ಮನೆ ಬಾಡಿಗೆಗೆ ಇದೆಯೇ? (CTRL+F for TO LET)

ಮನೆ ಬಾಡಿಗೆಗೆ ಇದೆಯೇ? (CTRL+F for TO LET)

ಮದ್ವೆ ಅಂದ್ರೆ facebook ಸ್ಟೇಟಸ್ ಸಿಂಗಲ್ ಇಂದ ಮ್ಯಾರೀಡ್ ಅಂತ ಚೇಂಜ್ ಮಾಡೋವಷ್ಟು ಸುಲಭ ಅಂತ ಅಂದ್ಕೊಂಡಿದ್ದೆ ನಾನು. ಹೆಂಡ್ತೀನ ಕರ್ಕೊಂಡು ಹೋಗೋದಕ್ಕಿಂತ ಮುಂಚೆ ಮನುಷ್ಯರು ವಾಸ ಮಾಡೋಕೆ ಲಾಯಕ್ಕು ಇರೋ ಒಂದು ಮನೆ ಮಾಡು, ಈಗ ಇರೋ ಮನೆ ಒಂದು ಪಾಳು ಮನೆ ತರಾ ಇದೆ ಅಂತ ಅಮ್ಮನಿಂದ ಕಿವಿಮಾತು (ಕಿವಿಮಾತು ಅನ್ನೋದಕ್ಕಿಂತ ಕಿವಿ ಹಿಂಡಿ ಹೇಳಿದ ಮಾತು ಅನ್ನೋದು ಸೂಕ್ತವೇನೋ). ಸರಿ ಆಫೀಸಿನಲ್ಲಿ ಹೊಸ ಪ್ರಾಜೆಕ್ಟ್ ಬಂದಾಗಲೆಲ್ಲ ಅದನ್ನು ಹಂತ ಹಂತವಾಗಿ ವಿಭಜಿಸಿ ಕಾರ್ಯಗತಗೊಳಿಸೋದು(what a joke ;-)) ವಾಡಿಕೆ.  ಬಾಡಿಗೆ ಮನೆ ಹುಡುಕೋ ಪ್ರಾಜೆಕ್ಟ್ ಕೂಡ ಹಂತ ಹಂತವಾಗಿ ಮುಗಿಸೋಣ ಅಂದ್ಕೊಂಡೆ. ಮೊದಲ ಹಂತದಲ್ಲಿ ಬ್ರೋಕರ್ ಗೆ ಕೊಡೋ ಹಣ ಉಳಿಸೋಕೆ ಸ್ಕೆಚ್. ಫ್ರೆಂಡ್ಸು, ಸಹೋದ್ಯೋಗಿಗಳು ಸೇರಿದಂತೆ ಎಲ್ಲ ಸಹೃದಯರಲ್ಲಿ ಮನೆ ಖಾಲಿ ಇದ್ರೆ ಹೇಳ್ರೋ ಅಂತ ಕೈ ಜೋಡಿಸಿ ಪ್ರಾರ್ಥನೆ. ಆಮೇಲೆ ಸ್ವಲ್ಪ ದಿನ ಬಿಟ್ಟು ಏನ್ರೋ ಎಂಥಾ ಫ್ರೆಂಡ್ಸುಗಳೋ ನೀವೆಲ್ಲ?  ಒಂದು ಮನೆ ಹುಡುಕಿ ಕೊಡಕ್ಕೆ ಆಗಿಲ್ವಲ್ಲ ಅಂತ ಎಮೋಷನಲ್ ಬ್ಲಾಕ್ ಮೇಲ್ ಮಾಡಿದೆ. ಒಂದೆರಡು ಮನೆ ದೊರಕಿದ್ರು ಯಾಕೋ ಬೇಡ ಅನ್ನಿಸ್ತು.... ಇಷ್ಟರಲ್ಲಿ ಒಂದು ತಿಂಗಳು ಕಳೆದು ಹೋಗಿದ್ದರಿಂದ ಎರಡನೇ ಹಂತ ಶುರು ಮಾಡಿದೆ.  ಏನು ಅಂತೀರಾ? ಸಮಯ ಸಿಕ್ಕಾಗಲೆಲ್ಲ ಅಲ್ಲಿ ಇಲ್ಲಿ ಮನೆ ಖಾಲಿ ಇದೆ ಅನ್ನೋ ಬೋರ್ಡಿಗಾಗಿ ಹುಡುಕಾಟ. ಅಲ್ಲಿ ಇಲ್ಲಿ ಟೀ ಅಡ್ದಾಗಳು, ಬಾಯಲ್ಲಿ ನೀರು ತರಿಸೋ ಪಾನಿಪುರಿ ಸ್ಪಾಟ್ ಗಳು, ಪಾರ್ಕಿಂಗ್ ಅಲ್ಲಿ ನಿಲ್ಲಿಸಿದ ಹೊಸ ಹೊಸ ಕಾರುಗಳು, ಬೇರೆ ಬೇರೆ ಸೈಜ್ ನಾಯಿಗಳು, ನಾಯಿಗಳ ಜೊತೆ ವಾಕಿಂಗ್ ಹೋಗ್ತಾ  ನಗು ಚೆಲ್ಲೋ ಚೆಲುವೆಯರು ಸಿಕ್ಕಿದರೇ ಹೊರತು ಮನೆ ಮಾತ್ರ ಸಿಕ್ಲೇ ಇಲ್ಲ. ಸರಿ ಪ್ರಾಜೆಕ್ಟು ಕುತ್ತಿಗೆಗೆ ಬರ್ತಾ ಇದೆ  ಇನ್ನು ಟ್ರೈನಿಗಳನ್ನು ನಂಬಿ ಪ್ರಯೋಜನವಿಲ್ಲ, ಸ್ಪೆಷಲಿಸ್ಟ್ ಗೆ ಹೇಳೋದೇ ವಾಸಿ ಅಂತ ಇರೋ ಬರೋ ಬ್ರೋಕರ್ ಗಳಿಗೆ ನಂಬರ್ ಕೊಟ್ಟು ಮನೆ ಹುಡುಕಲು ಹೇಳಿದಾಗ ಏನೇನು ಪಲಿತಾಂಶ ಬಂತು ಅನ್ನೋದರ ಬಗ್ಗೆ ಈ ಲೇಖನ .

 

 

ಶನಿವಾರ ಬೆಳಗ್ಗೆ  ಫೋನ್ ರಿಂಗ್ ಆಯಿತು, ಹೊರಗೆ  ಇನ್ನೂ ಕತ್ತಲೆ, ಟೈಮ್ ನೋಡಿದ್ರೆ 6.30.  ಯಾರೋ ಫ್ರೆಂಡ್ಸು ಕಳ್ ನನ್ ಮಕ್ಳು ಕಾಲ್ ಮಾಡಿರಬೇಕು ಅಂದ್ಕೊಂಡು ಪಿಕ್ ಮಾಡಿದರೆ ಅದು ಬ್ರೋಕರ್ ಕಾಲ್ . ಸಾರ್ ಒಂದು ಮನೆ ಇದೆ. ಬೇಗ ನೋಡೋಕೆ ಬನ್ನಿ. ಆಮೇಲೆ ಓನರ್ ಹೊರಟು ಹೋಗ್ತಾರೆ ಅ೦ದ. ಸರಿ ಓನರ್ ಒಳ್ಳೆ VIP ಇರಬೇಕು ಅಂದ್ಕೊಂಡೆ. ಇನ್ನು ಇದೇ ಮೂತೀಲಿ ಹೋದ್ರೆ ಯಾರೋ ಪೊರ್ಕಿ ಅಂದ್ಕೋತಾರೆ ಅಂತ ಸ್ನಾನ ಮಾಡಿ ಹೊರಟೆ. ಶನಿವಾರ ಇಷ್ಟು ಬೇಗ ಸ್ನಾನ ಮಾಡಿದ್ದು ಇತಿಹಾಸ. ಅಪರೂಪಕ್ಕೆ ಹುಡುಗಿಯರಿಗೆ ಕಾಳು ಹಾಕಕ್ಕೆ ಕೂಡ ಇಷ್ಟು ಬೇಗ ಎದ್ದು ರೆಡಿ ಆಗಿಲ್ಲ .ಸರಿ ಅಂತ ಹೋದರೆ 2ನೇ ಮಹಡಿಯಲ್ಲಿ ಮನೆ, ಸಕತ್ ಆಗಿದೆ, ಒಳ್ಳೆ ಏರಿಯಾ, ಪಾರ್ಕಿಂಗ್ ರೋಡ್ ಅಲ್ಲಿ ಆದ್ರೂ ಪರವಾಗಿಲ್ಲ.  ಇನ್ನೇನು ಫಿಕ್ಸ್ ಮಾಡೋಣ ಅಂತ ಯೋಚನೆ ಮಾಡ್ತಾ ಇರೋವಾಗಲೇ ಓನರ್ ಕಡೆಯಿಂದ ಬಂತು ಬ್ರಹ್ಮಾಸ್ತ್ರ. ಏನಪ್ಪಾ ಮದುವೆ ಆಗಿದೆಯಾ ಅಂತ. ಒಹ್ ಈ ಸಲ ಅದೃಷ್ಠ ನನ್ ಜೊತೆ ಇದೆ ಯಾಕೆ ಅಂದ್ರೆ ಮದುವೆ ಫಿಕ್ಸ್ ಆಗಿದೆಯಲ್ಲ. ಆಗಿದೆ ಸರ್ ಅಂತ ಫುಲ್  confidense ಅಲ್ಲಿ ಹೇಳಿದೆ. ಹೆಂಡತಿ ಎಲ್ಲಿ ಇರೋದು ಅಂತ ಕೇಳಿದ್ದಕ್ಕೆ ಸಾರ್ ಇನ್ನು ಆರು ತಿಂಗಳಲ್ಲಿ ಮದ್ವೆ ಸಾರ್ ಅಂದೆ. ಹಾಗಾದ್ರೆ ನೀವು ಒಂದು ಕೆಲಸ ಮಾಡಿ ಈಗಲೇ ಅಡ್ವಾನ್ಸ್ ಕೊಟ್ಟು ಬಿಡಿ. ಆಮೇಲೆ ಇವತ್ತಿಂದಲೇ ಈ ಮನೆಗೆ rent ಶುರು  ಮಾಡ್ಕೊಂಡು ಬಿಡಿ, ಮದುವೆ ಆಗೋವರೆಗೆ ಈಗ ಇರೋ ಮನೇಲೇ ಇರಿ,ಮದುವೆ ಆದ ಮೇಲೆ ಶಿಫ್ಟ್ ಮಾಡ್ಕೊಳ್ಳಿ ಯಾಕಂದ್ರೆ ಬ್ಯಾಚುಲರ್ ಗೆ ನಾವು ಮನೆ ಕೊಡೋದಿಲ್ಲ. !!!!!!!!! oh my god. "ನಿಮ್ಮಂತ ಮಹಾನುಭಾವರುಗಳು ಇದ್ರೂ ಕೂಡ ಕಾಲ ಕಾಲಕ್ಕೆ ಮಳೆ ಆಗ್ತಾ ಇದೆ ಅಂದ್ರೆ ಆ ದೇವ್ರು ಎಷ್ಟು ದಯಾಮಯಿ ಇರಬೇಕು , ನಿಮಗೆಲ್ಲ ನರಕದ ಮಹಾದ್ವಾರದಲ್ಲಿ ಬಿಕ್ಷೆ ಬೇಡೋ ಕೆಲಸ ಕಾಯಂ" ಅಂತ ಶಾಪ ಹಾಕ್ಕೊಂಡು ಮನೆಗೆ ಬಂದು ನಿದ್ದೆ ಮುಂದುವರಿಸಿದೆ.... 

 

 

ಮದ್ಯಾಹ್ನ 12. 30 ಅದೇನೋ ಮೀಟಿಂಗಲ್ಲಿ  ಕೂತಿರಬೇಕಾದ್ರೆ ಫೋನ್ ರಿಂಗಾಯಿಸಿತು.sadda haq ರಿಂಗ್ ಟೋನ್ ಬೇರೆ. ಎಲ್ರೂ ಒಮ್ಮೆ ಕಣ್ಣು ಕೆಕ್ಕರಿಸ್ಕೊಂಡು ನೋಡಿದ್ರು. ಮೀಟಿಂಗ್ ಇರ್ಬೇಕಾದ್ರೆ ಸೈಲೆಂಟ್ ಮೋಡ್ ಇಡಬೇಕು ಅನ್ನೋದು ರೂಲ್ಸ್, ಆದ್ರೆ ಬಡ್ಡಿಮಗಂದು ನೆನಪಾಗಲ್ವೆ...ಪಕ್ಕದಲ್ಲೇ ಕೂತ ಮಿತ್ರನೊಬ್ಬನ ಮುಖದಲ್ಲಿ ಸಂದೇಹದ ನೋಟ( "ಕಳ್ ನನ್  ಮಗ ಫೇಕ್ ಕಾಲ್ activate ಮಾಡಿ ಹೊರಗೆ ಹೋಗ್ತಾ ಇದಾನೆ" ಅಂತ ಇರಬಹುದೇನೋ).   ಹೊರಬಂದು ಕರೆ ಉತ್ತರಿಸಿದರೆ ಬ್ರೋಕರ್ ಮಹಾಶಯಂದು.  ಸಾರ್  ಒಂದು  ಸಕ್ಕತ್  ಮನೆ ಇದೆ. ಓನರ್ ಬೇರೆ ಕಡೆ ಇರೋದು, ತಿಂಗಳಿಗೊಮ್ಮೆ ಬರ್ತಾರೆ , ವಿಶಾಲವಾದ ಪಾರ್ಕಿಂಗ್ ಜಾಗ ಇದೆ, ನಿಮ್ ತರಾನೆ ಒಬ್ರು ಕಾಲ್ ಸೆಂಟರ್ ಉದ್ಯೋಗಿ 3 ವರ್ಷ ಇದ್ರು,ಅಂದ. ಪುಣ್ಯಾತ್ಮ ನಾನು ಕಾಲ್ ಸೆಂಟರ್ ಉದ್ಯೋಗಿ ಅಲ್ಲಪ್ಪ ಅಂದೆ. ಸರ್ ಮತ್ತೆ ದಿನ ಬೆಳಗ್ಗೆ ನಿಮ್ಮನ್ನ ಪಿಕ್ ಮಾಡಕ್ಕೆ ಗಾಡಿ ಬರತ್ತೆ ಅಲ್ವಾ ಅದ್ಕೆ ಹಾಗೆ ಅಂದ್ಕೊಂಡೆ ಅಂದ. ಓಹೋ ಗಾಡಿ ಬಂದವರೆಲ್ಲ ಕಾಲ್ ಸೆಂಟರ್ ಉದ್ಯೋಗಿಗಳು. ಒಳ್ಳೇ ಲಾಜಿಕ್ ಅಂದ್ಕೊಂಡೆ ಮನಸ್ಸಿನಲ್ಲಿ . ಎಷ್ಟು ಗಂಟೆಗೆ ಬರಲಪ್ಪ ಅಂದ್ರೆ ರಾತ್ರೆ ಒಂದು  9 ಗಂಟೆಗೆ ಬನ್ನಿ ಸಾರ್ ಅಂದ. ಬೆಂಗಳೂರಿಗರು ಸಂಜೆ 6 ರ ಮೇಲೆ ಮನೆ ತೋರಿಸೋದಿಲ್ಲ ಅಂತಾರೆ, ಅಂತದ್ರಲ್ಲಿ ಇದು ಏನಪ್ಪಾ ರಾತ್ರೆ ಮನೆ ತೋರಿಸ್ತಾರೆ ಮಾಲಕರು ಅಂದೆ.  ಇಲ್ಲಾ ಸಾರ್ ಸಕತ್ ಒಳ್ಳೆ ಜನ ,ಬೆಳಗ್ಗೆ ಧ್ಯಾನ ಮಾಡ್ತಾರೆ, ಸಂಜೆ ಯಾವ್ದೋ ಯೋಗ ಅಂತೆ ಅದ್ಕೆ ಲೇಟು ಅಂದ. ಓಹೋ ಒಳ್ಲ್ಲೇ ಜನ, ಪಾರ್ಕಿಂಗ್ ಜಾಗ ಬೇರೆ ಇದೆ, ಇನ್ನೇನು ಮನೆ ಚೆನಾಗಿಲ್ಲ ಅಂದ್ರೂನು ಅಡ್ಜಸ್ಟ್ ಮಾಡ್ಕೊಳ್ಳೋದು ಅಂತ ಮೈಂಡ್ ಫಿಕ್ಸ್ ಮಾಡ್ಕೊಂಡೆ. ಸರೀ ರಾತ್ರಿ ಊಟ ಮುಗಿಸ್ಕೊಂಡು ಬ್ರೋಕರ್ ಗೆ ಕಾಲ್ ಮಾಡಿದ್ರೆ ಇಲ್ಲೇ ಬಂದ್ ಬಿಡಿ ಸಾರ್ ಹೋಗೋಣ ಅಂದ. ಅಂತು ಮಹಾಶಯನ ಕರ್ಕೊಂಡು ಒಂದೈದು ಕಿಲೋಮೀಟರು ಹೋದ ಮೇಲೆ  ಸಾರ್ ಇಲ್ಲೇ ನಿಲ್ಲಿಸಿ ಬಿಡಿ ಅಂದ. ದೊಡ್ಡ 3 ಅಂತಸ್ತಿನ ಮನೆ. ಸಕತ್ ಆಗಿ ಇದೆ ಅಂತ ಆ ಕಡೆ ಹೆಜ್ಜೆ ಇದ್ರೆ, ಸಾರ್ ಮನೆ ಈ ಕಡೆ ಇರೋದು ಇಲ್ಲಿ ಬನ್ನಿ ಅನ್ನೋದೆ? ನೋಡಿದರೆ ಒಂದು ಸಾದಾರಣ ಮನೆ,ಹೊರಗಿನ ಗೋಡೆ ನೋಡಿದರೆ ಪೇಯಿಂಟ್ ನ ಮುಖ ನೋಡಿ ಏನಿಲ್ಲಾ ಅಂದ್ರು 10 ವರ್ಷ ಮೇಲೆ ಆಗಿದೆ. ಸಾರ್ ಓನರ್ ಹೊರಗಡೆ ಪೇಯಿಂಟ್ ಮಾಡಿಸೋದಿಲ್ಲ ಅದು ವೇಸ್ಟ್ ಅಲ್ವಾ ಸಾರ್ ಒಳಗಡೆ ನೋಡಿ ಮನೆ ಚೆನ್ನಾಗಿದೆ ಅಂದ. ಇಲ್ಲಿ ಪಾರ್ಕಿಂಗ್ ಎಲ್ಲಿದೆಯಪ್ಪ  ಅಂದ್ರೆ ಸಾರ್ ಮೊದ್ಲು ಮನೆ ನೋಡಿ ಆಮೇಲೆ ಪಾರ್ಕಿಂಗ್ ಜಾಗ ತೋರಿಸ್ತೇನೆ ಅಂದ. ಸರಿ ಒಳಗೆ ಹೋಗಿ ನೋಡಿದ್ರೆ ಅದು ಔಟ್ ಹೌಸ್ ಮನೆ. ಗಾಳಿ ಬೆಳಕು ಅನ್ನೋದು ಇಲ್ವೇ ಇಲ್ಲ.  ಮುಂಚೆ ಇದ್ದ ಕಾಲ್ ಸೆಂಟರ್ ಉದ್ಯೋಗಿ 3 ವರ್ಷ ಯಾಕೆ ಇದ್ದ ಅನ್ನೋದು ಈಗ ಗೊತ್ತಾಯಿ ತು. ಅವ್ರಿಗೆ ರಾತ್ರೆ ಕೆಲಸ ಹಗಲು ನಿದ್ದೆ, ಗಾಳಿ ಬೆಳಕು ಇಲ್ಲ ಅಂದ್ರೆ ಅವ್ರಿಗೆ ಫುಲ್ ಕುಶ್...ಬಾಡಿಗೆ ಎಷ್ಟಪ್ಪ ಅಂತ ಕೇಳಿದ್ರೆ   ಬೇರೆ ಅವ್ರಿಗೆ ಆದ್ರೆ 8 ಸಾವಿರ. ಆದ್ರೆ ಈ ಓನರ್ ಮಗ ನಿಮ್ ತರಾನೆ ಕೆಲಸ ಮಾಡೋದು ಅದ್ಕೆ ಒಂದು ಇನ್ನೂರು ಕಮ್ಮಿ ಕೊಡಿ ಅಂದ ಮಹಾನುಭಾವ. ಸರೀಪ್ಪ ಒಮ್ಮೆ ಪಾರ್ಕಿಂಗ್ ಜಾಗ ತೋರಿಸು ಏನು ಅಂತ ಹೇಳ್ತೇನೆ ಅಂದ್ರೆ ಪಾರ್ಟಿ ರೇಗಿ ಬಿಡೋದೇ?. ಆಗ್ಲಿಂದ ಪಾರ್ಕಿಂಗ್ ಜಾಗ ಅಂತ ತಲೆ ತಿನ್ತೀರಲ್ಲ ಅಲ್ಲಿ ನೋಡಿ ಆ ಪಕ್ಕದ ಖಾಲಿ ಸೈಟ್ ಇದೆ ಅಲ್ವಾ,ಅದೇ ಪಾರ್ಕಿಂಗ್ ಅಂತಾ ಇದ್ರೆ ಹೊಡಿಯೋದು ಒಂದೇ ಬಾಕಿ. ಏನ್ರಿ ನೀವು ಪಕ್ಕದ್ ಸೈಟ್ ತೋರಿಸಿ ಪಾರ್ಕಿಂಗ್ ಇದೆ ಅಂತೀರಾ ಅಂದ್ರೆ ಸಾರ್ ಮನೆ ಸಕತ್ ಡಿಮ್ಯಾಂಡ್ ಇದೆ ಬೇಕಾದರೆ ತಗೋಳಿ ಇಲ್ಲಾಂದ್ರೆ ಬಿಡಿ ಅನ್ನೊದೆ. ? ಇರು ಮಗನೆ ನಿಂಗೆ ಅಂತ ಸಿಟ್ಟಿನಲ್ಲಿ ಬ್ರೋಕರ್ ನ ಅಲ್ಲೇ ಬಿಟ್ಟು ಮನೆಗೆ  ಬರೋವಾಗ ಗಂಟೆ 11. ಅವ್ನು ಅವನ ಮನೆಗೆ ಹೋಗ್ಬೇಕು ಅಂದ್ರೆ ಏನಿಲ್ಲ ಅಂದ್ರು 2-3 ಕಿಲೋಮೀಟರು ನಡೀಬೇಕು, ಹೀಗಾದ್ರೂ  ಸೇಡು ತೀರಿಸ್ಕೊಂಡೆ ಅನ್ನೋ ಸಮಾದಾನ ಮನಸ್ಸಿನಲ್ಲಿ. 

 

ಇನ್ನು ಬರೋದು ಮೋಸ್ಟ್ ಇಂಟೆರೆಸ್ಟಿಂಗ್ ಪಾರ್ಟಿ. ನಿವೃತ್ತ ಪ್ರಾಂಶುಪಾಲರು. ಮನೆ ನೋಡ್ತಾ ಇರೋವಾಗ ಅವರ ಲೆಕ್ಚರ್ ಶುರು. ಪಾಪ ಅವರು ಪಾಠ ಮಾಡದೆ ಬಹಳ ದಿನಗಳಾಗಿರಬಹುದೇನೋ ಅನ್ನಿಸಿತು. ಸರಿ ಯಾಕೆ ಇವರಿಗೆ ಬೇಜಾರು ಮಾಡೋದು ಅಂತ ಸ್ವಲ್ಪ ಸಮಯ ಕೇಳಿಸ್ಕೊಂಡೆ. ಬೋರ್ ನೀರು ಇದೆ, ಆದ್ರೆ ನಿಮಗೆ ಕನೆಕ್ಷನ್ ಇಲ್ಲ. ಯಾಕೆ ಅಂದ್ರೆ ಬೋರ್ ಕನೆಕ್ಷನ್ ಕೊಟ್ರೆ ಕಾವೇರಿ ನೀರನ್ನು ಯಾರು ಬಳಸದೆ ಅದು ಹಾಳಾಗತ್ತೆ ಅಂದ್ರು. ಟಾಯ್ಲೆಟ್ ಅಲ್ಲಿ ಪೈಪ್ ಹಾಕಿಲ್ಲ. ಹೊರಗಡೆಯಿಂದ ನೀರು ತಗೊಂಡು ಹೋಗ್ಬೇಕು, ಯಾಕೆ ಅಂದ್ರೆ ಆಮೇಲೆ ಜನ ನೀರು ಜಾಸ್ತಿ ಬಳಸ್ತಾರೆ.  ಅಡಿಗೆ ಮನೇಲಿ ನೀರು ಬರೋದಿಲ್ಲ ಯಾಕೆ ಅಂದ್ರೆ ಅಲ್ಲಿ ನೀವು ಅದು ಇದು ಅಂತ  ತೊಳೆದು ಆಮೇಲೆ ಬ್ಲಾಕ್ ಆಗುತ್ತೆ ಸುಮ್ನೆ ನಮಗೆ ತಲೆನೊವು ಅನ್ನೋದೇ? ಇದ್ಯಾಕೋ ತಲೆ ನೋವು ಪಾರ್ಟಿ, ಸಹವಾಸ ಬೇಡಪ್ಪ ಅಂತನಿಸಿತು. ಯಾರಿಗೊತ್ತು ಆಮೇಲೆ ಈ  ಪಾರ್ಟಿ ಬೆಡ್ ರೂಮ್  ತೋರಿಸಿ ಇದು ಬೆಡ್ ರೂಮ್, ಆದ್ರೆ ಇಲ್ಲಿ ಮಲಗೋ ಹಾಗಿಲ್ಲ. ಯಾಕೆ ಅಂದ್ರೆ ನನಗೆ ಮಕ್ಕಳನ್ನು {ಮುಂದೆ ಆಗಬಹುದಾದ ಮಕ್ಕಳು ;-) }  ಕಂಡ್ರೆ  ಆಗೋದಿಲ್ಲ ಅನ್ನೋದಕ್ಕಿಂತ ಮೊದಲು ನಿಮ್ಮ ಮನೆ ನನಗೆ ಇಷ್ಟ ಆಗಿಲ್ಲ ಅಂತ ಹೇಳಿ ಬ್ರೋಕರ್ ಗೆ ಒಮ್ಮೆ ಗುರಾಯಿಸಿ ನನ್ನ ಬೈಕ್ ಹತ್ತಿದೆ...... 
 

ಇನ್ನು ಮಾಮೂಲಿ ಅನ್ನಿಸೋ ಕೆಲವು ಸನ್ನಿವೇಷಗಳನ್ನು ಇಲ್ಲಿ ಬರೆದಿಲ್ಲ. ಅಂತು 7 ತಿಂಗಳ ಹುಡುಕಾಟದ ನಂತರ ಒಂದು ಮನೆ ಸಿಕ್ಕಿತು. 3 ಅಂತಸ್ತಿನ ಮನೆ, ಅದರಲ್ಲಿ ನನ್ನದು 2 ನೆ ಅಂತಸ್ತು. ಗ್ರೌಂಡ್ ಫ್ಲೋರ್ ಬೇಕು ಅಂತಾ  ಇದ್ದ ನಾನು exercise ಆಗತ್ತೆ ಅಂತ ಒಪ್ಪಿಕೊಂಡೆ. ಇನ್ನು ಬೋರ್ ನೀರು ಬರಬೇಕಾದ ಎಲ್ಲ ಜಾಗಗಳಲ್ಲೂ ಬರುತ್ತೆ. ಕಾವೇರಿ ನೀರು ಕೂಡ ಬರುತ್ತೆ ಆದ್ರೆ ಅದು ಬರೋ ಜಾಗಕ್ಕೆ ನಾನು ಹೋಗ್ಬೇಕು ಅಷ್ಟೇ :-). (ನೀರು pressure ಕಡಿಮೆ, ಗ್ರೌಂಡ್ ಫ್ಲೋರ್ ಗೆ ಹೋಗಿ ನೀರು ತರಬೇಕು)  . ವಿಶಾಲವಾದ ಪಾರ್ಕಿಂಗ್ ಜಾಗ ಇದೆ, ಆದ್ರೆ ರೋಡ್ ಮೇಲೆ ಅಷ್ಟೇ. ಒಳ್ಳೆ ಪಕ್ಕದ ಮನೆಯವರು (ಯಾಕೆ ಅಂದ್ರೆ ಅವ್ರು ಮನೆ ಇಂದ ಹೊರಗೆ ಬರೋದಿಲ್ಲ, ಮಾತೂ ಆಡೋದಿಲ್ಲ). ...  ಅಂತೂ 7 ತಿಂಗಳ ಹುಡುಕಾಟದ ನಂತರ ಒಂದು ಸಾದಾರಣ ಮನೆ ನನ್ನ ಪಾಲಿಗೆ ಅರಮನೆಯಾಗಿ ಕಂಡಿದ್ದು ಮಾತ್ರ ಬಾಡಿಗೆ ಮನೆ ಅನ್ನೋ ಮಹಾಮಾಯೆಯ ಕೃಪೆಯೇ ಸರಿ...... 

 

                                                                                   --------ಶ್ರೀ:-)  ----------

Rating
No votes yet

Comments

Submitted by venkatb83 Tue, 07/23/2013 - 12:28

"ನೀವು ಒಂದು ಕೆಲಸ ಮಾಡಿ ಈಗಲೇ ಅಡ್ವಾನ್ಸ್ ಕೊಟ್ಟು ಬಿಡಿ. ಆಮೇಲೆ ಇವತ್ತಿಂದಲೇ ಈ ಮನೆಗೆ rent ಶುರು ಮಾಡ್ಕೊಂಡು ಬಿಡಿ, ಮದುವೆ ಆಗೋವರೆಗೆ ಈಗ ಇರೋ ಮನೇಲೇ ಇರಿ,ಮದುವೆ ಆದ ಮೇಲೆ ಶಿಫ್ಟ್ ಮಾಡ್ಕೊಳ್ಳಿ ಯಾಕಂದ್ರೆ ಬ್ಯಾಚುಲರ್ ಗೆ ನಾವು ಮನೆ ಕೊಡೋದಿಲ್ಲ. !!!!!!!!! oh my god. "ನಿಮ್ಮಂತ ಮಹಾನುಭಾವರುಗಳು ಇದ್ರೂ ಕೂಡ ಕಾಲ ಕಾಲಕ್ಕೆ ಮಳೆ ಆಗ್ತಾ ಇದೆ ಅಂದ್ರೆ ಆ ದೇವ್ರು ಎಷ್ಟು ದಯಾಮಯಿ ಇರಬೇಕು , ನಿಮಗೆಲ್ಲ ನರಕದ ಮಹಾದ್ವಾರದಲ್ಲಿ ಬಿಕ್ಷೆ ಬೇಡೋ ಕೆಲಸ ಕಾಯಂ""

;()))

ಶಿವು ಅವರೇ - ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕೋ ಕಷ್ಟ - ಅದು ಸಿಕ್ಕಾಗ - ಸಿಗ್ವಾಗ -ಸಿಗದೇ ಇರ್ವಾಗ ಆಗುವ ಅನುಭವ ತರೇವಾರಿ.
ಆ ಬಗ್ಗೆ ಇಲ್ಲಿ ಬಹಳಷ್ಟು ಬರಹಗಳು ಬಂದಿವೆ.
ಈಗ್ಗೆ ೨ ತಿಂಗಳ ಹಿಂದೆ ನಾವೂ ಮತ್ತೆ ಮನೆ ಚೇಂಜ್ ಮಾಡಿದೆವು , ಮನೆಯಲ್ಲಿ ಜಾಸ್ತಿ ಜನ ಇರುವೆವು ಎಂದು(೮ ಜನ )ಮೊದಲಿದ್ದ ಮನೆಯ 'ಓನರಮ್ಮ' ದಿನ ಕ್ಯಾತೆ ತೆಗೆದು (ಹಾಗೆ ಆಗಲು ಕಾರಣ ತುಕ್ಕು ಹಿಡಿದು ಹೋದ ಬೋರ್ವೆಲ್ ಪೈಪಿಂದ ನೀರು ಬರಲಿಲ್ಲ , ಮತ್ತು ಆಗಲೇ ಕಾವೇರಿ ಬತ್ತಿ ಹೋಗಿತ್ತು , ಅದರ ಪರಿಣಾಮ ನಮ್ಮ ಮೇಲೆ -ನಾವ್ ಜಾಸ್ತಿ ಜನ ನಾವೇ ನೀರು ಬತ್ತಿಸಿದ್ದು ಅಂತ !) ತಿರ್ತಿರಗ ನಾವು ಜಾಸ್ತಿ ಜನ ಎಂದು ಹೇಳಿದ್ದು ಕೇಳಿ ಕೇಳಿ ಆ ದಿವ್ಯ ವಾಣಿಯನ್ನು ಮತ್ ಮತ್ತೆ ಕೇಳಲು ಆಗದೆ ಬೇರೆ ಡಬಲ್ ಬೆಡ್ರೂಮ್ ಇರೋ ಮನೆ ಹುಡುಕೋ ಕೆಲಸ ಶುರು ಆಯ್ತು , ನಾವಿರೋ ಏರಿಯಾದಲ್ಲಿ ಹೊಸ ಮನೆಗಳು ಜಾಸ್ತಿ ನಿರ್ಮಾಣ ಆಗುತ್ತಿವೆ , ೨- ೩ ಮನೆ ನೋಡಿದೆವು ಎಲ್ಲೆಡೆಯೂ ಎಲ್ರೂ ಅದಾಗಲೇ ಕೆಳ ಮನೆ (ಗ್ರೌಂಡ್ ಫ್ಲೋರ್) ಹಿಡಿದು ಆಗಿತ್ತು , ನಮಗೆ ಸಿಕ್ಕಿದ್ದು ಮೊದಲ - ಎರಡನೆಯ - ಮೂರನೆಯ ಅಂತಸ್ತಿನ ಮನೆಗಳೇ , ಹತ್ತಿ ಇಳಿದು ಈಗಲೇ ನರಪೇತಲ ನಾರಾಯಣ ಆಗಿರುವ ನಾ ....... ಆಗಿಬಿಡುವೆ ಎಂದು ಯೋಚಿಸಿ -ಮತ್ತೆ ಬರುವೆವು ಎಂದು ಹೇಳಿದೆ. ;())) ಇನ್ನು ಕೆಲ ಮನೆಗಳ ಮೇಲೆ ಗ್ಯಾಸ್ ಸಿಲಿಂಡರ್- ಮತ್ತಿತರ ಭಾರದ ವಸ್ತುಗಳನ್ನು ತೆಗೆದುಕೊಂಡು ಹೋಗಲು ಕಿಷ್ಕಿಂದೆ ಮೆಟ್ಟಿಲುಗಳು..!!

ಇನ್ನು ಕೆಲವೆಡೆ ನಾವ್ ೮ ಜನ ಎಂದ ಕೂಡಲೇ ಅವರ ಮುಖದಲ್ಲಿ ' ಉಪ್ಪಿಟ್ಟು' ಕಹಿ ಆಗಲಕಾಯಿ ಗೊಜ್ಜು ತಿಂದ ಭಾವನೆ...!!
ಮತ್ತೆ ಅದ್ಕೆ ಇನ್ನಸ್ಟು ಜಾಸ್ತಿ ಬಾಡಿಗೆ ಹೇರುವ ಹುನ್ನಾರ ..!!

ಕೊನೆಗೆ ಸಿಕ್ಕಿತು ಮೊದಲ ಮಹಡಿಯ ಮನೆ (ಡಬಲ್ ಬೆಡ್ರೂಮ್)- ಓನರ್ ನಿವೃತ್ತ ಮೇಸ್ಟ್ರು - ಅಚ್ಹ ಕನ್ನಡದವರು .. ಹೆಚ್ಚಾಗಿ ನಾವ್ ಅಸ್ತು ಜನ ಇರುವೆವು ಎಂದಾಗಲೂ - ಅದ್ಕೇನು ಮನೆ ತುಂಬಾ ಮಕ್ಕಳಿರಬೇಕು -ಜನ ಇರ್ಬೇಕು ಆಗಲೇ ಚೆನ್ನ ಎಂದರು..
ನಾವ್ ಕನ್ನಡಿಗರು - ಉತ್ತರ ಕರ್ನಾಟಕದವರು ಎಂದು ತಿಳಿದು ಖುಷಿ ಆದರು .
ಅವರದೂ ಮನೆ ತುಂಬಾ ಜನ ... ಅಂತೂ ಅಡ್ವಾನ್ಸ್ ಕೊಟ್ಟು -ಆ ಮನೆಗೆ ಹೋಗಿಯೂ ಆಯ್ತು . ಅಡ್ವಾನ್ಸ್ ಎಂದು ಕೊಟ್ಟದ್ದು ಕೇವಲ ೩೦ ಸಾವಿರ (ಬೇರೆಯವರಿಗೆ ೬೦ ಸಾವಿರ ಅಡ್ವಾನ್ಸ್ -೬ ಸಾವಿರ ಬಾಡಿಗೆ )... ಬಾಡಿಗೆ ೬ಸಾವಿರ ಮಾತ್ರ ..ವರ್ಷಕ್ಕೆ ಸಾವಿರ ರುಪಾಯಿ ಬಾಡಿಗೆ ಜಾಸ್ತಿ ..
ನೀರು- ವಿದ್ಯುತ್ ಪ್ರಾಬ್ಲಮ್ ಇಲ್ಲ (ಬೊರ್ವೆಲ್ಲ್ ಇದೆ ).. ಗ್ರೌಂಡ್ ಫ್ಲೂರ್ನಲ್ಲಿ ಓನರ್ ಮೇಲೆ ನಾವು -ನಮ್ ಪಕ್ಕ ಕನ್ನಡಿಗರೇ , ಅದರ ಮೇಲೆ -ಮಲಯಾಳಿ -ತಮಿಳರು ..! ನಾವ್ ಕನ್ನಡಿಗರು ಮಾತ್ರ ಮಾತಾಡೋದು .. ಮೇಲಿನವರು ಸುಮ್ಮನೆ ಕಾಟಾಚಾರದ ಒಣ ಶುಷ್ಕ ನಗು -ನೋಟ ..!!
ಒಟ್ಟಿನಲ್ಲಿ ಬ್ರೋಕರ್ ಸಹಾಯ ಇಲ್ಲದೆ ಬ್ರೋಕರ್ ಚಾರ್ಜ್ ೬ ಸಾವಿರ ಮಿಕ್ಕ್ಸಿ - ಕನ್ನಡಿಗರ ಮನೆ ಸೇರಿದ ತೃಪ್ತಿ... !!

ನಿಮ್ಮ ನಮ್ಮ ಕಥೆ ಬಹುಶ ಇಲ್ಲಿ ಸ್ವಂತ ಮನೆ ಇಲ್ಲದ ಬಾಡಿಗೆ ಮನೆ ಹುಡುಕುವ ಬಹುಪಾಲು ಜನರ ಪಾಡೂ ಹೌದು . ..
ನೀವು ನಿಮ್ಮ ಓನರ್ ನಿವೃತ್ತ ಪ್ರಾಂಶುಪಾಲರು ಎಂದು ಹೇಳಿದ್ದು ನೋಡಿ ನೀವ್ ನಮ್ಮ ಓನರ್ ಮನೇಲಿ ಇರೋರು ಅಂದುಕೊಂಡೆ , ಆದರೆ ನೀವ್ ಇರೋದು ಬೇರೆ ಎಲ್ಲಿಯೋ ..!!

ಬಾಡಿಗೆ ಮನೆ ಹುಡುಕುವ ಬಗ್ಗೆ ಆ ಅನುಭವಗಳ ಬಗ್ಗೆ ಬರೆದರೆ ನಿಮಂ ಲೇಖನವನ್ನು ನನ್ನ ಪ್ರತಿಕ್ರಿಯೆ ಮೀರುವುದು ..
>>>ನೀವು ಈ ಬರಹದಲ್ಲಿ ಉಪಯೋಗಿಸಿದ ಹಲವು ವಾಕ್ಯಗಳು ನಗೆಯ ಬುಗ್ಗೆ ಉಕ್ಕಿಸಿದವು.

ನೀವೊಬ್ಬ ಯಶಸ್ವಿ ನಗೆ ಬರಹಗಾರ ಆಗಬಲ್ಲಿರಿ.. ನಿಮ್ಮಿಂದ
ಮತ್ತಸ್ತು ಬರಹಗಳನ್ನು ನಿರೀಕ್ಷಿಸುವೆ ..
ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರಲಿ ..
ಶುಭವಾಗಲಿ

\।

Submitted by sriprasad82 Tue, 07/23/2013 - 21:03

In reply to by venkatb83

ಮೆಚ್ಚಿಕೊಂಡು ಬರೆದಿದ್ದಕ್ಕೆ ದನ್ಯವಾದಗಳು ವೆಂಕಟ್ ಸರ್, ಈ ಬಾಡಿಗೆ ಮನೆ ರೋದನೆ ಎಲ್ರೂ ಅನುಭವಿಸಿರ್ತಾರೆ ಅನಿಸುತ್ತೆ. ಆದರೆ ಅನುಭವಗಳು ನಿತ್ಯನೂತನ ಅಷ್ಟೇ. ಸ್ವಂತ ಮನೆ ಅನ್ನೋದು ಗಗನ ಕುಸುಮ ಆಗಿಬಿಟ್ಟಿದೆ ಆದ್ದರಿಂದ ಈ ನರಕಯಾತನೆ ಅನಿವಾರ್ಯ.... ನಮ್ಮ ಕಾಸಿನಿಂದ ಓನರ್ ನ ಕನಸಿನ ಸೌದವನ್ನು ಉದ್ದಾರ ಮಾಡ್ತಾ ಇರೋದು ಸೋಜಿಗ ಅನ್ನಿಸಿದ್ರೂ ಕಟು ವಾಸ್ತವ
ವೈವಾಹಿಕ ಜೀವನಕ್ಕೆ ಈಗ ಏಳು ತಿಂಗಳು ತುಂಬಿದೆ. ಹಾರೈಸಿದ್ದಕ್ಕೆ ದನ್ಯವಾದಗಳು .... ಪ್ರೀತಿ ಹೀಗೇ ಇರಲಿ
--ಶ್ರೀ:-)

Submitted by ಗಣೇಶ Fri, 07/26/2013 - 00:13

In reply to by sriprasad82

ಈಗ‌ ಪರವಾಗಿಲ್ಲ. ಬ್ಯಾಚುಲರ್ಸೇ ಬೇಕು ಎನ್ನುವ‌ ಬಾಡಿಗೆ ಮನೆಯವರು ಬೇಕಾದಷ್ಟಿದ್ದಾರೆ. ನಮ್ಮ ಕಾಲದಲ್ಲಿ ಪಟ್ಟ ಕಷ್ಟ ಕಾದಂಬರಿ ಬರೆಯುವಷ್ಟಿದೆ. :)
>>>ಸ್ವಂತ ಮನೆ ಅನ್ನೋದು ಗಗನ ಕುಸುಮ ಆಗಿಬಿಟ್ಟಿದೆ
‍ ಬೆಂಗಳೂರಲ್ಲಿ ಮನೆಗಳು ಏಳುತ್ತಿರುವ‌ ವೇಗ‌ ನೋಡಿದರೆ, ಇನ್ನು ಕೆಲವೇ ವರ್ಷಗಳಲ್ಲಿ‍‍‍--> ಕರೆದು ಕರೆದು, ಪ್ರೂಫ್ಗೆ ಆಧಾರ್ ಕಾರ್ಡ್ ತೋರಿಸಿ, ಸ್ವಂತ‌ ಮನೆ ತೆಗೆದುಕೊಳ್ಳಿ; ಬಿ ಪಿ ಎಲ್ ಕಾರ್ಡಿಗೆ ಒಂದು ರೂಪಾಯಿಗೆ ಮನೆ! ಬರಲಿದೆ. :)

Submitted by sriprasad82 Sat, 08/03/2013 - 21:37

In reply to by ಗಣೇಶ

ಗಣೇಶ್ ಸರ್,
ನೀವು ಹೇಳಿದ್ದು ಅಕ್ಷರಶಃ ಸತ್ಯ. ಒಂದು ರೂಪಾಯಿ ಗೆ ಮನೆ ಕಲ್ಪನೆ ಅದ್ಭುತ ..................... ಪ್ರತಿಕ್ರಿಯಿಸಿದ್ದಕ್ಕೆ ದನ್ಯವಾದಗಳು
ಶ್ರೀ :-)

Submitted by gopinatha Thu, 07/25/2013 - 17:46

ನಿಜ ಶ್ರೀಪಾದರೇ ಈ ಬಾಡಿಗೆ ಮನೆಯ ಪಜೀತಿ ಎಲ್ಲರಿಗೂ ಆಗಿಯೇ ಇರತ್ತೆ ಅನ್ಸ್ತು. ಪ್ರತಿಯೊಬ್ಬರದ್ದೂ ಬೇರೆ ಬೇರೆ ಅನುಭವ. ನಿಮ್ಮ ಅನುಭವ ಅನುಭವಿಸುವಾಗ ಕಷ್ಟ ಅನ್ನಿಸಿದರೂ ಈಗ ನಗು ಬರುತ್ತೆ.