ತೊತ್ತೊ-ಚಾನ್‍ ಕಿಟಕಿಯ ಬಳಿ ನಿಂತ ಪುಟ್ಟ ಹುಡುಗಿ

ತೊತ್ತೊ-ಚಾನ್‍ ಕಿಟಕಿಯ ಬಳಿ ನಿಂತ ಪುಟ್ಟ ಹುಡುಗಿ

ಪುಸ್ತಕದ ಲೇಖಕ/ಕವಿಯ ಹೆಸರು
ವಿ.ಗಾಯತ್ರಿ
ಪ್ರಕಾಶಕರು
ನ್ಯಾಷನಲ್ ಬುಕ್‍ ಟ್ರಸ್ಟ್, ಇಂಡಿಯಾ
ಪುಸ್ತಕದ ಬೆಲೆ
45

ಅವಳು ಎಲ್ಲ ಮಕ್ಕಳಂತೆ ಎಲ್ಲದರ ಬಗ್ಗೆ ಅಪಾರ ಕುತೂಹಲ ಮತ್ತು ಅಚ್ಚರಿ ತುಂಬಿಕೊಂಡ ಹುಡುಗಿ. ಅವಳು ಕುತೂಹಲ ತಡೆಯಲಾಗದೆ ಮಾಡುತ್ತಿದ್ದ ಕೆಲಸಗಳೇ ದೊಡ್ಡವರ ಲೋಕದಲ್ಲಿ ತುಂಟತನ ಎಂದು ಕರೆಸಿಕೊಳ್ಳುತ್ತಿದ್ದ ತರಲೆಗಳು. ಶಾಲೆಗೆ ಸೇರಿದ ಹೊಸದರಲ್ಲಿ ಆ ಶಾಲೆಯ ಡೆಸ್ಕ್‍ ಅವಳ ಇಂತಹ ಕುತೂಹಲ ಮತ್ತು ಮೆಚ್ಚುಗೆಗೆ ಕಾರಣವಾಯಿತು. ತೆಗೆದು ಮುಚ್ಚಬಹುದಾಗಿದ್ದ ಆ ಡೆಸ್ಕ್‍ ಅವಳ ಪ್ರೀತಿಯ ಆಟದ ವಸ್ತುವಾಯಿತು. ಅದೇ ಅವಳ ಟೀಚರ್‍ಗೆ ಕಿರಿಕಿರಿಯುಂಟುಮಾಡಿತು. ಇದು ಸಾಲದೆಂಬಂತೆ ಬೀದಿ ಹಾಡುಗಾರರ ಕಡೆಗಿನ ಇವಳ ಸೆಳೆತ ಕಿಟಕಿ ಬದಿಯಲ್ಲಿ ನಿಂತು ಅವರನ್ನು ನೋಡುವಂತೆ ಮಾಡುತ್ತಿತ್ತು, ತರಗತಿ ಸಾಕೆನಿಸಿದಾಗ ಕಿಟಕಿಯ ಹೊರಗೆ ನೋಡುತ್ತಾ ಮರದಲ್ಲಿ ಕೂತ ಗುಬ್ಬಚ್ಚಿಯೊಂದಿಗೆ ಮಾತಾಡುತ್ತಿದ್ದಳು. ಇಂತಹ ಅವಳ ವರ್ತನೆಗಳೇ ಕಾರಣವಾಗಿ ಶಾಲೆಯಿಂದ ಅವಳನ್ನು ಹೊರಗೆ ಕಳಿಸಿದರು. ಈ ಪುಟ್ಟ ಹುಡುಗಿಯ ಕೈಹಿಡಿದದ್ದು ಜಪಾನಿನಲ್ಲಿನ ಕೊಬಾಯಾಶಿಯವರ ಶಾಲೆ ತೊಮೊಯೆ.

“ಅವರನ್ನು ನಿಸರ್ಗದ ಮಡಿಲಿಗೆ ಬಿಟ್ಟುಬಿಡಿ, ಅವರ ಆಕಾಂಕ್ಷೆಯನ್ನು ಹತ್ತಿಕ್ಕಬೇಡಿ, ಅವರ ಕನಸುಗಳು ನಿಮ್ಮವಕ್ಕಿಂತ ದೊಡ್ಡವು” ಇದು ಮಕ್ಕಳನ್ನು ಪೂರ್ವಸಿದ್ಧ ಚೌಕಟ್ಟಿಗೆ ಒಳಪಡಿಸದೆ ಸ್ವತಂತ್ರವಾಗಿ ಅರಳಲು ಬಿಡಬೇಕು ಎಂಬ ಮನೋಭಾವ ಹೊಂದಿದ್ದ ಕೊಬಾಯಾಶಿಯವರ ಸಿದ್ಧಾಂತ. ಅವರ ಸಿದ್ಧಾಂತಕ್ಕೆ ಅನುಗುಣವಾಗಿ ರೂಪುಗೊಂಡಿದ್ದು ಈ ಶಾಲೆ.

ಪುಟಾಣಿ ತೊತ್ತೊಚಾನ್‍ ಈ ಶಾಲೆಯನ್ನು ಮೊದಲಿಗೆ ಕಂಡಾಗಲೇ ಇದರ ಕಡೆಗೆ ಆಕರ್ಷಿತಳಾಗುತ್ತಾಳೆ. ಅದರ ಬೆಳೆಯುವ ಗೇಟು, ರೈಲು ಬಂಡಿಗಳಲ್ಲಿನ ತರಗತಿಗಳು ಅವಳನ್ನು ಸೆಳೆಯುತ್ತವೆ. ಅಂತೆಯೇ ಅವಳನ್ನು ಮೊದಲ ಭೇಟಿಯಲ್ಲಿಯೇ ಸೆಳೆದವರು ಆ ಶಾಲೆಯ ಮುಖ್ಯೋಪಾಧ್ಯಯರಾದ ಕೊಬಾಯಾಶಿ. ‘ನಾನು ನಿಮ್ಮ ಶಾಲೆಗೆ ಸೇರಬೇಕಲ್ಲ’ ಎಂದು ಮುಜುಗರ ಸಂಕೋಚಗಳಿಲ್ಲದೆ ಕೇಳಿದ ಪುಟ್ಟ ಹುಡುಗಿಗೆ ನಿನಗನ್ನಿಸಿದ್ದನ್ನು ಮಾತಾಡು ಎಂದು ಹೇಳಿ ಅವಳ ಮಾತುಗಳನ್ನು ನಾಲ್ಕು ಗಂಟೆಗಳ ತಾಳ್ಮೆಯಿಂದ ಕೇಳಿದ ನಂತರ ಪ್ರೀತಿಯಿಂದ ‘ಸರಿ, ನೀನೀಗ ನಮ್ಮ ಶಾಲೆಯ ಹುಡುಗಿಯಾಗಿಬಿಟ್ಟೆ’ ಎಂದು ಹೇಳುತ್ತಾರೆ. ಇಂದಿನ ನಮ್ಮ ಮಕ್ಕಳ ಶಾಲಾ ಸಂದರ್ಶನಗಳೆಂಬ ಗುಮ್ಮನನ್ನು ನೆನೆದರೆ... ಹೇಗನ್ನಿಸುತ್ತದೆಯಲ್ಲ?

ತೊತ್ತೊಚಾನಳ ಬದುಕಿನ ಬಹುಮುಖ್ಯ ತಿರುವಿದು. ಆ ಶಾಲೆಯಲ್ಲಿ ಯಾವುದೇ ತರಹದ ಚೌಕಟ್ಟುಗಳಿರಲಿಲ್ಲ. ಮಕ್ಕಳು ತಮ್ಮಿಷ್ಟದ ಕೆಲಸಗಳನ್ನು ಮಾಡುತ್ತಲೇ ಪಾಠಗಳನ್ನು ಕಲಿಯುತ್ತಿರುತ್ತಾರೆ. ಯಾವುದೇ ರೀತಿಯ ನಿರ್ಬಂಧಗಳಿಲ್ಲದ, ವೇಳಾ ಪಟ್ಟಿಯ ಪಿರಿಯೆಡ್ಡುಗಳ ಹಾವಳಿಯಿಲ್ಲದ ಸ್ವಚ್ಛಂದ ಶಾಲೆ. ಆದ್ದರಿಂದಲೇ ಆ ಶಾಲೆಗೆ ಸೇರಿದ ಮಕ್ಕಳು ಆ ಶಾಲೆ ಬಿಡಲು ಇಷ್ಟಪಡುವುದಿಲ್ಲ. ಆ ಮಕ್ಕಳು ಅಲ್ಲಿ ಬೇಕೆನಿಸಿದಾಗ ವಾಕಿಂಗ್‍ ಹೋಗುತ್ತಾರೆ. ಹೊಲಗಳ ಮಧ್ಯದಲ್ಲಿ ನಡೆಯುತ್ತಾ ಸಸ್ಯವಿಜ್ಞಾನವನ್ನು ಕಲಿಯುತ್ತಾರೆ. ರೈತನಿಂದ ವ್ಯವಸಾಯದ ಪಾಠ ಕಲಿಯುತ್ತಾರೆ. ಕ್ಯಾಂಪ್‍ ಹಾಕಿ ರಾತ್ರಿಗಳ ಅನುಭವ ಪಡೆಯುವುದರೊಂದಿಗೆ ಸ್ವತಃ ಅಡುಗೆ ಮಾಡಿ ಅವುಗಳನ್ನು ಹಂಚಿ ತಿನ್ನುವುದನ್ನು ಕಲಿಯುತ್ತಾರೆ. ಬೇಸಿಗೆ ರಜೆಯಲ್ಲಿ ಕಾಡು, ಸಮುದ್ರ ತೀರಗಳಲ್ಲಿ ಅಲೆಯುತ್ತಾರೆ. ಬಿಸಿ ನೀರಿನ ಬುಗ್ಗೆಯಲ್ಲಿ ಆಟವಾಡುತ್ತಾರೆ. ‘ಸ್ವಲ್ಪ ನೆಲದ್ದು ಸ್ವಲ್ಪ ಜಲದ್ದು’ ಆಹಾರ ಅಂದರೆ ಸಮತೋಲನ ಆಹಾರವನ್ನು ಇಷ್ಟಪಟ್ಟು ತಿನ್ನುವುದರ ಜೊತೆಗೆ ಧೈರ್ಯ, ಆತ್ಮವಿಶ್ವಾಸಗಳೊಂದಿಗೆ ಎಲ್ಲರೊಡನೆ ಬೆರೆಯುವುದು, ತಮ್ಮನ್ನು ತಾವು ಗುಂಪಿನ ನಡುವೆ ಕೀಳರಿಮೆಗಳಿಲ್ಲದೆ ಪ್ರೀತಿಸಲು ಪರಸ್ಪರ ಗೌರವಿಸಲು ಕಲಿಯುತ್ತಾರೆ.

ಈ ಶಾಲೆಯ ಪ್ರತಿ ಚಟುವಟಿಕೆಯೂ ವಿಭಿನ್ನವೇ. ಕ್ರೀಡಾ ದಿನಾಚರಣೆಯ ಆಟಗಳು, ಅದರ ಬಹುಮಾನಗಳು ವಿಶಿಷ್ಟವಾದದ್ದು. ಕ್ರೀಡೆಯಲ್ಲಿ ಗೆದ್ದವರಿಗೆ ತರಕಾರಿಗಳ ಬಹುಮಾನ! ಇದು ಕೊಬಾಯಾಶಿ ಶಾಲೆ.

ತೊತ್ತೊ-ಚಾನ್‍ ಕಕ್ಕಸ್ಸು ಗುಂಡಿಯಲ್ಲಿ ತನ್ನ ಪರ್ಸ್‍ ಹುಡುಕಿದ್ದು, ಪೇಟೆಯಲ್ಲಿ ಮಾರುತ್ತಿದ್ದ ಯಾವುದೋ ಕಡ್ಡಿ ಕೊಳ್ಳಲು ತಕ್ಷಣ ದುಡ್ಡು ಬೇಕಾದಾಗ ತನ್ನ ಮುಖ್ಯೋಪಾಧ್ಯಾಯರನ್ನೇ ಹಣ ಕೇಳಿದಾಗ ಆತ ಪ್ರತಿಕ್ರಿಯಿಸಿದ ರೀತಿ, ತೊತ್ತೊ ಚಾನ್‍ ಪೋಲಿಯೋ ಪೀಡಿತ ಯಾಸುಕೀ-ಚಾನ್‍ನನ್ನು ಮರ ಹತ್ತಿಸಿದ್ದು, ಆ ಹುಡುಗ ಸತ್ತಾಗ ಅವಳ ಮನದಲ್ಲಿ ಮೂಡಿದ ಮಾತುಗಳು, ತಮ್ಮ ಶಾಲೆಗೆ ಬರಲಿರುವ ಹೊಸ ರೈಲು ಬೋಗಿ ಶಾಲೆಯ ಆವರಣಕ್ಕೆ ಹೇಗೆ ಬರುತ್ತದೆ ಎಂದು ನೋಡಲು ಮಕ್ಕಳೆಲ್ಲ ಶಾಲೆಯಲ್ಲಿ ರಾತ್ರಿ ಕಳೆದದ್ದು, ಭಯವನ್ನು ಎದುರಿಸಲು ತಾವೇ ದೆವ್ವಗಳಾಗಿ ಅದರ ಅನುಭವ ಪಡೆದದ್ದು, ಯುದ್ಧಕ್ಕೆ ಕರೆ ಬಂದಾಗ ತಮ್ಮ ಶಾಲೆಯ ಕಾವಲುಗಾರ ರಹೋ-ಚಾನ್‍ಗೆ ಚಹಾಕೂಟ ಏರ್ಪಡಿಸಿದ್ದು.. ಈ ಘಟನೆಗಳನ್ನು ಓದಿದಷ್ಟು ಕೊಬಾಯಾಶಿಯವರ ಶಿಕ್ಷಣದ ಕಲ್ಪನೆ ನಮ್ಮನ್ನು ತಟ್ಟುವುದಲ್ಲದೆ, ಎಂತಹ ಶಾಲೆ ಯುದ್ಧದ ಭೀಕರತೆಗೆ ಬಲಿಯಾಯಿತಲ್ಲ ಎಂಬ ವಿಷಾದ ಕೊನೆಯಲ್ಲಿ ಮನಸ್ಸನ್ನು ಆವರಿಸುತ್ತದೆ.

ಇದು ತೆತ್ಸುಕೊ ಕುರೊಯಾನಾಗಿ ಎಂಬ ಪ್ರಸಿದ್ಧ ಜಪಾನಿ ಟೆಲಿವಿಷನ್‍ ಕಲಾವಿದೆಯ ಬಾಲ್ಯದ ನೆನಪುಗಳ ಪುಸ್ತಕ. ಈಕೆಯೇ ತೊತ್ತೊ-ಚಾನ್‍. ತನ್ನನ್ನು ರೂಪಿಸಿದ ತನ್ನ ಮಾಸ್ತರರು ಮತ್ತು ಶಾಲೆಯ ಬಗ್ಗೆ ಹೇಳುತ್ತಾ ‘ನೀನು ನಿಜವಾಗಿಯೂ ಒಳ್ಳೆಯ ಹುಡುಗಿ’ ಎಂಬ ಮಾತು ತಮ್ಮ ವ್ಯಕ್ತಿತ್ವವನ್ನು ಆಳದಲ್ಲಿ ಪ್ರಭಾವಿಸಿದ ಬಗೆಯನ್ನು ನೆನಪಿಸಿಕೊಳ್ಳುತ್ತಾರೆ. ಪ್ರಪಂಚದ ವಿವಿಧ ಭಾಷೆಗಳಲ್ಲಿ ಇದರ ಅನುವಾದ ಪ್ರಕಟವಾಗಿ ಜನಪ್ರಿಯವಾಗಿದೆ. ಕನ್ನಡಕ್ಕೆ ಇದನ್ನು ತಂದವರು ಪ್ರಸಿದ್ಧ ಪತ್ರಕರ್ತೆ ವಿ.ಗಾಯತ್ರಿ. ಅನುವಾದ ಎಷ್ಟು ಚೆನ್ನಾಗಿದೆಯೆಂದರೆ ಜಪಾನಿ ಹೆಸರುಗಳನ್ನು ಬಿಟ್ಟರೆ ಇಲ್ಲಿ ನಮ್ಮದಲ್ಲ ಅನ್ನುವ ಭಾಷೆಯೇ ಇಲ್ಲ.

ಅಸಂಪ್ರದಾಯಿಕ ಶಿಕ್ಷಣದ ಮಹತ್ವವನ್ನು ಹೇಳುವ ಈ ಪುಸ್ತಕ ನಮ್ಮ ಪ್ರಸ್ತುತದ ಶಿಕ್ಷಣ ವ್ಯವಸ್ಥೆಯ ನ್ಯೂನ್ಯತೆಗಳನ್ನು ಎತ್ತಿತೋರುತ್ತದೆ. ಹುಟ್ಟುವಾಗ ವಿಶ್ವಮಾನವರಾಗಿದ್ದ ಮಕ್ಕಳನ್ನು ನಾವು ಅಲ್ಪಮಾನವರನ್ನಾಗಿ ಮಾಡಿಬಿಡುವ ನಮ್ಮ ನಡತೆಯನ್ನು ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ.

 

Comments

Submitted by shreekant.mishrikoti Wed, 07/10/2013 - 21:03

ಹೇಮಾ, ಒಳ್ಳೆಯ ಪುಸ್ತಕವೊಂದನ್ನು ಪರಿಚಯಿಹೇಮಾ, ಒಳ್ಳೆಯ ಪುಸ್ತಕವೊಂದನ್ನು ಪರಿಚಯಿಸಿದ್ದೀರಿ. ಧನ್ಯವಾದಗಳು.

ಈ ಪುಸ್ತಕವನ್ನು ಆನ್ಲೈನ್ ಆಗಿ ಇಲ್ಲಿ ---> http://202.41.82.144/cgi-bin/metainfo.cgi?&title1=Totto%20Chan&author1=… ಓದಬಹುದು.

(ಬೇಕಿದ್ದಲ್ಲಿ ಡೌನ್ಲೋಡೂ ಮಾಡಿಕೊಳ್ಳಬಹುದು) ಸಿದ್ದೀರಿ. ಧನ್ಯವಾದಗಳು.

ಈ ಪುಸ್ತಕವನ್ನು ಆನ್ಲೈನ್ ಆಗಿ ಇಲ್ಲಿ ---> http://202.41.82.144/cgi-bin/metainfo.cgi?&title1=Totto%20Chan&author1=… ಓದಬಹುದು.

(ಬೇಕಿದ್ದಲ್ಲಿ ಡೌನ್ಲೋಡೂ ಮಾಡಿಕೊಳ್ಳಬಹುದು)

Submitted by nageshamysore Sun, 07/14/2013 - 04:42

In reply to by shreekant.mishrikoti

+1. ಹೇಮಾರವರೆ, ಇಂತಹ ಶಿಕ್ಷಣ ವ್ಯವಸ್ಥೆ ಪ್ರಚಲಿತವಿದ್ದರೆ ಎಷ್ಟು ಸಹಜ ಕಲಿಕೆ ಇರುತ್ತಿತ್ತು...ಬಹುಶಃ, ನಮ್ಮ ಪುರಾತನ ಗುರುಕುಲಗಳು ಈ ಮಾದರಿಯ ಮತ್ತೊಂದು ಅವೃತ್ತಿಯೆನ್ನಬಹುದೇನೊ  - ನಾಗೇಶ ಮೈಸೂರು

Submitted by neela devi kn Wed, 07/17/2013 - 13:35

ಹೇಮಾ ರವರೆ ತಾವು ಒಂದು ಒಳ್ಳೆಯ ಪುಸ್ತಕವನ್ನು ಪರಿಚಯಿಸಿದ್ದೀರಿ ಶ್ರೀ ಶ್ರೀಕಾಂತ್ ರವರು ಕೊಟ್ಟ DLI ಇಂದ ಡೌನ್ಲೋಡ್ ಮಾಡಿ ಓದಿದೆ ನನಗೂ ಅಂತಹ ಶಾಲೆ ಸಿಕ್ಕಿದ್ದರೆ ಎಷ್ಟು ಚೆನ್ನಿತ್ತು ಎಂದೆನಿಸಿತು - ನೀಳಾ