ಗಾಳ

ಗಾಳ

ಕರಾವಳಿ ತೀರದಲ್ಲಿ ಬೆಳೆದ ಹೆಚ್ಚಿನ ಹುಡುಗರ ನೆಚ್ಚಿನ ಹವ್ಯಾಸ ಯಾವುದು?
ಎಸ್.. ಸಹೀ ಜವಾಬ್... "ಮೀನು ಹಿಡಿಯುವುದು"- ನದಿ, ಕೆರೆ, ಹಳ್ಳ, ಸಮುದ್ರದಲ್ಲಿನ ಮತ್ಸ್ಯರಾಶಿಯ ಬೇಟೆಯಾಡುವುದು. ಅಂದರೆ "ಗಾಳ ಹಾಕುವುದು" ನೀವು ಕರಾವಳಿಯಲ್ಲಿ ಹುಟ್ಟಿ ಬೆಳೆದವರಾಗಿದ್ದಲ್ಲಿ, ಮನೆಯ ಹಿರಿಯರು, ಗೆಳೆಯರು ಮೀನು ಹಿಡಿಯುವ ಹವ್ಯಾಸವುಳ್ಳವರಾಗಿದ್ದಲ್ಲಿ ಈ ಚಾಳಿ ನಿಮಗೆ ಹತ್ತುವುದರಲ್ಲಿ ಸಂಶಯವೇ ಇಲ್ಲ. ಹಾಗಂತ ಗಾಳ ಹಾಕಿ ಮೀನು ಹಿಡಿಯುವುದು ಅಷ್ಟೊಂದು ಸುಲಭದ ಕಲೆಯೆಂದು ನೀವು ಯೋಚಿಸುತ್ತಿದ್ದರೆ ಅದು ನಿಮ್ಮ ತಪ್ಪು ಗುಮಾನಿ. ಏನಾದರೊಂದು ಆಹಾರ ಎಸೆದು ಮೀನುಗಳನ್ನು ಕರೆದರೆ ಬಂದಾವು ಎಂದೆನಿಸಿಕೊಂಡಂತಲ್ಲ ಈ ಹವ್ಯಾಸ. ಒಂದು ಮೀನು ಹಿಡಿದು ಮನೆಗೆ ತರುವವರೆಗೆ ಒಬ್ಬ ಪಡಬೇಕಾದ ಪರಿಶ್ರಮ, ಸಹಿಸಬೇಕಾದ ಕಷ್ಟ ಕಾರ್ಪಣ್ಯಗಳು ಒಂದೆರಡಲ್ಲ. "ಹೌದಾ! ಅದು ಹೇಗಪ್ಪಾ!" ಎಂದು ಮನಸ್ಸನ್ನೆಲ್ಲೋ ಸುಳಿಯಲ್ಲಿ ಸಿಲುಕಿಸಿಕೊಳ್ಳಬೇಡಿ. ಕೆಳಗೆ ಓದಿ...
ಚಿಕ್ಕಂದಿನಿಂದಲೇ ನಿಮಗೆ ಮೀನಿನೊಂದಿಗೆ ಒಂದು ಅನೂಹ್ಯ ನಂಟಿರಬೇಕು. ಕರಾವಳಿ ಕಡೆ ಬೆಳೆಯುತ್ತಿರುವ ಆ ಪುಟ್ಟನನ್ನೇ ಒಮ್ಮೆ ನೋಡಿ. ಮಳೆಗಾಲದಲ್ಲಿ ಶಾಲೆಯಿಂದ ವಾಪಾಸಾದವನೇ ತನ್ನ ಮನೆಯ ಹಿತ್ತಲಿನ ನಾಲೆಯ ನೀರಿನಲ್ಲಿರುವ ಮೀನುಗಳನ್ನು ನೋಡಿ ಅವನು ಆನಂದಿಸುತ್ತಾನೆ. ಅದರೊಂದಿಗೆ ಆಟವಾಡುತ್ತಾನೆ. ಮನೆಯಲ್ಲಿರುವ ಉಪ್ಪಿನಕಾಯಿ ತುಂಬಿಕೊಂಡಿದ್ದ ಹಳೇ ಹಾರ್ಲೆಕ್ಸ್ ಬಾಟಲಿಯನ್ನು ಖಾಲಿ ಮಾಡಿ ಚೆನ್ನಾಗಿ ತೊಳೆದಿಟ್ಟು ಈ ನಾಲೆಯಲ್ಲಿ ತಾನು ಹಿಡಿದ ಮೀನನ್ನು ಬಾಟಲಿಯಲ್ಲಿಟ್ಟು ಪೋಷಿಸುತ್ತಾನವನು. ಅದಕ್ಕೆ ಬಣ್ಣದ ನಾಲ್ಕು ಕಲ್ಲುಗಳು, ಹುಲ್ಲಿನ ಎಸಳು, "ನೀರುಕಡ್ಡಿ" ಗಿಡ ಮುಂತಾದ ವಸ್ತುಗಳಿಂದ ಅಲಂಕರಿಸಿ ಬಿಟ್ಟರಾಯಿತು. ಪುಟ್ಟನ ಪುಟ್ಟ "ಅಕ್ವೇರಿಯಂ" ಈಗ ರೆಡಿ. ಹೀಗೆ ಬಾಲ್ಯದಿಂದಲೇ ಮೀನಿನೊಂದಿಗೆ ಒಂದು ಅನ್ಯೋನ್ಯ ಬಾಂಧವ್ಯವಿರಬೇಕು ನಿಮಗೆ.
ಸರಿ ಈ ಬಾಟಲಿ ಮೀನಿನ ಆಯಾಮ ಮುಗಿಸಿದ ನಂತರ ಸಣ್ಣ ಸಣ್ಣ ಕೆರೆ ಹಳ್ಳಗಳಲ್ಲಿ ಮೀನು ಹಿಡಿಯಲು ತಯಾರಿ ನಡೆಸಬೇಕು. ಅದು ಹೇಗೆನ್ನುತ್ತೀರಾ?


ಮೊದಲು ತನ್ನ ಅಣ್ಣನೊಂದಿಗೋ ಅಥವಾ ತನ್ನ ಗೆಳೆಯರ ಅಣ್ಣಂದಿರೊಂದಿಗೋ (ಅನುಭವಿ ಮೀನುಗಾರರು) ಕೆರೆಗೆ ಹೋಗಬೇಕು. ಗಡಿಬಿಡಿ ಮಾಡಲು ಇಲ್ಲಿ ಅವಕಾಶವಿಲ್ಲ. ಮೊದಮೊದಲು ಅವರಿಗೆ ಎರೆಹುಳು ಹುಡುಕಲು ಸಹಾಯ ಮಾಡಬೇಕು, ಏಕಾಗ್ರತೆಯಿಂದ ಅವರು ಮೀನು ಹಿಡಿಯುವ ಕಲೆಯನ್ನು ನೋಡಿ ಅರಗಿಸಿಕೊಳ್ಳಬೇಕು. ಒಂದೊಮ್ಮೆ ಈ ಅಣ್ಣಂದಿರಿಗೆ ಮೂತ್ರಶಂಕೆಯ ಶಂಕೆಯಾದಲ್ಲಿ ಗಾಳದ ದಾರ ನಿಮ್ಮ ಕೈಗೊಪ್ಪಿಸಿ ಉಚ್ಚೆ ಹೊಯ್ಯಲು ಹೋಗುತ್ತಾರೆ (ದಾರ ಕೈಯಲ್ಲಿಟ್ಟುಕೊಂಡು ಕುಳಿತಲ್ಲೇ ತಿರುಗಿ ಹೊಯ್ಯುವವರಿದ್ದರೆ ನಿಮ್ಮ ದುರದೃಷ್ಟ). ಈ ಸಮಯದಲ್ಲಿ ಎಲ್ಲಾದರೂ ಮೀನು ಹಿಡಿದುಬಿಟ್ಟರೆ ನಿಮಗೆ ಒಳ್ಳೆಯ ಭವಿಷ್ಯವಿದೆ ಎಂದರ್ಥ. ಮುಂದೆ ಒಂದೊಮ್ಮೆ "ನಂಗೂ ಒಂದು ಗಾಳ ಕಟ್ಟಿ ಕೊಡಣ್ಣಾ" ಎಂಬಂತೆ ಆಸೆಕಣ್ಣುಗಳಿಂದ ಅವರೆಡೆಗೆ ನೋಡಬೇಕು. ಕೊನೆಗೊಮ್ಮೆ ಆ ಶುಭಘಳಿಗೆ ಬಂದೇ ಬಿಡುತ್ತದೆ. ನಂತರ ಅವರೇ ನಿಮಗೆ ಕೆಲವು ಗಾಳದ "ರಹಸ್ಯ"ಗಳನ್ನು ತಿಳಿಹೇಳುತ್ತಾರೆ. ಈಗ ನೀವು ಕೆರೆಯಲ್ಲಿ ಮೀನು ಹಿಡಿಯುವುದನ್ನು ಕಲಿತಂತಾಯಿತು. ಹಿಡಿದ ಮೀನುಗಳನ್ನು ಮನೆಯ ಬಾವಿಗೋ, ಅಮ್ಮನ ಪೆಟ್ಟಿನ ಭಯವಿದ್ದಲ್ಲಿ ಇನ್ಯಾರದೋ ಅಥವಾ ಸರಕಾರಿ ಬಾವಿಗೋ ಹಾಕಿ ಧನ್ಯರಾಗಬಹುದು.
ಇಲ್ಲಿಂದ ನದಿ ಸಮುದ್ರದತ್ತ ನಿಮ್ಮ ಪ್ರಯಾಣ ಮುಂದುವರೆಯುತ್ತದೆ. ಇಷ್ಟರಲ್ಲಿ ನೀವು ಯೌವನಾವಸ್ಥೆಗೂ ಬಂದಿರುತ್ತೀರಿ. ಈಗ "ಮೀನು ಹಿಡಿಯುವುದು, ಹುಡುಗಿ ಪಟಾಯಿಸುವುದು ಒಂದೇ ಕಣೋ" ಎಂಬ ಪುಕ್ಕಟೆ ಸಲಹೆಗಳು ಗೆಳೆಯರಿಂದ ನಿಮಗೆ ಸಿಗಲಾರಂಭಿಸುತ್ತವಾದರೂ ಗಮನ ಮೀನು ಹಿಡಿಯುವಷ್ಟಕ್ಕೇ ಸೀಮಿತಗೊಳಿಸಬೇಕು.
ಮೊದಲು ಗಾಳದ ವಸ್ತುಗಳನ್ನು ಒಂದು ಚೀಲದಲ್ಲಿಟ್ಟುಕೊಂಡು ಲಘುಬಗೆಯಿಂದ ಮನೆಯಲ್ಲಿ ಯಾರಿಗೂ ಹೇಳದೇ ಹೊರಡಬೇಕು. ಅದು ಏಕೆಂದರೆ ಮನೆಯಲ್ಲಿ ತಿಳಿಸಿದೊಡನೆ ನಿಮ್ಮ ಅಕ್ಕ/ತಂಗಿ ಅಥವಾ ನಿಮ್ಮ ಮನೆಯವಳು "ಓ ರಾಯರು ಗಾಳಕ್ಕೆ ಹೊರಟಂತಿದೆ, ಮೀನಿನ ಮಸಾಲೆ ಕಡಿಯಲೇ?" ಎಂದು ವ್ಯಂಗ್ಯವಾಡುತ್ತಾಳೆ. ಇಲ್ಲಿ ನೀವು ದ್ವಂದ್ವದಲ್ಲಿ ಬೀಳುತ್ತೀರಿ. "ಆಯಿತು ಕಡಿದಿಡು" ಎಂದು ಹೇಳಿ ದುರದೃಷ್ಟವಶಾತ್ ಬರಿಗೈಯಲ್ಲಿ ವಾಪಾಸಾದರೆ ಅವಳು ಹೊಟ್ಟೆ ನೋಯುವಷ್ಟು ನಕ್ಕು, ಆಡುವ ವ್ಯಂಗ್ಯದ ಮಾತುಗಳಿಂದ ನಿಮ್ಮ ತಲೆ ಕೆಟ್ಟು ನೀವು ಮೀನು ಹಿಡಿಯುವುದನ್ನು ಬಿಟ್ಟು ಬಿಡುವ ಸಾಧ್ಯತೆಗಳಿವೆ (ಅಯ್ಯೋ! ಹೀಗಾಗಬಾರದಲ್ಲವೇ). ಇನ್ನು "ಬೇಡ" ಹೇಳಿದರೆ ನಿಮಗೇ ನಿಮ್ಮ ಕಲೆಯ ಬಗ್ಗೆ ಅಪನಂಬಿಕೆ ಹುಟ್ಟುತ್ತದೆ. ಇಲ್ಲೂ ನೀವು ವಿಶ್ವಾಸ ಕಳಕೊಳ್ಳುವ ಅವಕಾಶಗಳೇ ಹೆಚ್ಚು. ಆದ್ದರಿಂದ ತನ್ನ ಗಾಳದ ಸರಂಜಾಮನ್ನು ಬೈಕಿನ ಮೇಲೆ ಹೇರಿ, ಹೋಗುವ ಸೂಚನೆ ನೀಡಿ, ಅವರ ಪ್ರತ್ಯುತ್ತರಕ್ಕೂ ಕಾಯದೇ ಅಲ್ಲಿಂದ ಕಾಲು ಕೀಳಬೇಕು.
"ಅರೆ! ಇದರಲ್ಲೇನಿದೆ ಕಷ್ಟ, ನಾನೂ ಮಾಡಬಲ್ಲೆ" ನೀವು ಯೋಚಿಸುತ್ತಿದ್ದರೆ ಒಂದು ವಿಷಯವನ್ನು ನಿಮ್ಮ ಗಮನಕ್ಕೆ ತರುವುದು ಅನಿವಾರ್ಯವಿಲ್ಲಿ. ಅದೇನೆಂದರೆ ನೀವಿನ್ನೂ ಸಮುದ್ರದೆದುರು ನಿಂತಿದ್ದೀರಷ್ಟೇ. ಮೀನು ಹಾಕಲೆಂದು ತಂದಿರುವ ಆ ಖಾಲಿ ಚೀಲ ನಿಮ್ಮನ್ನು ನೋಡಿ ಇನ್ನೂ ನಗುತ್ತಲೇ ಇದೆ. ನೀವು ಬಂದಿರುವ ಬಗ್ಗೆ ಮೀನುಗಳು ಒಂದಿನಿತೂ ತಲೆಕೆಡಿಸಿಕೊಳ್ಳದೆ ನೀರಿನೊಳಗೆ ಹಾಯಾಗಿ ಅಡ್ಡಾದಿಡ್ಡಿ ಒಡಾಡುತ್ತಿವೆ. "ಸರಿ ಮುಂದೇನಪ್ಪಾ" ಹೇಳಿದಿರಾ?...
ಈಗ ದಾರಕ್ಕೆ ಗಾಳ ಕಟ್ಟಿ, ಒಂದು "U" ಸೀಸದ ತುಂಡನ್ನು ದಾರಕ್ಕೆ ಬಳಸಿ ಕಚ್ಚಿ ಹಿಡಿಯುವಂತೆ  ಜಜ್ಜಿ, ಆಹಾರದೊಳಗೆ ಗಾಳ ಅಡಗಿಸಿ, ನೀರಿಗೆಸೆಯಬೇಕು. ದಾರದ ಇನ್ನೊಂದು ತುದಿಯನ್ನು ನಿಮ್ಮ ತೋರು ಬೆರಳು, ಹೆಬ್ಬೆರಳಿನ ಸಹಾಯದಿಂದ ಗಾಳಿಪಟದ ದಾರ ಹಿಡಿದಿದ್ದಂತೆ ಹಿಡಿದುಕೊಳ್ಳಬೇಕು. ಆಹಾರ ನೀರಿನೊಳಗೆ ಬಿದ್ದಂತೆ ಐಪಿಎಲ್‌ನ "ಚಿಯರ್ ಗರ್ಲ್ಸ್"ನ ಹಿಂದೆ ಮುಗಿಬೀಳುವ ಪುಂಡರಂತೆ ಸಣ್ಣ ಪುಟ್ಟ ಮೀನಿನ ರಾಶಿ ಮುಗಿಬೀಳುತ್ತದೆ. ಆದರೆ ಇವು ಅದನ್ನು ತಿನ್ನುಲಾಗದೆ ಹಾಗೇ ಬಿಟ್ಟು ಬಿಡುತ್ತವೆ.
ತುಸು ಹೊತ್ತಿನಲ್ಲಿ ಸೀಸದ ಭಾರಕ್ಕೆ ಸಮುದ್ರತಳದಲ್ಲಿ ಬಿದ್ದಿರುವ ಆಹಾರವನ್ನು ಎಲ್ಲೋ ಹೋಗುತ್ತಿದ್ದ ಚೆಲುವ ಮೀನೊಂದು ಸರಸರನೆ ಹತ್ತಿರ ಬಂದು ಒಮ್ಮೆ ಮುತ್ತಿಕ್ಕೆ ನೋಡುತ್ತದೆ. ಅಷ್ಟರಲ್ಲಿ ದಾರ ಕಂಪಿಸಿ ಮೀನು ಸುಳಿದಿರುವ ಸೂಚನೆ ನಿಮಗೆ ನೀಡುತ್ತದೆ. ಈಗ ನೀವು "ಮೀನೆಲ್ಲಿ ಹೋಯಿತು" ಎಂದು ತಲೆ ಕೆರೆಯುತ್ತಿದ್ದ ಇನ್ನೊಂದು ಕೈಯನ್ನು ದಾರದಡಿಗೆ ತಂದು ಮೀನು ಆಹಾರ ನುಂಗಲು ಕಾಯಬೇಕು. ಮೀನು ಅಹಾರವನ್ನು ತಿನ್ನಬಹುದೋ ಎಂದು ಸ್ವಲ್ಪ ಪರೀಕ್ಷಿಸಿ ನೋಡುತ್ತದೆ. ಆಗ ದಾರ ಕಂಪಿಸುತ್ತಿದ್ದರೂ ಉತ್ಸಾಹದಿಂದ ನೀವು ಕಂಪಿಸಬಾರದು. ನಿಮ್ಮ ಮೋಸಕ್ಕೆ ಬಿದ್ದು ತಿನ್ನಬಹುದೆಂದು ಮೀನಿಗನ್ನಿಸಿದರೆ ಆಹಾರವನ್ನು ಒಮ್ಮೆಲೆ ನುಂಗಿ ಮದ ಬಂದ ಆನೆಯಂತೆ ನೀರಿನೊಳಗೆ ಓಡಾಡುತ್ತಾ ದಾರ ಎಳೆಯುತ್ತದೆ. ಈಗ ದಾರವನ್ನು ಬಿಗಿಯಾಗಿ ಹಿಡಿದು ಇನ್ನೊಂದು ಕೈಯನ್ನು ಬಲವಾಗಿ ದಾರದೊಂದಿಗೆ ಎತ್ತಿ ಪೆಟ್ಟು ಕೊಡಬೇಕು. ಇವೆರಡೂ ಒಂದೇ ಕ್ಷಣದಲ್ಲಾಗಬೇಕು. ಈಗ ನಿಮ್ಮ ಗಾಳ ಮೀನಿನೊಳಗೆ ಸಿಕ್ಕಿಕೊಂಡು, ಮೀನು ನಿಮ್ಮ ಆಹಾರದ "ಮೋಹ ಜಾಲ"ಕ್ಕೆ ಬಲಿಯಾಗುತ್ತದೆ.
ಮೀನು ಸಿಕ್ಕಿದ ನಂತರ ತಂತ್ರಜ್ನಾನದ ಮಹತ್ವದ ಅರಿವು ನಿಮಗಾಗುತ್ತದೆ. ಕಿಸೆಯಲ್ಲಿರುವ ಮೊಬೈಲ್ ತೆಗೆದು ಗರ್ವದಿಂದ ಮಸಾಲೆ ಕಡಿಯಲು ಮನೆಯವಳಿಗೆ ಹೇಳಿರಿ. "ಥೂ.. ಹಾಳಾದ ಮೀನು, ಸಿಕ್ಕ ಸಿಕ್ಕಿದ್ದೆಲ್ಲಾ ಅಹಾರವನ್ನು ಪೆದ್ದು ಪೆದ್ದಾಗಿ ತಿನ್ನಬಾರದೆಂದು ಒಂದು ಚೂರೂ ವಿವೇಕವಿಲ್ಲ ಅದಕ್ಕೆ. ಈಗ ಇನ್ನಷ್ಟು ಕೆಲಸ... ಛೇ..." ಹೀಗೆ ಒಂದಿಷ್ಟು ಶಾಪ ಕೋಪದ ಮಾತುಗಳು ನಿಮಗೆ ಕೇಳಲು ಸಿಗುತ್ತದೆ. ಫೋನ್ ಕಟ್ ಮಾಡದೇ ಎಲ್ಲಾ ಕೇಳಿ ಆನಂದಿಸಬೇಕು. ಅದು ನಿಮಗೆ ಇನ್ನೊಂದು ಮೀನು ಹಿಡಿಯಲು ಸ್ಪೂರ್ತಿ ಕೂಡಾ ನೀಡುತ್ತದೆ.
ಇದು ಗಾಳದ ಸಣ್ಣದೊಂದು ಪರಿಚಯ. ಮೀನು ಹಿಡಿಯಲು, ದಾರ ಎಸೆಯುವ, ಹಿಡಿಯುವ ವಿಧಾನ, ಸಮುದ್ರದ ಅಬ್ಬರ, ಇಳಿತ, ನೀರಿನ ಬಣ್ಣದಲ್ಲಿನ ವ್ಯತ್ಯಾಸದ ಪ್ರಭಾವ, ಬೆಳದಿಂಗಳ ಪ್ರಭಾವ, ಗಾಳ ಕಟ್ಟುವ ವಿಧಾನ ಹೀಗೆ ಹಲವಾರು ವಿಷಯಗಳ ಬಗ್ಗಿಯೂ ಅರಿವಿರಬೇಕು. ಇಲ್ಲದಿದ್ದಲ್ಲಿ ಮೋಸ ಮಾಡಿ ಹಿಡಿಯಲು ಬಂದಿದ್ದ ನಿಮಗೇ ಚಳ್ಳೆ ಹಣ್ಣು ತಿನ್ನಿಸಿ ಬರಿಗೈಯಲ್ಲಿ ಹಿಂದೆ ಕಳುಹಿಸಿಬಿಡುತ್ತವೆ ಕಿಲಾಡಿ ಮೀನುಗಳು.  
  ಬರೇ ಕಂಪ್ಯೂಟರ್, ವೀಡಿಯೋ ಗೇಮ್ಸ್, ಪ್ಲೇ ಸ್ಟೇಷನ್ ಎಂದು ನಾಲ್ಕು ಗೋಡೆಗಳೊಳಗೆ ಇಡೀ ಬಾಲ್ಯವನ್ನು ಕಳೆಯುತ್ತಿರುವ ಈಗಿನ ಹುಡುಗರನ್ನು ನೋಡಿ ಈ ಹವ್ಯಾಸಗಳೆಲ್ಲಾ ಬರಬರುತ್ತಿದ್ದಂತೆ  ನಶಿಸಿಹೋಗಬಹುದೇನೋ ಎಂದು ದುಃಖವಾಗುತ್ತದೆ. ಪ್ರಭುದ್ದರಾದ ನಮಗೂ ನಿಬಿಡತೆಯ ಬದುಕಲ್ಲಿ ಇವಕ್ಕೆಲ್ಲಾ ಎಲ್ಲಿ ಹೊತ್ತಿದೆ ಎಂಬ ಯೋಚನೆ ಬರುವುದು ಸಹಜ.  
ಹಾಂ...! ಕೊನೆಗೊಂದು ಮುಖ್ಯವಾದ ವಿಷಯ ಹೇಳಲು ಮರೆತೇ ಬಿಟ್ಟೆ... ನೀವು ಗಾಳದಲ್ಲಿ ಆಸಕ್ತರಿದ್ದು ಅದರ ಕಲೆ ತಿಳಿದಿಲ್ಲದಿದ್ದರೆ, ಬಾಲ್ಯದಿಂದ ಮೀನಿನೊಂದಿಗೆ ನಿಮಗೆ ನಂಟು ಇಲ್ಲದಿದ್ದರೆ, ಇಷ್ಟು ಪರದಾಡುವುದಕ್ಕಿಂತ ಮೀನು ಹಿಡಿಯಲು ಸುಲಭದ ವಿಧಾನವೊಂದಿದೆ. ಕೆಲವು ವರ್ಷಗಳ ಹಿಂದೆ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾಟಗಳನ್ನು ನೋಡಿದ್ದಲ್ಲಿ ನಿಮಗಿದರ ಅರಿವಿರಬಹುದು. ನೆನಪಾಯಿತೇ??... ಯಾವುದಾದರೊಂದು ಮರದಿಂದ ನೇರವಾದ 3-4 ಅಡಿ ಉದ್ದದ ಸಪುರ ಗೆಲ್ಲೊಂದನ್ನು ಕಡಿಯಬೇಕು. ದಿನಸಿ ಅಂಗಡಿಗೆ ಹೋಗಿ ಒಂದು "ಫೆವಿ ಕ್ವಿಕ್" ಸ್ಯಾಷೆ ಖರೀದಿಸಬೇಕು. ಒಂದರಿಂದ ಐದರವರೆಗೆ ಮಳೆಯಾಳಂನಲ್ಲಿ ಹೇಳಲು ಕಲಿತರೆ ಉತ್ತಮ. ಈ ಕೋಲನ್ನು ಹಿಡಿದು ನೇರ ಕಡಲಿಗೆ ಹೋಗಿ ಗಾಳ ಹಾಕುತ್ತಿರುವವನ ಪಕ್ಕದಲ್ಲಿ ನಿಂತು "ಒನ್ನ್, ರಂಡ್, ಮೂನ್, ನಾಲ್, ಅಂಜಿ" ಎನ್ನುತ್ತಾ ಐದು ಹನಿ ಫೆವಿಕ್ವಿಕ್ ಕೋಲಿನ ಮೇಲೆ ಸುರಿದು ನೀರಿನೊಳಗೆ ಹಿಡಿದಿಟ್ಟರಾಯಿತು. ಐದು ಸೆಕೊಂಡಿನೊಳಗೆ ಐದು ಮೀನುಗಳು ನಿಮ್ಮ ಕೋಲಿಗೆ ಅಂಟಿಕೊಳ್ಳುತ್ತವೆ. ಈಗ ನೆನಪಾಯಿತೇ?!
ಈ ಉಪಾಯ ಫಲಿಸದಿದ್ದಲ್ಲಿ ನನ್ನನ್ನು ಜರೆಯಬೇಡಿ. ಫೆವಿ ಕ್ವಿಕ್ ಮಾಲೀಕರಿಗೆ ಬರೆಯಿರಿ.
-ಶಫಿ ಸಲಾಂ
(ಕತಾರ್)

Rating
Average: 2 (1 vote)

Comments

Submitted by hema hebbagodi Fri, 07/05/2013 - 10:39

ಒಳ್ಳೆಯ ಪ್ರಬಂಧ. ಕೆಲಸ, ಹವ್ಯಾಸ ಯಾವುದೇ ಇರಲಿ ತನ್ಮಯತೆ ಮುಖ್ಯವಾಗುತ್ತದೆ. ಇತ್ತೀಚೆಗೆ ನೋಡಿದ್ದ ತೇಜಸ್ವಿಯವರ ಸಾಕ್ಷ್ಯಚಿತ್ರವೊಂದರಲ್ಲಿನ ತೇಜಸ್ವಿ ಮೀನು ಷಿಕಾರಿಗೆ ಹೊರಡುತ್ತಿದ್ದ ಮತ್ತು ಗಾಳ ಹಾಕಿ ಕೂರುತ್ತಿದ್ದ ರೀತಿಯನ್ನು ಅವರ ಒಡನಾಡಿಗಳು ನೆನೆದ್ದದ್ದು ನಿಮ್ಮ ಈ ಲೇಖನ ಓದಿ ನೆನಪಾದವು.

Submitted by Vasant Kulkarni Sun, 07/14/2013 - 19:32

ಉತ್ತಮ ಬರಹ ಶಫಿ, ಮೀನು ಹಿಡಿಯುವ ಹವ್ಯಾಸ ಒಂದು ವಿರಾಮದಾಯಕ ಮತ್ತು ಒತ್ತಡ ಶಾಮಕ ಗುಣ ಹೊಂದಿದೆ ಎಂದು ಕೇಳಿದ್ದೇನೆ. ಆದರೆ ಈಗ ನಡೆಯುತ್ತಿರುವ ಪರಿಸರದ ಅತ್ಯಾಚಾರ ನೋಡಿದರೆ, ಮುಂದೊಂದು ದಿನ ಈ ಹವ್ಯಾಸಕ್ಕೆ ಎಲ್ಲರೂ ತಿಲಾಂಜಲಿ ಹೇಳಬೇಕಾಗುತ್ತದೇನೋ ಎಂಬ ಅಳುಕು ಉಂಟಾಗುತ್ತದೆ.

Submitted by Vasant Kulkarni Sun, 07/14/2013 - 19:32

ಉತ್ತಮ ಬರಹ ಶಫಿ, ಮೀನು ಹಿಡಿಯುವ ಹವ್ಯಾಸ ಒಂದು ವಿರಾಮದಾಯಕ ಮತ್ತು ಒತ್ತಡ ಶಾಮಕ ಗುಣ ಹೊಂದಿದೆ ಎಂದು ಕೇಳಿದ್ದೇನೆ. ಆದರೆ ಈಗ ನಡೆಯುತ್ತಿರುವ ಪರಿಸರದ ಅತ್ಯಾಚಾರ ನೋಡಿದರೆ, ಮುಂದೊಂದು ದಿನ ಈ ಹವ್ಯಾಸಕ್ಕೆ ಎಲ್ಲರೂ ತಿಲಾಂಜಲಿ ಹೇಳಬೇಕಾಗುತ್ತದೇನೋ ಎಂಬ ಅಳುಕು ಉಂಟಾಗುತ್ತದೆ.

Submitted by ಗಣೇಶ Mon, 07/15/2013 - 23:52

ಒನ್ನ್, ರಂಡ್, ಮೂನ್, ನಾಲ್, ಅಂಜಿ :) ಮೀನು ಸಿಕ್ಕಿತೋ ಇಲ್ಲವೋ ನಿಮ್ಮ ಗಾಳ ಸೂಪರ್ :)