೫೯. ಶ್ರೀ ಲಲಿತಾ ಸಹಸ್ರನಾಮ ೧೮೬ರಿಂದ ೧೯೨ನೇ ನಾಮಗಳ ವಿವರಣೆ

೫೯. ಶ್ರೀ ಲಲಿತಾ ಸಹಸ್ರನಾಮ ೧೮೬ರಿಂದ ೧೯೨ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೧೮೬ - ೧೯೨

Nirapāyā निरपाया (186)

೧೮೬. ನಿರಪಾಯಾ

          ದೇವಿಯು ವಿನಾಶವಿಲ್ಲದವಳು; ಇದು ಪರಬ್ರಹ್ಮದ ಮೂಲ ಲಕ್ಷಣವಾಗಿದೆ. ಅಪಾಯವೆಂದರೆ ನಾಶ, ಮರಣ, ವಿನಾಶ ಮೊದಲಾದ ಅರ್ಥಗಳಿವೆ.

Niratyayā निरत्यया (187)

೧೮೭. ನಿರತ್ಯಯಾ

          ದೇವಿಯು ತನ್ನ ಮಿತಿಗಳನ್ನು ದಾಟಿ ಹೋಗುವುದಿಲ್ಲ. ಈಗಾಗಲೇ ನೋಡಿರುವಂತೆ ಆಕೆಯು ಭಗವಂತನ ನಿಯಮವಾದ ಕರ್ಮ ನಿಯಮದಂತೆ ಕಾರ್ಯನಿರ್ವಹಿಸುತ್ತಾಳೆ. ಕರ್ಮ ನಿಯಮವು ಅವಳಿಂದ ಪರಿಪಾಲಿಸಲ್ಪಡುತ್ತದೆ ಮತ್ತು ಆಕೆಯು ತನ್ನ ನಿಯಮಗಳನ್ನು ಮೀರಿ ನಡೆಯುವುದಿಲ್ಲ ತನ್ಮೂಲಕ ಆಕೆಯು ಇತರರಿಗೆ ಮಾದರಿಯಾಗಿ ನಿಲ್ಲುತ್ತಾಳೆ.

Durlabhā दुर्लभा (188)

೧೮೮. ದುರ್ಲಭಾ

          ದೇವಿಯನ್ನು ಹೊಂದುವುದು ಕಷ್ಟಸಾಧ್ಯ. ಈ ನಾಮವು ಅವಳನ್ನು ಹೊಂದುವುದು ಕಷ್ಟವೆಂದು ಹೇಳಿದ್ದರೂ ಕೂಡಾ ಆಕೆಯು ನಿಲುಕಲಾರದವಳೆಂದು ಹೇಳಿಲ್ಲ. ಆಕೆಯನ್ನು ಆಂತರಿಕ ಹುಡುಕಾಟ ಮತ್ತು ಅನ್ವೇಷಣೆಗಳಿಂದ ಹೊಂದಬಹುದಲ್ಲದೇ ಬಾಹ್ಯ ಆಚರಣೆಗಳಿಂದ ಅಲ್ಲ. ಅವಳನ್ನು ಹೊಂದಲು, ಒಬ್ಬನಿಗೆ ನಿಷ್ಠೆ ಇರಬೇಕು ಮತ್ತು ಧ್ಯಾನದ ಅವಿರತ ಅಭ್ಯಾಸವನ್ನು ಕೈಗೊಳ್ಳಬೇಕು; ತನ್ಮೂಲಕ ಉನ್ನತ ಮಟ್ಟದ ಪ್ರಜ್ಞೆಯು ಹೊಂದಲ್ಪಟ್ಟು ಅದರಿಂದ ಆಕೆಯ ಸಾಕ್ಷಾತ್ಕಾರವಾಗುತ್ತದೆ.

Durgamā दुर्गमा (189)

೧೮೯. ದುರ್ಗಮಾ

          ದೇವಿಯು ಸುಲಭವಾಗಿ ಹೊಂದಲ್ಪಡುವುದಿಲ್ಲ, ಆಕೆಯನ್ನು ಕಠಿಣ ಸಾಧನೆ ಅಥವಾ ಅಭ್ಯಾಸದ ಮೂಲಕವಷ್ಟೇ ಪಡೆಯಬಹುದು. ಸಾಧನೆ ಎಂದರೆ ದೇವಿಯ ದಿವ್ಯಪ್ರಕಾಶ ರೂಪದ ಮೇಲೆ ಧ್ಯಾನಿಸುವುದು. ಅವಳಿಗೆ ಮೂರು ರೂಪಗಳಿವೆ; ಸ್ಥೂಲ ಅಥವಾ ಭೌತಿಕ ರೂಪ, ಇದನ್ನು ಬಾಹ್ಯ ಆಚರಣೆಗಳ ಮೂಲಕ ಪೂಜಿಸಲಾಗುವುದು. ಎರಡನೆಯದು ಆಕೆಯ ಕಾಮಕಲಾ ರೂಪ ಮತ್ತು ಇದು ಅತಿ ಸೂಕ್ಷ್ಮ ರೂಪದಲ್ಲಿರುತ್ತದೆ ಮತ್ತು ಆಕೆಯ ಕುಂಡಲಿನೀ ರೂಪವು ಸೂಕ್ಷ್ಮಾತೀಸೂಕ್ಷ್ಮ ರೂಪವೆಂದು ಪರಿಗಣಿಸಲಾಗಿದೆ. ಆಕೆಯನ್ನು ಕೇವಲ ಬಾಹ್ಯಾಚರಣೆಗಳ ಮೂಲಕ ಹೊಂದಲಾಗುವುದಿಲ್ಲ. ಆಕೆಯ ಬಳಿಗೆ ಹೋಗಬೇಕೆಂದರೆ ಕಠಿಣ ಸಾಧನೆ ಮತ್ತು ಅವಳ ಸೂಕ್ಷ್ಮ ರೂಪಗಳ ಮೇಲೆ ಧ್ಯಾನವನ್ನು ಕೈಗೊಳ್ಳುವುದರಿಂದ ಸಾಧ್ಯವಾಗುತ್ತದೆ. ಆಕೆಯ ಪೂಜೆಯು ಮೊದಲು ಪೂಜೆ ಪುನಸ್ಕಾರಗಳಿಂದ ಪ್ರಾರಂಭವಾಗಿ ಅದನ್ನು ನಿಧಾನವಾಗಿ ಆಕೆಯ ಸೂಕ್ಷ್ಮಾತೀಸೂಕ್ಷ್ಮ ರೂಪದ ಮೇಲಿನ ಧ್ಯಾನವಾಗಿ ಮಾರ್ಪಡಿಸಿ ಕೊಳ್ಳಬೇಕು. ಒಮ್ಮೆ ಭಕ್ತನಲ್ಲಿ ಈ ರೀತಿಯಾದ ಬದಲಾವಣೆಯು ಉಂಟಾದರೆ ಆಕೆಯು ಅದುರ್ಗಮ ಎಂದರೆ ಆಕೆಯನ್ನು ಹೊಂದುವುದು ಸುಲಭ ಸಾಧ್ಯವಾಗುತ್ತದೆ.

Durgā दुर्गा (190)

೧೯೦. ದುರ್ಗಾ

          ಮಹಾನಾರಾಯಣ ಉಪನಿಷತ್ತಿನಲ್ಲಿ (ದುರ್ಗಾ ಸೂಕ್ತದಲ್ಲಿ) ದುರ್ಗೆಯ ಕುರಿತಾದ ಉಲ್ಲೇಖವಿದೆ, ದುರ್ಗಾ ಎಂದರೆ ಕಷ್ಟಗಳನ್ನು ಪರಿಹರಿಸುವವಳು. ದೇವಿಯ ದುರ್ಗಾ ರೂಪವನ್ನು ಬಹಳಷ್ಟು ಭಯಂಕರ ಮತ್ತು ಪ್ರಕಾಶವಾದ ಸ್ವಭಾವದ್ದಾಗಿ ಚಿತ್ರಿಸಲಾಗಿದೆ. ಯಾರು ದೇವಿಯಲ್ಲಿ ಆಶ್ರಯವನ್ನು ಪಡೆಯುತ್ತಾರೆಯೋ ಆಕೆಯು ಅವರನ್ನು ಕಷ್ಟಗಳಿಂದ ಪಾರು ಮಾಡುತ್ತಾಳೆ. ದುರ್ಗಾ ಸೂಕ್ತವನ್ನು ನಿಯಮಿತವಾಗಿ ಪಠಿಸುವುದರಿಂದ ಅದು ಕಷ್ಟಗಳನ್ನು ಪರಿಹರಿಸುತ್ತದೆ. ದುರ್ಗಾ ಸೂಕ್ತದ ಮೊದಲನೆಯ ಶ್ಲೋಕವಾದ ಮೃತ್ಯುಂಜಯ ಮಂತ್ರ (ತ್ರ್ಯಂಬಕಂ ಯಜಾಮಹೇ) ಮತ್ತು ಗಾಯತ್ರೀ ಮಂತ್ರ (ವ್ಯಾಹೃತಿಯನ್ನು ಹೊರತುಪಡಿಸಿ) ಇವೆರಡೂ ಒಟ್ಟಾಗಿ ನೂರು ಬೀಜಾಕ್ಷರಗಳನ್ನು (ಶತಾಕ್ಷರಿ) ಹೊಂದಿವೆ ಮತ್ತು ಇವನ್ನು ಪಠಿಸಿದಾಗ ಇವು ಎಲ್ಲಾ ವಿಧವಾದ ಯಾತನೆಗಳನ್ನು ದೂರ ಮಾಡುತ್ತವೆ. ದುರ್ಗಾ ಎನ್ನುವುದು ಮಾನಸಿಕವಾಗಿ ಮತ್ತು ಭೌತಿಕವಾಗಿ ಕಾಪಾಡುವ ದೇವಿಯ ಕ್ರಿಯೆಯನ್ನು ಪ್ರತಿನಿಧಿಸುತ್ತದೆ. ಸದೃಢವಾದ ಮಾನಸಿಕತೆ ಮತ್ತು ದೇಹ ಸೌಷ್ಟವವು ದೇವಿಯನ್ನು ಆಂತರ್ಯದಲ್ಲಿ ಕಂಡುಕೊಳ್ಳುವುದಕ್ಕೆ ಬಹು ಅವಶ್ಯಕವಾಗಿವೆ.

शताक्षरि मंत्र

त्र्यम्बकं यजामहे सुगन्धिं पुष्टिवर्धनम्।

उर्वारुकमिव बन्धनान् म्रित्योर्मुक्षिय मांरुतात्॥

तत् सवित्र् वरेण्यम्।भर्गो देवस्य धीमहि।

धियो यो नः प्रचोदयात्॥

जातवेदसे सुनवाम-सोम-मरातीयतो निदहाति वेदः।

स नः पर्षदति दुर्गाणि विश्व नावेव सिन्धुं दुरितात्यग्निः॥

ಶತಾಕ್ಷರಿ ಮಂತ್ರ

ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್|

ಉರ್ವಾರುಕಮಿವ ಬಂಧನಾನ್ ಮ್ರಿತ್ಯೋರ್ಮುಕ್ಷಿಯ ಮಾಂರುತಾತ್||

ತತ್ಸವಿತುರ್ವರೇಣ್ಯಮ್| ಭರ್ಗೋ ದೇವಸ್ಯ ಧೀಮಹಿ|

ಧಿಯೋ ಯೋ ನಃ ಪ್ರಚೋದಯಾತ್||

ಜಾತವೇದಸೇ ಸುನವಾಮ-ಸೋಮ-ಮರಾತೀಯತೋ ನಿದಹಾತಿ ವೇದಃ|

ಸ ನಃ ಪರ್ಷದತಿ ದುರ್ಗಾಣಿ ವಿಶ್ವ ನಾವೇವ ಸಿಂಧುಂ ದುರಿತಾತ್ಯಗ್ನಿಃ||

Duḥkhahantrī दुःखहन्त्री (191)

೧೯೧. ದುಃಖಹಂತ್ರೀ

           ದೇವಿಯು ತನ್ನ ಭಕ್ತರ ಯಾತನೆಗಳನ್ನು ಹೋಗಲಾಡಿಸುತ್ತಾಳೆ. ಸಂಸಾರವು ದುಃಖಕ್ಕೆ ಕಾರಣವಾಗಿದೆ. ಸಂಸಾರವೆಂದರೆ ಕಾಮ, ಮೋಹಗಳಿಂದ ಬಾಧಿತರಾಗುವುದೆಂದು ಅರ್ಥ. ಆದ್ದರಿಂದ ಕೃಷ್ಣನು ಭಗವದ್ಗೀತೆಯಲ್ಲಿ (೬.೨೩) ಹೀಗೆ ಹೇಳುತ್ತಾನೆ, "ಭೌತಿಕ ವಸ್ತುಗಳ ಸಂಪರ್ಕದಿಂದ ಹುಟ್ಟುವ ಎಲ್ಲಾ ವಿಧವಾದ ಯಾತನೆಗಳಿಗೆ ಇದುವೇ ನಿಜವಾದ ಮುಕ್ತಿ". ಸಂಸಾರವನ್ನು ಸಾಹರ ಅಥವಾ ಸಾಗರವೆಂದೂ ಕರೆಯುತ್ತಾರೆ. ಒಬ್ಬನು ಈ ಸಾಗರದಲ್ಲಿ ಮುಳುಗಿದರೆ ಅದನ್ನು ಈಜಿ ದಡ ಸೇರುವುದು ಬಹಳ ಕಷ್ಟಕರವಾದ ಕೆಲಸ. ಸಂಸಾರವನ್ನು ಒಬ್ಬನ ಕುಟುಂಬವೆಂದು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಯಾರು ಈ ಭೌತಿಕ ಪ್ರಪಂಚಕ್ಕೆ ಅಂಟಿಕೊಳ್ಳದೇ ಇರುತ್ತಾರೆಯೋ ಅವರ ದುಃಖಗಳನ್ನು ದೇವಿಯು ನಾಶವಾಗಿಸುತ್ತಾಳೆ. 

Sukhapradā सुखप्रदा (192)

೧೯೨. ಸುಖಪ್ರದಾ

           ದೇವಿಯು ಸಂತೋಷವನ್ನು ದಯಪಾಲಿಸುತ್ತಾಳೆ, ಯಾವಾಗ ದುಃಖವು ಇಲ್ಲವಾಗುವುದೋ ಆಗ ಉಳಿಯುವುದೇ ಆನಂದ. ಆದರೆ ಆಕೆಯು ತನ್ನ ಭಕ್ತರನ್ನು ಪುನರ್ಜನ್ಮ ಹೊಂದದಂತೆ ಕಾಪಾಡಿ ಅವರಿಗೆ ನಿರಂತರವಾದ ಸಂತೋಷವನ್ನು ದಯಪಾಲಿಸುತ್ತಾಳೆ. ಇದನ್ನೇ ದೇವಿಯು ತನ್ನ ಭಕ್ತರಿಗೆ ಕೊಡಮಾಡುವ ಒಂದು ಉತ್ಕೃಷ್ಟವಾದ ವರವೆಂದು ಪರಿಗಣಿತವಾಗಿದೆ. ಆದರೆ ದೇವಿಗೆ ತನ್ನ ಭಕ್ತರನ್ನು ನಿರ್ಧರಿಸುವಲ್ಲಿ ತನ್ನದೇ ಆದ ಮಾರ್ಗವಿದೆ. ಅಂತಹ ಭಕ್ತರು ಮಧುರತೆಯ ರುಚಿಯನ್ನು ನೋಡಿರಬೇಕು (ಆತ್ಮ ಸಾಕ್ಷಾತ್ಕಾರವು ಮಧುರವಾದದ್ದು) ಮತ್ತವರಿಗೆ ಮಧುರತೆಯ ಮೂಲವು ತಿಳಿದಿರಬೇಕು (ತೈತ್ತರೀಯ ಉಪನಿಷತ್ತು ೨.೭). ಅವರು ಆನಂದೀ ಭವತಿ ಅಂದರೆ ಸಂತೋಷವಾಗಿರುವವರು. ದೇವಿಯು ಕರ್ಮನಿಯಮಾನುಸಾರ ನಡೆಯುವವಳಾದ್ದರಿಂದ (೧೮೭ನೇ ನಾಮವಾದ ’ನಿರತ್ಯಯಾ’ವನ್ನು ನೋಡಿ) ಅವಳು ಭಕ್ತರನ್ನು ಆರಿಸುವ ವಿಧಾನವು ಸಂಪೂರ್ಣವಾಗಿ ಅವರ ಸಾಧನೆಯನ್ನು ಅವಲಂಭಿಸಿದೆ. ಅಂತಹ ಸಾಧಕರಿಗೆ ಮಾತ್ರವೇ ಆಕೆಯು ಪುನರ್ಜ್ಮನವನ್ನು ಹೊಂದದೇ ಇರುವ ಸಂತೋಷವನ್ನು ಕರುಣಿಸುತ್ತಾಳೆ.

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 186-192 http://www.manblunder.com/2009/09/lalitha-sahasranamam-186-192.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
Average: 5 (1 vote)

Comments

Submitted by nageshamysore Fri, 07/05/2013 - 18:26

ಶ್ರೀಧರರೆ, ೧೮೬ - ೧೯೨ ಅವಗಾಹನೆ, ಪರಿಷ್ಕರಣೆಗೆ ಸಿದ್ದ :-) - ನಾಗೇಶ ಮೈಸೂರು

ಲಲಿತಾ ಸಹಸ್ರನಾಮ ೧೮೬ - ೧೯೨
------------------------------------------

೧೮೬. ನಿರಪಾಯಾ
ವಿನಾಶರಾಹಿತ್ಯತೆ ಪರಬ್ರಹ್ಮ ಮೂಲ ಲಕ್ಷಣ
ಅಪಾಯಗಳೆಲ್ಲವ ಮೀರಿದ ಬ್ರಹ್ಮ ನಿರ್ಗುಣ
ವಿನಾಶಾತೀತ ದೇವಿಯೆ ನಿರಪಾಯಾ ಲಲಿತೆ
ನಾಶ ವಿನಾಶ ಮರಣಾ ಬ್ರಹ್ಮದಿಂದಲೆ ಬಂತೆ!

೧೮೭. ನಿರತ್ಯಯಾ
ಮಿತಿ ದಾಟದ ವೃತ್ತಿಪರತೆ ಸರ್ವದಾ ಕರ್ತವ್ಯ ನಿರತೆ
ಭಗವಂತನ ನಿಯಮದೆ ಕರ್ಮ ಕಾರ್ಯ ನಿರ್ವಹಿಸುತೆ
ಮಾದರಿಯಾಗುತೆ ಮಾಡೆಲ್ಲ ಕರ್ಮ ಪರಿಪಾಲನೆ ಸದಾ
ಅನುಕರಿಸೆ ಪ್ರೇರೇಪಿಸಿ ಜಗವ ಮುನ್ನಡೆಸುವ ನಿರತ್ಯಯಾ!

೧೮೮. ದುರ್ಲಭಾ
ಅಂತರಿಕ ಹುಡುಕಾಟ-ಅನ್ವೇಷಣೆಗಷ್ಟೆ ಲಭ್ಯವೆ ಲಲಿತೆ
ಬಾಹ್ಯಾಚರಣೆ ಮೀರಿದ ನಿಷ್ಠೆ ಧ್ಯಾನಗಳವಿರತ ಬದ್ಧತೆ
ಉನ್ನತ ಪ್ರಜ್ಞೆಗೆ ಶ್ರಮಿಸುತ ಗಳಿಸಿದರಷ್ಟೆ ಸಾಕ್ಷಾತ್ಕಾರ
ದೇವಿಯ ಹೊಂದುವಾ ಕಷ್ಟ ಹೂವ್ವೆತ್ತಿದಂತೆ ಪರಿಹಾರ!

೧೮೯. ದುರ್ಗಮಾ
ಕಠಿಣ ಸಾಧನೆಯತನಕ ದುರ್ಗಮಾ ಒಲಿಯಳೆ ದೇವಿ
ಸ್ಥೂಲ ರೂಪದ ಪೂಜೆ ಮೊದಲ ಮೆಟ್ಟಿಲಾಗಿಸಿ ತಡವಿ
ಹಂತಂತ ಮೇಲೇರಿಸಿ ಸೂಕ್ಷ್ಮ ಕಾಮಕಲಾರೂಪ ಪೂಜೆ
ಸೂಕ್ಷಾತಿಸೂಕ್ಷ್ಮ ಧ್ಯಾನ ಜಾಗೃತಿ ಕುಂಡಲಿನಿ ಜತೆ ಹೆಜ್ಜೆ!

೧೯೦. ದುರ್ಗಾ
ಸದೃಢ ಮಾನಸಿಕತೆ ದೇಹಸೌಷ್ಟವ ಬೇಕು ಕಾಣೆ ದೇವಿಯ
ಮಾನಸಿಕ ಭೌತಿಕ ಕಾಪಿಡೊ ಕ್ರಿಯ ತೆರೆಸಿಡುವ ಆಂತರ್ಯ
ಕಷ್ಟಕೋಟಲೆ ಪರಿಹಾರಿಣಿ ದುರ್ಗಿ ಪಠಿಸೆ ಸೂಕ್ತಿ ನಿಯಮಿತ
ಶತಾಕ್ಷರಿಯುಕ್ತ ಮೃತ್ಯುಂಜಯ ಗಾಯತ್ರಿ ಯಾತನಾಮುಕ್ತ!

೧೯೧. ದುಃಖ ಹಂತ್ರೀ
ತಾವರೆಯೆಲೆಗಂಟದ ನೀರಾಗಿರೆ ಭೌತಿಕ ಜಗದೆ ಭಕ್ತ
ತೊಡೆದೆಸೆಯುವಳು ಯಾತನೆ-ದುಃಖ ದೇವೀಲಲಿತ
ಭೌತಿಕ ಕಾಮ ಮೋಹ ಭಾಧಿಸೆ ಸಂಸಾರದ ದುಃಖ
ಸಾಗರದಿ ಮುಳುಗಿಸದೆ ಈಜಿಸಿ ದಡ ಸೇರಿಸೊ ಲೆಕ್ಕ!

೧೯೨.ಸುಖಪ್ರದಾ
ದುಃಖವಿಲ್ಲದ ಶೇಷ ಕೊನೆಗುಳಿಯುವುದೆ ಸಂತೋಷ
ಅರ್ಹ ಭಕ್ತಗೆ ದಯಪಾಲಿಸುತ ದೇವಿ ಸುಖಪ್ರದಾರ್ಷ
ಮಾಧುರ್ಯರುಚಿ ಮೂಲವರಿತ ಭಕ್ತ ಆನಂದ ಅಪಾರ
ಆಯ್ಕೆ ಕರ್ಮಾನುಸಾರ ಸಾಧಕಗಿರೆ ಜ್ಞಾನಸಾಕ್ಷಾತ್ಕಾರ!

Submitted by makara Sun, 07/07/2013 - 12:12

In reply to by nageshamysore

೧೮೨-೧೮೬ರ ಕವನಗಳ ಕುರಿತು
ನಾಗೇಶರೆ,
ಸ್ವಲ್ಪ ನಿಧಾನವಾಗಿ ಓದಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆಯಿರಲಿ. ಕಾವ್ಯಗಳು ಸಾರವನ್ನು ಸರಿಯಾಗಿ ಹಿಡಿದಿಟ್ಟಿವೆ. ಕೆಳಗಿನ ಒಂದರೆಡು ಶಬ್ದಗಳನ್ನು ಸರಿಪಡಿಸಿದರೆ ಇನ್ನೂ ಚೆನ್ನಾಗಿರುತ್ತದೆ.

೧೮೮. ದುರ್ಲಭಾ
ಅಂತರಿಕ ಹುಡುಕಾಟ-ಅನ್ವೇಷಣೆಗಷ್ಟೆ ಲಭ್ಯವೆ ಲಲಿತೆ
ಲಭ್ಯವೆ=ಲಭ್ಯಳು ಅಥವಾ ಲಭ್ಯವು
ಬಾಹ್ಯಾಚರಣೆ ಮೀರಿದ ನಿಷ್ಠೆ ಧ್ಯಾನಗಳವಿರತ ಬದ್ಧತೆ
ಉನ್ನತ ಪ್ರಜ್ಞೆಗೆ ಶ್ರಮಿಸುತ ಗಳಿಸಿದರಷ್ಟೆ ಸಾಕ್ಷಾತ್ಕಾರ
ದೇವಿಯ ಹೊಂದುವಾ ಕಷ್ಟ ಹೂವ್ವೆತ್ತಿದಂತೆ ಪರಿಹಾರ!
ಕಡೆಯ ಸಾಲು ಪ್ರಾಸವೇನೋ ಸರಿಯಾಗಿದೆ; ಆದರೂ ಸ್ವಲ್ಪ ಗೋಜಲೆನಿಸುತ್ತದೆ ಏನಾದರೂ ಪರಿಷ್ಕರಣೆ ಸಾಧ್ಯವೇ ನೋಡಿ.

೧೯೨.ಸುಖಪ್ರದಾ
ದುಃಖವಿಲ್ಲದ ಶೇಷ ಕೊನೆಗುಳಿಯುವುದೆ ಸಂತೋಷ
ಅರ್ಹ ಭಕ್ತಗೆ ದಯಪಾಲಿಸುತ ದೇವಿ ಸುಖಪ್ರದಾರ್ಷ
ಸುಖಪ್ರದಾರ್ಷ=ಇಲ್ಲಿ ಸಂಧಿ ಸಮಸ್ಯೆಯುಂಟಾಗಬಹುದು ಎನಿಸುತ್ತದೆ. ಅದರ ಬದಲು ಸುಖಪ್ರಹರ್ಷ ಸರಿಹೋಗುತ್ತದೇನೋ ನೋಡಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Sun, 07/07/2013 - 13:01

In reply to by makara

ಶ್ರೀಧರರೆ 188, 192 ಸಾಲುಗಳನ್ನೆ ತುಸು ಮಾರ್ಪಾಡಿಸಿದ್ದೇನೆ. ಈಗ ಸಮಂಜಸವಾಗಿ ಕಾಣುವುದೆ? - ನಾಗೇಶ ಮೈಸೂರು (ತಡದ ಬಗ್ಗೆ ಚಿಂತೆ ಬೇಡ - ಒಟ್ಟಾರೆ ಗುಣಮಟ್ಟ ಚೆನ್ನಾಗಿ ಬಂದರೆ ಎಲ್ಲರಿಗು ಹೆಚ್ಚು ಇಷ್ಟವಾಗುತ್ತದೆ!)

೧೮೮. ದುರ್ಲಭಾ
ಅಂತರಿಕ ಹುಡುಕಾಟ-ಅನ್ವೇಷಣೆಗಷ್ಟೆ ಲಭ್ಯಳು ಲಲಿತೆ
ಬಾಹ್ಯಾಚರಣೆ ಮೀರಿದ ನಿಷ್ಠೆ ಧ್ಯಾನಗಳವಿರತ ಬದ್ಧತೆ
ಉನ್ನತ ಪ್ರಜ್ಞೆಗೆ ಶ್ರಮಿಸುತ ಗಳಿಸಿದರಷ್ಟೆ ಸಾಕ್ಷಾತ್ಕಾರ
ನಿಲುಕುತ ನೈಜ್ಯ ಭಕ್ತರಿಗೆ ಹೂವ್ವಿನ ಜತೆ ನಾರಿನ ತರ!

೧೯೨.ಸುಖಪ್ರದಾ
ದುಃಖವಿಲ್ಲದ ಶೇಷ ಕೊನೆಗುಳಿಯುವುದೆ ಸಂತೋಷ
ಅರ್ಹ ಭಕ್ತಗೆ ಸುಖಪ್ರದಾ ದಯಪಾಲಿಸಿ ಅಮಿತಾರ್ಷ
ಮಾಧುರ್ಯರುಚಿ ಮೂಲವರಿತ ಭಕ್ತ ಆನಂದ ಅಪಾರ
ಆಯ್ಕೆ ಕರ್ಮಾನುಸಾರ ಸಾಧಕಗಿರೆ ಜ್ಞಾನಸಾಕ್ಷಾತ್ಕಾರ!

Submitted by makara Sun, 07/07/2013 - 18:24

In reply to by nageshamysore

೧೮೮-೧೯೨ರ ಮರು ಪರಿಷ್ಕರಣೆಯ ಕುರಿತು

೧೮೮. ದುರ್ಲಭಾ
ಅಂತರಿಕ ಹುಡುಕಾಟ-ಅನ್ವೇಷಣೆಗಷ್ಟೆ ಲಭ್ಯಳು ಲಲಿತೆ
ಬಾಹ್ಯಾಚರಣೆ ಮೀರಿದ ನಿಷ್ಠೆ ಧ್ಯಾನಗಳವಿರತ ಬದ್ಧತೆ
ಉನ್ನತ ಪ್ರಜ್ಞೆಗೆ ಶ್ರಮಿಸುತ ಗಳಿಸಿದರಷ್ಟೆ ಸಾಕ್ಷಾತ್ಕಾರ
ನಿಲುಕುತ ನೈಜ್ಯ ಭಕ್ತರಿಗೆ ಹೂವ್ವಿನ ಜತೆ ನಾರಿನ ತರ!
ಇದರಲ್ಲಿ ಮೊದಲಿನ ಮೂರು ಸಾಲುಗಳು ಓಕೆ ಮತ್ತು ಕಡೆಯ ಸಾಲು ಇನ್ನಷ್ಟು ಗೊಂದಲವನ್ನೇ ಹುಟ್ಟು ಹಾಕುತ್ತಿದೆ ಎನಿಸುತ್ತಿದೆ. ಮೊದಲ ಬಾರಿ ಬರೆದದ್ದನ್ನೇ ಸ್ವಲ್ಪ ಬದಲಾಯಿಸಲು ಸಾಧ್ಯವೇ ನೋಡಿ. ಒಟ್ಟಾರೆಯಾಗಿ ನಿಮ್ಮ ಆಶಯದಂತೆ ದೇವಿಯನ್ನು ಹೊಂದುವ ಕಷ್ಟವು ಹೂವು ಎತ್ತಿದಂತೆ ಸರಳವಾಗಿ ಪರಿಷ್ಕಾರವಾಗುತ್ತದೆ ಎನ್ನುವ ಅರ್ಥ ಬರಬೇಕು. ಎರಡನೇ ಸವರಣೆಯಲ್ಲಿ ದೇವಿಯನ್ನು ನಾರಿಗೆ ಹೋಲಿಸಿದಂತಾಗುತ್ತದೆಯೇನೋ ಅನಿಸುತ್ತಿದೆ.

ಉಳಿದಂತೆ ೧೯೨.ಸುಖಪ್ರದಾ
ದುಃಖವಿಲ್ಲದ ಶೇಷ ಕೊನೆಗುಳಿಯುವುದೆ ಸಂತೋಷ
ಅರ್ಹ ಭಕ್ತಗೆ ಸುಖಪ್ರದಾ ದಯಪಾಲಿಸಿ ಅಮಿತಾರ್ಷ

ಈ ಎರಡು ಸಾಲುಗಳು ಬಹಳ ಅತ್ಯುತ್ತಮವಾಗಿ ಮೂಢಿ ಬಂದಿವೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Sun, 07/07/2013 - 19:21

In reply to by makara

ಶ್ರೀಧರರೆ, ನಾನು ತಪ್ಪಾಗಿ ಅರ್ಥೈಸಿಕೊಂಡು ಸಾಲೆ ಬದಲಿಸಿಬಿಟ್ಟೆ :-) ಈಗಿನ ಪುನರ್ಪರಿಷ್ಕರಣೆ ಹೊಂದಿಕೆಯಾದೀತೆ ನೋಡಿ? ( ನಮಗೆ ಪಂಕ್ತಿಗಳೆ ಇಷ್ಟು ದುರ್ಲಭವಾದರೆ, ಅವಳನ್ನು ಹೊಂದುವುದು ಇನ್ನೆಷ್ಟು ದುರ್ಲಭವೆಂದು ಅರ್ಥವಾಗುತ್ತಿದೆ!)

೧೮೮. ದುರ್ಲಭಾ
ಅಂತರಿಕ ಹುಡುಕಾಟ-ಅನ್ವೇಷಣೆಗಷ್ಟೆ ಲಭ್ಯಳು ಲಲಿತೆ
ಬಾಹ್ಯಾಚರಣೆ ಮೀರಿದ ನಿಷ್ಠೆ ಧ್ಯಾನಗಳವಿರತ ಬದ್ಧತೆ
ಉನ್ನತ ಪ್ರಜ್ಞೆಗೆ ಶ್ರಮಿಸುತ ಗಳಿಸಿದರಷ್ಟೆ ಸಾಕ್ಷಾತ್ಕಾರ
ಕಾಠಿಣ್ಯಗಮ್ಯ ಕೃಪೆಯಿಡೆ ಲಲಿತೆ ಹೂವ್ವೆತ್ತಿದಂತೆ ಪರಿಹಾರ!

ಈ ಬಾರಿ ಅಂತಿಮ ಕೊಂಡಿಯನ್ನು ಸೇರಿಸಿಬಿಟ್ಟಿದ್ದೇನೆ. ಮತ್ತೆ ಪರಿಷ್ಕರಣೆಯಾದರೂ ಕೊಂಡಿಯೇನೂ ಬದಲಾಗದ ಕಾರಣ.

https://ardharaatriaalaapagalu.wordpress.com/%e0%b3%ab%e0%b3%af-%e0%b2%…

- ನಾಗೇಶ ಮೈಸೂರು

Submitted by makara Sun, 07/07/2013 - 19:27

In reply to by nageshamysore

ಅಂತಿಮವಾಗಿ ಲಲಿತಾಂಬಿಕೆ ಈಗ ಕೃಪೆ ತೋರಿ ನಿಮ್ಮನ್ನು ಸರಿದಾರಿಯಲ್ಲಿ ನಡೆಸಿದ್ದಾಳೆ, ಚಿಂತಿಸಬೇಡಿ ನಾಗೇಶರೆ. ದೇವಿಯನ್ನು ಹೊಂದುವುದು ದುರ್ಗಮವಾದರೂ ಅಸಾಧ್ಯವಾದುದಲ್ಲ ಅಲ್ಲವೇ. ಖಂಡಿತ ದೇವಿಯ ಕೃಪೆ ನಿಮ್ಮ ಮೇಲಿದೆ; ಚಿಂತಿಸಬೇಡಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by makara Thu, 07/11/2013 - 19:19

In reply to by bhalle

ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ ಭಲ್ಲೇಜಿ! ದುರ್ಗಮಾ ಇರುವಾಗ ನಿರ್ಗಮನವೂ ಸುಗುಮವಾಗಿರುತ್ತದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by makara Tue, 07/09/2013 - 18:51

ನಾಮ ೧೯೦ರಲ್ಲಿ ಪ್ರಸ್ತಾವಿಸಿರುವ ಶತಾಕ್ಷರಿಯ ಕುರಿತು ಕೆಲವೊಂದು ಪರಿಷ್ಕರಣೆಗಳ ಕುರಿತು
ಆತ್ಮೀಯರೆ,
ದುರ್ಗಾ ಸೂಕ್ತದ ಮೊದಲನೆಯ ಶ್ಲೋಕವಾದ ಮೃತ್ಯುಂಜಯ ಮಂತ್ರ (ತ್ರ್ಯಂಬಕಂ ಯಜಾಮಹೇ) ಮತ್ತು ಗಾಯತ್ರೀ ಮಂತ್ರ (ವ್ಯಾಹೃತಿಯನ್ನು ಹೊರತುಪಡಿಸಿ) ಇವೆರಡೂ ಒಟ್ಟಾಗಿ ನೂರು ಬೀಜಾಕ್ಷರಗಳನ್ನು (ಶತಾಕ್ಷರಿ) ಹೊಂದಿವೆ ಮತ್ತು ಇವನ್ನು ಪಠಿಸಿದಾಗ ಇವು ಎಲ್ಲಾ ವಿಧವಾದ ಯಾತನೆಗಳನ್ನು ದೂರ ಮಾಡುತ್ತವೆ. ...ತಪ್ಪು.

ದುರ್ಗಾ ಸೂಕ್ತದ ಮೊದಲನೆಯ ಶ್ಲೋಕವಾದ ಮಹಾ ಮೃತ್ಯುಂಜಯ ಮಂತ್ರ (ತ್ರ್ಯಂಬಕಂ ಯಜಾಮಹೇ - ೩೨ ಅಕ್ಷರಗಳು) ಮತ್ತು ಗಾಯತ್ರೀ ಮಂತ್ರ (ವ್ಯಾಹೃತಿಯನ್ನು ಹೊರತುಪಡಿಸಿ - ೨೪ ಅಕ್ಷರಗಳು) ಮತ್ತು ದುರ್ಗಾ ಸೂಕ್ತದ ಮೊದಲನೇ ಶ್ಲೋಕ (೪೪ ಅಕ್ಷರಗಳು) ಇವೆಲ್ಲವೂ ಒಟ್ಟಾಗಿ ನೂರು ಬೀಜಾಕ್ಷರಗಳನ್ನು (೩೨+೨೪+೪೪=೧೦೦ ಹೀಗೆ ಶತಾಕ್ಷರಿ) ಹೊಂದಿವೆ ಮತ್ತು ಇವನ್ನು ಪಠಿಸಿದಾಗ ಇವು ಎಲ್ಲಾ ವಿಧವಾದ ಯಾತನೆಗಳನ್ನು ದೂರ ಮಾಡುತ್ತವೆ....ಒಪ್ಪು.

ಮೇಲಿನ ಹೇಳಿಕೆಯಂತೆ ಪ್ರಕಾರ ಮೂಲ ಲೇಖಕರು ಕೊಟ್ಟಿರುವ ಶತಾಕ್ಷರೀ ಮಂತ್ರವನ್ನು ವಿಭಜಿಸಿದಾಗ ಅದು ಈ ಕೆಳಗಿನಂತಾಗುತ್ತದೆ:
शताक्षरि मंत्र
ಮಹಾಮೃತ್ಯುಂಜಯ ಮಂತ್ರ (೩೨ ಅಕ್ಷರಗಳು)
त्र्यम्बकं यजामहे सुगन्धिं पुष्टिवर्धनम्। = 15
3+4+3+5=15
उर्वारुकमिव बन्धनान् म्रित्योर्मुक्षिय मांरुतात्॥ = 17
6+3+5+3=17

ಗಾಯತ್ರೀ ಮಂತ್ರ
तत् सवितुर्वरेण्यम्। भर्गो देवस्य धीमहि। = 15
1+6+2+3+3=15
धियो यो नः प्रचोदयात्॥
2+1+1+4=8

ದುರ್ಗಾಸೂಕ್ತಿ
जातवेदसे सुनवाम-सोम-मरातीयतो निदहाति वेदः। = 22
5+4+2+5+4+2=22
स नः पर्षदति दुर्गाणि विश्वा नावेव सिन्धुं दुरिताऽत्यग्निः॥ = 21
1+1+4+3+2+3+2+5=21

ಶತಾಕ್ಷರಿ ಮಂತ್ರ
ಮಹಾಮೃತ್ಯುಂಜಯ ಮಂತ್ರ (೩೨ ಅಕ್ಷರಗಳು)
ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್|
3+4+3+5=15
ಉರ್ವಾರುಕಮಿವ ಬಂಧನಾನ್ ಮ್ರಿತ್ಯೋರ್ಮುಕ್ಷಿಯ ಮಾಂರುತಾತ್||
6+3+5+3=17

ಗಾಯತ್ರೀ ಮಂತ್ರ (೨೪ ಅಕ್ಷರಗಳಾಗಬೇಕು)
ತತ್ಸವಿತುರ್ವರೇಣ್ಯಮ್| ಭರ್ಗೋ ದೇವಸ್ಯ ಧೀಮಹಿ|
1+6+2+3+3=15
ಧಿಯೋ ಯೋ ನಃ ಪ್ರಚೋದಯಾತ್||
2+1+1+4=8

ದುರ್ಗಾಸೂಕ್ತಿ (೪೪ ಅಕ್ಷರಗಳಾಗಬೇಕು)
ಜಾತವೇದಸೇ ಸುನವಾಮ-ಸೋಮ-ಮರಾತೀಯತೋ ನಿದಹಾತಿ ವೇದಃ|
5+4+2+5+4+2=22
ಸ ನಃ ಪರ್ಷದತಿ ದುರ್ಗಾಣಿ ವಿಶ್ವ ನಾವೇವ ಸಿಂಧುಂ ದುರಿತಾತ್ಯಗ್ನಿಃ||
1+1+4+3+2+3+2+5=21

ವಾಚಕರಲ್ಲಿ ಯಾರಿಗಾದರೂ ಗಾಯತ್ರೀ ಛಂದಸ್ಸು ಮತ್ತು ಅದು ಹೇಗೆ ೨೪ ಅಕ್ಷರಗಳನ್ನು ಹೊಂದಿದೆ ಎನ್ನುವುದರ ಕುರಿತಾಗಿ ತಿಳಿದಿದ್ದರೆ; ನಾನು ಎಲ್ಲಿ ತಪ್ಪಿದ್ದೇನೆ ಎನ್ನುವುದನ್ನು ತಿಳಿಸಿಕೊಡಬೇಕಾಗಿ ಪ್ರಾರ್ಥನೆ. ಅದೇ ವಿಧವಾಗಿ ದುರ್ಗಾಸೂಕ್ತಿಯ ಮಂತ್ರದಲ್ಲೇನಾದರೂ ತಪ್ಪಿದ್ದರೆ ಸರಿಪಡಿಸಬೇಕಾಗಿ ಪ್ರಾರ್ಥನೆ.

ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಬಹುಶಃ ಇದರ ಕುರಿತು ನಾಗೇಶರಾಗಲಿ, ಹಂಸಾನಂದಿಯವರಾಗಲಿ ಅಥವಾ ಕೃಷ್ಣ ಬೊಳುಂಬುರವರಾಗಲೀ ಸೂಕ್ತ ಉತ್ತರ ಕೊಡಬಹುದೆಂದು ಭಾವಿಸುತ್ತೇನೆ. ಅಂದಹಾಗೆ ಇದು ಗಣೇಶ್‌ಜಿಯವರ ಕಣ್ಣಿಗೆ ಬಿದ್ದಿಲ್ಲದೇ ಇರುವುದು ಸೋಜಿಗದ ಸಂಗತಿಯಲ್ಲವೇ ಪಾರ್ಥ ಸರ್!

Submitted by ಗಣೇಶ Thu, 07/11/2013 - 08:02

In reply to by makara

ಶ್ರೀಧರ್‌ಜಿ,
ಗಾಯತ್ರಿ ಛಂದಸ್ಸು, ಮಾತ್ರೆ ...ಇತ್ಯಾದಿ ಗೊತ್ತಿಲ್ಲ. ೧೫+೮=೨೩, ೨೪ ಯಾಕಿಲ್ಲಾ ಅಂತಲ್ವಾ? ಪ್ರಾರಂಭದಲ್ಲಿ ಒಂದು "ಓಂ" ಸೇರಿಸಿಬಿಡಿ.:)
>>>ಉರ್ವಾರುಕಮಿವ ಬಂಧನಾನ್ ಮ್ರಿತ್ಯೋರ್ಮುಕ್ಷಿಯ ಮಾಂರುತಾತ್||
-ಲೆಕ್ಕ ಸರಿ ಇದೆ. ಶ್ಲೋಕ- ..."ಮೃತ್ಯೋರ್ಮುಕ್ಷೀಯ ಮಾಮೃತಾತ್ " ಆಗಬೇಕು.
ದುರ್ಗಾ ಸೂಕ್ತಿ ಸಹ ಲೆಕ್ಕ ಸರಿ ಇದೆ. ವಿಂಗಡಿಸಿದ್ದು(ಅಕ್ಷರ ಲೆಕ್ಕ ಮಾಡಲು ವಿಂಗಡಿಸಿದ್ದಿರಬಹುದು) ಸ್ವಲ್ಪ ಸರಿ ಆಗಬೇಕು-
>>>ಜಾತವೇದಸೇ ಸುನವಾಮ-ಸೋಮ-ಮರಾತೀಯತೋ ನಿದಹಾತಿ ವೇದಃ|
--...ಸೋಮಮರಾತೀ ಯತೋ..
>>>ಸ ನಃ ಪರ್ಷದತಿ ದುರ್ಗಾಣಿ ವಿಶ್ವ ನಾವೇವ ಸಿಂಧುಂ ದುರಿತಾತ್ಯಗ್ನಿಃ||
->...ವಿಶ್ವಾನಾವೇವ...;
**************
ಎಲ್ಲೋ ಮಳೆ ಬರುವುದು. ನಮ್ಮಲ್ಲಿ ಕರೆಂಟು ತೆಗೆಯುವರು.:( ೨-೩ ದಿನದಿಂದ ನಮ್ಮಲ್ಲಿ ನಾನು ಸಂಪದ ಓದುವ ಸಮಯದಲ್ಲೇ ಕರೆಂಟು ಕೈಕೊಡುತ್ತಿದೆ. ಇದನ್ನು ನಿನ್ನೆಯೇ ಓದಿ ಪ್ರತಿಕ್ರಿಯೆ ಬರೆಯಲು ಎರಡು ಸಲ ( ೧೨-೩೦ ವರೆಗೆ) ಪ್ರಯತ್ನಿಸಿದೆ.:(
ಅದಕ್ಕೆ ಈದಿನ ಕೆಲಸಕ್ಕೆ ಹೋಗುವ ಮೊದಲೇ ಬರೆದಿರುವೆ.

Submitted by nageshamysore Thu, 07/11/2013 - 09:27

In reply to by ಗಣೇಶ

ಗಣೇಶ್ ಜಿ, ಸದ್ಯ ನೀವು ಉತ್ತರ ಸೇರಿಸಿದಿರಲ್ಲ! ಇದರ ಗಂಧ ಗಾಳಿಯೂ ಗೊತ್ತಿಲ್ಲದ ನನ್ನ ಹೆಸರನ್ನು ಬೇರೆ ಸೇರಿಸಿಬಿಟ್ಟಿದ್ದರು ಶ್ರೀಧರರು!

@ಶ್ರೀಧರರೆ, ಈ ವಿವರಣೆಯ ನಂತರ ಕವನದಲ್ಲೇನಾದರೂ ಬದಲಾವಣೆ ಬೇಕಾದೀತೆ? ಯಾಕೆಂದರೆ ಕಡೆ ಸಾಲಿನಲ್ಲಿ ಬರಿ ಗಾಯತ್ರಿ ಮೃತ್ಯುಂಜಯದ ಹೆಸರು ಮಾತ್ರವಿದೆ, ದುರ್ಗಾ - ಸೇರಿಲ್ಲ.

- ನಾಗೇಶ ಮೈಸೂರು

Submitted by makara Thu, 07/11/2013 - 19:28

In reply to by nageshamysore

@ಗಣೇಶ್‌ಜಿ,
ನಿಮ್ಮ ಸರಳ ವಿವರಣೆಗೆ ಧನ್ಯವಾದಗಳು. ದುರ್ಗಾ ಸೂಕ್ತಿಯ ಪಾದ ಎಲ್ಲಿ ತಪ್ಪಾಗಿದೆ ಎನ್ನುವುದು ಸ್ಪಷ್ಟವಾಯಿತು. ಅಂದಹಾಗೆ, ಹಳೆಯ ಜೋಕೊಂದು ನೆನಪಾಯಿತು. ತಾರಾಬಾಯಿ ತೇರದಾಳ್ ಇದು ಉತ್ತರ ಕರ್ನಾಟಕದ ಹೆಣ್ಣುಮಗಳೊಬ್ಬಳ ಹೆಸರು ಅದನ್ನು ಛಾಪಿಸುವಾಗ ಕಂಪೋಸರ್ ಅದನ್ನು "ತಾರಾ ಬಾಯಿ ತೆರದಾಳ" ಎಂದು ಮಾಡಿದ್ದು ನೆನಪಾಯಿತು. ಇಂತಹ ಇನ್ನೂ ಹತ್ತು ಹಲವಾರು ಜೋಕುಗಳು ಬಹುಶಃ ಸಂಪಾದಕರ ಹುದ್ದೆ ನಿಭಾಯಿಸಿರುವ ನಾಗೇಶ್‌ಜಿಯವರಿಗೂ ಗೊತ್ತಿರಬಹುದು ಎಂದು ಕೊಳ್ಳುತ್ತೇನೆ.
ವಂದನೆಗಳಗೊಂದಿಗೆ, ಶ್ರೀಧರ್ ಬಂಡ್ರಿ

@ನಾಗೇಶರೆ,
ನಿಮ್ಮ ಅನುಮಾನ ಸರಿ, ನನ್ನ ಅನುವಾದದಲ್ಲೇ ತಪ್ಪಿದೆ. ಅದರಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ದುರ್ಗಾಸೂಕ್ತಿಯ ಮೊದಲ ಶ್ಲೋಕ ಎನ್ನುವ ಅರ್ಥ ಬರುವಂತೆ ವಿವರಿಸಿದ್ದೇನೆ. ಹಾಗಾಗಿ ನಿಮ್ಮ ಕವನದಲ್ಲಿ ದುರ್ಗಾಸೂಕ್ತಿಯ ಪ್ರಸ್ತಾಪ ಬರದೇ ಇರುವಂತಾಯಿತು. ಇದನ್ನೂ ಸಹ ಸೇರಿಸಿದರೆ ಒಳಿತು. ನಿಮಗೂ ಸಹ ವಂದನೆಗಳು. ಶ್ರೀಧರ್ ಬಂಡ್ರಿ

Submitted by ananthesha nempu Thu, 07/11/2013 - 17:29

In reply to by makara

ನಮಸ್ಕಾರ ಶ್ರೀಧರ ಬಂಡ್ರಿಯವರೆ..
ನಿಮ್ಮ ಸರಣಿಯನ್ನು ನೋಡುತ್ತಿರುವೆ, ಬಹಳ ಚೆನ್ನಾಗಿ ಬರುತ್ತಿದೆ, ಮೂಲ ಲೇಖಕರ ಜ್ಞಾನವೂ ನಿಮ್ಮ ವಿಶದೀಕರಣವೂ, ಅನುವಾದ ಸ್ವಾರಸ್ಯವೂ ಸಹಸ್ರನಾಮ ಕುರಿತಾದ ನಮ್ಮ ಜ್ಞಾನವನ್ನು ಹೆಚ್ಚಿಸಿದೆ, ಧನ್ಯವಾದಗಳು ನಿಮಗೆ .

ಶತಾಕ್ಷರ ಮಂತ್ರದ ಕುರಿತಾಗಿ ನಿಮ್ಮ ಸಂದೇಹ ಸಹಜವಾದದ್ದೇ, ನನಗೆ ತಿಳಿದಂತೆ ವಿವರಿಸುವೆ.

ಮೊದಲಿಗೆ ವೇದಗಳು ಸಹಜವಾಗಿ ಅಭಿವ್ಯಕ್ತವಾದವು, ಅವುಗಳನ್ನು ಛಂದಸ್ಸಿನ ನಿಯಮಕ್ಕೆ ಅನುಸರಿಸಿ ಯಾರೂ ರಚಿಸಲಿಲ್ಲ, ಆನಂತರದಲ್ಲಿ ಅವುಗಳಿಗೆ ನಿಯಮಗಳನ್ನು ಹೊಂದಿಸಲಾಯಿತು. ಅಕ್ಷರಗಳ ಸಂಖ್ಯೆಯನ್ನು ಆಧರಿಸಿ ಇಂತಹ ಛಂದಸ್ಸು ಎಂದು ಗುರುತಿಸಲಾಯಿತು. ಪ್ರತಿಯೊಂದು ಪಾದದಲ್ಲಿಯೂ ೮ ಅಕ್ಷರಗಳಿದ್ದರೆ ಅನುಷ್ಟುಪ್ ... ಹೀಗೆ.

ಆದರೆ ಇಂತಹ ನಿಯಮಗಳಿಗೆ ಅಪವಾದವಾಗಿ ಅನೇಕ ಮಂತ್ರಗಳು ವೇದಗಳಲ್ಲಿವೆ, ಸೂಕ್ಷ್ಮವಾಗಿ ಅವುಗಳನ್ನು ಗುರುತಿಸಿ ನಿಚೃತ್, ಸ್ವರಾಟ್, ವಿರಾಟ್, ಇತ್ಯಾದಿ ಭೇದಗಳನ್ನೂ ಕೂಡ ಕಲ್ಪಿಸಿ ಅವುಗಳನ್ನು ಗುರುತಿಸಿದ್ದಾರೆ.
ಆದರೆ ಸಾಮಾನ್ಯರು ಅಷ್ಟೊಂದು ಸೂಕ್ಷ್ಮವಾಗಿ ತಿಳಿಯಲು ಅಸಾಧ್ಯವಾದ್ದರಿಂದ ಆಯಾ ಛಂದಸ್ಸಿಗೆ ಸಮೀಪವಾದ ಅಕ್ಷರಗಳುಳ್ಳ ಛಂದಸ್ಸಿನಿಂದಲೇ ಆ ಮಂತ್ರಗಳನ್ನು ಗುರುತಿಸುತ್ತಾರೆ, ಉದಾಹರಣೆಗೆ ಪ್ರಸಿದ್ಧವಾದ ಗಾಯತ್ರೀ ಮಂತ್ರವಿದೆ, ಇದರಲ್ಲಿ ಇರುವುದು ೨೩ ಅಕ್ಷರಗಳು. ಆದರೆ ಇರಬೇಕಾಗಿರುವುದು ೨೪ ಅಕ್ಷರಗಳು.

ಮೇಲಿನ ಮೂರೂ ಮಂತ್ರಗಳಲ್ಲೂ ಅಕ್ಷರ ವ್ಯತ್ಯಾಸವನ್ನು ಗುರುತಿಸಬಹುದು, ತ್ರ್ಯಂಬಕ ಮಂತ್ರದಲ್ಲಿ ೧ನೇ ಪಾದದಲ್ಲಿ ೭ ಅಕ್ಷರಗಳಿವೆ, ೮ ಅಕ್ಷರಗಳಿರಬೇಕಿತ್ತು, ಮೂರನೇ ಪಾದದಲ್ಲಿ ೯ ಅಕ್ಷರಗಳಿರುವುದರಿಂದ ಒಟ್ಟು ೩೨ ಆಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಗಾಯತ್ರಿಗೆ ೨೪, ಅನುಷ್ಟುಪ್ಪಿಗೆ ೩೨, ತ್ರಿಷ್ಟುಪ್ಪಿಗೆ ೪೪ ಅಕ್ಷರಗಳು ಎನ್ನುವುದು ಸಾಮಾನ್ಯ ನಿಯಮವಾಗಿದೆ. ಇದನ್ನು ಅನುಲಕ್ಷಿಸಿ ಈ ಮಂತ್ರಗಳ ಗುಂಫನವನ್ನು
ಶತಾಕ್ಷರ ಎನ್ನಲಾಗಿದೆ.
ಆದರೆ ಮಂತ್ರಶಾಸ್ತ್ರದಲ್ಲಿ, ತಾಂತ್ರಿಕ ಮಂತ್ರಗಳಲ್ಲಿ ಅಕ್ಷರ ಸಂಖ್ಯೆಗೆ ವಿಶೇಷವಾದ ಪ್ರಾಧಾನ್ಯತೆ ಇದ್ದು ಸಂಖ್ಯೆಯಿಂದಲೆ ಕೆಲವೊಮ್ಮೆ ಮಂತ್ರಗಳು ಗುರುತಿಸಲ್ಪಡುತ್ತವೆ. ಉದಾಹರಣೆಗೆ ಪಂಚದಶೀ, ಷೋಡಶೀ ಇತ್ಯಾದಿ...

ಅದಕ್ಕಾಗಿ ಕೆಲವರು ಸಂಖ್ಯಾಪೂರ್ತಿಗಾಗಿ ವರೇಣ್ಯಂ ಎಂಬುದನ್ನು ವರೇಣಿಯಂ ಎಂದೂ ದುರಿತಾತ್ಯಗ್ನಿಃ ಎಂಬುದನ್ನು ದುರಿತಾತಿ ಅಗ್ನಿಃ ಎಂದೂ ೪- ೫ ಅಕ್ಷರಗಳಾಗಿ ಪರಿಗಣಿಸಬೇಕು ಎಂದೂ ಹೇಳುತ್ತಾರೆ.
ಆದರೆ ಉಚ್ಚಾರಣೆಯಲ್ಲಿ ಮೂಲದಂತೆಯೇ ಪಠಿಸಬೇಕಾಗಿದೆ.

ವೇದಗಳಲ್ಲಿ ಶತ ಅಂದರೆ ಕರಾರುವಕ್ಕಾಗಿ ನೂರು ಮಾತ್ರ ಎಂದರ್ಥವಲ್ಲ, ನೂರಕ್ಕೆ ಸಮೀಪವಾಗಿರುವ ಎಂದೂ ಆಗಬಹುದು. ಉದಾಹರಣೆಗೆ ಶತರುದ್ರೀಯ ಎಂದು ಪ್ರಸಿದ್ಧವಾಗಿರುವ ವೇದಭಾಗದಲ್ಲಿ ರುದ್ರನ ನೂರಾರು ರೀತಿಯ ವಿಭೂತಿಗಳ ಸ್ಮರಣೆ ಇದೆ, (ಕರಾರುವಕ್ಕಾಗಿ ನೂರಲ್ಲ)
ಆದ್ದರಿಂದ ೨ ಅಕ್ಷರಗಳು ಕಮ್ಮಿಯಿದ್ದದ್ದರಿಂದ ಈ ಮಂತ್ರಗಳು ಶತಾಕ್ಷರ ಎಂಬ ಸಂಜ್ಞೆಯಿಂದ ವಂಚಿತವೇನೂ ಆಗುವುದಿಲ್ಲ.

Submitted by makara Thu, 07/11/2013 - 19:37

In reply to by ananthesha nempu

ಅನಂತೇಶ್ ನೆಂಪು ಅವರೆ,
ಶತಾಕ್ಷರಿಯ ಬಗೆಗಿನ ಅನುಮಾನವನ್ನು ಸಮರ್ಪಕವಾಗಿ ಬಗೆಹರಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು. ೧೦೦ ಎನ್ನುವುದು ನಿಖರವಾಗಿ ಇರಬೇಕಾಗಿಲ್ಲ ಎನ್ನುವುದು ಒಂದು ಸ್ಪಷ್ಟನೆಯಾದರೆ ಅದನ್ನು ಹತ್ತಿರದ ಸಂಖ್ಯೆಗೆ ದುಂಡಾಗಿಸುತ್ತಾರೆ ಎನ್ನುವ ಮತ್ತೊಂದು ವಿಷಯ ತಿಳಿದಂತಾಯಿತು. ಛಂದಸ್ಸಿನ ವಿವರಣೆಯನ್ನೂ ಬಹು ಚೆನ್ನಾಗಿ ಮನದಟ್ಟಾಗುವಂತೆ ವಿವರಿಸಿದ್ದೀರ ಅದರ ಬಗ್ಗೆಯೂ ನನಗೆ ತಿಳಿಯುವಂತಾಯಿತು. ಅಂದ ಹಾಗೆ ನೀವು ನಿಯಮಿತವಾಗಿ ಓದಿ ಪ್ರತಿಕ್ರಿಯಿಸುತ್ತಿದ್ದರೆ ಚೆನ್ನಾಗಿರುತ್ತದೆ; ಏಕೆಂದರೆ ನಿಮಗೆ ಸಂಸ್ಕೃತ ಭಾಷೆಯ ಪಾಂಡಿತ್ಯ ಹಾಗೂ ಆಧ್ಯಾತ್ಮಿಕ ಒಲವೂ ಎರಡೂ ಇವೆ. ಆದ್ದರಿಂದ ಇದರಲ್ಲಿ ಸಹಜವಾಗಿ ನುಸುಳುವ ಹಾಗು ತಿಳುವಳಿಕೆ ಇಲ್ಲದೆ ನುಸುಳುವ ತಪ್ಪುಗಳನ್ನು ಬೊಟ್ಟು ಮಾಡಿ ತೋರಿಸಿ. ಹೀಗೆ, ನಿಮ್ಮ ಪ್ರತಿಭೆ ಒಂದು ಸತ್ಕಾರ್ಯಕ್ಕೆ ವಿನಿಯೋಗವಾಗಲಿ ಎಂದು ಅಶಿಸುತ್ತೇನೆ. ಲಲಿತಾಂಬಿಕೆಯೂ ಸಹ ತನ್ನ ಕೃಪೆಯನ್ನು ನಿಮ್ಮ ಮೇಲೆ ಖಂಡಿತಾ ಬೀರುವಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ.

Submitted by makara Thu, 07/11/2013 - 22:09

In reply to by makara

>>>>>>ಪ್ರತಿಯೊಂದು ಪಾದದಲ್ಲಿಯೂ ೮ ಅಕ್ಷರಗಳಿದ್ದರೆ ಅನುಷ್ಟುಪ್ ... ಹೀಗೆ.

>>>>>>>ಒಟ್ಟಿನಲ್ಲಿ ಹೇಳುವುದಾದರೆ ಗಾಯತ್ರಿಗೆ ೨೪, ಅನುಷ್ಟುಪ್ಪಿಗೆ ೩೨, ತ್ರಿಷ್ಟುಪ್ಪಿಗೆ ೪೪ ಅಕ್ಷರಗಳು ಎನ್ನುವುದು ಸಾಮಾನ್ಯ ನಿಯಮವಾಗಿದೆ. ಇದನ್ನು ಅನುಲಕ್ಷಿಸಿ ಈ ಮಂತ್ರಗಳ ಗುಂಫನವನ್ನು
ಶತಾಕ್ಷರ ಎನ್ನಲಾಗಿದೆ.
ಅನಂತೇಶ್ ನೆಂಪು ಅವರೆ, ನನ್ನದೊಂದು ಸಣ್ಣ ಅನುಮಾನ. ಅದೇನೆಂದರೆ ಪ್ರತಿಯೊಂದು ಪಾದದಲ್ಲಿಯೂ ೮ ಅಕ್ಷರಗಳಿದ್ದರೆ ಅದನ್ನು ಅನುಷ್ಟುಪ್ ಎಂದು ಹೇಳಲಾಗುತ್ತದೆ ಎನ್ನುವುದೇನೋ ಸರಿ. ಆದರೆ ಅನುಷ್ಟುಪ್ಪಿಗೆ ೩೨ ಎಂದು ಇನ್ನೊಂದು ಪಂಕ್ತಿಯಲ್ಲಿ ಪ್ರಸ್ತಾವಿಸಿದ್ದೀರ. ೩೨ ಅಕ್ಷರಗಳಿರುವ ಛಂದಸ್ಸಿಗೆ ಬೇರೆ ಏನಾದರೂ ಹೆಸರಿದ್ದರೆ ತಿಳಿಸಿ. ಗುಂಫನವನ್ನು=ಗುಂಪನ್ನು?...ಸರಿಯೇ?
ನಿಮ್ಮಿಂದ ಎಲ್ಲಾ ಕಂತುಗಳಿಗೆ ಪ್ರತಿಕ್ರಿಯೆ ನಿರೀಕ್ಷಿಸುತ್ತಾ :)) ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

Submitted by ananthesha nempu Mon, 07/15/2013 - 09:28

In reply to by ananthesha nempu

ಒಂದು ತಿದ್ದುಪಡಿ
>>>ಮೊದಲಿಗೆ ವೇದಗಳು ಸಹಜವಾಗಿ ಅಭಿವ್ಯಕ್ತವಾದವು, ಅವುಗಳನ್ನು ಛಂದಸ್ಸಿನ ನಿಯಮಕ್ಕೆ ಅನುಸರಿಸಿ ಯಾರೂ ರಚಿಸಲಿಲ್ಲ, ಆನಂತರದಲ್ಲಿ ಅವುಗಳಿಗೆ ನಿಯಮಗಳನ್ನು ಹೊಂದಿಸಲಾಯಿತು>>
ಆದರೆ ವೇದ ದೃಷ್ಟಾರರಿಗೆ ಛಂದಸ್ಸಿನ ಪರಿಜ್ಞಾನವಿತ್ತು.. ಯಾಕೆಂದರೆ ವೇದಗಳಲ್ಲೇ ಛಂದಸ್ಸಿನ ಉಲ್ಲೇಖವಿದೆ,

Submitted by makara Tue, 07/16/2013 - 06:55

In reply to by ananthesha nempu

ಅನಂತೇಶ್ ನೆಂಪು ಅವರೇ ನಿಮ್ಮ ಸ್ಪಷ್ಟನೆಗೆ ಧನ್ಯವಾದಗಳು.
>>>>>>ಪ್ರತಿಯೊಂದು ಪಾದದಲ್ಲಿಯೂ ೮ ಅಕ್ಷರಗಳಿದ್ದರೆ ಅನುಷ್ಟುಪ್ ........ ಹೀಗೆ.
>>>>>>>ಒಟ್ಟಿನಲ್ಲಿ ಹೇಳುವುದಾದರೆ ಗಾಯತ್ರಿಗೆ ೨೪, ಅನುಷ್ಟುಪ್ಪಿಗೆ ೩೨, ತ್ರಿಷ್ಟುಪ್ಪಿಗೆ ೪೪ ಅಕ್ಷರಗಳು ಎನ್ನುವುದು ಸಾಮಾನ್ಯ ನಿಯಮವಾಗಿದೆ.
ಒಂದು ಕಡೆ ೮ ಅಕ್ಷರಗಳಿದ್ದರೆ ಅನುಷ್ಟುಪ್ ಎಂದು ಹೇಳಿದ್ದೀರ ಮತ್ತೊಂದು ಕಡೆ ೩೨ಕ್ಕೂ ಅನುಷ್ಟುಪ್ ಎನ್ನುತ್ತಾರೆಂದು ತಿಳಿಸಿದ್ದೀರ. ೩೨ ಅಕ್ಷರಗಳಿರುವ ಛಂದಸ್ಸಿಗೆ ಬೇರೆ ಯಾವುದಾದರೂ ಹೆಸರಿದೆಯೇ ಎನ್ನುವುದಷ್ಟೇ ನನ್ನ ಅನುಮಾನ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by makara Thu, 07/11/2013 - 19:44

ನಾಗೇಶರೆ, ೧೯೦. ದುರ್ಗಾ ಪರಿಷ್ಕರಣೆಯ ಕುರಿತು
ಸದೃಢ ಮಾನಸಿಕತೆ ದೇಹಸೌಷ್ಟವ ಬೇಕು ಕಾಣೆ ದೇವಿಯ
ಮಾನಸಿಕ ಭೌತಿಕ ಕಾಪಿಡೊ ಕ್ರಿಯ ತೆರೆಸಿಡುವ ಆಂತರ್ಯ
ಕಷ್ಟಕೋಟಲೆ ಪರಿಹಾರಿಣಿ ದುರ್ಗಿ ಪಠಿಸೆ ಸೂಕ್ತಿ ನಿಯಮಿತ
ಶತಾಕ್ಷರಿಯುಕ್ತ ಮೃತ್ಯುಂಜಯ ಗಾಯತ್ರಿ ಯಾತನಾಮುಕ್ತ!

ಕಡೆಯ ಎರಡು ಸಾಲುಗಳನ್ನು ಈ ರೀತಿ ಅರ್ಥ ಬರುವಂತೆ ಸೂಕ್ತ ಮಾರ್ಪಾಡು ಮಾಡಬಹುದೆನಿಸುತ್ತದೆ.
ದುರ್ಗಾಸೂಕ್ತಿ ಮೃತ್ಯುಂಜಯ ಗಾಯತ್ರಿಯ ಶತಾಕ್ಷರೀ ಪಠಿಸೆ
ನಿಯಮಿತ ಕಷ್ಟಕೋಟಲೆ ಇಲ್ಲವಾಗಿಸುವಳು ಶ್ರೀ ಲಲಿತೆ

Submitted by nageshamysore Thu, 07/11/2013 - 20:49

In reply to by makara

ವಾಹ್ ಶ್ರೀಧರರೆ, ನಿಮ್ಮ ಸಾಲುಗಳನ್ನೆ ಯಥಾವತಾಗಿ ಹಾಗೆ ಉಳಿಸಿಕೊಂಡರೆ ಸಾಕೆನಿಸುತ್ತಿದೆ, ಮತ್ತಾವ ಬದಲಾವಣೆಯೂ ಮಾಡಬೇಕಿಲ್ಲ - ಅಲ್ಲವೆ? - ನಾಗೇಶ ಮೈಸೂರು

ಸದೃಢ ಮಾನಸಿಕತೆ ದೇಹಸೌಷ್ಟವ ಬೇಕು ಕಾಣೆ ದೇವಿಯ
ಮಾನಸಿಕ ಭೌತಿಕ ಕಾಪಿಡೊ ಕ್ರಿಯ ತೆರೆಸಿಡುವ ಆಂತರ್ಯ
ದುರ್ಗಾಸೂಕ್ತಿ ಮೃತ್ಯುಂಜಯ ಗಾಯತ್ರಿಯ ಶತಾಕ್ಷರೀ ಪಠಿಸೆ
ನಿಯಮಿತ ಕಷ್ಟಕೋಟಲೆ ಇಲ್ಲವಾಗಿಸುವಳು ಶ್ರೀ ಲಲಿತೆ!

Submitted by makara Thu, 07/11/2013 - 21:42

In reply to by nageshamysore

ನಾಗೇಶರೆ,
ನಿಮ್ಮದು ಸಹಜವಾದ ಕವಿ ಶೈಲಿ, ಹಾಗಾಗಿ ಇದನ್ನೂ ಇನ್ನೂ ಹೆಚ್ಚು ಸಮಂಜಸವಾಗಿ ಮಾರ್ಪಡಿಸಬಲ್ಲಿರಿ ಎನಿಸುತ್ತದೆ. ಶುಭರಾತ್ರಿ. ಇನ್ನೂ ಮೂರು ಕಂತುಗಳ ಪರಿಷ್ಕರಣೆ ಮಾಡಬೇಕಾಗಿದೆ. ನೋಡೋಣ ಅವನ್ನು ನಾಳೆ ಬೆಳಿಗ್ಗೆ ಪೂರ್ತಿ ಮಾಡಲು ಪ್ರಯತ್ನಿಸುತ್ತೇನೆ.
ಶುಭರಾತ್ರಿ, ಶ್ರೀಧರ್ ಬಂಡ್ರಿ

Submitted by nageshamysore Fri, 07/12/2013 - 05:32

In reply to by makara

ಶ್ರೀಧರರೆ, ೧೯೦. ದುರ್ಗಾ ಪರಿಷ್ಕರಣೆಯ ಎರಡು ಅವೃತ್ತಿಗಳು ಇಲ್ಲಿವೆ. ಯಾವುದು ಸೂಕ್ತ ಕಾಣುವುದೆಂದು ನೋಡಿ ನಾಗೇಶ ಮೈಸೂರು

೧೯೦. ದುರ್ಗಾ ಪರಿಷ್ಕರಣೆಯ ಕುರಿತು
ಸದೃಢ ಮಾನಸಿಕತೆ ದೇಹಸೌಷ್ಟವ ಬೇಕು ಕಾಣೆ ದೇವಿಯ
ಮಾನಸಿಕ ಭೌತಿಕ ಕಾಪಿಡೊ ಕ್ರಿಯ ತೆರೆಸಿಡುವ ಆಂತರ್ಯ
ಕಷ್ಟಕೋಟಲೆ ಪರಿಹಾರಕೆ ಪಠಿಸೆ ದುರ್ಗಾಸೂಕ್ತಿ ನಿಯಮಿತ
ಮೃತ್ಯುಂಜಯ ಗಾಯತ್ರಿ ಸೇರೆ ಶತಾಕ್ಷರೀ ಯಾತನಾಮುಕ್ತ!

೧೯೦. ದುರ್ಗಾ ಪರಿಷ್ಕರಣೆಯ ಕುರಿತು
ಸದೃಢ ಮಾನಸಿಕತೆ ದೇಹಸೌಷ್ಟವ ಬೇಕು ಕಾಣೆ ದೇವಿಯ
ಮಾನಸಿಕ ಭೌತಿಕ ಕಾಪಿಡೊ ಕ್ರಿಯ ತೆರೆಸಿಡುವ ಆಂತರ್ಯ
ಶತಾಕ್ಷರೀ ಗಾಯತ್ರಿ ಮೃತ್ಯುಂಜಯ ದುರ್ಗಾಸೂಕ್ತಿ ನಿರಂತರ
ಪಠಿಸಿದರೆ ಪರಿಹರಿಸುವಳು ಲಲಿತೆ, ಸಂಕಷ್ಟಗಳೆಲ್ಲಾ ದೂರ!

Submitted by nageshamysore Wed, 07/17/2013 - 03:56

In reply to by nageshamysore

ಶ್ರೀಧರರೆ, ಇವೆರಡರಲ್ಲಿ ಯಾವುದಾದರೂ ಉಳಿಸಿಕೊಳ್ಳಬಹುದೊ ಅಥವಾ ಮತ್ತೊಂದಕ್ಕೇ ಪ್ರಯತ್ನಿಸಿದರೆ ಒಳಿತೊ? - ನಾಗೇಶ ಮೈಸೂರು

೧೯೦. ದುರ್ಗಾ ಪರಿಷ್ಕರಣೆಯ ಕುರಿತು
ಸದೃಢ ಮಾನಸಿಕತೆ ದೇಹಸೌಷ್ಟವ ಬೇಕು ಕಾಣೆ ದೇವಿಯ
ಮಾನಸಿಕ ಭೌತಿಕ ಕಾಪಿಡೊ ಕ್ರಿಯ ತೆರೆಸಿಡುವ ಆಂತರ್ಯ
ಶತಾಕ್ಷರೀ ಗಾಯತ್ರಿ ಮೃತ್ಯುಂಜಯ ದುರ್ಗಾಸೂಕ್ತಿ ನಿರಂತರ
ಪಠಿಸಿದರೆ ಪರಿಹರಿಸುವಳು ಲಲಿತೆ, ಸಂಕಷ್ಟಗಳೆಲ್ಲಾ ದೂರ!
ಇದನ್ನು ಉಳಿಸಿಕೊಳ್ಳಿ.

ಶ್ರೀಧರರೆ, 59. ದುರ್ಗಾ ಅಂತಿಮ ರೂಪ ಮತ್ತು ಅಂತಿಮ ಕೊಂಡಿಯ ಜತೆ - ನಾಗೇಶ ಮೈಸೂರು
೧೯೦. ದುರ್ಗಾ 
ಸದೃಢ ಮಾನಸಿಕತೆ ದೇಹಸೌಷ್ಟವ ಬೇಕು ಕಾಣೆ ದೇವಿಯ
ಮಾನಸಿಕ ಭೌತಿಕ ಕಾಪಿಡೊ ಕ್ರಿಯ ತೆರೆಸಿಡುವ ಆಂತರ್ಯ
ಶತಾಕ್ಷರೀ ಗಾಯತ್ರಿ ಮೃತ್ಯುಂಜಯ ದುರ್ಗಾಸೂಕ್ತಿ ನಿರಂತರ
ಪಠಿಸಿದರೆ ಪರಿಹರಿಸುವಳು ಲಲಿತೆ, ಸಂಕಷ್ಟಗಳೆಲ್ಲಾ ದೂರ!
ಅಂತಿಮ ಕೊಂಡಿ:
https://ardharaatria...