ಸುಬ್ಬನ ವರ್ಷತೊಡಕು ಪುರಾಣ !

ಸುಬ್ಬನ ವರ್ಷತೊಡಕು ಪುರಾಣ !

 

ವರ್ಷದ ಮೊದಲ ದಿನ ತೊಡಕಾದರೆ ಇಡೀ ವರ್ಷವೇ ತೊಡಕುಮಯ ಅಂತ ನಮ್ಮ ಹಿರಿಯರು ನಮ್ಮ ತಲೆಯಲ್ಲಿ ತುಂಬಿರೋದು ನಿಜ ... ಅದರಂತೆ ನಮ್ಮ ಸುಬ್ಬ, ಹಬ್ಬದ ದಿನ, ಅರ್ಥಾತ್ ಯುಗಾದಿ ಸಂಭ್ರಮದ ದಿನ ಯಾರ ಕೈಲೂ ಬೈಸಿಕೊಳ್ಳದಂತೆ ಬಹಳಾ ಎಚ್ಚರ ವಹಿಸುತ್ತಾನೆ ... ಆದರೂ ಸುಬ್ಬ ದಿನವೂ ಎಲ್ಲರ ಕೈಲಿ ಬೈಸಿಕೊಳ್ಳೋದು ಯಾಕೆ ಅಂತೀರೋ? ಈಗೇನೋ ಅನಾಹುತವಾಗದಂತೆ ಎಚ್ಚರವಹಿಸುತ್ತಾನೆ ಆದರೆ ಅಂದು ಅವನಿಗೆ ಆ ಬುದ್ದಿ ಇರಲಿಲ್ಲವೇ?
 
ಎಂಥದು ಮಾರಾಯರೇ? ಇದು ಬಹಳ ಗೋಜಲಾಗಿದೆಯೆಲ್ಲ? 
 
ಹೋಗ್ಲಿ ಬಿಡಿ ಹೇಳಿಬಿಡ್ತೀನಿ ... ಹೀಗೇ ಒಂದು ಶುಭದಿನ ನಾವೆಲ್ಲರೂ ಭೂಮಿಗೆ ಬಂದಂತೇ ಸುಬ್ಬನೂ ಈ ಭುವಿಗೆ ಬಂದ. ಹಲವು ಗಂಡುಗಳನ್ನು ಬಿಟ್ಟರೆ ಮಿಕ್ಕ ಗಂಡು ಪ್ರಾಣಿಗಳಿಗೆ ನಮ್ ಸುಬ್ಬ ಭ್ರಾತೃ ಸಮಾನ ... Brothers of different mothers  ಅಂತ ಆಂಗ್ಲದಲ್ಲಿ ಹೇಳಿದಂತೆ ! ಶುದ್ದ ಅಮಾವಾಸ್ಯೆಯ ದಿನ ಬೆಳ್ಳಂಬೆಳಿಗ್ಗೆ ಧರೆಗಿಳಿದ ಸುಬ್ಬನಿಗೆ ಹುಟ್ಟಿದ ಕೂಡಲೆ ಅನ್ನಿಸಿತಂತೆ, "ಬೆಳಿಗ್ಗೆ ಬೆಳಿಗ್ಗೆ ಅತ್ತರೆ ಪಾಪ ಎಲ್ಲರಿಗೂ ಎಚ್ಚರಿಕೆ ಆಗುತ್ತೆ. ಒಂದು ನಾಲ್ಕು ತಾಸು ಬಿಟ್ಟು ಅಳೋಣ" ಅಂತ ! 
 
ಆಸ್ಪತ್ರೆಯ ಕೋಣೆಯ ಹೊರಗೆ ತಮ್ಮ ಕಚ್ಚೆಯ ತುದಿಯನ್ನು ಕೈಯಲ್ಲಿ ಹಿಡಿದು ಸುಬ್ಬನ ತಂದೆ ಹೊರಗೆ ಶತಪಥ ತಿರುಗುತ್ತಿದ್ದರು ... ರಾತ್ರಿ ಒಂಬತ್ತರವರೆಗೂ ಎಲ್ಲರೂ ಜೊತೆಗೇ ಇದ್ದರೂ, ’ಇನ್ನೂ ನಿನ್ ಹೆಂಡತಿ ಯಾಕೋ ಹೆತ್ತಿಲ್ಲ, ಬೆಳಿಗ್ಗೆ ಬರುತ್ತೇವೆ’ ಎಂದು ಇವರೊಬ್ಬರನ್ನು ಬಿಟ್ಟು ಮಿಕ್ಕವರು ಮನೆಗೆ ತೆರಳಿದ್ದರು. ರೂಮಿನ ಬೆಡ್ ಮೇಲೆ ಪತ್ನಿ, ಇವರು ಹೊರಗೆ. ಯಾವ ಹೊತ್ತಿಗಾದರೂ ಮಗುವಿನ ಜನನ ಆಗಬಹುದು ಎಂದು ಹೇಳಿದ್ದರಿಂದ ಪಾಪ ಸುಬ್ಬನ ಅಪ್ಪನಿಗೆ ಟಾಯ್ಲೆಟ್ಟಿಗೆ ಹೋಗಲೂ ಆಗುತ್ತಿಲ್ಲ. ಹಾಗಾಗಿ ರೂಮಿನ ಹೊರಗೆ ಶತಪಥ ತಿರುಗುತ್ತಿದ್ದರು ! ಒಟ್ಟಿನಲ್ಲಿ ಗಂಡ-ಹೆಂಡತಿ ಇಬ್ಬರಿಗೂ ಯಾವ ಹೊತ್ತಿಗಾದರೂ ಆಗಬಹುದು ಎಂತಾಯ್ತು !!!
 
ಮಗುವಿನ ಜನನ ಆಯ್ತು. ಆದರೆ ಸುಬ್ಬ ಮಾತ್ರ ಅಳಲಿಲ್ಲ. ಹಸನ್ಮುಖಿಯಾಗಿ ನೆಮ್ಮದಿಯಾಗಿದ್ದ. ಮಗುವಿನ ಜನನ ವಾರ್ತೆ ದಾದಿಗೆ ತಲುಪಿ, ಆ ದಾದಿ ಸೀದ ಬಂದು ಸುಬ್ಬನ ಕಾಲುಗಳನ್ನು ಪಿಡಿದು, ಉಲ್ಟಾ ತಿರುಗಿಸಿದವಳೇ ಪಟ ಪಟ ಬೆನ್ನ ಮೇಲೆ ಬಡಿದಳು. ಸುಬ್ಬ ಸುಮ್ಮನಿದ್ದ. ಹೆತ್ತ ತಾಯಿ ಗೋಗೊರೆದಳು "ಸುಬ್ಬರಾಯ ನನ್ನ ಕಂದನ್ನ ಕಾಪಾಡು. ಉಳಿದರೆ ನಿನ್ನ ಹೆಸರೇ ಇಡ್ತೀನಿ ... ಲೋ ಸುಬ್ಬ, ಅಳೋ" ಅಂತ ... ಇನ್ನೊಂದೆಡೆ ಆ ದಾದಿ "ಬಡೀತಿದ್ದೀನಿ ಅಳೋ, ದಡ್ಡ ಕೂಸೆ ... ನಿನ್ನಿಂದ ನನ್ ನಿದ್ದೆ ಹಾಳಾಯ್ತು" ಅಂತ ಹಲ್ಲು ಕಡೀತಿದ್ಲು ...
 
"ಬಡೀತಿದ್ದೀನಿ ಅಳೋ ದಡ್ಡ ಕೂಸೆ" ಎಂದಾಗ ಸುಬ್ಬನಿಗೆ ತಲೆ ಎಲ್ಲ ಕಟ್ಟೋಯ್ತು. ಇನ್ನೂ ಭೂಮಿಗೆ ಲ್ಯಾಂಡಾಗಿ ಅರ್ಧ ಘಂಟೆ ಆಗಿಲ್ಲ ಆಗಲೇ ಬೈಗುಳವೇ ಎಂದು ರೇಗಿಕೊಂಡು ಒಮ್ಮೆ ಜೋರಾಗಿ ಅತ್ತ ರಭಸಕ್ಕೆ ಅಂದು ಸ್ವಿಚ್ ಆಫ್ ಆದ ಕಿವಿಯ ಡ್ರಮ್ಮು ಮತ್ತೆ ಆನ್ ಆಗಲೇ ಇಲ್ಲ ಆ ದಾದಿಗೆ ! ಕರುಳೇ ಕಿತ್ತು ಬರುವಂತೆ ಅತ್ತು, ದಾದಿಯ ಕಿವಿಯನ್ನೇ ಕಿತ್ತು ಹಾಕಿದ್ದ ನಮ್ ಸುಬ್ಬ !!
 
ಆ ದಾದಿ ಮತ್ತೊಮ್ಮೆ ಸುಬ್ಬನ ಕಾಲು ಪಿಡಿದು ತಾನೇ ಅತ್ತಿದ್ದಿದ್ದರೆ ಶಾಪ ವಿಮೋಚನೆಯಂತಾಗಿ ಕಿವಿ ಸರಿ ಹೋಗ್ತಿತ್ತೇನೋ?
 
ಮಗುವಿನ ಜನನದ ಸದ್ದು ಕಿವಿಗೆ ಬೀಳುತ್ತಲೇ ಹೊರಗೆ ಕಾದಿದ್ದ ಸುಬ್ಬನ ತಂದೆ ಸಂತಸದಿಂದ ಎದ್ದು ಬಿದ್ದು ಓಡಿದರು ... ಟಾಯ್ಲೆಟ್’ಗೆ ... ಎಲ್ಲ ನಿರಾಳವಾದ ಮೇಲೆ ರೂಮಿಗೆ ಬಂದು ಪತ್ನಿಯನ್ನೂ ಮಗನನ್ನೂ ನೋಡಿದರು ಎನ್ನೋದು ಬೇರೆ ವಿಚಾರ ... 
 
ವರ್ಷದ ಮೊದಲ ದಿನ ಬೈಸಿಕೊಂಡಲ್ಲಿ ಇಡೀ ವರ್ಷ ಬೈಸಿಕೊಳ್ಳಬೇಕಾಗುತ್ತದೆ ಎಂಬೋದು ನಿಜವಾದರೆ, ನಮ್ ಸುಬ್ಬನ ಪಾಡು ನೋಡಿ, ಹುಟ್ಟಿದ ಮೊದಲ ದಿನವೇ ಬೈಸಿಕೊಂಡಿದ್ದ !!! ಪಾಪ ಸುಬ್ಬ, ಒಬ್ಬರಿಗೆ ಒಳಿತು ಮಾಡಲು ಹೋಗಿ ಮೊದಲ ದಿನವೇ ಬೈಸಿಕೊಂಡಿದ್ದಕ್ಕೆ ಜೀವನವಿಡಿ ಬೈಸಿಕೊಳ್ಳೋದೇ ಅವನ ಹಣೆಬರಹ !
 
ಹೋಗ್ಲಿ ಬಿಡಿ, ಇದು ಅಂದಿನ ಕಥೆ ... ಈಗ ಇಂದಿನ ಕಥೆ ಹೇಳೋಣ ...
 
ವಿಜಯನಾಮ ಶುಭ ಸಂವತ್ಸರದ ದಿನ ಜಯ ಜಯ ಅಂತ ಸುಬ್ಬ ನಮ್ಮ ಮನೆಗೆ ವಕ್ಕರಿಸಿದ ... "ಏನೋ ಸುಬ್ಬ, ಮನೆಯಲ್ಲಿ ಹಬ್ಬ ಮಾಡೋಲ್ವೇನೋ?" ಅಂದೆ ... ಅದಕ್ಕೆ ಸುಬ್ಬ "ಇಲ್ಲ ಕಣೋ, ನಮ್ಮಜ್ಜಿ ದೊಡ್ಡಪ್ಪನ ಮಗನಿಗೆ ಹುಷಾರಿಲ್ಲ ಅಂತ ಹಬ್ಬ ಬೇಡ, ಯಾವಾಗ ಏನು ಸುದ್ದಿ ಬರುತ್ತೋ ಏನೋ ಅಂದರು ನಮ್ಮಜ್ಜಿ" ... "ಅಯ್ಯೋ ಪಾಪ ! ಏನಾಗಿತ್ತು?" "ಅಂಥಾದ್ದೇನಿಲ್ಲ ಅಂತಿದ್ರಪ್ಪ ನಮ್ಮಜ್ಜಿ ... ಸಕ್ಕರೆ ಖಾಯಿಲೆ ಅಂತೆ ... ಮಂಡಿ ನೋವು, ಬೆನ್ನು ನೋವು, ಸ್ವಲ್ಪ ಮರೆವು ಮತ್ತೆ ... ನಾನೇ ಕಟ್ ಮಾಡಿದೆ "ಹೋಗ್ಲಿ ಬಿಡೋ ಸುಬ್ಬ .. ಲಿಸ್ಟ್ ಉದ್ದ ಆಯ್ತು ... ಇಷ್ಟಕ್ಕೂ ಅವರ ವಯಸ್ಸು ಎಷ್ಟು ?" .. "ಚಿಕ್ಕ ವಯಸ್ಸೇ ಅಂತೆ ಕಣೋ ... ಮುಂದಿನ ಯುಗಾದಿಗೆ ನೂರು ತುಂಬುತ್ತೆ ಅಂತಿದ್ರು ನಮ್ಮಜ್ಜಿ ... "
 
 
ಈಗ ಮತ್ತೊಮ್ಮೆ ಅರಿವಾಯ್ತಲ್ಲ ನಿಮಗೆ ನಮ್ ಸುಬ್ಬನ ಕಥೆ? ನಮ್ಮ ಮನೆಗೆ ಬಂದರೆ ಬೈಸಿಕೊಳ್ಳೋದು ತಪ್ಪುತ್ತೆ ಅನ್ನೋ ಧೈರ್ಯದ ಮೇಲೆ ಬಂದಿದ್ದಾನೆ ... ಬಯ್ಯೋದೇನು, ಒಂದೆರಡು ತಟ್ಲಾ ಅನ್ನಿಸುತ್ತಿದೆ ... ಬೆಳಿಗ್ಗೆ ಬೆಲ್ಲ ಜಾಸ್ತಿ ತಿಂದಿರಬೇಕು ನಾನು, ಅದಕ್ಕೆ ಶಾಂತವಾಗಿ ನುಡಿದೆ "ಜೀವನ ನೋಡಿರೋ ಜೀವ. ಇವತ್ತೆಲ್ಲ ನಾಳೆ ಹೋಗಲೇಬೇಕಲ್ಲ .. ಏನು ಮಾಡೊಕ್ಕಾಗುತ್ತೆ ಬಿಡು" ಅಂತ ಸಮಾಧಾನ ಮಾಡಿದೆ ... ಅದಕ್ಕೆ ಅವನು "ಹೌದು ಕಣೋ, ಪಾಪ ಇವರು ಆಸ್ಪತ್ರೆಯಲ್ಲಿ ಇರೋದ್ರಿಂದ ಅವರನ್ನ ನೋಡೋಕ್ಕೂ ಹೋಗೋದು ಕಷ್ಟ ನೋಡು" ಅಂದ ... 
 
ನನಗೆ ಒಮ್ಮೆ ಸಣ್ಣಗೆ ತಲೆ ತಿರುಗಿತು ... ಏನು ಮಾತಾಡ್ತಿದ್ದಾನೆ ಇವನು ಅಂತ ... ಬೆಳಿಗ್ಗೆ ತಿಂದ ಬೇವಿಗೆ ಈಗ ಮುಖ ಕಿವುಚಿ "ಸಾರ್, ನಮಗೆ ಅರ್ಥವಾಗಲಿಲ್ಲ" ಅಂದೆ
 
"ನೋಡೋ, ನಮ್ಮಜ್ಜಿ ದೊಡ್ಡಪ್ಪನ ಮಗನಿಗೆ ಹುಷಾರಿಲ್ಲ ಅಂತ ಆಸ್ಪತ್ರೆಗೆ ಸೇರಿಸಿದ್ದಾರೆ ... ಅರ್ಥ ಆಯ್ತಾ? ಅವರು ಆಸ್ಪತ್ರೆಗೆ ಸೇರಿರೋ ಟೆನ್ಷನ್ನು ನಮ್ಮಜ್ಜಿ ದೊಡ್ಡಪ್ಪನಿಗೆ. ಆ ಟೆನ್ಷನ್’ಗೆ ಏನಾದ್ರೂ ವ್ಯತ್ಯಾಸ ಆದ್ರೆ ಅಂತ ನಾವು ಹಬ್ಬ ಮಾಡ್ತಿಲ್ಲ ... ಗೊತ್ತಾಯ್ತೇನೋ?"
 
ಅಂದ್ರೇ, ತೊಂಬೊತ್ತೊಂಬತ್ತರ ತಾತನ ತಂದೆಗೆ ಹುಷಾರಿಲ್ಲ. ಅವರ ವಯಸ್ಸು ಕೇಳೋ ಧೈರ್ಯ ನಾನು ಮಾಡಲಿಲ್ಲ. ಪುಣ್ಯಕ್ಕೆ, ಅಷ್ಟರಲ್ಲಿ ನನ್ನ ಮೊಬೈಲು ಟ್ರಿನ್’ಗುಟ್ಟಿತು ... 
 
ನಾನು ಫೋನು ತೆಗೆದುಕೊಳ್ಳೋ ಮುಂಚೇನೇ, ಸುಬ್ಬ ಫೋನು ತೆಗೆದುಕೊಂಡು "ಹಲೋ" ಅಂದ ... ನಾನು ಮಿಕ ಮಿಕ ನೋಡ್ತಿದ್ದೆ ... ಅವನು "ಹೌದು, ಅವರ ಮೊಬೈಲೇ ... ನಾನು ಮಾತಾಡ್ತಿದ್ದೀನಿ, ಏನು ಹೇಳಿ" ಅಂದ ... ಆಕಡೆಯವರು ಏನೋ ಕೇಳಿರಬೇಕು ... "ನಾನು ಅವರ ಸ್ನೇಹಿತ ಸುಬ್ಬ ಅಂತ" ... ಈಗ ನಾನು ಅವನ ಕೈಯಿಂದ ಫೋನು ತೆಗೆದುಕೊಂಡು, ಕ್ಷಮೆ ಯಾಚಿಸಿ, ಮಿಕ್ಕ ಮಾತು ಮುಗಿಸಿದೆ ... ನನಗೋ ಆಗಲೇ ರೇಗಿತ್ತು .... ಈಗ ಇನ್ನೂ ಹೆಚ್ಚಾಯಿತು ...
 
"ಅಲ್ವೋ ದಡ್ಡ! ನನಗೆ ಬಂದ ಫೋನು ನೀನ್ಯಾಕೋ ತೊಗೊಂಡಿದ್ದು?" ಅದಕ್ಕವನು "ಅದು ಹಂಗಲ್ವೋ! ಅಲ್ಲಿ ಏನಾದರೂ ವ್ಯತ್ಯಾಸ ಆದ್ರೆ ನಿನ್ ಮೊಬೈಲ್ಗೆ ಕರೆ ಮಾಡಲಿಕ್ಕೆ ಹೇಳಿದ್ದೆ" ... 
 
ಇದೊಳ್ಳೇ ಕೇಸು ಮಾರಾಯ್ರೇ! ಯಾರಿಗೋ ಹುಷಾರಿಲ್ಲ ಅನ್ನೋ ಸೆಂಟಿಮೆಂಟ್ ಇಟ್ಟು ಮಾತಾಡಿದ್ದಾನೆ, ಹಾಗಾಗಿ ಮುಂದೆ ಜಾಸ್ತಿ ಮಾತಾಡಲಿಲ್ಲ. ಸಿಟ್ಟು ನುಂಗಿಕೊಂಡೆ ...
 
"ಯಾರೋ ಫೋನು ಮಾಡಿದ್ದು?" ... "ಓ! ಅದು ರಾಮು ಕಣೋ !! ಕಳೆದ ವರ್ಷ ಯುಗಾದಿ ದಿನ ನಮ್ಮ ಮನೆಗೆ ಬಂದಿದ್ದ ನೆನಪಿದೆಯಾ?" ಅಂದೆ ...  ಅಂದರೆ ನಿಮಗೆ ಸೂಕ್ಷ್ಮ ಅರ್ಥವಾಗಿರಬೇಕಲ್ಲ? ಹೌದು, ಹೋದ ವರ್ಷವೂ ಯುಗಾದಿಗೆ ನಮ್ಮ ಮನೆಯ ಹೂರಣದ ಹೋಳಿಗೆ ಹೊಡೆದಿದ್ದ ... 
 
"ಹೌದು ನೆನಪಿದೆ ... ಅದೇ ಸ್ವಲ್ಪ ಕಪ್ಪಗೆ, ಗುಂಗುರು ಕೂದಲು, ಡೊಳ್ಳ್ ಹೊಟ್ಟೆ ..." 
 
ನಾನು ಆಶ್ಚರ್ಯದಿಂದ ಕೇಳಿದೆ "ಅದು ಯಾರೋ? ನನಗೇ ಗೊತ್ತಿಲ್ಲಾ?" ... 
 
"ನಿನಗೆ ಮರೆವು ಬಂದಿರಬೇಕು ... ಮುಂದೆ ಹೇಳು" ... 
 
"ನೀನು ಯಾರ ಬಗ್ಗೆ ಹೇಳಿದ್ಯೋ ಗೊತ್ತಿಲ್ಲ ... ಈ ರಾಮು ಹಾಲು ಬಣ್ಣ ... ನೇರವಾದ ಕೂದಲು ... ಸಿಕ್ಸ್ ಪ್ಯಾಕು ... ಹೊಟ್ಟೆ ಗಿಟ್ಟೆ ಎಲ್ಲ ಏನೂ ಇಲ್ಲ ... ಅವನು ಬರ್ತಿದ್ದಾನೆ ... ಊಟಕ್ಕೆ" .. 
 
"ಪಾಪ, ಬರಲಿ ಬಿಡು ... ಅವನಿಗೆ ತಾನೇ ಯಾರಿದ್ದಾರೆ ... ಅಪ್ಪಿಲ್ಲ, ಅಮ್ಮಿಲ್ಲ, ಹೆಂಡರಿಲ್ಲ, ಮಕ್ಕಳಿಲ್ಲ ... ನಮ್ ಜೊತೆ ಅವನೂ ಮಾಡಲಿ" ಅಂದ !
 
ನನಗೆ ಅರ್ಥವಾಯಿತು, ಸುಬ್ಬ ನಮ್ಮ ಮನೆಯಲ್ಲೇ ಊಟ ಮಾಡೋದು ಅಂತ !
 
ಜೊತೆಗೆ ನನಗೆ ಭಯಂಕರ ಶಾಕು ... "ಲೋ! ಸುಬ್ಬ ನೀನು ಯಾರ ಬಗ್ಗೆ ಮಾತಾಡ್ತಿದ್ಯೋ ನನಗೆ ಗೊತ್ತಿಲ್ಲ ... ಇವನಿಗೆ ಇನ್ನೂ ಮದುವೇನೇ ಆಗಿಲ್ಲ ... ಅಪ್ಪ-ಅಮ್ಮ ಮಗಳ ಮನೆಗೆ ಅಂತ ವಿದೇಶಕ್ಕೆ ಹೋಗಿದ್ದಾರೆ ... ಅದಕ್ಕೇ ನಮ್ಮ ಮನೆಗೆ ಬರ್ತೀನಿ ಅಂದ" ... 
 
ಸುಬ್ಬ ಉವಾಚ "ನನಗೆ ಎಲ್ಲ ಗೊತ್ತು ಕಣೋ ... ಇಷ್ಟಕ್ಕೂ ನಾನು ಹೇಳಿದ್ದೇನು? ಅವನಿಗೆ ತಾನೇ ಯಾರಿದ್ದಾರೆ, ಅಪ್ಪ-ಅಮ್ಮ ಊರಲ್ಲಿ ಇಲ್ಲ, ಮದುವೆ ಆಗಿಲ್ಲ ಅನ್ನೋದನ್ನ ಹೆಂಡರಿಲ್ಲ-ಮಕ್ಕಳಿಲ್ಲ ಅಂತ ಹೇಳಿದೆ ... ತಪ್ಪೇನು?"
 
ತಲೆ ಕೊದಲೆಲ್ಲ ಪರ ಪರ ಕಿತ್ತುಕೊಳ್ಳೋಣ ಅನ್ನಿಸಿತು .... ಕಿತ್ಕೊಳ್ಳೋಷ್ಟರಲ್ಲಿ ಮತ್ತೆ ಫೋನು ಟ್ರಿನ್’ಗುಟ್ಟಿತು ... ಆಗ ಕೈಯಲ್ಲಿ ಇಟ್ಕೊಂಡಿದ್ದ ಫೋನು ಇನ್ನೂ ನನ್ನ ಕೈಲೇ ಇದ್ದುದರಿಂದ "ಹಲೋ" ಅಂದೆ ... ಆ ಕಡೆ ಸ್ವರ ಕೇಳಿ ಬೆಚ್ಚಿಬಿದ್ದೆ "ರ್ರೀ! ಯಾರ್ರೀ ಅದು ! ಸುಬ್ಬ ಇದ್ದಾನಾ?" ನಾನು ಉತ್ತರ ಕೊಡೋ ಗೋಜಿಗೂ ಹೋಗದೆ ನೇರ ಸುಬ್ಬನ ಕೈಯಲ್ಲಿ ಇಟ್ಟೆ ... 
 
ನಮ್ ಸುಬ್ಬ ಫೋನು ತೆಗೆದುಕೊಳ್ಳಲಿಲ್ಲ "ಯಾರಂತೆ?" ಅಂತ ಕಣ್ಣ ಸನ್ನೆಯಲ್ಲೇ ಕೇಳಿದ ... ಎಲಾ ಇವನ ಎಂದುಕೊಂಡು ಫೋನು ಅವನ ಕೈಗೆ ತುರುಕಿದೆ ... 
 
"ಹಲೋ" ಅಂದ .. "ಲೇ! ಸುಬ್ಬ ... ಯಾರೋ ಅದು? ನಿನ್ ಫೋನು ಅವರಿಟ್ಟುಕೊಂಡು ತಲೆಹರಟೆ?" "ಹೋಗ್ಲಿ ಬಿಡೋ .. ಏನೋ ವಿಷಯ? ಔಟಾ?" ಅಂದ ... ಆ ಕಡೆಯವರ ಮಾತು ಎಷ್ಟು ಗಟ್ಟಿಯಾಗಿತ್ತು ಅಂದ್ರೆ, ಸುಬ್ಬನ ಕೈಲಿ ಫೋನಿದ್ದರೂ ನನಗೇ ಸ್ಪಷ್ಟವಾಗಿ ಕೇಳಿಸುತ್ತಿತ್ತು ... 
 
"ಔಟು ಕಣೋ ... ನೀನು ಈಗಲೇ ಬರಬೇಕಂತೆ" ಅಂದರು ... ಅಯ್ಯೋ ಪಾಪ !
 
ಸುಬ್ಬ ನನ್ನ ಕೈಗೆ ಫೋನು ಕೊಟ್ಟು, ಹಾಗೇ ಸುಮ್ಮನೆ ಕೂತ ... ಏನಾದರೂ ಸಮಾಧಾನ ಮಾಡಬೇಕು ಅಂದ್ರೆ ಹೋದವರು ಯಾರು ಅಂತ್ಲೇ ಗೊತ್ತಿಲ್ಲ ... ಬರೀ ಔಟು ಅಂದ್ರೆ ಹೇಗೆ ಗೊತ್ತಾಗುತ್ತೆ? ವರ್ಷಾವರಿ ಹಬ್ಬದ ದಿನ ಸುಬ್ಬನ ವರಿ ಬೇರೆ ಮನೆಯಲ್ಲಿ ... ಅವನೂ ಏನೋ ಯೋಚನೆ ಮಾಡುತ್ತಿದ್ದ ... ನಾನೇ ಮೌನ ಮುರಿದೆ "ಏನೂ ಮಾಡೊಕ್ಕೆ ಆಗೊಲ್ಲ ಕಣೋ ಸುಬ್ಬ ... ವಯಸ್ಸೇನು ಚಿಕ್ಕದಾ? ಇಲ್ಲ ತಾನೇ? ಜೀವನ ಕಂಡವರು. ಏನು ಮಾಡೊಕ್ಕಾಗುತ್ತೆ .. ಸಮಾಧಾನ ಮಾಡಿಕೊಂಡು ಮುಂದಿನ ಕೆಲಸ ನೋಡು ಹೋಗು .... ನಾನು ಸಂಜೆ ಸಿಗ್ತೀನಿ" ಅಂತ ಪದಗಳನ್ನು ಹುಷಾರಾಗಿ ಹೇಳಿದೆ ... ಯಾಕೆಂದ್ರೆ ಹೋದವರು ಇಬ್ಬರಲ್ಲಿ ಯಾರು ಅಂತ ಗೊತ್ತಿರಲಿಲ್ಲ, ಯಾರಿಗಾದರೂ ಅಡ್ಜಸ್ಟ್ ಆಗಲಿ ಅಂತ ಹಾಗೆ ಹೇಳಿದೆ ...
 
"ಏನು ಮಾಡೋಕ್ಕಾಗಲ್ಲ ... ಅಜ್ಜಿಗೆ ಹೊರಗಡೆ ಇಂದ ತಂದರೆ ಸರಿ ಹೋಗೋಲ್ಲ ... ಮನೆಯಲ್ಲಿ ಹಿಟ್ಟು ಕಲಿಸಿ ಮಾಡೊಷ್ಟರಲ್ಲಿ ಸಂಜೆ ಆಗಿರುತ್ತೆ" ಅಂದ
 
ನನಗೆ ಮತ್ತೊಮ್ಮೆ ತಲೆ ತಿರುಗಿತು ... ಮಾತನ್ನೇ ಆಡದೆ ಏನು ಎಂಬಂತೆ ನೋಡಿದೆ ಅಷ್ಟೇ ... "ಏನಿಲ್ವೋ ... ಆಸ್ಪತ್ರೆಯಲ್ಲಿರೋ ಆ ತಾತ ಔಟ್ ಆದರು ... ಅಂದ್ರೆ ಡಿಸ್ಚಾರ್ಜ್ ಆದರು .. ಈಗ ಅವರನ್ನು ಮನೆಗೆ ಕರೆದುಕೊಂಡು ಹೋಗಬೇಕು ... ಈಗ ಆಪತ್ತಿಲ್ಲ ಅಂತೇನೋ ಆಯ್ತು ... ಆದರೆ ಅಜ್ಜಿಗೆ ಹೋಳಿಗೆ ಮಾಡ್ಲಿಕ್ಕೆ ಈಗ ಲೇಟ್ ಆಯ್ತು .. ಅಂಗಡಿಯಿಂದ ತರಲೇ ಎಂದರೆ ನನ್ನನ್ನ ಮನೆಯಿಂದ ಹೊರಗೇ ಹಾಕಿ ಬಿಡ್ತಾರೆ ... ಅದಕ್ಕೇ ಯೋಚನೆ ಮಾಡ್ತಿದ್ದೆ ಏನು ಮಾಡಲಿ ಅಂತ" ಅಂದ ಕಣ್ರೀ ನಮ್ ಸುಬ್ಬ !!!
 
ಸುಬ್ಬನ ದೆಸೆಯಿಂದ ಭಯಂಕರ ಸಿಟ್ಟು, ತಲೆಬಿಸಿ ಆಗಿದೆ .. ಅಂದ್ರೆ ಇನ್ನು ಇಡೀ ವರ್ಷ ನನಗೆ ಇದೇ ರೀತಿ ತೊಡಕು ಗ್ಯಾರಂಟಿ !!
 

 

Comments

Submitted by neela devi kn Wed, 04/17/2013 - 08:38

ಶ್ರೀನಾಥ್ ಭಲ್ಲೆ ಯವರಲ್ಲಿ ನಮಸ್ಕಾರಗಳು, ಸುಬ್ಬನ‌ ವರುಷದ‌ ತೊಡಕು ತಮಗೆ ತೊಡಕಾದುದು ಓದಿ ನಮ್ಮ ತೊಡಕು ನಿವಾರಣೆಯಾಗಿ ಮನಸ್ಸಿಗೆ ಉಲ್ಲಾಸವಾಯಿತು. ನೀಳಾ
Submitted by bhalle Wed, 04/17/2013 - 16:44

In reply to by neela devi kn

ಅನಂತ ಧನ್ಯವಾದಗಳು ನೀಳಾದೇವಿ’ಯವರೇ Matter can neither be created nor destroyed ಅಂದ ಹಾಗೆ ತೊಡಕಿನ ಮ್ಯಾಟರ್ ಕೂಡ .. ಅವನಿಂದ ನನಗೆ ಟ್ರ್ಯಾನ್ಸ್ಫರ್ ಆಯ್ತು :-)
Submitted by makara Wed, 04/17/2013 - 20:58

ಭಲ್ಲೇಜಿ, ನಿಮ್ಮ ಈ ಬರಹ ಓದಿದ ಮೇಲೆ ಮೂರ್ಖರ ದಿನಾಚರಣೆಯನ್ನು ಏಪ್ರಿಲ್ ತಿಂಗಳಿನಲ್ಲಿ ಏಕೆ ಆಚರಿಸುತ್ತಾರೆಂದು ಅರ್ಥವಾಯಿತು...ಏಕೆಂದರೆ ಅದು ಎಲ್ಲರನ್ನೂ ತಬ್ಬಿಬ್ಬುಗೊಳಿಸುವ ಸುಬ್ಬ ಹುಟ್ಟಿದ ತಿಂಗಳು.
Submitted by bhalle Thu, 04/18/2013 - 05:16

In reply to by makara

ಶ್ರೀಧರರೇ ಒಂದು ರೀತ್ಯಾ ಹೌದು ... ನಮ್ ಸುಬ್ಬ ಕೊಂಚ ಜಾಣ .. ಕೊಂಚ ದಡ್ಡ
Submitted by Harish S k Fri, 07/12/2013 - 19:08

Ha Ha Ha Ha , Thumbha chennagi ide Subbannana kathe. Odi Mansu haguravaayith Srinath Sahebare. Super Super Super!!!!!!