ಹೆಸರೊಂದಿಟ್ಟರೆನಗೆ

ಹೆಸರೊಂದಿಟ್ಟರೆನಗೆ

ಹೆಸರೊಂದಿಟ್ಟರೆನಗೆ ಹೆಸರಿರದ ನನಗೆ

ಹೆಸರೊಂದಿಟ್ಟರೆನಗೆ || ಪ ||

ಎನಿತು ಜನನವೋ ಎನಿತು ಮರಣವೋ

ಯಾವ ಜೀವವೋ ಎಂಥ ಮಾಯೆಯೋ

ಆದಿ ಅಂತ್ಯವನರಿಯದವಗೆ ಹೆಸರೊಂದಿಟ್ಟರೆನಗೆ ||

ಹಿಂದೆ ಇರದ ಮುಂದೆ ಇರದಿಹ

ತನುವ ಕಣಕಣ ಚಣಚಣಕೆ ಬದಲು

ಇಂತಪ್ಪ ತನುವೆ ತಾನು ಎಂದವಗೆ ಹೆಸರೊಂದಿಟ್ಟರೆನಗೆ ||

ಪಂಚತತ್ವದ ದೇಹ ಬಣ್ಣ ಬಣ್ಣದ ಬಟ್ಟೆ

ಚೈತನ್ಯವಿಲ್ಲದಿರೆ ಬರಿಯ ಲೊಳಲೊಟ್ಟೆ

ಚೇತನದ ಚೆಲುವ ಕಂಡರಿಯದವಗೆ ಹೆಸರೊಂದಿಟ್ಟರೆನಗೆ ||

ಅವನ ಕರುಣೆ ನವರಸದ ಅರಮನೆ

ಚಲಿಪ ಅರಮನೆಗೊಡೆಯನೆಂದು

ಬೀಗಿ ರಾಗದಿ ನಿಜವ ಮರೆತವಗೆ ಹೆಸರೊಂದಿಟ್ಟರೆನಗೆ ||

ಎನಿತು ಪುಣ್ಯವೋ ಮನುಜನಾಗಿಹೆ

ಮತಿಯ ಬಿಟ್ಟರೆ ಜಾರಿಹೋಗುವೆ

ಅರಿಗೆ ಗುರಿಯಾಗಿರುವ ನರಗೆ ಹೆಸರೊಂದಿಟ್ಟರೆನಗೆ ||

ಹೆಸರು ಹೆಸರೆಂದು ಕೊಸರುತಿಹರು

ಅರಿತವರೆ ಬಿಡರು ಹೆಸರ ಹಂಬಲ

ಹೆಸರು ಹಸಿರೆಂದುಸಿರುವವಗೆ ಹೆಸರೊಂದಿಟ್ಟರೆನಗೆ ||

 

-ಕ.ವೆಂ.ನಾಗರಾಜ್.

Comments

Submitted by Vinutha B K Thu, 07/18/2013 - 17:34

ಎನಿತು ಪುಣ್ಯವೋ ಮನುಜನಾಗಿಹೆ,ಮತಿಯ ಬಿಟ್ಟರೆ ಜಾರಿಹೋಗುವೆ,ಅರಿಗೆ ಗುರಿಯಾಗಿರುವ ನರಗೆ ಹೆಸರೊಂದಿಟ್ಟರೆನಗೆ ||  ಸರಳ ಹಾಗೂ ಸುಂದರ ಕವನ ..

Submitted by nageshamysore Thu, 07/18/2013 - 19:09

ನಾಗರಾಜರೆ ನಿಮಗೆ ಹೆಸರಿನ ಚಿಂತೆಯ ಅಗತ್ಯವೆ ಇಲ್ಲ ಬಿಡಿ , 'ಕವಿ' ಯೆನ್ನುವ ಹೆಸರೆ ಅನ್ವರ್ಥಕವಾಗಿ ಸೂಕ್ತವಾಗಿ ಹೊಂದುತ್ತದೆ :-) ಸೊಗಸಾದ ಕವನ - ನಾಗೇಶ ಮೈಸೂರು

Submitted by makara Fri, 07/19/2013 - 09:32

ಕವಿಗಳೇ, ಆಧ್ಯಾತ್ಮದ ಸಾರವನ್ನು ಹದವಾಗಿ ಭಟ್ಟಿಯಿಳಿಸಿದ್ದೀರ ನಿಮ್ಮ ಈ ಸರಳ ಸುಂದರ ಕವನದಲ್ಲಿ. ಮನುಷ್ಯನಿಗೆ ನಿಜವಾಗಿಯೂ ಹೆಸರಿಟ್ಟುಕೊಳ್ಳುವ ಅವಶ್ಯಕತೆಯಿದೆಯಾ ಎಂದು ಆಲೋಚನೆಗೆ ಹಚ್ಚುವಂತೆ ಮಾಡುತ್ತದೆ ಈ ನಿಮ್ಮ ಕವನ ಓದಿದ ಮೇಲೆ. ಇದೇ ರೀತಿಯ ಆಲೋಚನೆಯನ್ನು ಹಿಂದೆ ಪಾರ್ಥಸಾರಥಿಗಳು ತಮ್ಮ ಲೇಖನದಲ್ಲಿ ಹುಟ್ಟು ಹಾಕಿದ್ದರು, ಅದರ ಕೊಂಡಿ - ಕಥೆ : ಇಲ್ಲವಾಗುತ್ತಲೆ ಎಲ್ಲವಾಗುವ http://sampada.net/b...  ಅದರಲ್ಲಿನ ಕೆಲವು ಸಾಲುಗಳು ಹೀಗಿವೆ:  "ಮಗು ಅದೆ ನೋಡು ಆಶ್ಚರ್ಯ, ಸೃಷ್ಟಿಯಲ್ಲಿ ಎಷ್ಟೊಂದು ಜೀವಿಗಳುಂಟು, ಯಾವುದು ಹೆಸರಿಟ್ಟುಕೊಳ್ಳಲು ಹೋಗಲ್ಲ, ಪ್ರಕೃತಿಯಲ್ಲಿ ಸಾವಿರಾರು ವಿಧದ ಮರ ಗಿಡ ಪ್ರಭೇದಗಳುಂಟು ಯಾವುದು ತನಗೆ ಹೆಸರಿಟ್ಟುಕೊಳ್ಳಲ್ಲ. ಆದರೆ ಈ ಮನುಷ್ಯಜಾತಿ ಮಾತ್ರ ನೋಡು , ಹುಟ್ಟುವಾಗ ಯಾವ ಹೆಸರು ಇರಲ್ಲ, ಆದರೆ ಇವನು ತನಗೆ ಮಾತ್ರ ಪ್ರತ್ಯೇಕವಾಗಿ ಒಂದು ಹೆಸರಿಟ್ಟು ಗುರ್ತಿಸಿಕೊಳ್ಳುತ್ತಾನೆ, ಅಷ್ಟೆ ಅಲ್ಲ ಸುತ್ತ ಮುತ್ತಲ ಪಶು ಪ್ರಾಣಿ, ಗಿಡ ಮರಗಳನ್ನೆಲ್ಲ ಒಂದು ಜಾತಿ ಹೆಸರಿನಿಂದ ಗುರ್ತಿಸಿ ಸಂತೋಷಪಡುತ್ತಾನೆ. ಈಗ ಪ್ರಾಣಿಗಳನ್ನು ನೋಡು , ಯಾವುದೆ ಹೆಸರಿಲ್ಲದೆ ಒಂದನೊಂದು ಗುರ್ತಿಸುತ್ತವೆ, ಮರಗಿಡಗಳಲ್ಲು ಆ ಗುರ್ತಿಸುವಿಕೆ ನಡೆಯುತ್ತದೆ ಯಾವುದೆ ಹೆಸರಿಲ್ಲದೆ, ಈ ಮನುಷ್ಯನಾದರೆ ಮಾತ್ರ ವಿಚಿತ್ರ, ತನಗೊಂದು ಹೆಸರು,  ತನ್ನ ಊರಿಗೊಂದು ಹೆಸರು"  ಅಂತ  ಮತ್ತೆ ಜೋರಾದ ಅವರ ನಗು ನನಗೆ ಕಸಿವಿಸಿ ಮೂಡಿಸಿತು.  ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by kavinagaraj Fri, 07/19/2013 - 14:59

In reply to by makara

ನಾನೂ ಪಾರ್ಥರ ಆ ಬರಹ ಓದಿರುವೆ. ವಿಚಾರಪ್ರದವಾಗಿದೆ. ಮುಂದಿನ ತಿಂಗಳು ನನ್ನ ಮೊಮ್ಮಗನ ನಾಮಕರಣ ಕಾರ್ಯಕ್ರಮವಿದೆ. ನನ್ನ ಮನಸ್ಸು ಯಾವುದೋ ದಿಕ್ಕಿನಲ್ಲಿ ಓಡಿ ಈ ಸಾಲುಗಳನ್ನು ರಚಿಸಿತು. ಪ್ರತಿಕ್ರಿಯೆಗೆ ಧನ್ಯವಾದ ಶ್ರೀಧರರೇ.
Submitted by makara Fri, 07/19/2013 - 19:43

In reply to by kavinagaraj

>>>ಹಿಂದೆ ಇರದ ಮುಂದೆ ಇರದಿಹ ತನುವ ಕಣಕಣ ಚಣಚಣಕೆ ಬದಲು.....ಇವು ಅದ್ಭುತ ಸಾಲುಗಳು ಕವಿಗಳೆ. ಮೊಮ್ಮಗನಿಗೆ ಅಜ್ಜನ ಆಧ್ಯಾತ್ಮಿಕತೆಯ ಉಡುಗೊರೆ ಮತ್ತು ಆಶೀರ್ವಾದ ಎಂದು ಈ ಕವನವನ್ನು ತಿಳಿಯಬಹುದು ಬಿಡಿ. ಅಂದಹಾಗೆ, ನಿಮ್ಮ ಮೊಮ್ಮಗನ ನಾಮಕರಣ ಕಾರ್ಯಕ್ರಮ ಚೆನ್ನಾಗಿ ಆಗಲೆಂದು ಸಂಪದಿಗರೆಲ್ಲರ ಪರವಾಗಿ ಶುಭಹಾರೈಸುತ್ತಿದ್ದೇನೆ.
Submitted by nageshamysore Fri, 07/19/2013 - 22:05

In reply to by partha1059

ಹೆಸರೊಂದಿಟ್ಟರೆ 'ನಗೆ' ನಿಮ್ಮ ಮೊಮ್ಮಗನಿಗೆ ನಾಮಕರಣದಿ ನಗೆ ಬುಗ್ಗೆ ಹರಿಸಲೆಂಬಾಶಯ ನಮಗೆ ಸಂಪದಿಗರ ಪರವಾಗೀ ಕೊಡುಗೆ! - ನಾಗೇಶ ಮೈಸೂರು
Submitted by kavinagaraj Sat, 07/20/2013 - 10:21

In reply to by nageshamysore

ಆತ್ಮೀಯ ಮತ್ತು ಮುದಗಳಿಸುವ ಹಿತವಾದ ಪ್ರತಿಕ್ರಿಯೆಗಳಿಗಾಗಿ ಶ್ರೀಧರ್, ಪಾರ್ಥ, ನಾಗೇಶರು ಸೇರಿದಂತೆ ಎಲ್ಲರಿಗೂ ಕೃತ್ಜಜ್ಞತೆಗಳು.