೭೩. ಶ್ರೀ ಲಲಿತಾ ಸಹಸ್ರನಾಮ ೨೬೬ರಿಂದ ೨೬೭ನೇ ನಾಮಗಳ ವಿವರಣೆ

೭೩. ಶ್ರೀ ಲಲಿತಾ ಸಹಸ್ರನಾಮ ೨೬೬ರಿಂದ ೨೬೭ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೨೬೬ -೨೬೭

Goptrī गोप्त्री (266)

೨೬೬. ಗೋಪ್ತ್ರೀ

               ದೇವಿಯು ಈ ಪ್ರಪಂಚವನ್ನು ಸಂಗೋಪನ (ಪಾಲನೆ) ಮಾಡುತ್ತಿರುವ ರಕ್ಷಕಳಾಗಿದ್ದಾಳೆ. ರಕ್ಷಣೆಯು ಬ್ರಹ್ಮದ ಎರಡನೇ ಲಕ್ಷಣವಾಗಿದೆ. ರಕ್ಷಣೆಯು ದೇವಿಯ ಸತ್ವ ಗುಣವಾಗಿದೆ. ಬೆಳಕು ಮತ್ತು ಸಾಮರಸ್ಯಗಳು ಸತ್ವ ಗುಣದ ಲಕ್ಷಣಗಳಾಗಿವೆ. ದೇವಿಯು ಈ ಬ್ರಹ್ಮಾಂಡವನ್ನು ರಕ್ಷಿಸುವುದಷ್ಟೇ ಅಲ್ಲ ಅದರ ಪೋಷಣೆಯನ್ನೂ ಸಹ ಮಾಡುತ್ತಾಳೆ; ಎಷ್ಟೇ ಆದರೂ ಆಕೆಯು ವಿಶ್ವದ ತಾಯಿಯಾದ ಶ್ರೀ ಮಾತೆಯಲ್ಲವೇ? ರಕ್ಷಣೆ ಮತ್ತು ಪೋಷಣೆ ತಾಯಿಯೊಬ್ಬಳ ಸಹಜ ಕರ್ತವ್ಯಗಳಾಗಿವೆ.

Govinda-rūpiṇī गोविन्द-रूपिणी (267)           

೨೬೭. ಗೋವಿಂದ ರೂಪಿಣೀ

               ಗೋವಿಂದ ಎಂದರೆ ವಿಷ್ಣು. ವಿಷ್ಣವು ಈ ಪ್ರಪಂಚದ ರಕ್ಷಕನಾಗಿದ್ದಾನೆ. ಒಬ್ಬನು ಆರೋಗ್ಯ, ಐಶ್ವರ್ಯ ಮತ್ತು ಸಿರಿ-ಸಂಪದಗಳನ್ನು ಪಡೆಯಬೇಕೆಂದರೆ ಅವನು ಶ್ರೀ ವಿಷ್ಣುವಿನ ಪೂಜೆಯನ್ನು ಕೈಗೊಳ್ಳಬೇಕು. ಪ್ರಾಪಂಚಿಕ ಸಂಪದಗಳನ್ನು ಹೊಂದಲು ಕೇವಲ ವಿಷ್ಣುವನ್ನು ಮಾತ್ರವೇ ಪೂಜಿಸದೆ ಅದರೊಂದಿಗೆ ಅವನ ಸಂಗಾತಿಯಾದ ಶ್ರೀ ಲಕ್ಷ್ಮಿಯನ್ನು ಸಹ ಪೂಜಿಸಬೇಕು ಮತ್ತು ಈ ರೂಪವು ಲಕ್ಷ್ಮೀನಾರಾಯಣ ರೂಪವಾಗಿದೆ. ಈ ರೂಪವು ಅತ್ಯಂತ ಶುಭಪ್ರದವಾದ ಅಥವಾ ಮಂಗಳಕರವಾದ ರೂಪವೆಂದು ಪರಿಗಣಿಸಲಾಗಿದೆ. ಒಬ್ಬನು ಸಂಕಷ್ಟಗಳಿಂದ ಪಾರಾಗ ಬೇಕೆಂದರೆ ಅವನು ವಿಷ್ಣುವಿನ ರೂಪವಾದ ಲಕ್ಷ್ಮೀನಾರಾಯಣನನ್ನು ಪ್ರಾರ್ಥಿಸಬೇಕು. ನರಸಿಂಹ ಅಥವಾ ನಾರಸಿಂಹ ಎಂದು ಕರೆಯಲ್ಪಡುವ ವಿಷ್ಣುವಿನ ರೂಪ ಮಾತ್ರವೇ ಅತ್ಯಂತ ಉಗ್ರವಾದದ್ದು; ಅದರ ಹೊರತಾಗಿ ವಿಷ್ಣುವು ಅತ್ಯಂತ ಶುಭಕರವಾದ ರೂಪವಾಗಿದೆ.

               ವಿಷ್ಣುವನ್ನು ವೇದ ಮತ್ತು ಉಪನಿಷತ್ತುಗಳ ಮೂಲಕ ಅರಿಯಬಹುದು. ಗೋ (गो) ಎಂದರೆ ವಾಚ್ ಅಥವಾ ಮಾತುಗಳು. ವಿಷ್ಣುವಿನ ಗುಣಗಳನ್ನು ಶಬ್ದಗಳ ಮೂಲಕ ವಿವರಿಸಲಾಗದೇ ಇರುವುದರಿಂದ ಅವನು ಗೋವಿಂದನೆಂದು ಕರೆಯಲ್ಪಟ್ಟಿದ್ದಾನೆ. ಗೋ ಎಂದರೆ ಭೂಮಿ ಎನ್ನುವ ಅರ್ಥವೂ ಇದೆ. ವಿಷ್ಣುವು ಭೂಮಿಯನ್ನು ಪರಿಪಾಲಿಸುತ್ತಾನಾದ್ದರಿಂದ ಅವನನ್ನು ಗೋವಿಂದ ಎಂದು ಕರೆಯಲಾಗಿದೆ. ಮಹಾಪ್ರಳಯ ಕಾಲದಲ್ಲಿ (ನಾಮ ೨೩೨ನ್ನು ನೋಡಿ) ಎಲ್ಲವೂ ನೀರಿನಿಂದಾವೃತವಾದಾಗ,  ವಿಷ್ಣುವು ಈ ಭೂಮಿಯನ್ನು ಎತ್ತಿಹಿಡಿದು ವಿಶ್ವದ ಒಂದು ಅಲ್ಪ ಭಾಗವಾದ ಈ ಭೂಮಿಯನ್ನು ಕಾಪಾಡಿದನು, ಆದ್ದರಿಂದ ಭೂಮಿಯನ್ನು ಕಾಪಾಡಿದವನು ಗೋವಿಂದನೆಂದು ಕರೆಯಲ್ಪಟ್ಟಿದ್ದಾನೆ.

               ವಿಷ್ಣು ಸಹಸ್ರನಾಮದಲ್ಲಿ ‘ಗೋವಿಂದ’ ಎನ್ನುವ ಶಬ್ದವು, ನಾಮ ೧೮೭ ಹಾಗೂ ನಾಮ ೫೩೯ರಲ್ಲಿ; ಹೀಗೆ ಎರಡು ಬಾರಿ ಬರುತ್ತದೆ. ಆದರೆ ಈ ವಿಧವಾದ ಪುನರುಕ್ತಿಗಳು ಲಲಿತಾ ಸಹಸ್ರನಾಮದಲ್ಲಿ ಬರುವುದಿಲ್ಲ ಅದೇ ಲಲಿತಾ ಸಹಸ್ರನಾಮದ ವಿಶೇಷತೆಯಾಗಿದೆ.

ವಿಷ್ಣುವಿನ ಕುರಿತಾಗಿ ಇನ್ನಷ್ಟು ವಿವರಗಳು:

              ವಿಷ್ಣುವು ಏಳು ಪ್ರಪಂಚಗಳನ್ನು ಹೊಂದಿದ ಈ ಬ್ರಹ್ಮಾಂಡವನ್ನು ಪಾಲಿಸುತ್ತಾನೆ. ಈ ಏಳು ಪ್ರಪಂಚಗಳು ಗಾಯತ್ರೀ ಮಂತ್ರದ ಏಳು ವ್ಯಾಹೃತಿಗಳಾಗಿವೆ. ವಾಸ್ತವದಲ್ಲಿ ಈ ಏಳು ಪ್ರಪಂಚಗಳು ಮನುಷ್ಯರ ಮಾನಸಿಕ ಪ್ರಜ್ಞೆಯ ಸ್ಥೂಲದಿಂದ ಸೂಕ್ಷ್ಮದವರೆಗಿನ ಏಳು ಸ್ತರಗಳನ್ನು ಪ್ರತಿನಿಧಿಸುತ್ತವೆ. ಕೆಳಸ್ತರದ ಮತ್ತು ಸ್ಥೂಲಸ್ತರದ ಪ್ರಜ್ಞೆಯು ಅತ್ಯಂತ ಕೆಳ ಪ್ರಪಂಚವಾದರೆ ಅತ್ಯುನ್ನತವಾದ ಸೂಕ್ಷ್ಮ ಪ್ರಜ್ಞೆಯು ಉಚ್ಛಸ್ಥಾಯಿಯಾದ ಪ್ರಪಂಚವಾಗಿದೆ. ಅಥವಾ ಬಹುಶಃ ಈ ಏಳು ಪ್ರಪಂಚಗಳು ಷಟ್ಚಕ್ರಗಳು (ಆರು ಚಕ್ರಗಳು) ಮತ್ತು ಸಹಸ್ರಾರವನ್ನು ಕುರಿತು ಉಲ್ಲೇಖಿಸಬಹುದು. ಎಲ್ಲಿಯವರೆಗೆ ಪ್ರಜ್ಞೆಯ ಸ್ತರವು ಮಾರ್ಪಾಡುಗಳನ್ನು ಹೊಂದಿ, ಪರಿಶುದ್ಧತೆ ಹೊಂದಿ ಉತ್ತಮವಾಗುವುದಿಲ್ಲವೋ ಅಲ್ಲಿಯವೆರೆಗೆ ಆತ್ಮಸಾಕ್ಷಾತ್ಕಾರವು ಸಾಧ್ಯವಿಲ್ಲ. ವಿಷ್ಣುವು ಈ ಪ್ರಪಂಚವನ್ನು ಕರ್ಮ ನಿಯಮದಂತೆ ಪರಿಪಾಲಿಸುತ್ತಾನೆ. ಅವನು ಒಂದೆಳೆಯಷ್ಟೂ ಸಹ ಈ ನಿಯಮವನ್ನು ಮೀರಲಾರ ಅಥವಾ ಸಾಧ್ಯವಾದರೂ ಸಹ ಅತಿಕ್ರಮಿಸನು. ವಿಷ್ಣುವು ಪರಪಾಲಿಸುವ ವಿವಿಧ ಪ್ರಪಂಚಗಳಲ್ಲಿ ವೈವಿಧ್ಯವಾದ ಹಾಗೂ ಪ್ರಮುಖವಾದ ಅಂಶಗಳಿರುತ್ತವೆ. ಉದಾಹರಣೆಗೆ ಭೂಮಿಯಲ್ಲಿ ಭೌತಿಕ ಕಣಗಳು (ಜಡ ವಸ್ತುಗಳು) ಪ್ರಧಾನವಾಗಿವೆ. ಉನ್ನತ ಸ್ತರಗಳು, ಜೀವ ಶಕ್ತಿಗಳು, ಭಾವನಾತ್ಮಕ ಶಕ್ತಿಗಳು ಮತ್ತು ಮಾನಸಿಕ ಶಕ್ತಿಗಳಿಂದ ಕೂಡಿರುತ್ತವೆ. ಈ ಏಳು ಪ್ರಪಂಚಗಳಲ್ಲಿ ಲಭ್ಯವಿರುವ ಶಕ್ತಿಯ ಪ್ರಮಾಣಗಳು ಕೆಳಸ್ತರದ ಪ್ರಪಂಚದಿಂದ ಮೇಲಿನ ಸ್ತರಗಳಿಗೆ ಹೋಗುವಾಗ ಸ್ಥೂಲದಿಂದ (ಜಡವಸ್ತುವಿನಿಂದ) ಪ್ರಾರಂಭವಾಗಿ ಸೂಕ್ಷ್ಮ ಹಾಗೂ ಉತ್ತಮವಾಗುತ್ತಾ ಹೋಗುತ್ತವೆ. ವಿಷ್ಣುವು ತನ್ನ ಶಯನ ಅಥವಾ ಯೋಗನಿದ್ರೆಗೆ ಹೆಸರಾಗಿದ್ದಾನೆ. ಆ ಪ್ರಸಿದ್ಧ ಭಂಗಿಯ ಅರ್ಥವು ಸರ್ವಾಂತರ್ಯಾಮಿಯಾಗಿರುವ ವಿಷ್ಣುವು ಪರಮಶಾಂತವಾದ ಈ ಬಾಹ್ಯ ಅಸ್ತಿತ್ವದಲ್ಲಿ (ಪ್ರಪಂಚದಲ್ಲಿ) ವಿರಮಿಸುತ್ತಾನೆ ಎನ್ನುವುದಾಗಿದೆ. ವಿಷ್ಣುವೆಂದರೇನೆ ಎಲ್ಲಾ ಕಡೆ ಇರುವವನು ಅಥವಾ ಸರ್ವಾಂತರ್ಯಾಮಿ ಎಂದರ್ಥ. ಶ್ರೀ ಅರವಿಂದರು ಹೀಗೆ ಹೇಳುತ್ತಾರೆ, "ನಮ್ಮ ಆತ್ಮದ ಕ್ರಿಯೆಗಳು ನಡೆಯುವ ವಿಶಾಲವಾದ ಆಂತರಿಕ ವಿಶ್ವಗಳನ್ನು ವಿಷ್ಣುವು ಅತಿಕ್ರಮಿಸುತ್ತಾನೆ. ನಾವು ಅವನಿಂದ ಮತ್ತು ಅವನೊಂದಿಗೆ ಅವನ ಪರಮೋನ್ನತ ಸ್ಥಾನಗಳಿಗೆ ಏರಿ ಅಲ್ಲಿ ನಮಗಾಗಿ ಕಾಯುತ್ತಿರುವ ಆತ್ಮೀಯ ಸ್ನೇಹಿತ ಮತ್ತು ಅತ್ಯಂತ ಸಂತೋಷವನ್ನು (ದೈವೀ ಆನಂದವನ್ನು) ಕೊಡುವ ದೇವರೆಡೆಗೆ ಸಾಗುತ್ತೇವೆ". ಈ ದೈವೀ ಸಂತೋಷವೇ ಪರಮಾನಂದ ಅಥವಾ ಬ್ರಹ್ಮಾನಂದವಾಗಿದೆ.

               ದೇವಿಯು ಈ ವಿಧವಾದ ಗೋವಿಂದ ಅಥವಾ ವಿಷ್ಣುವಿನ ರೂಪವಾಗಿದ್ದಾಳೆ.

 ******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 266-267 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.

Rating
No votes yet

Comments

Submitted by nageshamysore Sat, 07/20/2013 - 13:11

ಶ್ರೀಧರರೆ, ಲಲಿತಾ ಸಹಸ್ರನಾಮ ೨೬೬ -೨೬೭ರ ಸಾರ ಕವಿತಾ ಪಂಕ್ತಿಗಳು ತಮ್ಮ ಅವಗಾಹನೆ / ಪರಿಷ್ಕರಣೆಗೆ ಸಿದ್ದ :-) - ನಾಗೇಶ ಮೈಸೂರು

೨೬೬. ಗೋಪ್ತ್ರೀ 
ಸೃಷ್ಟಿಸಿ ಪ್ರಪಂಚವ ಮಾತೆ ಬ್ರಹ್ಮದ ಮೊದಲ ಲಕ್ಷಣ
ಬ್ರಹ್ಮಾಂಡದ ರಕ್ಷಣೆ ಪೋಷಣೆ ಮಾಡುವಳು ಅನುಕ್ಷಣ
ಶ್ರೀಮಾತೆ ಸಹಜ ಕರ್ತವ್ಯ ರಕ್ಷಣೆಯೆ ಸತ್ವ ಗುಣಲಕ್ಷಣ
ಬೆಳಕು ಸಾಮರಸ್ಯದೆ ವಿಶ್ವ ಸಂಗೋಪನೆ ಗೋಪ್ತ್ರೀ ಗುಣ!

೨೬೭. ಗೋವಿಂದ ರೂಪಿಣೀ 
ಗೋವಿಂದನಾಗಿ ವಿಷ್ಣು ರೂಪದಲಿ ದೇವೀ ಜಗತ್ರಕ್ಷಣೆಯ ಧರ್ಮ
ಲೌಕಿಕ ಸಿರಿ ಸಂಪದ ಸಂಕಷ್ಟಹರಣೆ ಲಕ್ಷ್ಮೀನಾರಾಯಣ ಮರ್ಮ
ಶಬ್ದಾತೀತ ವಿಷ್ಣುಗುಣ ಭೂಪರಿಪಾಲಕ ರಕ್ಷಕ ಮಹಾಪ್ರಳಯದೆ
ಜಲಾವೃತ್ತ ಇಳೆಯನೆತ್ತಿ ಗೋವಿಂದ ರೂಪಿಣೀ ಕಾಪಾಡಿದ ಶ್ರದ್ಧೆ!

ಶ್ರೀಧರರೆ, 'ವಿಷ್ಣುವಿನ ಕುರಿತ ಇನ್ನಷ್ಟು ವಿವರಗಳು' ಕವನವಾಗಿ ಬಂದ ರೀತಿ - ನಾಗೇಶ ಮೈಸೂರು

ವಿಷ್ಣುವಿನ ಕುರಿತಾಗಿ ಇನ್ನಷ್ಟು ವಿವರಗಳು 
----------------------------------------------------

ಗಾಯತ್ರೀ ಮಂತ್ರ ವಾಹೃತಿಗಳೇಳು ಪ್ರಪಂಚಗಳಂತೆ
ಆ ಸಪ್ತಲೋಕ ಬ್ರಹ್ಮಾಂಡ ಪಾಲಕ ವಿಷ್ಣುವೆ ವಾಸ್ತವದೆ
ಮಾನಸಿಕ ಪ್ರಜ್ಞೆಗೇಳು ಸ್ತರ ಸ್ಥೂಲದಿಂದ ಸೂಕ್ಷ್ಮವಂತೆ
ಕೆಳಸ್ಥೂಲದಿಂದತ್ಯುಚ್ಛ ಸ್ತರ ಸ್ಥಾಯಿಗಳ ಪ್ರಪಂಚವಂತೆ!

ಇರಬಹುದೀ ಸಪ್ತ ಲೋಕ ಷಟ್ಚಕ್ರ ಸಹಿತ ಸಹಸ್ರಾರ
ಪರಿಶುದ್ಧತೆ ಹೊಂದದೆಲೆ ಅಸಾಧ್ಯ ಆತ್ಮಸಾಕ್ಷಾತ್ಕಾರ
ಕರ್ಮ ನಿಯಮಾನುಸಾರವೆ ಪರಿಪಾಲನೆ ಲೆಕ್ಕಾಚಾರ
ಮೀರದತಿಕ್ರಮಿಸದ ಶಿಸ್ತೇ ವಿಷ್ಣು ಲೋಕಪಾಲನೆ ತರ!

ವಿಷ್ಣು ಪಾಲಿಸೊ ಪ್ರಪಂಚದಿ ವೈವಿಧ್ಯತೆ ಪ್ರಮುಖಾಂಶ 
ಭುವಿಗಿರುವಂತೆ ಭೌತಿಕ ಕಣ ಜಡವಸ್ತು ಪ್ರಧಾನಸ್ಪರ್ಶ
ಜೀವ ಭಾವನಾತ್ಮಕ ಮಾನಸಿಕಶಕ್ತಿ ಉನ್ನತ ಸ್ತರವಾಗಿ
ಸ್ಥೂಲದಿಂದೇರುತ ಸೂಕ್ಷ್ಮಕೆ ಶಕ್ತಿಪ್ರಮಾಣ ವೃದ್ಧಿಯಾಗಿ!

ಸರ್ವಾಂತರ್ಯಾಮಿ ವಿಷ್ಣುಶಯನ ಯೋಗನಿದ್ರಾಭಂಗಿ
ವಿರಮಿಸುತಲೀ ಬಾಹ್ಯ ಪ್ರಪಂಚದಲೆಲ್ಲೆಡೆ ಇರುವನಾಗಿ
ಅತಿಕ್ರಮಿಸಿ ಆತ್ಮದಾಂತರಿಕ ವಿಶ್ವ ನಡೆಸಿ ಪರಮೋಚ್ಛಕೆ
ವಿಷ್ಣು ಗೋವಿಂದ ರೂಪಿನ ಲಲಿತೆಯತ್ತ ಪರಮಾನಂದಕೆ!

ನಾಗೇಶರೆ,
ಕೆಳಗಿನ ಕೆಲವು ಅನುಮಾನಗಳು ಹಾಗು ಮುದ್ರಾರಾಕ್ಷಸನ ಹಾವಳಿಗಳು ನಿಮ್ಮ ಗಮನಕ್ಕೆ :)
೨೬೬. ಗೋಪ್ತ್ರೀ
ಸೃಷ್ಟಿಸಿ ಪ್ರಪಂಚವ ಮಾತೆ ಬ್ರಹ್ಮದ ಮೊದಲ ಲಕ್ಷಣ
=ಪ್ರಪಂಚವ ಸೃಷ್ಟಿಪ ಮಾತೆ ಬ್ರಹ್ಮದ ಮೊದಲ ಲಕ್ಷಣ?
ಬ್ರಹ್ಮಾಂಡದ ರಕ್ಷಣೆ ಪೋಷಣೆ ಮಾಡುವಳು ಅನುಕ್ಷಣ
ಶ್ರೀಮಾತೆ ಸಹಜ ಕರ್ತವ್ಯ ರಕ್ಷಣೆಯೆ ಸತ್ವ ಗುಣಲಕ್ಷಣ
=ಮಾತೆಯ ಸಹಜ ಕರ್ತವ್ಯ ರಕ್ಷಣೆಯೆ ಸತ್ವ ಗುಣಲಕ್ಷಣ
ಬೆಳಕು ಸಾಮರಸ್ಯದೆ ವಿಶ್ವ ಸಂಗೋಪನೆ ಗೋಪ್ತ್ರೀ ಗುಣ!
=ಈ ಸಾಲಿನ ಬೆಳಕು ಸಾಮರಸ್ಯದೆ ಅರ್ಥವಾಗಲಿಲ್ಲ, ಅದನ್ನು ಸ್ವಲ್ಪ ವಿವರಿಸಿ.
೨೬೭. ಗೋವಿಂದ ರೂಪಿಣೀ
ಗೋವಿಂದನಾಗಿ ವಿಷ್ಣು ರೂಪದಲಿ ದೇವೀ ಜಗತ್ರಕ್ಷಣೆಯ ಧರ್ಮ
ಗೋವಿಂದನಾಗಿ=ಗೋವಿಂದನಾಗಿಹ
ಲೌಕಿಕ ಸಿರಿ ಸಂಪದ ಸಂಕಷ್ಟಹರಣೆ ಲಕ್ಷ್ಮೀನಾರಾಯಣ ಮರ್ಮ
ಸಂಕಷ್ಟಹರಣೆ=ಸಂಕಷ್ಟಹರಣ
ಶಬ್ದಾತೀತ ವಿಷ್ಣುಗುಣ ಭೂಪರಿಪಾಲಕ ರಕ್ಷಕ ಮಹಾಪ್ರಳಯದೆ
ಜಲಾವೃತ್ತ ಇಳೆಯನೆತ್ತಿ ಗೋವಿಂದ ರೂಪಿಣೀ ಕಾಪಾಡಿದ ಶ್ರದ್ಧೆ!
ಜಲಾವೃತ್ತ=ಜಲಾವೃತ ಮಾಡಿ.

ಶ್ರೀಧರರೆ, ಬೆಳಕು ಮತ್ತು ಸಾಮರಸ್ಯಗಳು ಸತ್ವ ಗುಣದ ಲಕ್ಷಣಗಳು ಎಂಬ ಮೂಲಾರ್ಥ, ತಪ್ಪಾಗಿ ಸೇರಿಬಿಟ್ಟಿದೆ ಕಡೆ ಸಾಲಿನಲ್ಲಿ. ಅದಕ್ಕೆ ಅದನ್ನು ಬದಲಿಸಿ 'ಪೋಷಿಸುತೆಲ್ಲ ಧೇನು' ಎಂದಾಗಿಸಿದ್ದೇನೆ - 'ಧೇನು' ಇಡಿ ಜಗವೆನ್ನುವ ಅರ್ಥದಲ್ಲಿ ಬಳಸುತ್ತ. ನೀವು ತೋರಿಸಿದ ಮತ್ತಷ್ಟು ತಿದ್ದುಪಡಿಗಳನ್ನು ಸೇರಿಸಿದ ಮೇಲೆ ಈ ಕೆಳಗಿನ ರೂಪಕ್ಕೆ ಬಂದಿದೆ. ಈಗ ಸೂಕ್ತವೆನಿಸುತ್ತದೆಯೆ? - ನಾಗೇಶ ಮೈಸೂರು
೨೬೬. ಗೋಪ್ತ್ರೀ 
ಪ್ರಪಂಚವ ಸೃಷ್ಟಿಪ ಮಾತೆ ಬ್ರಹ್ಮದ ಮೊದಲ ಲಕ್ಷಣ
ಬ್ರಹ್ಮಾಂಡದ ರಕ್ಷಣೆ ಪೋಷಣೆ ಮಾಡುವಳು ಅನುಕ್ಷಣ
ಮಾತೆಯ ಸಹಜ ಕರ್ತವ್ಯ ರಕ್ಷಣೆಯೆ ಸತ್ವ ಗುಣಲಕ್ಷಣ
ಪೋಷಿಸುತೆಲ್ಲ ಧೇನು ವಿಶ್ವ ಸಂಗೋಪನೆ ಗೋಪ್ತ್ರೀ ಗುಣ!
೨೬೭. ಗೋವಿಂದ ರೂಪಿಣೀ 
ಗೋವಿಂದನಾಗಿಹ ವಿಷ್ಣು ರೂಪದಲಿ ದೇವೀ ಜಗದ ರಕ್ಷಣೆ ಧರ್ಮ
ಲೌಕಿಕ ಸಿರಿ ಸಂಪದ ಸಂಕಷ್ಟಹರಣ ಲಕ್ಷ್ಮೀನಾರಾಯಣ ಮರ್ಮ
ಶಬ್ದಾತೀತ ವಿಷ್ಣುಗುಣ ಭೂಪರಿಪಾಲಕ ರಕ್ಷಕ ಮಹಾಪ್ರಳಯದೆ
ಜಲಾವೃತ ಇಳೆಯನೆತ್ತಿ ಗೋವಿಂದ ರೂಪಿಣೀ ಕಾಪಾಡಿದ ಶ್ರದ್ಧೆ!