ಇತಿಹಾಸವೇಕೆ ಎಲ್ಲರನ್ನೂ ನೆನಪಿಡುವುದಿಲ್ಲ..?

ಇತಿಹಾಸವೇಕೆ ಎಲ್ಲರನ್ನೂ ನೆನಪಿಡುವುದಿಲ್ಲ..?

"ಕುರಿಯ ಮುಂದಾಳತ್ವದ ಸಿಂಹಗಳ ಸೈನ್ಯಕ್ಕೆ ನಾನು ಹೆದರುವುದಿಲ್ಲ, ಆದರೆ ಒಂದು ಸಿಂಹದ ನೇತೃತ್ವ ಹೊಂದಿರುವ ಕುರಿಗಳ ಸೈನ್ಯಕ್ಕೆ ನಾನು ಭಯ ಪಡುತ್ತೇನೆ" ಈ ಮಾತನ್ನು ಹೇಳಿದವರು ವಿಶ್ವವನ್ನೇ ಜಯಿಸಲು ಹೊರಟ ಅಲೆಕ್ಸಾಂಡರ್ ದಿ ಗ್ರೇಟ್. ಒಂದು ದೇಶ, ಸಮುದಾಯ, ನಾಗರೀಕತೆ ಪ್ರಗತಿ ಹೊಂದಬೇಕಿದ್ದರೆ ಒಬ್ಬ ಸಮರ್ಥ ನಾಯಕ ಅಗತ್ಯ ಮಾತ್ರವಲ್ಲ ಅನಿವಾರ್ಯ ಕೂಡ. ಇತಿಹಾಸವನ್ನು ನೆನಪಿಡಲು ಕಷ್ಟ; ಇತಿಹಾಸವೂ ಅಷ್ಟೇ ಎಲ್ಲರನ್ನೂ ನೆನಪಿಡುವುದಿಲ್ಲ. ಇತಿಹಾಸ ನೆನಪಿಡುವುದು ಸಮರ್ಥ ಶ್ರೇಷ್ಠ ವ್ಯಕ್ತಿಗಳನ್ನು ಮಾತ್ರ.
ನಾನು ಇತಿಹಾಸದಲ್ಲಿ ಆಸಕ್ತಿಯನ್ನು ಹೊಂದಿದ್ದರೂ, ರಾಜಕೀಯ ಇತಿಹಾಸದಲ್ಲಿ ನನಗೆ ಹೆಚ್ಚಿನ ಒಲವು. ಇತಿಹಾಸವೆಂದರೆ ಕೇವಲ ಚಕ್ರವರ್ತಿಗಳ ಸಾಧಕರ ಕಥೆಯಲ್ಲ ಎಂಬ ವಾದವಿದೆ, ಆದರೆ ಇತಿಹಾಸ ನೆನಪಿಡುವುದು ಅಂಥ ವ್ಯಕ್ತಿತ್ವಗಳನ್ನೇ. ಅಲೆಕ್ಸಾಂಡರ್, ಚಾಣಕ್ಯ, ಶೇರ್‌ಷಾ, ಅಕ್ಬರ್, ಶಿವಾಜಿ, ಪುಲಕೇಶಿ, ಕೃಷ್ಣದೇವರಾಯ, ಹೈದರ್ ಟಿಪ್ಪು, ನೆಪೋಲಿಯನ್........ ಇವರೆಲ್ಲರ ಜೀವನಚರಿತ್ರೆ ನನ್ನ ಮೇಲೆ ಅಪಾರವಾದ ಪ್ರಭಾವ ಬೀರಿದೆ. ಇತಿಹಾಸದ ಬಗ್ಗೆ ವಸ್ತುನಿಷ್ಠ ಮಾಹಿತಿಗೆ ಮನಸ್ಸು ತವಕಿಸಿದರೂ, ಕೆಲವೊಮ್ಮೆ ದಂತಕಥೆಗಳೇ ಐತಿಹಾಸಿಕ ವ್ಯಕ್ತಿಗಳನ್ನು ನಮಗೆ ಹತ್ತಿರವಾಗಿಸುತ್ತದೆ.
ಕ್ರಿಸ್ತಪೂರ್ವದಲ್ಲಿ ಚಾಣಕ್ಯ ನೀಡಿದ ರಾಜಕೀಯ ಆರ್ಥಿಕ ಸಿದ್ಧಾಂತಗಳು ಇವತ್ತಿಗೂ ಪ್ರಸ್ತುತ, ವಿಶ್ವ ಕಂಡ ಅಪ್ರತಿಮ ವೀರರಲ್ಲಿ ಒಬ್ಬನಾದ ನೆಪೋಲಿಯನ್ ಸೆರೆವಾಸದಲ್ಲಿ ಸಾವನ್ನಪ್ಪಿದ್ದು, 1857ರ ಸಂಗ್ರಾಮದ ಬಗೆಗಿನ ವಿವಾದ ಸಂಶಯಗಳು, ಭಾರತದ ಸ್ವಾತಂತ್ರ್ಯಕ್ಕೆ ಹಿಟ್ಲರ್ ಸುಭಾಶ್‌ಚಂದ್ರ ಬೋಸ್‌ರಿಗೆ ನೆರವಿನ ಭರವಸೆ ನಿಡಿದ್ದು, ಭಗತ್‌ಸಿಂಗ್ ಚಂದ್ರಶೇಖರ್ ಆಝಾದ್ ಮುಂತಾದವರ ಬಲಿದಾನ, ಮದರ್ ತೆರೆಸಾರ ನಿಸ್ವಾರ್ಥ ಸೇವೆ, ವಿವೇಕಾನಂದರ ಪ್ರೇರಣೆ... ಹೀಗೆ ಪ್ರಶ್ನೆ, ಕುತೂಹಲ, ಸಂಶಯ, ವಿರೋಧಾಭಾಸಗಳ ಪಟ್ಟಿ ಮುಂದುವರಿದು ಇತಿಹಾಸದ ಅಸ್ಪಷ್ಟ ಚಿತ್ರಣ ನೀಡುತ್ತದೆ.
ಇತಿಹಾಸದಿಂದ ಪಾಠ ಕಲಿಯದವನು ಭವ್ಯ ಭವಿಷ್ಯತ್ತನ್ನು ನಿರ್ಮಿಸಲಾರ ಎಂಬ ಮಾತಿದೆ. ಸಂಪೂರ್ಣ ಇತಿಹಾಸ ತಿಳಿದಿಕೊಳ್ಳಲು ಕಷ್ಟಸಾಧ್ಯ. ಆದರೂ ಇತಿಹಾಸದ ಪುಟಗಳಲ್ಲಿ ನಮ್ಮ ಹೆಸರೂ ಒಳ್ಳೆಯ ರೀತಿಯಲ್ಲಿ ಗುರುತಿಸಲ್ಪಟ್ಟರೆ ಜೀವನ ಸಾರ್ಥಕ.

Comments

Submitted by Shreekar Sat, 07/13/2013 - 17:39

ಒಳ್ಳೆಯ quote ಕೊಟ್ಟಿದ್ದಕ್ಕೆ ಹಾಗೂ ನಿಮ್ಮ ಬರಹಕ್ಕೆ ಧನ್ಯವಾದಗಳು. ಒಂದು ಕುತೂಹಲದ ಸಂಗತಿ -- ಕುರಿಗಳೆಂದೂ ನಾಯಕನಾಗಲಾರವು. ಅವುಗಳಿಗೆ ಗೊತ್ತಿರುವುದು ಯಾರನ್ನಾದರೂ ಹಿಂಬಾಲಿಸುವುದು ಮಾತ್ರ. ಅದಕ್ಕಾಗಿಯೇ, ಕುರಿಮಂದೆಗಳಲ್ಲಿ ಆಡು ಒಂದಿರುತ್ತದೆ ನಾಯಕನಾಗಿ ದಾರಿ ತೋರಿಸಲು. ಕುರಿ ನಾಯಕನಾಗಲಾರದಿದ್ದರೂ ಕುರುಬರು ಆಗಬಹುದು, ಆಗಿದ್ದಾರೆ. ಒಳ್ಳೆಯ ನಾಯಕತ್ವವನ್ನೂ, ಆಡಳಿತವನ್ನೂ ಕೊಡುವ ನಂಬಿಕೆಯೂ ಇದೆ. ಇನ್ನು, ಇತಿಹಾಸದ ಬಗ್ಗೆ ಬರೆಯುವುದಾದರೆ :- ಇತಿಹಾಸದಲ್ಲಿ ಸತ್ಯಗಳು, ಅರೆಸತ್ಯಗಳು, ಅಪ್ಪಟ ಸುಳ್ಳುಗಳು ಯಾವ ಪ್ರಮಾಣದಲ್ಲಿ ಇವೆ ಎಂಬುದನ್ನು ತಿಳಿಯುವುದು ಹೇಗೆ ? ಉದಾಹರಣೆಗೆ ನಮ್ಮ ನಡುವೆಯೇ ಇರುವಂಥಹ ನ. ಮೋ. ನ ಬಗ್ಗೆ, ನಮ್ಮ ನಡುವೆ ಇತ್ತೀಚಿನವರೆಗೆ ಇದ್ದ ಮದರ್ ತೆರೇಸಾ ಬಗ್ಗೆ , ಮೈಸೂರು ಹುಲಿಯ ಬಗ್ಗೆ.... ಇಂದಿರಾ ಗಾಂಧಿಯ ತುರ್ತುಪರಿಸ್ತಿತಿಯ ಕಾಲದಲ್ಲಿ ಹೂಳಲಾದ ಕಾಲಕೋಶದಲ್ಲಿ ದಾಖಲಾದ ಇತಿಹಾಸದ ಬಗ್ಗೆ ಯಾರು ಅರಿವರು? ಇದೇ ಸಂಪದದ ಪುಟಗಳಲ್ಲಿ ಸುಪ್ರೀತರು SL ಭ್ಯರಪ್ಪನವರ ಆತ್ಮಚರಿತ್ರೆ ಭಿತ್ತಿ ಯಲ್ಲಿ ಇರುವ ಉತ್ಪ್ರೇಕ್ಷೆಗಳ ಬಗ್ಗೆ ಬರೆದಿದ್ದರು. ದಿವಂಗತ ಬಾಗಲೋಡಿ ದೇವರಾಯರು ವಿದೇಶಗಳಲ್ಲಿ ಭಾರತದ ರಾಯಭಾರಿಯಾಗಿದ್ದವರು. ಅವರ ಕತೆಯೊಂದು ಹೀಗಿದೆ:- ದಲಿತನೊಬ್ಬ ರಾಜನಾಗಿ ತನ್ನ ಹಿನ್ನೆಲೆಯ ಇತಿಹಾಸವನ್ನೇ ಹೊಸದಾಗಿ ಬರೆಯಿಸುತ್ತಾನೆ, ತನ್ನ ದಲಿತಹಿನ್ನೆಲೆಯನ್ನು ಮರೆಮಾಚಿಸಬೇಕೆಂದು. <>
Submitted by makara Sat, 07/13/2013 - 18:18

ಕೀರ್ತಿ ರಾಜ್ ಅವರೆ, History ಅಂದರೆ His+story; ಎಂದು ರಾಮಕೃಷ್ಣಾಶ್ರಮದ ಸ್ವಾಮಿ ಹರ್ಷಾನಂದರು ತಮ್ಮ ಭಾಷಣದಲ್ಲೊಮ್ಮೆ ವ್ಯಾಖ್ಯಾನಿಸಿದ್ದರು. ಆದ್ದರಿಂದ ನಮ್ಮ ಕಥೆ ಚೆನ್ನಾಗಿದ್ದರೆ ಜನ ಅದನ್ನು ನೆನಪಿನಲ್ಲಿಡುತ್ತಾರೆ; ಇಲ್ಲದಿದ್ದರೆ ಮರೆಯುತ್ತಾರೆ. ಚಿಂತನಾರ್ಹ ಲಘು ಬರಹಕ್ಕೆ ಧನ್ಯವಾದಗಳು. ಇದಕ್ಕೆ ಶ್ರೀಕರರು ಕೊಟ್ಟಿರುವ ಪ್ರತಿಕ್ರಿಯೆಯ ಕುರಿತಾಗಿಯೂ ಸ್ವಲ್ಪ ಯೋಚಿಸಬೇಕಾದ್ದೆ.