೪೫. ಶ್ರೀ ಲಲಿತಾ ಸಹಸ್ರನಾಮ ೧೨೦ನೇ ನಾಮದ ವಿವರಣೆ
ಲಲಿತಾ ಸಹಸ್ರನಾಮ ೧೨೦
Bhakti-vaśyā भक्ति-वश्या (120)
೧೨೦. ಭಕ್ತಿ-ವಶ್ಯಾ
ಆಕೆಯನ್ನು ಭಕ್ತಿಯಿಂದ ನಿಯಂತ್ರಿಸಬಹುದು ಅಥವಾ ಆಕೆಯು ಭಕ್ತಿಗೆ ಆಕರ್ಷಣೆಗೊಳ್ಳುತ್ತಾಳೆ. ವಶ್ಯ ಎಂದರೆ ಆಕರ್ಷಣೆ ಅಥವಾ ನಿಯಂತ್ರಣದಲ್ಲಿಟ್ಟುಕೊಳ್ಳುವುದು.
ಶಿವಾನಂದ ಲಹರಿಯ (ಶಿವಾನಂದ ಲಹರಿಯು ಶಿವನ ಕುರಿತ ಸ್ತುತಿಯಾದರೆ ಸೌಂದರ್ಯ ಲಹರಿಯು ಲಲಿತಾಂಬಿಕೆಯ ಸ್ತುತಿಯಾಗಿದೆ. ಎರಡರಲ್ಲೂ ನೂರು ನೂರು ಶ್ಲೋಕಗಳಿದ್ದು ಎರಡನ್ನೂ ಆದಿ ಶಂಕರರು ರಚಿಸಿದ್ದಾರೆ) ೬೨ನೇ ಸ್ತುತಿಯು ಜಗಜ್ಜನನಿಯನ್ನು ’ಭಕ್ತಿ ಜನನಿ’ ಎಂದು ಉಲ್ಲೇಖಿಸುತ್ತದೆ; ಅಂದರೆ”ತಾಯೇ ನಿನ್ನ ಹೆಸರೇ ಭಕ್ತಿ’ ಮತ್ತು "ಭಕ್ತಾರ್ಭಕಮ್ ರಕ್ಷತಿ" ಅಂದರೆ ಆಕೆಯು ಭಕ್ತರನ್ನು ತನ್ನ ಮಗುವಿನಂತೆ ಪೋಷಿಸುತ್ತಾಳೆ. ಒಬ್ಬರು ಭಕ್ತಿಯಿಂದ ಭಾವಾವೇಶಗೊಂಡಾಗ ಅವರ ಕಣ್ಣುಗಳಿಂದ ಅಶ್ರು ಬಿಂದುಗಳು ಕೆಳಗುರುಳುತ್ತವೆ ಮತ್ತು ಅವರ ಬಾಯಿಂದ ಸ್ವರ ಹೊರಡದೆ ಗದ್ಗದಿತರಾಗುತ್ತಾರೆ. ಇದರ ನಂತರ ಅವರು ದೇಹವನ್ನೂ ತೊರೆಯಬಹುದು.
ಶಿವಾನಂದ ಲಹರಿಯ ಮುಂದಿನ ಶ್ಲೋಕವು ’ಕಣ್ಣಪ್ಪ ನಾಯನಾರ್’ನ (ಕನ್ನಡಿಗರಿಗೆ ಬೇಡರ ಕಣ್ಣಪ್ಪನೆಂದು ಸುಪರಿಚಿತವಾಗಿರುವವನು) ಕಥೆಯ ಕುರಿತಾಗಿದೆ. ಅವ ಶಿವನ ಅನನ್ಯ ಭಕ್ತನಾಗಿದ್ದನು ಮತ್ತು ಅವನ ಭಕ್ತಿಯು ಅಸದೃಶವಾದುದು. ಕಣ್ಣಪ್ಪನು ಶಿವನನ್ನು ಲಿಂಗರೂಪದಲ್ಲಿ ಪೂಜಿಸುತ್ತಿದ್ದನು, ಅವನಿಗೆ ಶಾಸ್ತ್ರವಿಧಿತ ಯಾವುದೇ ಪೂಜಾ ವಿಧಾನಗಳು ತಿಳಿದಿರಲಿಲ್ಲ. ಅವನು ಶಿವನಿಗೆ ಹಸಿ ಮಾಂಸವನ್ನು ಅರ್ಪಿಸುತ್ತಿದ್ದನು ಮತ್ತು ಶಿವನೂ ಕೂಡಾ ಅದನ್ನು ಸಂತೋಷದಿಂದ ಸ್ವೀಕರಿಸುತ್ತಿದ್ದನು. ಒಂದು ದಿನ ಕಣ್ಣಪ್ಪನು ಶಿವನ ಕಣ್ಣಿನಿಂದ ರಕ್ತವು ಸ್ರವಿಸುವುದನ್ನು ಕಂಡನು, ಅವನು ಅದನ್ನು ತಡೆಹಿಡಿಯಲು ನಾನಾ ವಿಧವಾದ ಪ್ರಯತ್ನಗಳನ್ನು ಮಾಡಿದನು, ಆದರೆ ಯಾವುದೂ ಸಫಲವಾಗಲಿಲ್ಲ. ಆಗ ಅವನು ತಕ್ಷಣವೇ ತನ್ನ ಒಂದು ಕಣ್ಣನ್ನು ಕಿತ್ತು ಶಿವನ ರಕ್ತಸೋರುವ ಕಣ್ಣಿನ ಜಾಗದಲ್ಲಿ ಇರಿಸಿದನು, ಆಗ ರಕ್ತ ಸೋರುವಿಕೆಯು ನಿಂತು ಹೋಯಿತು. ಈಗ ಶಿವನ ಮತ್ತೊಂದು ಕಣ್ಣಿನಿಂದಲೂ ರಕ್ತಸ್ರಾವವು ಪ್ರಾರಂಭವಾಯಿತು. ಈ ಬಾರಿ ಕಣ್ಣಪ್ಪನು ಯಾವುದೇ ವಿಧಾನವನ್ನು ಅನುಸರಿಸಲಿಲ್ಲ. ಕಣ್ಣಪ್ಪನು ಆಮೇಲೆ ನೋಡಲು ಸಾಧ್ಯವಾಗುತ್ತಿರಲಿಲ್ಲವಾದ್ದರಿಂದ ಅವನು ತನ್ನ ಕಾಲಿನ ಹೆಬ್ಬರಳನ್ನು ಶಿವನ ಸೋರುವ ಕಣ್ಣಿನ ಜಾಗದಲ್ಲಿ ಗುರುತಿಗಾಗಿ ಇರಿಸಿದ ಏಕೆಂದರೆ ಅವನು ತನ್ನ ಇನ್ನೊಂದು ಕಣ್ಣನ್ನೂ ಕಿತ್ತುಕೊಳ್ಳುವುದರಲ್ಲಿದ್ದ. ಆ ಕ್ಷಣದಲ್ಲಿ ಅವನಿಗೆ ಶಿವನು ಪ್ರತ್ಯಕ್ಷನಾದ. ಈ ವಿಧವಾದ ಭಕ್ತಿಯನ್ನು ಕುರಿತಾಗಿ ಆದಿ ಶಂಕರರು ತಮ್ಮ ಸ್ತುತಿಗಳಲ್ಲಿ ಹೇಳುತ್ತಾರೆ. ಆ ಶ್ಲೋಕವು ಹೇಳುತ್ತದೆ, "ಯಾರು ಕಣ್ಣಪ್ಪನನ್ನು ಅನುಸರಿಸುತ್ತಾರೋ ಅಥವಾ ಅವನ ಹಿಂಬಾಲಕರೋ ಅವರು ಚಪ್ಪಲಿಯನ್ನು ಕಲಶಕ್ಕೆ ದರ್ಭೆಯಂತೆ (ಕುಶಾ ಹುಲ್ಲಿನಂತೆ) ಉಪಯೋಗಿಸುತ್ತಾರೆ ಮತ್ತು ಅದನ್ನು ಶಿವನಿಗೆ ವೈದಿಕ ಸ್ನಾನವನ್ನು ಮಾಡಿಸಲು ಬಳಸಲಾಗುತ್ತದೆ. (ಕಲಶವೆಂದರೆ ನೀರಿನಿಂದ ತುಂಬಿದ ಗಡಿಗೆಯಲ್ಲಿ ಮಾವಿನ ಎಲೆಗಳನ್ನಿರಿಸಿ ಅದರ ಮೇಲೆ ಕೆಲವು ದರ್ಬೆಯ ಹುಲ್ಲುಗಳನ್ನಿರಿಸುತ್ತಾರೆ. ಯಾವಾಗ ಮಂತ್ರಗಳ ಉಚ್ಛಾರಣೆಯಾಗುತ್ತದೆಯೋ ಆಗ ಮಂತ್ರಗಳ ಶಕ್ತಿಯು ಆ ಕಲಶದಲ್ಲಿರುವ ನೀರಿನಲ್ಲಿ ಸಂವಹನವಾಗುತ್ತದೆ. ಈ ನೀರನ್ನು ಶುದ್ಧೀಕರಣ ಕ್ರಿಯೆಗಾಗಿ ಉಪಯೋಗಿಸುತ್ತಾರೆ ಮತ್ತು ಇದನ್ನು ಸಾಧಕನನ್ನು ಶುದ್ಧಗೊಳಿಸಲೂ ಕೂಡಾ ಉಪಯೋಗಿಸುತ್ತಾರೆ ಇದನ್ನೇ ’ಮಂತ್ರಸ್ನಾನ’ವೆನ್ನುತ್ತಾರೆ). ಇದನ್ನೇ ಭಕ್ತಿಯೆನ್ನುತ್ತಾರೆ ಮತ್ತು ನಿಜವಾದ ಭಕ್ತಿಯೆಂದರೆ ಪ್ರಾಮಾಣಿಕ ಪ್ರೀತಿ.
ಯಾರು ಅಜ್ಞಾನಿಗಳೋ ಅವರು ಶಿವ ಮತ್ತು ಭಕ್ತಿ ಬೇರೆ ಎಂದು ತಿಳಿಯುತ್ತಾರೆ. ಆದರೆ ಯಾರು ಜ್ಞಾನಿಗಳೋ ಅವರು ಶಿವ ಮತ್ತು ಭಕ್ತಿ ಎರಡೂ ಒಂದೇ ಎನ್ನುತ್ತಾರೆಂದು ಪ್ರಸಿದ್ಧ ತಮಿಳು ಸಂತ ತಿರುಮೂಲರ್ ಅವರು ಹೇಳುತ್ತಾರೆ. ರಾಮಕೃಷ್ಣ ಪರಮಹಂಸರು ಹೀಗೆ ಹೇಳುತ್ತಾರೆ, ಯಾರು ವೇದಶಾಸ್ತ್ರಗಳಲ್ಲಿ ಪರಿಣಿತರೋ ಅವರು ಇದು ಸರಿ ಇದು ತಪ್ಪು ಎಂದು ಹೇಳುತ್ತಾರೆ. ಈ ರೀತಿಯಾದ ತಪ್ಪುಗಳನ್ನು ಭಕ್ತರು ಮಾಡುತ್ತಾರೆಂದು ದೇವರಿಗೆ ತಿಳಿದಿದೆಯಾದ್ದರಿಂದ ಅವನು ಅವುಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಏಕೆಂದರೆ ಅವನಿಗೆ ನಿಜವಾದ ಭಕ್ತಿ ಮುಖ್ಯ. ಅವನು ನಮ್ಮನ್ನು ಆಶೀರ್ವದಿಸಲು ಸಿದ್ಧನಿದ್ದಾನೆ ಆದರೆ ನಾವು ಅವನ ಕೃಪೆಯನ್ನು ಹೊಂದಲು ಸಿದ್ಧರಾಗಿಲ್ಲ, ಏಕೆಂದರೆ ನಾವು ತಪ್ಪು ದಾರಿಯನ್ನು ಅನುಸರಿಸುತ್ತಿದ್ದೇವೆ.
ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (೯.೩೦) ಹೀಗೆ ಹೇಳುತ್ತಾನೆ, ಒಬ್ಬ ಕಡು ಪಾಪಿಯೂ ಕೂಡಾ ನನ್ನನ್ನು ನಿಜವಾದ ಭಕ್ತಿಯಿಂದ ಪೂಜಿಸಿದರೆ ಅವನನ್ನು ಸಂತನೆಂದು ಪರಿಗಣಿಸಬೇಕು. ಏಕೆಂದರೆ, ದೇವರಲ್ಲಿ ನಿಜವಾದ ಭಕ್ತಿಯ ಮುಂದೆ ಏನೂ ಇಲ್ಲ ಎನ್ನುವುದರಲ್ಲಿ ಅವನಿಗೆ ದೃಢವಾದ (ಧನಾತ್ಮಕವಾದ) ನಂಬಿಕೆಯಿದೆ" ಹಾಗೆಯೇ ಮುಂದುವರೆಯುತ್ತಾ ಶ್ರೀ ಕೃಷ್ಣನು ಹೇಳುತ್ತಾನೆ, "ನನ್ನ ಭಕ್ತನು ಯಾವಾಗಲೂ ವಿನಾಶವನ್ನು ಹೊಂದುವುದಿಲ್ಲ". "ನನ್ನಲ್ಲಿ ಅವಿಭಜಿತ (ಸಂಶಯಾತೀತ) ಭಕ್ತಿಯನ್ನನುಸರಿಸಿದರೆ ಮಾತ್ರ ನನ್ನ ನಿಜವಾದ ಸ್ವರೂಪದ ಅರಿವಾಗುವುದು" ಎಂದು ಹೇಳುತ್ತಾನೆ.
ಎಲ್ಲಾ ಶಾಸ್ತ್ರಗಳು ಮತ್ತು ಶ್ರುತಿಗಳು ಭಕ್ತಿಯ ಸರಿಯಾದ ನಿರ್ವಚನವನ್ನು ಕೊಡುತ್ತವೆ. ಆದ್ದರಿಂದ ಭಕ್ತಿಯನ್ನು ಈ ರೀತಿಯಾಗಿ ನಿರ್ವಚಿಸಬಹುದು, "ವಿಷಯವೇನೆಂದರೆ, ಎಲ್ಲಿ ಏನೂ ಪ್ರತಿಫಲಾಪೇಕ್ಷೆಯಿಲ್ಲದೆ ನಿಜವಾದ ಭಕ್ತಿಯು ಆಂತರ್ಯದಲ್ಲಿ ಅರಳುತ್ತದೆಯೋ, ಮತ್ತು ಎಲ್ಲಾ ಶಾಸ್ತ್ರವಿಧಿತ ಕಟ್ಟಳೆಗಳ ಎಲ್ಲೆಗಳನ್ನು ಮತ್ತು ಪರಿಮಿತಿಗಳನ್ನು ದಾಟಿ ಒಂದು ವಸ್ತುವು ಆ ಲಕ್ಷ್ಯದೊಂದಿಗೆ ನಿರಂತರವಾಗಿ ಇರಬಯಸುತ್ತದೆಯೋ ಅದೇ ಭಕ್ತಿ".
******
Comments
120. ಭಕ್ತಿ-ವಶ್ಯಾ
120. ಭಕ್ತಿ-ವಶ್ಯಾ
ಶಿವ ಬೇರೆ ಭಕ್ತಿ ಬೇರೆ ಎನೆ ಅಜ್ಞಾನ ಎರಡೊಂದು ಜೀವ
ಪಾಪಿ ಭಕ್ತನೂ ಪರಮಾತ್ಮನಿಗೆ ಪ್ರಿಯನೆನುವುದೆ ಭಾವ
ನಿರಪೇಕ್ಷಾ ಪ್ರತಿಫಲ ಆಂತರ್ಯಾಂತರ್ಗತಾ ಮುಗ್ದ ಭಕ್ತಿ
ಮಾತಾ ನಿಯಂತ್ರಣಾಕರ್ಷಣಕೆ ನಿಜ ಭಕ್ತಿ ವಶದ ಸೂಕ್ತಿ!
- ನಾಗೇಶ ಮೈಸೂರು
In reply to 120. ಭಕ್ತಿ-ವಶ್ಯಾ by nageshamysore
ಭಕ್ತಿ-ವಶ್ಯಾ ಕೂಡಾ ಎಂದಿನಂತೆ
ಭಕ್ತಿ-ವಶ್ಯಾ ಕೂಡಾ ಎಂದಿನಂತೆ ಚೆನ್ನಾಗಿ ಮೂಡಿ ಬಂದಿದೆ ನಾಗೇಶರೆ. ಆದರೆ ಎರಡನೇ ಸಾಲಿನ ಭಾವ ಸ್ವಲ್ಪ ಬದಲಾಗಬೇಕು. ಅದೇನೆಂದರೆ ಭಗವಂತನಿಗೆ ಬೇಕಾಗಿರುವುದು ಪ್ರಾಮಾಣಿಕ ಭಕ್ತಿಯೇ ಹೊರತು ಶಾಸ್ತ್ರಬದ್ಧ ಪೂಜೆಯಲ್ಲ ಎನ್ನುವುದು. ಆದ್ದರಿಂದ, ಈ ನಾಮದಲ್ಲಿ ಪ್ರಸ್ತಾವಿಸಿರುವ ಈ ಸಾಲು ಭಕ್ತಿ ವ್ಯಾಖ್ಯಾನದ ಆಶಯಕ್ಕೆ ಪೂರಕವಾಗಿಲ್ಲದೇ ಇರುವುದರಿಂದ ಅದನ್ನು ಸೂಕ್ತವಾಗಿ ಮಾರ್ಪಡಿಸಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಭಕ್ತಿ-ವಶ್ಯಾ ಕೂಡಾ ಎಂದಿನಂತೆ by makara
ಶ್ರೀಧರರೆ, ತಿದ್ದಿದ್ದಕ್ಕೆ
ಶ್ರೀಧರರೆ, ತಿದ್ದಿದ್ದಕ್ಕೆ ಧನ್ಯವಾದಗಳು, ತಿದ್ದಿದ ಆವೃತ್ತಿ ಸರಿಯಿದೆಯೆ ನೋದಿ - ನಾಗೇಶ ಮೈಸೂರು
120.ಭಕ್ತಿ-ವಶ್ಯಾ
ಶಿವ ಬೇರೆ ಭಕ್ತಿ ಬೇರೆ ಎನೆ ಅಜ್ಞಾನ ಎರಡೊಂದು ಜೀವ
ಒಣ ಶಾಸ್ತ್ರವಲ್ಲ ಶ್ರದ್ಧಾಭಕ್ತಿ ದೇವಾನಾಂಪ್ರಿಯ ಸ್ವಭಾವ
ನಿರಪೇಕ್ಷಾ ಪ್ರತಿಫಲ ಆಂತರ್ಯಾಂತರ್ಗತ ಮುಗ್ದ ಭಕ್ತಿ
ಮಾತಾ ನಿಯಂತ್ರಣಾಕರ್ಷಣಕೆ ನಿಜಭಕ್ತಿ ವಶದ ಸೂಕ್ತಿ!
In reply to ಶ್ರೀಧರರೆ, ತಿದ್ದಿದ್ದಕ್ಕೆ by nageshamysore
ನಾಗೇಶರೆ, ಕವನವನ್ನು ಸುಂದರವಾಗಿ
ನಾಗೇಶರೆ, ಕವನವನ್ನು ಸುಂದರವಾಗಿ ಮಾರ್ಪಡಿಸಿರುವುದಕ್ಕೆ ನಿಮಗೂ ಸಹ ಧನ್ಯವಾದಗಳು. ಅನ್ಯಥಾ ಭಾವಿಸ ಬೇಡಿ; ದೇವಾನಾಂಪ್ರಿಯ ಎನ್ನುವ ಶಬ್ದ ಚೆನ್ನಾಗಿದ್ದರೂ ಸಹ ಅದು ಸಾಮ್ರಾಟ್ ಅಶೋಕನನ್ನು ಅನಾವಶ್ಯಕವಾಗಿ ಎಳೆದು ತರುತ್ತದೆ ಎನಿಸುತ್ತಿದೆ. ಅದಕ್ಕಿಂತಲೂ ಹೆಚ್ಚು ಸೂಕ್ತ ಪದವನ್ನು ಬಳಿಸಿದರೆ ಚೆನ್ನಾಗಿರುತ್ತದೆನ್ನುವುದು ನನ್ನ ಅಭಿಪ್ರಾಯ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ನಾಗೇಶರೆ, ಕವನವನ್ನು ಸುಂದರವಾಗಿ by makara
ಶ್ರೀಧರರೆ, ನಿಮ್ಮ ಮಾತು ನಿಜ, ಇದೊ
ಶ್ರೀಧರರೆ, ನಿಮ್ಮ ಮಾತು ನಿಜ, ಇದೊ ಪುನರ್ಪರಿಷ್ಕರಣೆ :-) ನಾಗೇಶ ಮೈಸೂರು
120.ಭಕ್ತಿ-ವಶ್ಯಾ
ಶಿವ ಬೇರೆ ಭಕ್ತಿ ಬೇರೆ ಎನೆ ಅಜ್ಞಾನ ಎರಡೊಂದು ಜೀವ
ಒಣ ಶಾಸ್ತ್ರವಲ್ಲ ಶ್ರದ್ಧಾ ಭಕ್ತಿ ಭಗವಂತ ಮೆಚ್ಚುವ ಭಾವ
ನಿರಪೇಕ್ಷಾ ಪ್ರತಿಫಲ ಆಂತರ್ಯಾಂತರ್ಗತ ಮುಗ್ದ ಭಕ್ತಿ
ಮಾತಾ ನಿಯಂತ್ರಣಾಕರ್ಷಣಕೆ ನಿಜಭಕ್ತಿ ವಶದ ಸೂಕ್ತಿ!
In reply to ಶ್ರೀಧರರೆ, ನಿಮ್ಮ ಮಾತು ನಿಜ, ಇದೊ by nageshamysore
ಕವನ ಈಗ ಹೆಚ್ಚು ಅರ್ಥಪೂರ್ಣವಾಗಿದೆ
ಕವನ ಈಗ ಹೆಚ್ಚು ಅರ್ಥಪೂರ್ಣವಾಗಿದೆ, ಬೇಸರಿಸದೆ ಮತ್ತೊಮ್ಮೆ ಉತ್ತಮ ಪಡಿಸಿದ್ದಕ್ಕೆ ಧನ್ಯವಾದಗಳು, ನಾಗೇಶರೆ. ನಿಮ್ಮಿಂದ ೧೨೧ರಿಂದ ೧೨೩ನಾಮಗಳ ಕಾವ್ಯವನ್ನು ನಿರೀಕ್ಷಿಸುತ್ತಿರುವೆ. ಮೊನ್ನೆ ಹೇಳಿದಂತೆ ಇಂದಿನಿಂದ ಸ್ಪೆಷಲ್ ಕ್ಲಾಸ್ ಷುರುವಾಗಿದೆ.
In reply to ಕವನ ಈಗ ಹೆಚ್ಚು ಅರ್ಥಪೂರ್ಣವಾಗಿದೆ by makara
ಶ್ರೀಧರರೆ, ಒಂದು ತಡರಾತ್ರಿಯ
ಶ್ರೀಧರರೆ, ಒಂದು ತಡರಾತ್ರಿಯ ಕಾನ್ಫರೆನ್ಸಿನ ಮೀಟೀಂಗಿನಿಂದ ಈಗ ತಾನೆ ಬಂದೆ; ನೋಡಿದರೆ ಆಗಲೆ ನಿಮ್ಮ ಎರಡು ಕ್ಲಾಸು ಕಾಯುತ್ತಿದೆ! ನಾನೀಗ ತುಸು ಓಡಬೇಕೆಂದು ಕಾಣುತ್ತದೆ :-) - ನಾಗೇಶ ಮೈಸೂರು
In reply to ಕವನ ಈಗ ಹೆಚ್ಚು ಅರ್ಥಪೂರ್ಣವಾಗಿದೆ by makara
ಶ್ರೀಧರ್‌ಜಿ, "ಶಿಷ್ಯ"ನ
ಶ್ರೀಧರ್‌ಜಿ, "ಶಿಷ್ಯ"ನ ತಪ್ಪುಗಳನ್ನು ತಿದ್ದಿ ತೀಡಿ ಸರಿಪಡಿಸುತ್ತಿದ್ದೀರಿ. ಆದರೆ>>>"ಒಣ ಶಾಸ್ತ್ರವಲ್ಲ ಶ್ರದ್ಧಾ ಭಕ್ತಿ ಭಗವಂತ ಮೆಚ್ಚುವ ಭಾವ"- -->ಶ್ರದ್ಧಾ ಭಕ್ತಿಯನ್ನು ಮೆಚ್ಚುವುದು ಸರಿ. ಶಾಸ್ತ್ರವನ್ನು "ಒಣ" ಅನ್ನಬಹುದೇ?:) ಗುರುಶಿಷ್ಯರಿಬ್ಬರ ಜತೆ ಓಡಲು ತಯಾರಾಗಿರುವ..ಗಣೇಶ.
In reply to ಶ್ರೀಧರ್‌ಜಿ, "ಶಿಷ್ಯ"ನ by ಗಣೇಶ
ಗಣೇಶ್ ಜೀ, ಇದೀಗ ಗೋಲ್ಡನ್
ಗಣೇಶ್ ಜೀ, ಇದೀಗ ಗೋಲ್ಡನ್ ಟ್ರೈಯಾಂಗಲ್ ಸಂಪೂರ್ಣ :-) ಯಾಕೊ ಕವಿ ಭಕ್ತಿ ಇನ್ನೂ ಸಾಲದೂಂತ ಕಾಣುತ್ತದೆ , ಅದಕ್ಕೆ ಭಕ್ತಿ-ವಶ್ಯಾ ಅಷ್ಟು ಸುಲಭದಲ್ಲಿ ವಶಳಾಗುತ್ತಿಲ್ಲ :-) ಕೆಳಗೆ ಎರಡು ಮಾರ್ಪಡಿಸಿದ ರೂಪಗಳಿವೆ, ಯಾವುದು ಸೂಕ್ತವೊ ಸಲಹೆ ಕೊಡಿ !- ನಾಗೇಶ ಮೈಸೂರು
120.ಭಕ್ತಿ-ವಶ್ಯಾ
ಶಿವ ಬೇರೆ ಭಕ್ತಿ ಬೇರೆ ಎನೆ ಅಜ್ಞಾನ ಎರಡೊಂದು ಜೀವ
ಘನ ಶಾಸ್ತ್ರವಲ್ಲ ಶ್ರದ್ಧಾ ಭಕ್ತಿ ಭಗವಂತ ಮೆಚ್ಚುವ ಭಾವ
ನಿರಪೇಕ್ಷಾ ಪ್ರತಿಫಲ ಆಂತರ್ಯಾಂತರ್ಗತ ಮುಗ್ದ ಭಕ್ತಿ
ಮಾತಾ ನಿಯಂತ್ರಣಾಕರ್ಷಣಕೆ ನಿಜಭಕ್ತಿ ವಶದ ಸೂಕ್ತಿ!
120.ಭಕ್ತಿ-ವಶ್ಯಾ
ಶಿವ ಬೇರೆ ಭಕ್ತಿ ಬೇರೆ ಎನೆ ಅಜ್ಞಾನ ಎರಡೊಂದು ಜೀವ
ಬರಿ ಶಾಸ್ತ್ರವಲ್ಲ ಶ್ರದ್ಧಾ ಭಕ್ತಿ ಭಗವಂತ ಮೆಚ್ಚುವ ಭಾವ
ನಿರಪೇಕ್ಷಾ ಪ್ರತಿಫಲ ಆಂತರ್ಯಾಂತರ್ಗತ ಮುಗ್ದ ಭಕ್ತಿ
ಮಾತಾ ನಿಯಂತ್ರಣಾಕರ್ಷಣಕೆ ನಿಜಭಕ್ತಿ ವಶದ ಸೂಕ್ತಿ!
In reply to ಗಣೇಶ್ ಜೀ, ಇದೀಗ ಗೋಲ್ಡನ್ by nageshamysore
:) :) ನನಗೆ ಎರಡೂ ಒಪ್ಪಿಗೆಯಾಯ್ತು
:) :) ನನಗೆ ಎರಡೂ ಒಪ್ಪಿಗೆಯಾಯ್ತು. ಇನ್ನು ಗುರೂಜಿ ಏನನ್ನುವರೋ-ಕಾದು ನೋಡೋಣ.
In reply to :) :) ನನಗೆ ಎರಡೂ ಒಪ್ಪಿಗೆಯಾಯ್ತು by ಗಣೇಶ
ಅಂಡಾಂಡ ಭಂಡ ಗುರುಗಳು ಹೇಳಿದ ಮೇಲೆ
ಅಂಡಾಂಡ ಭಂಡ ಗುರುಗಳು ಹೇಳಿದ ಮೇಲೆ ಇನ್ನು ಹೇಳುವುದು ಇನ್ನೇನಾದರೂ ಉಳಿದಿರುತ್ತದೆಯೇ? ನಿಮ್ಮ ಅಭಿಪ್ರಾಯವೇ ನನ್ನದೂ ಸಹ. ಆದರೆ ಸರಳತೆಯ ದೃಷ್ಟಿಯಿಂದ ಬರಿ ಶಾಸ್ತ್ರವಲ್ಲ ಎನ್ನುವುದು ಉತ್ತಮವೆನಿಸುತ್ತದೆ. ನನ್ನ ಪರವಾಗಿ ನಾಗೇಶರೊಂದಿಗೆ ರಾತ್ರಿಯ ಹೊತ್ತು ದೇವಿಯ ಕೈಂಕರ್ಯ ಮಾಡಿದ್ದಕ್ಕೆ ಧನ್ಯವಾದಗಳು ಗಣೇಶ್‌ಜಿ.
In reply to ಶ್ರೀಧರ್‌ಜಿ, "ಶಿಷ್ಯ"ನ by ಗಣೇಶ
ಸಂಪದದ ಹೊಸರೂಪ ತುಂಬಾ ಚೆನ್ನಾಗಿದೆ
ಸಂಪದದ ಹೊಸರೂಪ ತುಂಬಾ ಚೆನ್ನಾಗಿದೆ. ಸಂಪದ ನಿರ್ವಾಹಕ ಬಳಗಕ್ಕೆ ಧನ್ಯವಾದಗಳು. ಮುಖಪುಟ ಸೂಪರ್. (ಶ್ರೀಧರ್‌ಜಿ, ತಮ್ಮ ಲೇಖನದ ನಡುವೆ ಈ ವಿಷಯ ಸೇರಿಸಿದ್ದಕ್ಕೆ ಬೇಸರಿಸುವುದಿಲ್ಲ ಎಂಬ ನಂಬಿಕೆಯೊಂದಿಗೆ..ಗಣೇಶ)
In reply to ಸಂಪದದ ಹೊಸರೂಪ ತುಂಬಾ ಚೆನ್ನಾಗಿದೆ by ಗಣೇಶ
ಇದು ನಮ್ಮೆಲ್ಲರ ಸಂಪದ ಇದರ ಬಗ್ಗೆ
ಇದು ನಮ್ಮೆಲ್ಲರ ಸಂಪದ ಇದರ ಬಗ್ಗೆ ಮೆಚ್ಚುಗೆಯನ್ನು ಎಲ್ಲಿ ವ್ಯಕ್ತಪಡಿಸಿದರೂ ತಪ್ಪೇನಿಲ್ಲ. ಆದರೆ ಹೆಚ್ಚು ಜನ ಓದುವ ಬರಹದಲ್ಲಿ ಪ್ರಕಟಿಸಿದ್ದರೆ ಸಂಪದದ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಇನ್ನೂ ಹೆಚ್ಚು ಜನಕ್ಕೆ ತಿಳಿಯುತ್ತಿತ್ತು, ಗಣೇಶ್‌ಜಿ.
In reply to ಶ್ರೀಧರರೆ, ತಿದ್ದಿದ್ದಕ್ಕೆ by nageshamysore
ನಾಗೇಶರೆ ನೀವು ಅಗಿಂದಗ್ಯೆ
ನಾಗೇಶರೆ ನೀವು ಅಗಿಂದಗ್ಯೆ ಸಂದರ್ಬಕ್ಕೆ ಅನುಸಾರ ಕಟ್ಟುವ ಸರಳ ಕವನಗಳು ಖುಷಿ ಕೊಡುತ್ತವೆ. ಅದರಲ್ಲಿ ತುಂಬ ಪರಿಣಿತಿಯು ಕಾಣುತ್ತಿದೆ. ಹಾಗೆ ಶತಾವದಾನಿ ಗಣೇಶರ ನೆನಪು ತರುತ್ತದೆ.
ಇರಲಿ
ಉತ್ತರ ಭಾರತದಲ್ಲಿ ಉಕ್ಕೆದು ಹರಿದ ಗಂಗ ಯಮುನರ ರುದ್ರ ನರ್ತನದ ಸುದ್ದಿ ನೀವು ಗಮನಿಸಿರಬಹುದು,
ಹಿಂದೊಮ್ಮೆ ಶಿವ ದುಮುಕುತ್ತಿದ್ದ ಗಂಗೆಯನ್ನು ತನ್ನೆ ಜಡೆಯಲ್ಲಿಯೆ ಹಿಡಿದು ನಿಲ್ಲಿಸಿದ ಅನ್ನುವುದು ಪುರಾಣದ ಪ್ರಸಿದ್ದ ಕತೆ
ಈಗ ಶಿವನ ಭವ್ಯ ಮೂರ್ತಿಯನ್ನು ಗಂಗೆ ತನ್ನ ಪ್ರತಾಪ ತೋರುತ್ತ ಕೊಚ್ಚಿಕೊಂಡು ಹೋಗುತ್ತಿರುವುದು ನೋಡುವಾಗ ಏನೆಲ್ಲ ಭಾವನೆಗಳು ಬರುತ್ತವೆ ಅಲ್ಲವೆ, ಗಂಗೆ ಅಂದಿನ ತನ್ನ ಕೋಪವನ್ನು ಶಿವನ ಮೇಲೆ ತೋರುತ್ತಿರುವಳೆ ಅಥವ ಪುಣ್ಯ ಕ್ಷೇತ್ರದಲ್ಲಿ ನಡೆಯುವ ಅನಾಚಾರಗಳನ್ನು ಕಂಡು ಅಲ್ಲಿ ಇರುವ ತನ್ನ ಪತಿಯನ್ನು ಕೈ ಹಿಡಿದು ಕರೆದೊಯ್ಯುತ್ತಿರುವಳೆ ಅನ್ನಿಸದೆ. ಆ ಸಂದರ್ಬಕ್ಕೆ ಹೊಂದುವಂತೆ ನಿಮ್ಮಿಂದ ಒಂದು ಕವನವನು ನಿರೀಕ್ಷಿಸುತ್ತಿರುವೆ, ಅದೆ ಚಿತ್ರದ ಜೊತೆ
ಪಾರ್ಥಸಾರಥಿ
In reply to ನಾಗೇಶರೆ ನೀವು ಅಗಿಂದಗ್ಯೆ by partha1059
ಪಾರ್ಥಾ ಸಾರ್, ತುಂಬಾ ಧನ್ಯವಾದಗಳು
ಪಾರ್ಥಾ ಸಾರ್, ತುಂಬಾ ಧನ್ಯವಾದಗಳು - <<<<ಸರಳ ಕವನಗಳು ಖುಷಿ ಕೊಡುತ್ತವೆ. ಅದರಲ್ಲಿ ತುಂಬ ಪರಿಣಿತಿಯು ಕಾಣುತ್ತಿದೆ. ಹಾಗೆ ಶತಾವದಾನಿ ಗಣೇಶರ ನೆನಪು ತರುತ್ತದೆ.>>>>
ಪರಿಣಿತಿಯ ಬಗ್ಗೆ ಗೊತ್ತಿಲ್ಲ - ಯಾಕೆಂದರೆ ಸುಮಾರು 20 ವರ್ಷಗಳ ಕಾಲ ಬರಹದ ವ್ಯವಸಾಯವೆ ಇರಲಿಲ್ಲ. ಏಕಾಏಕಿ ಒಂದು ವರ್ಷದಿಂದೀಚೆಗೆ ಮತ್ತೆ ಬರೆವ ಬಿರುಸುಕ್ಕಿಬಂತು. ಸರಳವಾಗಿ ಮನಸಿಗೆ ಬಂದದ್ದು ಸಾಲಾಗುತ್ತಿದೆಯಷ್ಟೆ. ಅದರಲ್ಲೂ ಮುಕ್ಕಾಲು ಪಾಲು ಎಲ್ಲಾ ಪ್ರಥಮ ಪ್ರತಿಗಳೆ, ನಾನು ತಿದ್ದುವುದೆ ಬಹಳ ಕಡಿಮೆ (ಕಾಗುಣಿತ ತಪ್ಪುಗಳ ಹೊರತಾಗಿ) - ಬಹುಷಃ ಶ್ರೀಧರರೆ ಹೇಳಿದಂತೆ, ಇದೂ ಆ ದೇವಿಯ ಕೃಪಾ ಕೈಚಳಕವೆ ಇರಬೇಕು :-)
ಶತಾವದಾನಿ ಗಣೇಶರ ಕ್ಷೇತ್ರ ಸ್ತರ ವಿಸ್ತಾರದ ಔನತ್ಯವೆ ಬೇರೆಯದು. ಅವರು ಹಿಮಾಲಯದ ಗೌರಿಶಿಖರ; ನಾನು ಬರಿ ಲಲಿತಾಸಹಸ್ರ ನಾಮಾವಳಿ ಉವಾಚಿಸುವ ಸಾಮಾನ್ಯ ಕನ್ನಡ ಸ್ವರ. ನನ್ನ ಕವನ ಅವರನ್ನು ನೆನಪಿಸಿತೆಂದರೆ ಹೂವಿಂದ ನಾರು ಸ್ವರ್ಗ ಸೇರಿದ ಹಾಗೆ ನಾನು ಧನ್ಯ! - ನಾಗೇಶ ಮೈಸೂರು.
>>> ಬೇಡರ ಕಣ್ಣಪ್ಪನೆಂದು
>>> ಬೇಡರ ಕಣ್ಣಪ್ಪನೆಂದು ಸುಪರಿಚಿತವಾಗಿರುವವನು) ಕಥೆಯ ಕುರಿತಾಗಿದೆ. ಅವ ಶಿವನ ಅನನ್ಯ ಭಕ್ತನಾಗಿದ್ದನು ಮತ್ತು ಅವನ ಭಕ್ತಿಯು ಅಸದೃಶವಾದುದು. ಕಣ್ಣಪ್ಪನು ಶಿವನನ್ನು ಲಿಂಗರೂಪದಲ್ಲಿ ಪೂಜಿಸುತ್ತಿದ್ದನು, ಅವನಿಗೆ ಶಾಸ್ತ್ರವಿಧಿತ ಯಾವುದೇ ಪೂಜಾ ವಿಧಾನಗಳು ತಿಳಿದಿರಲಿಲ್ಲ. ಅವನು ಶಿವನಿಗೆ ಹಸಿ ಮಾಂಸವನ್ನು ಅರ್ಪಿಸುತ್ತಿದ್ದನು >>
ಶಿವಾನಂದ ಲಹರಿಯ ಶ್ಲೋಕ -
http://sampada.net/article/23988