ಬೆಂಗಳೂರು ಸುತ್ತಾ ಮುತ್ತಾ

ಬೆಂಗಳೂರು ಸುತ್ತಾ ಮುತ್ತಾ

ಚಿತ್ರ

ಲಾಲ್‌ಬಾಗ್ ಸೆಕ್ಯುರಿಟಿ -
ಸ್ವಾತಂತ್ರ್ಯ ದಿನಾಚರಣೆ ದಿನ ಹತ್ತಿರ ಬಂದ ಹಾಗೆ ಭಯೋತ್ಪಾದನೆಯ ಭೀತಿ. ದೇವಾಲಯ, ಸರ್ಕಾರಿ ಕಟ್ಟಡಗಳು, ಐತಿಹಾಸಿಕ ಸ್ಥಳಗಳು..., ಎಲ್ಲದರ ರಕ್ಷಣೆಯ ಜವಾಬ್ದಾರಿ ಜಾಸ್ತಿಯಾಗುವುದು. ಸುಮಾರು ೨೪೦ ಎಕ್ರೆ ವಿಸ್ತೀರ್ಣದ ಲಾಲ್ ಬಾಗ್‌ನ ಸೆಕ್ಯುರಿಟಿಯದ್ದೇ ದೊಡ್ಡ ಸಮಸ್ಯೆ. ರಾಜಕಾರಣಿಗಳ ರಕ್ಷಣೆಗೇ ಪೋಲೀಸರು ಸಾಕಾಗುವುದಿಲ್ಲ, ಇನ್ನು ತೋಟ ಕಾಯಲು ಎಲ್ಲಿಂದ ತರುವುದು. ಸೆಕ್ಯುರಿಟಿಯನ್ನು ಪ್ರೈವೇಟ್‌ಗೆ ಕೊಟ್ಟರೆ ಎಂಟ್ರಿ ಫೀಸ್ ಜಾಸ್ತಿ ಮಾಡುವರು. ಆದ್ದರಿಂದ ತೋಟದ ಸೆಕ್ಯುರಿಟಿ ಪೂರ್ತಿ "ಡಾಗ್ ಸ್ಕ್ವಾಡ್"ಗೆ ವಹಿಸಲಾಗಿದೆ.
ಅಂದಾಜು ನೂರಕ್ಕೂ ಅಧಿಕ ಸಂಖ್ಯೆಯಲ್ಲಿರುವ ನಾಯಿಗಳು, ಅಲ್ಲಲ್ಲಿ ಕುಳಿತು, ನಿಂತು, ಮಲಗಿ..ಜನರ ಮೇಲೆ ಕಟ್ಟೆಚ್ಚರದ ನಿಗಾ ವಹಿಸಿದೆ. ತಮ್ಮ ತಮ್ಮ ಏರಿಯಾದ ಡ್ಯೂಟಿ ಬಗ್ಗೆ ಅವುಗಳೊಳಗೆ ಕಚ್ಚಾಟವಾದರೂ, ಯಾವ ನಾಯಿಯೂ ಮುಂಜಾನೆ ಜಾಗಿಂಗ್ ಮಾಡುತ್ತಿರುವ ಮಕ್ಕಳಾದಿಯಾಗಿ ಮುದುಕರನ್ನು ಕಚ್ಚಿದ್ದು ನಾನು ನೋಡಿಲ್ಲ.
ಹಾಗೇ ಲಾಲ್ ಬಾಗ್‌ನ  ಗಾರ್ಬೇಜ್ ಸ್ವಚ್ಛತೆ ಕೆಲಸ "ಡೊವ್ ಕಂಪನಿ"ಗೆ ವಹಿಸಲಾಗಿದೆ.
*******************
ಮರದ ಕೆಳಗೆ ತಪೋನಿರತ ವಯಸ್ಸಾದ ಕಲಾಕೃತಿ ಯಮದೂತನ (ಗಾರ್ಬೇಜ್ ವ್ಯಾನ್) ನಿರೀಕ್ಷೆಯಲ್ಲಿದೆ.(6ನೇ ಫೋಟೋ )
*******************
ನಮ್ಮ ಊರು ಬ್ಯಾನರೂರು-
ಹಿಂದೆ ಎಲ್ಲಿ ನೋಡಿದರೂ ಸಿನೆಮಾ ಪೋಸ್ಟರ್‌ಗಳೇ ತುಂಬಿರುತ್ತಿದ್ದವು ನಮ್ಮ ಬೆಂಗಳೂರಲ್ಲಿ. ಬೆಂಗಳೂರಿನ ಅಂದ ಹಾಳಾಗುವುದು ಎಂದು ಅದನ್ನೆಲ್ಲಾ ತೆಗೆಸಿದರು. ಈಗ ಬೆಂಗಳೂರಿನ ಪ್ರತೀ ಕಂಬ, ಕೋಲು ಮರ ಗಿಡ ಎಲ್ಲಾದಕ್ಕೂ, ಆಯಾ ಏರಿಯಾದ ದೊಡ್ಡ, ಹದ, ಮರಿ, ಮರಿಮರಿ ರಾಜಕಾರಣಿಗಳ ಫೋಟೋಗಳನ್ನೇ  ನೇತು ಹಾಕಿದ್ದಾರೆ. ಎಡ್ರಸ್ ಹೇಳಲು ಈಗ ಬಹಳ ಸುಲಭ. ಅಲ್ಲಿ ಸಿದ್ದು ಬ್ಯಾನರ್ ಇದೆಯಲ್ಲ, ಅವರು ತೋರಿಸಿದ ಕಡೆಗೇ ನೇರ ಹೋಗಿ, ಅಲ್ಲಿ ೩೦-೪೦ ಜನರ ಫೊಟೋ ಇರುವ ಪೋಸ್ಟರ್ ಸಿಗುವುದು, ಅಲ್ಲೇ ಬಲಕ್ಕೆ ತಿರುಗಿ, ೩೨ ಹಲ್ಲೂ ಬಿಟ್ಟು ಕೈಮುಗಿದಾತನ ಬ್ಯಾನರ್‌ನಿಂದ ನಾಲ್ಕನೇ ಮನೆಯೇ ನಮ್ಮದು.
  ಇದಲ್ಲದೇ ಅನೇಕ ಜಾಹೀರಾತುಗಳ ಬ್ಯಾನರ್‌ಗಳು.( 7‍ಮತ್ತು 8ನೇ ಚಿತ್ರ). ಗಾಳಿಗೆ ಯಾರದಾದರು ತಲೆ ಮೇಲೆ ಬೀಳದಿದ್ದರೆ ಸಾಕು.
**********************
ನೆಲ ಒರೆಸುವ ಬಟ್ಟೆ-
ಕನ್ನಡಿಗರು ತಗ್ಗಿ ಬಗ್ಗಿ ನಡೆಯುವವರು. ಸೆಪ್ಟೆಂಬರ್‌ನಲ್ಲಿ ಎದ್ದು ಕನ್ನಡ ಬಾವುಟ ಎಲ್ಲಿ ನೋಡಿದರಲ್ಲಿ  ಹಾರಿಸುವರು. ನಂತರ ತಗ್ಗಿಸಿದ ತಲೆ ಮುಂದಿನ ಸೆಪ್ಟೆಂಬರ್‌ಗೇ ಎತ್ತುವುದು. ಕನ್ನಡ ಬಾವುಟಗಳೆಲ್ಲಾ ನೆಲ ಒರೆಸುವ ಬಟ್ಟೆಗಿಂತ ಗಲೀಜಾಗಿರುವುದು...:(
(ಫೋಟೋ ಹಾಕಲು ಮನಸ್ಸಿಲ್ಲ)
**************************
ಬೆಂಗಳೂರಿಗರು ಆಸ್ತಿಕರು-
ಬೆಂಗಳೂರ ರಸ್ತೆಯಲ್ಲಿ -ರಿಕ್ಷಾದವರು ಯಾವಾಗ ಮೂಡ್ ಬದಲಾಗಿ ಎಡಕ್ಕೋ ಬಲಕ್ಕೋ ತಿರುಗಿಸುವರು ಹೇಳಲು ಸಾಧ್ಯವಿಲ್ಲ. ಬಸ್-ಲಾರಿಗಳಿಗೆ ರಸ್ತೆ ರೂಲ್ಸ್ ಯಾವುದೂ ಅನ್ವಯವಿಲ್ಲ. ಟ್ಯಾಕ್ಸಿ ಡ್ರೈವರ್‌ಗಳ ಮುಂದೆ F1 ರೇಸ್ ಸಹ ಡಲ್. ಬೈಕ್‌ಗಳು ಯಮಃ ರಸ್ತೆಯಿಲ್ಲದಲ್ಲೂ ನುಗ್ಗುವವು. ಸೈಕಲ್ ಬಿಡುವ ಚಿಲ್ರೆಪಿಲ್ರೆ ಮಕ್ಕಳೂ ಸಹ ಮೈನ್ ರೋಡಲ್ಲೇ ವೀಲಿಂಗ್ ಮಾಡುವವು. ಮೊಬೈಲ್ ಹಿಡಿದ ನರ ನಾರಿಯರು ರಸ್ತೆ ಮಧ್ಯದಲ್ಲಿದ್ದರೂ ಈ ಲೋಕದಲ್ಲೇ ಇರುವುದಿಲ್ಲ. ಇವರೆಲ್ಲರನ್ನೂ ತಪ್ಪಿಸಿ ಹೊಂಡಾ (ರಸ್ತೆ!?)ದಲ್ಲಿ ಡ್ರೈವ್ ಮಾಡುತ್ತಾ ಹೋಗುವಾಗ ಯಾವ ನಾಸ್ತಿಕನೂ "ದೇವರೇ, ಕ್ಷೇಮವಾಗಿ ಮನೆ ಮುಟ್ಟುವಂತೆ ಮಾಡು" ಅನ್ನದಿದ್ದರೆ ಹೇಳಿ.
**********************
 

Rating
No votes yet

Comments

Submitted by nageshamysore Fri, 07/26/2013 - 03:39

ಆಕಾಶವಾಣಿ ವಾರ್ತೆಗಳು, ಮುಖ್ಯಾಂಶಗಳು: ಲಾಲ್ ಭಾಗ್ ಕಾವಲಿಗೆ ಶ್ವಾನದಳ ಸೇನೆ - ಕಚ್ಚಾಡದೆ ನಡೆಸಿದ ಅವಿರತ ಸೇವೆ; ಯಮದೂತನ ನಿರೀಕ್ಷೆಯಲ್ಲಿ ವಯಾಸ್ಸಾದ ಕಲಾಕೃತಿ - ಗಣೇಶ್ ಜಿ ಸಂಕಟ; ಬ್ಯಾನರುಗಳಿಂದ ಅಡ್ರೆಸ್ ಹುಡುಕುವ ವಿನೂತನ ಮಾದರಿ - ತಪ್ಪಿದ ಅಲೆಮಾರಿ ಹುಡುಕಾಟ; ರಾಜ್ಯೋತ್ಸವ ನಿಕಟ ಗಲೀಜಾಯ್ತೇಕೆ ಬಾವುಟ - ಒಂದು ವಿಡಂಬನಾತ್ಮಕ ವರದಿ; ಕೈಯಲ್ಲಿ ಜೀವವೊ , ಜೀವದಲ್ಲಿ ಕೈಯೊ? - ನಗರದ ರಸ್ತೆಯ ಡ್ರೈವಿಂಗಿನ ಅನುಭವದ ವಿಹಂಗಮ ವರ್ಣನೆ ಮತ್ತು ಹೆಚ್ಚುತ್ತಿರುವ ನಾಸ್ತಿಕರ ಸಂಖ್ಯೆಯ ಬಗ್ಗೆ ಕುತೂಹಲಕಾರಿ ಸಂಶೋಧನೆ  - ವಾರ್ತೆಯ ವಿವರ ಮತ್ತು ಭಾಗಶಃ ನಗರ ದರ್ಶನಕ್ಕೆ, ಮೇಲಿನ ಗಣೇಶ್ ಜಿ ರಿಪೋರ್ಟ್ ಓದಿ :-)

Submitted by ಗಣೇಶ Sat, 07/27/2013 - 00:06

In reply to by nageshamysore

:) ನಾಗೇಶರೆ, ಬ್ರೇಕಿಂಗ್ ನ್ಯೂಸ್!
ಸುಬ್ಬನಿಗೆ ಮಗುವಾಯಿತಂತೆ! ವರದಿಯ ಸತ್ಯಾಸತ್ಯತೆ ಪರೀಕ್ಷಿಸಲು ನಮ್ಮ ವರದಿಗಾರರು ಹೋಗಿರುವರು. "ಹಲೋ ಭಲ್ಲೇಯವರೆ, ಕೇಳಿಸುತ್ತಿದೆಯಾ? ಮಗು ಹೇಗಿದೆ? ಎಷ್ಟು ತೂಕ? ಕನ್ನಡ ಮಾತನಾಡುತ್ತಾ..ಇಂಗ್ಲೀಷಾ? ಕ್ಷಮಿಸಿ ಕಟ್ ಆಯಿತು. ಅದೇ ಸಮಯದಲ್ಲಿ ಇನ್ನೂ ೩ ಕಡೆ ಮಗುವಾಗಿದೆ! ಪೂರ್ತಿ ವಿವರ ನಿಮ್ಮ ಮುಂದಿಡಲಿದ್ದೇವೆ ಇನ್ನು ಕೆಲವೇ ಕ್ಷಣದಲ್ಲಿ.. http://sampada.net/%...
ನೆನಪಿಡಿ-"ಎಲ್ಲಕ್ಕಿಂತ ಮೊದಲು ಜ್ಯೂಸೀ ನ್ಯೂಸ್ ಚಾನಲ್"

Submitted by makara Fri, 07/26/2013 - 07:43

@ ಗಣೇಶ್‌ಜಿ,
ನಿಮ್ಮ ಫೋಟೋಗಳಂತೆ ಚೆನ್ನಾಗಿವೆ ನಿಮ್ಮ ಐಡಿಯಾಗಳು, ಇದನ್ನು ನೋಡಿದರೆ ಖಂಡಿತಾ ಸಿದ್ದರಾಮಯ್ಯನವರು ನಿಮ್ಮನ್ನೇ ಗೃಹಮಂತ್ರಿ ಮಾಡಿಬಿಡುತ್ತಾರೆ. ಮತ್ತೊಂದು ವಿಷಯ ನೀವು ಸಪೂರವಾಗಿದ್ದರೂ ಸಹ ಎಲ್ಲರಿಗೂ ಡೊಳ್ಳು ಹೊಟ್ಟೆಯುಳ್ಳ ಗಣೇಶನೆಂಬಂತೆ ನಿಮ್ಮನ್ನ ನೀವು ಚಿತ್ರಿಸಿಕೊಂಡು ಜನರ ಕೈಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದೀರ. ನಿಮ್ಮ ಮೂರನೇ ಫೋಟೋ ನೋಡಿದ ನಂತರ ನಿಮ್ಮ ವಾಸನೆ ಹಿಡಿದು ನಿಮ್ಮನ್ನು ಖಂಡಿತಾ ಸಪ್ತಗಿರಿಯವರು ಪತ್ತೆ ಹಚ್ಚೇ ತಿರುತ್ತಾರೆ, ಸ್ವಲ್ಪ ಹುಷಾರಾಗಿರಿ :)
@ನಾಗೇಶ್ ಅವರೆ,
ನಿಮ್ಮ ವಾರ್ತೆಗಳ ಮುಖ್ಯಾಂಗಳೂ ಸಹ ಚೆನ್ನಾಗಿವೆ.
ವಂದನೆಗಳೊಂದಿಗೆ,

Submitted by venkatb83 Fri, 07/26/2013 - 12:36

In reply to by makara

ಹಿಂದೆ ಬೆಂಗಳೂರಲ್ಲಿ ಬ್ಯಾನರ್ ಬ್ಯಾನ್ ಮಾಡಿದ್ದು ಸಿಟಿ ಕ್ಲೀನ್ ಆಗಿತ್ತು . ಹೊಸ ಸರಕಾರ ಬಂದ ಕೂಡಲೇ ಎಲ್ಲೆಂದರಲ್ಲಿ ಶುಭಾಶಯ -ಇತ್ಯಾದಿ ಬೋರ್ಡ್ ಹಾಕಿ ಮರೆತು ಬಿಡುವರು . ಕೆಲ ಬೋರ್ಡ್ಗಳು ಗಾಳಿಗೆ ಕತ್ತಿ ವರಸೆ ತರಹ ಹಾರಾಡುತ್ತಿರುತ್ತವೆ .. ಪ್ರಾಣ ಭಯದಲ್ಲೇ ವಾಹನ ಚಲಾಯಿಸಬೇಕು ..;(೯
ಇನ್ನು ಕನ್ನಡ ಧ್ವಜಗಳಿಗೆ ( ಧ್ವಜ ಹಾರಿಸಿ ಅವರೂ ಮರೆತು ಬಿಡುವರು )ಹೊಂಬಣ್ಣ ಕಳೆದುಕೊಂಡು -ಮಬ್ಬಣ್ಣ ಆಗುವ ಯೋಗ ..;(೯
ಲಾಲ್ಬಾಗ್ ಈಗ ನೋಡಲು ಖೇದವಾಗುತ್ತದೆ - ಎಲ್ಲೆಡೆಯೂ ಕಸದ ರಾಶಿ ,ಬಿಡಾಡಿ ನಾಯಿಗಳ ವಾಸ ಸ್ಥಾನ ... ;(೯
ನಮ್ಮ ಬೆಂಗಳೂರನ್ನು ನಮ್ಮ ಕೆಲವರೇ ಹೀಗೆ ಹಾಳು ಮಾಡುತ್ತಿದ್ದರೆ ನೋಡಿ ಮನಕೆ ವ್ಯಥೆ ಆಗುವುದು..
ಬೆಂಗಳೂರ ದರ್ಶನ ಮಾಡಿಸಿದಿರಿ..

>>>@ಶ್ರೀಧರ್ ಜೀ - ಗಣೇಶ್ ಅಣ್ಣ ಅವರನ್ನ ಇನ್ನು ಕೆಲವೇ ... ಲ್ಲಿ ನಿಮ್ಮ ಮುಂದೆ ಪ್ರತ್ಯಕ್ಷ ಮಾಡಿಸುವೆ ..
ಶುಭವಾಗಲಿ

\।

Submitted by ಗಣೇಶ Sat, 07/27/2013 - 00:18

In reply to by venkatb83

ಗಣೇಶ್ ಅಣ್ಣ ಅವರನ್ನ ಇನ್ನು ಕೆಲವೇ ... ಲ್ಲಿ ನಿಮ್ಮ ಮುಂದೆ ಪ್ರತ್ಯಕ್ಷ ಮಾಡಿಸುವೆ :)
ಅದರ ಬದಲು ನಾಗೇಶರ ಮುಂದೆ ಪ್ರತ್ಯಕ್ಷ ಮಾಡಿಸಿ ಏಳು ಬೆಟ್ಟದೊಡೆಯಾ.. ಹಾಗೇ ಸಿಂಗಾಪುರ ಸುತ್ತಿ ಬರುವೆ.:)

Submitted by partha1059 Fri, 07/26/2013 - 10:23

ಇಂದು ಹುಣ್ಣಿಮೆಯು ಅಲ್ಲ ಅಮಾವಾಸ್ಯೆಯು ಅಲ್ಲ
ಗಣೇಶರು ಸಂಪದಕ್ಕೆ ಕಾಲಿಟ್ಟಿದ್ದಾರೆ ಅಂದರೆ ಇಂದು ಚೌತಿ ಇರಬಹುದೆ ? :‍)

Submitted by gopinatha Fri, 07/26/2013 - 16:12

ಗಣೇಷರೇ
ತುಂಬಾನೇ ಛೆನ್ನಾಗಿದೆ ನಿಮ್ಮ‌ ಸೂಪರ್ ಮಾರ್ಗದರ್ಷಕ‌ ಸಲಹೆಗಳು.
ಈ ಲೇಖನವನ್ನು ಎಲ್ಲರ‌ ಕಣ್ಣಿಗೆ ಕಾಣುವಂತೆ ಸರ್ಕಾರದ‌ ಕೆಲಸ‌ ದೇವರ‌ ಕೆಲಸ‌ ಎರಡೂ ಒಂದೇ ಎಂಬಲ್ಲಿ ತಗಲಿಸಲಾಗುವುದು.