ಬೆಂಕಿಯಲ್ಲಿ ಅರಳಿದ ಹೂಗಳು...

ಬೆಂಕಿಯಲ್ಲಿ ಅರಳಿದ ಹೂಗಳು...

 

ಬೆಂಕಿಯಲ್ಲಿ ಅರಳಿದ ಹೂಗಳು...
    ಅವನು ಅಪ್ಪಟ ತರಲೆ.. ಸದಾ ತರಗತಿಯಲ್ಲಿ ತಂಟೆ ಮಾಡುತ್ತಾ, ಗೆಳೆಯರೊಂದಿಗೆ ಆಟವಾಡುತ್ತಾ, ಓದು-ಬರಹವನ್ನು ನಿರ್ಲಕ್ಷಿಸಿ ಹುಡುಗಾಟಿಕೆಯಲ್ಲೇ ಕಾಲ ದೂಡುತ್ತಿದ್ದವ.. ಅಪ್ಪನ ಕಿಸೆಯಿಂದ 2 ರೂ. ಕದ್ದು ಆಚೆ ಬದಿಯ ಅಂಗಡಿಯಲ್ಲಿ ಬಾಡಿಗೆ ಸೈಕಲ್ ಪಡೆದು ಸುತ್ತಲು ಹೊರಟನೆಂದರೆ, ಅವನು ಮನೆಗೆ ಮರಳುತ್ತಿದ್ದುದು ರಾತ್ರಿಯೇ! ಪರೀಕ್ಷೆಗಳಲ್ಲಿ ಕಾಪಿ ಹೊಡೆದು, ಜೊತೆಗೆ ಶಿಕ್ಷಕರ ಕೃಪೆಯೂ ಸೇರಿ ಅಂತೂ ಒಂಭತ್ತನೇ ತರಗತಿಯವರೆಗೆ ಪಾಸಾಗಿದ್ದ.. ಹತ್ತನೇ ತರಗತಿಯಲ್ಲಿಯೂ ಹುಡುಗು ಬುದ್ಧಿ ಬಿಡದುದರ ಫಲವಾಗಿ ಪರೀಕ್ಷಾ ಫಲಿತಾಂಶ ಕೈಕೊಟ್ಟಿತ್ತು.. ಫೇಲಾಗಿ ಬಂದವನಿಗೆ ಭ್ರಮಾನಿರಸನವಾಗಿತ್ತು.. ಇಷ್ಟೆಲ್ಲಾ ವರ್ಷಗಳನ್ನು ವ್ಯರ್ಥವಾಗಿ ಕಳೆದುಬಿಟ್ಟೆನಲ್ಲಾ ಎಂಬ ಪಶ್ಚಾತ್ತಾಪದಿಂದ ಕುಗ್ಗಿಹೋದ.. ಒಂದಷ್ಟು ಸ್ನೇಹಿತರು ಅವನನ್ನು ಸಮಾಧಾನಪಡಿಸಿದರು. ಒಮ್ಮೆ ಫೇಲಾದರೆ ಜೀವನವೇ ಮುಗಿದುಹೋದಂತಲ್ಲ, ಚೆನ್ನಾಗಿ ಓದಿ ಮತ್ತೊಮ್ಮೆ ಪರೀಕ್ಷೆ ಬರೆದು ಪಾಸಾಗಬಹುದೆಂದು ಧೈರ್ಯ ತುಂಬಿದರು. ಹುಡುಗ ಸುಧಾರಿಸಿಕೊಂಡು ಮತ್ತೆ ಓದಲಾರಂಭಿಸಿದ. ಆದರೆ ಅಷ್ಟರಲ್ಲೇ ಮನೆಯವರಿಂದ ಮತ್ತೊಂದು ಹೊಡೆತ ಕಾದಿತ್ತು- “ನಿನ್ನ ತಲೆಗೆ ಓದು ಬರಹ ಏನೂ ಹತ್ತಲ್ಲ.. ನೀನು ಇಷ್ಟು ವರ್ಷ ಓದಿ ಉದ್ಧಾರ ಆಗಿದ್ದು ಸಾಕು, ಏನಾದರೂ ಕೆಲಸ ಮಾಡು” ಎಂದು ಅವನ ಓದುವ ಆಸೆಗೆ ತಣ್ಣೀರೆರಚಿ, ಅವನ ಚಿಕ್ಕಪ್ಪನ ಕೇಬಲ್ ಏಜೆನ್ಸಿಯಲ್ಲಿ ಕೆಲಸ ಮಾಡಲು ಕಳುಹಿಸಿದರು.. 
    ಯಾರದೂ ಬೆಂಬಲವಿಲ್ಲದಾಗಿ ಓದನ್ನು ಕೈಬಿಟ್ಟ ಹುಡುಗ ಕೆಲಸಕ್ಕೆ ಹೊಂದಿಕೊಂಡು ಹೋದ.. ದಿನ ಕಳೆದಂತೆ ಕೆಲಸದಲ್ಲಿ ಪರಿಣತಿ ಹೊಂದಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದುದನ್ನು ಕಂಡ ಪರಿಚಯಸ್ಥರೊಬ್ಬರು ತಮ್ಮದೂ ಕೇಬಲ್ ಏಜೆನ್ಸಿಯ ಜವಾಬ್ದಾರಿ ಕೊಟ್ಟರು. ದಿನದಿನವೂ ಕಲಿಯುತ್ತಾ, ಬೆಳೆಯುತ್ತಾ 5 ವರ್ಷಗಳ ಕಾಲ ಶ್ರಮಿಸಿ, ಇಂದು ತನ್ನದೇ ಎರಡು ಕೇಬಲ್ ಏಜೆನ್ಸಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾನೆ. ತನ್ನಡಿಯಲ್ಲಿ 8 ಜನ ಯುವಕರಿಗೆ ಕೆಲಸ ಕೊಟ್ಟಿದ್ದಾನೆ. ಅಂದು ಕದ್ದ ಹಣದಿಂದ ಬಾಡಿಗೆ ಸೈಕಲ್‍ನಲ್ಲಿ ಸುತ್ತುತ್ತಿದ್ದ ಹುಡುಗ ಇಂದು ಸ್ವಂತ ದುಡಿಮೆಯಿಂದ ಕೊಂಡ ಚೆಂದದ ಬೈಕ್‍ನ ಒಡೆಯ! ಅದಕ್ಕೂ ಮಿಗಿಲಾಗಿ, ಅಂದು ಪೋಷಕರ ತಿರಸ್ಕಾರಕ್ಕೆ ಗುರಿಯಾಗಿದ್ದ ಹುಡುಗ ಇಂದು ಅವರಿಗೆ ಹೆಮ್ಮೆ ತರುವ ರೀತಿಯಲ್ಲಿ ಬೆಳೆದು ನಿಂತ ನೆಚ್ಚಿನ ಪುತ್ರ!!
    ಅಲ್ಲೊಬ್ಬಳು ಚೆಂದದ ಹುಡುಗಿ.. ಅಪ್ಪನ ಪ್ರೀತಿಯೆಂದರೇನೆಂದು ಅರಿಯುವ ಮುನ್ನವೇ ಅವಳಪ್ಪ ವಿಧಿವಶರಾಗಿದ್ದರು. ಆಕೆಯ ತಾಯಿ ಒಬ್ಬರೇ ದುಡಿದು ಇಬ್ಬರು ಹೆಣ್ಣುಮಕ್ಕಳನ್ನು ಸಾಕುತ್ತಿದ್ದರು. ತಂದೆಯಿಲ್ಲದ ಕೊರಗು ಕಾಡದಂತೆ ಬಹಳ ಆಸ್ಥೆಯಿಂದ ನೋಡಿಕೊಳ್ಳುತ್ತಿದ್ದರು. ಮಕ್ಕಳ ಆಸೆಗೆ ಎಂದೂ ಇಲ್ಲ ಅಂದವರಲ್ಲ.. ಆದರೂ ಈ ಪೋರಿಗೆ ಅಮ್ಮನ ಕಷ್ಟವನ್ನು ನೋಡಿ ಬೇಸರವಾಗುತ್ತಿತ್ತು. ಎಲ್ಲರ ಅನುಕಂಪದ ನೋಟ ಜಿಗುಪ್ಸೆ ಹುಟ್ಟಿಸುತ್ತಿತ್ತು. ‘ಒಂದಿನ ನಾನು ತುಂಬಾ ಹಣ ಸಂಪಾದನೆ ಮಾಡಿ ನಿನ್ನನ್ನೂ, ಅಕ್ಕನನ್ನೂ ಚೆನ್ನಾಗಿ ನೋಡಿಕೊಳ್ತೀನಿ ಅಮ್ಮಾ.’ ಎಂದೀಕೆ ಹೇಳುವಾಗ ಆ ತಾಯಿ ಮುಗುಳ್ನಕ್ಕು ಸುಮ್ಮನಾಗುತ್ತಿದ್ದರು..
    ಅವಳೋ ಭಾರೀ ಚೂಟಿ ಹುಡುಗಿ, ಓದಿನಲ್ಲಿ ಬಹಳ ಚುರುಕು.. ಅಷ್ಟು ಸಾಲದೆಂಬಂತೆ ಆಟ, ನೃತ್ಯ ಎಲ್ಲದರಲ್ಲೂ ಮುಂದು. ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಒಳ್ಳೆ ಕಾಲೇಜಿಗೆ ಪ್ರವೇಶ ಪಡೆದಳು. ಶ್ರದ್ಧೆಯಿಂದ ಓದುತ್ತಾ, ಜೊತೆಜೊತೆಗೆ ನೃತ್ಯದಲ್ಲೂ ತೊಡಗಿಕೊಂಡು ಹಲವು ಕಡೆ ಕಾರ್ಯಕ್ರಮಗಳನ್ನು ನೀಡಿದ್ದಳು. ಈ ಮಧ್ಯೆ ಅವಳ ತಾಯಿಗೆ ಆರೋಗ್ಯದ ಸಮಸ್ಯೆ ಬಹಳ ಕಾಡಿತು. ಹೃದಯದಲ್ಲಿ ತೊಂದರೆ ಕಾಣಿಸಿಕೊಂಡು ತುರ್ತಾಗಿ ಬೈಪಾಸ್ ಸರ್ಜರಿಗೊಳಗಾಗಬೇಕಾಯಿತು. ಅವರಗೀಗ ಮೊದಲಿನಂತೆ ಚುರುಕಾಗಿ ಕೆಲಸ ಮಾಡಲಾಗದು. ಆದರೂ ಬೇರೆ ದಾರಿ ಇಲ್ಲ. ಮಕ್ಕಳನ್ನು ಓದಿ ದಡ ಮುಟ್ಟಿಸಬೇಕೆಂಬುದು ಒಂದೆಡೆಯಾದರೆ, ಆಪರೇಷನ್‍ಗಾಗಿ ಮಾಡಿದ್ದ ಸಾಲವನ್ನು ತೀರಿಸಬೇಕಾದ ಅನಿವಾರ್ಯತೆ ಇನ್ನೊಂದೆಡೆ- ಹೀಗೆ ಪರಿಸ್ಥಿತಿ ಅವರನ್ನು ಮತ್ತೆ ನೌಕರಿಗೆ ದೂಡಿತು. ಆಗಂತೂ ಆ ಹುಡುಗಿಯ ಮನದಾಳದ ರೋದನೆ ಹೇಳತೀರದು, ಮುಂದೆ ಒಳ್ಳೆ ಕಾಲ ಬರುತ್ತದೆಂಬ ಗಟ್ಟಿ ನಂಬಿಕೆಯೊಂದಿಗೆ ಮೌನವಾಗಿಯೇ ನೋವು ನುಂಗುತ್ತಿದ್ದಳು.
    ಮುಂದೆ ಬಿ.ಕಾಂ ಸೇರಿ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗಿ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿದಳು. ಅದಾಗಿ ಎರಡೇ ತಿಂಗಳಿಗೆ ಅವಳ ತಾಯಿಗೆ ಸ್ವಯಂ ನಿವೃತ್ತಿ ಕೊಡಿಸಿ ವಿಶ್ರಾಂತಿ ನೀಡಿದಳು. ಬಂದ ಹಣದಲ್ಲಿ ಸಾಲವನ್ನೆಲ್ಲಾ ತೀರಿಸಿ ಉಳಿದುದರಲ್ಲಿ ಅಕ್ಕನ ಮದುವೆಯನ್ನು ಚೆನ್ನಾಗಿಯೇ ಮಾಡಿದಳು. ಹಿರಿಯ ಪುತ್ರಿಯನ್ನು ಗಂಡನ ಮನೆಗೆ ಕಳುಹಿಸಿ ಬಂದಾಗ ಆ ತಾಯಿಯ ಕಣ್ಣಲ್ಲಿ ಕಂಡಿದ್ದು ಸ್ವಲ್ಪ ನೋವು ಮತ್ತು ತುಂಬಾ ಹೆಮ್ಮೆ..!
    ಇಲ್ಲಿಗೇ ಮುಗಿಯದು ನಮ್ಮೀ ಹುಡುಗಿಯ ಕಥೆ! ಆಕೆಗೆ ಕೆಲಸ ಸಿಕ್ಕಿ ಇಂದಿಗೆ ಒಂದೂವರೆ ವರ್ಷ. ಅವಳೀಗ ಆ ಕಂಪೆನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್.. ಜೊತೆಗೆ ಮೂರು ತಿಂಗಳ ಮುದ್ದು ಮಗುವಿನ ಚಿಕ್ಕಮ್ಮ! ಈ ಒಂದೂವರೆ ವರ್ಷದಲ್ಲಿ ಆಫೀಸಿನಲ್ಲಿ ಮತ್ತು ಮನೆಯಲ್ಲಿ ಆಕೆಯ ಹೆಗಲೇರಿದ ಜವಾಬ್ದಾರಿಗಳು ಒಂದೆರಡಲ್ಲ.. ಒಂದರ ಮೇಲೊಂದು ಪ್ರಾಜೆಕ್ಟ್, ಅದರ ಡೆಡ್-ಲೈನ್‍ಗಳು, ಹಗಲು-ರಾತ್ರಿಯೆನ್ನದೆ ಬಿಡುವಿಲ್ಲದ ದುಡಿತ, ಅಕ್ಕನ ಸೀಮಂತ, ಅವರ ಬಾಣಂತನ, ಮಗುವಿನ ಆರೈಕೆ, ಇವೆಲ್ಲದರ ಮಧ್ಯೆ ಮನೆ ಬಾಡಿಗೆ, ಕರೆಂಟ್ ಬಿಲ್, ಫೋನ್ ಬಿಲ್, ದಿನಸಿ, ಹಾಲು, ತರಕಾರಿ- ಹೀಗೆ ಕೊನೆಯಿಲ್ಲದ ಹಣದ ಅಗತ್ಯತೆಗಳನ್ನೆಲ್ಲಾ ತನ್ನೊಬ್ಬಳ ಸಂಬಳದಲ್ಲಿ ನಿಭಾಯಿಸುತ್ತಾ, ಮನೆಯನ್ನು ತೂಗಿಸಿಕೊಂಡು ಹೋಗುವುದೇನು ಕಡಿಮೆ ಸಾಧನೆಯೇ?!
    ಮೊನ್ನೆ ಅವರ ಆಫೀಸಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮ. ಎಲ್ಲಾ ಉದ್ಯೋಗಿಗಳ ಕುಟುಂಬ ಸದಸ್ಯರು ಬಂದಿದ್ದರು. ಅಂದು ನೃತ್ಯ ಸ್ಪರ್ಧೆಯಲ್ಲಿ ನಮ್ಮೀ ಹುಡುಗಿ ಪ್ರಥಮ ಬಹುಮಾನ ಪಡೆವಾಗ ಮುಂದಿನ ಸಾಲಿನಲ್ಲಿ ಕುಳಿತಿದ್ದ ಆ ತಾಯಿಯ ಕಣ್ಣಲ್ಲಿ ಮೂಡಿದ ಮಿಂಚು ಅದೇನೋ ಭಾವವನ್ನು ಸೂಸುತ್ತಿತ್ತು.. ಇಂಥ ಮಗಳನ್ನು ಹೆತ್ತ ಸಾರ್ಥಕತೆಯೋ? ಅವಳ ಬಗೆಗಿನ ಹೆಮ್ಮೆಯೋ? ಅಥವಾ ಇವೆಲ್ಲಕ್ಕೂ ಮಿಗಿಲಾಗಿ ಜೀವನವಿಡೀ ಕಷ್ಟಗಳನ್ನೇ ಕೊಡುತ್ತಿದ್ದ ವಿಧಿಯನ್ನು ಜಯಿಸಿ ಬಂದ ಸಂಭ್ರಮವೋ?1 ಉತ್ತರಿಸುವುದು ಕಷ್ಟ!
ಮೇಲೆ ಹೇಳಿದ ಈ ಎರಡೂ ಕಥೆಗಳು ಕಲ್ಪನೆಯಲ್ಲ, ಕಟುವಾಸ್ತವ.. ಅದರೊಳಗೆ ಬಂದು ಹೋದ ಯಾವುದೇ ಪಾತ್ರಗಳು ಕಾಲ್ಪನಿಕವಲ್ಲ, ಅಸಲಿ ಮನುಷ್ಯರು.. ಹಿಂದೆಂದೋ ಆಗಿ ಹೋದ ವ್ಯಕ್ತಿಗಳೂ ಅಲ್ಲ, ಇದೇ ಕಾಲಘಟ್ಟದಲ್ಲಿ ನನ್ನೊಂದಿಗೆ ಬದುಕುತ್ತಿರುವವರು.. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಈ ಇಬ್ಬರೂ ನನ್ನ ಪರಮಾಪ್ತ ಬಾಲ್ಯ ಸ್ನೇಹಿತರು.. ನನ್ನ ಜೀವನ ಪ್ರೀತಿಯನ್ನು ಜಾಗೃತವಾಗಿಟ್ಟವರು.. ನನ್ನ ಸ್ಫೂರ್ತಿಯ ಸೆಲೆಯಾದವರು..
    ಒಮ್ಮೆ ಅವಲೋಕಿಸಿ ನೋಡಿ, ಇವರ ಜೀವನದಲ್ಲಿ ಅನುಕೂಲಕರವಾದ ವಾತಾವರಣವೇನೂ ಇರಲಿಲ್ಲ, ಆದರಿವರು ಪರಿಸ್ಥಿತಿಯ ಒತ್ತಡಕ್ಕೆ ಕುಸಿದು ಹೋಗದೆ ಧೈರ್ಯದಿಂದ ಮುನ್ನುಗ್ಗಿ ತಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿದವರು.. ಬೆಂಕಿಯೊಳಗೆ ಬಿದ್ದರೂ ಭಸ್ಮವಾಗದೆ, ಹೂವಾಗಿ ಅರಳಿದವರು..!! ಇವರಿಂದ ಇದು ಸಾಧ್ಯವಾಗುವುದಾದರೆ ನನಗೆ-ನಿಮಗೆ ಸಾಧ್ಯವಾಗದು ಏಕೆ? ಇವರಿಬ್ಬರೂ ಎದುರಿಸಿದ ಸವಾಲುಗಳ ಅರ್ಧದಷ್ಟನ್ನು ಕೂಡ ನಮ್ಮಲ್ಲಿ ಹಲವಾರು ಕಂಡಿಲ್ಲದೆ ಇರಬಹುದು.. ಆ ಮಟ್ಟಿಗೆ ನಾವು ಅದೃಷ್ಟವಂತರು! ಆದರೆ ಜೀವನವನ್ನು ಅದೃಷ್ಟದಾಟಕ್ಕೆ ಬಿಡದೆ ಏನೇ ಕಷ್ಟ ಬಂದರೂ ಇವರಂತೆ ದಿಟ್ಟವಾಗಿ ಎದುರಿಸಿ, ಸ್ವಪ್ರಯತ್ನದಿಂದ ಬದುಕನ್ನು ಚೆಂದಗಾಣಿಸುವ ಹುರುಪು ಎಲ್ಲರಲ್ಲೂ ಬಂದರೆ, ಬಹುಶಃ ಆಗ ಪ್ರಪಂಚ ಮತ್ತಷ್ಟು ಸುಂದರವಾದೀತು.. ಏನಂತೀರಿ?
-ಶ್ವೇತಾ ಸೂರ್ಯಕಾಂತ್
 

Comments

Submitted by nageshamysore Mon, 06/10/2013 - 18:49

ಶ್ವೇತಾ ಸೂರ್ಯಕಾಂತರವರೆ, ಗೊತ್ತು ಗುರಿಯಿಲ್ಲದೆ ಎಲ್ಲರೂ ಮಾಡುವ ಹಾಗೆ ಓದು, ಡಿಗ್ರಿ, ಕೆಲಸದ ಬೆನ್ನತ್ತುತ್ತ ಯಾರದೊ ಕೈಯಾಳಾಗುವ ಬದಲು ತಾವೆ ಮತ್ತೊಬ್ಬರಿಗೆ ಕೆಲಸ ಕೊಡುವ ಮಟ್ಟಕ್ಕೇರುವ ಸಾಧನೆ ಮಹತ್ವದ್ದು ಮತ್ತು ಅನುಕರಣಿಯ. ಹಾಗೆ, ಬೆಂಕಿಯಲ್ಲಿ ಅರಳಿದ ಹೂವಿನ ಹಾಗೆ ಧೀರ ಹೆಣ್ಣಾಗಿ ಸಂಸಾರ ಭಾರ ಹೊತ್ತು ಶ್ರಮಿಸುತ್ತ, ತನ್ನ ಸ್ವಂತ ಸುಖಕ್ಕೆ ಆಸೆ ಪಡದೆ ನಂಬಿದವರಿಗಾಗಿ ಪಾಡು ಪಡುತ್ತಿದ್ದರೂ - ಸಾಧಿಸಿ ತೋರಿಸುವ ಛಲ ಕೈಬಿಡದ ತ್ಯಾಗ ಮತ್ತು ಸಾಹಸಮಯ ವ್ಯಕ್ತಿತ್ವ ಇನ್ನೊಂದು ಕಡೆ. ನೀವಂದಂತೆ ಇದು ಕಣ್ತೆರೆದು ನೋಡಿದರೆ ನಮ್ಮ ಸುತ್ತಲೆ ಕಾಣುವ ನೈಜ್ಯ ವಾಸ್ತವಗಳು. ಸದ್ದಿಲ್ಲದೆ ಆ ಕಾಯಕ ಮಾಡುವ ಅಂತಹ ಸಹಸ್ರಾರು ಮಂದಿಗೆ ನಮನ ಹಾಗೂ ಈ ರೀತಿಯ ಉದಾಹರಣೆಯನೆತ್ತಿ ಆಡಿ ತೋರಿಸುವ ನಿಮ್ಮ ಜೀವನ ಶ್ರದ್ದೆಗೆ - ಧನ್ಯವಾದಗಳು! - ನಾಗೇಶ ಮೈಸೂರು, ಸಿಂಗಪುರದಿಂದ