ರಾಮಧಾನ್ಯ ಚರಿತೆಯೂ 1 ರೂ ಅಕ್ಕಿ ಪ್ರಸಂಗವೂ...
ಕನಕದಾಸರ ಒಂದು ಕಾವ್ಯದ ಹೆಸರು ‘ರಾಮಧಾನ್ಯ ಚರಿತೆ’. ಇದೊಂದು ಪುಟ್ಟ ಅಣಕು ಕಾವ್ಯ. ಇದರ ಕತೆ ಧಾನ್ಯಗಳ ನಡುವಿನ ಶ್ರೇಷ್ಠತೆಯ ನಿರ್ಣಯಕ್ಕೆ ಸಂಬಂಧಿಸಿದ್ದು. ಅಕ್ಕಿ ಮತ್ತು ರಾಗಿಗಳನ್ನು ರೂಪಕಗಳಾಗಿ ಬಳಸಿಕೊಂಡು ಕನಕದಾಸರು ಮೇಲು-ಕೀಳು ತಾರತಮ್ಯಗಳ ಹುಚ್ಚುತನದ ಪರಮಾವಧಿಗಳನ್ನು ಲೇವಡಿ ಮಾಡಿದ್ದಾರೆ. ಇದು ಒಂದು ರೀತಿಯಲ್ಲಿ ಕರ್ನಾಟಕದ ಆಹಾರ ಪದ್ಧತಿಯನ್ನು ವಿಶ್ಲೇಷಿಸುವ ಕಾವ್ಯ ಕೂಡ ಹೌದು.
ಈ ಕಾವ್ಯದ ಕಥಾಸಾರಾಂಶವಿಷ್ಟು: ಶ್ರೀರಾಮನು ರಾವಣನ ಸಂಹಾರದ ನಂತರ ಅಯೋಧ್ಯೆಗೆ ಹಿಂತಿರುಗುವ ಮಾರ್ಗದಲ್ಲಿ ಗೌತಮ ಮುನಿಗಳ ಆಶ್ರಮಕ್ಕೆ ಭೇಟಿ ನೀಡುತ್ತಾನೆ. ಅಲ್ಲಿ ನವಧಾನ್ಯಗಳಲ್ಲಿ ಯಾರು ಶ್ರೇಷ್ಠ ಎಂಬ ಚರ್ಚೆ ಆರಂಭವಾಗುತ್ತದೆ. ಅಕ್ಕಿ ಮತ್ತು ರಾಗಿಯ ನಡುವೆ ಜಗಳ ಶುರುವಾಗುತ್ತದೆ. ಗೌತಮ ಮುನಿಗಳು ರಾಗಿಯ ಶಕ್ತಿ ಸಾಮರ್ಥ್ಯಗಳನ್ನು ಹೊಗಳುತ್ತಾರೆ. ಅಕ್ಕಿ ಮತ್ತು ರಾಗಿಗಳು ಪರಸ್ಪರ ತಂತಮ್ಮ ಶಕ್ತಿ ಪ್ರಶಂಸೆ ಮಾಡಿಕೊಳ್ಳತ್ತಾ ಮತ್ತು ಪರಸ್ಪರರನ್ನು ದೂಷಿಸಿಕೊಳ್ಳತ್ತಾ ಅವೆರಡರ ನಡುವೆ ವಾದ ವಿವಾದ ಶುರುವಾಗುತ್ತದೆ. ಆಗ ಶ್ರೀರಾಮನು ಎರಡನ್ನು ಆರು ತಿಂಗಳ ಕಾಲ ಬಂಧನದಲ್ಲಿರಿಸಿ ಆಮೇಲೆ ಇವರಿಬ್ಬರಲ್ಲಿ ಯಾರು ಶ್ರೇಷ್ಠ ಎಂದು ತೀರ್ಮಾನಿಸುತ್ತೇನೆ ಎಂದು ಆಜ್ಞಾಪಿಸುತ್ತಾನೆ. ಅಂತೆಯೇ ಆರುತಿಂಗಳ ಸೆರೆವಾಸದ ನಂತರ ರಾಮನ ಮುಂದೆ ಎರಡೂ ಧಾನ್ಯಗಳನ್ನು ಹಾಜರು ಪಡಿಸುತ್ತಾರೆ. ಆಗ ಅಕ್ಕಿಯು ಸೊರಗಿ ಮಾಸಲು ವಾಸನೆಯಿಂದ ನರಳುತ್ತಿರುತ್ತದೆ. ರಾಗಿ ಮಾತ್ರ ಸ್ವಲ್ಪ ಕೂಡ ತನ್ನ ಕಾಂತಿ ಕಳೆದುಕೊಳ್ಳದೆ ಆರೋಗ್ಯದಿಂದ ಇರುತ್ತದೆ. ರಾಮ ಇದನ್ನು ನೋಡಿ ರಾಗಿಯೇ ಶ್ರೇಷ್ಟವೆಂದು ಹೇಳಿ ತನ್ನ ಹೆಸರನ್ನೇ ರಾಗಿಗೆ ನೀಡುತ್ತಾನೆ. ‘ರಾಘವ’ ಎಂಬುದರ ಸಂಕ್ಷಿಪ್ತ ರೂಪವೇ ‘ರಾಗಿ’ ಎಂದಾಗಿ ಲೋಕದಲ್ಲಿ ಜನಪ್ರಿಯವಾಗುತ್ತದೆ.
ರಾಮ ರಾಗಿಯನ್ನು ಎತ್ತಿಹಿಡಿದಿದ್ದು ಕೇವಲ ಅದು ಶಕ್ತಿಶಾಲಿ ಆಹಾರ ಎಂದು ಮಾತ್ರವಲ್ಲ. ಬಹುಜನರ ಆಹಾರ ಪದ್ಧತಿಯನ್ನು ಅವನು ಗೌರವಿಸಿದ ರೀತಿ ಅದು. ಸರಕಾರವು ಬಡತನ ರೇಖೆಗಿಂತ ಕೆಳಗಿರುವವರಿಗೆ ಸುಲಭದರದಲ್ಲಿ ಆಹಾರ ಒದಗಿಸುವ ನಿರ್ಣಯ ತೆಗೆದುಕೊಂಡಿರುವುದು ಸ್ವಾಗತಾರ್ಹ ವಿಚಾರ. ಆದರೆ ಪ್ರಾದೇಶಿಕ ಆಹಾರ ಪದ್ಧತಿಯನ್ನು ಗಮನಿಸದೆ ಏಕ ರೀತಿಯ ಆಹಾರ ಪದ್ಧತಿ ಜಾರಿಗೆ ಬರುವ ಹಾಗೆ ಎಲ್ಲೆಡೆ ಅಕ್ಕಿಯನ್ನೇ ವಿತರಿಸಲು ನಿರ್ಣಯಿಸಿರುವುದು ಎಷ್ಟರ ಮಟ್ಟಗೆ ಸಮಜಂಸ ಎಂಬುದನ್ನು ಕುರಿತು ಆಲೋಚಿಸಬೇಕಾಗುತ್ತದೆ. ಕರ್ನಾಟಕದ ಎಲ್ಲ ಭಾಗಗಳ ಜನರು ಅಕ್ಕಿಯನ್ನು ಪ್ರಧಾನ ಆಹಾರವಾಗಿ ಬಳಸುವುದಿಲ್ಲ. ‘ಉತ್ತರ ಕನ್ನಡದ ಜೋಳದ ರೊಟ್ಟಿ ಊಟ’, ‘ಗೌಡರ ಮುದ್ದೇ ಊಟ’, ‘ಮಂಗಳೂರಿನ ಕರಾವಳಿ ಊಟ’ ಈ ತರಹದ ಹೋಟಲುಗಳು ಬೆಂಗಳೂರಿನಂತಹ ನಗರಗಳಲ್ಲಿ ಕಾಣಿಸುತ್ತದೆಯಲ್ಲ ಯಾಕೆ? ಇವೆಲ್ಲ ಯಾವುದೋ ಒಂದು ಪ್ರದೇಶದ ಆಹಾರದ ವೈಶಿಷ್ಟ್ಯತೆಯನ್ನೇ ಬಂಡವಾಳ ಮಾಡಿಕೊಂಡ ಉದ್ಯಮಗಳೇ ಅಲ್ಲವೇ? ಯಾವುದೋ ಕಾರ್ಯನಿಮಿತ್ತ ಬೆಂಗಳೂರಿನಂತಹ ಊರುಗಳಿಗೆ ಬಂದು ನೆಲೆಸಿದವರು ಇಂತಹ ಊಟ ಹುಡುಕಿ ಹೊರಡುವುದು ಅವರುಗಳು ಒಗ್ಗಿಕೊಂಡ ಆಹಾರ ಪದ್ಧತಿ ಹೇಗೆ ಅವರೊಳಗೆ ಬೇರು ಬಿಟ್ಟಿದೆ ಎನ್ನುವುದನ್ನು ತೋರಿಸುತ್ತದೆ. ಅಂತಹುದರಲ್ಲಿ ಅದೇ ಊರುಗಳಲ್ಲಿ ಬದುಕುತ್ತಿರುವ ಬಡಮಂದಿಗೆ ಅವರದಲ್ಲದ ಆಹಾರವನ್ನು ಉಚಿತವಾಗಿ ನೀಡಿದರೂ ಅದರಿಂದ ಅವರಿಗೆ ಯಾವ ರೀತಿಯಲ್ಲಿ ಉಪಯೋಗವಾಗುತ್ತದೆ ಎಂಬುದನ್ನು ಯೋಚಿಸುವುದು ಒಳಿತಲ್ಲವೆ?
ಕರ್ನಾಟಕದ ಆಹಾರ ಪದ್ಧತಿಯನ್ನೇ ಗಮನಿಸಿದರೆ ಇಲ್ಲಿ ಹಳೇ ಮೈಸೂರು ಪ್ರಾಂತ್ಯದಲ್ಲಿ ರಾಗಿ ಹೆಚ್ಚು ಬಳಕೆಯಲ್ಲಿದೆ, ಮಲೆನಾಡಿನಲ್ಲಿ ಅಕ್ಕಿ ಬಳಕೆಯಲ್ಲಿದೆ, ಕರಾವಳಿಯಲ್ಲಿ ಅಕ್ಕಿ ಇದ್ದರೂ ಕುಚ್ಚಲಕ್ಕಿಯನ್ನು ಹೆಚ್ಚು ಬಳಸುತ್ತಾರೆ, ಉತ್ತರ ಕರ್ನಾಟಕದಲ್ಲಿ ಜೋಳ ಪ್ರಧಾನವಾಗಿ ಬಳಕೆಯಲ್ಲಿದೆ. ಆಯಾ ಭಾಗಗಳ ದುಡಿವ ವರ್ಗದ ಮಂದಿಗೆ ನಿಜಕ್ಕೂ ಅವಶ್ಯಕವಿರುವುದು ಅವರು ಬಳಸುವಂತಹ ಆಹಾರ.
‘ಅಕ್ಕಿ ತಿಂದವನು ಹಕ್ಕಿ ಹಾಂಗ, ಜೋಳ ತಿಂದವನ್ನು ತೋಳದ ಹಾಂಗ’ ಎಂಬುದು ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿರುವ ನಾಣ್ಣುಡಿ. ಈಗ ರಾಜ್ಯದ್ಯಂತ ಇದೇ ತಿಂಗಳ 10ರಿಂದ ಬಡತನ ರೇಖೆಗಿಂತ ಕೆಳಗಿರುವ ಮಂದಿಗೆ 1 ರೂಗೆ 30 ಕೆಜಿ ಅಕ್ಕಿ ನೀಡುವ ಯೋಜನೆ ಜಾರಿಗೆ ಬರಲಿದೆ. ಇದನ್ನು ವಿರೋಧಿಸಿ ನಮ್ಮ ಸ್ಥಳೀಯ ಆಹಾರದಲ್ಲಿ ಪ್ರಮುಖವಾದ ರಾಗಿ, ಜೋಳಗಳನ್ನೇ ನಮಗೆ ನೀಡಿ ಎನ್ನುವ ಹೋರಾಟವೊಂದು ಆರಂಭವಾಗಿದೆ. ಉತ್ತರಕರ್ನಾಟಕದ ಹಲವು ಪ್ರಗತಿಪರರು, ರೈತರು, ವ್ಯಾಪಾರಸ್ಥರು ಸೇರಿ ‘ಬಿಳಿಜೋಳ ಅಭಿವೃದ್ಧಿ ಸಮಿತಿ’ಯನ್ನು ಹುಟ್ಟುಹಾಕಿದ್ದಾರೆ. ಇವರ ಬೇಡಿಕೆ ಹೊರ ರಾಜ್ಯಗಳಿಂದ ಅಕ್ಕಿಯನ್ನು ಆಮದು ಮಾಡಿಕೊಂಡು ನಮಗೆ ನೀಡುವ ಬದಲು ನಾವು ಬಳಸುವ ಜೋಳವನ್ನೇ ನಮಗೆ ಕಡಿಮೆ ಬೆಲೆಗೆ ಒದಗಿಸಿ. ಇದರಿಂದ ನಮ್ಮ ರೈತರಿಗೂ ಸಹಾಯವಾಗುತ್ತದೆ ಎಂದು. ನ್ಯಾಯಸಮ್ಮತವಾದ ಈ ಬೇಡಿಕೆಯ ಪೂರೈಕೆಗೆ ಸರಕಾರ ಗಮನಹರಿಸುವುದು ಒಳಿತು. ಆಹಾರ ಪದ್ಧತಿಯ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಸುಲಭವಾಗಿ ದೊರೆವ ಅಕ್ಕಿ ಕಾಳಸಂತೆ ವ್ಯಾಪಾರಕ್ಕೆ ಕೂಡ ದಾರಿ ಮಾಡಿಕೊಡಬಹುದು. ಪಡಿತರ ಅಂಗಡಿಗಳಲ್ಲಿ ಅಕ್ಕಿಯ ಬದಲು ನಮಗೆ ಬೇರೆ ಪದಾರ್ಥ ನೀಡಿ ಈ ಅಕ್ಕಿ ನೀವೇ ಇಟ್ಟುಕೊಳ್ಳಿ ಎಂದು ಈ ದಂಧೆ ಶುರುವಾಗಬಹುದು. ಇದರ ಕಡೆ ಗಮನ ಹರಿಸಿ ಸೂಕ್ತ ನಿರ್ಧಾರವನ್ನು ಕಾಲ ಮಿಂಚಿ ಹೋಗುವ ಮುನ್ನ ತೆಗೆದು ಕೊಳ್ಳುವುದು ಉತ್ತಮ.
Comments
ರಾಮಧಾನ್ಯ ಚರಿತೆಯ ಹಿನ್ನೆಲೆಯಲ್ಲಿ
ಹೇಮಾ ಅವರೆ, ವಸಂತ ಕುಲಕರ್ಣಿಯವರು