinagaraj

Mon, 07/01/2013 - 14:47

ಮುಂದೆ ಏನಾಯಿತು? ನಿಜ ತಿಳಿದ ಶಶಿಯ ಪ್ರತಿಕ್ರಿಯೆ ಹೇಗಿರಬಹುದು, ಇತ್ಯಾದಿಗಳಿಗೆ ಇನ್ನೊಂದು ಕಥೆಗೆ ಅವಕಾಶವಿದೆ. ಗುಟ್ಟು ಮತ್ತು ಗುಟ್ಕಾಗಳು ಅಪಾಯಕಾರಿಗಳೇ!! ನಿರೂಪಣೆ ಚೆನ್ನಾಗಿದೆ.