೬೧. ಶ್ರೀ ಲಲಿತಾ ಸಹಸ್ರನಾಮ ೨೦೧ರಿಂದ ೨೦೭ನೇ ನಾಮಗಳ ವಿವರಣೆ

೬೧. ಶ್ರೀ ಲಲಿತಾ ಸಹಸ್ರನಾಮ ೨೦೧ರಿಂದ ೨೦೭ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೨೦೧ - ೨೦೭

Sadgati-pradā सद्गति-प्रदा (201)

೨೦೧. ಸದ್ಗತಿ-ಪ್ರದಾ

            ದೇವಿಯು ತನ್ನ ಭಕ್ತರು ಸರಿಯಾದ ಗುರಿಯನ್ನು ಸೇರಲು (ಮುಕ್ತಿಯನ್ನು ಪಡೆಯಲು) ಅವರನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತಾಳೆ. ಇಲ್ಲಿ ಗುರಿ ಅಥವಾ ಅಂತಿಮ ಲಕ್ಷ್ಯವೆಂದರೆ ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಆಗಿದೆ. ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆಯಲು ಒಬ್ಬನಿಗೆ ಉನ್ನತವಾದ ಆಧ್ಯಾತ್ಮಿಕ ಜ್ಞಾನದ ಅವಶ್ಯಕತೆಯಿದೆ ಮತ್ತು ಈ ರೀತಿಯಾದ ಜ್ಞಾನವನ್ನು ದೇವಿಯು ಒದಗಿಸುತ್ತಾಳೆ. ದೇವಿಯು ಕೇವಲ ಜ್ಞಾನವನ್ನು ಕರುಣಿಸುತ್ತಾಳೆ, ಆದರೆ ಅದನ್ನು ಪಡೆದುಕೊಳ್ಳುವುದು ಮತ್ತು ಆ ರೀತಿ ಪಡೆದುಕೊಂಡ ಜ್ಞಾನವನ್ನು ವಿವೇಚನೆಯಿಂದ ಉಪಯೋಗಿಸುವುದು ಭಕ್ತರ ಕೈಯ್ಯಲ್ಲೇ ಇದೆ.  ವಿವೇಕವುಳ್ಳವರು ಸದ್ಗತಿಯ ಮಾರ್ಗವನ್ನು ಅನುಸರಿಸುತ್ತಾರೆ ಮತ್ತು ಈ ಹಂತದಲ್ಲಿ ಅಜ್ಞಾನವು ನಾಶಗೊಳಿಸಲ್ಪಟ್ಟು ಅಲ್ಲಿ ಕೇವಲ ಜ್ಞಾನವೊಂದೇ ಪ್ರಕಾಶಿಸುತ್ತದೆ. ವಿಷ್ಣು ಸಹಸ್ರನಾಮದ ೬೯೯ನೇ ನಾಮವೂ ಕೂಡಾ ಸದ್ಗತಾ ಎನ್ನುವುದನ್ನು ಗಮನಿಸಿ.

           ಕೃಷ್ಣನು ಇದನ್ನು ಭಗವದ್ಗೀತೆಯಲ್ಲಿ (೧೭.೨೬) ವಿವರಿಸುತ್ತಾನೆ, " ಬ್ರಹ್ಮದ ನಾಮವಾದ ಸತ್ ಅನ್ನು ಸತ್ಯ ಮತ್ತು ಒಳ್ಳೆಯತನದ ಪ್ರತೀಕವಾಗಿ ಉಪಯೋಗಿಸಲಾಗುತ್ತದೆ. ಮತ್ತು ಸತ್ ಎನ್ನುವ ಶಬ್ದವು ಯಾರಾದರೂ ಮೆಚ್ಚುಗೆಯಾಗುವ (ಶ್ಲಾಘನೀಯ/ ಪ್ರಶಸ್ತವಾದ) ಕೆಲಸವನ್ನು ಮಾಡಿದಾಗಲೂ ಉಪಯೋಗಿಸಲಾಗುತ್ತದೆ."

           ಲಿಂಗ ಪುರಾಣವು (೨.೧೫.೩), "ವಿವೇಕವುಳ್ಳವರು ಶಿವನ ಸತ್ (ಅಸ್ತಿತ್ವದಲ್ಲಿರುವ) ರೂಪ ಮತ್ತು  ಅಸತ್ (ಅಸ್ತಿತ್ವದಲ್ಲಿರದ) ರೂಪದ ಕುರಿತಾಗಿ ಮಾತನಾಡುತ್ತಾರೆ" ಎಂದು ಹೇಳುತ್ತದೆ. ಸತ್ ಎಂದರೆ ಎಲ್ಲೆಡೆ ವ್ಯಾಪಿಸಿರುವ ಮತ್ತದು ಬಾಹ್ಯ ಹಾಗೂ ಆಂತರ್ಯವೆರಡನ್ನೂ ಒಳಗೊಂಡಿದೆ. ಸತ್ ಮತ್ತು ಅಸತ್ ಎಂದರೆ ವ್ಯಕ್ತ ಮತ್ತು ಅವ್ಯಕ್ತವೆಂದೂ ಅರ್ಥೈಸುತ್ತಾರೆ.

Sarveśvarī सर्वेश्वरी (202)

೨೦೨. ಸರ್ವೇಶ್ವರೀ

           ದೇವಿಯು ಈ ಪ್ರಪಂಚದ ಅಂತಿಮ ಪಾಲಕಳಾಗಿದ್ದು ಮತ್ತು ಹಿಂದಿನ ನಾಮದಲ್ಲಿ ಚರ್ಚಿಸಿದಂತೆ ಆಕೆಯು ಜೀವಿಗಳನ್ನು ಬ್ರಹ್ಮದೆಡೆಗೆ ಕರೆದೊಯ್ಯುತ್ತಾಳೆ. ಪಾಲಕನೆಂದರೆ ಯಾರು ತನ್ನ ಪ್ರಜೆಗಳ ಬಗ್ಗೆ ಕಾಳಜಿ ಹೊಂದಿರುತ್ತಾನೋ ಅವನು. ದೇವಿಗಿಂತ ಶ್ರೇಷ್ಠರಾದವರು ಅಥವಾ ಸಮಾನರು ಯಾರೂ ಇಲ್ಲ; ೧೯೮ನೇ ನಾಮದಲ್ಲಿ ಇದರ ಬಗ್ಗೆ ಚರ್ಚಿಸಲಾಗಿದೆ. ಆದ್ದರಿಂದ ಆಕೆಯೇ ಅತ್ಯುನ್ನತಳಾದ ಪಾಲಕಿಯಾಗಿದ್ದಾಳೆ.

Sarva-mayī सर्व-मयी (203)

೨೦೩. ಸರ್ವ-ಮಯೀ

           ದೇವಿಯು ಎಲ್ಲಾ ರೂಪಗಳಲ್ಲಿರುತ್ತಾಳೆ ಅದು ಬ್ರಹ್ಮನ ಸರ್ವವ್ಯಾಪಕ ಗುಣವನ್ನು ಸೂಚಿಸುತ್ತದೆ. ದೇವಿಯು ಎಲ್ಲಾ ಜೀವಿಗಳಲ್ಲಿ ಚೇತನಾ (ಆತ್ಮ) ರೂಪದಲ್ಲಿ ನೆಲೆಸಿರುತ್ತಾಳೆ ಎನ್ನುವುದು ಅತ್ಯಂತ ಸೂಕ್ತವಾಗುತ್ತದೆ. ಈ ಚೇತನವಿಲ್ಲದೆ ಜೀವವು ಇರುವುದಿಲ್ಲ. ಈ ಮುಂಚೆಯೇ ಚರ್ಚಿಸಿದಂತೆ ಆತ್ಮ (ಚೇತನ) ಮತ್ತು ಪರಮಾತ್ಮ (ಪರಬ್ರಹ್ಮವು) ಬೇರೆ ಬೇರೆ. ಬ್ರಹ್ಮದೊಂದಿಗೆ ಅತ್ಮ/ಚೈತನ್ಯವು ಸಮಾಗಮ ಹೊಂದಿದಾಗ ಅದು ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಕಾರಣವಾಗುತ್ತವೆ. ಸರ್ವವೆಂದರೆ ಎಲ್ಲಾ ಮೂವತ್ತಾರು ತತ್ವಗಳೂ ಆಗಬಹುದು; ಇವುಗಳ ಕುರಿತಾಗಿ ಮುಂದೆ ಚರ್ಚಿಸೋಣ. (ಸಾಂಖ್ಯ ಯೋಗವು ೨೫ ತತ್ವಗಳನ್ನು ಪ್ರತಿಪಾದಿಸಿದರೆ; ಕಾಶ್ಮೀರ ಶೈವ ಸಿದ್ಧಾಂತವು ೩೬ ತತ್ವಗಳ ಕುರಿತಾಗಿ ಹೇಳುತ್ತದೆ. ಇದರ ಕುರಿತಾದ ವಿವರಣೆಗಳಿಗೆ ಸಂಪದದ ಈ ಕೊಂಡಿಯನ್ನು ನೋಡಿ http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E0%B2%A6-%E0%B2%B9%E0%B2%B2%E0%B2%B5%E0%B3%81-%E0%B2%AE%E0%B3%81%E0%B2%96%E0%B2%97%E0%B2%B3%E0%B3%81-%E0%B2%AD%E0%B2%BE%E0%B2%97-%E0%B3%A8-%E0%B2%95%E0%B2%BE%E0%B2%B6%E0%B3%8D%E0%B2%AE%E0%B3%80%E0%B2%B0-%E0%B2%B6%E0%B3%88%E0%B2%B5%E0%B2%A4%E0%B2%A4%E0%B3%8D%E0%B2%B5/07/08/2012/37820)

Sarva-mantra-svarūpiṇī सर्व-मन्त्र-स्वरूपिणी (204)

೨೦೪. ಸರ್ವ-ಮಂತ್ರ-ಸ್ವರೂಪಿಣೀ

           ದೇವಿಯು ಎಲ್ಲಾ ಮಂತ್ರಗಳ ಸ್ವರೂಪವಾಗಿದ್ದಾಳೆ ಅಥವಾ ಮೂರ್ತರೂಪವಾಗಿದ್ದಾಳೆ. ಈ ಕಾರಣದಿಂದಾಗಿ ತಂತ್ರಶಾಸ್ತ್ರವು ದೇವಿಯ ವಿವಿಧ ರೂಪಗಳ ಮೇಲೆ ಆಧಾರಿತವಾಗಿದೆ ಮತ್ತು ಈ ಮಂತ್ರಗಳು ತಾಂತ್ರಿಕ ಆಚರಣೆಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿವೆ. ಎಲ್ಲಾ ಮಂತ್ರಗಳೂ ’ಪಂಚದಶೀ ಮಂತ್ರ’ದ ಸುತ್ತಲೂ ಇರುವವೆಂದು ತಿಳಿಯಲಾಗಿದೆ ಏಕೆಂದರೆ ಅದು ಎಲ್ಲಾ ಮಂತ್ರಗಳಿಗೆ ಕೇಂದ್ರವಾಗಿದೆ.

           ಈ ನಾಮವನ್ನು ಇನ್ನೊಂದು ವಿಧವಾಗಿಯೂ ಕೂಡಾ ವಿಶ್ಲೇಷಿಸಬಹುದು. ಸಂಸ್ಕೃತದಲ್ಲಿ ೫೧ ಅಕ್ಷರಗಳಿವೆ ಮತ್ತು ಈ ಎಲ್ಲಾ ಅಕ್ಷರಗಳೂ ಒಂದಕ್ಕೊಂದು ಬೆಸೆದುಕೊಂಡು ಮಾಲೆಯಾಕರದಲ್ಲಿದ್ದು ಅದನ್ನು ದೇವಿಯು ತನ್ನ ಕೊರಳಿನಲ್ಲಿ ಧರಿಸಿದ್ದಾಳೆ. ಯಾವುದೇ ಮಂತ್ರವು ಈ ಅಕ್ಷರಗಳಿಂದ ಹೊರಹೊಮ್ಮಬೇಕು, ದೇವಿಯನ್ನು ಸರ್ವ-ಮಂತ್ರ-ಸ್ವರೂಪಿಣೀ ಎಂದು ಸಂಭೋದಿಸಲು ಅದು ಕಾರಣ. ಈ ನಾಮ ಮತ್ತು ಮುಂದಿನ ನಾಮಗಳು ಹಿಂದಿನ ನಾಮದ ಮುಂದುವರಿದ ಭಾಗಗಳಾಗಿವೆ.

Sarva-yantrātmikā सर्व-यन्त्रात्मिका (205)

೨೦೫. ಸರ್ವ-ಯಂತ್ರಾತ್ಮಿಕಾ

           ದೇವಿಯು ಎಲ್ಲಾ ಯಂತ್ರಗಳಲ್ಲಿರುತ್ತಾಳೆ ಮತ್ತು ಪ್ರತಿಯೊಂದು ದೇವ-ದೇವಿಯರಿಗೆ ವಿವಿಧ ರೀತಿಯಾದ ಯಂತ್ರಗಳಿವೆ. ಯಂತ್ರವೆಂದರೆ ಲೋಹದಿಂದ ಮಾಡಲ್ಪಟ್ಟ ತಗಡಾಗಿದ್ದು ಸಾಮಾನ್ಯವಾಗಿ ಇದನ್ನು ಬಂಗಾರ, ಬೆಳ್ಳಿ ಅಥವಾ ತಾಮ್ರ ಅಥವಾ ಈ ಎಲ್ಲಾ ಲೋಹಗಳ ಸಮ್ಮಿಶ್ರಣದಿಂದ ಮಾಡಿರುತ್ತಾರೆ ಮತ್ತು ಆ ಲೋಹದ ತಗಡಿನಲ್ಲಿ ಪರಸ್ಪರ ಸಂಧಿಸುವ ಹಲವಾರು ರೇಖೆಗಳಿರುತ್ತವೆ. ಮಂತ್ರದ ಸುಪ್ತ ಶಕ್ತಿಯನ್ನು ಯಂತ್ರದೊಳಕ್ಕೆ ಶಾಸ್ತ್ರಬದ್ಧ ವಿಧಿವಿಧಾನಗಳ ಮೂಲಕ ತುಂಬಿಸುತ್ತಾರೆ. ಈ ಯಂತ್ರಗಳು ಪ್ರತ್ಯೇಕ ದೇವರುಗಳನ್ನು ಪ್ರತಿನಿಧಿಸುತ್ತವೆ. ವಿಧಿಬದ್ಧವಾಗಿ ಪವಿತ್ರೀಕರಿಸಿ ಸಿದ್ಧಪಡಿಸಿದ ಯಂತ್ರವು ಅತ್ಯಂತ ಶಕ್ತಿಯುತವಾಗಿರುತ್ತದೆ ಮತ್ತು ಮಂತ್ರದ ಸಂಖ್ಯೆಯು ಹೆಚ್ಚಿದಂತೆಲ್ಲಾ ಈ ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ. ದೇವಿಯು ಸರ್ವ-ಮಯೀ (೨೦೩ನೇ ನಾಮ) ಆಗಿರುವುದರಿಂದ ಆಕೆಯು ಎಲ್ಲಾ ಯಂತ್ರಗಳಲ್ಲಿರುತ್ತಾಳೆಂದು ಹೇಳಲಾಗಿದೆ.

Sarva-tantra-rūpā सर्व-तन्त्र- रूपा (206)

೨೦೬. ಸರ್ವ-ತಂತ್ರ-ರೂಪಾ

          ದೇವಿಯು ಎಲ್ಲಾ ತಂತ್ರಗಳ ರೂಪದಲ್ಲಿರುತ್ತಾಳೆ. ಹಲವು ವಿಧವಾದ ತಂತ್ರಗಳಿದ್ದು ಆ ತಂತ್ರ ಪದ್ಧತಿಗಳಲ್ಲೆಲ್ಲಾ ದೇವಿಯು ಕೇಂದ್ರ ಸ್ಥಾನದಲ್ಲಿರುತ್ತಾಳೆ.

ತಂತ್ರದ ಕುರಿತಾಗಿ ಹೆಚ್ಚಿನ ವಿವರಗಳು:

           ತಂತ್ರಗಳೆಂದರೆ ಅನುಭಾವದ (ಮುಕ್ತಿ ಬಯಸುವ) ಸೂತ್ರಗಳಿಂದ ಕೂಡಿದ ಆಚರಣೆ. ಇವು ಬಹುತೇಕ ಶಿವ ಮತ್ತು ಶಕ್ತಿಯರ ಸಂಭಾಷಣಾ ರೂಪದಲ್ಲಿದ್ದು ಅವು ಐದು ವಿಷಯಗಳ ಕುರಿತಾಗಿ ಚರ್ಚಿಸುತ್ತವೆ. ಅವು ಯಾವುವೆಂದರೆ ೧) ಸೃಷ್ಟಿ, ೨) ಪ್ರಪಂಚದ ವಿನಾಶ, ೩) ದೇವತೆಗಳ ಪೂಜೆ, ೪) ಎಲ್ಲಾ ವಸ್ತುಗಳನ್ನು ಹೊಂದುವಿಕೆ ಅದರಲ್ಲೂ ವಿಶೇಷವಾಗಿ ಆರು ಅತಿಮಾನುಷ ಶಕ್ತಿಗಳನ್ನು (ಸಿದ್ಧಿಗಳನ್ನು) ಹೊಂದುವಿಕೆ ಮತ್ತು ೫)  ಧ್ಯಾನದ ಮೂಲಕ ಪರಮಾತ್ಮದೊಂದಿಗೆ ಚತುರ್ವಿಧವಾಗಿ ಐಕ್ಯವಾಗುವಿಕೆ.

          "ಈ ಬ್ರಹ್ಮಾಂಡದಲ್ಲಿರುವ ಜೀವಿಗಳಿಗೆ, ಅವುಗಳ ಜೀವನ ಮತ್ತು ಅಂತಸ್ಸತ್ವದಲ್ಲಿರುವ, ಮುಕ್ತಿಯನ್ನು ಕರುಣಿಸುವ ಈ ಬ್ರಹ್ಮಾಂಡದೊಳಗೆ ಅಂತರ್ಗತವಾಗಿರುವ ಪ್ರಕಾಶವುಳ್ಳ ಪರಮಚೈತನ್ಯದ ಶಕ್ತಿಯನ್ನು ಪಡೆಯಲು ಮತ್ತು ಆದನ್ನು ಹೊಂದಲು ಪ್ರಯತ್ನಮಾಡುವ ಸಾಧನೆಯೇ ತಂತ್ರ" ಎಂದು ತಂತ್ರವಿದ್ಯೆಯನ್ನು ವ್ಯಾಖ್ಯಾನಿಸಬಹುದು ಅಥವಾ ಸೂತ್ರೀಕರಿಸಬಹುದು. ಮನುಷ್ಯರು ಪ್ರತ್ಯೇಕವಾಗಿ ಇದನ್ನು ಅರಿಯುವ ಉದ್ದೇಶವನ್ನು ಹೊಂದಿ ಅದನ್ನು ಸಾಕ್ಷಾತ್ಕರಿಸಿಕೊಳ್ಳಲು ಅರ್ಹರಾಗಿದ್ದಾರೆ. ಅಂದರೆ ಈ ದಿವ್ಯವಾದ ಶಕ್ತಿಯನ್ನು ಒಳಗೆ ಕೇಂದ್ರೀಕರಿಸುವುದು ಅಥವಾ ಮತ್ತೊಂದರ ಒಳಗೆ ಅದರ ಅಚ್ಚು, ಅಥವಾ ಸಂಗ್ರಹ ಅಥವಾ ಆ ಬ್ರಹ್ಮಾಂಡದ ಶಕ್ತಿಯನ್ನು ಮನಷ್ಯನೊಳಗೆ ಅಂತರ್ಗತಗೊಳಿಸುವುದು ಅಥವಾ ಅದರೊಂದಿಗೆ ಗುರುತಿಸಿಕೊಳ್ಳುವುದರ ಪೂರ್ವ ಪ್ರಕ್ರಿಯೆ.

           ಸಾಧನೆ ಮತ್ತು ಆಚರಣೆಗಳ ಮೂಲಕ ನಮ್ಮ ಅನುಭವಕ್ಕೆ ಬಂದಿರುವ ಈ ಬ್ರಹ್ಮಾಂಡದ ಆವಿರ್ಭಾವಕ್ಕೆ ಕಾರಣವಾದ ಮತ್ತು ಅದನ್ನು ಸೃಷ್ಟಿಸಿ,  ಪರಿಪಾಲಿಸುವ ಹಿಂದಿರುವ ದಿವ್ಯ ಚೈತನ್ಯವಾದ ಆ ಪರಬ್ರಹ್ಮ ತತ್ವವನ್ನು ಆವಾಹನೆ ಮಾಡಿಕೊಳ್ಳುವುದು ಮತ್ತು ಆ ದಿವ್ಯ ಶಕ್ತಿಯನ್ನು ಅದೇ ಬ್ರಹ್ಮಾಂಡದ ಸೂಕ್ಷ್ಮರೂಪದಲ್ಲಿರುವ ಮನುಷ್ಯನೊಳಗೆ ಪ್ರವಹಿಸುವಂತೆ ಮಾಡಿಕೊಂಡು ಅದನ್ನು ಕ್ರಿಯಾತ್ಮಕವಾಗಿ ಮತ್ತು ಮುಕ್ತಿಯನ್ನು ಹೊಂದುವಂತೆ ಕಾರ್ಯಗತಗೊಳಿಸುವ ಸಾಧನೆಯ ಕ್ರಿಯೆ ಮತ್ತು ನಂಬಿಕೆಯನ್ನೇ ತಂತ್ರವೆಂದು ಸಾಮಾನ್ಯವಾಗಿ ವಿವರಿಸುತ್ತಾರೆ.

           (ತಂತ್ರದ ಕುರಿತಾಗಿ ಇನ್ನಷ್ಟು ವಿವರಗಳಿಗೆ ಸಂಪದದಲ್ಲಿನ ಈ ಕೊಂಡಿಯನ್ನು ನೋಡಿ http://sampada.net/blog/%E0%B2%A4%E0%B2%BE%E0%B2%82%E0%B2%A4%E0%B3%8D%E0%B2%B0%E0%B2%BF%E0%B2%95-%E0%B2%B8%E0%B2%BE%E0%B2%A7%E0%B2%A8-%E0%B2%AD%E0%B2%95%E0%B3%8D%E0%B2%A4%E0%B2%BF%E0%B2%AF%E0%B3%8B%E0%B2%97%E0%B2%A6-%E0%B2%85%E0%B2%82%E0%B2%B6%E0%B2%97%E0%B2%B3%E0%B3%81/14/08/2012/37938 )

Manonmanī मनोन्मनी (207)

೨೦೭. ಮನೋನ್ಮನೀ

           ದೇವಿಯು ಗ್ರಹಿಕೆಗೆ ಅತೀತವಾದ ಮನೋನ್ಮನೀ ರೂಪದಲ್ಲಿದ್ದಾಳೆ. ಆಜ್ಞಾ ಚಕ್ರ ಮತ್ತು ಸಹಸ್ರಾರದ ಮಧ್ಯದಲ್ಲಿ ಎಂಟು ಕಿರಿದಾದ ಚಕ್ರಗಳಿವೆ ಮತ್ತು ಸಹಸ್ರರಾರದ ಸ್ವಲ್ಪ ಕೆಳಗಷ್ಟೇ ಇರುವ ಚಕ್ರವನ್ನು ಮನೋನ್ಮನೀ ಎಂದು ಕರೆಯಲಾಗುತ್ತದೆ; ಇದನ್ನು ಉನ್ಮನೀ ಎಂದೂ ಕರೆಯುತ್ತಾರೆ. ಈ ಚಕ್ರವು ಸಹಸ್ರಾರಕ್ಕೆ ಅತೀ ಸಮೀಪದಲ್ಲಿರುವುದರಿಂದ ಇಲ್ಲಿ ಶಿವ ಮತ್ತು ಶಕ್ತಿಯರ ಸಮಾಗಮದ ಹೊರತಾಗಿ ಬೇರೇನೂ ಚಟುವಟಿಕೆಗಳು ನಡೆಯುವುದಿಲ್ಲ ಮತ್ತು ಇದು ದೇಶ ಮತ್ತು ಕಾಲಗಳಿಗೆ ಅತೀತವಾಗಿದೆ. ದೇವಿಯನ್ನು ಶಕ್ತಿಯೆಂದು ಕರೆಯುವ ಕಡೆಯ ಹಂತವು ಇದಾಗಿದೆ ಮತ್ತು ಇದರ ಮುಂದಿನ ಹಂತವಾದ ಸಹಸ್ರಾರದಲ್ಲಿ ಆಕೆಯು ಶಿವ-ಶಕ್ತಿಯಾಗುತ್ತಾಳೆ. ಈ ಸ್ಥಳವನ್ನು ರುದ್ರನ ಮುಖವೆಂದು (ಬಾಯಿಯೆಂದೂ) ಕರೆಯುತ್ತಾರೆ. ಶ್ರೀ ರುದ್ರಮ್ ಸ್ತುತಿಯಲ್ಲಿ ಶಿವನ ಒಂದು ರೂಪವನ್ನು ಮನೋನ್ಮನ ಎಂದು ಕರೆಯಲಾಗಿದೆ ಮತ್ತು ಅವನ ಹೆಂಡತಿಯು ಮನೋನ್ಮನೀ. ಮನೋನ್ಮನೀ ಎನ್ನುವ ಒಂದು ಮುದ್ರೆಯೂ ಇದೆ ಮತ್ತು ಇದನ್ನು ಧ್ಯಾನದ ಉನ್ನತ ಹಂತಗಳಲ್ಲಿ ಪ್ರಯೋಗಿಸುತ್ತಾರೆ. ಈ ಮುದ್ರೆಯನ್ನು ಪ್ರಯೋಗಿಸಿದ ನಂತರ ಒಬ್ಬನು ಬಹುತೇಕ ತನ್ನ ಪ್ರಜ್ಞೆಯನ್ನು ಕಳೆದುಕೊಂಡು ಅವನು ಪರಬ್ರಹ್ಮದಲ್ಲಿ ಲೀನವಾಗುವ ಸ್ಥಿತಿಗೆ ತಲುಪುತ್ತಾನೆ. ಈ ಹಂತದಲ್ಲಿ ಧ್ಯಾನ, ಧ್ಯಾನಿ ಮತ್ತು ಧ್ಯಾನದ ಲಕ್ಷ್ಯ ಈ ಮೂರೂ ತ್ರಿಪುಟಿಗಳು ಕರಗಿಹೋಗಿ ಅಲ್ಲಿ ಪರಬ್ರಹ್ಮದೊಂದಿಗೆ ಅವುಗಳ ಒಂದುಗೂಡುವಿಕೆಯಾಗುತ್ತದೆ ಮತ್ತು ಈ ಹಂತದಲ್ಲಿ ಅಮೃತ (ಸುಧೆ) ಅಥವಾ ದೈವೀ ಮಕರಂದವು ಬಿಡುಗಡೆಯಾಗುತ್ತದೆ.

            ಶಿವನನ್ನು ಮನೋನ್ಮನ ಎಂದು ಕರೆಯುತ್ತಾರೆ. ಪರಶಿವನ ಪಾರಮಾನಸಿಕ ಶಕ್ತಿಯು ಅವನಿಂದ ಬೇರ್ಪಡಿಸಲಾಗದ್ದಾಗಿದ್ದರೂ ಕೂಡಾ ತನ್ನ ಪ್ರಾಥಮಿಕ ಹಂತದ ಅನಾವರಣಗೊಳ್ಳುವಿಕೆಯ ಹಂತದಲ್ಲಿರುತ್ತದೆ, ಅದನ್ನೇ ಉನ್ಮಾನ ಅಥವಾ ಉನ್ಮನೀ ಎಂದು ಕರೆಯುತ್ತಾರೆ. ಇದರ ಮುಂದಿನ ಹಂತವು ದೇಶ-ಕಾಲಗಳಿಗೆ ಅತೀತವಾಗಿದ್ದು ಅದನ್ನು ಅಳೆಯಲಾಗುವುದಿಲ್ಲ.

******

            ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 201-207 http://www.manblunder.com/2009/09/lalitha-sahasranamam-201-207.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

Rating
No votes yet

Comments

Submitted by nageshamysore Sat, 07/06/2013 - 21:56

ಶ್ರೀಧರರೆ, ೨೦೧ - ೨೦೭ ಕಾವ್ಯ ರೂಪ ಅವಗಾಹನೆ, ಪರಿಷ್ಕರಣೆಗೆ ಸಿದ್ದ...ನಿಮಗೆ ಹೋಮ್ವರ್ಕ್ ಜಾಸ್ತಿಯಾಗುತ್ತಿದೆಯೆಂದು ಕಾಣುತ್ತಿದೆ. ಇನ್ನೊಂದು 'ಪೂರಿ ಪಲ್ಯ ಸಾಗು ಶಿವ' ಫೀಸು ಕಳಿಸುವ ಆಲೋಚನೆ ಮಾಡಬಹುದು :-) - ನಾಗೇಶ ಮೈಸೂರು

ಲಲಿತಾ ಸಹಸ್ರನಾಮ ೨೦೧ - ೨೦೭

೨೦೧. ಸದ್ಗತಿ-ಪ್ರದಾ  
ಗುರಿ ಮುಕ್ತಿ ಮಾರ್ಗಕೆ ದೇವಿ ಮಾರ್ಗದರ್ಶನ ಮುನ್ನಡೆ
ಕರುಣಿಸಿ ಆಧ್ಯಾತ್ಮಿಕ ಜ್ಞಾನ ಬ್ರಹ್ಮಸಾಕ್ಷಾತ್ಕಾರದ ಕಡೆ
ವಿವೇಕಿ ಸದ್ಗತಿಮಾರ್ಗ ವಿಕಸಿಸಿ ಜ್ಞಾನ ನಶಿಸಿ ಆಜ್ಞಾನ
ವ್ಯಕ್ತಾವ್ಯಕ್ತ ಸ್ವರೂಪವರಿತರೆ ಸದ್ಗತಿ ಪ್ರದಾಯಿಸಿ ಜ್ಞಾನ!

೨೦೨. ಸರ್ವೇಶ್ವರೀ  
ಬ್ರಹ್ಮಾಂಡಕೆಲ್ಲಾ ಪಾಲಕಿ ಲಲಿತೆಯೆ ಅತ್ಯುನ್ನತ
ಪ್ರಜೆಗಳ್ಹೆತ್ತಾ ಕಾಳಜಿ ಕರೆದೊಯ್ವಳು ಬ್ರಹ್ಮದತ್ತ
ಅಂತಿಕಪಾಲಕಿ ಅಂತಿಮವಾಕ್ಯಕವಳೆ ಅಧಿಕಾರಿ
ಸಮಾನರಿಲ್ಲದ ಶ್ರೇಷ್ಥತೆ ಆಗಿಹಳು ಸರ್ವೇಶ್ವರೀ!

೨೦೩. ಸರ್ವ-ಮಯೀ  
ಲಲಿತಾ ಬ್ರಹ್ಮ ಸರ್ವವ್ಯಾಪಿಗುಣ ಸರ್ವ ರೂಪ ಧಾರಣ
ಸಕಲ ಜೀವಿಗಳಲಿ ಚೇತನಾರೂಪಿ ಆತ್ಮವಾಗಿ ಕರುಣಾ
ಚೈತನ್ಯ ಬ್ರಹ್ಮ ಸಮಾಗಮ ಸೃಷ್ಟಿ ಸ್ಥಿತಿ ಲಯಕೆ ಕಾರಣ 
ಸರ್ವತತ್ವ ನೆಲೆಸಿದ ದೇವಿ ಸರ್ವಮಯೀ ಅಸಾಧಾರಣ!

೨೦೪. ಸರ್ವ-ಮಂತ್ರ-ಸ್ವರೂಪಿಣೀ  
ಮಂತ್ರಾಕ್ಷರಗಳೆಲ್ಲ ಬೆಸೆದ ಮಾಲೆ ದೇವಿಯ ಕೊರಳಲ್ಲೆ
ಸರ್ವ ಮಂತ್ರಗಳ ಮೂರ್ತ ರೂಪ ತಂತ್ರಶಾಸ್ತ್ರಕು ಎಲ್ಲೆ
ಆಧರಿಸುತವಳೆಲ್ಲ ರೂಪ ಪಂಚದಶಿಯ ಸುತ್ತಲೆ ಮಂತ್ರ
ಸರ್ವಮಂತ್ರಸ್ವರೂಪಿಣಿಯಾದವಳ ಪೂಜಿಸಲೆಲ್ಲ ತಂತ್ರ!

೨೦೫. ಸರ್ವ-ಯಂತ್ರಾತ್ಮಿಕಾ
ಬೆಳ್ಳಿ ಬಂಗಾರ ತಾಮ್ರ ಮಿಶ್ರಲೋಹ ತಗಡು ಯಂತ್ರ
ಸುಪ್ತಮಂತ್ರಶಕ್ತಿ ರೇಖಾವೃತ್ತಿ ಶಾಸ್ತ್ರಾನುಸಾರ ಸೂತ್ರ
ದೇವ ಪ್ರತಿನಿಧಿ ಬಲು ಪವಿತ್ರದಿ ಮಂತ್ರವಿದ್ದಷ್ಟು ಶಕ್ತಿ
ಸರ್ವಯಂತ್ರಾತ್ಮಿಕೆ ಆಗೆಲ್ಲೆಡೆ ದೇವಿಲಲಿತೆ ಉಪಸ್ಥಿತಿ!

೨೦೬. ಸರ್ವ-ತಂತ್ರ-ರೂಪಾ  
ಮುಕ್ತಿ ಬಯಸುವ ಸೂತ್ರದ ಅಚರಣೆ ತಾ ತಂತ್ರ
ಶಿವಶಕ್ತಿಸಂವಾದ ಸೃಷ್ಟಿ ವಿನಾಶ ಪೂಜೆ ಸಿದ್ದಾಸ್ತ್ರ
ಧ್ಯಾನೈಕ್ಯ ಪರಮಾತ್ಮ ಪ್ರಯತ್ನ ಸಾಧನೆಗೆ ತಂತ್ರ
ದಿವ್ಯಶಕ್ತಿ ಪ್ರವಹಿಸೊ ಸರ್ವತಂತ್ರಕೆ ದೇವಿ ಕೇಂದ್ರ!

೨೦೭. ಮನೋನ್ಮನೀ  
ಆಜ್ಞಾ ಸಹಸ್ರಾರಕೆ ಸನಿಹ ಮನೋನ್ಮನೀ ಶಿವಶಕ್ತಿ ಸಾಮೀಪ್ಯ 
ದೇಶಕಾಲಾತೀತ ಸಮಾಗಮ ವಿನಃ ಬೇರೇನಿರದ ಬ್ರಹ್ಮರೂಪ
ಮನೋನ್ಮನ ಸತಿ ಮನೋನ್ಮನೀ ಧ್ಯಾನೋನ್ನತ ಗ್ರಹಣಾತೀತ
ತ್ರಿಪುಟಿ ಕರಗಿ ಪರಬ್ರಹದೆ ಐಕ್ಯ ಸ್ರವಿಸುತೆ ಸುಧೆ ಪ್ರಜ್ಞಾತೀತ!

Submitted by partha1059 Sat, 07/06/2013 - 22:00

In reply to by nageshamysore

ನಾಗೇಶರೆ ಬಹಳ ಚೆನ್ನಾಗಿದೆ ನಿಮ್ಮ ಕವನಗಳು
ಶ್ರೀದರರೆ ನನಗೆ ಅನ್ನಿಸುತ್ತಿದೆ, ನಾಗೇಶರು ಆಗಲೆ ನಿಮ್ಮ ಮುಂದಿನ ನಾಮಗಳಿಗು ಪದ್ಯವನ್ನು ರಚಿಸಿ ಸಿದ್ದರಾಗಿದ್ದಾರೆ ಎಂದು !!
ನಿಮ್ಮಿಬ್ಬರು ಜೋಡು ಓಟ ಹೀಗೆ ಮುಂದುವರೆಯಲಿ
ಶುಭಮಸ್ತು !

Submitted by partha1059 Sat, 07/06/2013 - 22:04

In reply to by partha1059

ನಿಮ್ಮಿಬ್ಬರು ಜೋಡು ಓಟ ಹೀಗೆ ಮುಂದುವರೆಯಲಿ...
ತಪ್ಪಾಗಿದೆ
ನಿಮ್ಮಿಬ್ಬರ ಜೋಡಿ ಓಟ ಹೀಗೆ ಮುಂದುವರೆಯಲಿ ಎಂದು ಓದಿಕೊಳ್ಳಿ..

Submitted by nageshamysore Sat, 07/06/2013 - 22:19

In reply to by partha1059

ಪಾರ್ಥ ಸಾರ್, ಶ್ರೀಧರರು ಇನ್ನು ಬೆಳಿಗ್ಗೆಯೆ ಇದನ್ನು ನೋಡುವುದೆಂದು ಕಾಣುತ್ತದೆ. ಅದಕ್ಕೆ ಈಗಲೆ ಒಂದು 'ಆಧ್ಯಾತ್ಮಿಕ ಉಪಹಾರ'ವನ್ನು ಸೇರಿಸಿಬಿಡುತ್ತೇನೆ - ಈ ಪದ್ಯದ ರೂಪದಲ್ಲಿ (ಸಾಗು, ಪಲ್ಯ, ಪೂರಿ ಯಿಂದ ಒಂದು ಶಿವ ಸ್ತುತಿ) - ನಾಗೇಶ ಮೈಸೂರು

ಸಾಗು, ಪಲ್ಯ, ಪೂರಿ, ಶಿವ
-----------------------------------------
ಭಕ್ತ 'ಸಾಗು'ವ ಹಾದಿಯಲಡೆತಡೆ ಸಹಜ
ಚಿತ್ತ ಚಾ'ಪಲ್ಯಾ' ಚಂಚಲತೆ ಕಾಡುವ ನಿಜ
ಹೆಜ್ಜೆ ತ'ಪ್ಪೂರಿ'ದರು ಮಕ್ಕಳಾ ಕಾಪಿಟ್ಟಂತೆ
ಕಾಪಾಡದಿಹನೆ 'ಶಿವ' ಸರಿದಾರಿ ತೋರುತೆ!

Submitted by makara Sun, 07/07/2013 - 09:03

ನಾಗೇಶರೇ,
ಬೆಳಿಗ್ಗೆಯೇ ನಿಮ್ಮ ರಸ’ಪೂರಿ’ತ ಪದ್ಯವನ್ನು ಮೆಲಕು ಹಾಕುತ್ತಾ; ಚಿತ್ತಚಾ’ಪಲ್ಯ’ಗಳನು ಬದಿಗಿರಿಸಿ ಈ ’ಶಿವ’-ಶಕ್ತಿಯೆಡೆಗೆ ’ಸಾಗು’ತ್ತಿದ್ದೇನೆ. ಶುಭದಿನ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
@ಪಾರ್ಥ ಸರ್,
ನಾಗೇಶ್ ಮತ್ತು ಶ್ರೀಧರರ ಜೋಡಿಯಂತೆ ನಿಮ್ಮ ಹಾಗೂ ಗಣೇಶರ ನಿರಂತರ ಪ್ರೋತ್ಸಾಹವೂ ಈ ಸಹಸ್ರನಾಮದ ಓಟಕ್ಕೆ ಪ್ರೇರಣಾದಾಯಿಯಾಗಿದೆ. ನಿಮಗೂ ಸಹ ಧನ್ಯವಾದಗಳು. ಶ್ರೀಧರ್ ಬಂಡ್ರಿ

Submitted by nageshamysore Sun, 07/07/2013 - 10:12

In reply to by makara

ಶ್ರೀಧರರೆ, ಚಿಕ್ಕದಾಗಿ ಚೊಕ್ಕವಾಗಿ "ಶಿಷ್ಟ ಚತುಷ್ಟಯ" ಎನ್ನಬಹುದೆ? (ಒಂದು ಪುಟ್ಟ ನಿಯಮ: ಅಗತ್ಯಕ್ಕೆ ತಕ್ಕ ಹಾಗೆ 'ಶಿ' ಯ ಜಾಗದಲಿ 'ದು' ಮತ್ತು 'ಕು' ತರಹದ 'ವಿಶೇಷ ಅಪಾರ್ಥಗಳನ್ನು' ಬಳಸುವ ಹಾಗಿಲ್ಲ ; ತೀರಾ ಅನಿವಾರ್ಯವೆನಿಸಿದರೆ 'ಶ್ರೇ', ಅಥವಾ 'ಬಲಿ' ಬೀಜಾಕ್ಷರ ಬಳಕೆಗೆ ಅನುಮತಿಯಿದೆ) ...:-)
(ಅಂದ ಹಾಗೆ ಮೇಲಿನದೆಲ್ಲ ಸುಮ್ಮನೆ ತಮಾಷೆಗೆ ಹೇಳಿದ್ದು :ಸಂಪದಿಗರಿಗೆಲ್ಲ ಗೊತ್ತಿರುವಂತೆ, ಈ ಆರಾಧನೆ ಬರಿ 'ಚತು'ಷ್ಟಯವಲ್ಲ, ಸಮಷ್ಟಿಯ ಸದಾಶಯ = 'ಶಿಷ್ಟ ಸಮಷ್ಟಯ')

- ನಾಗೇಶ ಮೈಸೂರು

Submitted by makara Fri, 07/12/2013 - 17:04

೨೦೧ ರಿಂದ ೨೦೭ರವರೆಗಿನ ಕಾವ್ಯಗಳ ಕುರಿತು
ನಾಗೇಶರೆ, ಈ ಕಾವ್ಯವನ್ನು ಅಂದೇ ನೋಡಿದ್ದರೂ ಸಹ ಇವನ್ನು ಕೂಲಂಕುಷವಾಗಿ ಪರಿಶೀಲಿಸದೆ ಹಾಗೇ ಬಿಟ್ಟಿದ್ದೆ. ಇಂದು ಸಮಯ ಸಿಕ್ಕದ್ದರಿಂದ ಅದರಲ್ಲಿನ ಸವರಣೆಗಳ ಕುರಿತು ಸೂಚಿಸುತ್ತಿದ್ದೇನೆ. ಉಳಿದಂತೆ ಎಲ್ಲಾ ಕಾವ್ಯಗಳು ಉತ್ತಮವಾಗಿ ಮೂಡಿ ಬಂದಿವೆ. ಇದಕ್ಕಾಗಲೆ ಪಾರ್ಥರ ಆಮೋದ ಮುದ್ರೆ ಬಿದ್ದಿದೆಯಲ್ಲವೇ? :)

೨೦೧. ಸದ್ಗತಿ-ಪ್ರದಾ
ವಿವೇಕಿ ಸದ್ಗತಿಮಾರ್ಗ ವಿಕಸಿಸಿ ಜ್ಞಾನ ನಶಿಸಿ ಆಜ್ಞಾನ
ವ್ಯಕ್ತಾವ್ಯಕ್ತ ಸ್ವರೂಪವರಿತರೆ ಸದ್ಗತಿ ಪ್ರದಾಯಿಸಿ ಜ್ಞಾನ!
ಮೇಲಿನೆರಡು ಸಾಲುಗಳು ಸ್ವಲ್ಪ ಗೋಜಲೆನಿಸುತ್ತವೆ. ಸ್ವಲ್ಪ ಸ್ಷಷ್ಟತೆ ತರಲು ಸಾಧ್ಯವೇ ನೋಡಿ.

೨೦೨. ಸರ್ವೇಶ್ವರೀ
ಅಂತಿಕಪಾಲಕಿ ಅಂತಿಮವಾಕ್ಯಕವಳೆ ಅಧಿಕಾರಿ
ಅಂತಿಕಪಾಲಕಿ=ಪರಮಪಾಲಕಿ ಆದರೆ ಅಂತಿಮ ಅಂತಿಮ ಎನ್ನುವ ಪುನರುಚ್ಛಾರಣೆ ತಪ್ಪುತ್ತದೆ.
......................................

೨೦೭. ಮನೋನ್ಮನೀ
ಮನೋನ್ಮನ ಸತಿ ಮನೋನ್ಮನೀ ಧ್ಯಾನೋನ್ನತ ಗ್ರಹಣಾತೀತ
ಮನೋನ್ಮನ=ಮನೋನ್ಮನನ
.....

ತಡವಾಗಿ ನೋಡಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆಯಿರಲಿ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Fri, 07/12/2013 - 19:09

In reply to by makara

ಶ್ರೀಧರರೆ, ೨೦೧. ಸದ್ಗತಿ-ಪ್ರದಾ  - ಈ ಸರಳೀಕರಿಸಿದ ರೂಪ ಸರಿಹೊಂದುವುದೆ ನೋಡಿ. ಅಂದಹಾಗೆ  '೨೦೨. ಸರ್ವೇಶ್ವರೀ' ಮತ್ತು '೨೦೭. ಮನೋನ್ಮನೀ'ಯ ಪರಿಷ್ಕರಣೆಗೆ ಸೊಗಸಾದ ಸಲಹೆ ಕೊಟ್ಟಿದ್ದೀರಾ. ಹಾಗೆಯೆ ಬದಲಿಸಿದೆ. ಮತ್ತಾವ ಪರಿಷ್ಕರಣೆ ಬೇಕಿಲ್ಲವೆಂದರೆ ಮೂರು ಕಂತಿಗು ಅಂತಿಮ ಲಿಂಕು ಕೊಡುತ್ತೇನೆ - ನಾಗೇಶ ಮೈಸೂರು

೨೦೧. ಸದ್ಗತಿ-ಪ್ರದಾ 
ಗುರಿ ಮುಕ್ತಿ ಮಾರ್ಗಕೆ ದೇವಿ ಮಾರ್ಗದರ್ಶನ ಮುನ್ನಡೆ
ಕರುಣಿಸಿ ಆಧ್ಯಾತ್ಮಿಕ ಜ್ಞಾನ ಬ್ರಹ್ಮಸಾಕ್ಷಾತ್ಕಾರದ ಕಡೆ
ವಿವೇಕಿ ಸದ್ಗತಿಮಾರ್ಗ ಹಿಡಿಯೆಜ್ಞಾನ ನಶಿಸೊ ಅಜ್ಞಾನ
ವ್ಯಕ್ತ ಅವ್ಯಕ್ತ ಅರಿಯೆ ಸದ್ಗತಿ ಪ್ರದಾಯಿಸೊ ದೇವಿಮನ!

೨೦೨. ಸರ್ವೇಶ್ವರೀ 
ಬ್ರಹ್ಮಾಂಡಕೆಲ್ಲಾ ಪಾಲಕಿ ಲಲಿತೆಯೆ ಅತ್ಯುನ್ನತ
ಪ್ರಜೆಗಳ್ಹೆತ್ತಾ ಕಾಳಜಿ ಕರೆದೊಯ್ವಳು ಬ್ರಹ್ಮದತ್ತ
ಪರಮಪಾಲಕಿ ಅಂತಿಮವಾಕ್ಯಕವಳೆ ಅಧಿಕಾರಿ
ಸಮಾನರಿಲ್ಲದ ಶ್ರೇಷ್ಥತೆ ಆಗಿಹಳು ಸರ್ವೇಶ್ವರೀ!

೨೦೭. ಮನೋನ್ಮನೀ 
ಆಜ್ಞಾ ಸಹಸ್ರಾರಕೆ ಸನಿಹ ಮನೋನ್ಮನೀ ಶಿವಶಕ್ತಿ ಸಾಮೀಪ್ಯ
ದೇಶಕಾಲಾತೀತ ಸಮಾಗಮ ವಿನಃ ಬೇರೇನಿರದ ಬ್ರಹ್ಮರೂಪ
ಮನೋನ್ಮನನಸತಿ ಮನೋನ್ಮನೀ ಧ್ಯಾನೋನ್ನತ ಗ್ರಹಣಾತೀತ
ತ್ರಿಪುಟಿ ಕರಗಿ ಪರಬ್ರಹ್ಮದೆ ಐಕ್ಯ ಸ್ರವಿಸುತೆ ಸುಧೆ ಪ್ರಜ್ಞಾತೀತ!

Submitted by makara Fri, 07/12/2013 - 21:31

In reply to by nageshamysore

೨೦೨. ಸರ್ವೇಶ್ವರೀ
ಬ್ರಹ್ಮಾಂಡಕೆಲ್ಲಾ ಪಾಲಕಿ ಲಲಿತೆಯೆ ಅತ್ಯುನ್ನತ
ಪಾಲಕಿ=ನಾಯಕಿ ಮಾಡಿದರೆ ಹೇಗೆ? ಆಗ ಪಾಲಕಿ ಎನ್ನುವ ಶಬ್ದ ಮೊದಲನೇ ಮತ್ತು ಮೂರನೇ ಸಾಲಿನಲ್ಲಿ ಎರಡು ಬಾರಿ ಬರುವುದನ್ನು ತಪ್ಪಿಸಿದಂತಾಗುತ್ತದೆ.

ಪ್ರಜೆಗಳ್ಹೆತ್ತಾ ಕಾಳಜಿ ಕರೆದೊಯ್ವಳು ಬ್ರಹ್ಮದತ್ತ
ಪರಮಪಾಲಕಿ ಅಂತಿಮವಾಕ್ಯಕವಳೆ ಅಧಿಕಾರಿ
ಸಮಾನರಿಲ್ಲದ ಶ್ರೇಷ್ಥತೆ ಆಗಿಹಳು ಸರ್ವೇಶ್ವರೀ!

ಉಳಿದಂತೆ ಎಲ್ಲಾ ಸರಿಯೆನಿಸುತ್ತಿದೆ; ಹೀಗಾಗಿ ಅಂತಿಮ ರೂಪಕ್ಕೆ ಕೊಂಡಿ ಕೊಡಬಹುದೆನಿಸುತ್ತದೆ ನಾಗೇಶರೆ.
ವಂದನೆಗಳೊಂದಿಗೆ ಶ್ರೀಧರ್ ಬಂಡ್ರಿ

Submitted by nageshamysore Sat, 07/13/2013 - 03:35

In reply to by makara

ಶ್ರೀಧರರೆ, ಎರಡು ಬಾರಿಯ ಪುನರಾವರ್ತನೆ ನಾನೂ ಗಮನಿಸಲಿಲ್ಲ - ನಾಯಕಿಯನ್ನೆ ಬಳಸೋಣ, ಹೊಂದಿಕೆಯಾಗುತ್ತದೆ. ಹಾಗೆಯೆ ಅಂತಿಮ ಕೊಂಡಿಯನ್ನೂ ಸೇರಿಸಿದ್ದೇನೆ - ನಾಗೇಶ ಮೈಸೂರು

೨೦೨. ಸರ್ವೇಶ್ವರೀ
ಬ್ರಹ್ಮಾಂಡಕೆಲ್ಲ ನಾಯಕಿ ಲಲಿತೆಯೆ ಅತ್ಯುನ್ನತ
ಪ್ರಜೆಗಳ್ಹೆತ್ತಾ ಕಾಳಜಿ ಕರೆದೊಯ್ವಳು ಬ್ರಹ್ಮದತ್ತ
ಪರಮಪಾಲಕಿ ಅಂತಿಮವಾಕ್ಯಕವಳೆ ಅಧಿಕಾರಿ
ಸಮಾನರಿಲ್ಲದ ಶ್ರೇಷ್ಥತೆ ಆಗಿಹಳು ಸರ್ವೇಶ್ವರೀ!

ಅಂತಿಮ ಪರಿಷ್ಕರಿಸಿದ ಕೊಂಡಿ:- https://ardharaatriaalaapagalu.wordpress.com/61-2