ಬಹುಸಂಸ್ಕೃತಿವಾದ (Multiculturalism)-ಒಂದು ಚಿಂತನೆ

ಬಹುಸಂಸ್ಕೃತಿವಾದ (Multiculturalism)-ಒಂದು ಚಿಂತನೆ

ಸಾಮಾನ್ಯವಾಗಿ ವಿದೇಶಿಯರು ಮತ್ತು ವಿಭಿನ್ನವಾಗಿರುವವರ ಮೇಲೆ ಜನರಿಗೆ ಒಂದು ಬಗೆಯ ಸಂಶಯ ಮತ್ತು ಅವರು ತಮ್ಮಂತಿಲ್ಲದಿರುವದರ ಬಗ್ಗೆ ಸ್ವಲ್ಪ ಮಟ್ಟಿನ ಅಸಹನೆ ಸಹಜ. ಆದರೆ ಈ ಸಹಜ ಸ್ವಭಾವ ಕೆಲವರಲ್ಲಿ ಗೀಳಾಗಿ ಮಾರ್ಪಟ್ಟು, ಎಲ್ಲಿ ಈ ವಿದೇಶೀಯರಿಂದ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ನಾಶಗೊಳ್ಳುತ್ತವೋ ಎಂಬ ತಿಕ್ಕಲು ಬಲವಾಗಿ, ಅದು ದ್ವೇಷವಾಗಿ ಮಾರ್ಪಟ್ಟು ಅವರನ್ನು ಆತಂಕಕಾರಿ ಕೃತ್ಯಗಳಿಗೆ ಪ್ರೇರೇಪಿಸಬಹುದು. ಇಷ್ಟು ದೊಡ್ಡ ಜಗತ್ತಿನಲ್ಲಿ ಅನೇಕ ತರಹದ ಜನಗಳು, ಅನೇಕ ಸಂಸ್ಕೃತಿಗಳು, ಅನೇಕ ಸಂಪ್ರದಾಯಗಳಿರುವದು ಸ್ವಾಭಾವಿಕ ಎಂಬುದರ ಅರಿವಿರದಿರುವದು, ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಅತೀ ಶ್ರೇಷ್ಠ ಎಂಬ ತೀವ್ರ ಮೇಲರಿಮೆ ಮತ್ತು ತಮ್ಮ ಸಂಸ್ಕೃತಿ ನಾಶವಾಗಲಿದೆ ಎಂಬ ಹುಚ್ಚು ಭೀತಿ ಈ ಆತಂಕವಾದಿಗಳ ಮೂಲ ಲಕ್ಷಣಗಳು. ಕಳೆದ ವರ್ಷ ನಾರ್ವೆ ದೇಶದಲ್ಲಿ ನಡೆದ ವಿನಾಕಾರಣ ಮಾರಣಹೋಮ ಹಾಗೂ ಪ್ರಪಂಚದಾದ್ಯಂತ ಆಗಾಗ, ಅಲ್ಲಲ್ಲಿ ನಡೆಯುತ್ತಿರುವ ಬರ್ಬರ ಹತ್ಯೆ ಹಾಗೂ ದೊಂಬಿಗಳು ಈ ಪ್ರಕ್ರಿಯೆಯ ಸಾಕ್ಷಿಗಳು.

ಈಗ ನಡೆಯುತ್ತಿರುವ ಅಂತರ್ಜಾಲದ ವ್ಯಾಪಕತೆ ಮತ್ತು ಸಂಪರ್ಕ ಕ್ರಾಂತಿಗಳಿಂದ ಇಡೀ ಜಗತ್ತೇ ಚಿಕ್ಕದಾಗುತ್ತ  ಹೋಗುತ್ತಿದೆ ಅಲ್ಲದೇ ಅನೇಕ ಜನರು ಮತ್ತೊಂದು ದೇಶಕ್ಕೆ ವಲಸೆ ಹೋಗುತ್ತಿರುವದು ಸಾಮಾನ್ಯ. ಇದರಿಂದ ವಿಭಿನ್ನ ಸಂಸ್ಕೃತಿಯ ಜನಗಳ ಪರಸ್ಪರ ಸಂಪರ್ಕವಾಗುತ್ತಿದೆ ಮತ್ತು ಅನೇಕ ಸಂಸ್ಕೃತಿಗಳ ಜನರು ಒಂದೆಡೆ ನೆಲೆಸಿ ಬಾಳುವ ಪ್ರಕ್ರಿಯೆ ಹೆಚ್ಚಾಗುತ್ತಲಿದೆ. ಕೆಲವು ಶೈಕ್ಷಣಿಕ ವಿದ್ವಾಂಸರು ವಲಸೆಬಂದ ಜನರು ತಮ್ಮನ್ನು ತಾವು ಪ್ರತ್ಯೇಕಿಸದೆ, ಪ್ರಮುಖ ಸಮಾಜದಲ್ಲಿ ಬೆರೆತು ಒಂದಾಗಿ ಹೋಗಬೇಕು ಎಂದು ಅಭಿಪ್ರಾಯ ಪಟ್ಟರೆ, ಮತ್ತೆ ಕೆಲವು ವಿದ್ವಾಂಸರು ಬೇರೆ ಬೇರೆ ಸಂಸ್ಕೃತಿಗಳ ಜನರು ಒಂದೇ ದೇಶದಲ್ಲಿ ತಮ್ಮತನವನ್ನು ಕಳೆದುಕೊಳ್ಳದೇ, ಶಾಂತಿಯುತ ಮತ್ತು ಸಮಾನತೆಯ ಸಹಜೀವನ ನಡೆಸಬಹುದು ಎಂದು ನಂಬುತ್ತಾರೆ. ಈ ಸಾಮಾಜಿಕ ವಿದ್ಯಮಾನದಿಂದ ಬಹುಸಂಸ್ಕೃತಿವಾದ ಜನಿಸಿತು ಎನ್ನಬಹುದು.

ಎಲ್ಲ ಸೈದ್ಧಾಂತಿಕ ಪರಿಕಲ್ಪನೆಗಳಂತೆ, ಬಹುಸಂಸ್ಕೃತಿವಾದದ ಪ್ರತಿಪಾದನೆಗೆ ಕೂಡ ಬಲವಾದ ಪರ ಮತ್ತು ವಿರುದ್ಧವಾದ ಅಭಿಪ್ರಾಯಗಳಿವೆ. ಕೆಲವು ವಿದ್ವಾಂಸರು, ಆಧುನಿಕ ಜಗತ್ತಿನ ಧನಾತ್ಮಕ ಬೆಳವಣಿಗೆಗೆ ಬಹುಸಂಸ್ಕೃತಿವಾದ ಅವಶ್ಯಕ. ಅದರ ಸರಿಯಾದ ನಿರ್ವಹಣೆಯಿಂದ ಜನ ಯಾವುದೇ ಪಕ್ಷಪಾತವಿಲ್ಲದೇ ಇತರ ಸಂಸ್ಕೃತಿಗಳ ಜನರನ್ನು ಅವರ ಅಭಿಪ್ರಾಯಗಳನ್ನು ಸ್ವೀಕರಿಸತೊಡಗುತ್ತಾರೆ ಎಂದು ಅಭಿಪ್ರಾಯಪಡುತ್ತಾರೆ. ಇದರಿಂದ ಇತರ ಸಂಸ್ಕೃತಿಗಳನ್ನು ಸಂಪೂರ್ಣವಾಗಿ ಅಳಿಸಿಹಾಕಿ ಮುಖ್ಯ ಸಂಸ್ಕೃತಿಯಲ್ಲಿ ಜೀರ್ಣಗೊಳಿಸುವದನ್ನು ತಪ್ಪಿಸಬಹುದು. ಈ ಅಭಿಮತಕ್ಕೆ ವಿರುದ್ಧವಾಗಿ ಅನೇಕರು ಈ ಬಹುಸಂಸ್ಕೃತಿವಾದ ಸಮಾಜದಲ್ಲಿ ಪ್ರತ್ಯೇಕತೆಯನ್ನು ಪುಷ್ಟಿಗೊಳಿಸಿ ಕೊನೆಗೆ ಆತಂಕವಾದಕ್ಕೆ ಎಡೆ ಮಾಡಿಕೊಡುತ್ತದೆ ಎಂದು ತಮ್ಮ ಸಂಶಯ ವ್ಯಕ್ತಗೊಳಿಸಿದ್ದಾರೆ.

ಬೇರೆ ಬೇರೆ ಸಂಸ್ಕೃತಿಗಳನ್ನು ಅರಿಯದೇ ವಲಸೆ ಬಂದ ಜನರನ್ನು ಮುಖ್ಯ ಸಂಸ್ಕೃತಿಯಲ್ಲಿ ವಿಲೀನಗೊಳಿಸಲು ಯತ್ನಿಸುವುದರಿಂದ ಬೇರೆ ಅಭಿಮತಗಳಲ್ಲಿದ್ದ ಒಳ್ಳೆಯ ಅಂಶಗಳನ್ನು ಕಳೆದುಕೊಳ್ಳುವುದಲ್ಲದೇ, ಸಮಾಜದ ವೈವಿಧ್ಯತೆಯನ್ನು ನಾಶಗೊಳಿಸುತ್ತದೆ. ಅಲ್ಲದೇ ಸಾಂಸ್ಕೃತಿಕ ಅಲ್ಪಸಂಖ್ಯಾತರಲ್ಲಿ ತಾವು ಬಲಿಪಶು ಎಂಬ ಮನೋಭಾವವನ್ನು ಬೆಳೆಸಿ ಸಾಮಾಜಿಕ ಘರ್ಷಣೆಗೆ ಹಾದಿ ಮಾಡಿಕೊಡುತ್ತದೆ. ಆದುದರಿಂದ ಬಹುಸಂಸ್ಕೃತಿಯ ಅರಿವು ಮಾಡಿಕೊಡುವುದು ಮುಖ್ಯ ಮತ್ತು ಅದರ ಅರಿವು ಸಾಮಾಜಿಕ ಅಸಮಾನತೆಯನ್ನು ಕಡಿಮೆ ಮಾಡಿ, ವೈವಿಧ್ಯತೆಯ ಬಗ್ಗೆ ಗೌರವವನ್ನು ಬೆಳೆಸುತ್ತದೆ ಎಂಬುದು ನನ್ನ ಅನಿಸಿಕೆ.

ವಲಸೆಗೊಂಡ  ಜನರಿಂದಲೇ ಏರ್ಪಟ್ಟ ದೇಶವಾದ ಅಮೇರಿಕ ಬಹುಸಂಸ್ಕೃತಿವಾದದ ಜೀವಂತ ಉದಾಹರಣೆ. ಬೇರೆ ಬೇರೆ ದೇಶಗಳಿಂದ ವಲಸೆಬಂದ ಜನರು ಅಮೇರಿಕದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಭಾರತ ಕೂಡ ಬಹುಸಂಸ್ಕೃತಿಗಳ ಸಮ್ಮಿಲನದ ಇತಿಹಾಸವನ್ನೇ ಹೊಂದಿದೆ. ಅನೇಕ ಸಂಸ್ಕೃತಿಗಳ ಸುಗುಣಗಳ ಮಿಶ್ರಣದಿಂದ ಭಾರತದಲ್ಲಿ ಹಿಂದುಸ್ತಾನಿ ಸಂಗೀತ ಮತ್ತು ಕಥಕ್ ನೃತ್ಯಗಳಂತಹ ಅನೇಕ ರಚನಾತ್ಮಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳಾಗಿರುವುದನ್ನು ನಾವು ನೋಡಿದ್ದೇವೆ. ವಲಸೆಬಂದ ವಿವಿಧ ಸಂಸ್ಕೃತಿಗಳ ಜನರು ನೆಲೆಗೊಂಡು ತಮ್ಮ ಪರಿಶ್ರಮದಿಂದ ಶ್ರೀಮಂತ ಸಮಾಜವನ್ನಲ್ಲದೇ, ಹೊಸದೊಂದು ಬಗೆಯ ಸಂಸ್ಕೃತಿಯನ್ನು ಸೃಷ್ಟಿಸಿದ್ದನ್ನು ನಾವು ಸಿಂಗಪುರದಲ್ಲಿ ಕೂಡ ಕಾಣುತ್ತೇವೆ.

ಬಹುಸಂಸ್ಕೃತಿವಾದ ಮತ್ತು ವಿವಿಧತೆಗಳ ಮಹತ್ವವನ್ನು ಅನೇಕ ರಾಜಕೀಯ ಮತ್ತು ವ್ಯಾವಹಾರಿಕ ಮುಖಂಡರು ಅರಿತುಗೊಂಡಿದ್ದರಿಂದ, ಈಗ ವ್ಯಾವಹಾರಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಈ ಬಹುಸಂಸ್ಕೃತಿವಾದದ (multiculturalism) ಪ್ರಾಮುಖ್ಯತೆಯ ಬಗ್ಗೆ  ಮಹತ್ವದ ಸಂಶೋಧನೆಗಳಾಗುತ್ತಿವೆ. ಒಂದೆಡೆ ಬಹುಸಂಸ್ಕೃತಿವಾದ ಬರಲಿರುವ ಜಗತ್ತಿನಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಲಿವೆ ಎಂದು ನಂಬಲಾಗುತ್ತಿರುವಾಗ, ಇನ್ನೊಂದೆಡೆ ಪ್ರಮುಖ ಸಂಸ್ಕೃತಿಗಳ ನಡುವೆ ಅಸಹನೆ ಅತಿಯಾಗಿ ಬೆಳೆಯುತ್ತಿರುವದು ಮತ್ತು ಹಿಂಸಾತ್ಮಕ ಆಕ್ರಮಣಗಳಾಗುತ್ತಲಿರುವದು ದೊಡ್ಡ ವಿಪರ್ಯಾಸವೇ ಸರಿ.  ಆದುದರಿಂದ ಈ ನೆಲೆಗಟ್ಟಿನಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ.

“ಬೇರೆ ಬೇರೆ ಸಂಸ್ಕೃತಿಗಳ ವ್ಯತ್ಯಾಸಗಳು,ಅವುಗಳ ಆಕರ್ಷಣೆ ಮತ್ತು ವಿಕರ್ಷಣೆಗಳ ಪರಸ್ಪರ ತಾಕಲಾಟ, ಈ ಜಗತ್ತನ್ನು ಚಲನೆಯಲ್ಲಿರಿಸುವದು. ಬಹುತ್ವ (ಬಹುಸಂಸ್ಕೃತಿವಾದ) ಜೀವನವಾದರೆ, ಏಕರೂಪತೆ ಮರಣ. ವ್ಯತ್ಯಾಸಗಳು ಮತ್ತು ವಿಶೇಷತೆಗಳ ದಮನದಿಂದ ಮತ್ತು ಅನೇಕ ಸಂಸ್ಕೃತಿ ಮತ್ತು ನಾಗರಿಕತೆಗಳನ್ನು ನಾಶಗೊಳಿಸುವದರಿಂದ ಜೀವನ ಕ್ಷಿತಗೊಳ್ಳುತ್ತದೆಯೇ ಹೊರತು ಅಭಿವೃದ್ದಿಯಾಗುವದಿಲ್ಲ” ಎಂದು ನೊಬೆಲ್ ಪ್ರಶಸ್ತಿ ವಿಜೇತ ಮೆಕ್ಸಿಕೋದ ಕವಿ ಓಕ್ಟೇವಿಯೋ ಪಾಜ್ ಹೇಳಿದ್ದಾನೆ. ಅನೇಕ ಸಂಸ್ಕೃತಿಗಳ ಪರಸ್ಪರ ತಾಕಲಾಟ  ಆಧುನಿಕ ಜಗತ್ತಿನ ಅನಿವಾರ್ಯತೆ ಮಾತ್ರವಲ್ಲ, ಅವಶ್ಯಕತೆಯೂ ಹೌದು. ಹೊಸ ಹೊಸ ದೃಷ್ಟಿಕೋನಗಳು ಜಗತ್ತಿನ ವೈಚಾರಿಕ ನೆಲೆಗಟ್ಟನ್ನು ವಿಸ್ತರಿಸುತ್ತವೆಯಲ್ಲದೇ, ಹೊಸ ಹೊಸ ಅವಿಷ್ಕಾರಗಳಿಗೆ ಕಾರಣವಾಗಬಲ್ಲದು. ಅದಕ್ಕೆ ವಿರುದ್ಧವಾಗಿ ಯಾವದೇ ಸಂಸ್ಕೃತಿ ತನ್ನನ್ನು ತಾನು ಪ್ರತ್ಯೇಕಗೊಳಿಸಿದರೆ ಅದು ಉಚ್ಛ್ರಾಯಗೊಳ್ಳುವುದು ಸಾಧ್ಯವಿಲ್ಲ.  ಗಾಂಧೀಜಿ ಹೇಳಿದಂತೆ ತನ್ನನ್ನು ತಾನು ಪ್ರತ್ಯೇಕಗೊಳಿಸುವ ಯಾವದೇ ಸಂಸ್ಕೃತಿ ಬಹಳ ದಿನ ಜೀವಂತವಾಗಿರಲು ಸಾಧ್ಯವಿಲ್ಲ.

 

Comments

Submitted by nageshamysore Mon, 07/08/2013 - 18:50

ವಸಂತ ಕುಲಕರ್ಣಿಯವರೆ, ಬಹುಸಂಸ್ಕೃತಿವಾದದ ಕುರಿತಾದ ಸೊಗಸಾದ ಮತ್ತು ಸಕಾಲಿಕ ಚಿಂತನಾ ಬರಹ. ಯಾರೂ ತಪ್ಪಿಸಿಕೊಳ್ಳಲಾಗದ ಈ ಅನಿವಾರ್ಯಕ್ಕೆ ಬೆನ್ನು ತೋರಿಸುವ ಬದಲು, ಸಾಧಕ ಭಾಧಕಗಳನ್ನರಿತು ಸೂಕ್ತ ಕಾರ್ಯತಂತ್ರದೊಂದಿಗೆ ಜತೆಗೆ ಹೆಜ್ಜೆಯಿಡಲು ಸಿದ್ದರಾಗುವುದೆ ಸೂಕ್ತ ಮಾರ್ಗವೆಂದು ಲೇಖನ ಚೆನ್ನಾಗಿ ವಿವರಿಸಿದೆ - ನಾಗೇಶ ಮೈಸೂರು
Submitted by Vasant Kulkarni Fri, 07/12/2013 - 10:26

In reply to by nageshamysore

ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ತುಂಬಾ ವಂದನೆಗಳು ನಾಗೇಶ್. ಹೊಸ ಚಿಂತನೆಗಳನ್ನು ಓದುಗರ ಮುಂದಿಡುವತ್ತ ಇದೊಂದು ಸಣ್ಣ ಪ್ರಯತ್ನ ಅಷ್ಟೇ.