ಮರೆಯಲಾಗದ ಈ ಚಿತ್ರ

ಮರೆಯಲಾಗದ ಈ ಚಿತ್ರ

ಇದು ಯಾವ ಸಿನೆಮಾ ನೆನಪಾಯಿತೆ? ಹೌದು ಇದು ‘ಪುಷ್ಪಕ ವಿಮಾನ’. ಕೆಲವು ಚಿತ್ರಗಳೇ ಹಾಗೇ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತುಬಿಡುತ್ತದೆ. ಕಾಲದೊಂದಿಗೆ ಕೂಡ ಮಾಸಲಾಗದ ಚಿತ್ರಗಳು ಅವು. 1987ರಲ್ಲಿ ಬಿಡುಗಡೆಯಾದ ‘ಪುಷ್ಪಕ ವಿಮಾನ’ ಎನ್ನುವ ಅದ್ಭುತ ಚಿತ್ರ ಈ ಸಾಲಿಗೆ ಸೇರುವಂಥದ್ದು. ಭಾರತೀಯ ಚಿತ್ರರಂಗದ ಶ್ರೇಷ್ಠ ಚಿತ್ರಗಳ ಸಾಲಿಗೆ ಸೇರಿದ ಮೂಕಿ ಚಿತ್ರ. ಇದರಲ್ಲಿ ಮಾತುಗಳೇ ಇಲ್ಲ ಆದರೂ ಇದು ಕನ್ನಡದ ಚಿತ್ರ. ಕನ್ನಡ, ತಮಿಳು, ತೆಲುಗು, ಹಿಂದಿ ನಟರ ಅಭಿನಯದ ಇದು ಅಪ್ಪಟ ಭಾರತೀಯ ಚಿತ್ರ. ಕಮಲಹಾಸನ್‍ ಎನ್ನುವ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟನ ಸಾಮರ್ಥ್ಯವನ್ನು ಒರೆಹಚ್ಚಿ ತೋರಿದ ಚಿತ್ರ. ಒಂದು ಸಣ್ಣ ಕತೆಯ ಎಳೆಯನ್ನು ಅದ್ಭುತ ದೃಶ್ಯಕಾವ್ಯವಾಗಿಸಿದ್ದು ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್‍. ಈ ಚಿತ್ರದ ನಿರ್ಮಾಪಕ, ನಟ ಶೃಂಗಾರ್‍ ನಾಗರಾಜ್‍ ಅವರ ನಿಧನದ ಸುದ್ದಿಯನ್ನು ಓದಿದಾಗ ಈ ಚಿತ್ರ ನೆನಪಾಯಿತು.

“ಇರುವ ಒಂದು ಜೊತೆ ಬಟ್ಟೆಯನ್ನು ಒಗೆದರೆ ಹಾಳಾಗುತ್ತದೆ ಎಂದು ಕೇವಲ ಕಂಕುಳಿಗೆ ಮಾತ್ರ ಸೋಪನ್ನು ಹಚ್ಚಿ ಹಿಂಡಿ ಅದನ್ನೇ ಇಂಟರ್ವ್ಯೂಗೆ ಬಳಸುವ ನಿರುದ್ಯೋಗಿ, ಕಾಸಿಲ್ಲದೆ ಅರ್ಧಕಪ್‍ ಚಹಾ ಕುಡಿಯುವಾಗ ಕಾಗೆಯನ್ನು ನೋಡಿ ಹೂಜಿಗೆ ಕಲ್ಲುಹಾಕಿ ನೀರು ಕುಡಿದ ಕತೆ ನೆನಪಿಸಿಕೊಂಡು ತನ್ನ ಹತ್ತಿರವಿದ್ದ ಗುಂಡಿ, ನೆಟ್ಟು ಬೋಲ್ಟಗಳನ್ನು ಹಾಕಿ ಚಹಾ ಕಪ್‍ ತುಂಬಿದಾಗ ಕುಡಿದು ತೃಪ್ತಿ ಪಟ್ಟುಕೊಳ್ಳುವ ದೃಶ್ಯ, ಭಿಕ್ಷುಕನ ಮುಂದೆ ನಿಂತು ತನ್ನ ಹತ್ತಿರ ಇದ್ದ ಒಂದು ರೂಪಾಯಿ ನಾಣ್ಯ ಪ್ರದರ್ಶಿಸಿದಾಗ ಅವನು ಬಚ್ಚಿಟ್ಟದ್ದ ತನ್ನಲ್ಲಿದ್ದ ಹಣವನ್ನು ತೋರಿಸಿದಾಗ ಪೆಚ್ಚಾಗುವ ಮುಖಭಾವ, ಅದೇ ಭಿಕ್ಷುಕ ಸತ್ತಾಗ ಜನ ಅವನ ಹೆಣವನ್ನು ಅಲ್ಲೇ ಎಸೆದು ಗೋಣೀಚೀಲ ಒದರಿದಾಗ ಸಿಕ್ಕ ದುಡ್ಡನ್ನು ಆರಿಸಿಕೊಳ್ಳವುದನ್ನು ನೋಡಿ ಉಂಟಾದ ಬೇಸರ, ಶ್ರೀಮಂತನೊಬ್ಬ ಕುಡಿದು ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ಅವನನ್ನು ತನ್ನ ರೂಮಿಗೆ ಕರೆದೊಯ್ದು ಬಂಧಿಸಿಟ್ಟು ಅವನ ಹಣದಲ್ಲಿ ಕೆಲದಿನಗಳ ಶ್ರೀಮಂತಕೆಯನ್ನು ಅನುಭವಿಸುವಾಗಿನ ದೃಶ್ಯಾವಳಿಗಳು, ಶ್ರೀಮಂತನನ್ನು ಬಂಧಿಸಿಟ್ಟ ಸಮಯದಲ್ಲಿ ಅವನ ಮಲವನ್ನು dispose ಮಾಡಲು ನಾಯಕ ಹುಡುಕಿಕೊಳ್ಳುವ ಉಪಾ, ನಾಯಕಿಯೊಂದಿಗೆ ಪ್ರೇಮಾಂಕುರ, ನಾಯಕಿಯ ತಂದೆ ವೃತ್ತಿಯಿಂದ ಜಾದೂಗಾರನಾಗಿದ್ದು ಅವನ ಕೈಚಳಕವನ್ನು ಅನುಕರಿಸಲು ಪ್ರಯತ್ನಿಸಿ ವಿಫಲನಾಗುವ ನಾಯಕ..” ಈ ದೃಶ್ಯಗಳನ್ನು ಹೇಗೆ ತಾನೇ ಮರೆಯಲು ಸಾಧ್ಯ? ಮೊದಲನೇ ದೃಶ್ಯದಿಂದ ನಗಲು ಆರಂಭಿಸಿದರೆ ಕಡೆಯವರೆಗೆ ನಗಿಸುತ್ತಲೇ ವಿಷಾದ ಛಾಯೆಯಲ್ಲಿ ಸಿನೆಮಾ ಮುಗಿಯುತ್ತದೆ. ನಗುವಿನ ಜೊತೆಯಲ್ಲೇ ಶ್ರೀಮಂತಿಕೆ, ಮಾನವೀಯತೆ, ಹಣದ ಕ್ರೌರ್ಯ, ಸಂಬಂಧಗಳಲ್ಲಿನ ದೌರ್ಬಲ್ಯ ಏನೇಲ್ಲವನ್ನು ಪೋಣಿಸಿದ ಒಂದು ಚೆಂದದ ದೃಶ್ಯಕಾವ್ಯ. ಭಾರತೀಯ ಸಿನೆಮಾದಲ್ಲಿನ ಒಂದು ಸ್ಮರಣೀಯ ದೃಶ್ಯಕಾವ್ಯ ಎಂದರೆ ಅತಿಶಯೋಕ್ತಿಯಾಗಲಾರದು.

ಮಾತಿಲ್ಲದೆ ಕೇವಲ ಹಿನ್ನೆಲೆ ಸಂಗೀತ ಮತ್ತು ನಟರ ಅದ್ಭುತ ನಟನಾ ಸಾಮರ್ಥ್ಯವನ್ನೇ ಆಧರಿಸಿ ಸುಮಾರು ಎರಡೂಕಾಲು ಘಂಟೆ ಪ್ರೇಕ್ಷಕರನ್ನು ಹಿಡಿದಿಡುವ ಚಿತ್ರವಿದು. ಇಂತಹ ಚಿತ್ರವೊಂದು ರೂಪುಗೊಂಡಿದ್ದು ಕೂಡ ಒಂದು ಆಕಸ್ಮಿಕ. ಈ ಕತೆಯನ್ನು ಹೆಣೆದು ಸುಮಾರು ವರ್ಷಗಳವರೆಗೆ ತಮ್ಮಲ್ಲೇ ಇಟ್ಟುಕೊಂಡು ನಿರ್ಮಾಪಕರಿಗಾಗಿ ಹುಡುಕುತ್ತಿದ್ದ ಸಿಂಗೀತಂ ಶ್ರೀನಿವಾಸರಿಗೆ ಹಲವರಿಂದ ಸಿಕ್ಕಿದ್ದು ನಕಾರಾತ್ಮಕ ಉತ್ತರ. ನಿರ್ಮಾಪಕರು ಮೂಕಿ ಚಿತ್ರ ಮಾಡಲು ಹಿಂದೇಟು ಹಾಕುತ್ತಿದ್ದರು. ಈ ಸಮಯದಲ್ಲೇ ಶೃಂಗಾರ್‍ ನಾಗರಾಜರಿಗೆ ಚಿತ್ರರಂಗದಲ್ಲಿ ಏನಾದರೂ ಹೊಸತನ್ನು ಮಾಡಬೇಕೆನಿಸಿ ಸಿಂಗೀತ ಅವರೊಡನೆ ಮಾತಾಡಿದಾಗ ಅವರು ತಮ್ಮ ಬಳಿಯಿದ್ದ ಈ ಕತೆಯನ್ನು ಹೇಳಿದರಂತೆ. ನಾಗರಾಜ್‍ ತಕ್ಷಣವೇ ಇದಕ್ಕೆ ನಿರ್ಮಾಪಕರಾಗಲು ಒಪ್ಪಿಕೊಂಡರಂತೆ. ಇದು ನಿಜಕ್ಕೂ ಒಂದು ದೊಡ್ಡ ಸಾಹಸವೇ ಆಗಿತ್ತು. ಈ ಚಿತ್ರಕ್ಕಾಗಿ ತಮ್ಮ ಸರ್ವಸ್ವವನ್ನು ಪಣಕ್ಕಿಟ್ಟು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ಚಿತ್ರದ ಯಶಸ್ಸಿನಲ್ಲೇ ಅವರ ಭವಿಷ್ಯದ ಬದುಕು ನಿಂತಿತ್ತು. ಚಿತ್ರ ಬಿಡುಗಡೆಯಾಯಿತು. ನಿರ್ಮಾಪಕ, ನಿರ್ದೇಶಕ, ನಟ ವರ್ಗ ಎಲ್ಲರ ನಿರೀಕ್ಷೆಗೂ ಮೀರಿ ಚಿತ್ರ ಬೆಂಗಳೂರಿನಲ್ಲೇ ದಾಖಲೆ ಸೃಷ್ಟಿಸಿ ಪ್ರದರ್ಶನ ಕಂಡಿತು. ಶೃಂಗಾರ್ ನಾಗರಾಜ್‍ ಈ ಚಿತ್ರಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ, ಫಿಲಂ ಫೇರ್‍ ಪ್ರಶಸ್ತಿ, ಅಂತರ ರಾಷ್ಟ್ರೀಯ ಹೂಸ್ಟನ್‍ ಚಲನಚಿತ್ರೋತ್ಸವ ಪ್ರಶಸ್ತಿ.. ಹೀಗೆ ಹಲವು ಪ್ರಶಸ್ತಿಗಳನ್ನು ಪಡೆದರು. ಮಾತ್ರವಲ್ಲ ನಾಯಕ, ನಿರ್ದೇಶಕರು ಕೂಡ ಪ್ರಶಸ್ತಿಗಳನ್ನು ಪಡೆದರು. ನಿರ್ಮಾಪಕ, ನಿರ್ದೇಶಕ ಮತ್ತು ನಾಯಕರ ಸಿನಿಜೀವನದ ಮೈಲಿಗಲ್ಲಾಯಿತು ಈ ಚಿತ್ರ.

ಶೃಂಗಾರ ನಾಗರಾಜ್‍ ನಟರಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ಸಿಪಾಯಿ ರಾಮು, ಬಂಗಾರದ ಮನುಷ್ಯ, ಕೆಸರಿನ ಕಮಲ, ಕಥಾಸಂಗಮ, ಶಬ್ಧವೇದಿ, ಹಾಲು ಜೇನು, ಚಲಿಸುವ ಮೋಡಗಳು.. ಹೀಗೆ ಸುಮಾರು ಮೂವತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಅಗಲಿದ ಈ ಹಿರಿಯ ನಟ-ನಿರ್ಮಾಪಕನಿಗೆ ಈ ನುಡಿನಮನ.

ಚಿತ್ರ ಕೃಪೆ: http://www.myfirstshow.com/news/view/19632/Pushpaka-Vimanam-in-Shanghai.html

Comments

Submitted by hpn Fri, 07/19/2013 - 12:18

In reply to by smitha melkote

ಸ್ಮಿತ‌, ಪ್ರತಿಕ್ರಿಯೆ ಕನ್ನಡದಲ್ಲಿಯೇ ಬರೆಯಲು ಸುಲಭವಾಗಲೆಂದು ಇನ್ಲೈನ್ ಕನ್ನಡ‌ ಐ ಎಂ ಇ (ಅಂದರೆ ಯಾವುದೇ ಹೊರಗಿನ‌ ತಂತ್ರಾಂಶದ‌ ಅಗತ್ಯವಿಲ್ಲದೆ ಕನ್ನಡದಲ್ಲಿ ಇಲ್ಲಿಯೇ ಟೈಪ್ ಮಾಡಲು ಸಾಧ್ಯವಾಗುವಂತೆ) ಅಳವಡಿಸಿದ್ದೇವೆ. ಒಮ್ಮೆ ಬಳಸಿ ನೋಡಿ. ಇಲ್ಲಿ ಪ್ರತಿಕ್ರಿಯೆ ಬರೆಯಲು ಪ್ರಾರಂಭಿಸುವಾಗ‌ ಪುಟದ‌ ಎಡಭಾಗದ‌ ಕೊನೆಯಲ್ಲಿ ಇಂಗ್ಲೀಶ್ ‍ಹಾಗೂ ಕನ್ನಡದ‌ ನಡುವೆ ಸ್ವಿಚ್ ಆಗಲು ಆಪ್ಶನ್ ಇದೆ.

Submitted by gopinatha Sat, 07/27/2013 - 20:30

In reply to by hpn

ನಿಜವಾಗಿಯೂ ಇದೊಂದು ಮಹೋನ್ನತ‌ ಚಿತ್ರವಾಗಿತ್ತು. ಇದು ಹಿಂದಿಯಲ್ಲಿಯೂ ತೆರೆಕಂಡಿತ್ತು. ಕೊನೆಯಲ್ಲಿ ಸ್ವಲ್ಪ‌ ಮಾತುಕಥೆಯೂ ಇತ್ತು ಅನ್ನಿಸುತ್ತೆ. ಒಂದು ಶುಡ್ಧ‌ ಹೊಸತನವನ್ನೊಳಗೊಂಡ‌ ಚಿತ್ರವಾಗಿತ್ತು. ನೆನಪಿಸಿದ್ದಕ್ಕೆ ನನ್ನಿ