ತಂತ್ರ

ತಂತ್ರ

ಸಮಯ ೯: ೪೮

ಅರೇ ಮರೆತೇ ಬಿಟ್ಟಿರಾ,  ನಿಮ್ಮ ಅಣ್ಣನ ಸ್ನೇಹಿತ ನಾನು ರಮೇಶ. ಚೆನ್ನಾಗಿದ್ದೀರಾ ? ಗಲಿಬಿಲಿಗೊಂಡ ರಂಜನ್. 

 "ಯಾರು .. ಕೃಷ್ಣಣ್ಣನಾ ಅವನಿರುವುದು ಮೈಸೂರಿನಲ್ಲಿ ಅಲ್ಲವೇ ಮತ್ತೆ ನೀವಿಲ್ಲಿ ಹೇಗೆ"

ನನ್ನ ಉತ್ತರ ರೆಡಿಯಾಗಿತ್ತು ".ಹೌದು ನಾನು ಅವರ ಜತೆಗೇ ಕೆಲ್ಸ ಮಾಡುತ್ತಿರುವೆ, ಮೈಸೂರಿನಲ್ಲಿ"

ಕಾಣದ ಪರಿಚಯ ಕಂಡಿತ್ತು ಸಂಭಂದದ ದೆಸೆಯಲ್ಲಿ  "ಬನ್ನಿ ಬನ್ನಿ ಮೈಸೂರಿನ ಮುಖ್ಯ ಅಂಚೆ ಕಚೇರಿಯಲಿರುವುದಲ್ಲವೇ, ಅಣ್ಣ ನಿಮ್ಮ ಬಗ್ಗೆ ಹೇಳ್ತಾನೇ ಇರ್ತಾನೆ ಯಾವಾಗಲೂ" ಸೆಕ್ಯುರಿಟಿಯವರಿಗೆ ಮೊದಲನೆಯ ಪಾಠ ಅಪರಿಚಿತರೊಡನೆ ಮಾತನಾಡಬಾರದು. ಆತನ ರಾತ್ರೆಯ ಏಕಾಂತವನ್ನು ನಾನು ಕ್ಯಾಷ್ ಮಾಡಿಕೊಂಡೆ. 

ಬರೇ ಹತ್ತು ಸೆಕೆಂಡ್ ನನಗೆ ಸಾಕು ನನ್ನ ಪೆನ್ ಡ್ರೈವ್ ಅವರ ಸಿ ಪಿ ಯು ನಲ್ಲಿ  ಸಿಕ್ಕಿಸಲು

 "ಹೌದು, ಇವತ್ತು ನಾನು ರಜೆ ಹಾಕಿದ್ದೆ, ಇಲ್ಲಿಯೇ ನನ್ನ ಗೆಳೆಯನ ಬಳಿಕೆಲಸವಿತ್ತು. ಹಾಗೇ ನಿಮ್ಮನ್ನೂ ನೋಡಿ ಹೋಗೋಣ ಅಂತ ಬಂದೆ" . ಅಷ್ಟೇ ಸಾಕಾಗಿತ್ತು ರಂಜನ್ ಗೂ ಆತ  ಮನೆ ಮಕ್ಕಳು  ವರಾತ  ಶುರು ಹಚ್ಚಿಕೊಂಡ.  ತಾನು ತನ್ನವರು ಅನ್ನುವ ವ್ಯಾಮೋಹವದು...ಏನೆಲ್ಲ ಅಂದನೋ.., ಮಾತು ಮಧ್ಯೆ ಕಟ್ಟಾಯ್ತು.  "ರಮೇಶ್........" ಏನು ಯೋಚನೆಯಲ್ಲಿದ್ದೀರಾ..?"

 "ಓಹ್ ಇದು ನನ್ನ ಇಲ್ಲಿನ ಹೆಸರು."   ಅದೇಕೆ ಇನ್ನೂ ನನ್ನ ಪೆನ್ ಡ್ರೈವ್ ಕೆಲಸ ಮಾಡಿಲ್ಲ ಅಂತ ಯೋಚಿಸುತ್ತಿದ್ದೆ.  ಅದನ್ನು ಹೇಳಲಾಗುತ್ತೆಯೇ ಅದು ಸ್ವಗತವಷ್ಟೇ. ಹೇಗಾದರು ಅವನು ಕಂಪ್ಯೂಟರ್ ನೋಡುವ ಹಾಗೆ ಮಾಡ  ಬೇಕಿತ್ತು ನನಗೆ. "ನಿಮ್ಮ ಸೆಕ್ಯುರಿಟಿ ತುಂಬಾ ಚೆನ್ನಾಗಿದೆ." 

ಇದು ಎರಡನೆಯ ಪಾಠ ಅನಾವಶ್ಯಕ ಹೊಗಳುವವರನ್ನು ನಂಬ ಬಾರದು.  "ಹೌದು ನೋಡಿ ಎಲ್ಲಾ ಕಡೆಯ ವಿವರ ಇಲ್ಲಿಯೇ ಬರುತ್ತೆ.". ಅಂದವನು ಸ್ವಲ್ಪ ತಡೆದು.. ಅರೇ ಇದೇನಾಯ್ತು ಎಂದ ಗಾಭರಿಯಲ್ಲಿ.

 "ಏನಾಯ್ತು? ಕೇಳಿದೆ ಎಂದೆ ಗಾಬರಿ ತೋರಿಸುತ್ತಾ. ಮನದಲ್ಲಾದ ಸಂತೋಷ ಹೊರಗೆ ಕಾಣಿಸದ ಹಾಗೆ ಎಚ್ಚರ ವಹಿಸಿದ್ದೆ.

ಸರ್ ನೋಡಿ  ನಮ್ಮ ಕಂಪ್ಯೂಟರ್ ಸ್ಕ್ರೀನ್!!!  ನಡೀತಾ ಇಲ್ಲಲ್ಲ. ನಾನು ಗೊತ್ತಿಲ್ಲದೇ ಯಾವುದೋ ಬಟನ್ ಒತ್ತಿ ಬಿಟ್ಟೆ ಅಂತ ಕಾಣುತ್ತೆ. 

 "ಏನಾಯ್ತು?" ನಾನೆಂದೆ

 ಅವ ಹೆದರಲೇ ಬೇಕಿತ್ತು "ನೋಡಿ ಚಿತ್ರಗಳೆಲ್ಲಾ ಉಲ್ಟಾ ಪುಲ್ಟಾ ಆಗಿವೆ, ಅದೇನು ಜಿರಳೆಯೇ..? ಅದು ಹೇಗೆ ಕಂಪ್ಯೂಟರೊಳಕ್ಕೆ ಹೋಯ್ತು? ಅರೆ ಜಾಸ್ತಿಯಾಗುತ್ತಿವೆಯಲ್ಲ? ಅಲ್ಲ ಇದಕ್ಕೂಭೂತದ ಕಾಟ ಇದೆಯಾ? ತಾಯಿತ ತರಬೇಕಾ ಹೇಗೆ? ಜಮದಗ್ನಿಯವರು  ಬಂದರೆ ನನ್ನ ಕೆಲ್ಸವೇ ಹೋಗುತ್ತೆ" .

 "ನಾನು ನೋಡಲಾ.?" ಕೇಳಿದೆ.. ರೋಗಿ ಬಯಸಿದ್ದೂ.....ಅದೇ ಅಲ್ಲವೇ  ."ಅರೇ ನಿಮಗೆ ಕಂಪ್ಯೂಟರ್ ರಿಪೇರಿ ಬರುತ್ತಾ..??"ಅಶ್ಚರ್ಯ ಖುಷಿ ಎರಡೂ ತುಂಬಿದ ಕಣ್ಣುಗಳಲ್ಲಿ ಕೇಳಿದ.   ನಾನೆಂದೆ "ನಿಮ್ಮ ಸಿಸ್ಟಮ್ ತುಂಬಾನೇ ದೊಡ್ಡದು, ಅಷ್ಟೇಲ್ಲಾ ನಾನು ಕಲಿತಿಲ್ಲ, ಆದರೂ ಟ್ರೈ ಮಾಡ್ತೇನೆ ನೀವು ಈಚೆಗೆ ಬನ್ನಿ, ಆದರೆ ಸ್ವಲ್ಪ ಸಮಯ ಬೇಕಾಗಬಹುದು".  

 ಆತ ಹೊರ ಬಂದ.   ಇನ್ನು ನನ್ನ ದಾರಿ ಸಲೀಸು. ಇನ್ನೊಂದು ಟ್ರಿಕ್ ಮಾಡಿದೆ.  "ಓಹ್ ಇದು ಪಾಸ್ ವರ್ಡ್ ಕೇಳುತ್ತಿದೆಯಲ್ಲ..?" 

ಅವನಿಗೆ ಲ್ಯಾಪ್ ಟೋಪ್ ನ ಮತ್ತು ಈ ಮೊನಿಟರ್ನ ವ್ಯತ್ಯಾಸವೂ ಗೊತ್ತಿಲ್ಲ, ಪಾಸ್ ವರ್ಡ್ ಕೇಳೂವುದು ಪಿ ಸಿ ಮಾತ್ರ ಅಂತ ಅವನ ದೃಷ್ಟಿಯಲ್ಲಿ ಎರಡೂ ಕಂಪ್ಯೂಟರ್ ಗಳೇ,

 "ಇರಿ ಒಂದು ನಿಮಿಷ" ,

ಅದೆಲ್ಲಿಗೋ ಕರೆ ಮಾಡಿದ ಆ ಕಡೆ ಇರುವವನು ಈತನಿಗಿಂತ ಬುದ್ದಿವಂತ, ಕ್ಷಣ ಮಾತ್ರವೂ ಯೋಚಿಸದೇ ತನ್ನ ಸೆಕ್ಯುರಿಟಿಯ ಮೂಲ ಮಂತ್ರವನ್ನೇ ಕೊಟ್ಟು ಬಿಟ್ಟ. ಜತೆಗೊಂದು ಬೋನಸ್

"ಸರಿ ನಾನು ಬಾತ್ ರೂಮಿಗೆ ಹೋಗಿ ಬರ್ತೇನೆ."  ಮೂರನೆಯ ಪಾಠ ಯಾರನ್ನೂ ನಂಬಬೇಡಿ.   ಬರೇ ಎರಡೇ ನಿಮಿಷ ಅಷ್ಟೇ, ಆತ ಬಾತ್ ರೂಮಿನಿಂದ ಬರಲು. ಅಷ್ಟರಲ್ಲಿ ಈ ಕೆಲಸವಾಗಲೇ ಬೇಕು.   ಜಮದಗ್ನಿಯ ಕಂಪ್ಯೂಟರ್ ನಲ್ಲಿ  ಗೂಗಲ್ ತೆರೆದೆ ಅದರಲ್ಲಿ ನನ್ನ ಮನಸ್ಸಿನಲ್ಲಿದ್ದ ಹೆಸರನ್ನು ಪಟಪಟನೆ ಒತ್ತಿದೆ. ಬಂತು. ಅದನ್ನು ಇನ್ಶ್ಟಾಲ್ ಮಾಡಿದೆ ಅದರಲ್ಲಿದ್ದ ನಂಬರ್ ಒಂದು ಕಡೆ ಬರೆದಿಟ್ಟುಕೊಂಡೆ.

ಇಷ್ಟಾಗುವಾಗ ಆತ ಬಂದೇ ಬಿಟ್ಟಿದ್ದ.   "  ಸರಿ ಅಯ್ತಾ" ಕೇಳಿದನಾತ. "ಇಲ್ಲ, ಇನ್ನೂ ಸ್ವಲ್ಪ ಸಮಯಾವಕಾಶ ಬೇಕಾಗಬಹುದು" . ಅವನಿಗೆ ಅನಿವಾರ್ಯ ಪದ ಅದು " ಸರಿ" 

ನನ್ನ ಕೆಲಸ ವಾಗಿತ್ತು. ರಂಜನ್ ನ  ಕರೆದು ಹೇಳಿದೆ  "ಸರಿಯಾಯ್ತು ನೋಡಿ ಕೊಳ್ಳಿ"  ನಾನು ಅವರ ೨೪ ಕ್ಯಾಮರಾಗಳಿದ್ದ ಚಿತ್ರವನ್ನೇ  ಸ್ಕ್ರೀನ್ ಸೇವರ್ ಮಾಡಿಟ್ಟದ್ದನ್ನು ಈ ಪೆದ್ದ ಅದು ಹೇಗೆ ತಾನೇ ಅರ್ಥ ಮಾಡಿಕೊಳ್ಳಬಲ್ಲ. ನಿಶ್ಚಲವಾಗಿರುವ ಚಿತ್ರಗಳನ್ನು ಬರೇ ಅನುಭವಿ  ಕಣ್ಣುಗಳು ಮಾತ್ರ ಅರ್ಥ ಮಾಡಿ ಕೊಳ್ಳ ಬಲ್ಲವು.  

ಸಮಯ ೯.೫೬

" ಹಾಗಾದ್ರೆ ನಾನಿನ್ನು ಬರಲಾ" ಕೇಳಿದೆ, ಈಗ ನನಗೆ ಏಕಾಂತ ಸ್ಥಳದಲ್ಲಿ ಕುಳಿತು ನನ್ನ ಕಂಪ್ಯೂಟರ್ ತೆರೆದು ಜಮದಗ್ನಿಯ ಫೈಲ್ ಗಳನ್ನೆಲ್ಲ ವರ್ಗಾವಣೆ ಮಾಡ ಬೇಕಲ್ಲ. ಆದರೆ ರಂಜನ್ ಗೋ ರಾತ್ರಿ ಪಾಳಿ ಕಳೆಯ ಬೇಕು   " ಕುಳಿತುಕೊಳ್ಳಿ ಮಾತನಾಡೋಣ ನಿಮ್ಮಲ್ಲಿ ಇನ್ನೂ ಮಾತನಾಡಲಿದೆ".  ನನ್ನ ಟೆನ್ಷನ್ ನನಗೆ  ಆದರೂ ಅನಿವಾರ್ಯವಾಗಿ ಅಂದೆ "ಸರಿ ಮಾತನಾಡೋಣ ಬಿಡಿ, ಒಮ್ಮೆ ಬಾತ್ ರೂಮಿಗೆ ಹೋಗಿ ಬರಲಾ..??", "ಧಾರಾಳವಾಗಿ...." ರಂಜನ್ ನೆಂದ.

ಮಹಡಿಗೇರುವ ಒಂದೇ ಸ್ತಂಬದ ಸುತ್ತಲೂ ಕಟ್ಟಿದ ವೃತ್ತಾಕಾರದ  ಮೆಟ್ಟಿಲುಗಳು .ಅಲ್ಲಿ ಇದ್ದುದ್ದು  ಮೇಲಿನಿಂದ ಬೆಳಕು ಬೀಳುವ ಒಂದೇ ದೀಪ.ಹುಡುಕಿದರೂ ಫಕ್ಕನೆ ಕಾಣಲು ಸಿಗದ ಕತ್ತಲ ಜಾಗ ಅದೊಂದೇ . ನನ್ನ ಕಪ್ಪು ಚೀಲ ಮಹಡಿಗೇರುವ ಮೆಟ್ಟಲಿನ ಕೆಳಗಿಟ್ಟಿದ್ದೆ,  ಬಾಥ್ ರೂಮ್ ಮೇಲಿದೆ. ನನ್ನ ಚೀಲ ಕೈಗೆತ್ತಿಕೊಂಡು ಮೆಟ್ಟಲೇರಿ ಬಾತ್ ರೂಮಿಗೆ  ನಡೆದೆ . ನನ್ನ ಲ್ಯಾಫ್ ಟೋಪ್  ತೆರೆದೆ. ಈ ಮೊದಲು ಬರೆದಿಟ್ಟುಕೊಂಡಿದ್ದ ನಂಬ್ರವನ್ನು  ಕನಕನ ಕಿಂಡಿಯಲ್ಲಿ ಹಾಕಿದೆ.   ಎದೆ ಬಡಿತ ಜೋರಾಯ್ತು. ಪಾಸ್ ವರ್ಡ್ ಮರೆತೆನಾ..? ಸಾಧ್ಯವೇ ಇಲ್ಲ.  ಐದು ನಿಮಿಷ ಅಷ್ಟೇ ಉಳಿದಿದೆ ಇನ್ನು ನನ್ನ ಚಾಲೆಂಜ್ ಗೆಲ್ಲಲು. ಕೂಲ್ ಕೂಲ್  ನನಗೆ ನಾನೇ ಸಮಾಧಾನ ಮಾಡಿಕೊಂಡೆ.    ಜಮದಗ್ನಿಯ ಕಂಪ್ಯೂಟರ್ ಸ್ಕ್ರೀನ್ ನನ್ನ ಕಂಪ್ಯೂಟರಿನ ಸ್ಕ್ರೀನ್ ಮೇಲೆ ಬಂತು.   "ಮೈ ಕಂಪ್ಯೂಟರ್" ತೆರೆದೆ. ನೂರಾರು ಫೈಲುಗಳಿವೆ. ಇದರಲ್ಲಿ ಯಾವುದು ಬೇಕು ನನಗೆ..??  ಅದರಲ್ಲಿ ಯಾವುದು ಮುಖ್ಯ ..? ಎಲ್ಲವನ್ನೂ ವರ್ಗಾಯಿಸಲು ಅಪ್ಪಣೆ ಕೊಟ್ಟೆ.  ಸಮಯ ಅತ್ಯಂತ ವೇಗವಾಗಿ ಚಲಿಸುತ್ತಿದೆ.  ಹತ್ತಕ್ಕೆ ಬರೇ ಮೂರು ನಿಮಿಷ ಅಷ್ಟೇ,  ಆಗಲೇ....

"ರಮೇಶ್, ಇದೇನು ಚಿತ್ರ ಓಡುತ್ತಿದೆ, ಏನು ಗೇಮಾ..?"  ಶಬ್ದ ಕೇಳಿಸಿತು ಕೆಳಗೆ,ಗೊತ್ತಾಯ್ತು, ರಮೇಶ್ ಅಂದದ್ದಾತ ನನಗೆ,

 ಚಿತ್ರ ಓಡುವುದು ಎಂದರೆ ಆತ ಆ ಪರದೆಯಲ್ಲಿ ನನ್ನ ಪಿ ಸಿಗೆ ಅವನ ಪಿಸಿ ಯಿಂದ ಫೈಲ್ ಟ್ರಾನ್ಸ್ಫರ್ ಆಗ್ತಾ ಇರೋದನ್ನ ನೋಡ್ತಿದ್ದಾನೆ,ಇನ್ನೇನು  ನಾನು ಬಾಯಿ ತೆರೆಯ ಬೇಕು.

 ಅಷ್ಟರಲ್ಲಿ..ಯಾರದೋ ಹೆಜ್ಜೆ ಶಬ್ದ.  ಯಾರು ಬಂದಿರ ಬಹುದು ಈ ಹೊತ್ತಿನಲ್ಲಿ..?   ಒಂದು ವೇಳೆ ಜಮದಗ್ನಿಯಾದರೆ, ತಲೆಯೇ ಓಡುತ್ತಿಲ್ಲ,ಈಗ   ನಾನು ಸಿಕ್ಕಿ ಬೀಳುತ್ತೇನೆಯೇ..? “ಏನಾಗ್ತಾ ಇದೆ ಇಲ್ಲಿ..? “   ಗಡಸು ಸ್ವರ ಕೇಳಿಸಿತು        ಜಮದಗ್ನಿ!!!  

ಜಂಘಾ ಬಲವೇ ಉಡುಗಿತು. ಮೈ ಚಳಿ ಆರಂಭವಾಯ್ತು. ಪೋಲೀಸರಿಗೆ ಹಿಡಿದು ಕೊಟ್ಟರೆ..? ಜೀವಮಾನವಿಡೀ ಜೈಲಿನಲ್ಲೇ  ಕಳೆಯಬೇಕಾಗುತ್ತದೇನೋ, ನಾನು ಅಂತಹ ಕೆಲಸ ಮಾಡಿದ್ದೇನೆ.  ಈ ಕೆಲ್ಸ ಮಾಡಲು ಹವಣಿಸಿದ ನನ್ನ ಉದ್ದೇಶ ಬರೇ ಜಮದಗ್ನಿಗೆ ತನ್ನ ತಪ್ಪು ಮನದಟ್ಟು ಮಾಡಲಷ್ಟೇ..   ನನ್ನ ಬಾಯ ಪಸೆ ಆರಿತು.  ಹೌದು ಜಮದಗ್ನಿ ಇಲ್ಲಿಗೆ ಬರಲು ಬಲವಾದ ಕಾರಣವಿತ್ತು , ಅದಕ್ಕೆ ಕಾಲದಲ್ಲಿ ಸ್ವಲ್ಪ ಹಿಂದೆ ಜಮದಗ್ನಿಯ ಆಫೀಸ್ ಗೆ ಹೋಗಬೇಕು.

ಸಮಯ ರಾತ್ರೆ ೯:೫೬

ಜಮದಗ್ನಿ ತೃಪ್ತಿಯಿಂದ ತಲೆದೂಗಿದ್ದ. ಎಲ್ಲವೂ ಸರಿಯಾಗಿದೆ.  ೨೪ ಕ್ಯಾಮರಾಗಳ ಎಲ್ಲ ಚಿತ್ರಗಳೂ ಅವನ ಇದಿರಿನ ಕಂಪ್ಯೂಟರಿನಲ್ಲಿ ವಿವರವಾಗಿ ಕಾಣಿಸುತ್ತಿದ್ದವು. ಬೇಕಿದ್ದಲ್ಲಿ ನೂರು ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿದ್ದ ಆ ಫಾರ್ಮಾ ಕಂಪೆನಿಯ ಹೊರಗೋಡೆಯ ಮೇಲೆ ಆಯಕಟ್ಟಿನ ಸ್ಥಳದಲ್ಲಿ ಹುದುಗಿಸಿಟ್ಟ ಕ್ಯಾಮರಾಗಳನ್ನೂ ಕೂಡಾ ಆತ ಕುಳಿತಲ್ಲಿಂದಲೇ ತಿರುಗಿಸಿ  ಎಲ್ಲಾ ಕಡೆ ನೋಡಬಲ್ಲ. . ಇಡೀ ಕಂಪೆನಿಯ ಸೆಕ್ಯುರಿಟಿ ಅವನ ಕೈಯ್ಯಲ್ಲಿಟ್ಟು ಇಡೀ ಕಂಪೆನಿ ನಿದ್ರಿಸುತ್ತಿತ್ತು. ಆತನ ಕೆಲಸ ಅಂದರೆ ಹಾಗೆ ಕಟ್ಟುನಿಟ್ಟು. ಆತನ ಸೈನ್ಯವೂ ಅಷ್ಟೆ. ದಿನದ ೨೪ ಗಂಟೆಗಳೂ ಕೆಲಸ ಮಾಡುತ್ತಿರುತ್ತವೆ. ಬೇಕೇ ಬೇಕಲ್ಲ ಪಹರೆ. 

ಆದರೆ ಇವತ್ತು  ಎಲ್ಲಿಯೋ ತಪ್ಪಾಗಿದೆ, ಅನ್ನಿಸುತ್ತಿದೆ ಆತನಿಗೆ . ಮೊನಿಟರ್ ನಲ್ಲಿ ಚಿತ್ರ ಅಸ್ಪಷ್ಟ. ಹಾಳಾಗಿದೆಯಾ? ನಾಳೆ ಇದನ್ನ ರಿಪೇರಿ ಮಾಡ್ಸ ಬೇಕು.  ಆತನ ಸಿಕ್ಶ್ ಸೆನ್ಸ್ ಏನೋ ಅಪಾಯವನ್ನು ಶಂಕಿಸುತ್ತಿದೆ. ಏನು ಅಂತ ಗೊತ್ತಾಗುತ್ತಿಲ್ಲ. ಕ್ಯಾಮರಾವನ್ನು ಮೂವ್ ಮಾಡಿ ನೋಡಿದ, ಎದೆ ದಸಕ್ ಎಂತು ಜಮದಗ್ನಿಗೆ, ಅದು ತೋರಿಸುತ್ತಿದ್ದ ಚಿತ್ರಗಳು ಅಸ್ಪಷ್ಟವಾದರೂ ಕ್ಯಾಮರಾದ ನೋಟ ಬದಲಾಗ ಬೇಕಿತ್ತಲ್ಲ ಆದರೆ ಹಾಗೆ ಆಗಿಲ್ಲ, ಚಿತ್ರಗಳೆಲ್ಲವೂ ಹಾಗೆಯೇ ಸ್ಟಿಲ್ ಆಗಿಯೇ ಇವೆ, 

ಅಂದರೆ.. ಪ್ರತಿಸ್ಪಂದಿಸುತ್ತಿಲ್ಲ!!!!.. ಇನ್ನೊಂದು ಅರ್ಥದಲ್ಲಿ ಏನೋ ಆಗಿದೆ?  ಬೆಚ್ಚಿ ಬಿದ್ದ.  ಇದೆಲ್ಲಾ ಆಗುತ್ತಿರುವಾಗ ಅ ಪೆದ್ದ ರಂಜನ್ ಏನು ಮಾಡುತ್ತಿದ್ದಾನೆ.?

ನೋಡ ನೋಡುತ್ತಿದ್ದಂತೆ ಅವನ ಕಂಪ್ಯೂಟರಿನಲ್ಲಿನ ಫೈಲ್ ಗಳೆಲ್ಲಾ ಮಾಯವಾಗುತ್ತಾ ಇದ್ದುದೂ ಸರಿಯಾಗಿ ಕಾಣುತ್ತಾ ಇದೆ.ಅಥವಾ ಯಾರೋ ಮಾಹಿತಿ ಕಳ್ಳತನ..? ನಖ ಶಿಖಾಂತ ನಡುಗಿದ ಜಮದಗ್ನಿ. ರಾತ್ರೆ ಕೆಲಸಕ್ಕಿರುವ ರಂಜನ್, ಕೆಲಸ ಕತ್ತೆಯ ಹಾಗೆ ಮಾಡುತ್ತಾನಾದರೂ ಪೆದ್ದ. ಜಂಗಮ ವಾಣಿಯಲ್ಲಿ ಅವನನ್ನು ಕರೆದ. ರಂಜನ್ ರಿಸೀವ್ ಮಾಡಿದನಾದರೂ ಈತ ಹೇಳಿದ್ದೂ ಅತನಿಗೆ ಕೇಳಿಸುತ್ತೋ ಇಲ್ಲವೊ ಗೊತ್ತಾಗುತ್ತಿರಲಿಲ್ಲ. ಸ್ಥಿರ ದೂರವಾಣಿಯೂ ಎಂಗೇಜ್ ಬರುತ್ತಿತ್ತು. ಮನದಲ್ಲೇ ಬೈದು ಕೊಂಡ. ಅಂದರೆ ಯಾರೊ ಬೇಕೆಂತಲೇ ದೂರವಾಣಿಯನ್ನೂ .....ದಿನಕ್ಕೆ ಕೋಟಿಗಟ್ಟಲೆ ವ್ಯವಹಾರ ಮಾಡುತ್ತಿರುವ ಕಂಪೆನಿಯ ಆತನ ಮೇಲಿನ  ನಂಬುಗೆಯ ಪ್ರಶ್ನೆ. ಏನಾಗುತ್ತಿದೆ ಇಲ್ಲಿ?  ಯೋಚನೆ ಮಾಡುತ್ತಾ ಕುಳಿತುಕೊಳ್ಳುವ ಹಾಗೇ ಇಲ್ಲ. ಏನಾದರೂ ಮಾಡಲೇ ಬೇಕಿತ್ತು. ಅದಕ್ಕೇ ಆತ ಸೆಕ್ಯುರಿಟಿ ಆಫೀಸ್ ಗೆ ಬಂದಿದ್ದ "ಏನಾಗ್ತಾ ಇದೆ ಇಲ್ಲಿ?.  ರಂಜನ್ " ಸರ್ ನಮ್ಮ ಕಂಪ್ಯೂಟರ್ ಕೆಟ್ಟಿತ್ತು ಅದನ್ನ ರೆಪೇರಿ ಮಾಡ್ಸಿದೆ ಅಷ್ಟೆ"   "ನಿನ್ನತಲೆ ಅವನು ಇಲ್ಲಿಗೆ ರಿಪೇರಿ ಮಾಡಲು ಬಂದದ್ದಲ್ಲ, ಬದಲು ಇಲ್ಲಿನ ಮಾಹಿತಿ ಕಳ್ಳತನ ಮಾಡಲು ಬಂದಿದ್ದ. ಯಾರಾತ ಎಲ್ಲಿದ್ದಾನೆ ಈಗ?" ಜಮದಗ್ನಿಯ ಕೋಪದ ಮುಖ ಕಂಡೇ ರಂಜನ್ " ಮೇಲೆ ಬಾತ್ ರೂಮಲ್ಲಿ" ಹೆದರುತ್ತಾ ಉತ್ತರಿಸಿದ.

ಸಮಯ ೧೦:೦೨

ನನ್ನನ್ನು ಆ ರೂಮಿನಲ್ಲಿ ಕಟ್ಟಿಹಾಕಿದ್ದ ಒಂದು ಕುರ್ಚಿಯ ಮೇಲೆ ಕುಳ್ಳಿರಿಸಿ. "ಹೇಳು ಎಲ್ಲಿದೆ ನಿನ್ನ ಲ್ಯಾಪ್ ಟೋಪ್?". ಜಮದಗ್ನಿ  ಕಣ್ಣಿನಲ್ಲಿ ಧಾರ್ಷ್ಟ್ಯ . ನಾನು ಉತ್ತರಿಸಲಿಲ್ಲ. ದಿನಕ್ಕೆ ಸಾವಿರ ಜನರನ್ನು ನೋಡುತ್ತಾನಾತ, ಆದರೆ ಪ್ರತಿಯೊಬ್ಬರನ್ನೂ ಹೇಗೆ ನೆನಪಿನಲ್ಲಿಟ್ಟು ಕೊಳ್ಳಬಲ್ಲ  ಅಂದುಕೊಂಡಿದ್ದೆ,  ನನ್ನೆಣಿಕೆ ತಪ್ಪು ಯಾಕೆಂದರೆ  ಆತ ಜಮದಗ್ನಿ ಅಷ್ಟು ದೊಡ್ಡ ಕಂಪೆನಿಯ ಉನ್ನತ ಪಹರಾ ಅಧಿಕಾರಿ, ತನ್ನ ಮಾತು ನಡೆಸಲು ಆತ ಡೈರೆಕ್ಟರುಗಳ ಯಾವುದೇ ಮಾತನ್ನೂ ಲಕ್ಷಿಸುವನಲ್ಲ.ಇವನ ಬಗೆಗಿನ ಎಲ್ಲಾ ವಿಷಯ ಸಂಗ್ರಹಣೆ ಮಾಡಲು ನನಗೆ ಪೂರಾ ಎರಡು ದಿನವೇ ಬೇಕಾಗಿತ್ತು. ಇಲ್ಲಿಯ ಪಹರೆಯ ಅತ್ಯಂತ ಕ್ಷೀಣ ಕಾಲ ಯಾವುದೆಂದು ಪತ್ತೆ ಹಚ್ಚಿಯೇ ನಾನು ನನ್ನ ಕೆಲಸ ಶುರು ಮಾಡಿದ್ದು. ಅತೀ ಹೆಚ್ಚು ಎಂದರೆ ನನ್ನನ್ನು ಏನು ಮಾಡಿಯಾನು? ಈತ ನನ್ನನ್ನು ಪೋಲೀಸರಿಗೆ ಕೊಡಲಾರ, ಕೊಟ್ಟರೆ ಆತನ ಅಹಮ್ ಏನಾಗಬೇಕು? ಈ ಮಾತೇ ನನಗೆ ಪ್ಲಸ್ ಪೊಯ್ಂಟ್ ,

  “ರಂಜನ್ ಮೇಲೆ ಹೋಗಿ ಹುಡುಕು ಈತನ ಲ್ಯಾಪ್ ಟೋಪ್ ಅಲ್ಲೆಲ್ಲಿಯೋ ಇಟ್ಟಿರ್ತಾನೆ.“ ಆಜ್ಞಾಪಾಲಕ ರಂಜನ್ ಗೆ ಏನೂ ಸಿಗಲಿಲ್ಲ, "ಆತ ಹೋದದ್ದು ಬಾತ್ ರೂಮಿಗಲ್ಲವೇ. ಅಲ್ಲಿಯೇ ಹುಡುಕು."  ಜಮದಗ್ನಿಯ ಬುದ್ದಿಯೂ ಚುರುಕು, ಅವನ ಕಣ್ಣುಗಳ ಹಾಗೆಯೇ.  "ಬಾಗಿಲುತೆರೆದು ನೋಡಿದ್ದೆ ಸರ್,  ಅಲ್ಲಿಯೂ ಇಲ್ಲ"  ರಂಜನ್  "ನೀನು ಪೆದ್ದನೇ ಕಣೋ,  ಬೆಪ್ಪಾ,   ಆ ಬಾತ್ ರೂಮಿನ ಬಾಗಿಲ ಹಿಂಬದಿ ನೋಡು." ಬೆಚ್ಚಿದೆ, ಸಾಮಾನ್ಯ ಯೋಚನೆ  ಮಾಡುವವರಾದರೆ ಬಾಗಿಲ  ಹಿಂದೆ ಏನನ್ನಾದರೂ ಇಡುವ ಬಗ್ಗೆ ಯೋಚಿಸರು. ಆದರೆ ಈತ ಜಮದಗ್ನಿ,  ಅದನ್ನೂ ಯೋಚಿಸಿದ್ದ. ತಲೆ ಚಚ್ಚಿಕೊಂಡೆ, ತಪ್ಪು ನನ್ನದು ಅವನನ್ನು ಅಂಡರ್ ಎಸ್ಟಿಮೇಟ್ ಮಾಡಿದ್ದೆ.   ನನ್ನನ್ನು ಕಟ್ಟಿಟ್ಟ ಹಾಗೆಯೇ  ಲ್ಯಾಪ್ಟೋಪ್ನ ನನ್ನ   ಹಿಂಬದಿ ತಂದು ನನ್ನ ಬೆರಳಚ್ಚು ತೆಗೆದುಕೊಂಡ. ತೆರೆದು ಹುಡುಕಿದನಾದರೂ ಸಿಗಲಿಲ್ಲ. ಪೈಲಿನ ಹೆಸರು ಬರೆದು ಹುಡುಕಲು ಆಣತಿ ಕೊಟ್ಟ.ಸಿಗಲಿಲ್ಲ.  ಇದ್ದರಲ್ಲವೇ ಆತನಿಗೆ ಸಿಗಲು.

 "ಎಲ್ಲಿಟ್ಟೆ ಹೇಳು.?" ನಾನು ಬಾಯ್ಬಿಡಲಿಲ್ಲ.    “ನೋಡು ಸತ್ಯ ಏನೋಂತ ತಿಳಿಸು ನಿನ್ನನ್ನು ಬಿಡುತ್ತೇನೆ. ಕೊಂದು  ಈ ಕಾಡಿನ ಮೂಲೆಗೆಸೆದರೆ ನಿನ್ನ ಹೆತ್ತವರೂ ಈ ಜನ್ಮದಲ್ಲಿ ನಿನ್ನನ್ನು ಹುಡುಕಲು ಸಾಧ್ಯವಿಲ್ಲ. ಒಂದು ವೇಳೆ ಶವ ಸಿಕ್ಕರೂ ಯಾರೋ ಕಳ್ಳತನ ಮಾಡಲು ಬಂದವ ರಾತ್ರಿ ಪಾಳಿಯವರ ಗುಂಡಿಗೆ ಬಲಿಯಾಗಿರ ಬೇಕು ಅಂದ್ಕೊಳ್ತಾರೆ.  ನಿನ್ನನ್ನು ಇಲ್ಲಿಗೆ ಕಳುಹಿಸಿದವರ್ಯಾರು ಹೇಳು ?," 

ಯೋಚಿಸುತ್ತ ಇದ್ದು ಬಿಟ್ಟೆ, ಏನು ಮಾಡಲಿ?   ಆತ ತನ್ನ ಅಲ್ಮೇರಾದ ಬೀಗ ತೆರೆದು ಅಲ್ಲಿನ ಹೋಲ್ಡ್ ಕೇಸಿನಿಂದ ವಸ್ತುವೊಂದನ್ನು ಹೊರತೆಗೆದ. ಪಿಸ್ತೂಲ್ ... ಹೆದರಿಕೆಯಿಂದ ನನ್ನ ಮೈ ಒಮ್ಮೆ ನಡುಗಿತು. ಗೊತ್ತಾಗಲಿಲ್ಲ, ಅದು ಅನಾಯಾಸವಾಗಿ ಬರುತ್ತಿರುವ ಸಾವಿನದ್ದೇ..?? ಆಗಲೇ ಯಾವುದೋ ಪೇಪರಿನಲ್ಲಿ ಹೀಗೆ ಅಪಘಾತಕ್ಕೀಡಾಗಿ ಸತ್ತ ಯುವಕ ಎಂಬ ತಲೆ ಬರಹದ ನೆನಪಾಯ್ತು.

ನನ್ನ ಮುಂಗೈ ಗಂಟು ನನ್ನ ಪ್ಯಾಂಟಿನ ಕಿಸೆಯಲ್ಲಿದ್ದ ಜಂಗಮವಾಣಿಗೆ ತಗುಲಿತು. ಕ್ಲಿಕ್ ಶಬ್ದ ನನ್ನ ಜಂಗಮವಾಣಿಯ ಧ್ವನಿ ಗ್ರಾಹಣ ಯಂತ್ರದ ಮರುತ್ತರ.

ನಾನು ಜೋರಾಗಿ ಉತ್ತರಿಸಿದೆ "ವಿಶ್ವನಾಥ್" ಅದು ನನ್ನ ಉತ್ತರ ಅಂದುಕೊಂಡ ಜಮದಗ್ನಿ. ಅದು ಆತನ ಮೊದಲ ತಪ್ಪು.

ತಪ್ಪೇ ಮಾಡಲರಿಯದ ನನ್ನ ಜಂಗಮವಾಣಿಯ  ಕರೆ ಮೇಜರ್ ಎತ್ತಿದ್ದು ಅಸ್ಪಷ್ಟವಾಗಿಯೂ ನನಗೆ ಕೇಳಿತು.

"ನೀನು ಹೇಳಿದ ವಿಶ್ವನಾಥ ನನಗೂ ಗೊತ್ತು, ನನ್ನನ್ನು ಈ ಕಂಪೆನಿಯ ಯಾವ ಡೈರೆಕ್ಟ್ರುಗಳೂ ಏನೂ ಮಾಡಲಾರರು. ಸಾಯಲು ಸಿದ್ಧನಾಗು."

 ಜಮದಗ್ನಿಯ ಕೈಯಲ್ಲಿರೋ ಪಿಸ್ತೂಲಿನ ತಣ್ಣನೆಯ ನಳಿಗೆ ನನ್ನ ಕೆನ್ನೆ ಸೋಕಿತು.

 ನಾನು ಕಿಂಕರ್ತವ್ಯ ಮೂಢನಾದೆ, 

ಬರುವ ಸಾವಿನ ಕ್ಷಣವನ್ನು ಎದುರಿಸುತ್ತಾ ಕಣ್ಣು ಮುಚ್ಚಿಕೊಂಡೆ.

ಉಪಸಂಹಾರ

ಆಗಲೇ ಬಾಗಿಲು ದಢಾರನೆ ತೆರೆಯಿತು,  

ಶಬ್ದಕ್ಕೆ ಕಣ್ಣು ತೆರೆದೆ,

ಮೇಜರ್ ಒಳಬಂದರು ನಗುತ್ತಾ, ಹಿಂದೆ ವಿಶ್ವನಾಥ್, ಹಿಂದೆ ಇನ್ನಿಬ್ಬರು. ನೋಡುತ್ತೇನೆ ನಗುತ್ತಿರುವ ಜಮದಗ್ನಿ ಮೇಜರ್ ಕೈ ಕುಲುಕುತ್ತಿದ್ದಾರೆ.

ಏನಿದು  ನಡೆದದ್ದೆಲ್ಲಾ ನಾಟಕವಾ.??

"ನಿಜ ನಾನೇ ಮಿಲಿಂಡ್ ನನ್ನು ನಿಮ್ಮ ಬಳಿ ಕಳುಹಿಸಿದ್ದೆ. ಅವನು ಯಾರ ರೆಪ್ರಸೆಂಟೇಟಿವ್ ಕೂಡಾ ಅಲ್ಲ . ಕಂಪೆನಿಯ ಡೈರೆಕ್ಟರುಗಳಲ್ಲಿ ಒಬ್ಬರಾದ ಪದ್ಮನಾಭಯ್ಯನವರ ಮಾತಿನಂತೆ ಹಳೆ ಕಾಲದ ಸೆಕ್ಯುರಿಟಿಯಲ್ಲಿನ ಕುಂದು ಕೊರತೆಗಳನ್ನು ಬಿಚ್ಚಿಡುವ ಮುಖ್ಯ ಉದ್ದೇಶದಿಂದ" ಮೇಜರ್ ವಿವರಿಸುತ್ತಿದ್ದರು.

"ಕಂಪೆನಿಯ ಸದ್ದುದ್ದೇಶಗಳಿಗೆ ಧಕ್ಕೆಯಾಗದ ಹಾಗೆ ಸೆಕ್ಯುರಿಟಿಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಇದೊಂದು ನೂತನ ಪ್ರಯೋಗವಾಗಿತ್ತು. ಅಸಾಮಾನ್ಯ ವಿಷಯ ಮತ್ತು ಸನ್ನಿವೇಶಗಳಲ್ಲಿ ಮನುಷ್ಯ ಯಾವ ರೀತಿಯಲ್ಲಿ ವ್ಯವಹರಿಸುವನೆಂಬುದನ್ನು ಅರಿಯುವದಕ್ಕಾಗಿ  ಜಮದಗ್ನಿಗೂ ಮತ್ತು ಮಿಲಿಂಡ್ ಗೂ ಗೊತ್ತಿಲ್ಲದೇ ಹಾಗೆಯೇ ಇಬ್ಬರನ್ನೂ ಒಂದು ಅನೂಹ್ಯ ಘಟನೆಯಲ್ಲಿ ಸಿಲುಕಿಸಿದ್ದೆವು. ನಮ್ಮ ಊಹೆಗೂ ಮೀರಿ ಸಕಾರಾತ್ಮಕವಾಗಿ ಸ್ಪಂದಿಸಿದ ಇಬ್ಬರೂ ಈ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ. ಸಾಮಾನ್ಯವಾಗಿ ಮಿಲಿಟರಿಯಲ್ಲಿ ಮಾತ್ರವೇ ಹೀಗೆ ಅಣಕು ಯುದ್ಧದ ಪರಿಸ್ತಿತಿಯನ್ನು ಸೃಷ್ಟಿ ಮಾಡಿ ಸೈನಿಕರೆಲ್ಲರನ್ನೂ ಸದಾ ಸನ್ನಧ್ಧರನ್ನಾಗಿ ಮಾಡಿಡುವ ವ್ಯವಸ್ಥೆಯಿದೆ. ಹಾಗೆ ಮಾಡಿದರೆ ಮಾತ್ರವೇ ಯಾವ ಸನ್ನಿವೇಶಕ್ಕೂ ಸಿಧ್ಧರಾಗಿರುತ್ತಾರೆ  ಎಂದು ನಮ್ಮಲ್ಲಿಯೂ ನಮ್ಮ ಸಿಪಾಯಿಗಳು ಸಮರ್ಪಕವಾಗಿ ತೋರಿಸಿಕೊಟ್ಟಿದ್ದಾರೆ ." ಪದ್ಮನಾಭಯ್ಯನವರು ಹೇಳಿದರು"  ನಮಗೆ ಜಮದಗ್ನಿಯಷ್ಟೇ ಅಗ್ರೆಸ್ಸಿವ್ ಆದ ಚುರುಕು ಬುದ್ದಿಯ ಯುವಕನೋರ್ವನ ಆವಶ್ಯಕಥೆಯಿತ್ತು. ಅವನು ಸಿಕ್ಕಿದ್ದಕ್ಕೆ  ಇವತ್ತು ನಮಗೆ ತುಂಬಾನೇ ಖುಷಿಯಾಗ್ತಾ ಇದೆ"

ಜಮದಗ್ನಿ "ಕುಷಿಯಾದದ್ದು ನನಗೆ ಮಿಲಿಂಡ್ ನ ಚುರುಕುತನ, ಆದರೆ ಹೀಗೆ ಒಂದು ಕಂಪ್ಯೂಟರ್ ನಿಂದ ಇನ್ನೊಂದಕ್ಕೆ ಮಾಹಿತಿ ರವಾನಿಸೋ ಸೊಫ್ಹ್ಟ್ವೇರ್ ಇದೆ ಅಂತ ಗೊತ್ತಿತ್ತು, ಆದರೆ ಈ ರೀತಿಯಲ್ಲೂ ಉಪಯೋಗಿಸಬಹುದೆಂದು ತೋರಿಸಿದ ನನಗಿದೊಂದು ಪಾಠ, ಆದರೆ ನನ್ನ ಕಂಪ್ಯೂಟರ್ ನಿಂದ ಮಾಹಿತಿ ಹೋಗಿದ್ದಾದರೂ ಎಲ್ಲಿಗೆ? ಮಿಲಿಂಡ್ " 

ನಾನು ತಿಳಿಸಿದೆ " ವಿಶ್ವನಾಥ್ ಕಂಪ್ಯೂಟರ್ ಗೆ ರವಾನಿಸಿದ್ದೆ". ಮತ್ತೊಂದು ವಿಷಯ ನಾನು ಕೇಳಿದೆ, "ಅಲ್ಲ ನಾನು ನಿಮ್ಮ ಕಂಪ್ಯೂಟರ್  ಕ್ಯಾಮರಾ ದಿಕ್ಕಿನಿಂದ ತಿರುಗಿಸಿ ಇಟ್ಟರೂ ನಿಮಗೆ ಗೊತ್ತಾಗಿದ್ದು ಹೇಗೆ?"

ಜಮದಗ್ನಿ ಉತ್ತರಿಸಿದ" ನೋಡಿ ಮೇಲೆ ಅಲ್ಲಿನ ಒಂದು ಫೋಟೊ ದಲ್ಲಿ ಸೂಕ್ಷ್ಮವಾಗಿ ನೋಡಿದರೆ ಮಾತ್ರ ಕಾಣುವ ಹಾಗಿದೆ ಒಂದು ಕ್ಯಾಮರಾ. ಅಲ್ಲಿಂದ". ಹೌದು ಜಮದಗ್ನಿ ಸಂಪೂರ್ಣವಾಗಿಯೂ ಸಮರ್ಥ ಪಹರಾ ಅಧಿಕಾರಿಯೇ.

ರಂಜನ್ ನ ಅಚ್ಚರಿಯ ಕಣ್ಣುಗಳಿಗೆ ಉತ್ತರಿಸಿದೆ" ಯಾವ ಮಾಟ ಮಂತ್ರವೂ ಅಲ್ಲಪ್ಪಾ ಅವೆಲ್ಲಾ ನಿನ್ನ ತಾಯತದ ಅವಶ್ಯಕತೆ ಇಲ್ಲದ ಸ್ಕ್ರೀನ್ ಸೇವರ್ ಗಳು.

ಮಾರನೆಯ ದಿನದಿಂದಲೇ ರಂಜನ್ ಗೆ ಮತ್ತು ಪಹರೆಯ ಎಲ್ಲಾ ಸೈನಿಕರಿಗೂ ಕಡ್ಡಾಯವಾಗಿ ಮುಂದಿನ ಮೂರು ತಿಂಗಳು ತರಭೇತಿಯ ಯೋಜನೆ ಯಾಯ್ತು. ಅದರ ಸಂಪೂರ್ಣ ಹೊಣೆ ಮಿಲಿಂಡ್ ನದ್ದು. ಹೇಗಿದ್ದರೂ ಜಮದಗ್ನಿಯನ್ನೂ  ಗೆದ್ದ ತಂತ್ರ ಅವನದ್ದೇ ಅಲ್ಲವೇ.

Rating
No votes yet

Comments

Submitted by ಗಣೇಶ Thu, 07/25/2013 - 23:49

೨ ಫೈಟ್, ೪ ಹಾಡು ಸೇರಿಸಿ ಒಂದೊಳ್ಳೆ ಸಿನೆಮಾ ಮಾಡಬಹುದು ಗೋಪಿನಾಥರೆ. ಕತೆ ಚೆನ್ನಾಗಿದೆ.

Submitted by gopinatha Fri, 07/26/2013 - 16:20

In reply to by ಗಣೇಶ

ಯಾರಾದರು ನಿರ್ಮಾ‍ಪಕರು ಪರಿಚಯವಿದೆಯೇ ನಿಮಗೆ?
ನಿಮ್ಮ‌ ಮೆಚ್ಚುಗೆಯ‌ ಮಾತಿಗೆ ಕ್ರ‌ತಾರ್ಥನಾದೆ ಗಣೇಶರೇ

Submitted by kavinagaraj Fri, 07/26/2013 - 10:25

ಕುತೂಹಲಕರವಾಗಿ, ಸ್ವಾರಸ್ಯಕರವಾಗಿ ಮೂಡಿಸಿರುವಿರಿ. ನೀವೂ ಒಬ್ಬರು ಒಳ್ಳೆಯ ಪತ್ತೇದಾರರೇ ಸರಿ, ಗೋಪಿನಾಥರೇ.

Submitted by nageshamysore Fri, 07/26/2013 - 17:55

ಗೋಪಿನಾಥರೆ, ಗಣೇಶರ ಐಡಿಯಾದಂತೆ ಸಿನೆಮಾ ಮಾಡುವ ನಿರ್ಧಾರವಾದ ಮೇಲೆ ನನಗೆ ಹೇಳಿ. ನಮದು ಸೆಕ್ಯುರಿಟಿಯ್ ಕ್ಯಾಮರ ಮಾಡುವ ಕಂಪನಿ; ಶೂಟಿಂಗಿನಲ್ಲಿ ನಮ್ಮ ಕಂಪನಿ ಕ್ಯಾಮರ ಬಳಸಲು ಒಪ್ಪಂದ ಮಾಡಿಕೊಂಡು ಸ್ವಲ್ಪ ಸ್ಪಾನ್ಸರ್ಶಿಪ್ ಸಿಗುತ್ತದೆಯೆ ಎಂದು ಪ್ರಯತ್ನಿಸೋಣ. ಕ್ಯಾಮರ ಮೇಲೆ ಎರಡಲ್ಲದಿದ್ದರೆ ನಾಲ್ಕು ಸಾರಿ ಜೂಮ್ ಮಾಡೋಣ, ಬೇಕಿದ್ದರೆ!

Submitted by gopinatha Sat, 07/27/2013 - 06:53

In reply to by nageshamysore

ಖಂಡಿತಾ ಹಾಗೇ ಮಾಡೋಣ ನಾಗೇಶರೇ, ನಿಮ್ಮ ಮೆಚ್ಚುಗೆಗೆ ಧನ್ಯ
ಸಂಪದದಲ್ಲಿಯೇ ಇನ್ನೊಂದು ವ್ಯಾಹ ಅಂತ ಕಥೆ ಇದೆ ಅದನ್ನೂ ಓದಿ ಪ್ರತಿಕ್ರಯಿಸಿ ಅದೂ ಮಿಲಿಂಡ್ ನದ್ದೇ ಕೈ ಚಳಕದ ಬಗ್ಗೆ ಇದೆ