' ಖಳ ನಟರ ಪರಂಪರೆಗೆ ಸಂದ ಗೌರವ "
ಈ ಸಲದ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಹಿಂದಿ ಚಿತ್ರರಂಗದ ಖ್ಯಾತ ಖಳನಟ ಪ್ರಾಣ್ ಗೆ ಕೊಡಲಾಯಿತು. ಈ ಕುರಿತು ಆ ಕ್ಷಣಕ್ಕೆ ನನಗೆ ಬಂದ ಯೋಚನೆಯೆಂದರೆ ಇದೊಂದು ಚಿತ್ರರಂಗದ ಖಳ ನಟರ ಪರಂಪರೆಗೆ ಸಂದ ಗೌರವ ಎಂದೆನಿಸಿದ್ದು. ಹಾಗೆಯೆ ಯೋಚಿಸುತ್ತ ಹೋದಂತೆ ಆತನ ಸಮಕಾಲೀನ ಮತ್ತು ಆತನಿಗಿಂತ ಹಿಂದಿನ ಹಿಂದಿ ಚಲನಚಿತ್ರ ಲೋಕದ ಖಳನಟರ ಚಿತ್ರಗಳು ಕಣ್ಮುಂದೆ ಸುಳಿದು ಹೋದವು. ಕೆ.ಎನ್.ಸಿಂಗ್, ಮೋತಿಲಾಲ್, ಜೀವನ್ ( ಹಿಂದಿ ಚಿತ್ರರಂಗದ ನಾಯಕ ನಟ ಕಿರಣ ಕುಮಾರನ ತಂದೆ ) , ಜಯಂತ್ ( ಶೋಲೆ ಖ್ಯಾತಿಯ ಖಳನಟ ಅಮ್ಜದ್ ಖಾನ್ ನ ತಂದೆ ), ಮದನ್ ಪುರಿ ( ಖ್ಯಾತ ಖಳನಟ ಅಮರೀಶ ಪುರಿಯ ಸೋದರ ) ಅಜಿತ್, ಶ್ಯಾಮ್ ಮತ್ತು ರೆಹಮಾನ್ ಎಷ್ಟೊಂದು ವೈವಿಧ್ಯಪೂರ್ಣ ತಮ್ಮದೆ ಆದ ಒಂದು ವಿಶೇಷ ಮ್ಯಾನರಿಜಂನ ಅಭಿನಯ ವಿಶಿಷ್ಟತೆ ಹೊಂದಿದ ಅನೇಕ ಖಳ ನಟರ ಅಭಿನಯದ ವೈಖರಿಯ ಚಿತ್ರಗಳು ಬಿಚ್ಚಿ ಕೊಳ್ಳುತ್ತ ಹೋದವು.
ಪ್ರಾಣ್ ಎಂಬ ಈ ಹೆಸರು ಮತ್ತು ವ್ಯಕ್ತಿ ನೇಪಥ್ಯಕ್ಕೆ ಸರಿದು ಬಹಳ ಕಾಲವಾಯಿತು. ಕಳೆದ ಶತಮಾನದ ಐದು, ಆರು ಮತ್ತು ಏಳನೆ ದಶಕದ ಒಬ್ಬ ಖ್ಯಾತ ಖಳನಟನೀತ. ಆ ಜಮಾನಾದಲ್ಲಿ ನಾಯಕ ನಾಯಕಿ ಮತ್ತು ಹಾಸ್ಯ ನಟರಿಗಿರುವಷ್ಟೆ ಪ್ರಾಮುಖ್ಯತೆ ಖಳ ನಟರಿಗಿತ್ತು. ಈ ಎಲ್ಲ ಸ್ಟಾರ್ ಕಾಸ್ಟ್ ಜಬರದಸ್ತ್ ಆಗಿದೆಯೆಂದರೆ ಚಿತ್ರ ಚನ್ನಾಗಿರುತ್ತದೆ ಎನ್ನುವುದು ಆಗಿನ ಜನ ಸಾಮಾನ್ಯ ಸಿನೆಮಾ ವೀಕ್ಷಕರ ಅಭಿಪ್ರಾಯ ವಾಗಿರುತ್ತಿತ್ತು. ಪ್ರಾಣ್ ಇರುವನೆಂದರೆ ಒಮ್ಮೆ ಆ ಚಿತ್ರವನ್ನು ನೋಡಬೇಕು ಎನ್ನುವ ಕುತೂಹಲ ವಿರುತ್ತಿತ್ತು. ಆತ ನಟಿಸಿದ ಅನೇಕ ಖಳ ಪಾತ್ರಗಳು ಬಾಕ್ಸ್ ಆಫೀಸ್ ದೃಷ್ಟಿಯಲ್ಲಿಟ್ಟುಕೊಂಡೆ ರೂಪಿಸಿದ ಪಾತ್ರಗಳಾಗಿದ್ದವು. ಆಗಿನ ಕಾಲದ ಬಹುತೇಕ ಎಲ್ಲ ನಿರ್ಮಾಪಕ ಮತ್ತು ನಿರ್ದೇಶಕರ ಆಯ್ಕೆ ಖಳನಾಯಕ ಪ್ರಾಣ್ ಆಗಿರುತ್ತಿದ್ದ. ಆತನ ಕಾಲ್ ಶೀಟ್ ದೊರೆಯದೆ ಹಲವು ನಿರ್ಮಾಪಕ ನಿರ್ದೇಶಕರು ಬೇರೆ ಖಳನಾಯಕನನ್ನು ಅನಿವಾರ್ಯವಾಗಿ ಆಯ್ಕೆ ಮಾಡಿ ಕೊಳ್ಳುತ್ತ್ತಿದ್ದರು. ಅಷ್ಟು ಬೇಡಿಕೆ ಆತನಿಗಿತ್ತು.
ಆತನ ಅನೇಕ ಚಿತ್ರಗಳ ವಿಶೇಷ ಮ್ಯಾನರಿಸಂ ಎಂದರೆ ಫುಲ್ ಸೂಟ್ ಧರಿಸಿದ ಟೈ ಕಟ್ಟಿದ ಕೈಯಲ್ಲಿ ಯಾವಾಗಲೂ ಉರಿಯುತ್ತಿರುವ ಸಿಗರೇಟ್. ಆದರೆ ಸಿಗರೇಟ್ ಹಿಡಿಯುವ ಶೈಲಿ ಚಿತ್ರದಿಂದ ಚಿತ್ರಕ್ಕೆ ಭಿನ್ನ. ಉದಾಹರಣೆಗಾಗಿ ಅತನ ಅಭಿನಯದ ದೋ ಬದನ್, ಬ್ರಹ್ಮಚಾರಿ, ಫಿರ್ ವಹಿ ದಿಲ್ ಲಾಯಾ ಹೂಂ, ಜಂಗಲಿ, ಗುಮ್ನಾಮ್ ಮುಂತಾದ ಚಿತ್ರಗಳನ್ನು ನೋಡಿದರೆ ಗೊತ್ತಾಗುತ್ತದೆ. ಇದಲ್ಲದೆ ಈತ ಪ್ರೊಪೆಸರ್, ಸಾವನ್ ಕಿ ಘಟಾ, ಲಾಟ್ ಸಾಹೇಬ್, ರಾಜಕುಮಾರ ಮುಂತಾದ ಚಿತ್ರಗಳಲ್ಲಿ ತನಗೆ ದೊರೆತ ಮಿತಿಯಲ್ಲಿಯೆ ಉತ್ತಮ ಅಭಿನಯ ನೀಡಿದ. ನಿಜವಾಗಿಯೂ ಆತನ ಅಭಿನಯದ ರೇಂಜ್ ನೋಡ ಬೇಕೆಂದರೆ ದಿಲೀಪ ಕುಮಾರ ಮತ್ತು ವೈಜಯಂತಿಮಾಲ ಅಭಿನಯದ ಮಧುಮತಿ, ಆರ್.ಕೆ.ಬ್ಯಾನರ್ನ ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ ಚಿತ್ರಗಳ ಲ್ಲಿನ ಆತನ ಖಳ ನಟನ ಆಭಿನಯ ಗಮನ ಸೆಳೆಯುವಂತಹುದು. ಆತನ ಅಭಿನಯದ ಸತ್ವ ಹೇಗಿತ್ತು ಎಂದರೆ ಯಾರೂ ತಮ್ಮ ಮಕ್ಕಳಿಗೆ ಪ್ರಾಣ್ ಎಂದು ಹೆಸರಿಟ್ಟದ್ದನ್ನು ನಾವು ಕೇಳಿಲ್ಲ.
ನಿಜಕ್ಕೂ ಆತನ ಅಭಿನಯ ವೈವಧ್ಯತೆಯನ್ನು ಭಿನ್ನ ರೀತಿಯ ಕ್ಯಾರೆಕ್ಟರ್ ರೋಲ್ನಲ್ಲಿ ತೋರಿಸಿದ ಕೀರ್ತಿ ಮನೋಜ ಕುಮಾರಗೆ ಸಲ್ಲಬೇಕು. ಆತ ತನ್ನ ವಿಶಾಲ್ ಪಿಕ್ಷರ್ಸ ಲಾಂಛನದಲ್ಲಿ ತೆರೆಗೆ ತಂದ ' ಉಪಕಾರ ' ಚಿತ್ರದಲ್ಲಿ ಆತನ ಖಳ ಇಮೇಜಿಗೆ ಹೊರತಾದ ಪಾತ್ರ ನೀಡಿ ಜೊತೆಗೆ ಒಂದು ಹಾಡನ್ನು ಸಹ ಆತನಿಗೆ ನೀಡಿದ. ಆ ಚಿತ್ರದ ನಾಯಕ ಮನೋಜ್, ನಾಯಕಿ ಆಶಾ ಪಾರೇಖ್ ಮತ್ತು ಖಳನಾಯಕ ಪ್ರೇಮ್ ಛೋಪ್ರ್ರಾರಿಗೆ ಮಿಗಿಲಾಗಿ ಅಭಿನಯಿಸಿದ. ' ಕಸ್ಮೆ ವಾದೆ ಪ್ಯಾರ್ ವಫಾ ' ಎಂದು ಪ್ರಾರಂಭವಾಗುವ ಆ ಹಾಡು ಬಹಳ ಪರಿಣಾಮಕಾರಿ ಯಾಗಿತ್ತು. ಅದೇ ರೀತಿ ಮನೋಜ್ನ ಪೂರಬ್ ಔರ್ ಪಶ್ಚಿಮ್ ಚಿತ್ರದ ಅಭಿನಯ ಕೂಡ ಆತನಿಗೆ ಬಹಳ ಹೆಸರು ತಂದು ಕೊಟ್ಟಿತು. ಮೆಹ್ರಾ ನಿಮರ್ಾಣದ ಜಂಝೀರ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತಗೆ ಅಭಿನಯಿಸಿದ ಆ ಪಠಾಣನ ಪಾತ್ರ ಬಹುಕಾಲ ನೆನಪಿನಲ್ಲಿ ಉಳಿಯುವಂತಹದು.
ಮುಂದೆ ಕಾಲ ಸರಿದಂತೆ ಈತ ಚಾರಿತ್ರಿಕ ಪಾತ್ರಗಳೆಡೆಗೆ ಹೊರಳಿದ, ಅಲ್ಲದೆ ಹಾಸ್ಯ ಪಾತ್ರಗಳಲ್ಲಿ ಕೂಡ ಅಭಿನಯಿಸಿದ. ಹಿರಿಯ ನಟ ಅಶೋಕ ಕುಮಾರ ಜೊತೆಗೆ ಆಭಿನಯಿಸಿದ ' ವಿಕ್ಟೋರಿಯಾ ನಂ.203 ' ಬಹಳ ಯಶಸ್ವಿ ಪ್ರದರ್ಶನ ಕಂಡ ಚಿತ್ರ. ಈತನ ಅಭಿನಯದ ವೈವಿಧ್ಯತೆಯನ್ನು ತೆರೆದಿಟ್ಟ ಚಿತ್ರಗಳು ಎಂದರೆ ಕವಿ ಲೇಖಕ ಸಂಭಾಷಣೆಕಾರ ಮತ್ತು ನಿರ್ದೇಶಕ ಗುಲ್ಜಾರರ ಶ್ರೇಷ್ಟ ಚಿತ್ರಗಳಲ್ಲಿ ಒಂದಾದ ಜಿತೇಂದ್ರ, ಸಂಜೀವ ಕುಮಾರ ಮತ್ತು ಜಯಾ ಬಾಧುರಿ ಅಭಿನಯದ ' ಪರಿಚಯ ', ರಾಜ್ ಕಪೂರ್ ನಿರ್ಮಾಣ ನಿರ್ದೇಶನದ ರಿಷಿ ಕಪೂರ, ಡಿಂಪಲ್ ಕಪಾಡಿಯಾ, ಪ್ರೇಮನಾಥ್, ಡೆವಿಡ್ ಮತ್ತು ಅರುಣಾ ಇರಾಣಿ ಮುಂತಾದವರ ತಾರಾಗಣದ ಚಿತ್ರ ' ಬಾಬಿ ' ಮುಂತಾದವು ಎನ್ನಬಹುದು. ಮುಂದೆ ಆತ ಸಹಾಯಕ ಪಾತ್ರಗಳಿಗೆ ಹೊರಳಿದ. ನಂತರ ವೃದ್ಧಾಪ್ಯದ ಅಂಚಿಗೆ ಸರಿಯುತ್ತ ಹೋದ ಪ್ರಾಣ್ ಅಭಿನಯ ಪ್ರಪಂಚದಿಂದ ದೂರ ಸರಿದ.
ಇಂದಿಗೂ 93 ವಸಂತಗಳನ್ನು ಪೂರೈಸಿದ ಆತ ಮುಂಬೈನಲ್ಲಿ ತನ್ನ ಮಕ್ಕಳ ಆಶ್ರಯದಲ್ಲಿ ಬದುಕು ಸವೆಸುತ್ತಿದ್ದಾನೆ. ಆತ ವೃತ್ತಿಯಲ್ಲಿ ಖಳ ನಟನಾದರೂ ನಿಜ ಜೀವನದಲ್ಲಿ ಸಭ್ಯ ಮನುಷ್ಯನಾಗಿದ್ದ. ಯಾವುದೇ ಗಾಸಿಪ್ಗಳು ಆತನ ಬಗೆಗೆ ಕೇಳಿ ಬರಲಿಲ್ಲ. ಅಷ್ಟರ ಮಟ್ಟಿಗಿನ ಘನವಾದ ಬದುಕನ್ನು ಆತ ಬಾಳಿದ. ಆತನ ಸಿನೆ ಬದುಕನ್ನು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೆನಪಿಸಿ ಕೊಳ್ಳುವಂತೆ ಮಾಡಿದೆ. ಆತನ ಜಮಾನಾದ ಸಿನೆಮಾ ಪ್ರಿಯರನ್ನು ರಂಜಿಸಿದ ಆತನ ಉಳಿದ ಆತನಿಗೆ ಬದುಕು ನೆಮ್ಮದಿಯನ್ನು ತರಲಿ ಈ ಇಳಿ ವಯಸ್ಸಿನ ಸಭ್ಯ ನಟನನ್ನು ಈ ಸಂಧರ್ಭದಲ್ಲಿ ಅಭಿನಂದಿಸೋಣ.
*****
Comments
ಸಂಪದಿಗರಿಗೆ ವಂದನೆಗಳು .ನಾನು
ಸಂಪದಿಗರಿಗೆ ವಂದನೆಗಳು .ನಾನು ಬರೆದ ಈ ಮೇಲಿನ ಲೇಖನಕ್ಕೆ ಪ್ರಾಣ್ ಅವರ ಚಿತ್ರವನ್ನು ಗೂಗಲ್ ಇಮೇಜ್ ನಿಂದ ಎರವಲು ಪಡೆಯಲಾಗಿದೆ.
ಆಪ್ತ ಬರಹ.
ಆಪ್ತ ಬರಹ.
In reply to ಆಪ್ತ ಬರಹ. by hema hebbagodi
ಮೇಡಂ ವಂದನೆಗಳು ಲೇಖನದ
ಮೇಡಂ ವಂದನೆಗಳು ಲೇಖನದ ಮೆಚ್ಚುಗೆಗೆ ಧನ್ಯವಾದಗಳು
ಪಾಟೀಲ ಸರ್ ಒಬ್ಬ ಹಿರಿಯ ಹಾಗೂ
ಪಾಟೀಲ ಸರ್ ಒಬ್ಬ ಹಿರಿಯ ಹಾಗೂ ಒಬ್ಬ ಖಳ ನಟನಿಗೆ ಭಾರತಿಯ ಚಿತ್ರರಂದ ಶ್ರೇಷ್ಠ ಪ್ರಶಸ್ತಿ ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿಯನ್ನು ಹಳೆಯ ತಲೆಮಾರಿನ ನಟರು ಅದರಲ್ಲೂ ಒಬ್ಬ ಖಳನಟನಿಗೆ ಲಭಿಸಿರುವದಕ್ಕೆ ಪ್ರಶಸ್ತಿ ಆಯ್ಕೆ ಸಮೀತಿಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತೆನೆ ಹಾಗೆ ಒಬ್ಬ ಉತ್ತಮ ನಟನ ಬಗ್ಗೆ ಬರೆದಿರುದಕ್ಕೆ ನಿಮ್ಮ ಹಿರಿಯರಿಗೆ ನಮ್ಮ ಧನ್ನವಾದಗಳು.
In reply to ಪಾಟೀಲ ಸರ್ ಒಬ್ಬ ಹಿರಿಯ ಹಾಗೂ by Amaresh patil
ಅಮರೇಶ ಪಾಟೀಲರಿಗೆ ವಂದನೆಗಳು,
ಅಮರೇಶ ಪಾಟೀಲರಿಗೆ ವಂದನೆಗಳು, ನಿಜಕ್ಕೂ ಪ್ರಾಣ ಒಬ್ಬ ಅದ್ಭುತ ಪ್ರತಿಭೆಯ ನಟನಾಗಿದ್ದ ಹೀಗಾಗಿ ಆತನ ಬಗೆಗೆ ನನಗೆ ತಿಳಿದಷ್ಟನ್ನು ದಾಖಲಿಸ ಬೇಕೆನ್ನಿಸಿತು, ಆ ಕಾರಣಕ್ಕಗಿ ಈ ಲೇಖನ, ಮೆಚ್ಚುಗೆಗೆ ಧನ್ಯವಾದಗಳು.
ಹನುಮಂತ ಪಾಟೀಲರಿಗೆ ವಂದನೆಗಳು.
ಹನುಮಂತ ಪಾಟೀಲರಿಗೆ ವಂದನೆಗಳು. ನೀವು ಇಷ್ಟೆಲ್ಲಾ ವೈವಿಧ್ಯಮಯ ವಿಷಯಗಳನ್ನು ಅದು ಹೇಗೆ ನೆನಪಿನಲ್ಲಿಟ್ಟುಕೊಂಡಿರುತ್ತೀರಿ ಎನ್ನುವುದೇ ಸೋಜಿಗದ ವಿಷಯ, ನಿಮ್ಮ ಅಗಾಧ ನೆನಪಿನ ಶಕ್ತಿ ಮತ್ತು ಅದ್ಭುತ ಬರವಣಿಗೆಗೆ ಹೊಂದಿರುವ, ಖಳ ನಟರ ಪಾತ್ರಗಳಿಗೆ ಪ್ರಾಣ ತುಂಬುತ್ತಿದ್ದ ಪ್ರಾಣ್ ಬಗೆಗಿನ ಸುಂದರ ಲೇಖನಕ್ಕೆ ಅಭಿನಂದನೆಗಳು. ಅವನ ಅಭಿನಯ ಎಷ್ಟು ಚೆನ್ನಾಗಿತ್ತೆಂದರೆ ಪ್ರಾಣ್ ಎನ್ನುವ ಹೆಸರೇ ವಿಲನ್ಗೆ ಪರ್ಯಾಯ ಪದವಾಗಿ ಆ ಜಮಾನದಲ್ಲಿ ಚಾಲ್ತಿಯಲ್ಲಿತ್ತು ಮತ್ತು ಯಾರೂ ತಮ್ಮ ಮಕ್ಕಳಿಗೆ ಪ್ರಾಣ್ ಎನ್ನುವ ಹೆಸರನ್ನು ಇಡುತ್ತಿರಲಿಲ್ಲವಂತೆ. ಆಗಿನ ಕಾಲದಲ್ಲಿ ಉತ್ತರ ಭಾರತದಲ್ಲಿ ಅಶೋಕ್ ಕುಮಾರ್, ರಾಜೇಂದ್ರ ಕುಮಾರ್, ರಾಜಕುಮಾರ್, ಮನೋಜ್ ಕುಮಾರ್ ಮೊದಲಾದವುಗಳು ಬಹಳ ಜನಪ್ರಿಯ ಹೆಸರುಗಳಾಗಿದ್ದವಂತೆ.
In reply to ಹನುಮಂತ ಪಾಟೀಲರಿಗೆ ವಂದನೆಗಳು. by makara
ಶ್ರೀಧರ ಬಂಡ್ರಿಯವರಿಗೆ ವಂದನೆಗಳು,
ಶ್ರೀಧರ ಬಂಡ್ರಿಯವರಿಗೆ ವಂದನೆಗಳು,
ಪ್ರಾಣ ಕುರ್ಇತು ಬರೆದ ಲೇಖನಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ. ಸಿನೆಮಾ ನಾಟಕ ಕಲೆ ಸಾಹಿತ್ಯ ಮುಂತಾದ ಪ್ರಾಕಾರಗಳು ಆ ದಿನಗಳಲ್ಲಿ ( ಈಗೂ ಕೂಡ ) ನನಗೆ ಖುಷಿ ಕೊಡುತ್ತಿದ್ದವು, ಆ ಬಗೆಗೆ ಬಂದ ಲೇಖನಗಳನ್ನು ಓದುತ್ತಿದ್ದೆವು, ಅ ಕುರಿತು ಆಸಕ್ತ ಅದರಲ್ಲೂ ವಿಶೇಷವಾಗಿ ಯುವ ವಲಯದಲ್ಲಿ ನಡೆಯುತ್ತಿದ್ದ ಚರ್ಚೆಗಳು ನಮ್ಮ ಆಸಕ್ತಿಗಳನ್ನು ಕೆರಳಿಸುತ್ತಿದ್ದವು, ಆ ಕುರಿತು ಓದಿದ್ದು ನೋಡಿದ್ದು ಮತ್ತು ಕೇಳಿದ್ದ ವಿಷಯಗಳು ನನ್ನ ಲೇಖನಗಳಿಗೆ ಆಧಾರ. ಹಾಗಾಗಿ ವಿಶೇಷ ಸಂಧರ್ಭಗಳಲ್ಲಿ ಆ ಕುರಿತು ದಾಖಲಿಸ ಬೇಕೆನ್ನುವ ತುಡಿತವೆ ಈ ಬರಹಗಳಿಗೆ ಪ್ರೇರಣೆ. ಪ್ರಾಣ ಕುರಿತು ಇನ್ನೂ ದಾಖಲಿಸಲು ವಿಷಯಗಳಿದ್ದವು, ಆತನ ಚಿತ್ರಗಳ ಹೆಸರುಗಳು ಅವು ಬಿಡುಗಡೆಗೊಂಡ ಕಾಲಮಾನದ ಬಗೆಗಿನ ಅಸ್ಪಷ್ಟತೆಗಳ ಕಾರಣದಿಂದಾಗಿ ಮತ್ತು ಸಕಾಲದಲ್ಲಿ ನೆನಪಿಗೆ ಬಾರದ ಕಾರಣಗಳಿಂದಾಗಿ ಅವುಗಳ ಬಗೆಗೆ ದಾಖಲಿಸ ಲಾಗಲಿಲ್ಲ.ಹೌದು ತಮ್ಮ ಅನಿಸಿಕೆ ನಿಜ ಆತ ದಿಲೀಪ ಕುಮಾರ, ರಾಜ ಕಪೂರ, ದೇವ ಆನಂದ, ರಾಜೇಂದ್ರ ಕುಮಾರ, ಸುನಿಲ ದತ್ತ, ರಾಜ ಕುಮಾರ, ಬಿಶ್ವಜೀತ, ಜಾಯ್ ಮುಖರ್ಜಿ, ಮನೋಜ ಕುಮಾರ, ಶಮ್ಮಿಕಪೂರ ಮುಂತಾದ ಆ ಕಾಲದ ಶ್ರೇಷ್ಟರೊಂದಿಗೆ ನಟಿಸಿ ಜನಮನ ರಂಜಿಸಿದ ಜೊತೆಗೆ ಸಭ್ಯ ಮತ್ತು ಶಿಸ್ತುಬದ್ಧ ಜೀವನದ ವ್ಯಕ್ತಿಯಾಗಿದ್ದ ಎನ್ನುವುದೂ ನಿಜ, ಲೇಖನದ ಮೆಚ್ಚುಗೆಗೆ ಧನ್ಯವಾದಗಳು.
ಹಿರಿಯರೇ ಅಮಿತಾಬ್ ಅಭಿನಯದ
ಹಿರಿಯರೇ ಅಮಿತಾಬ್ ಅಭಿನಯದ ಚಿತ್ರ( ಡಾನ್ ಮತ್ತು ಕಾಲಿಯ ) ಸನ್ನಿವೇಶವನ್ನು ಅಕಾಸ್ಮಾತ್ತಾಗಿ ಅಂದೊಮ್ಮೆ ನೋಡಿದ್ದೇ. ನಮ್ಮ ವಜ್ರ ಮುನಿ ಅವರ ತರಹ ಒಮ್ಮೆಲೇ ಇಷ್ಟವಾದ ಖಳ ಈ ಪ್ರಾಣ್. ಹಾಗೆಯೇ ನೀವ್ ಹೇಳಿದ ಹಾಗೆ ಅವರ ಆ ವಿಗ್ಗು ಮತ್ತು ಸಿಗರೆಟ್ ಹಿಡಿವ ಸೇದುವ ಹೊಗೆ ಬಿಡುವ ಶೈಲಿ ನನಗೆ ನಮ್ಮ ವಜ್ರ ಮುನಿ ಅವರನ್ನ ಬಹುಪಾಲು ನೆನಪಿಸುತ್ತಿತ್ತು. ನನಗೆ ಗೊತ್ತಿರುವ ಹಾಗೆ ಖಳರಿಗೆ ಫಾಲ್ಕೆ ಗೌರವ ಸಂದಿದ್ದು ಕಡಿಮೆ ಅಥವಾ ಇಲ್ಲವೇ ಇಲ್ಲವೇನೋ... ಆದರೆ ಇತ್ತೀಚಿನ ದಿನಗಳಲ್ಲಿ ಆಯ್ಕೆ ಸಮಿತಿ ಅತ್ಯುತ್ತಮ ಖಳನಿಗೆ ಫಾಲ್ಕೆ ಪ್ರಶಸ್ತಿ ನೀಡಿ ಒಂದು ಚಿತ್ರದಲ್ಲಿ ಮುಖ್ಯ ನಟ ನಟಿ ಇತರ ಪಾತ್ರಗಳಂತೆ ಖಳ ನಟರಿಗೂ ಇರುವ ಪ್ರಾಮುಖ್ಯತೆ ಬಗ್ಗೆ ಮನದಟ್ಟು ಮಾಡಿದೆ. ನಿಜಕ್ಕೂ ಇದೊಂದು ಅತ್ಯುತ್ತಮ ಆಯ್ಕೆ ಎನ್ನುವುದರಲ್ಲಿ ಸಂಶಯವಿಲ್ಲ .- ನನ್ನ ಊಹೆಯಂತೆ - ವ್ರುದ್ಯಾಪದಲ್ಲಿರುವ ,ಹಣಕಾಸು ಮುಗ್ಗಟ್ಟು ಇರಬಹುದಾದ ಇಂತಹ ಸ್ವಾಭಿಮಾನಿ ನಟರ -ನಟಿಯರಿಗೆ ಈ ತರಹ ಪ್ರಶಸ್ತಿ ಸಲ್ಲೋದು ಮತ್ತು ಅದರ ಜೊತೆಗಿನ ಬಹುಮಾನದ ಹಣ ಖಂಡಿತ ಅವರಿಗೆ ಸಹಾಯ ಮಾಡಬಹದು .. ಪ್ರಾಣ್ ಅವರ ಬಗ್ಗೆ ನೀವ್ ಬರಹ ಬರೆಯಬಹುದು ಎಂದು ನಾನು ಊಹಿಸಿರಲಿಲ್ಲ , ಈಗ ಆ ಬಗ್ಗೆ ಬಂದ ಬರಹ ಓದಿ ಖುಷಿ ಆಯ್ತು . ಹಲವು ನವೀನ ವಿಚಾರಗಳು ತಿಳಿದವು . ಕಪ್ಪು ಬಿಳುಪು ನಂತರ ಬಣ್ಣದ ಯುಗಕ್ಕೆ ಹೊರಳಿದ ಚಲನ ಚಿತ್ರಗಳು ನಟರು ಮತ್ತು ಅವೆಲ್ಲದರ ಇತಿಹಾಸದ ಬಗ್ಗೆ ನಿಮಗೆ ಅಪಾರ ಅನುಭವ ಇದೆ ಎನಿಸುತ್ತಿದೆ. ಸಿನೆಮಾಗಳ ಆರಾಧಕನಾದ ನನ್ನಂತವರಿಗೆ ಈ ತರಹದ ಪರಿಚಯ ಬರಹಗಳು ಖಂಡಿತ ಇಸ್ತವಾಗುತ್ತವೆ ಮತ್ತು ಉಪಯೋಗಕಾರಿ ಕೂಡ.
ಪರಿಚಯ ಬರಹಕ್ಕೆ ನನ್ನಿ
ಶುಭವಾಗಲಿ..
\\\|||
In reply to ಹಿರಿಯರೇ ಅಮಿತಾಬ್ ಅಭಿನಯದ by venkatb83
ಸಪ್ತಗಿರಿಯವರಿಗೆ ವಂದನೆಗಳು
ಸಪ್ತಗಿರಿಯವರಿಗೆ ವಂದನೆಗಳು
ಈ ಲೇಖನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಖಳನಾಯಕನೀತ ಅನ್ನುವುದು ನಿಜ. ಪ್ರಶಸ್ತಿಯ ಹಣ ಆತನಿಗೆ ಉಪಯೋಗವಾಗಲಿದೆ, ಸಾಧ್ಯವಾದರೆ ಆತನ ಲವ್ ಇನ್ ಟೊಕಿಯೋ, ಮೆರೆ ಸನಮ್, ಪ್ಯಾರಿಸ್ ಕಿ ಏಕ ಶಾಮ್, ಬ್ರಹ್ಮಚಾರಿ ಮುಂತಾದ ಚಿತ್ರಗಳನ್ನು ನೋಡಿ ನಿಮ್ಮನ್ನು ಖಂಡಿತ ರಂಜಿಸುತ್ತವೆ, ಲೇಖನದ ಮೆಚ್ಚುಗೆಗೆ ಧನ್ಯವಾದಗಳು.
ಶ್..ಹಮ್ ತೊ ಕುಛ್ ನಹಿ ಬೋಲೇಗಾ...
ಶ್..ಹಮ್ ತೊ ಕುಛ್ ನಹಿ ಬೋಲೇಗಾ... http://www.youtube.com/watch?v=8U3HUCyZCg0
In reply to ಶ್..ಹಮ್ ತೊ ಕುಛ್ ನಹಿ ಬೋಲೇಗಾ... by ಗಣೇಶ
ಗಣೇಶ ರವರಿಗೆ ವಂದನೆಗಳು
ಗಣೇಶ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಒದಿದೆ, ಹಮ್ ತೋ ಕುಛ್ ನಹಿ ಬೋಲೆಗಾ ಎಂದಿದ್ದೀರಿ, ಕ್ಞೂ ಭಾಯಿ ಸಾಹೇಬ್ ನಾ ಬೋಲನೇಕ ಮತಲಬ್ ಕ್ಯಾ, ಕುಛ್ ತೊ ಬೋಲಿಯೆ ಜನಾಬ್ ಹಮ್ ಭಿ ಆಪ್ ಕಿ ದಿಲ್ ಕಿ ಬಾತ್ ಸುನೇಂಗೆ. ಧನ್ಯವಾದಗಳು ಸರ್.
ಹಿರಿಯರಾದ ಪಾಟೀಲರೇ, ಲಕ್ಷ್ಮೀಕಾಂತ
ಹಿರಿಯರಾದ ಪಾಟೀಲರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಪ್ರಾಣ್ ಗೆ ದಾದಾ ಸಾಹೇಬ ಫಾಲ್ಕೆ ಸಂದ ಈ ಸಂದರ್ಭದಲ್ಲಿ ಸೊಗಸಾದ ಚಿತ್ರಣ. ಪ್ರಾಣ ಖಳನಟನಾಗಿದ್ದರೂ ಅವರೊಳಗೊಬ್ಬ ಸಜ್ಜನ, ಕರಣಾಮಯಿ,ದಾನಿ ಮನುಷ್ಯನೊಬ್ಬನಿದ್ದ, ನಮ್ಮ ಜೀವನದುದ್ದಕ್ಕೂ ನಮ್ಮ ಜೊತೆ ಹೆಜ್ಜೆ ಹಾಕಿದ ಸಿನೇ ಪಾತ್ರಧಾರಿಯನ್ನು ನೆನಪಿಸುತ್ತ ಉತ್ತಮ ಲೇಖನ ನೀಡಿದ್ದಕ್ಕೆ ಅಭಿನಂದನೆಗಳು.
In reply to ಹಿರಿಯರಾದ ಪಾಟೀಲರೇ, ಲಕ್ಷ್ಮೀಕಾಂತ by lpitnal@gmail.com
ಲಕ್ಷ್ಮೀಕಾಂತ ಇಟ್ನಾಳರಿಗೆ
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ಪ್ರಾಣ ಕುರ್ಇತು ಬರೆದ ಲೇಖನ್ನಕೆಕ ತಾವು ಬರೆದ ಪ್ರತಿಕ್ರಿಯೆ ಓದಿದೆ, ತಾವಂದಂತೆ ಪ್ರಾಣ ಖಳನಟನಾದರೂ ಆತನೊಳಗೊಬ್ಬ ಸಜ್ಜನ , ದಾನಿ ಮತ್ತು ಕರುಣಾಮಯಿ ಮನುಷ್ಯನಿದ್ದ ಹೀಗಾಗಿ ಆತ ಈಗಿನ ಎಲ್ಲ ನಟರಿಗೆ ಮತ್ತು ಜನತೆಗೆ ಒಂದು ಮಾದರಿ. ಪ್ರತಿಕ್ರಿಯೆಗೆ ಧನ್ಯವಾದಗಳು.
ಹಿರಿಯರಾದ ಪಾಟೀಲರಿಗೆ ನಮಸ್ಕಾರ,
ಹಿರಿಯರಾದ ಪಾಟೀಲರಿಗೆ ನಮಸ್ಕಾರ,
ಲೇಖನ ಓದುತ್ತ ಹಾಗೆಯೆ ಕಾಲೇಜು ದಿನಗಳ ಆ ಹಳೆಯ ಚಿತ್ರ ನೋಡುತ್ತಿದ್ದ ಜಮಾನಾಗೆ ಹಾಗೆ ತೇಲಿಸಿಕೊಂಡು ಹೋಗಿಬಿಟ್ಟಿತು. ಹಿಂದಿ ಚಿತ್ರಗಳಲ್ಲೆ ನಾನು ನೊಓಡಿದ ಮೊದಲ ಖಳನಾಯಕನೆ ಪ್ರಾಣ್, ಹೀಗಾಗಿ ಲೇಕನ ತುಂಬಾ ಮುದ ಕೊಟ್ಟಿತು. ತುಂಬಾ ಧನ್ಯವಾದಗಳು.
-ನಾಗೇಶ ಮೈಸೂರು, ಸಿಂಗಪುರದಿಂದ
In reply to ಹಿರಿಯರಾದ ಪಾಟೀಲರಿಗೆ ನಮಸ್ಕಾರ, by nageshamysore
ನಾಗೇಢಶ ಮೈಸೂರು ರವರಿಗೆ ವಂದನೆಗಳು
ನಾಗೇಢಶ ಮೈಸೂರು ರವರಿಗೆ ವಂದನೆಗಳು
ಈ ಲೇಖನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ತಮ್ಮ ಅನಿಸಿಕೆ ಸರಿ ಆತನೊಬ್ಬ ಸ್ಟೈಲಿಶ್ ಆದ ತನ್ನದೆ ಆದ ಮ್ಯಾನರಿಸಂ ಹೊಂದಿದ ಖಳ ನಟನಾಗಿದ್ದ. ಮೇಲಾಗಿ ಸಭ್ಯ ಮತ್ತದು ಹೃದಯವಂತನಾಗಿದ್ದ, ಹೀಗಾಗಿ ಆತ ನೆಪಿನಲ್ಲುಳಿಯುವ ನಟ, ಲೇಖನದ ಮೆಚ್ಚುಗೆಗೆ ಧನ್ಯವಾದಗಳು.
ಪಾಟೀಲರೆ,
ಪಾಟೀಲರೆ,
ಈ ಖ್ಯಾತ ನಟನಿಗೆ ಫಾಲ್ಕೆ ಪ್ರಶಸ್ತಿ ಸಿಕ್ಕ ಸಂತಸದ ಕ್ಷಣಗಳನ್ನ ನಾವೆಲ್ಲಾ ಸವಿಯುತ್ತಿದ್ದಂತೆ ಪ್ರಾಣ್ ಅವರು ನಿನ್ನೆ ನಮ್ಮನ್ನಗಲಿದ ಸುದ್ದಿ ಬಂದಿದೆ.
ಈ ಮೇರು ನಟನ ಆತ್ಮಕ್ಕೆ ಚಿರಶಾಂತಿಯು ದೊರೆಯಲೆಂದು ಆ ಭಗವಂತನಲ್ಲಿ ಪ್ರಾರ್ಥಿಸೋಣ.