ಜೀವನ ರಹಸ್ಯ

ಜೀವನ ರಹಸ್ಯ

ಚಿತ್ರ

 


ಹಗಲು ರಾತ್ರಿಗಳೆರಡು ದಿನದ
ಭಾಜಕಗಳು
ಹಗಲು ಗಂಡು ರಾತ್ರಿ ಹೆಣ್ಣು
ದೇವಪೂಜೆ ಹಗಲಿನಲಿ
ದೇವಿಯ ಉಪಾಸನೆ ರಾತ್ರಿಯಲಿ



ಗಂಡು ಹಗಲಿನಂತೆ ಬಟಾಬಯಲು
ಎಲ್ಲ ಗೋಚರ
ಹೆಣ್ಣು ರಾತ್ರಿಯಂತೆ ನಿಗೂಢ



ಸೂರ್ಯನ ಉರಿ ಬಿಸಿಲಿಗೆ
ಕಾವೇರುವ ಹಗಲು
ಪೌರುಷದ ಸಂಕೇತ ರಾತ್ರಿಯ
ತಂಪು ಬೆಳದಿಂಗಳ ಲಾವಣ್ಯ
ಹೆಣ್ಣಿನ ಮಾರ್ದವತೆಯ ಸಂಕೇತ



ದಿನವೆಂದರೆ
ಗಂಡು ಹೆಣ್ಣುಗಳ ಸಮ್ಮಿಲನದ
ಒಂದು ನಿರಂತರತೆ


 
ತ್ರಿಕೋನ ತ್ರಿಶಕ್ತಿಯ ಸಂಕೇತ
ವೃತ್ತ ಪುರುಷತ್ವದ ಲಾಂಛನ
ಸ್ತ್ರೀ ಪುರುಷ ಸಮನ್ವಯತೆ
ಸೃಷ್ಟಿ ಕ್ರಿಯೆಯ ಮಂಡಲ
ಇದು ಕಾಮದ ಆಧ್ಯಾತ್ಮ ಅಲ್ಲದೆ
ಆಧ್ಯಾತ್ಮದ ಕಾಮನೆಯು ಕೂಡ



ತ್ರಿಕೋಣ ವೃತ್ತಗಳ ಸಂಗಮ
ಚತುಷ್ಕೋನ ಪಂಚಕೋನ
ಷಟ್ಕೋನಗಳ ನಿರ್ಮತಿಗೆ ಹೇತು
ಚತುಷ್ಕೋನ ಚತುರ್ಮುಖ ಬ್ರಹ್ಮ
ಪಂಚಕೋನ ಪಂಚಮುಖಿ ಶಿವ
ಷಟ್ಕೋನ ಷಣ್ಮುಖ ಎಲ್ಲ
ಚತುರ್ಮುಖನ ವಿಸ್ತಾರ ರೂಪಗಳೆ
ಚತುರ್ವೇದ ಚತುರ್ರಾಶ್ರಮ
ಸಚತುರ್ರ ಪುರುಷಾರ್ಥಗಳು


ಪಂಚಮುಖಿ ಶಿವನಿಂದ
ಪಂಚ ಮಹಾಭೂತಗಳು
ಪಂಚ ತನ್ಮಾತ್ರ
ಪಂಚ ಜ್ಞಾನೇಂದ್ರಿಯ
ಕರ್ಮೇಂದ್ರಿಯಗಳು
ಪಂಚ ಪ್ರಾಣ ಉಪ ಪ್ರಾಣ
ಪಂಚವಿಧ ಅಂತಃಕರಣಗಳು
ಈ ಪಂಚ ಪಂಚಕಗಳ
ಸಂಯೋಜನೆಯೆ 'ಪ್ರಪಂಚ '



ಈ ಪ್ರಪಂಚ ಸಾಗರದಲ್ಲಿ
ಹಸಿವು ಬಾಯಾರಿಕೆ ದುಃಖ
ಮೋಹ ಮುಪ್ಪು ರೋಗ
ಈ ಷಡ್ವಿಕಾರಗಳ ಆಗಮನ
ಭ್ರೂಣ ಹುಟ್ಟು ಬೆಳವಣಿಗೆ
ಬದಲಾವಣೆ ಕುಸಿತ ಸಾವು



ಒಂದರಿಂದ ಮೂರು
ಮೂರರಿಂದ ಆರು
ಅರಿವಿಲ್ಲದ ಸ್ಥಿತಿ ಅವನತಿ
ಅರಿವಿರೆ ಅದೆ ಉನ್ನತಿ



ತ್ರಿಕೋಣ ಬರಿ ಸ್ತ್ರೀ ಸಂಕೇತ
ಮಾತ್ರವೆ ಅಲ್ಲ ಅದೊಂದು
'ಸೃಷ್ಟಿ ರಹಸ್ಯ'  ತ್ರಿಗುಣ ತ್ರಿಕಾಲ
ತ್ರಿಲೋಕ ತ್ರಿವೇದ ತ್ರಿಶಕ್ತಿಗಳು



ವಸ್ತುವಿನ ನಿರ್ಮಿತಿಗೆ
ಅರಿವುಬೇಕು ಜೊತೆಗೆ
ನಿರ್ಮಿತಿಯ ಇಚ್ಛೆ
ನಿರ್ಮಿತಿಗಳು ಮುಖ್ಯ ಇದು
ನಿರ್ಮಿತಿಯ ದರ್ಶನ ಕೂಡ



ಕೆಂಪು ಬಿಳಿ ಕಪ್ಪು
ಸೃಷ್ಟಿ ವೈವಿಧ್ಯಗಳು ಎಲ್ಲ
ಬಣ್ಣಗಳೊಳಗೆ ಹರಿವ
ಜೀವರಸವೊಂದೆ ಈ
ತತ್ವವನರಿಯೆ ಜೀವನ ಸ್ವರ್ಗ
ಅರಿಯದಿರೆ ಅದುವೆ ನರಕ


       *****


ಚಿತ್ರ ಕೃಪೆ : http://www.desktopedia.com/wallpaper/Secret-of-Life/


 


 


 


 


 


 


 


 


 


 


 


 

Rating
No votes yet

Comments

Submitted by nageshamysore Fri, 07/05/2013 - 18:58

ಪಾಟೀಲರಿಗೆ ನಮಸ್ಕಾರ, ಜೀವನ ರಹಸ್ಯ ಓದುತ್ತ ಹೋದಂತೆ ಅದು ತೆರೆದಿಡುತ್ತಾ ಹೋದ ಅರಿವಿನ ವಿಶ್ವ, ಆಗಾಧ ಶರಧಿಯನು ಹೊಕ್ಕು ಅಗರ್ಭ ರಹಸ್ಯಗಳ ನಿಧಿಯನ್ನೆ ಹೊತ್ತು ತಂದ ಅನುಭವ ಕೊಟ್ಟಿತು. ನಿಸರ್ಗದ ಜೈವಿಕ-ಅಜೈವಿಕಗಳ ಜತೆ ಸೃಷ್ಟಿಕರ್ತ ಅಗೋಚರ ಶಕ್ತಿಯ ಅದ್ಬುತ ಸಮನ್ವಯ ಇಡಿ ಕವನದ ಉದ್ದಕ್ಕು ಸೊಗಸಾಗಿ ಹೆಣೆದುಕೊಂಡುಬಂದಿದೆ. ಕೊನೆಯ ನೀತಿ ಸೂಕ್ತಿ ಅತ್ಯಂತ ಸೊಗಸಾದ ಅಂತ್ಯೊಕ್ತಿಯಾಗಿದೆ. ಕೆಳಗಿನ ಕೆಲವು ಸಾಲುಗಳು ತುಂಬ ಶಕ್ತಿಯುತವಾಗಿ, ತುಂಬ ಚೆನ್ನಾಗಿ ಮೂಡಿಬಂದಿವೆ -  ತಾವು ಮತ್ತೆ ಮೊದಲಿನ ಶಕ್ತಿಯಲ್ಲಿ ಬರೆಯುತ್ತಿರುವುದು ತುಂಬಾ ಸಂತಸ - ನಾಗೇಶ ಮೈಸೂರು

>>>>ದಿನವೆಂದರೆ
ಗಂಡು ಹೆಣ್ಣುಗಳ ಸಮ್ಮಿಲನದ
ಒಂದು ನಿರಂತರತೆ>>>>

>>>ಇದು ಕಾಮದ ಆಧ್ಯಾತ್ಮ ಅಲ್ಲದೆ
ಆಧ್ಯಾತ್ಮದ ಕಾಮನೆಯು ಕೂಡ>>>>>

>>>>>
ವಸ್ತುವಿನ ನಿರ್ಮಿತಿಗೆ
ಅರಿವುಬೇಕು ಜೊತೆಗೆ
ನಿರ್ಮಿತಿಯ ಇಚ್ಛೆ
ನಿರ್ಮಿತಿಗಳು ಮುಖ್ಯ ಇದು
ನಿರ್ಮಿತಿಯ ದರ್ಶನ ಕೂಡ>>>>

>>>>
ಬಣ್ಣಗಳೊಳಗೆ ಹರಿವ
ಜೀವರಸವೊಂದೆ ಈ
ತತ್ವವನರಿಯೆ ಜೀವನ ಸ್ವರ್ಗ
ಅರಿಯದಿರೆ ಅದುವೆ ನರಕ>>>>

Submitted by H A Patil Fri, 07/05/2013 - 19:17

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು

ಈ ಕವನವನ್ನು ಕುರಿತು ತಾವು ಬರೆದ ಪ್ರತಿಕ್ರಿಯೆಯನ್ನು ಓದಿದೆ. ನಿಮ್ಮ ವಿಸ್ತೃತ ಪ್ರತಿಕ್ರಿಯೆಯನ್ನು ಓದಿ ನನಗೆ ದಿಗಿಲಾಯಿತು. ಸಂಪದಿಗ ರಾದ ತಮ್ಮೆಲ್ಲರ ಮೆಚ್ಚುಗೆಯೆ ನಮ್ಮಂತಹವರಿಗೆ ಬರೆಯಲು ಪ್ರೇರಣೆ ಎಂದು ಮಾತ್ರ ಹೇಳಬಲ್ಲೆ. ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by makara Sat, 07/06/2013 - 04:57

ಹನುಮಂತ ಪಾಟೀಲರಿಗೆ ವಂದೆನಗಳು,
ಆಧ್ಯಾತ್ಮದ ಸಾರವನ್ನೇ ಕಾವ್ಯದಲ್ಲಿ ಬಹಳ ಸುಂದರವಾಗಿ ಇಳಿಸಿದ್ದೀರ. ನಾಗೇಶ್ ಮೈಸೂರು ಇವರ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ.

ಒಂದು ಸಣ್ಣ ಅನುಮಾನ; ಅದೇನೆಂದರೆ ಪಂಚವಿಧ ಅಂತಃಕರಣಗಳು ಎಂದಿದ್ದೀರ. ಮನೋ, ಬುದ್ಧಿ, ಚಿತ್ತ ಅಹಂಕಾರಗಳು ಸೇರಿ ಚತುರ್ವಿಧ ಅಂತಃಕರಣಗಳೆನಿಸಿಕೊಳ್ಳುತ್ತವೆ ಹಾಗಾಗಿ ಐದನೆಯದು ಇಲ್ಲ ಎನ್ನುವುದು ನನ್ನ ಅನಿಸಿಕೆ. ಅದರ ಬಗ್ಗೆ ಮಾಹಿತಿ ಇದ್ದರೆ ಕೊಡಿ.
ಧನ್ಯವಾದಗಳೊಂದಿಗೆ,
ಶ್ರೀಧರ್ ಬಂಡ್ರಿ

Submitted by H A Patil Sat, 07/06/2013 - 20:19

In reply to by makara

ಶ್ರೀಧರ ಬಂಡ್ರಿ ಮತ್ತು ಸಪ್ತಗಿರಿಯವರಿಗೆ ವಂದನೆಗಳು

ಈ ಕವನ ಕುರಿತು ತಾವು ಬರೆದ ಪ್ರತಿಕ್ರಿಯೆಗಳನ್ನು ಓದಿದೆ. ತಮ್ಮ ಅನುಮಾನ ನನಗೆ ವೇದ್ಯವಾಯಿತು. ಗೀತೆಯಲ್ಲಿ ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ ಮತ್ತು ಧ್ಯಾನಯೊಗಗಳೆಂಬ ವಿಂಗಡೆನೆಗಳಿವೆ. ಜ್ಞಾನಯೋಗದಲ್ಲಿ ಈ ಬಗ್ಗೆ ವಿವರಣೆಯಿದೆಯೆಂದು ಓದಿದ ನೆನಪು. ಧೃಶ್ಯ ಪ್ರಪಂಚದಲ್ಲಿ ದೇಹ, ಇಂದ್ರಿಯ, ಮನಸ್ಸು, ಬುದ್ಧಿ ಮತ್ತು ಅಹಂಕಾರ ಗಳೆಂಬ ಅಂತಃಕರಣಗಳಿವೆ. ಆತ್ಮದ ಮೇಲೆ ಈ ಉಪಾಧಿಗಳು ಆರೋಪ ವಾಗಿವೆ. ಇವುಗಳಿಂದ ನಾವು ಆತ್ಮವನ್ನು ಬಿಡಿಸಬೇಕು ಎಂದು ನನ್ನ ಗ್ರಹಿಕೆ. ಈ ಬಗ್ಗೆ ನನ್ನಲ್ಲಿ ಆಕರ ಗ್ರಂಥಗಳಿಲ್ಲ, ಬಹುಶಃ ತಮ್ಮ ಅಭಿಪ್ರಾಯ ಸರಿಯಿದ್ದರೂ ಇರಬಹುದು. ತಮ್ಮ ಪ್ರತಿಕ್ರಿಯೆ ಓದಿ ಹರುಷವಾಯಿತು, ಹೀಗೆಯೆ ಪ್ರತಿಕ್ರಿಯಿಸುತ್ತ ಇರಿ ಧನ್ಯವಾದಗಳು.

Submitted by makara Sun, 07/07/2013 - 09:16

In reply to by H A Patil

ಜೀವನ ರಹಸ್ಯ ಕುರಿತಂತೆ - ಹನುಮಂತ ಪಾಟೀಲರಿಗೆ ವಂದನೆಗಳು,
ನೀವು ಕವನದಲ್ಲಿ ಬರೆದಿರುವಂತೆ ಅಂತಃಕರಣಗಳನ್ನು ಹೀಗೂ ಹೇಳಬಹುದು. ಇದರ ಬಗ್ಗೆ ನನ್ನ ಅಭಿಪ್ರಾಯ ಸರಿಯೋ ತಪ್ಪೋ ತಿಳಿಯದು. ಅದೇನೆಂದರೆ, ಪುರುಷತತ್ವ, ಪ್ರಕೃತಿತತ್ವ, ಬುದ್ಧಿ, ಅಹಂಕಾರ, ಮನಸ್ ಇವುಗಳು ಸೇರಿ ಬಹುಶಃ ಅಂತಕರಣವಾಗಬಹುದು. ಇಲ್ಲಿ ಚಿತ್ತವನ್ನು ಅಂತಃಕರಣವಾಗಿ ಪರಿಗಣಿಸಿಲ್ಲ. ನನ್ನ ಅಭಿಪ್ರಾಯಕ್ಕೆ ಕಾಶ್ಮೀರ ಶೈವ ಸಿದ್ಧಾಂತವೇ ಆಧಾರ. ಅದರ ಕೊಂಡಿಗಾಗಿ ಸಂಪದದಲ್ಲಿನ ಕೆಳಗಿನ ಕೊಂಡಿಯನ್ನು ನೋಡಿ.
http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E…

ಈ ಪದ್ಧತಿಯು ಪ್ರಪಂಚದ ಸೃಷ್ಟಿಯ ಕುರಿತಾಗಿ ೩೬ತತ್ವಗಳು ಅಥವಾ ಮೂಲಭೂತ ನಿಯಮಗಳನ್ನು ಪ್ರತಿಪಾದಿಸುತ್ತದೆ. ಅವುಗಳನ್ನು ಮೂರು ಮುಖ್ಯವಾದ ಗುಂಪುಗಳಾಗಿ ವಿಂಗಡಿಸಬಹುದು: ’ಶುದ್ಧತತ್ವ’, ’ಶುದ್ಧಾಶುದ್ಧತತ್ವ’ ಮತ್ತು ’ಅಶುದ್ಧತತ್ವ’.

ಶುದ್ಧತತ್ವಗಳು (ನಿರ್ಮಲ ಸಿದ್ಧಾಂತ) ಐದು, ಅವೆಂದರೆ: ಶಿವತತ್ವ, ಶಕ್ತಿತತ್ವ, ಸದಾಶಿವತತ್ವ, ಈಶ್ವರತತ್ವ ಮತ್ತು ಶುದ್ಧವಿದ್ಯಾತತ್ವ.

ಶುದ್ಧಾಶುದ್ಧತತ್ವಗಳು ಆರು, ಅವುಗಳೆಂದರೆ: ಮಾಯಾ, ಕಾಲ, ನಿಯತಿ, ರಾಗ, ವಿದ್ಯಾ ಮತ್ತು ಕಲಾ.

ಅಶುದ್ಧತತ್ವಗಳು ಇಪ್ಪತೈದು, ಅವುಗಳು ಈ ರೀತಿ ಇವೆ: ಪುರುಷತತ್ವ, ಪ್ರಕೃತಿತತ್ವ, ಬುದ್ಧಿ, ಅಹಂಕಾರ, ಮನಸ್, ಪಂಚೇಂದ್ರಿಯಗಳೆಂದು ಕರೆಯಲ್ಪಡುವ ಐದು ’ಜ್ಞಾನೇಂದ್ರಿಯ’ಗಳು, ಐದು ’ಕರ್ಮೇಂದ್ರಿಯಗ’ಳು, ಐದು ’ತನ್ಮಾತ್ರ’ಗಳು ಮತ್ತು ’ಪಂಚಭೂತ’ಗಳು.

Submitted by H A Patil Sun, 07/07/2013 - 20:32

In reply to by makara

ಶ್ರೀಧರ ಬಂಡ್ರಿ ಯವರಿಗೆ ವಂದನೆಗಳು

ಮಾನ್ಯರೆ ತಾವು ನನ್ನ ಈ ಕವನ ಕುರಿತು ಬರೆದ ಎರಡು ಮರು ಪ್ರತಿಕ್ರಿಯೆಗಳನ್ನು ಓದಿದೆ. ತಾವು ಕೊಟ್ಟ ಕೊಂಡಿಯನ್ನು ತೆರೆದು ಓದಿದೆ,
' ಶೈವ ಮತದ ಹಲವು ಮಗ್ಗಲುಗಳ ಕುರಿತು ' ವಿಸ್ತೃತವಾಗಿ ದಾಖಲಿಸಿದ್ದಿರಿ. ಅಣೆಕ ಸೂಕ್ಷ್ಮಗಳು ಅರ್ಥವಾದವು. ತಮ್ಮ ಎರಡನೆ ಮರು ಪ್ರತಿಕ್ರಿಯೆಯಲ್ಲಿ ' ದೇಹವು ಬಾಹ್ಯವಾಗಿರುವುದರಿಂದ ಅದನ್ನು ಅಂತಃಕರಣವಾಗಿ ಪರಿಗಣಿಸುವುದಿಲ್ಲ ' ಎಂದು ನಮೂದಿಸಿದ್ದೀರಿ, ದೇಹವು ನಶ್ವರವೆಂದು ನಾವು ಎಷ್ಟೆ ಪರಿಗಣಿಸಿದರೂ ಆತ್ಮದ ಅಸ್ತಿತ್ವಕ್ಕೆ ಮೂಲ ಕಾರಣವಾಗುತ್ತದೆ. ದೇಹ ಮತ್ತು ಆತ್ಮಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಜೀವನವೆಂದರೆ ಇವೆರಡರ ಸಮ್ಮಿಲನ ಒಂದನ್ನು ಹೊರತು ಪಡಿಸಿ ಇನ್ನೊಂದಿಲ್ಲ. ಇವೆರಡರದೂ ಒಂದು ರೀತಿಯ ಅವಿನಾಭಾವ ಸಂಬಂಧ. ನನ್ನ ಈ ಕವನದಲ್ಲಿ ನಾನು ನಮೂದಿಸಿದ ಕೆಲವು ಅಂಶಗಳಿಗೆ ಸೋಮನಾಥಾನಂದ ವಿರಚಿತ ' ಗೀತ ಬಾವಧಾರೆ ' ಆಧಾರ, ಅದರ ಗ್ರಹಿಕೆಯಲ್ಲಿ ನಾನು ಸೋತಿದ್ಚ್ದರೂ ಸೋತಿರಬಹುದು. ನಿಮ್ಮ ಜೊತೆಗಿನ ಸಂವಾದ ನನ್ನ ಗ್ರಹಿಕೆಯನ್ನು ವಿಸ್ತಾರಗೊಳಿಸಿದೆ ಎಂದು ದಾಖಲಿಸಲು ಹರ್ಷವಾಗುತ್ತದೆ. ಧನ್ಯವಾದಗಳು..

Submitted by venkatb83 Sat, 07/06/2013 - 17:00

"ಅರಿವಿಲ್ಲದ ಸ್ಥಿತಿ ಅವನತಿ
ಅರಿವಿರೆ ಅದೆ ಉನ್ನತಿ"

ಹಿರಿಯರೇ ಈ ದೀರ್ಘ ಕವನದ ಬಗ್ಗೆ ಈಗಾಗಲೇ ಬಂದ ಎರಡು ಪ್ರತಿಕ್ರಿಯೆಗಳು ಮತ್ತಸ್ತು ಅರ್ಥವಾಗುವ ಹಾಗೆ ಮಾಡಿವೆ .
ಸೃಸ್ಟಿ ರಹಸ್ಯವೇ ಈ ಕವನದಲ್ಲಿ ಬಟಾ ಬಯಲಾದ ಆಗಿದೆ ..
ಎಲ್ಲವೂ ತೆರೆದಿಟ್ಟಂತೆ ಗೋಚರವಾಯ್ತು ..
ನಾವ್ ಓದಿ ಹಾಗಯೇ ಮುಂದೆ ಸಾಗುತ್ತಿದೆವೋ ಏನೋ ? ಅಸ್ತ್ರಲ್ಲಿ ಶ್ರೀಧರ್ ಜೀ ಅವರ ಒಂದು ಪ್ರಶ್ನೆ ಕಾರಣವಾಗಿ ನನಗೂ ಆ ಪದ ಪ್ರಯೋಗ ಅರಿಯಬೇಕು ಅನ್ನಿಸಿದೆ .
ಶ್ರೀಧರ್ ಜೀ ಅವರು ಬರಹಗಳನ್ನು ನೋಡುವ ಓದುವ ಅರ್ಥೈಸಿಕೊಳ್ಳುವ -ಕೆಲವೊಮ್ಮೆ ಸಮಸ್ಯೆ ಪರಿಹರಿಸುವ - ಸಮಸ್ಯೆ ಕೊಡುವ ರೀತಿ ಸಖತ್

ಶುಭವಾಗಲಿ

\।

Submitted by partha1059 Sat, 07/06/2013 - 20:22

ಪಾಟೀಲರೆ ನಮ್ಮ ಮನಸತ್ವವೆಂದರೆ ಪ್ರತಿಯೊದರಲ್ಲು ಅಧ್ಯಾತ್ಮ ವೇದಾಂತವನ್ನು ಕಾಣಬಹುದು ಎಂದು ತೋರಿಸಿರುವಿರಿ, ಅದೆ ಭಾರತೀಯರ ಗುಣ. ಆದರು ಹಗಲು ಕಳೆದು ರಾತ್ರಿ ರಾತ್ರಿ ಕಳೆದು ಹಗಲು ಚಕ್ರ ನಿರಂತರವಾಗಿ ಬರುವುದು , ಆ ಚಕ್ರವನ್ನು ಯಾವುದಕ್ಕೆ ಹೋಲಿಸುವಿರಿ ಎನ್ನುವ ಉತ್ತರದ ನಿರೀಕ್ಶೆಯಲ್ಲಿ
-ಪಾರ್ಥಸಾರಥಿ

Submitted by H A Patil Sat, 07/06/2013 - 20:45

In reply to by partha1059

ಪಾರ್ಥ ಸಾರಥಿ ಯವರಿಗೆ ವಂದನೆಗಳು

ಈ ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ. ನಾವು ಪ್ರತಿಯೊಂದರಲ್ಲೂ ಆಧ್ಯಾತ್ಮ ಮತ್ತು ವೇದಾಂತವನ್ನು ಕಾಣುವವರು, ಇದು ಪಂಡಿತರಿಂದ ಹಿಡಿದು ಪಾಮರರ ವರೆಗಿನ ನಮ್ಮ ಭಾರತೀಯರ ಜೀವನ ಧರ್ಮ. ಹಗಲು ಮತ್ತು ರಾತ್ರಿಗಳು ಕಾಲಚಕ್ರ ಗತಿಗಳು, ಕಾಲಕ್ಕೆ ಚಾಲನೆ ಗಂಡು ಹೆಣ್ಣುಗಳ ನಿರಂತರತೆ ಜೊತೆಗೆ ಸೃಷ್ಟಿ ನಿಯಮ. ಸ್ಥೂಲವಾಗಿ ಈ ಕಾಲಚಕ್ರವನ್ನು ಈ ಜಗದ ಸಕಲ ಜೀವಿಗಳ ಜೀವನ ಚಕ್ರಕ್ಕೆ ಹೋಲಿಸ ಬಹುದು, ಇದು ಓದುಗರ ಮನದಲ್ಲಿ ಅವರವರ ಗ್ರಹಿಕೆ ಮತ್ತು ಗ್ರಹಿಕಾ ಕ್ರಮಗಳಿಗೆ ಅನುಸಾರವಾಗಿ ಬಿಚ್ಚಿಕೊಳ್ಳುವಂತಹುದು ಎರಂದು ನನ್ನ ಅನಿಸಿಕೆ. ಧನ್ಯವಾದಗಳು.